Shishir Hegde Column: ಮಾತಿನ ಟ್ರಾಫಿಕ್ ಜ್ಯಾಮ್: ಕೇಳುವವರು ಬೇಕಾಗಿದ್ದಾರೆ!
ಪ್ರತೀ ದಿನ ಲಕ್ಷಾಂತರ ಸಂಭಾಷಣೆಗಳು ಸಂಭವಿಸುತ್ತವೆ. ಅಡಿಗೆಮನೆ, ಚಾವಡಿ- ಬೆಡ್ ರೂಮಿನಲ್ಲಿ, ಶಾಲೆಯಲ್ಲಿ, ಆಫೀಸು- ಅಂಗಡಿಗಳಲ್ಲಿ, ಆಸ್ಪತ್ರೆಯಲ್ಲಿ, ರಸ್ತೆ, ಬೀದಿಗಳಲ್ಲಿ. ಶಬ್ದ- ಮಾತು ಧ್ವನಿ ಪೆಟ್ಟಿಗೆ ಯಿಂದ ಹೊರಬೀಳುತ್ತದೆ, ಧ್ವನಿ ಕಿವಿಯ ಮೇಲೆ ಬೀಳುತ್ತದೆ. ಆದರೆ ಈ ಸಂಭಾಷಣೆಗಳಲ್ಲಿ ಅದೇನೋ ಒಂದು ಅಪೂರ್ಣತೆಯ ಭಾವ.
-
ಶಿಶಿರಕಾಲ
ದಟ್ಟ ಕಾಡಿನಲ್ಲಿ ದೊಡ್ಡ ಮರವೊಂದು ಲಾಟ್‌ಲಟಾರ್ ಎಂದು ಮುರಿದು ಬೀಳುತ್ತದೆ. ಆಗ, ಆ ಶಬ್ದವನ್ನು ಕೇಳಿಸಿಕೊಳ್ಳಲು ಅಲ್ಲಿ ಯಾರೂ ಇಲ್ಲ ಎಂದಿಟ್ಟುಕೊಳ್ಳಿ. ಕೇಳಿಸಿಕೊಳ್ಳುವವರೇ ಇಲ್ಲದಿರುವಾಗ ಅಲ್ಲಿ ಶಬ್ದ ಸಂಭವಿಸುತ್ತದೆಯೇ..? ಪ್ರಶ್ನೆ ತೀರಾ ಬಾಲಿಶವೆನ್ನಿಸಿದರೂ ಒಂಚಣ ನಿಂತು ಯೋಚಿಸಿ. ಇದು ಸುಮಾರು ಮೂರ್ನಾಲ್ಕು ಶತಮಾನಗಳ ಕಾಲ ಪಾಶ್ಚಾತ್ಯ ತತ್ವಜ್ಞಾನಿಗಳ ತಲೆ ಕೆಡಿಸಿದ ಪ್ರಶ್ನೆ.
ಈ ಪ್ರಶ್ನೆಗೆ ವಿಜ್ಞಾನಿಗಳ ಉತ್ತರ ಸ್ಪಷ್ಟವಿದೆ. ಕೇಳಿಸಿಕೊಳ್ಳುವವರು ಇರಲಿ- ಬಿಡಲಿ, ಬೀಳುವ ಮರ ಶಬ್ದ ತರಂಗಗಳನ್ನು ಸೃಷ್ಟಿಸುತ್ತವೆ. ಹಾಗಾಗಿ ಅಲ್ಲಿ ಶಬ್ದವಿದೆ. ಆದರೆ ತತ್ವಜ್ಞಾನಿಗಳ ವಾದ ಹಾಗಲ್ಲ. ಮರ ಬಿದ್ದಾಗ ತರಂಗಗಳೇನೋ ಉಂಟಾಗುತ್ತವೆ ಆದರೆ ಆ ತರಂಗಗಳೇ ಶಬ್ದಗಳಲ್ಲವಲ್ಲ. ಕೇಳಿಸಿಕೊಳ್ಳುವವನೇ ಇಲ್ಲದಿದ್ದಲ್ಲಿ ಅವೆಲ್ಲವೂ ತರಂಗಗಳು ಮಾತ್ರ. ಸಹಸ್ರ ತರಂಗಗಳಲ್ಲಿ ಒಂದು, ಇವೊಂದಿಷ್ಟು. ಅವು ಶಬ್ಧವೆನಿಸುವುದು ಕೇಳುಗನ ಕಿವಿ ತಮಟೆಯ ಮೇಲೆ ಬಿದ್ದಾಗ. ಕಿವಿಯ ತಮಟೆ- ನರಮಂಡಲಗಳು ಮೊದಲು ಗ್ರಹಿಸಿದಾಗ, ಅಲ್ಲಿಂದ ಅದು ವಿದ್ಯುತ್ ಪಲ್ಸ್ʼಗಳಾಗಿ, ಅದನ್ನು ಮೆದುಳಿಗೆ ತಲುಪಿಸಿ ಅಲ್ಲಿ ಸಂಸ್ಕರಿಸಲ್ಪಟ್ಟಾಗ ಅದು ಶಬ್ದವೆನ್ನಿಸುವುದು. ಹಾಗಾಗಿ ಕೇಳುಗನಿಲ್ಲದಾಗ ಅವು ಕೇವಲ ತರಂಗಗಳು.
ನಿಜ ಹೇಳಬೇಕೆಂದರೆ ಈ ವಾದ, ಚರ್ಚೆ ಇವತ್ತಿಗೂ ಪ್ರಸ್ತುತವೇ. ಅಥವಾ ಈಗೀಗ ಈ ಪ್ರಶ್ನೆ ರೂಪಾಂತರವಾಗಿದೆ ಎಂದೆನಿಸುತ್ತದೆ. ಈಗಿರುವ ಪ್ರಶ್ನೆ- ಒಬ್ಬ ವ್ಯಕ್ತಿ ಮಾತನಾಡುತ್ತಾನೆ, ಅದನ್ನು ಇನ್ನೊಬ್ಬ ವ್ಯಕ್ತಿ ಕೇಳಿಸಿಕೊಳ್ಳದಿದ್ದರೆ, ಆಲಿಸದಿದ್ದರೆ ಅಲ್ಲಿ ಶಬ್ದ- ಸಂವಹನ ನಡೆಯುತ್ತದೆಯೇ?
ಪ್ರತೀ ದಿನ ಲಕ್ಷಾಂತರ ಸಂಭಾಷಣೆಗಳು ಸಂಭವಿಸುತ್ತವೆ. ಅಡಿಗೆಮನೆ, ಚಾವಡಿ- ಬೆಡ್ ರೂಮಿನಲ್ಲಿ, ಶಾಲೆಯಲ್ಲಿ, ಆಫೀಸು- ಅಂಗಡಿಗಳಲ್ಲಿ, ಆಸ್ಪತ್ರೆಯಲ್ಲಿ, ರಸ್ತೆ, ಬೀದಿಗಳಲ್ಲಿ. ಶಬ್ದ- ಮಾತು ಧ್ವನಿ ಪೆಟ್ಟಿಗೆ ಯಿಂದ ಹೊರಬೀಳುತ್ತದೆ, ಧ್ವನಿ ಕಿವಿಯ ಮೇಲೆ ಬೀಳುತ್ತದೆ. ಆದರೆ ಈ ಸಂಭಾಷಣೆಗಳಲ್ಲಿ ಅದೇನೋ ಒಂದು ಅಪೂರ್ಣತೆಯ ಭಾವ. ‘ಹೇಳಿದ್ದನ್ನು ಎದುರಿಗಿರುವರು ಕೇಳಿರುವುದಿಲ್ಲ’. ಶಬ್ದ ಕೇಳಿರುತ್ತದೆ- ಮಾತನ್ನು ಕೇಳುವ ಕಿವಿ ಮನಸಿಟ್ಟು ಆಲಿಸಿರುವುದಿಲ್ಲ. ಮಾತು ಬೇಕಾದ ರೀತಿಯಲ್ಲಿ ಅರ್ಥ ವಾಗಿರುವುದಿಲ್ಲ. ಮಾತು ತಲುಪದ, ಕೇಳಿಸಿಕೊಳ್ಳದ ಖಾಲೀತನದಲ್ಲಿ ಮಾತುಕತೆ ಮುಗಿದಿರುತ್ತದೆ. ಇದು ಈಗೀಗ ಹೆಚ್ಚೆಚ್ಚು ಸಾಮಾನ್ಯ.
ಇದನ್ನೂ ಓದಿ: Shishir Hegde Column: ಬ್ರೆಜಿಲ್ ನ ಕಾಡಿನಲ್ಲಿ ಲಕ್ಷ ವೀರಪ್ಪನ್ ಗಳಿದ್ದಾರೆ
ಬೆಬೆಬ್ಬೆ ಎಂದು ತೊದಲುವ ಮುದ್ದು ಮಗುವಿಗೆ ‘ಅಮ್ಮಾ..’ ಹೇಳು, ‘ಅಪ್ಪಾ’ ಹೇಳು ಎಂದು ತಂದೆ ತಾಯಿ, ಮನೆಯವರೆಲ್ಲ ಸತಾಯಿಸುತ್ತಾರೆ. ಅದೊಂದು ದಿನ ಮಗು ಮ್ಮಾ, ಪ್ಪಾ.. ಎಂದು ಹೇಳಿ ದಾಗ ಮನೆಯಲ್ಲ ಸಂಭ್ರಮ. ಬದುಕು ಸಂಭವಿಸುವುದೇ ಅಂತಹ ಕ್ಷಣ ಘಟನೆಗಳಲ್ಲಿ. ಮೊದಲ ಮಾತು, ಅಲ್ಲಿಂದ ಮುಂದೆ ಮಾತನಾಡುವುದು ಹೀಗೆಂದು ಕಲಿಯಲು ನಾವೆಲ್ಲ ಹಲವಾರು ವರ್ಷ ಗಳನ್ನೇ ವ್ಯಯಿಸುತ್ತೇವೆ.
ಶಾಲೆ ಬರೆಯುವುದು, ಓದುವುದು ಹೀಗೆಂದು ಕಲಿಸುತ್ತದೆ. ಕಾಲೇಜು ಡಿಬೇಟ್- ಚರ್ಚಿಸು ವುದು ಹೇಗೆ, ವಿಷಯ ಪ್ರಸ್ತುತಿ ಹೇಗೆ ಎಂದೆಲ್ಲ ಕಲಿಸುತ್ತದೆ. ಕಂಪನಿಗಳು ದೇಶ ವಿದೇಶಿಗಳ ನಡುವೆ ಸಂವಹಿಸುವುದು ಹೇಗೆ, ಪಬ್ಲಿಕ್ ಸ್ಪೀಕಿಂಗ್ ಬಗ್ಗೆ ವಿಶೇಷ ತಾಲೀಮನ್ನು ನೀಡುತ್ತವೆ. ರಾಜಕಾರಣಿ ಗಳು, ಇನ್ ಫ್ಲ್ಯೂಯೆನ್ಸರ್‌ಗಳು ಮಾತ್ರವಲ್ಲ ಎಲ್ಲ ವೃತ್ತಿಯಲ್ಲೂ ಒಂದು ಹಂತದ ನಂತರ ಮಾತೇ ಸರ್ವಸ್ವ.
ಆದರೆ ಒಂದು ಮಜವೇನು ಗೊತ್ತೆ? ಮಾತನ್ನು ನಾನಾರೀತಿಯಲ್ಲಿ ಆಡುವುದನ್ನು ಕಲಿಯುವ ನಮಗೆ ಕೇಳಿಸಿಕೊಳ್ಳುವುದು ಹೀಗೆಂದು ಯಾರೂ ಕಲಿಸುವುದೇ ಇಲ್ಲ. ಇದೊಂದು ಕಲಿಯುವ ವಿಷಯ ಎಂದು ನಮಗೆಂದೂ ಅನ್ನಿಸುವುದೇ ಇಲ್ಲ. ಕೇಳಿಸಿಕೊಳ್ಳುವುದು ಹೀಗೆಂದು ನಮ್ಮ ವ್ಯವಸ್ಥೆ ಯಾರಿಗೂ ಕಲಿಸುವುದಿಲ್ಲ.
ಅಷ್ಟಕ್ಕೂ, ಕೇಳುವುದು ಹೇಗೆಂದು ಯಾರು ಏಕೆ ನಮಗೆ ಕಲಿಸಬೇಕು? ಅದೊಂದು ಕಲಿತು ಮಾಡುವ ಕೆಲಸವೇ ಅಲ್ಲವಲ್ಲ! ಅಂಥದ್ದೊಂದು ಅವಶ್ಯಕತೆಯೇ ಇಲ್ಲವಲ್ಲ. ಕಿವಿಯ ಮೇಲೆ ಬಿದ್ದ ಶಬ್ದವನ್ನು ಕೇಳಿಸಿಕೊಳ್ಳುವುದು ಆಟೋಮ್ಯಾಟಿಕ್ ಅಲ್ಲವೇ? ಗಾಳಿ ಬೀಸಿದಾಗ ಎಲೆ ಅಲುಗಾಡಿ ದಷ್ಟು ಸಹಜ. ಇಂದು ಸೂಕ್ಷ ವಿದೆ. ಕೇಳಿಸಿಕೊಳ್ಳುವುದು ಕಿವಿ. ಆದರೆ ‘ಆಲಿಸುವ’ ಕ್ರಿಯೆ ಕಿವಿಯಾಚೆ ಯದು. ಅದು ಮೆದುಳು- ಮನಸ್ಸಿನದು. ಕೇಳಿಸಿಕೊಳ್ಳುವುದು ಬಯಾಲಜಿ- ಜೀವಶಾಸ್ತ್ರ. ಆದರೆ ಆಲಿಸುವುದು ಮಾತ್ರ ಐಚ್ಛಿಕ. ಇಂದಿನ ತಲೆಮಾರಿನ ದೊಡ್ಡ ಸಮಸ್ಯೆ ಇದ್ದರೆ ಅದು ಮಾತಿನದಲ್ಲ. ಮಾತನಾಡಲಿಕ್ಕೆ ಎಲ್ಲರಿಗೂ ಬರುತ್ತದೆ. ಆದರೆ ಬಹುತೇಕ ಜನರು ಕ್ರಮೇಣ ಆಲಿಸುವುದನ್ನು, ಕೇಳಿಸಿಕೊಳ್ಳುವುದನ್ನು ಈಗೀಗ ನಿಲ್ಲಿಸಿ ಬಿಟ್ಟಿದ್ದಾರೆ. ನಿಮಗೆ ಹಾಗನ್ನಿಸುವುದಿಲ್ಲವೇ?
ಸುಮ್ಮನೆ ನಿಮ್ಮದೇ ಇತ್ತೀಚಿನ ಮಾತುಕತೆಯನ್ನು ನೆನಪಿಸಿಕೊಂಡು ನೋಡಿ. ಇನ್ನೊಬ್ಬರು ಮಾತನಾಡುವಾಗ ಸರಿಯಾಗಿ ಕೇಳಿಸಿಕೊಂಡಿದ್ದೇವೆಯೇ? ಅಥವಾ ಅವರ ಮಾತು ಮುಗಿಯುವು ದರೊಳಗೆ ಅದೇನು ಹೇಳುತ್ತಾರೆಂದು ಊಹಿಸಿ, ಅಂದಾಜಿಸಿ ನಮ್ಮ ಪ್ರತಿಕ್ರಿಯೆಗೆ ತಯಾರಾಗು ತ್ತಿದ್ದೇವೆಯೇ? ಈಗೀಗ ಹೆಚ್ಚಿನ ಮಾತುಕತೆಗಳು ನಡೆಯುವ ರೀತಿಯೇ ಹೀಗಾಗಿ ಬಿಟ್ಟಿದೆ. ಸುಮ್ಮನೆ ಇಬ್ಬರ ಮಾತುಕತೆ ಕೇಳಿಸಿಕೊಳ್ಳಿ. ಒಂದು ರೀತಿ ಎರಡು ರೇಡಿಯೋ ಸ್ಟೇಷನ್ನುಗಳು ಏಕಕಾಲದಲ್ಲಿ ಪ್ರಸಾರ ಮಾಡುವ ರೀತಿಯಲ್ಲಿರುತ್ತವೆ. ಇಬ್ಬರದೂ ಪ್ರಸಾರ- ಅಲ್ಲಿ ಸ್ವೀಕರಿಸುವ ರೇಡಿಯೋ ಇಲ್ಲವೇ ಇಲ್ಲ.
ವಾಕಿ ಟಾಕಿಯಲ್ಲಿ ಮಾತು ಮುಗಿಸಿದ ಮೇಲೆ ‘ಓವರ್’ ಎಂದಾಗ ಇನ್ನೊಬ್ಬ ಮಾತನಾಡಬೇಕು. ಆಗ ಮಾತ್ರ ಸಂಹವನ ಸಾಧ್ಯ. ಆದರೆ ಇಂದು ಅದೆಷ್ಟೋ ಸಂವಹನಗಳಲ್ಲಿ ‘ಓವರ್’ ಎನ್ನುವ ಮಾತೇ ಇಲ್ಲ. ಇಬ್ಬರದೂ ಏಕಕಾಲದ ಮಾತಿನ ಪ್ರಸಾರ- ಬ್ರಾಡ್‌ಕಾಸ್ಟಿಂಗ್. ಒಬ್ಬರು ಹೇಳಿದ್ದನ್ನು ಇನ್ನೊಬ್ಬರು ಪೂರ್ಣ ಮತಿಯಿಂದ ಕೇಳಿಸಿಕೊಳ್ಳುವುದೇ ಇಲ್ಲ.
ಕೇಳುವ, ಆಲಿಸುವ ಪ್ರಕ್ರಿಯೆಯ ಬಗ್ಗೆ ಸ್ವಲ್ಪ ಯೋಚಿಸೋಣ. ನಾವು ಯಾವುದೇ ಮಾತನ್ನು ಕೇಳಿಸಿಕೊಳ್ಳುವಾಗ ಏನು ಮಾಡುತ್ತೇವೆ? ಅವರೇನನ್ನು ಹೇಳುತ್ತಾರೆ ಎಂದು ಕೇಳುವಾಗಲೇ ಈ ವಿಷಯ ಯಾವ ದಿಕ್ಕಿನಲ್ಲಿ ಹೊರಟಿದೆ ಎಂದು ಊಹಿಸಲು ಶುರುಮಾಡಿಬಿಡುತ್ತೇವೆ. ನಮಗೆ ಖಾಲಿ ತಲೆಯಿಟ್ಟು ಎದುರಿಗಿನವನ ಮಾತನ್ನು ಕೇಳಿಸಿಕೊಳ್ಳುವುದು ಬಲು ಕಷ್ಟ. ತಲೆಯ ಕೆಲಸವೇ ಅದಲ್ಲವೇ? ಮುಂದಿನದನ್ನು ನಿರಂತರ ಊಹಿಸುವುದು. ಈ ಊಹೆಗಳ ಮೇಲೆ ನಮಗೆ ಎಲ್ಲಿಲ್ಲದ ಆತ್ಮಸ್ಥೈರ್ಯ ಬೇರೆ.
ಎದುರಿನವನು ಇದನ್ನೇ ಹೇಳುತ್ತಿದ್ದಾನೆ ಎಂದು ನಿರ್ಧಾರಕ್ಕೆ ಬಂದುಬಿಡುತ್ತೇವೆ. ಅಷ್ಟೇ ಅಲ್ಲ, ಅದಕ್ಕೆ ಪ್ರತ್ಯುತ್ತರದ ತಯಾರಿ ಶುರು ಮಾಡಿಬಿಡುತ್ತೇವೆ. ಆಗಲೇ ನಾವು ಆಲಿಸುವುದನ್ನು ನಿಲ್ಲಿಸು ವುದು. ಆ ಕ್ಷಣದಲ್ಲಿಯೇ ನಾವು ಕಿವುಡರಾಗಿ ಬಿಡುವುದು. ನಮ್ಮ ತಲೆಯಂದಿಷ್ಟು ಫಿಲ್ಟರ್‌ಗಳಿವೆ. ನಮ್ಮ ನಂಬಿಕೆಗಳು, ಪೂರ್ವಾಗ್ರಹ, ಹೆದರಿಕೆ, ಅಭದ್ರತೆ ಮತ್ತು ಹಿಂದಿನ ಅನುಭವ, ಈ ಮಸೂರ ದಲ್ಲಿಯೇ ನಾವು ಎಲ್ಲವನ್ನೂ ಊಹಿಸುವುದು, ಕೇಳಿಸಿಕೊಳ್ಳುವುದು.
ಎದುರಿಗಿನವರು ‘ನನಗೆ ಸುಸ್ತಾಗಿದೆ’ ಎಂದಾಕ್ಷಣ ಅವರ ಸುಸ್ತಿನ ಅಳತೆಗಿಳಿಡುಬಿಡುತ್ತೇವೆ. ನಿನ್ನ ಕಲ್ಪನೆಯ ಸುಸ್ತು ಎಂದರೆ ಏನೂ ಅಲ್ಲ ಎಂದು ನಮ್ಮ ಮನಸ್ಸು ವಟಗುಡುತ್ತದೆ. ಅದ್ಯಾವುದೋ ದಿನ ನನಗೆಷ್ಟು ಸುಸ್ತಾಗಿತ್ತು ಗೊತ್ತಾ ಎಂದು ನಮ್ಮ ಕಥೆ ಶುರುವಾಗುತ್ತದೆ. ಕಚೇರಿಯ ಸಹವರ್ತಿ ಏನೋ ಯೋಜನೆಯನ್ನು ವಿವರಿಸಲು ಹೊರಟಲ್ಲಿ, ಹೇಳಿ ಮುಗಿಸುವುದಕ್ಕಿಂತ ಮೊದಲೇ ಅದರಲ್ಲಿರುವ ಲೋಪದೋಷ ಹುಡುಕಲು ಮುಂದಾಗಿಬಿಡುತ್ತೇವೆ.
ಶಾಲೆಯಿಂದ ವಾಪಸ್ ಬಂದ ಮಗ, ಮಗಳು ಅದೇನನ್ನೋ ಹೇಳಲು ಮುಂದಾಗುತ್ತಾರೆ, ಅವರು ಮೂರು ವಾಕ್ಯ ಮುಗಿಸಿರುವುದಿಲ್ಲ, ಅದರಲ್ಲಿ ಸರಿತಪ್ಪು ಹುಡುಕುತ್ತೇವೆ, ಪಾಠಕ್ಕಿಳಿದುಬಿಡುತ್ತೇವೆ. ಅರ್ಥ ಮಾಡಲಿಕ್ಕೆ ಕೇಳಿಸಿಕೊಳ್ಳುವುದಿಲ್ಲ. ಹೋಲಿಕೆ, ನಿರ್ಣಯ, ಎದುರಿನವರ ವಿಚಾರವನ್ನು ಮೀರುವ ವಾದ, ಅಥವಾ ನಮ್ಮ ಮುಂದಿನ ಪ್ರತಿಕ್ರಿಯೆಯ ತಯಾರಿ ಮಾಡುತ್ತಿರುತ್ತೇವೆ- ಒಟ್ಟಾರೆ ನಾವು ಕೇಳಿಸಿಕೊಳ್ಳುವುದಿಲ್ಲ.
ನಿಜವಾದ ಕೇಳಿಸಿಕೊಳ್ಳುವಿಕೆ (Deep listening) ಎಂದರೆ ನಮ್ಮ ತಲೆಯೊಳಗಿನ ಈ ಕ್ರಿಯೆ-ಪ್ರತಿಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದು. ಇದುವೇ ಕಷ್ಟದ ಕೆಲಸ. ಮಲ್ಟಿ ಟಾಸ್ಕಿಂಗ್- ಒಂದೇ ಸಮಯದಲ್ಲಿ ಒಂದಕ್ಕಿಂತ ಜಾಸ್ತಿ ಕೆಲಸ ಮಾಡುವುದು ಹೊಸ ಜಗತ್ತಿನ ಹುಚ್ಚು. ಆದರೆ ಮಲ್ಟಿಟಾಸ್ಕಿಂಗ್ ಎನ್ನುವುದೇ ದೊಡ್ಡ ಬಂಡಲ್ ಬಡಾಯಿ. ನಮಗೆಲ್ಲರಿಗೂ ಅಷ್ಟೇ- ನಮ್ಮ ಮೆದುಳಿಗೆ- ಮನಸ್ಸಿಗೆ ಏಕಕಾಲದಲ್ಲಿ ಒಂದೇ ಕೆಲಸ ಮಾತ್ರ ಸಾಧ್ಯ.
ನಮ್ಮೊಳಗಿನ ಯೋಚನೆಗಳನ್ನು ತಾತ್ಕಾಲಿಕ ನಿಲ್ಲಿಸಿದಾಗ ಮಾತ್ರ ಎದುರಿಗಿನವನ ಮಾತು ಕೇಳಿಸು ತ್ತದೆ. ಹಾಗಾಗಿಯೇ ಕೇಳಿಸಿಕೊಳ್ಳುವುದು ಅಷ್ಟು ಕಷ್ಟ. ಮಾತನಾಡಲಿಕ್ಕೆ ಆತ್ಮವಿಶ್ವಾಸ ಬೇಕು. ಕೇಳಿಸಿಕೊಳ್ಳಲಿಕ್ಕೆ ವಿನಯ, ಶಾಂತತೆ ಬೇಕು. ಮುಂದಿನ ಬಾರಿ ಮನೆಯ, ಹೋಟೆಲ್ಲಿನ ಎಂಟು ಹತ್ತು ಜನ ಒಟ್ಟಿಗೆ ಕೂತು ಊಟ ಮಾಡುವಾಗ ಸ್ವಲ್ಪ ಹೊತ್ತು ಸುಮ್ಮನಿದ್ದು ಗ್ರಹಿಸಿ. ಅಲ್ಲಿನ ಮಾತುಕತೆ ಹೇಗಾಗುತ್ತದೆ ಎಂದು ಹೊರನಿಂತು ಆಲಿಸಿ. ಹೆಚ್ಚಾಗಿ ಎಲ್ಲರೂ ಮಾತನಾಡುತ್ತಿರುತ್ತಾರೆ, ಕೆಲವೇ ಕೆಲವರು ಮಾತ್ರ ಕೇಳಿಸಿ ಕೊಳ್ಳುತ್ತಿರುತ್ತಾರೆ. ಊಟ ಮುಗಿದಾಗ ಎಲ್ಲರೂ ಮಾತನಾಡಿರುತ್ತಾರೆ, ಹತ್ತು ಜನ ಅವರವರದೇ ಮೃದಂಗ, ತಬಲಾ ಅವರವರದೇ ತಾಳದಲ್ಲಿ ಬಾರಿಸಿದಂತೆನಿಸುತ್ತದೆ. ಪ್ರತಿಯೊಬ್ಬರದೂ ಸೋಲೋ ಕಛೇರಿ.
ತಂತ್ರeನ ನಮ್ಮ ಸಂವಹನದ ರೀತಿಯನ್ನಷ್ಟೇ ಬದಲಿಸಿಲ್ಲ, ಹೊಡೆತ ಬಿದ್ದಿರುವುದು ನಮ್ಮ ಗಮನಕ್ಕೆ. ನೋಟಿಫಿಕೇಶನ್‌ಗಳು ನಮ್ಮ ಏಕಾಗ್ರತೆಯ ಮೇಲೆ ಪೈಪೋಟಿಗಿಳಿದಿವೆ. ವಿಷಯದ ಆಳಕ್ಕಿಂತ ವೇಗಕ್ಕೀಗ ಮೊದಲ ಆದ್ಯತೆ. ನನ್ನ ಲೇಖನದ ಹೆಡ್‌ಲೈನ್‌ನ ಒಂದು ಸಾಲು ನೋಡಿ ಇಡೀ ಲೇಖನ ಹೇಳುವುದಿಷ್ಟೇ ಎಂದು ಪ್ರತಿಕ್ರಿಯಿಸುವವರು ಎಷ್ಟು ಜನ ಬೇಕು!
ಹಿಂದಿನ ಎಲ್ಲ ತಲೆಮಾರುಗಳಿಗಿಂತ ಹೆಚ್ಚಿನ ಮಾಹಿತಿಯನ್ನು ಇವತ್ತು ಪ್ರತಿನಿತ್ಯ ಪಡೆಯುತ್ತಿದ್ದೇವೆ. ಆದರೆ ನಾವು ಒಳಗೆ ಹೀರಿಕೊಳ್ಳುವ ವಿಷಯ ಮಾತ್ರ ಅತ್ಯಲ್ಪ. ವಿಷಯ ತಿಳಿಯುವುದಕ್ಕೂ, ಅರಿಯುವುದಕ್ಕೂ ವ್ಯತ್ಯಾಸವಿದೆ ಎನ್ನುವುದನ್ನು ಮರೆತಿದ್ದೇವೆ.
ಟುಯ್ ಟುಯ್ ಎಂದು ರೀಲ್ಸುಗಳಂತೆ ಮಾತು ಕೂಡ ಬರುತ್ತಿರಬೇಕು. ನೀವೇ ನೋಡಿ- ನಾಲ್ಕು ಜನ ಮಾತನಾಡುವಾಗ ಎಲ್ಲರೂ ಒಮ್ಮೆಲೆ ಮೌನವಾಗುವ ಸಂದರ್ಭಗಳೆದುರಾಗುತ್ತವೆ. ಅದು ಒಂದು ಮಾತಿನ ವಿಷಯ ನೆಲೆಗಾಣುವ ಸಮಯ. ಆದರೆ ಸಾಮಾನ್ಯವಾಗಿ ಮೂರೇ ಮೂರು ಸೆಕೆಂಡಿಗೆ ಇನ್ಯಾರೋ ತಮ್ಮ ಮಾತಿನಿಂದ ನಿರ್ವಾತವನ್ನು ತುಂಬಲು ಹೊರಡುತ್ತಾನೆ. ಮಾತಿನ ನಡುವಿನ ಮೌನ ಈಗೀಗ ನಮಗೆಲ್ಲ ಸಹಿಸಲಿಕ್ಕಾಗುವುದಿಲ್ಲ. ಯಾಕದು?
ಒಬ್ಬ ಕುಶಲ ಸಂದರ್ಶನಕಾರ ಒಂದೊಳ್ಳೆ ಪ್ರಶ್ನೆ ಕೇಳಿ ಸುಮ್ಮನೆ ಕುಳಿತುಕೊಳ್ಳುತ್ತಾನೆ. ಹಾಗೆ ಸುಮ್ಮನಿzಗ ಎದುರಿಗಿನ ವ್ಯಕ್ತಿ ಯೋಚಿಸಿದ್ದಕ್ಕಿಂತ, ತಯಾರಿ ಮಾಡಿಕೊಂಡದ್ದಕ್ಕಿಂತ ಹೆಚ್ಚಿಗೆ ತೆರೆದುಕೊಳ್ಳುತ್ತಾನೆ. ಅದು ಒತ್ತಡದಿಂದಲ್ಲ. ಮಧ್ಯೆ ಬಾಯಿ ಹಾಕದೆ ಕೇಳುತ್ತ ಕುಳಿತಲ್ಲಿ ಎದುರಿಗಿನ ವ್ಯಕ್ತಿಯಂದು ಕಂ-ರ್ಟ್ ಸೃಷ್ಟಿಯಾಗುತ್ತದೆ. ಸಾಕ್ರೆಟಿಸ್, ಬುದ್ಧ ಇವರೆಲ್ಲ ಮಾತನಾಡಿದ್ದು ಕಡಿಮೆ, ಕೇಳಿದ್ದು, ಕೇಳಿಸಿಕೊಂಡದ್ದೇ ಜಾಸ್ತಿ. ಒಂದೊಳ್ಳೆ ಡಾಕ್ಟರ್, ಅತಿಯಾಗಿ ಮಾತನಾಡುವ ವೈದ್ಯ ನಿಗಿಂತ ಹೆಚ್ಚಿಗೆ ರೋಗಿಯ ಸಮಸ್ಯೆಯ ಬಗ್ಗೆ ತಿಳಿಯುತ್ತಾನೆ. ಶಿಕ್ಷಕ, ಮಕ್ಕಳನ್ನು ಕೇಳಿಸಿಕೊಂಡಾಗ ಮಾತ್ರ ಪಾಠ ಮಕ್ಕಳಿಗೆ ಅರ್ಥವಾಗುತ್ತದೆ. ಪ್ರಶ್ನೆ ಕೇಳಲೆಂದು ಎದ್ದು ನಿಂತಾಗ ಕೂರಿಸುವ ಶಿಕ್ಷಕ ಯಾವತ್ತೂ ಗೆಲ್ಲುವುದಿಲ್ಲ. ತನ್ನ ಕೆಳಗಿನವರ ಮಾತನ್ನು ಸರಿಯಾಗಿ ಕೇಳಿಸಿಕೊಳ್ಳದವನು ಅದೆಂದೂ ಉತ್ತಮ ಮ್ಯಾನೇಜರ್ ಆಗಲಾರ. ಪಾಲಕರೂ ಅಷ್ಟೇ- ಮಕ್ಕಳನ್ನು ಕೇಳಿಸಿ ಕೊಳ್ಳುವುದಿಲ್ಲ.
ಮಾತನ್ನು ಕೇಳಿಸಿಕೊಳ್ಳುವುದಕ್ಕಿಂತ ಮೊದಲೇ ಅವರ ಸಮಸ್ಯೆಯನ್ನು ಬಗೆಹರಿಸಲು ತಯಾರಾಗಿ ನಿಂತುಬಿಡುತ್ತಾರೆ. ಸ್ನೇಹ, ಪ್ರೀತಿ, ಮದುವೆ ಎಲ್ಲವೂ ಅದ್ಯಾವುದೋ ಏಕ ಘಟನೆಯಿಂದ ಸೋಲು ವುದು ಅಪರೂಪ. ಸಂಬಂಧಗಳು ಸವಕಳಿಯಾಗುವುದು ಒಬ್ಬರ ಜೊತೆ ಇನ್ನೊಬ್ಬರು ಮಾತನಾ ಡದಿದ್ದಾಗಲಲ್ಲ, ಕೇಳಿಸಿಕೊಳ್ಳದಿದ್ದಾಗ.
ಬಹುಶಃ ಕೇಳುವಿಕೆಗೆ ಇರುವ ಅತಿದೊಡ್ಡ ಅಡ್ಡಿಯೇ ಊಹೆ ಮತ್ತು ನಮ್ಮ ಊಹೆಯ ಮೇಲಿನ ಖಚಿತತೆ. ಈ ವ್ಯಕ್ತಿ ಏನು ಹೇಳಲಿದ್ದಾನೆ ಎಂಬುದು ನನಗೆ ಈಗಾಗಲೇ ಗೊತ್ತು ಎಂದು ನಾವು ನಿರ್ಧರಿಸಿದ ಕ್ಷಣದ ಕುತೂಹಲ ಸತ್ತುಹೋಗುತ್ತದೆ. ಎದುರಿನವನ ಮಾತು ಕೇಳಿಸಿಕೊಳ್ಳುವಾಗ ನಮ್ಮ ವಿಚಾರಗಳು ಒಂದು ರೀತಿಯಲ್ಲಿ ಡ್ಯಾಮ್‌ನ ಆಚೆ ಒಳನೀರು ಹರಿದುಬಂದಂತೆ. ವಿಚಾರಗಳ ಒಳಹರಿವು ಹೆಚ್ಚಿದಂತೆ ಮೂತ್ರ ಶಂಕೆಯಂತಹ ಒತ್ತಡ.
ಮಾತಿನ ಸ್ಪರ್ಧೆಗಿಳಿದೇ ಬಿಡಬೇಕು! ಆದರೆ ಪ್ರತಿಯೊಬ್ಬ ವ್ಯಕ್ತಿಯ ಮಾತಿನಲ್ಲೂ ಇತರರಿಗೆ ಕಾಣದ, ನಮಗೆ ಊಹಿಸಲಾಗದ ಒಂದು ಕಥೆಯಿರುತ್ತದೆ. ಕೆಲವೊಮ್ಮೆ ನಮ್ಮ ಊಹೆ ಸರಿಯಾಗಬಹುದು, ಆದರೆ ಹೆಚ್ಚಿನಂಶ ಅವರ ಮಾತಿನಲ್ಲಿ ನಮಗೆ ಈಗಾಗಲೇ ತಿಳಿಯದ ವಿಚಾರವಿರುತ್ತದೆ. ಅದನ್ನು ಹೇಳಿಕೊಳ್ಳಲೇಬೇಕಾದ ಅವಶ್ಯಕತೆಯಿರುತ್ತದೆ. ಯಾರೂ ಸುಮ್ಮಸುಮ್ಮನೆ ಮಾತನಾಡುವುದಿಲ್ಲ. ಅನೋ ಒಂದು ಉದ್ದೇಶವಿದ್ದೇ ಮಾತನಾಡುತ್ತಾರೆ. ಮಾಡಬೇಕಾದದ್ದು ಮಾತ್ರ ಇಷ್ಟೇ- ಸುಮ್ಮನೆ ಕೇಳಿಸಿಕೊಳ್ಳಬೇಕು.
ಮನುಷ್ಯನಿಗೆ ಊಟ, ನಿದ್ರೆ, ಪ್ರೀತಿ ಎಷ್ಟು ಬೇಕೋ, ತನ್ನ ಮಾತುಗಳು ಮತ್ತೊಬ್ಬರ ಮನಸ್ಸಿಗೆ ತಲುಪಿದೆ ಎಂಬ ಭಾವವೂ ಅಷ್ಟೇ ಬೇಕು. ಅದಕ್ಕಾಗಿಯೇ ಕೆಲವರು ತಮ್ಮ ನೋವನ್ನು ಹೇಳಿಕೊಂಡ ನಂತರ ಪರಿಹಾರ ಸಿಕ್ಕಿಲ್ಲದಿದ್ದರೂ ಹಗುರಾಗಿರುತ್ತಾರೆ. ಅವರಿಗೆ ಪರಿಹಾರ ಬೇಕಿಲ್ಲ, ನಮ್ಮ ಮಾತಿಗೊಬ್ಬ ಸಾಕ್ಷಿ ಬೇಕಿರುತ್ತದೆ. ಆಲಿಸುವಿಕೆಯ ಅರ್ಥವೇ ಅದು- ಇನ್ನೊಬ್ಬನ ಬದುಕಿಗೆ ಸಾಕ್ಷಿಯಾಗುವುದು. ಅದು ಇನ್ನೊಬ್ಬ ಮನುಷ್ಯನ ಅಸ್ತಿತ್ವಕ್ಕೆ ನಾವು ಕೊಡುವ ಗೌರವ. ನಮ್ಮ ಮಕ್ಕಳೇ ಇರಬಹುದು, ಮನೆಯ ಕೆಲಸದವರೇ ಇರಬಹುದು, ಅದೆಂತಹ ಅಗಣ್ಯರೇ ಇರಬಹುದು. ಲೆಕ್ಕಾಚಾರವಿಟ್ಟು ಕೇಳಲು ಮುಂದಾದರೆ ಮಾತಿಗಿಂತ ಮೊದಲೇ ಕುರುಡಾದಂತೆ.
ಇತ್ತೀಚೆಗೆ ಬೆಂಗಳೂರಿನ ಮಾಲ್ ಒಂದರ ಫುಡ್ ಕೋರ್ಟ್‌ನಲ್ಲಿ ತಿಂಡಿ ತಿನ್ನುತ್ತಿದ್ದೆ. ನಮ್ಮ ಟೇಬಲ್ಲಿನ ಹಿಂದೆ ಕಾಲೇಜು ಹುಡುಗ ಹುಡುಗಿ ಬಂದು ಕೂತರು. ಫುಡ್ ಟ್ರೇಯಲ್ಲಿ ನಾಲ್ಕಾರು ಚಿಕನ್ ತುಂಡುಗಳು, ಎರಡು ಕೋಕ್ ಇದ್ದವು. ಒಂದೆರಡು ನಿಮಿಷ- ಅವರಿಬ್ಬರು ಜೋಡಿ ಎನ್ನುವುದು ತಿಳಿಯಿತು. ಆಮೇಲೆ ಇಬ್ಬರೂ ಮೊಬೈಲ್ ಹಿಡಿದು ಕೂತರು. ಮುಂದಿನ ಅರ್ಧ ಗಂಟೆ ಒಂದೊಂದೇ ಪೀಸ್ ತಿನ್ನುತ್ತಿದ್ದರು, ನಡುನಡುವೆ ಕೋಕ್, ಮತ್ತು ಅವರಿಬ್ಬರ ತಲೆ ಮೊಬೈಲ್‌ನೊಳಗೆ. ಇಂತಹ ಮನುಷ್ಯ ಸಂವಹನಾ ನಮೂನೆಗಳು ಬೆಂಗಳೂರಿನ ಬಹುತೇಕ ಮಾಲ್‌ಗಳಲ್ಲಿ ಸಾಮಾನ್ಯವಾಗಿ ಕಾಣಿಸಿತು. ಇದು ಇಬ್ಬರೂ ಏಕಕಾಲದಲ್ಲಿ ಮಾತನಾಡುತ್ತ, ಒಬ್ಬರನ್ನೊಬ್ಬರು ಕೇಳಿಸಿಕೊಳ್ಳದಿರು ವಷ್ಟೆ ತೀವ್ರ ಎಂದೆನಿಸಿತು.
ಇನ್ನೊಂದು ಸೂಕ್ಷ್ಮ ಹೇಳಿ ಲೇಖನ ಮುಗಿಸುತ್ತೇನೆ. ಕೇಳಿಸಿಕೊಳ್ಳವುದೆಂದರೆ ಎದುರಿನವನಿಗೆ ಕೊಡುವ ಗೌರವ. ಯೋಚಿಸಿ ನೋಡಿ, ಅದರಷ್ಟು ದೊಡ್ಡ ಗೌರವ ಇನ್ನೊಂದಿಲ್ಲ. ಈ ‘ಗೌರವ’ದ ಒಂದು ಮಜವೇನೆಂದರೆ- ಅದನ್ನು ಇನ್ನೊಬ್ಬರಿಗೆ ಕೊಟ್ಟಾಗ ಅದು ತಪ್ಪದೇ ಪರತ್- ಮರಳಿ ಬರುತ್ತದೆ. ಯಾರಿಗೇ ನೀವು ಗೌರವ ಕೊಟ್ಟಲ್ಲಿ ಅದನ್ನು ಅವರು ಮರುಪಾವತಿಸದೇ ಇರುವುದಿಲ್ಲ. ಅದೇ ಕಾರಣಕ್ಕೆ ನಿಜವಾಗಿ ಕೇಳಿಸಿಕೊಳ್ಳುವವನು ತಕ್ಷಣ ಗುಂಪಿನಲ್ಲಿ ಗುರುತಿಸಲ್ಪಡುತ್ತಾನೆ, ಗೌರವಕ್ಕೆ ಪಾತ್ರವಾಗುತ್ತಾನೆ. ಲಾಭ ಒಂದೆರಡಲ್ಲ. ಮಾಡಬೇಕಾದದ್ದು ಇಷ್ಟೆ - ಸುಮ್ಮನೆ ಕೇಳಿಸಿಕೊಳ್ಳುವುದು.