ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹೆದ್ದಾರಿಯ ಮೇಲೊಂದು ತುಣುಕು ನಗೆ!

ನಗು ಕೇವಲ ಸಂತೋಷದ ದ್ಯೋತಕವಲ್ಲ, ಅದು ಜೀವನದ ಮೇಲಿನ ಭರವಸೆ, ಸಕಾರಾತ್ಮಕತೆ ಮತ್ತು ಸೌಹಾರ್ದತೆಯ ಸಂಕೇತ. ಅಳು ಕೂಡ ಅತ್ಯಂತ ಆಳವಾದ ಮತ್ತು ಶಕ್ತಿಯುತವಾದ ಭಾವನೆ. ಬದುಕಿನ ನಾಣ್ಯಕ್ಕೆ ಎರಡು ಮುಖಗಳಿದ್ದಂತೆ! ನಗುವಿಲ್ಲದೆ ಅಳು ಹುಟ್ಟಲಾರದು; ಅಳು ಇಲ್ಲದೆ ನಗು ಹುಟ್ಟಲಾರದು. ಇದೊಂದು ನಗುವಿನ ಕಥೆ ಮತ್ತು ಚರಿತ್ರೆ. ‌

ಹೆದ್ದಾರಿಯ ಮೇಲೊಂದು ತುಣುಕು ನಗೆ!

-

Profile
Ashok Nayak Aug 22, 2026 8:46 AM

ಪ್ರಸ್ತುತ

ಡಾ.ಎಲ್ಲಪ್ಪ ಜಿ.ಕಲಾದಗಿ

ಆಧುನಿಕ ಜೀವನ ಕ್ರಮವು ನಗುವುದನ್ನೇ ನುಂಗಿ ಬಿಟ್ಟಿದೆ. ನನ್ನ ಬೆಲ್ಲದಚ್ಚಿನ ಬೊಂಬೆಯೇ ನೀನು ನಕ್ಕರೊಂದು ರುಚಿ, ನೀನು ಅತ್ತರೊಂದು ರುಚಿ ಎನ್ನುವ ಬೇಂದ್ರೆ ಅವರ ಮಾತಿದು. ನಗು ಮತ್ತು ಅಳು ಎರಡು ಕೂಡ ರುಚಿಯೇ. ಒಂದು ಹಿತ ಮತ್ತೊಂದು ಅಹಿತ ಎನ್ನಲಾಗದು. ಪ್ರತಿಯೊಂದು ಜೀವಿಯಲ್ಲಿಯೂ ಈ ಎರಡು ರೇಖೆಗಳು ಹಾದು ಹೋಗುತ್ತವೆ. ಜೊತೆಗೆ ಒಂದೆಡೆಗೆ ಸಂಧಿಸುತ್ತವೆ. ಬದುಕಿಗೆ ಬಂದ ಅವಳಿಗಳು ಹಾಗೂ ಉಸಿರಿನ ಉದ್ದಕ್ಕೂ ಸಿಗುವ ಬಳುವಳಿಗಳು, ಭಾವದ ಬಳ್ಳಿಗಳು. ಒಂದು ಪರಿಸರದಲ್ಲಿ ಉತ್ಪನ್ನಗೊಳ್ಳುವ ಸ್ಥಾಯಿಗಳಾಗುತ್ತವೆ. ಈ ಭಾವನೆಗಳ ವ್ಯಾಪಾರದ ಮೂಲ- ಮನಸ್ಸು. ಈ ಅಳುವಿನ ಫಿಲಾಸಫಿ ಗಂಭೀರವಾದದ್ದು.

ನಗು ಕೇವಲ ಸಂತೋಷದ ದ್ಯೋತಕವಲ್ಲ, ಅದು ಜೀವನದ ಮೇಲಿನ ಭರವಸೆ, ಸಕಾರಾತ್ಮಕತೆ ಮತ್ತು ಸೌಹಾರ್ದತೆಯ ಸಂಕೇತ. ಅಳು ಕೂಡ ಅತ್ಯಂತ ಆಳವಾದ ಮತ್ತು ಶಕ್ತಿಯುತವಾದ ಭಾವನೆ. ಬದುಕಿನ ನಾಣ್ಯಕ್ಕೆ ಎರಡು ಮುಖಗಳಿದ್ದಂತೆ! ನಗುವಿಲ್ಲದೆ ಅಳು ಹುಟ್ಟಲಾರದು; ಅಳು ಇಲ್ಲದೆ ನಗು ಹುಟ್ಟಲಾರದು. ಇದೊಂದು ನಗುವಿನ ಕಥೆ ಮತ್ತು ಚರಿತ್ರೆ. ‌

ನಗುವ ಒಂದು ರಿಯಲ್ ವಿಡಿಯೋ ರಿಲೆಯಂತೆ ಓಡುತ್ತದೆ. ಒಂದು ಸಣ್ಣ ನಗು ಜಗತ್ತನ್ನು ಆಳುತ್ತದೆ. ಒಂದು ತುಂಡು ರೀಲ್ಸ್ ಜನರನ್ನು ಮೆಚ್ಚಿಸುತ್ತದೆ. ಲೋಕವನ್ನೆಲ್ಲ ಸುತ್ತಿ, ಮಿಲಿಯನ್ಸ್ ಜನರ ಹೃದಯಗಳನ್ನು ಗೆಲ್ಲುತ್ತದೆ. ಹಾಗೆ ಆಕರ್ಷಿಸಿದ ನಗುವೊಂದು ಚರಿತ್ರೆಯಾಗಿ ಮೆರೆಯುತ್ತದೆ ಎಂದು ಯಾರು ಊಹಿಸಿರಲಿಲ್ಲವೇನೋ. ನಕ್ಕ ಹುಡುಗನಿಗೂ ಇದು ನಿರೀಕ್ಷೆ ಇರಲಿಲ್ಲ. ‌

ಇದನ್ನೂ ಓದಿ: K V Chandramouli Column: ಗಾಂಧಿ ಟು ಅಂಬೇಡ್ಕರ್:‌ ಬದಲಾಗುತ್ತಿದೆ ರಾಜಕೀಯ ಸಂಸ್ಕೃತಿ

ಸುಮಾರು ಹದಿಮೂರು, ಹದಿನಾಲ್ಕನೇ ವಯಸ್ಸಿವನಂತೆ ಕಾಣುವ ಆ ಹಳ್ಳಿ ಹುಡುಗನ ಮುಗ್ಧ ಪರಿಪೂರ್ಣ ನಗು, ಲೋಕ ವಿಖ್ಯಾತಿ ಆಗುತ್ತದೆ ಎಂದು ಕನಸು ಮನಸ್ಸಿನಲ್ಲೂ ಅಂದುಕೊಂಡಿರ ಲಿಲ್ಲವೇನೋ! ಅವನು ಟೀ ಕುಡಿಯುತ್ತಿರುವ ಒಂದು ತುಣುಕು ನಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಗುತ್ತದೆ. ಅದು ತೆಲಂಗಾಣದ ಒಂದು ಹೆದ್ದಾರಿಯ ಮೇಲೊಂದು ಜಾಗ. ರಸ್ತೆ ಬದಿಯಲ್ಲಿನ ಚಹಾ ಅಂಗಡಿ.

ಕೈಯಲ್ಲಿ ಕಾದ ಚಹಾ ಕಪ್ ಹಿಡಿದ ಆ ಹುಡುಗನು, ಯಾರೋ ಹೇಳಿದ ತಮಾಷೆಯ ಮಾತಿಗೆ ಬಿದ್ದು ಬಿದ್ದು ನಗುತ್ತಿದ್ದ. ಹಾಗೆ ನಗುವ ಹುಡುಗನ ಹೆಸರು ಅರುಣ. ಈತ ಟ್ರಕ್ಕಿನ ಕ್ಲೀನರ್! ಆ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದವನು ನೆಹರು. ಈತ ಟ್ರಕ್ಕಿನ ಮಾಲೀಕ!

ಅದು ಸಾಮಾಜಿಕ ಜಾಲತಾಣ ತಲುಪಿದ ಮೇಲೆ ಆ ವೀಡಿಯೊ ಕ್ಲಿಪ್ ಎಲ್ಲಾ ಕಡೆ ಆಕ್ರಮಿಸಿತು. ಎಷ್ಟೋ ದೂರ ತಲುಪಿತು. ಮೀಮ್ಸ್, ರೀಲ್ಸ್, ಮಿಲಿಯನ್ಸ್ ಶೇರ್‌ಗಳಿಗೆ ಒಳಗಾಗುತ್ತಲೇ ಇದೆ. ಜಗತ್ತಿನ ಪರಿವೆಯಿಲ್ಲದ ಆ ಹುಡುಗನ ದಿನಚರಿಯೇ ಬೇರೆ. ಕಿತ್ತು ತಿನ್ನುವ ಬಡತನ. ಅರ್ಧಕ್ಕೆ ಶಾಲೆ ತೊರೆದು ಅದೆಷ್ಟೋ ವರ್ಷಗಳಾಗಿ, ಹೆದ್ದಾರಿಯ ಮೇಲೊಂದು ಜೀವನ. ಅದೇ ಅವನ ದಿನನಿತ್ಯದ ಬದುಕಿನ ಪಾಠಶಾಲೆ. ಟ್ರಕ್ಕಿನ ಸರಕು ತುಂಬುವುದು, ಅದನ್ನು ಕ್ಲೀನ್ ಮಾಡೋದು, ಗ್ರೀಸ್ ಇಡೋದು, ಪಂಚರ್ ಆದಾಗ ಟೈರ್ ಬದಲಿಸುವುದು. ಅಲ್ಲಲ್ಲಿ ಚಹಾದ ಅಂಗಡಿಗಳ ಮುಂದೆ ಟೀ ಕುಡಿಯುವ ವಿರಾಮ- ಇದು ಅವನ ಬದುಕಿನ ಕಾಯಕದ ದಾರಿ.

ಮೇಲ್ನೋಟಕ್ಕೆ ಅದೇನು ಮುದ್ದಾದ ನಗುವೇನು ಅಲ್ಲ. ಅವನು ಸುಂದರವಾಗಿ ಏನು ಕಾಣುವುದಿಲ್ಲ. ಉದ್ದಕ್ಕೆ ಬೆಳೆದಂತೆ ಕಾಣುವ ಕೂದಲುಗಳು ಚದುರಿ ಹೋಗಿವೆ. ಒಳ್ಳೆಯ ಬಟ್ಟೆ ತೊಟ್ಟವನಲ್ಲ. ಆದರೆ ಅವನ ಮನ ತುಂಬಿದ ನಗು ಮನ ಸೋಲುವಂತೆ ಮಾಡಿದೆ. ಅವನ ಅವಸ್ಥೆಯನ್ನೇ ಮರೆಸಿ ಬಿಡುತ್ತದೆ. ನಗುವೊಂದು ಅವನ ನಿಜ ಸ್ವರೂಪವನ್ನು ಮರೆಮಾಚಿ ಬಿಟ್ಟಿದೆ. ಇದು ಬಹುದೊಡ್ಡ ತಾತ್ವಿಕತೆ. ನಾವು ನಮ್ಮ ಸಂಕಟಗಳನ್ನ ಹೀಗೆ ಮರೆಯುವಂತೆ ನಗಬೇಕೇನೋ! ಒಂದು ನಗು ಜಗತ್ತನ್ನೇ ತಿರುಗಿ ನೋಡಿಸುವಂತೆ ಮಾಡುತ್ತದೆ ಎಂದರೆ ಅದರ ಶಕ್ತಿ ಎಂತಹದ್ದು ಎಂದು ಅರ್ಥವಾಗುತ್ತದೆ.

ಆ ವೀಡಿಯೊ ಶೇರ್ ಮಾಡಿದ ಯಾರೊಬ್ಬರಿಗೂ ಆ ಹುಡುಗನ ನಿಜವಾದ ಕಥೆ ಗೊತ್ತಿರಲಿಕ್ಕಿಲ್ಲ. ಅರುಣ್ ನಾಲ್ಕನೇ ತರಗತಿಯಲ್ಲಿದ್ದಾಗಲೇ ಶಾಲೆಯಿಂದ ವಂಚಿತನಾದವನು. ಮುಂದೆ ಟ್ರಕ್ ಕ್ಲೀನರ್ ಆದ. ಅವನು ಮನತುಂಬಿ ನಕ್ಕ ಬರಿ 15 ಸೆಕೆಂಡಿನ ವೀಡಿಯೊ ಲಕ್ಷಾಂತರ ಜನರ ಮುಖದಲ್ಲಿ ಮಂದಹಾಸ ಉಕ್ಕಿಸುವಂತಿದೆ.

ಒಂದು ಕಡೆ ಅಂತರ್ಜಾಲದಲ್ಲಿ ಆ ನಗು ಜಲಪಾತದಂತೆ ಕಾಮೆಂಟ್‌ಗಳಿಂದ ರಭಸವಾಗಿ ಹರಿಯು ತ್ತಿದೆ. ಆದರೆ, ತನ್ನ ಬಗ್ಗೆ ಜನ ಏನೆ ಬರೆದಿದ್ದಾರೆ ಎಂದು ಓದಲು ಅವನಿಗೆ ಅಕ್ಷರವೇ ಬರುತ್ತಿರಲಿಲ್ಲ! ಆ ನಗು ಜಾಲತಾಣದಲ್ಲಿ ಹೊಸ ಸಂಚಲನದ ಅಲೆ ಎಬ್ಬಿಸಿದೆ.

ಇದ್ಯಾವುದರ ಪರಿವೂ ಅವನಿಗಿಲ್ಲ. ಇದರ ಹಿಂದಿರುವ ನೋವು ಎಂತದ್ದು ಅಂತ ಒಮ್ಮೆ ನೆಹರು ವಿಭಿನ್ನವಾಗಿ ಯೋಚಿಸಿದ. ಆಮೇಲೆ ಆತ ಮಾಡಿದ್ದು ಹೀಗೆ- ಅರುಣನಿಗೆ ಪುಸ್ತಕಗಳನ್ನು ತೆಗೆದು ಕೊಟ್ಟ. ಪರೀಕ್ಷಾ ಶುಲ್ಕ ಕಟ್ಟಿದ. ಹೆzರಿಯ ತಂಗುದಾಣಗಳಲ್ಲಿ, ಚಹಾ ಕುಡಿಯುವ ವಿರಾಮದ ವೇಳೆಯಲ್ಲಿ ಅವನಿಗೆ ಓದುವುದು, ಬರೆಯುವುದು ಮತ್ತು ಗಣಿತ ಕಲಿಸಲು ಶುರು ಮಾಡಿದ. ಅವನ ಬದುಕಿಗೊಂದು ಅರ್ಥ ಕೊಡಬೇಕು. ಆ ನಗುವಿಗೊಂದು ಸಾರ್ಥಕತೆ ಕೊಡಬೇಕು ಚಿಂತಿಸಿದ.

ಫಲವಾಗಿ 2026ರಲ್ಲಿ ಅರುಣ್ 10ನೇ ತರಗತಿ ಪರೀಕ್ಷೆ ಬರೆದು, ಉತ್ತೀರ್ಣನೂ ಆದ! ಆತನ ಮಾತು ಗಳ ಹೇಳುವುದಾದರೆ:, ನೆಹರೂ ಅಣ್ಣ ನನಗೆ ದೇವರಿದ್ದಂತೆ. ಅವರ ಹಠವೇ ಇಲ್ಲದಿದ್ದರೆ, ನಾನು 10ನೇ ತರಗತಿವರೆಗೆ ಓದಲು ಸಾಧ್ಯವೇ ಇರುತ್ತಿರಲಿಲ್ಲ! ಲಕ್ಷಾಂತರ ಜನರು ಅರುಣ್ ನಗುವುದನ್ನು ನೋಡಿ ಆನಂದಿಸಿದರು. ಆದರೆ ಒಬ್ಬ ವ್ಯಕ್ತಿ ಮಾತ್ರ ಅವನಿಗೆ ನಿಜವಾಗಿ ನೆರವಾಗಲು ಮುಂದಾದ. ಮಾರ್ಗದರ್ಶನಕ್ಕೆ ಮೂಲಸೌಕರ್ಯಗಳೇ ಇರಬೇಕಂತಿಲ್ಲ. ನೆಹರೂ ಸರಕು ತಲುಪಿಸುವ ನಡುವೆಯೇ ಚಲಿಸುವ ಟ್ರಕ್‌ನಲ್ಲಿ ಅವನಿಗೆ ಪಾಠ ಹೇಳಿಕೊಟ್ಟ. ಅಗತ್ಯವಿರುವಲ್ಲಿ ಸಮಯವಿಲ್ಲ, ವ್ಯವಸ್ಥೆ ಇಲ್ಲ ಎನ್ನುವುದು ನೆಪ ಮಾತ್ರ ಎನಿಸುತ್ತದೆ.