Ajith Shetty Column: ಅಂಬೇಡ್ಕರ್ ಯಾಕೆ ದೇಶದ ಮೊದಲ ಪ್ರಧಾನಿ ಆಗಲಿಲ್ಲ ?
ನೆಹರೂ ಆಯ್ಕೆಯಾದದ್ದು ಭಾರತದ ಜನರ ಮತದಿಂದಲ್ಲ. ಬ್ರಿಟಿಷರ ಜತೆ ಮಾತುಕತೆ ನಡೆಸ ಬಲ್ಲರು ಎಂಬ ಕಾರಣದಿಂದ. ಇಲ್ಲಿ ಒಂದು ಮೂಲಭೂತ ಪ್ರಶ್ನೆ ಉದ್ಭವಿಸುತ್ತದೆ, ನೆಹರು ಅವರಿಗೆ ಇದ್ದ ಕಾರಣಗಳು ಅಂಬೇಡ್ಕರ್ ಅವರಿಗೆ ಅನ್ವಯಿಸದಂತದ್ದೇನಿತ್ತು? ಈ ಎಲ್ಲ ಸಾಮರ್ಥ್ಯ ನೆಹರು ಅವರಿಗಿಂತ ಹೆಚ್ಚು ಇದ್ದದ್ದು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ.
-
ರಾಷ್ಟ್ರಹಿತ
ಅಜಿತ್ ಶೆಟ್ಟಿ ಹೆರಂಜೆ
ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಡಾಕ್ಟೆರೇಟ್, 1942ರಿಂದ 1946 ನಡುವೆ ರಾಷ್ಟ್ರೀಯ ಜಲಮಾರ್ಗ ನೀತಿ ರೂಪಿಸುವ ಮೂಲಕ ಸಾಬೀತುಪಡಿಸಿದ್ದ ಅವರು! ಭಾರತದ ಇತಿಹಾಸದಲ್ಲಿ ದಲಿತೋದ್ಧಾರಕ ಎಂದೇ ಗೌರವಕ್ಕೆ ಪಾತ್ರಾರಾದ ಗಾಂಧೀಜಿ ಯವರಿಗೆ ದಲಿತ ನಾಯಕರ ಬದಲು ಜವಾಹರಲಾಲ್ ನೆಹರೂ ಅವರೇ ಯಾಕೆ ಹೆಚ್ಚು ಸೂಕ್ತವೆನಿಸಿದರು?
ಒಂದೇ ಮಾನದಂಡವನ್ನು ಇತಿಹಾಸದ ನಾಯಕರಿಗೆ ಅನ್ವಯಿಸಿದರೆ, ಅದೇ ಮಾನದಂಡವನ್ನು ಎಲ್ಲರಿಗೂ ಸಮಾನವಾಗಿ ಅನ್ವಯಿಸಬೇಕಲ್ಲವೇ? ವೀರ ಸಾವರ್ಕರ್ ಅವರು ಬ್ರಿಟಿಷರಿಗೆ ಕ್ಷಮಾ ಯಾಚನಾ ಪತ್ರ ಬರೆದಿದ್ದರಿಂದ ಅವರು ನಿಜವಾದ ಸ್ವಾತಂತ್ರ್ಯ ಹೋರಾಟಗಾರರಲ್ಲ ಎಂದು ಕೆಲವರು ವಾದಿಸುತ್ತಾರೆ. ಈ ವಾದವು ಒಂದು ಮಾನ ದಂಡವನ್ನು ಮುಂದಿಡುತ್ತದೆ. ಆ ಮಾನ ದಂಡವನ್ನು ಎಲ್ಲರಿಗೂ ಸಮಾನವಾಗಿ ಅನ್ವಯಿಸಬೇಕಾದರೆ ಇತಿಹಾಸದ ದಾಖಲೆಗಳು ನಮಗೆ ಏನು ಹೇಳುತ್ತವೆ ಎಂಬುದನ್ನು ನೋಡೋಣ.
ನೆಹರೂ ಅವರೇ ಒಪ್ಪಿಕೊಂಡಿದ್ದರೂ ಇವತ್ತಿನ ಕಾಂಗ್ರೆಸಿಗರಿಗೆ ಅದನ್ನು ಒಪ್ಪಿಕೊಳ್ಳಲು ಯಾಕೆ ಹಿಂಜರಿಕೆ?
ಸೆಪ್ಟೆಂಬರ್ 1923. ಜವಾಹರಲಾಲ್ ನೆಹರೂ ನಾಭಾ ರಾಜ್ಯದ ಜೈಲಿನಲ್ಲಿ ಬಂಧಿಯಾಗಿ ದ್ದರು. ಕೇವಲ ಎರಡೇ ವಾರ ಗಳಲ್ಲಿ, ಆ ಎರಡು ವಾರಗಳಲ್ಲೇ ಅವರ ತಂದೆ ಮೋತಿಲಾಲ್ ನೆಹರೂ ನೇರವಾಗಿ ವೈಸರಾಯಿಗೆ ಮನವಿ ಸಲ್ಲಿಸಿದರು. ವಕೀಲ ಕೆ.ಡಿ. ಮಾಳವೀಯ ಅವರನ್ನು ವಾದಕ್ಕಾಗಿ ನಿಯೋಜಿಸಲಾಯಿತು. ಅದೇ ಸಂಜೆ ನೆಹರೂ ಅವರ ಶಿಕ್ಷೆಯನ್ನು ಅಮಾನತುಗೊಳಿಸಲಾಯಿತು.
ಇನ್ನು ಮುಂದೆ ಎಂದಿಗೂ ನಾಭಾ ರಾಜ್ಯಕ್ಕೆ ಪ್ರವೇಶಿಸುವುದಿಲ್ಲ ಎಂಬ ಮುಚ್ಚಳಿಕೆ ಪತ್ರಕ್ಕೆ ಜವಾಹರಲಾಲ್ ನೆಹರೂ ಸ್ವಯಂ ಸಹಿ ಹಾಕಿದರು. ನೆಹರೂ ಅವರು ತಮ್ಮ ಸ್ವಂತ ಆತ್ಮಕಥೆ ಯಲ್ಲಿ ಈ ಘಟನೆಯನ್ನು ದಾಖಲಿಸಿದ್ದಾರೆ. ಅವರ ಜತೆ ಜೈಲಿನಲ್ಲಿದ್ದ ಕೆ.ಸಂತಾನಂ ಅವರು ತಮ್ಮ ಕೃತಿ ‘Handcuffed with Jawaharlal’ ನಲ್ಲಿ ಈ ಘಟನೆಯ ಸಂಪೂರ್ಣ ವಿವರಗಳನ್ನು ದಾಖಲಿಸಿ ದ್ದಾರೆ.
ಇದನ್ನೂ ಓದಿ: Ajith Shetty Heranje Column: ಅಂಬೇಡ್ಕರ್ ಕನಸು, ಮೋದಿ ಕೈಗಳಲ್ಲಿ ಕೃತಿಯಾಯಿತು
ಸಾವರ್ಕರ್ ಅಂಡಮಾನ್ ಜೈಲಿನಲ್ಲಿ ಎರಡು ಜೀವಾವಧಿಯ ಕಾಲಾವಧಿ ಶಿಕ್ಷೆ ಅನುಭವಿಸಿದರು. ನೆಹರೂ ಎರಡು ವಾರ ಗಳಲ್ಲಿ ಮುಚ್ಚಳಿಕೆ ಪತ್ರಕ್ಕೆ ಸಹಿ ಮಾಡಿ ಬಿಡುಗಡೆ ಪಡೆದರು. ಈ ಘಟನೆ ಗಳನ್ನು ನಾವು ಹೇಗೆ ಅಳೆಯಬೇಕು ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ. ಅಷ್ಟಕ್ಕೂ ನೆಹರೂ ಬಗ್ಗೆ ಬ್ರಿಟಿಷರಿಗೆ ಇದ್ದ ಆ ಸಾಫ್ಟ್ ಕಾರ್ನರ್ ಸಾವರ್ಕರ್ ಅವರ ಬಗ್ಗೆ ಯಾಕೆ ತೋರಿಸಲಿಲ್ಲ? ಯೋಚಿಸ ಬೇಕಾದ ಸಂಗತಿ ಅಲ್ವೇ?
ಕಾಮನ್ ವೆಲ್ತ್ ಒಕ್ಕೂಟದ ಭರವಸೆ ಕೊಟ್ಟ ನಂತರ ಸ್ವಾತಂತ್ರ್ಯ
ಭಾರತದ ಕೊನೆಯ ವೈಸ್ರಾಯ್ ಲಾರ್ಡ್ ಮೌಂಟ್ ಬ್ಯಾಟನ್ ಅವರು ಕಿಂಗ್ಸ್ ಕಾಲೇಜ್ ಲಂಡನ್ ಆರ್ಕೈವ್ʼ ನಲ್ಲಿ ದಾಖಲಾದ ತಮ್ಮ ಭಾಷಣದಲ್ಲಿ ಬರೆದಿದ್ದಾರೆ - ಇಬ್ಬರೂ ಹ್ಯಾರೋ ಶಾಲೆ ಮತ್ತು ಟ್ರಿನಿಟಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದರಿಂದ ನೆಹರೂ ಅವರ ಜತೆ ಸಂವಹನ ಮಾಡುವುದು ತುಂಬಾ ಸುಲಭ ಮತ್ತು ಆನಂದದಾಯಕವಾಗಿತ್ತು ಎಂದು. ಜತೆಗೆ, ಮೌಂಟ್ ಬ್ಯಾಟನ್ ಅವರು ನೆಹರೂ ಭಾರತವನ್ನು ಕಾಮನ್ವೆಲ್ತ್ ಒಕ್ಕೂಟದಲ್ಲಿ ಉಳಿಸಿಕೊಳ್ಳಲಿದ್ದಾರೆ ಎಂದು ಚರ್ಚಿಲ್‌ಗೆ ಖಾಸಗಿಯಾಗಿ ತಿಳಿಸಿದ್ದರು.
ಈ ಭರವಸೆ ದೊರೆತ ನಂತರ ಭಾರತಕ್ಕೆ ಸ್ವಾತಂತ್ರ್ಯ ನೀಡುವ ದಿನಾಂಕವನ್ನು ನಿಗದಿಪಡಿಸ ಲಾಯಿತು. ಈ ಘಟನೆಗಳ ನಡುವೆ ಯಾವುದೇ ಆಳವಾದ ಸಂಬಂಧವಿದೆಯೋ, ಅಥವಾ ಇದು ಕೇವಲ ಕಾಕತಾಳೀಯವೇ?
ಬ್ರಿಟಿಷರಿಗೆ ಇದು ಮೊದಲೇ ತಿಳಿದಿತ್ತು..!!
1946ರಲ್ಲಿ ಕಾಂಗ್ರೆಸಿನ 15 ಪ್ರಾಂತೀಯ ಸಮಿತಿಗಳ ಪೈಕಿ 12 ಸಮಿತಿಗಳು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಹೆಸರನ್ನು ಶಿಫಾರಸು ಮಾಡಿದ್ದವು. ನೆಹರೂ ಅವರಿಗೆ ಒಂದೇ ಒಂದು ಶಿಫಾರಸು ಕೂಡ ಬಂದಿರಲಿಲ್ಲ; ಶೂನ್ಯ. ಆದರೂ ನೆಹರೂ ಅಧ್ಯಕ್ಷರಾದರು ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಆದರೆ, ಬಹುತೇಕರಿಗೆ ಗೊತ್ತಿರುವ ಮತ್ತೊಂದು ಸತ್ಯವೆಂದರೆ, ವೈಸ್ರಾಯ್ ವೇವೆಲ್ ಇದೆಲ್ಲ ದಕ್ಕೂ ಮೊದಲೇ ನೆಹರೂ ಅವರೇ ಮಧ್ಯಂತರ ಸರಕಾರದ ಮುಖ್ಯಸ್ಥರಾಗಲಿದ್ದಾರೆ ಎಂದು ಅಂದುಕೊಂಡಿದ್ದರು.
ಇದು Transfer of Power 1942-47, Vol VII, Nicholas Mansergh ed., HMSO London 1977ರಲ್ಲಿ ದಾಖಲಾಗಿದೆ. ಕಾಂಗ್ರೆಸಿನ ಸನ್ಮಾನ್ಯ ಕಾರ್ಯದರ್ಶಿ ಆಚಾರ್ಯ ಕೃಪಲಾನಿ ಅವರು ತಮ್ಮ ಆತ್ಮಕಥೆ My Times: An Autobiography ನಲ್ಲಿ ಈ ಘಟನೆಯನ್ನು ದಾಖಲಿಸಿದ್ದಾರೆ. ಇದು ನಾಯಕತ್ವದ ನಿರ್ಧಾರಗಳು ಹೇಗೆ ರೂಪುಗೊಳ್ಳುತ್ತವೆ ಎಂಬ ಪ್ರಶ್ನೆಯನ್ನು ಎಬ್ಬಿಸುತ್ತದೆ. ಕಾಂಗ್ರೆಸ್ ಪಕ್ಷದೊಳಗೆ ಆಗುವ ಘಟನೆಗಳು ಕಾಂಗ್ರೆಸಿಗರಿಗಿಂತ ಮುಂಚೆಯೇ ಬ್ರಿಟಿಷರಿಗೆ ಗೊತ್ತಾ ಗುತ್ತಿತ್ತೇ ಎಂಬ ಪ್ರಶ್ನೆಯೂ ಇಲ್ಲಿ ಉದ್ಭವಿಸುತ್ತದೆ.
ನೆಹರು ಬದಲು ಅಂಬೇಡ್ಕರ್ ಯಾಕೆ ಪ್ರಧಾನಿ ಆಗಲಿಲ್ಲ?
ಈ.ಎ.ತೆಂಡೂಲ್ಕರ್ ಅವರ Mahatma ಗ್ರಂಥದ ಎಂಟನೇ ಸಂಪುಟದ ಆರನೇ ಪುಟದಲ್ಲಿ ಒಂದು ಘಟನೆ ದಾಖಲಾಗಿದೆ, ಜವಾಹರಲಾಲ್ ಹ್ಯಾರೋ ಶಾಲೆ ಕಲಿತವರು, ಕೇಂಬ್ರಿಡ್ಜ್ ಪದವೀಧರರು ಮತ್ತು ಬ್ಯಾರಿಸ್ಟರ್. ಅವರು ಇಂಗ್ಲಿಷರ ಜತೆ ಮಾತುಕತೆ ನಡೆಸಲು ಬೇಕಾಗಿದ್ದಾರೆ ಎಂದು ಗಾಂಧೀಜಿ ಹೇಳಿದ್ದರು. ನೆಹರೂ ಆಯ್ಕೆಯಾದದ್ದು ಭಾರತದ ಜನರ ಮತದಿಂದಲ್ಲ. ಬ್ರಿಟಿಷರ ಜತೆ ಮಾತುಕತೆ ನಡೆಸ ಬಲ್ಲರು ಎಂಬ ಕಾರಣದಿಂದ. ಇಲ್ಲಿ ಒಂದು ಮೂಲಭೂತ ಪ್ರಶ್ನೆ ಉದ್ಭವಿಸುತ್ತದೆ, ನೆಹರು ಅವರಿಗೆ ಇದ್ದ ಕಾರಣಗಳು ಅಂಬೇಡ್ಕರ್ ಅವರಿಗೆ ಅನ್ವಯಿಸದಂತದ್ದೇನಿತ್ತು? ಈ ಎಲ್ಲ ಸಾಮರ್ಥ್ಯ ನೆಹರು ಅವರಿಗಿಂತ ಹೆಚ್ಚು ಇದ್ದದ್ದು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ. ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಡಾಕ್ಟೆರೇಟ್ ಮಾಡಿದವರು, ಅವರ ತಮ್ಮ ಬುದ್ಧಿವಂತಿಕೆಯನ್ನು ಈಗಾಗಲೇ ಹಿಲ್ಟನ್ ಯಂಗ್ ಕಮಿಷನ್ ಮುಂದೆ, ನಂತರ 1942ರಿಂದ 1946 ನಡುವೆ ರಾಷ್ಟ್ರೀಯ ಜಲಮಾರ್ಗ ನೀತಿಯನ್ನು ರೂಪಿಸುವ ಮೂಲಕ ಎರಡೆರಡು ಭಾರಿ ಸಾಬೀತು ಪಡಿಸಿದ್ದರು.
ಆದರೂ ಭಾರತದ ಇತಿಹಾಸದಲ್ಲಿ ದಲಿತೋದ್ಧಾರಕ ಎಂದೇ ಗೌರವಕ್ಕೆ ಪಾತ್ರಾರಾದ ಗಾಂಧೀಜೀ ಯವರಿಗೆ ದಲಿತ ನಾಯಕ ಅಂಬೇಡ್ಕರ್ ಅವರ ಬದಲು ಜವಾಹರಲಾಲ್ ನೆಹರೂ ಅವರೇ ಯಾಕೆ ಹೆಚ್ಚು ಸೂಕ್ತವೆನಿಸಿದರು ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ.
ಕಾಮನ್ವೆಲ್ತ್ ಸಹಿ ಮತ್ತು ಅಂಬೇಡ್ಕರ್ ಅವರ ಎಚ್ಚರಿಕೆ
ಏಪ್ರಿಲ್ 1949. ನೆಹರೂ ಲಂಡನ್ ಘೋಷಣೆಗೆ ಸಹಿ ಹಾಕಿದರು. ಭಾರತ ಕಾಮನ್ವೆಲ್ತ್ ಒಕ್ಕೂಟದಲ್ಲಿ ಉಳಿಯಿತು. ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ಭಾರತ ಬ್ರಿಟನ್‌ಗೆ ಒದಗಿಸಿದ ಸೇವೆ ಮತ್ತು ಸಂಪನ್ಮೂಲಗಳಿಗಾಗಿ ಬ್ರಿಟನ್ ಭಾರತಕ್ಕೆ ಸುಮಾರು 130 ಕೋಟಿ ಪೌಂಡ್ ಸ್ಟರ್ಲಿಂಗ್ ನೀಡಬೇ ಕಿತ್ತು. ಈ ಹಣವನ್ನು ಸ್ಟರ್ಲಿಂಗ್ ಬ್ಯಾಲೆನ್ಸ್ ಎಂದು ದಾಖಲಿಸಲಾಗಿತ್ತು. ಆದರೆ, ಕಾಮನ್ವೆಲ್ತ್ ಸದಸ್ಯತ್ವಕ್ಕೆ ಸಹಿ ಹಾಕಿದ್ದು ಮತ್ತು ಸ್ಟರ್ಲಿಂಗ್ ಏರಿಯಾ ವ್ಯವಸ್ಥೆಯ ಕಾರಣ ಆ ಹಣ ಭಾರತಕ್ಕೆ ನಗದು ರೂಪದಲ್ಲಿ ಎಷ್ಟು ಬಂತು ಎನ್ನುವುದು ಇಲ್ಲಿಯ ತನಕ ಸಾಬೀತಾಗಲಿಲ್ಲ.
ಡಾ.ಭೀಮರಾವ್ ಅಂಬೇಡ್ಕರ್ ಅವರು 1926ರಲ್ಲೇ ಎಚ್ಚರಿಕೆ ನೀಡಿದ್ದರು. ಹಿಲ್ಟನ್ ಯಂಗ್ ಕಮಿಷನ್ ಮುಂದೆ 257 ಪುಟಗಳ ಪ್ರಬಂಧ ಮಂಡಿಸಿ, ಭಾರತದ ಹಣಕಾಸು ವ್ಯವಸ್ಥೆ ಬ್ಯಾಂಕ್ ಆಫ್ ಇಂಗ್ಲೆಂಡ್‌ಗೆ ಅಧೀನವಾಗಿರಬಾರದು ಎಂದು ವಾದಿಸಿದ್ದರು. ಭಾರತಕ್ಕೆ ಸ್ವತಂತ್ರ ರಿಸರ್ವ್ ಬ್ಯಾಂಕ್ ಬೇಕು ಎಂದು ಅವರು ಪ್ರತಿಪಾದಿಸಿದ್ದರು. ಆ ಪ್ರಬಂಧದ ಆಧಾರದ ಮೇಲೆ 1935ರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಥಾಪಿಸಲಾಯಿತು.
ಇದು Writings and Speeches, Vol 6, Government of Maharashtra ನಲ್ಲಿ ದಾಖಲಾಗಿದೆ. ಆ ಎಚ್ಚರಿಕೆಯನ್ನು 1949ರಲ್ಲಿ ಅನುಸರಿಸಿದ್ದರೆ ಭಾರತದ ಸ್ಟರ್ಲಿಂಗ್ ಬ್ಯಾಲೆನ್ಸ್ ವಾಪಸ್ ಬರುತ್ತಿತ್ತು. ಇಷ್ಟೆಲ್ಲಾ ಗೊತ್ತಿದ್ದರೂ ನೆಹರು ಆ ಕಾಮನ್ವೆಲ್ತ್ ಒಕ್ಕೂಟಕ್ಕೆ ಸಹಿ ಹಾಕಿ, ಬಡ ಭಾರತೀಯ ರೈತರ ಹಣವನ್ನು ಬ್ರಿಟಿಷರೇ ಬಳಸಿಕೊಳ್ಳುವಂತೆ ಯಾಕೆ ಮಾಡಿದರು?
ಸ್ವತಂತ್ರ ಭಾರತದ ಮೊದಲ ಓಟ್ ಚೋರಿ?
ಭಾರತದ ಸಂವಿಧಾನವನ್ನು ರಚಿಸಿದ ವ್ಯಕ್ತಿ 1952ರ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಉತ್ತರ ಮಧ್ಯ ಮುಂಬೈ ಕ್ಷೇತ್ರದಿಂದ ಸ್ಪರ್ಧಿಸಿದರು. ನೆಹರೂ ಅವರು ಅಂಬೇಡ್ಕರ್ ವಿರುದ್ಧ ಮುಂಬೈಗೆ ಎರಡು ಬಾರಿ ಖುದ್ದು ಬಂದು ಪ್ರಚಾರ ಮಾಡಿದರು. ಪ್ರಧಾನ ಮಂತ್ರಿ ತಮ್ಮ ಸ್ವಂತ ಮಾಜಿ ಕಾನೂನು ಮಂತ್ರಿ ವಿರುದ್ಧ ಖುದ್ದು ಪ್ರಚಾರ ಮಾಡಿದ ಘಟನೆ ಭಾರತದ ಇತಿಹಾಸದಲ್ಲಿ ಇದೊಂದೇ. ಆ ಚುನಾವಣೆಯಲ್ಲಿ 74,333 ಮತಪತ್ರ ಗಳನ್ನು ರದ್ದು ಮಾಡಲಾಯಿತು. ಅಂಬೇ ಡ್ಕರ್ 14,537 ಮತಗಳ ಅಂತರದಲ್ಲಿ ಸೋತರು. ಅಂಬೇಡ್ಕರ್ ಅವರು ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿ ತನಿಖೆ ಕೇಳಿದರು. ಆದರೆ ಯಾವ ತನಿಖೆಯೂ ನಡೆಯಲಿಲ್ಲ. ಇದು PTI ವರದಿ ಜನವರಿ 5, 1952 ಮತ್ತು Dhananjay Keer, Dr. Ambedkar Life and Mission, Popular Prakashan 1954 ರಲ್ಲಿ ದಾಖಲಾಗಿದೆ. ಬಹುಶಃ ಅಂಬೇಡ್ಕರ್ ಅವರು ಸ್ವತಂತ್ರ ಭಾರತದ ಮೊದಲ ವೋಟ್ ಚೋರಿ ಕುತಂತ್ರಕ್ಕೆ ಬಲಿಯಾದರು ಅಂದರೆ ತಪ್ಪಾಗುತ್ತದೆಯೇ?
ಇತಿಹಾಸ ತೀರ್ಪು ನೀಡಲಿ
ಸ್ವಾತಂತ್ರ್ಯ ಹೋರಾಟದ ಮಾನದಂಡ ಒಂದೇ ಆಗಿರಬೇಕು. ಸಾವರ್ಕರ್ ಅವರ ಕ್ಷಮಾಯಾಚನಾ ಪತ್ರ ಅವರನ್ನು ಸ್ವಾತಂತ್ರ್ಯ ಹೋರಾಟಗಾರರಲ್ಲ ಎಂದು ಸಾಬೀತುಪಡಿಸುತ್ತದೆ ಎಂದಾದರೆ, ಮೇಲೆ ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಬೇಕು. ನಾಭಾ ಜೈಲಿನಲ್ಲಿ ಕೇವಲ ಎರಡು ವಾರಗಳಲ್ಲಿ ಬಾಂಡ್ ಸಹಿ ಮಾಡಿ ಬಿಡುಗಡೆ ಪಡೆದದ್ದು ಏನನ್ನು ಹೇಳುತ್ತದೆ? ತಂದೆ ವೈಸ್ರಾಯ್‌ಗೆಮನವಿ ಸಲ್ಲಿಸಿ ಮಗನನ್ನು ಬಿಡಿಸಿದ್ದು ಏನನ್ನು ಹೇಳುತ್ತದೆ? ಬ್ರಿಟಿಷ್ ಪ್ರಧಾನ ಮಂತ್ರಿ ಖಾಸಗಿ ತಂತಿ ಕಳುಹಿಸಿ ಜೈಲಿನಲ್ಲಿ ಪುಸ್ತಕ ಕೊಡಿಸಿದ್ದು ಏನನ್ನು ಹೇಳುತ್ತದೆ? ಬ್ರಿಟಿಷ್ ವೈಸ್ರಾಯ್ ಯಾವುದೇ ಚುನಾವಣೆ ನಡೆಯುವ ಮೊದಲೇ ಇವರೇ ಪ್ರಧಾನ ಮಂತ್ರಿ ಎಂದು ನಿರ್ಧರಿಸಿದ್ದು ಏನನ್ನು ಹೇಳುತ್ತದೆ? 12 ಪ್ರಾಂತ್ಯಗಳ ಮತ ಪಟೇಲರಿಗೆ ಇದ್ದರೂ ನೆಹರೂ ಪ್ರಧಾನ ಮಂತ್ರಿಯಾದದ್ದು ಏನನ್ನು ಹೇಳುತ್ತದೆ? ಪಟೇಲ್ ಬ್ರಿಟಿಷರನ್ನು ನಂಬದೆ ಖಾಸಗಿ ಭೇಟಿ ಮಾಡಿದಾಗ ನೆಹರೂ ಕಾಮನ್ವೆಲ್ತ್‌ಗೆ ಸಹಿ ಹಾಕಿದ್ದು ಏನನ್ನು ಹೇಳುತ್ತದೆ? ಅಂಬೇಡ್ಕರ್ 1926ರಲ್ಲೇ ಎಚ್ಚರಿಸಿದ ಸ್ಟರ್ಲಿಂಗ್ ಬ್ಯಾಲೆನ್ಸ್ 1949ರಲ್ಲಿ ಭಾರತಕ್ಕೆ ವಾಪಸ್ ಬಾರದೆ ಹೋದದ್ದು ಏನನ್ನು ಹೇಳುತ್ತದೆ? ಭಾರತಕ್ಕೆ ಸಂವಿಧಾನ ಬರೆದ ಮನುಷ್ಯನ ಚುನಾವಣೆಯಲ್ಲಿ 74,333 ಮತ ಪತ್ರಗಳು ರದ್ದಾದದ್ದು ಏನನ್ನು ಹೇಳುತ್ತದೆ? ಈ ಪ್ರಶ್ನೆಗಳಿಗೆ ಉತ್ತರ ನೀಡುವ ಜವಾಬ್ದಾರಿ ಇವತ್ತು ಸಾವರ್ಕರ್ ಅವರ ದೇಶಭಕ್ತಿಯನ್ನು ಪ್ರಶ್ನೆ ಮಾಡುವ ಮಂದಿಯದ್ದು.