Vishweshwar Bhat Column: ಅವಳನ್ನು ಮರೆಯಲಿ ಹ್ಯಾಂಗ?
ನವಜಾತ ಮಗುವನ್ನು ಎತ್ತಿಕೊಂಡು ನಾನು ಮೊದಲ ಬಾರಿಗೆ ಮನೆಗೆ ಕಾಲಿಟ್ಟಾಗ, ನಮ್ಮ ಹೊಸ ಮಗುವಿನ ಆರೈಕೆದಾತೆ ಚಂಪಾದೇವಿ ಪಾಸ್ವಾನ್ ನಕ್ಕಿದ್ದಳು. ‘ಈ ದೀದಿಗೆ ಹೆಚ್ಚೇನೂ ತಿಳಿದಿಲ್ಲ, ನಾನೇ ಎಲ್ಲವನ್ನೂ ಕಲಿಸಬೇಕಾಗುತ್ತದೆ’ ಎಂದು ಅವಳು ಮನಸ್ಸಿನಲ್ಲೇ ಅಂದುಕೊಂಡಿರಬೇಕು. ಅವಳ ಆಲೋಚನೆ ಸರಿಯಾಗಿತ್ತು. ನವಜಾತ ಶಿಶುವಿನ ಆರೈಕೆ ಬಗ್ಗೆ ನನಗೆ ಏನೂ ತಿಳಿದಿರಲಿಲ್ಲ. ನಂತರದ 18 ವರ್ಷಗಳಲ್ಲಿ ಅವಳು ನನ್ನ ಬೆಂಬಲವಾಗಿ ನಿಂತು, ನನ್ನ ಮಕ್ಕಳನ್ನು ಬೆಳೆಸಲು ನೆರವಾದಳು. ಕಳೆದ ವರ್ಷ ಮನಸಿಲ್ಲದ ಮನಸ್ಸಿನಿಂದ ಅವಳನ್ನು ಕಳುಹಿಸಿಕೊಡಲು ನಾನು ಒಪ್ಪಿಕೊಂಡಿದ್ದೆ
-
ಸಂಪಾದಕರ ಸದ್ಯಶೋಧನೆ
ನಿನ್ನೆಯ ದಿಲ್ಲಿ ‘ಇಂಡಿಯನ್ ಎಕ್ಸ್ ಪ್ರೆಸ್’ ಪತ್ರಿಕೆಯಲ್ಲಿ ಅಪರ್ಣ ಪಿರಾಮಲ್ ರಾಜೇ ಎಂಬುವವರು ಬರೆದ ಒಂದು ಬರಹ ಆಪ್ತವಾಗಿ ಕಾಡಿತು. ಅದನ್ನು ಯಥಾವತ್ತಾಗಿ ಅಪರ್ಣ ಅವರ ಮಾತಿನಲ್ಲೇ ಕಟ್ಟಿಕೊಡುತ್ತೇನೆ. ನವಜಾತ ಮಗುವನ್ನು ಎತ್ತಿಕೊಂಡು ನಾನು ಮೊದಲ ಬಾರಿಗೆ ಮನೆಗೆ ಕಾಲಿಟ್ಟಾಗ, ನಮ್ಮ ಹೊಸ ಮಗುವಿನ ಆರೈಕೆದಾತೆ ಚಂಪಾದೇವಿ ಪಾಸ್ವಾನ್ ನಕ್ಕಿದ್ದಳು. ‘ಈ ದೀದಿಗೆ ಹೆಚ್ಚೇನೂ ತಿಳಿದಿಲ್ಲ, ನಾನೇ ಎಲ್ಲವನ್ನೂ ಕಲಿಸಬೇಕಾಗುತ್ತದೆ’ ಎಂದು ಅವಳು ಮನಸ್ಸಿನಲ್ಲೇ ಅಂದುಕೊಂಡಿರಬೇಕು. ಅವಳ ಆಲೋಚನೆ ಸರಿಯಾಗಿತ್ತು.
ನವಜಾತ ಶಿಶುವಿನ ಆರೈಕೆ ಬಗ್ಗೆ ನನಗೆ ಏನೂ ತಿಳಿದಿರಲಿಲ್ಲ. ನಂತರದ 18 ವರ್ಷಗಳಲ್ಲಿ ಅವಳು ನನ್ನ ಬೆಂಬಲವಾಗಿ ನಿಂತು, ನನ್ನ ಮಕ್ಕಳನ್ನು ಬೆಳೆಸಲು ನೆರವಾದಳು. ಕಳೆದ ವರ್ಷ ಮನಸಿಲ್ಲದ ಮನಸ್ಸಿನಿಂದ ಅವಳನ್ನು ಕಳುಹಿಸಿಕೊಡಲು ನಾನು ಒಪ್ಪಿಕೊಂಡಿದ್ದೆ. ಕೆಲವು ದಿನಗಳ ಹಿಂದೆ ಅವಳು ಹಠಾತ್ ನಿಧನಳಾದ ಸುದ್ದಿ ಬಂತು. ತನ್ನ ಪತಿ, ಮಕ್ಕಳು ಮತ್ತು ಮೊಮ್ಮಕ್ಕಳೊಂದಿಗೆ ವಾಸಿಸುತ್ತಿದ್ದ ಹೌರಾದಲ್ಲಿ, ದಿನಸಿ ಖರೀದಿಸಲು ಹೊರಟಿದ್ದಾಗ ಅವಳು ಕುಸಿದು ಬಿದ್ದಳು. ಅವಳಿಗೆ ಸುಮಾರು 60 ವರ್ಷ ವಯಸ್ಸಾಗಿತ್ತು. ಚಂಪಾದೇವಿ ನನ್ನ ಮಕ್ಕಳಿಗೆ ಕೇವಲ ಆಯಾ ಆಗಿರಲಿಲ್ಲ.
ಅವಳು ನನ್ನ ಗೆಳೆತಿ, ಸಹೋದರಿ ಮತ್ತು ಬೆಂಬಲಿಗಳಾಗಿದ್ದಳು. ನಾನು ಸಹ ಅವಳ ಮಗಳು, ಸ್ನೇಹಿತೆ, ದೀದಿ ಮತ್ತು ಮೇಡಮ್ ಆಗಿದ್ದೆ. ಅವಳು ಇಲ್ಲದಿದ್ದರೆ ನಾನು ನನ್ನ ಮಕ್ಕಳಾದ ಅಮಾರ್ತ್ಯ ಮತ್ತು ಅಗಸ್ತ್ಯನನ್ನು ಬೆಳೆಸಲು ಹಾಗೂ ಇಂದಿನ ನಾನಾಗಲು ಸಾಧ್ಯವಾಗುತ್ತಿರಲಿಲ್ಲ. ಅಮಾರ್ತ್ಯ ನಿಗೆ ಅವಳು ಅತ್ಯಂತ ಪ್ರೀತಿಯ ಅಜ್ಜಿಯಾಗಿದ್ದಳು. ಆಟ ಆಡಿಸುತ್ತಾ, ಅನಾರೋಗ್ಯದ ಸಮಯದಲ್ಲಿ ಹಾಡು ಹಾಡಿ ಖುಷಿಪಡಿಸುತ್ತಿದ್ದಳು.
ಇದನ್ನೂ ಓದಿ:Vishweshwar Bhat Column: ಇದು 'ನಾನು ಬಾಲ್ಡ್' ಎಂದು ಬೋಲ್ಡ್ ಆಗಿ ಹೇಳುವವರ ಕಾಲ!
ಚಂಪಾದೇವಿ ಸಾವು ನನ್ನನ್ನು ತೀವ್ರವಾಗಿ ಕಂಗಾಲುಗೊಳಿಸಿತು. ಕಣ್ಣೀರು ಆರಿದ ಮೇಲೆ, ನನ್ನಲ್ಲಿ ಒಂದು ಪ್ರಶ್ನೆ ಮೂಡಿತು - ಚಂಪಾದೇವಿ ಅಗಲಿಕೆಯನ್ನು ನಾನು ಹೇಗೆ ಭರಿಸಲಿ? ಅವಳ ಪ್ರೀತಿ, ಶ್ರಮ ಮತ್ತು ಜೀವನಪೂರ್ತಿ ನೀಡಿದ ಆರೈಕೆಯನ್ನು ಗೌರವಿಸಲು ಸೂಕ್ತ ಮಾರ್ಗ ಯಾವುದು? ತನ್ನ ಇಡೀ ಜೀವನವನ್ನು ಬೇರೆಯವರ ಕುಟುಂಬಗಳ ಆರೈಕೆಯಲ್ಲೇ ಕಳೆದ ಚಂಪಾದೇವಿಯಂಥ ಸೇವಕಿಯರು ದೊಡ್ಡ ಪ್ರಾರ್ಥನಾ ಸಭೆಗಳಲ್ಲೋ ಅಥವಾ ಶ್ರದ್ಧಾಂಜಲಿ ಬರಹಗಳಲ್ಲೋ ನೆನಪಾಗುವುದಿಲ್ಲ. ಅವಳ ಕೆಲಸ ಹೆಚ್ಚಾಗಿ ಕಣ್ಣಿಗೆ ಕಾಣಿಸದೇ ಹೋಗುತ್ತದೆ.
ನಾವು ಅವಳನ್ನು ನಮ್ಮ ಕುಟುಂಬದವರಂತೆ ಭಾವಿಸುತ್ತೇವೆ, ಆದರೆ ಅವಳು ತೀರಿದಾಗ ಕುಟುಂಬ ದವರಂತೆಯೇ ಗೌರವಿಸುತ್ತೇವಾ? ಚಂಪಾದೇವಿಯಂಥ ಮಹಿಳೆಯರ ದೈನಂದಿನ ಶ್ರಮವನ್ನು ಯಾರು ನೆನಪಿನಲ್ಲಿಡುತ್ತಾರೆ? ಇತರರ ಜೀವನಕ್ಕೆ ಆಸರೆಯಾಗುವ ಅವರ ಅಡುಗೆ, ಸ್ವಚ್ಛತೆ ಮತ್ತು ಸಾಂತ್ವನಗಳನ್ನು ಯಾರು ದಾಖಲಿಸುತ್ತಾರೆ? ನಾವು ವೀಡಿಯೊ ಕಾಲ್ ಮೂಲಕ ಅವಳ ಅಂತಿಮ ದರ್ಶನ ಪಡೆದೆವು. ಶೀಘ್ರದಲ್ಲೇ ಅವಳಿಗಾಗಿ ಪೂಜೆ ಏರ್ಪಡಿಸುತ್ತೇವೆ ಮತ್ತು ಅವಳ ಕುಟುಂಬಕ್ಕೆ ಆರ್ಥಿಕ ಬೆಂಬಲ ಮುಂದುವರಿಸುತ್ತೇವೆ. ನಮ್ಮ ಕುಟುಂಬದ ಫೋಟೋಗಳ ಜತೆಗೆ ಅವಳ ಫೋಟೋ ಈಗಾಗಲೇ ಇದೆ. ಆದರೆ, ಈ ಆಚರಣೆಗಳನ್ನೂ ಮೀರಿದ ಅವಳ ಪಾತ್ರ ನಮ್ಮ ಜೀವನದಲ್ಲಿತ್ತು.
ಕಳೆದ ವರ್ಷ ಅವಳು ನಮ್ಮನ್ನು ಅಗಲಿದಾಗ, ಅವಳೊಂದಿಗಿನ ನೆನಪುಗಳ ಫೋಟೋ ಆಲ್ಬಂ ಮತ್ತು ಪತ್ರಗಳನ್ನು ನೀಡಿದ್ದೆ. ಅವಳ ಅಗಲಿಕೆಯ ಸುದ್ದಿ ತಿಳಿದ ನಂತರ, ಆ ನೆನಪುಗಳನ್ನು ನಿಕಟವರ್ತಿ ಗಳೊಂದಿಗೆ ಹಂಚಿಕೊಂಡಾಗ, ಅನೇಕರು ಚಂಪಾದೇವಿ ತಮ್ಮ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳು ತ್ತಿದ್ದ ಕ್ಷಣಗಳನ್ನು ನೆನಪಿಸಿಕೊಂಡರು. ನಂತರ, ಈ ನೆನಪುಗಳನ್ನು ಕಲೆಯಾಗಿ ರೂಪಿಸುವ ಸಾವಿಯಾ ಲೋಪ್ಸ್ ಎಂಬ ಯುವ ಕಲಾವಿದೆಯ ಪರಿಚಯವಾಯಿತು.
ಅವರ ಒಂದು ವರ್ಣಚಿತ್ರದಲ್ಲಿ ಮೂರು ಮಹಿಳೆಯರು ಅಡುಗೆಮನೆಯ ಮೇಜಿನ ಬಳಿ ಕುಳಿತಿರುವ ದೃಶ್ಯವಿದೆ. ಅದು ನನಗೆ ಚಂಪಾದೇವಿಯನ್ನು ನೆನಪಿಸಿತು. ಅವಳು ತಾಯ್ತನದ ಆರಂಭಿಕ ದಿನಗಳಲ್ಲಿ ನನಗೆ ಮಾರ್ಗದರ್ಶನ ನೀಡಿ, ನಾನು ಉದ್ಯೋಗಸ್ಥ ತಾಯಿಯಾಗಿ ಹೊರ ಜಗತ್ತಿನಲ್ಲಿ ಬೆಳೆಯಲು ಆಸರೆಯಾಗಿದ್ದಳು. ನಾನು ಸಾಧಿಸಿದ ಯಶಸ್ಸಿನ ಹಿಂದೆ, ಕಣ್ಣಿಗೆ ಕಾಣಿಸದ ಅವಳ ಅಪಾರ ಶ್ರಮವಿತ್ತು. ಆ ಚಿತ್ರವು ನನಗೆ ಈ ಶ್ರಮ ಕೇವಲ ನನ್ನದೊಂದೇ ಅಲ್ಲ ಎಂಬುದನ್ನು ನೆನಪಿಸುತ್ತದೆ. ನನ್ನ ಮಕ್ಕಳು ಮತ್ತು ನಾನು ಇಂದಿನ ಹಂತಕ್ಕೆ ತಲುಪಲು ಆ ಪ್ರೀತಿಯ, ಗಟ್ಟಿಯಾದ ಧ್ವನಿಯ ಮಹಿಳೆಯೇ ಕಾರಣ.