ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Keshava Prasad B Column: ಟ್ರಂಪ್‌ ಹುಚ್ಚಾಟಕ್ಕೆ ಸೊಪ್ಪು ಹಾಕದ ಬಲಿಷ್ಠ ಭಾರತ !

ಯಾವುದೇ ದೇಶ ಮುಕ್ತ ವ್ಯಾಪಾರ ಮಾಡುವುದರಿಂದ ಆರ್ಥಿಕ ಬೆಳವಣಿಗೆಯನ್ನು ಹೊಂದು ತ್ತದೆಯೇ ಹೊರತು ನಾಶವಾಗುವುದಿಲ್ಲ. ಅದಕ್ಕೆ ಭಾರತವೇ ನಿದರ್ಶನ. ತೊಂಬತ್ತರ ದಶಕದಲ್ಲಿ ಉದಾರೀಕರಣಕ್ಕೆ ತೆರೆದುಕೊಂಡ ಬಳಿಕದ ದೇಶದ ಆರ್ಥಿಕತೆಯ ಇತಿಹಾಸ ಅತ್ಯಂತ ರೋಚಕ. ಈಗ ಅಮೆರಿಕ, ಯುರೋ ಪ್ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳು ಭಾರತವನ್ನು ಕಡೆಗಣಿಸಿದರೆ, ಅದರ ಬಿಸಿ ಮರುಗಳಿಗೆ ಯಲ್ಲಿಯೇ ಅವುಗಳಿಗೂ ತಟ್ಟದೆ ಇರುವುದಿಲ್ಲ!

ಟ್ರಂಪ್‌ ಹುಚ್ಚಾಟಕ್ಕೆ ಸೊಪ್ಪು ಹಾಕದ ಬಲಿಷ್ಠ ಭಾರತ !

ಮನಿ ಮೈಂಡೆಡ್

ಡೊನಾಲ್ಡ್ ಟ್ರಂಪ್ ಹುಚ್ಚಾಟಕ್ಕೆ ಕೊನೆಯೇ ಇಲ್ಲವಾಗಿದೆ. ಇವತ್ತು ಸ್ಟಾಕ್ ಮಾರ್ಕೆಟ್ ಕೂಡ ಇದನ್ನು ಅರ್ಥ‌ ಮಾಡಿಕೊಂಡಿದೆ. ಟ್ರಂಪ್ ಸುಂಕಾಸ್ತ್ರ ಪ್ರಯೋಗಕ್ಕೆ ಬೆದರಿ, ಸೆನ್ಸೆಕ್ಸ್ ಮತ್ತು ನಿಫ್ಟಿ ಪಾತಾಳಕ್ಕೆ ಕುಸಿಯಬಹುದು ಎಂದು ಭಾವಿಸಲಾಗಿತ್ತು. ಆದರೆ ಮರುದಿನ ಅಂಥದ್ದೇನೂ ಆಗಿಲ್ಲ! ಬೆಳಗ್ಗೆ ಕುಸಿತಕ್ಕೀಡಾಗಿದ್ದ ಸೂಚ್ಯಂಕಗಳು ಮಧ್ಯಾಹ್ನದ ವೇಳೆಗೆ ಚೇತರಿಸಿಕೊಂಡು ಅಚ್ಚರಿಯಿಂದ ಜಿಗಿದಿವೆ! ‌

ಒಟ್ಟಿನಲ್ಲಿ ಟ್ರಂಪ್ ಈಗ ಅಮೆರಿಕದ ಅವನತಿಗೆ ತಾವೇ ಶರವೇಗದಲ್ಲಿ ಗೋರಿ ತೋಡುತ್ತಿದ್ದಾರೆ. ಈ ಮೂಲಕ ಬೈಡೆನ್‌ಗಿಂತಲೂ ಅತಿ ಕೆಟ್ಟ ಅಧ್ಯಕ್ಷರಾಗುತ್ತಿದ್ದಾರೆ. ಜಗತ್ತಿನ ಪ್ರಗತಿಶೀಲ ದೇಶಗಳ ಜತೆಗಿನ ಸಂಬಂಧಗಳನ್ನು ಹದಗೆಡಿಸಿಕೊಂಡು ಅಮೆರಿಕವನ್ನು ಏಕಾಂಗಿಯಾಗಿಸುತ್ತಿದ್ದಾರೆ. ಭಾರಿ ಪ್ರತಿಸುಂಕವನ್ನು ಬಳಸಿ ದೊಡ್ಡ ದಿಗ್ವಿಜಯವನ್ನೇ ಸಾಧಿಸುತ್ತಿದ್ದೇನೆ ಎಂಬ ಭ್ರಮೆಯಲ್ಲಿ ತೇಲಾಡು ತ್ತಿದ್ದಾರೆ.

ಟ್ರಂಪ್ ಅವರಿಗೆ ಈ ನಶೆ ಇಳಿಯುವ ದಿನಗಳೂ ದೂರವಿಲ್ಲ. ಎಲಾನ್ ಮಸ್ಕ್‌ ಜತೆಗೆ ಕೂಡ ಕಿರಿಕ್ ಮಾಡಿಕೊಂಡಿರುವುದರಿಂದ ಟ್ರಂಪ್ ತಮ್ಮದೇ ಸಾಮಾಜಿಕ ಜಾಲತಾಣ ‘ಟ್ರುತ್ ಸೋಷಿಯಲ್’ನಲ್ಲಿ ಭಾರತದ ವಿರುದ್ಧ ಕೊಳಕು ಭಾಷೆಯಲ್ಲಿ ಪೋಸ್ಟ್ ಮಾಡಿಕೊಂಡು, ತಮ್ಮ ಹುದ್ದೆಯ ಘನತೆಗೆ ಮಸಿ ಬಳಿದುಕೊಂಡಿದ್ದಾರೆ.

“ಭಾರತವು ರಷ್ಯಾದ ಜತೆಗೂಡಿ ಏನು ಬೇಕಾದರೂ ಮಾಡಿಕೊಳ್ಳಲಿ, ನಾನು ಲೆಕ್ಕಿಸುವುದಿಲ್ಲ. ಇವೆರಡೂ ದೇಶಗಳು ತಮ್ಮ ಸತ್ತು ಹೋಗಿರುವ ಆರ್ಥಿಕತೆಯನ್ನು ಒಟ್ಟಿಗೆ ಕೆಳಗೆ ಇಳಿಸಿಕೊಳ್ಳಬಹುದು. ಭಾರತದ ಜತೆಗೆ ನಮ್ಮ ಬಿಸಿನೆಸ್ ಕಡಿಮೆಯೇ. ಭಾರತ ಜಗತ್ತಿನ ಹೆಚ್ಚು ಕರಭಾರವನ್ನು ಹಾಕುತ್ತಿದೆ. ರಷ್ಯಾ ಮತ್ತು ಅಮೆರಿಕ ಹೇಗೆ ಯಾವುದೇ ವ್ಯಾಪಾರವನ್ನು ಮಾಡುತ್ತಿಲ್ಲವೋ, ಅದೇ ರೀತಿ ಇರಬ‌ಲ್ಲೆವು" ಎಂದು ಟ್ರಂಪ್ ಕೀಳುಭಾಷೆಯಲ್ಲಿ ಭಾರತವನ್ನು ನಿಂದಿಸಿದ್ದಾರೆ.

ಇದನ್ನೂ ಓದಿ: Keshava Prasad B Column: ನೋಟಿಸ್‌ ಗದ್ದಲಕ್ಕೆ ತೆರೆ, ಯುಪಿಐ ನಿರಾಕರಿಸದಿರಿ ಪ್ಲೀಸ್‌ !

ಅಭಿವೃದ್ಧಿ ಹೊಂದುತ್ತಿರುವ ಭಾರತದ ವರ್ಚಸ್ಸು ಟ್ರಂಪ್ ಅವರ ಕಣ್ಣನ್ನು ಕುಕ್ಕುತ್ತಿದೆ. ಎರಡನೆಯದಾಗಿ ವ್ಯಾಪಾರ ಒಪ್ಪಂದಕ್ಕೆ ಭಾರತ ತಾನು ಹೇಳಿದಂತೆ ಸಹಿ ಹಾಕುತ್ತಿಲ್ಲ ಎಂಬ ಹತಾಶೆಯೂ ಅವರಲ್ಲಿದೆ. ಹೀಗಾಗಿ ಚೌಕಾಸಿಯ ಭಾಗವಾಗಿ ಶೇಕಡಾ 25ರಷ್ಟು ಸುಂಕ ಹೇರುವ ಅಸ್ತ್ರವನ್ನು ಪ್ರಯೋಗಿಸಿದ್ದಾರೆ ಎಂಬುದರಲ್ಲಿ ಸಂದೇಹವೇ ಇಲ್ಲ.

ಟ್ರಂಪ್ ಎಷ್ಟರಮಟ್ಟಿಗೆ ನೈತಿಕವಾಗಿ ಕುಸಿದು ಹೋಗಿದ್ದಾರೆ ಎಂದರೆ, “ಪಾಕಿಸ್ತಾನದಲ್ಲಿ ಭಾರಿ ತೈಲ ನಿಕ್ಷೇಪವನ್ನು ಅಭಿವೃದ್ಧಿಪಡಿಸಲು ಉಭಯ ದೇಶಗಳು ಒಪ್ಪಂದ ಮಾಡಿಕೊಂಡಿವೆ" ಎಂದಿದ್ದಾರೆ.

“ಯಾರಿಗೆ ಗೊತ್ತು, ಭವಿಷ್ಯದ ದಿನಗಳಲ್ಲಿ ಪಾಕಿಸ್ತಾನವು ಭಾರತಕ್ಕೆ ಕಚ್ಚಾ ತೈಲ ಮಾರಾಟ ಮಾಡಬಹುದು" ಎಂದೂ ಅಧಿಕಪ್ರಸಂಗದ ಹೇಳಿಕೆ ಕೊಟ್ಟಿದ್ದಾರೆ. ಆದರೆ ಭಾರತ ಈಗ ಐವತ್ತರ ದಶಕದ ಬಡದೇಶವಲ್ಲ. ಮೈ ಕೊಡವಿ ನಿಂತಿರುವ ಹಾಗೂ ಪ್ರಪಂಚದ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪ್ರಮುಖ ರಾಷ್ಟ್ರವಾಗಿ ಹೊರಹೊಮ್ಮಿದೆ. ಸತ್ತು ಹೋಗಿರುವುದು ಭಾರತದ ಆರ್ಥಿಕತೆಯಲ್ಲ, ಸ್ವತಃ ತಮ್ಮ ಮಿದುಳಿನಲ್ಲಿ ಇರಬೇಕಿದ್ದ ಬುದ್ಧಿ, ವಿವೇಕ ಎಂಬ ಸಂಗತಿಯನ್ನು ಟ್ರಂಪ್ ಅರಿಯಬೇಕು.

ಭಾರತ 2013-14ರಲ್ಲಿ ಜಗತ್ತಿನ 9ನೇ ದೊಡ್ಡ ಆರ್ಥಿಕತೆಯಾಗಿತ್ತು. ಆಗ ಜಿಡಿಪಿ 1.86 ಟ್ರಿಲಿಯನ್ ಡಾಲರ್ ಆಗಿತ್ತು. ಬ್ರೆಜಿಲ್ ಕೂಡ ಸಮಾನ ಸ್ಥಾನದಲ್ಲಿತ್ತು. ಜರ್ಮನಿ, ಬ್ರಿಟನ್, ಫ್ರಾನ್ಸ್, ಇಟಲಿ, ಜಪಾನ್, ಚೀನಾ, ಅಮೆರಿಕ ನಮಗಿಂತ ಮುಂದಿದ್ದವು. ಆದರೆ ಈಗ ಅಮೆರಿಕ, ಚೀನಾ, ಜರ್ಮನಿಯ ನಂತರ 4ನೇ ದೊಡ್ಡ ಆರ್ಥಿಕತೆಯಾಗಿದೆ ಭಾರತ. ಜಿಡಿಪಿ ಮೌಲ್ಯ 4 ಟ್ರಿಲಿಯನ್ ಡಾಲರ್‌ಗೆ ಏರಿಕೆ ಯಾಗಿದೆ. ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲೆ ಎತ್ತಿ ನಿಂತಿದೆ.

ಯಾವುದೇ ದೇಶ ಮುಕ್ತ ವ್ಯಾಪಾರ ಮಾಡುವುದರಿಂದ ಆರ್ಥಿಕ ಬೆಳವಣಿಗೆಯನ್ನು ಹೊಂದು ತ್ತದೆಯೇ ಹೊರತು ನಾಶವಾಗುವುದಿಲ್ಲ. ಅದಕ್ಕೆ ಭಾರತವೇ ನಿದರ್ಶನ. ತೊಂಬತ್ತರ ದಶಕದಲ್ಲಿ ಉದಾರೀಕರಣಕ್ಕೆ ತೆರೆದುಕೊಂಡ ಬಳಿಕದ ದೇಶದ ಆರ್ಥಿಕತೆಯ ಇತಿಹಾಸ ಅತ್ಯಂತ ರೋಚಕ. ಈಗ ಅಮೆರಿಕ, ಯುರೋಪ್ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳು ಭಾರತವನ್ನು ಕಡೆಗಣಿಸಿದರೆ, ಅದರ ಬಿಸಿ ಮರುಗಳಿಗೆಯಲ್ಲಿಯೇ ಅವುಗಳಿಗೂ ತಟ್ಟದೆ ಇರುವುದಿಲ್ಲ!

ಆದ್ದರಿಂದ ಟ್ರಂಪ್ ಸುಂಕಾಸ್ತ್ರದ ಮೂಲಕ ಚೌಕಾಶಿಗೆ ಇಳಿಯಬಹುದೇ ಹೊರತು ಬೇರೆ ಏನನ್ನೂ ಕಡಿದು ಗುಡ್ಡೆ ಹಾಕಲು ಸಾಧ್ಯವಿಲ್ಲ. ಅದು ಹೇಗೆ ಎನ್ನುತ್ತೀರಾ? ಮತ್ತಷ್ಟು ವಿವರಗಳನ್ನು ನೋಡೋಣ ಬನ್ನಿ!

ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವುದಕ್ಕಾಗಿ ಭಾರತದ ವಿರುದ್ಧ 24 ಪರ್ಸೆಂಟ್ ಟ್ಯಾರಿಫ್ ಜತೆಗೆ ದಂಡ ಹಾಕಲಾಗಿದೆ ಎಂದು ಟ್ರಂಪ್ ಹೇಳಿದ್ದಾರೆ. ಆದರೆ ಭಾರತಕ್ಕೆ ರಷ್ಯಾದಿಂದ ಅಗ್ಗದ ದರದಲ್ಲಿ ಕಚ್ಚಾ ತೈಲ ಸಿಕ್ಕಿದೆಯಾದರೂ, ಪರ್ಯಾಯ ಮೂಲಗಳೂ ಸಾಕಷ್ಟಿವೆ. “ಒಂದು ವೇಳೆ ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳದಿದ್ದರೂ ಭಾರತಕ್ಕೆ ಕೊರತೆ ಉಂಟಾಗದು. ‌

ದೇಶವು ಕಚ್ಚಾ ತೈಲದ ಮೂಲಗಳನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದೆ. ಭಾರತ 40 ರಾಷ್ಟ್ರ ಗಳಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವ ಸಾಮರ್ಥ್ಯ, ಸಂಪರ್ಕವನ್ನು ಹೊಂದಿದೆ" ಎಂದು ಇತ್ತೀಚೆಗೆ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ. ಭಾರತ ಸಾಂಪ್ರದಾಯಿಕವಾಗಿ ಕೊಲ್ಲಿ ರಾಷ್ಟ್ರಗಳಿಂದ ಕಚ್ಚಾ ತೈಲವನ್ನು ತರಿಸಿಕೊಳ್ಳುತ್ತಿದೆ. ರಷ್ಯಾಗೆ ಹೋಲಿಸಿದರೆ, ಮಧ್ಯ ಪ್ರಾಚ್ಯದಿಂದ ಬರುವ ತೈಲವು ದುಬಾರಿಯಾಗಬಹುದು, ಆದರೆ ಕೊರತೆ ಉಂಟಾಗದು.

2024-25ರಲ್ಲಿ ಭಾರತವು ಆಮದು ಮಾಡಿಕೊಂಡ ಒಟ್ಟು ಕಚ್ಚಾ ತೈಲದಲ್ಲಿ ರಷ್ಯಾದ ಪಾಲು ಶೇ.35ರಷ್ಟು ಇತ್ತು. ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸುವುದಕ್ಕೆ ಮೊದಲು ಭಾರತವು ತನ್ನ ಬೇಡಿಕೆಯ ಶೇ.85ರಷ್ಟು ಕಚ್ಚಾ ತೈಲವನ್ನು ಕೊಲ್ಲಿ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತಿತ್ತು. ರಷ್ಯಾದಿಂದ ಕೇವಲ 5.2 ಶತಕೋಟಿ ಡಾಲರ್ ಮೌಲ್ಯದ ತೈಲವನ್ನು ತರಿಸಿಕೊಳ್ಳುತ್ತಿತ್ತು.

2024ರ ವೇಳೆಗೆ ಮಾತ್ರ ಇದು 56 ಶತಕೋಟಿ ಡಾಲರ್‌ಗೆ ಏರಿತ್ತು. ಒಂದು ವೇಳೆ ಮತ್ತೆ ಕೊಲ್ಲಿ ರಾಷ್ಟ್ರ ಗಳನ್ನು ಅವಲಂಬಿಸಿದರೆ ಕೊರತೆಯೇನೂ ಆಗುವುದಿಲ್ಲ, ದುಬಾರಿಯಾಗುತ್ತದೆ ಅಷ್ಟೇ. ಆದರೆ ಅದನ್ನು ನಿಭಾಯಿಸುವ ಕಲೆಯೂ ಭಾರತಕ್ಕೆ ಗೊತ್ತಿದೆ. ಈಗ ಭಾರತದ ವಿಷಯದಲ್ಲಿ ಅಮೆರಿಕದ ತಾಳಕ್ಕೆ ತಲೆದೂಗುತ್ತಿರುವ ಯುರೋಪ್‌ಗೆ ಬಿಸಿ ತಟ್ಟಲಿದೆ. ಹೇಗೆ ಎನ್ನುತ್ತೀರಾ? ಉಕ್ರೇನ್-ರಷ್ಯಾ ಯುದ್ಧದ ಹಿನ್ನೆಲೆಯಲ್ಲಿ ಯುರೋಪಿನ ದೇಶಗಳು ರಷ್ಯಾಕ್ಕೆ ನಿರ್ಬಂಧವನ್ನು ವಿಧಿಸಿವೆ.

ಆದರೆ ಯುರೋಪಿಗೆ ಪೆಟ್ರೋಲ್-ಡೀಸೆಲ್-ಅನಿಲ ಇಲ್ಲದೆ ಒಂದು ದಿನವೂ ಉಳಿಗಾಲವಿಲ್ಲ. ಆದ್ದರಿಂದ ಭಾರತದಿಂದ ಭಾರಿ ಪ್ರಮಾಣದಲ್ಲಿ ತರಿಸಿಕೊಳ್ಳುತ್ತಿವೆ. ಭಾರತದಲ್ಲಿ ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ತೈಲ ಸಂಸ್ಕರಣೆ ಘಟಕ ಗುಜರಾತಿನ ಜಾಮ್ ನಗರದಲ್ಲಿ ಇದೆ. ಇನ್ನೂ ಹಲವು ಸಂಸ್ಕರಣಾ ಘಟಕಗಳಿವೆ. ಭಾರತವು ಕಚ್ಚಾ ತೈಲವನ್ನು ಉತ್ಪಾದಿಸದಿದ್ದರೂ, ರಷ್ಯಾದಿಂದ ಅಗ್ಗದ ತೈಲವನ್ನು ಆಮದು ಮಾಡಿಕೊಂಡು ಸಂಸ್ಕರಿಸಿ ರಫ್ತು ಮಾಡುತ್ತದೆ.

ಹಾಗೆ ತರಿಸಿಕೊಳ್ಳುವುದರಲ್ಲಿ ಯುರೋಪ್ ಮುಂಚೂಣಿಯಲ್ಲಿತ್ತು. ಆದರೆ ಭಾರತಕ್ಕೂ ನಿರ್ಬಂಧ ವಿಧಿಸಿದರೆ ಅದು ಚಳಿಯಲ್ಲಿ ನಡುಗಬೇಕಾಗುತ್ತದೆ ಅಥವಾ ದುಬಾರಿ ಬೆಲೆ ಕೊಟ್ಟು ತರಿಸಿಕೊಳ್ಳಬೇಕಾಗುತ್ತದೆ! ಯುರೋಪಿಗೆ ಇದು ಬೇಕಿತ್ತಾ? ಹಾಗಂತ ಭಾರತಕ್ಕೆ ಸಂಸ್ಕರಿತ ತೈಲದ ಮಾರಾಟಕ್ಕೆ ಕೊರತೆಯೇನೂ ಆಗುವುದಿಲ್ಲ. ಆಫ್ರಿಕದ ರಾಷ್ಟ್ರಗಳು ಸೇರಿದಂತೆ ಇತರ ಗ್ರಾಹಕರು ಇದ್ದಾರೆ.

ಭಾರತವು ರಷ್ಯಾದಿಂದ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುತ್ತಿದೆ ಎಂಬುದು ಟ್ರಂಪ್ ಆರೋಪ. ಭಾರತ ಕೆಲವು ಪ್ರಮುಖ ಶಸ್ತ್ರಾಸ್ತ್ರಗಳನ್ನು ತರಿಸಿಕೊಳ್ಳುತ್ತಿರಬಹುದು. ಆದರೆ ರಕ್ಷಣಾ ಕ್ಷೇತ್ರದಲ್ಲಿ ಸ್ವದೇಶಿ ಉತ್ಪಾದನೆ ಕೂಡ ಗಣನೀಯವಾಗಿ ವೃದ್ಧಿಸುತ್ತಿದ್ದು, ವಿದೇಶಿ ಅವಲಂಬನೆ ಇಳಿಕೆಯಾಗಿದೆ.

ಸ್ವತಃ ಭಾರತವೇ 23,622 ಕೋಟಿ ರುಪಾಯಿ ಮೌಲ್ಯದ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡಿದೆ. ಕೊನೆಯದಾಗಿ, ಅಮೆರಿಕದ ಶೇ.25ರಷ್ಟು ಸುಂಕಾಸ್ತ್ರವನ್ನು ಭಾರತ ಹೇಗೆ ಎದುರಿಸಲಿದೆ? ಎಂಬ ಕುತೂಹಲಕರ ಪ್ರಶ್ನೆ. ಇದೇ ಅಂತಿಮವಲ್ಲ. ಈಗಲೂ ಟ್ರಂಪ್ ಆಡಳಿತ ಮಾತುಕತೆಗೆ ತಯಾರಾಗಿದೆ. ಇನ್ನೂ ಹದಿನಾರು ಸುತ್ತಿನ ಮಾತುಕತೆಗೂ ಅವಕಾಶ ಇದೆ. ಬಳಿಕ 25 ಪರ್ಸೆಂಟ್ ಸುಂಕ ಇಳಿದರೆ ಅಚ್ಚರಿಯಿಲ್ಲ.

ಅದೇ ರೀತಿ ಭಾರತದ ಐಟಿ ಕಂಪನಿಗಳ ಮೇಲೆ ಇದು ನೇರವಾಗಿ ಪ್ರಭಾವ ಬೀರುವುದಿಲ್ಲ. ಏಕೆಂದರೆ ಇದು ವಸ್ತುಗಳು ಅಥವಾ ಸರಕುಗಳ ರಫ್ತಿಗೆ ಸಂಬಂಧಿಸಿದ್ದು. ಐಟಿ ಸೇವೆಯಾಗಿರುವುದರಿಂದ ಹೊರಗುಳಿದಿದೆ. ಭಾರತವು ಅಮೆರಿಕಕ್ಕೆ ಒಟ್ಟು 86.5 ಶತಕೋಟಿ ಡಾಲರ್ ಮೌಲ್ಯದ ರಫ್ತು ಮಾಡುತ್ತದೆ. ರುಪಾಯಿ ಲೆಕ್ಕದಲ್ಲಿ ಸುಮಾರು 7.5 ಲಕ್ಷ ಕೋಟಿ ರುಪಾಯಿಗಳು. ಅದರಲ್ಲಿ ಸ್ಮಾರ್ಟ್ಫೋನ್ ಗಳ ರಫ್ತು ಮೊದಲ ಸ್ಥಾನದಲ್ಲಿದೆ.

ಔಷಧಿಗಳು, ಕ್ಯಾನ್ಸರ್ ನಿರೋಧಕ ಔಷಧಿಗಳು, ಸಂಸ್ಕರಿತ ಪೆಟ್ರೋಲಿಯಂ ಉತ್ಪನ್ನಗಳು, ವಜ್ರ, ಜ್ಯುವೆಲ್ಲರಿ, ಸೀಗಡಿ, ಸೋಲಾರ್ ಪ್ಯಾನೆಲ್, ಆಟೊಮೊಬೈಲ್ ಬಿಡಿಭಾಗಗಳು, ಜವಳಿ ಉತ್ಪನ್ನಗಳ ರಫ್ತುಗಳಿವೆ. ಇಂದು ವಿಷಯ ಗಮನಿಸಬೇಕು. ಟ್ರಂಪ್ ಅವರು ಭಾರತ, ಚೀನಾ, ರಷ್ಯಾ, ಜಪಾನ್ ಸೇರಿದಂತೆ ಅನೇಕ ದೇಶಗಳ ವಿರುದ್ಧ ಸುಂಕಾಸ್ತ್ರ ಪ್ರಯೋಗಿಸಿದ್ದಾರೆ. ಇದರಿಂದಾಗಿ ಸದ್ಯಕ್ಕೆ ಅಮೆರಿಕದ ಬೊಕ್ಕಸಕ್ಕೆ ತೆರಿಗೆ ಹಣದ ಹೊಳೆ ಹರಿದಿದೆ. ಆದರೆ ಅದರ ಬೆನ್ನ ಅಲ್ಲಿನ ಜನರಿಗೆ ಬೆಲೆ ಏರಿಕೆಯ ಬರೆ ಬೀಳಲಿದೆ.

ಸ್ಮಾರ್ಟ್ ಫೋನ್, ಜವಳಿ, ಔಷಧಿ, ಎಂಜಿನಿಯರಿಂಗ್ ಉತ್ಪನ್ನಗಳ ದರಗಳು ಹೆಚ್ಚಲಿವೆ. ಈ ಬಿಸಿಯನ್ನು ಟ್ರಂಪ್ ಆಡಳಿತ ಎದುರಿಸಬೇಕಾಗುತ್ತದೆ. ಇದು ಟ್ರಂಪ್ ಅವರಿಗೆ ತಿಳಿಯದ ಸಂಗತಿಯೇನೂ ಅಲ್ಲ. ಆದ್ದರಿಂದ ಭಾರತದ ಜತೆಗೆ ಮಾತುಕತೆಯ ಟೇಬಲ್‌ಗೂ ಅಮೆರಿಕದ ನಿಯೋಗ ಬರಲಿರುವುದು ನಿಶ್ಚಿತ. ಅಮೆರಿಕದ ಉದ್ಯಮಗಳನ್ನು ಸಂರಕ್ಷಿಸಲು, ಬೊಕ್ಕಸಕ್ಕೆ ತೆರಿಗೆ ಆದಾಯವನ್ನು ವೃದ್ಧಿಸಲು ಹಾಗೂ ನಾನಾ ದೇಶಗಳ ವ್ಯಾಪಾರ ನೀತಿಯ ಬದಲಾವಣೆಗೆ ಒತ್ತಡ ಹೇರಲು ಆಮದು ಸುಂಕ ಅಥವಾ ಟ್ಯಾರಿಫ್‌ ಗಳನ್ನು ಹೆಚ್ಚಿಸುವುದೇ ಏಕೈಕ ದಾರಿ ಎಂದು ಟ್ರಂಪ್ ಹಿಂದಿನಿಂದಲೂ ವಾದಿಸುತ್ತಿದ್ದಾರೆ.

ಆದರೆ ಅಮೆರಿಕದ ಬೇಕಾzಲ್ಲವನ್ನೂ ಉತ್ಪಾದಿಸಲು ಸಾಧ್ಯವೇ? ಅದಕ್ಕೆ ಬೇಕಾದ ಪೂರ್ವ ಸಿದ್ಧತೆಯನ್ನು ಅಲ್ಲಿನ ಉದ್ದಿಮೆಗಳು ಮಾಡಿವೆಯೇ? ಸದ್ಯಕ್ಕೆ ಉಂಟಾಗಲಿರುವ ಬೆಲೆ ಏರಿಕೆಯನ್ನು ಜನತೆ ಭರಿಸಲಿzರೆಯೇ? ಇಂಥ ಪ್ರಶ್ನೆಗಳಿಗೆ ಟ್ರಂಪ್ ಉತ್ತರಿಸುವುದಿಲ್ಲ. ಹಾಗಾದರೆ ಭಾರತದ ರಫ್ತಿನ ಗತಿ ಏನು? ನೋಡಿ, ಭಾರತ ಕೇವಲ ಅಮೆರಿಕಕ್ಕೆ ಮಾತ್ರ ರಫ್ತು ಮಾಡುತ್ತಿಲ್ಲ.

ಸುಮಾರು 190 ದೇಶಗಳಿಗೆ 7500ಕ್ಕೂ ಹೆಚ್ಚು ವೈವಿಧ್ಯಮಯ ವಸ್ತುಗಳನ್ನು ರಫ್ತು ಮಾಡುತ್ತದೆ. ಹಲವು ದೇಶಗಳ ಜತೆಗೆ 13 ಪ್ರಾದೇಶಿಕ, ಮುಕ್ತ ವ್ಯಾಪಾರ ಒಪ್ಪಂದಗಳನ್ನು ಹೊಂದಿದೆ. ಇತ್ತೀಚೆಗೆ ಬ್ರಿಟನ್ ಜತೆ ‘ಎಫ್‌ ಟಿಎ’ ಮಾಡಿಕೊಂಡಿರುವುದು ನಮಗೆಲ್ಲ ತಿಳಿದಿದೆ. ಐರೋಪ್ಯ ಒಕ್ಕೂಟ, ಇಸ್ರೇಲ, ಒಮಾನ್ ಸೇರಿದಂತೆ ಇನ್ನೂ ಕೆಲ ದೇಶಗಳ ಜತೆಗೆ ಮುಕ್ತ ವ್ಯಾಪಾರದ ಮಾತುಕತೆ ನಡೆಯುತ್ತಿದೆ. ಆದ್ದರಿಂದ ಟ್ರಂಪ್ ಅವರಿಗೆ ಭಾರತದ ಜಾಗತಿಕ ವ್ಯಾಪಾರ, ವಾಣಿಜ್ಯ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಕನಸಿನಲ್ಲಿಯೂ ಅಸಾಧ್ಯ.