ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Hair Care Tips: ಕೂದಲು ಉದುರುವುದನ್ನು ಕಡಿಮೆ ಮಾಡಲು ಈ ಆಹಾರಗಳೇ ಸಾಕು

Health Tips: ಕೂದಲು ಉದುರುವ ಸಮಸ್ಯೆಗೆ ಯಾವಾಗಲೂ ಸಪ್ಲಿಮೆಂಟ್‌ಗಳ ಅಗತ್ಯವಿಲ್ಲ ಎಂದು ಪೌಷ್ಟಿಕ ತಜ್ಞೆ ಲವ್ನೀತ್ ಬಾತ್ರಾ ತಿಳಿಸಿದ್ದಾರೆ. ಸೂರ್ಯಕಾಂತಿ ಬೀಜ, ನುಗ್ಗೆ ಸೊಪ್ಪಿನ ಪುಡಿ, ಪನೀರ್‌, ನೆಲ್ಲಿಕಾಯಿ, ಅಗಸೆ ಬೀಜ ಹಾಗೂ ಮೊಸರು ಸೇವಿಸುವುದರಿಂದ ಕೂದಲಿನ ಆರೋಗ್ಯವನ್ನು ನೈಸರ್ಗಿಕವಾಗಿ ಸುಧಾರಿಸಬಹುದು ಎಂದು ಅವರು ಸಲಹೆ ನೀಡಿದ್ದಾರೆ. ಸಮಸ್ಯೆ ತೀವ್ರವಾಗಿದ್ದರೆ ವೈದ್ಯರ ಸಲಹೆ ಪಡೆದು ಅಗತ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು ಎಂದೂ ಹೇಳಿದ್ದಾರೆ.

ಕೂದಲು ಉದುರುವ ಸಮಸ್ಯೆಗೆ ಇಲ್ಲಿದೆ ನೈಸರ್ಗಿಕ ಪರಿಹಾರ

ಸಾಂದರ್ಭಿಕ ಚಿತ್ರ -

Profile
Sushmitha Jain Jun 28, 2026 7:11 AM

ಬೆಂಗಳೂರು, ಜೂ. 28: ದಟ್ಟವಾಗಿ ಕೂದಲು, ಉದ್ದವಾಗಿ ಹಾಗೂ ಆರೋಗ್ಯಪೂರ್ಣವಾಗಿ ಬೆಳೆಯಲು ಹಲವರು ವಿವಿಧ ರೀತಿಯ ಸಪ್ಲಿಮೆಂಟ್‌ಗಳ ಮೊರೆ ಹೋಗುತ್ತಾರೆ. ಆದರೆ ಕೂದಲು ಉದುರುವುದು, ತೆಳುವಾಗುವುದು ಅಥವಾ ಹೊಳಪು ಕಳೆದುಕೊಳ್ಳುವುದು ಕೆಲವೊಮ್ಮೆ ದೇಹದಲ್ಲಿನ ಪೌಷ್ಟಿಕಾಂಶಗಳ ಕೊರತೆ (Nutritional Deficiency)ಯಿಂದಲೂ ಉಂಟಾಗಬಹುದು ಎಂದು ಪೌಷ್ಟಿಕ ತಜ್ಞೆ ಲವ್ನೀತ್ ಬಾತ್ರಾ (Lovneet Batra) ತಿಳಿಸಿದ್ದಾರೆ.

ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಮಾಹಿತಿಯಲ್ಲಿ, ಯಾವುದೇ ಸಪ್ಲಿಮೆಂಟ್ ಸೇವಿಸುವ ಮೊದಲು ಆಹಾರದಲ್ಲಿ ಅಗತ್ಯ ಪೌಷ್ಟಿಕಾಂಶಗಳ ಕೊರತೆಯಿದೆಯೆ ಎಂಬುದನ್ನು ಪರಿಶೀಲಿಸುವಂತೆ ಅವರು ಸಲಹೆ ನೀಡಿದ್ದಾರೆ. ಪ್ರೋಟೀನ್, ಕಬ್ಬಿಣ, ಜಿಂಕ್, ವಿಟಮಿನ್ ಸಿ, ವಿಟಮಿನ್ B12, ಒಮೆಗಾ-3 ಹಾಗೂ ಸಮತೋಲಿತ ಆಹಾರವು ಕೂದಲಿನ ಆರೋಗ್ಯಕ್ಕೆ ಅತ್ಯಗತ್ಯ ಎಂದು ಅವರು ಹೇಳಿದ್ದಾರೆ.

ಕೂದಲಿನ ಆರೋಗ್ಯಕ್ಕೆ ಸಹಾಯ ಮಾಡುವ 6 ಆಹಾರಗಳು

ಸೂರ್ಯಕಾಂತಿ ಬೀಜ (Sunflower Seeds): ಬಯೋಟಿನ್ ಮಾತ್ರೆಗಳ ಬದಲು ಪ್ರತಿದಿನ ಒಂದು ಚಮಚ ಸೂರ್ಯಕಾಂತಿ ಬೀಜ ಸೇವಿಸಿ. ಇದರಲ್ಲಿ ವಿಟಮಿನ್ E, ಜಿಂಕ್, ಸೆಲೆನಿಯಂ ಮತ್ತು ಲಿನೋಲಿಕ್ ಆಮ್ಲವಿದ್ದು ಕೂದಲಿನ ಬೆಳವಣಿಗೆಗೆ ನೆರವಾಗುತ್ತದೆ.

ನುಗ್ಗೆ ಸೊಪ್ಪಿನ ಪುಡಿ (Moringa Powder): ಐರನ್ ಮಾತ್ರೆಗಳ ಬದಲು ನುಗ್ಗೆ ಸೊಪ್ಪಿನ ಪುಡಿಯನ್ನು ಸೇವಿಸಬಹುದು. ಇದರಲ್ಲಿ ವಿಟಮಿನ್ A, C, E, ಜಿಂಕ್, ಕಬ್ಬಿಣ ಹಾಗೂ ಅಮಿನೋ ಆಮ್ಲಗಳು ಸಮೃದ್ಧವಾಗಿದ್ದು ಕೂದಲಿನ ಬೇರುಗಳನ್ನು ಬಲಪಡಿಸುತ್ತವೆ.

ಪನ್ನೀರ್ (Paneer): ಪ್ರೋಟೀನ್ ಪೌಡರ್ ಬದಲು 100 ಗ್ರಾಂ ಪನ್ನೀರ್ ಸೇವಿಸುವುದು ಉತ್ತಮ. ಇದು ಪ್ರೋಟೀನ್, ವಿಟಮಿನ್ E ಮತ್ತು ಸೆಲೆನಿಯಂನಿಂದ ಸಮೃದ್ಧವಾಗಿದ್ದು ಕೂದಲಿನ ಕಿರುಚೀಲಗಳನ್ನು (Hair Follicles) ಬಲಪಡಿಸುತ್ತದೆ.

ನೆಲ್ಲಿಕಾಯಿ (Amla): ವಿಟಮಿನ್ ಸಿ ಮಾತ್ರೆಗಳ ಬದಲು ನೆಲ್ಲಿಕಾಯಿಯನ್ನು ಆಹಾರದಲ್ಲಿ ಸೇರಿಸಿಕೊಳ್ಳಿ. ಇದು ಕೂದಲಿನ ಬೇರುಗಳನ್ನು ಗಟ್ಟಿಗೊಳಿಸುವುದರ ಜತೆಗೆ ತಲೆಹೊಟ್ಟು ಹಾಗೂ ಅಕಾಲಿಕ ಬಿಳಿ ಕೂದಲಿನ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

ಅಗಸೆ ಬೀಜ (Flaxseeds): ಒಮೆಗಾ-3 ಸಪ್ಲಿಮೆಂಟ್ ಬದಲು ಒಂದು ಚಮಚ ಅಗಸೆ ಬೀಜ ಸೇವಿಸಿ. ಇದರಲ್ಲಿ ಒಮೆಗಾ-3 ಕೊಬ್ಬಿನಾಮ್ಲ, ವಿಟಮಿನ್ E ಹಾಗೂ ಪ್ರೋಟೀನ್ ಇದ್ದು ಕೂದಲಿನ ಬೆಳವಣಿಗೆಗೆ ನೆರವಾಗುತ್ತದೆ.

ಮೊಸರು (Curd): ವಿಟಮಿನ್ B12 ಮಾತ್ರೆಗಳ ಬದಲು ಮೊಸರು ಸೇವಿಸಬಹುದು. ಇದು ಪ್ರೋಟೀನ್, ವಿಟಮಿನ್ ಹಾಗೂ ಲ್ಯಾಕ್ಟಿಕ್ ಆಮ್ಲವನ್ನು ಹೊಂದಿದ್ದು ತಲೆಚರ್ಮದ ಆರೋಗ್ಯವನ್ನು ಕಾಪಾಡಲು, ತಲೆಹೊಟ್ಟು ಕಡಿಮೆ ಮಾಡಲು ಮತ್ತು ಕೂದಲಿಗೆ ನೈಸರ್ಗಿಕ ಕಾಂತಿ ನೀಡಲು ಸಹಕಾರಿ.

ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು?

ಹಠಾತ್ ಕೂದಲು ಹೆಚ್ಚು ಉದುರಲು ಆರಂಭವಾದರೆ, ತೀವ್ರವಾಗಿ ಕೂದಲು ತೆಳುವಾಗುತ್ತಿದ್ದರೆ ಅಥವಾ ಸಮಸ್ಯೆ ದೀರ್ಘಕಾಲ ಮುಂದುವರಿದರೆ ವೈದ್ಯರನ್ನು ಸಂಪರ್ಕಿಸಬೇಕು. ಅಗತ್ಯವಿದ್ದರೆ ಐರನ್, ಫೆರಿಟಿನ್, ವಿಟಮಿನ್ B12, ವಿಟಮಿನ್ D ಹಾಗೂ ಥೈರಾಯ್ಡ್ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವಂತೆ ಪೌಷ್ಟಿಕ ತಜ್ಞರು ಸಲಹೆ ನೀಡಿದ್ದಾರೆ.