ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vinayaka M Bhat Column: ಸಂಗೀತ, ಸಾಹೋದರ್ಯದ ಅನನ್ಯ ಜುಗಲಬಂದಿ

ಒಮ್ಮೆ ಬೆಂಗಳೂರಿನಲ್ಲಿ ಪಂಡಿತ್ ವಿನಾಯಕ ತೊರವಿಯವರು ಹಾಗೂ ಪಂಡಿತ್ ಪರಮೇಶ್ವರ ಹೆಗಡೆ ಯವರ ಹಿಂದುಸ್ತಾನಿ ರಾಗ ಸಂಗೀತದ ಜುಗಲ್ಬಂದಿ ಕಾರ್ಯಕ್ರಮ ಇತ್ತು. ಕಾರ್ಯಕ್ರಮದ ಪ್ರಾರಂಭಕ್ಕೆ ಕಲಾವಿದರು ಇಂದು ನಮ್ಮದು ಜುಗಲ್ಬಂದಿ ಆಗುತ್ತೋ ಇಲ್ವೋ ಗೊತ್ತಿಲ್ಲ, ಆದರೆ ಜಗಳಬಂದಿಯಂತೂ ಆಗಲ್ಲ ಎನ್ನುವ ಭರವಸೆ ಕೊಡುತ್ತೇವೆ ಎಂದಿದ್ದರು. ಒಂದೇ ಘರಾನಾದವ ರಾಗಿದ್ದ ಈರ್ವರೂ ಅಂದು ದರ್ಬಾರಿ ರಾಗವನ್ನು ಅತ್ಯಂತ ಹೊಂದಾಣಿಕೆಯಿಂದ ಅದ್ಭುತವಾಗಿ ಪ್ರಸ್ತುತಪಡಿಸಿದ್ದರು.

ಸಂಗೀತ, ಸಾಹೋದರ್ಯದ ಅನನ್ಯ ಜುಗಲಬಂದಿ

-

ವಿದ್ಯಮಾನ

ಮೊಘಲ್ ಚಕ್ರವರ್ತಿಗಳ ದರ್ಬಾರಿನಲ್ಲಿ ಅಲ್ಲಲ್ಲಿ ನಡೆದದ್ದು ಹೊರತುಪಡಿಸಿದರೆ, ಪಾರಂಪರಿಕ ಶಾಸ್ತ್ರೀಯ ಸಂಗೀತದಲ್ಲಿ ಅದರಲ್ಲೂ ಹಾಡುಗಾರಿಕೆಯಲ್ಲಿ ವಾಸ್ತವವಾಗಿ ಜುಗಲಬಂದಿ ಎನ್ನುವ ಪರಿಕಲ್ಪನೆ ಮೊದಲಿನಿಂದ ಬಂದದ್ದಲ್ಲ, ಪ್ರಾಯಶಃ ಕಳೆದ ಕೆಲವು ದಶಕಗಳಿಂದೀಚೆಗೆ ನಾವು ಜುಗಲಬಂದಿ ಎನ್ನುವುದನ್ನು ನೋಡುತ್ತಿದ್ದೇವೆ. ಸಂಗೀತ ಕಛೇರಿಗಳನ್ನು ಜನಾಕರ್ಷಣೀಯ ಗೊಳಿಸುವ ಉದ್ದೇಶದಿಂದ ಇತ್ತೀಚೆಗೆ ಇಂಥಾ ಹರ್ಕತ್ತುಗಳನ್ನು ಮಾಡಲಾಗುತ್ತದೆ.

ನಮ್ಮ ಯಕ್ಷಗಾನದಲ್ಲಿಯೂ ಈ ಪರಿಪಾಠ ಕಳೆದ ಕೆಲವು ದಶಕಗಳಿಂದೀಚೆಗೆ, ಬಹುತೇಕ ಕಾಳಿಂಗ ನಾವುಡರ ಕಾಲದಿಂದ ಹೆಚ್ಚು ಪ್ರಚಲಿತಕ್ಕೆ ಬಂದಿರಬಹುದು ಅನಿಸುತ್ತದೆ. ಯಕ್ಷಗಾನದಲ್ಲಿ ಜುಗಲ್ಬಂದಿ ಎನ್ನುವ ಬದಲಿಗೆ ದ್ವಂದ್ವ ಭಾಗವತಿಕೆಯೆನ್ನುತ್ತಾರೆ ಅಷ್ಟೇ. ಈಗ ವಾದ್ಯಗಳ ಜುಗಲಬಂದಿಯಾಗುತ್ತದೆ, ವಾದ್ಯ ಹಾಗೂ ಗಾಯನದ ಜುಗಲಬಂದಿಯಾಗುತ್ತದೆ, ಉತ್ತರಾದಿ ಹಾಗೂ ದಕ್ಷಿಣಾದಿ ಸಂಗೀತದ ಜುಗಲಬಂದಿಯಾಗುತ್ತದೆ, ಅಷ್ಟೇ ಏಕೆ ಪಾಶ್ಚಾತ್ಯ ಸಂಗೀತ ಹಾಗೂ ಭಾರತೀಯ ಸಂಗೀತದ ದ್ವಂದ್ವವಾಗುವುದೂ ಇದೆ.

ಒಮ್ಮೆ ಬೆಂಗಳೂರಿನಲ್ಲಿ ಪಂಡಿತ್ ವಿನಾಯಕ ತೊರವಿಯವರು ಹಾಗೂ ಪಂಡಿತ್ ಪರಮೇಶ್ವರ ಹೆಗಡೆ ಯವರ ಹಿಂದುಸ್ತಾನಿ ರಾಗ ಸಂಗೀತದ ಜುಗಲ್ಬಂದಿ ಕಾರ್ಯಕ್ರಮ ಇತ್ತು. ಕಾರ್ಯಕ್ರಮದ ಪ್ರಾರಂಭಕ್ಕೆ ಕಲಾವಿದರು ಇಂದು ನಮ್ಮದು ಜುಗಲ್ಬಂದಿ ಆಗುತ್ತೋ ಇಲ್ವೋ ಗೊತ್ತಿಲ್ಲ, ಆದರೆ ಜಗಳಬಂದಿಯಂತೂ ಆಗಲ್ಲ ಎನ್ನುವ ಭರವಸೆ ಕೊಡುತ್ತೇವೆ ಎಂದಿದ್ದರು. ಒಂದೇ ಘರಾನಾದವ ರಾಗಿದ್ದ ಈರ್ವರೂ ಅಂದು ದರ್ಬಾರಿ ರಾಗವನ್ನು ಅತ್ಯಂತ ಹೊಂದಾಣಿಕೆಯಿಂದ ಅದ್ಭುತವಾಗಿ ಪ್ರಸ್ತುತಪಡಿಸಿದ್ದರು.

ಇದನ್ನೂ ಓದಿ: Vinayaka M Bhat Column: ಒಬ್ಬ ತುಕಾರಾಮನಿಗೆ ಇಷ್ಟೆಲ್ಲ ಸಾಧ್ಯವಾದರೆ…

ಸಾಮಾನ್ಯವಾಗಿ ಪರಸ್ಪರರ ಹೆಚ್ಚುಗಾರಿಕೆಯನ್ನು ತೋರಿಸಲು ಹೋಗಿ ಜುಗಲಬಂದಿ ಎನ್ನುವುದು ಜಗಳಬಂದಿಯೇ ಆಗಿಬಿಡುತ್ತದೆ. ಉದಾಹರಣೆಯಾಗಿ ಹೇಳುವುದಾದರೆ ಬೆಂಗಳೂರಿನಲ್ಲಿ ಒಮ್ಮೆ ಕರ್ನಾಟಕ ಸಂಗೀತ ವಿದ್ವಾನ್ ಆರ್. ಕೆ.ಪದ್ಮನಾಭ ಅವರ ಜೊತೆಗೆ ಹಿಂದುಸ್ತಾನೀ ಸಂಗೀತ ವಿದುಷಿ ಶ್ರೀಮತಿ ಸಂಗೀತಾ ಕಟ್ಟಿಯವರ ಜುಗಲಬಂದಿ ಕಾರ್ಯಕ್ರಮವಿತ್ತು, ಅಂದು ಪದ್ಮನಾಭರವರು ಹಿಂದೋಳ ರಾಗವನ್ನು ಹಿಂಡಿಹಿಂಡಿ ರಸ ತೆಗೆದರೇನೋ ಸರಿ, ಆದರೆ ಸಹಗಾಯಕಿ ಸಂಗೀತಾ ಕಟ್ಟಿಯವರಿಗೆ ಕಾರ್ಯಕ್ರಮದುದ್ದಕ್ಕೂ ಬಾಯಿ ಬಿಡಲು ಸಹ ಅವಕಾಶ ನೀಡಿರಲಿಲ್ಲ, ಆ ಪ್ರಮಾಣದಲ್ಲಿ ಪದ್ಮನಾಭರವರು ಕಛೇರಿಯನ್ನು ಡಾಮಿನೇಟ್ ಮಾಡಿಬಿಟ್ಟಿದ್ದರು. ಪದ್ಮನಾಭನ್ ಅವರು ಚೆನ್ನಾಗಿ ಹಾಡಲಿಲ್ಲ ಅಂತಲ್ಲ, ಜುಗಲಬಂದಿ ಕಾರ್ಯಕ್ರಮವಾಗಿರುವುದರಿಂದ ಇನ್ನೊಂದು ಸಂಪ್ರದಾಯದಿಂದ ಬಂದ ಸಮರ್ಥ ಸಹಕಲಾವಿದಳಿಗೆ ಹಾಡಲು ಅನುವು ಮಾಡಿ ಕೊಡಬೇಕಾಗಿತ್ತು ಎನ್ನುವುದು ಪ್ರೇಕ್ಷಕರ ಅಭಿಪ್ರಾಯವಾಗಿತ್ತು.

ಇನ್ನು ಮನೋಧರ್ಮಗಳು ಸೇರಿದರೆ ನಿಜವಾದ ಜುಗಲಬಂದಿಯಾದೀತು, ಸಾಧ್ಯವಿಲ್ಲ ಅಂತಲ್ಲ. ಕರ್ನಾಟಕ ಸಂಗೀತದ ದಿಗ್ಗಜ ಪಂ. ಬಾಲಮುರಳಿಕೃಷ್ಣ ಮತ್ತು ಹಿಂದೂಸ್ಥಾನಿ ಸಂಗೀತ ಲೋಕದ ಧ್ರುವ ತಾರೆ ಪಂ. ಭೀಮಸೇನ್ ಜೋಶಿಯವರ ಜುಗಲಬಂದಿಯನ್ನು ಮಾದರಿಯಾಗಿ ಹೇಳಬಹುದು. ಇಬ್ಬರೂ ತಮ್ಮ ತಮ್ಮ ಶೈಲಿಯ ಸಂಗೀತದಲ್ಲಿ ಮೂರ್ಧನ್ಯ ಸ್ಥಾನದಲ್ಲಿದ್ದವರು, ಇದು ಕೇವಲ ಇಬ್ಬರು ಕಲಾವಿದರ ಜುಗಲಬಂದಿಯಾಗಿರಲಿಲ್ಲ, ಎರಡು ಶೈಲಿಯ ಸಂಗೀತದ ಜುಗಲಬಂದಿಯೂ ಆಗಿತ್ತು, ಹಾಗಾಗಿ ಹೊಂದಾಣಿಕೆಯಾಗುವುದು ಕಷ್ಟ ಎನ್ನುವುದೇ ಪ್ರೇಕ್ಷಕರ ಅಭಿಪ್ರಾಯವಾಗಿತ್ತು.

ಇಂಥಾ ಸಂದರ್ಭಗಳಲ್ಲಿ, ಪ್ರದರ್ಶನ ಸ್ಪರ್ಧೆಯಾಗಿಬಿಡುವ ಸಂಭವವೇ ಹೆಚ್ಚು, ವಾಸ್ತವಿಕವಾಗಿ, ಇಲ್ಲಿ ಯಾರು ಹೆಚ್ಚು ಯಾರು ಕಡಿಮೆ ಎನ್ನುವುದಲ್ಲ, ಇಬ್ಬರೂ ಹೊಂದಿಕೊಂಡು ಸಾಗಿ ಪ್ರೇಕ್ಷಕರ ಮನಮುಟ್ಟಿ ಸಂಗೀತವನ್ನು ಗೆಲ್ಲಿಸುವುದು ಹೇಗೆ ಎನ್ನುವುದರ ಮೇಲೆ ಜುಗಲಬಂದಿಗಳ ಜೀವ ನಿಂತಿರುವುದು.

71 ok

ಒಂದು ಕಡೆ ಬಾಲಮುರಳಿಯವರು ಜೋಶಿಯವರಿಗೆ ಕರ್ನಾಟಕ ಸಂಗೀತದ ಕೀರ್ತನೆಗಳ ಪಾಠ ಮಾಡುತ್ತಿರುವಂತೆ ಭಾಸವಾಗುತ್ತಿದ್ದರೆ, ಇನ್ನೊಂದು ಕಡೆ ಹಿಂದೂಸ್ತಾನೀ ಸಂಗೀತದ ‘ಬಂದಿಶ್’ ಗಳನ್ನು ಬಾಲಮುರಳಿಯವರು ಜೋಶಿಯವರಿಂದ ಕಲಿಯುವ ಪ್ರಯತ್ನ ಮಾಡಿದಂತೆ ತೋರುತ್ತಿ ತ್ತು. ಅಲ್ಲಿ ಅಹಂಕಾರವಿರಲಿಲ್ಲ, ಮೇಲು ಕೆಳಗಿನ ಸ್ಪರ್ಧೆಯಿರಲಿಲ್ಲ, ಪರಸ್ಪರರಲ್ಲಿ ಅತ್ಯಂತ ಪ್ರೀತ್ಯಾದರ ಇತ್ತು, ಎರಡೂ ಸಂಗೀತ ಪ್ರಕಾರಗಳ ಕುರಿತೂ ಈರ್ವರಿಗೂ ಗೌರವವಿತ್ತು. ಬಾಲಮುರಳಿಕೃಷ್ಣ ಅವರ ಒತ್ತಾಯಕ್ಕಾಗಿಯೇ ಪಂ. ಭೀಮಸೇನ್ ಜೋಶಿಯವರು ಕನ್ನಡದ ಸಂಧ್ಯಾರಾಗ ಚಲನ ಚಿತ್ರಕ್ಕೆ ‘ನಂಬಿದೆ ನಿನ್ನ ನಾದ ದೇವತೆಯೇ’ ಎನ್ನುವ ಹಾಡನ್ನು ಹಾಡಿದ್ದರು ಎನ್ನುವುದನ್ನೂ ಇಲ್ಲಿ ಸ್ಮರಿಸಬಹುದು.

ಹಾಗೆ, ಈ ಕಾರ್ಯಕ್ರಮ ಉತ್ತಮ ಜುಗಲಬಂದಿಗೆ ಮಾದರಿಯಾಗಿತ್ತು. ಇಬ್ಬರೂ ಕಲಾವಿದರ ಗಾಯನದ ಜುಗಲಬಂದಿ ಎನ್ನುವುದು ಅತ್ಯಂತ ಕಠಿಣವಾದ ಕೆಲಸ. ಬ್ಯಾಡ್ಮಿಂಟನ್, ಟೆನಿಸ್ ಡಬಲ್ಸ್ ಆಡಿದಾಂಗೆ ಅದು. ಇಬ್ಬರೂ ಗಾಯಕರ ಮನೋಧರ್ಮ ಹೊಂದಾಣಿಕೆಯಾಗದಿದ್ದರೆ ಅಂದಿನ ಕಛೇರಿ ಎನ್ನುವುದು ಪ್ರೇಕ್ಷಕನಿಗೆ ಶಿಕ್ಷೆಯಾಗಿ ಬಿಡುತ್ತದೆ. ಹಾಗಾಗಿ ಭೀಮಸೇನ್ ಜೋಶಿಯವರಂಥಾ ಮಹಾನ್ ಗಾಯಕರು ಜುಗಲಬಂದಿಯಲ್ಲಿ ಭಾಗವಹಿಸಿದ್ದು ತುಂಬಾ ವಿರಳವೇ ಆಗಿತ್ತು.

ಅಪರೂಪಕ್ಕೊಮ್ಮೆ ಜುಗಲಬಂದಿಯಲ್ಲಿ ಪಾಲ್ಗೊಳ್ಳುವ ಕಲಾವಿದರ ಕಥೆ ವ್ಯಥೆ ಇಂತಾದ ಮೇಲೆ, ಆರು ದಶಕಗಳ ಕಾಲ ನಿತ್ಯವೂ ಜುಗಲಬಂದಿಯ ಸಂಗೀತ ರಸಿಕರ ಮನಗೆದ್ದಿದ್ದ ಅತ್ಯಪರೂಪದ ಕಲಾವಿದರಾದ ಪಂ.ರಾಜನ್ ಮತ್ತು ಸಾಜನ್ ಮಿಶ್ರಾ ಅವರ ಕಥೆ ಏನಾಗಿರಬೇಕು? ಆದರೆ ಪಂ.ರಾಜನ್ ಹಾಗೂ ಸಾಜನ್ ಮಿಶ್ರಾ ಅವರ ಕಛೇರಿ ಸದಾ ಪ್ರೇಕ್ಷಕರಿಗೆ ಹಬ್ಬದೂಟವೇ ಆಗಿರುತ್ತಿತ್ತು.

ಕಾರಣ ಅವರ ಗಾಯನದಲ್ಲಿ ಅಂಥಾ ಅದ್ಭುತ ಸಾಮರಸ್ಯವಿರುತ್ತಿತ್ತು. ಗಾಯಕನಾದವನಿಗೆ ರಾಗವಿಸ್ತಾರದ ಪಯಣದಲ್ಲಿ ಒಬ್ಬಂಟಿಯಾಗಿ ನಡೆವಾಗ ಅನುಕೂಲಗಳು ಹೆಚ್ಚು, ಸರಕಾರದಲ್ಲಿ ಉಪಮುಖ್ಯಮಂತ್ರಿಗಳು ಮುಖ್ಯಮಂತ್ರಿಗೆ ಹೇಗೆ ಕಾಲ್ತೊಡರಾಗುತ್ತಾರೋ ಹಾಗೆ, ಗಾಯನದಲ್ಲಿ ಇಬ್ಬರಿದ್ದರೆ ಒಬ್ಬರಿಗೊಬ್ಬರು ಒಂದು ರೀತಿಯ ತೊಡರಿನಂತಾಗಿಬಿಡುತ್ತದೆ.

ಗಾಯಕನಿಗೆ ತನ್ನ ಪ್ರತಿಭೆಯನ್ನೆಲ್ಲ ತನಗೆ ಹೇಗೇ ಬೇಕೋ ಹಾಗೆ ಅನಾವರಣ ಮಾಡಲು ಸಾಧ್ಯ ವಾಗುವುದಿಲ್ಲ. ಆದರೆ ಈ ಮಿಶ್ರಾ ಸಹೋದರರು ಸಂಗೀತದಲ್ಲಿ ಎಲ್ಲವನ್ನೂ ಒಟ್ಟಿಗೇ ಸಾಧಿಸಿ ದವರು, ಬಾಲ್ಯದಲ್ಲಿನ ಕಲಿಕೆಯಿಂದ ಹಿಡಿದು ಪದ್ಮಭೂಷಣ ಪ್ರಶಸ್ತಿಯವರೆಗೆ ಎಲ್ಲವನ್ನೂ ಒಟ್ಟಾಗಿಯೇ ಸಾಧಿಸಿದವರು. ಕಛೇರಿಗಳಲ್ಲೂ ಅಷ್ಟೇ, ತಮ್ಮನ ವಿಶಿಷ್ಟ ತಾನುಗಳಿಗೆ ಅಣ್ಣ ‘ವಾಹ್ ವಾಹ್’ ಎನ್ನುವುದು, ಅಣ್ಣನ ಸಂಗತಿಗಳಿಗೆ ತಮ್ಮ ‘ಕ್ಯಾ ಬಾತ್ ಹೈ’ ಎಂದು ತಲೆತೂಗುವುದು ಇವನ್ನೆಲ್ಲ ನೋಡುವುದೇ ಚಂದವಾಗಿತ್ತು. ಹಾಗೆ ಪರಸ್ಪರರ ಸಂಗೀತವನ್ನು ಅವರು ಆಸ್ವಾದಿಸು ತ್ತಿದ್ದರು, ಅನುಭವಿಸುತ್ತಿದ್ದರು.

ಸಂಗೀತದ ಎಲ್ಲ ವಿದ್ಯಮಾನಗಳಲ್ಲಿ ಅತ್ಯಂತ ಗರಿಷ್ಠಮಟ್ಟದ ಪ್ರೌಢಿಮೆಯಿದ್ದ ಸಂಗೀತದ ಸಂತ ರಾಗಿದ್ದವರು ಈ ಸಹೋದರರು. ಶರೀರ ಹಾಗೂ ಶಾರೀರದಲ್ಲಿನ ಸಾಮ್ಯತೆ ಹಾಗೂ ಪರಸ್ಪರ ಪ್ರೀತಿ ಗೌರವ ಇವುಗಳಿಂದಾಗಿ ಇವರ ಸಂಗೀತ ಸುಶ್ರಾವ್ಯವಾಗುತ್ತಿತ್ತು. ಹೆಸರು, ಉಡುಪು ಹಾಗೂ ಆಳ್ತನವನ್ನು ನೋಡುವಾಗ ರಾಜನ್ ಹಾಗೂ ಸಾಜನ್ ಅವರು ಅವಳಿ ಮಕ್ಕಳಾ ಅಂತ ಅನಿಸುವುದು ಸಹಜ, ಆದರೆ ಸಾಜನ್ ಅವರು ರಾಜನ್‌ಗಿಂತ ಐದು ವರ್ಷ ಚಿಕ್ಕವರು.

ಚಿಕ್ಕ ವಯಸ್ಸಿನ ಒಟ್ಟಿಗೆ ಹಾಡಲು ಪ್ರಾರಂಭಿಸಿದ್ದ ಸಹೋದರರು ಸುಮಾರು ಅರ್ಧಶತಮಾನಗಳ ಕಾಲ ದೇಶವಿದೇಶಗಳಲ್ಲಿ ಒಟ್ಟಿಗೇ ಪ್ರದರ್ಶನ ನೀಡಿ ಸಂಗೀತ ರಸಿಕರ ಮನಗೆದ್ದವರು. ಅವರು ಏಕೆ ಜೊತೆಯಾಗಿ ಹಾಡುವ ಆಯ್ಕೆ ಮಾಡಿಕೊಂಡರು ಎನ್ನುವುದನ್ನು ತಿಳಿಯುವುದಾದರೆ, ‘ಸಾಥ್ ಮೇ ಗಾಯೇಂಗೆ ತೋ ಸಾಥ್ ಮೇ ರಹೇಂಗೆ’ (ಒಟ್ಟಿಗೆ ಹಾಡುತ್ತಿದ್ದರೆ ಒಟ್ಟಿಗೇ ಇರುತ್ತೀರಿ) ಎಂದು ಅವರ ತಂದೆ ಹೇಳಿದ್ದರಂತೆ.

ತಂದೆ ಹನುಮಾನ್ ಪ್ರಸಾದ್ ಮಿಶ್ರಾ ಅವರ ಮಾತು ನಿಜವಾಯಿತು. ಅಣ್ಣ ತಮ್ಮ ಕೊನೆಯವ ರೆಗೂ ದೆಹಲಿಯ ರಾಜೇಶ್ ನಗರದಲ್ಲಿ ಒಂದೇ ಮನೆಯಲ್ಲಿ ಸಂಸಾರ ನಡೆಸಿದರು. ಅವರೀರ್ವರ ನಡುವಿನ ಈ ಪ್ರೀತಿ ಮತ್ತು ಗೌರವ ಅವರ ಗಾಯನದಲ್ಲಿಯೂ ಪ್ರತಿಫಲಿಸುತ್ತಿತ್ತು. ನಮ್ಮದು ದೇಹ ಮಾತ್ರ ಎರಡು ಆದರೆ ಆತ್ಮ ಒಂದೇ ಎಂದು ಹಿರಿಯ ಸಹೋದರ ಯಾವಾಗಲೂ ಹೇಳುತ್ತಿದ್ದರು. ಅವರ ಗಾಯನವನ್ನು ಸವಿದ ಪ್ರತಿಯೊಬ್ಬರಿಗೂ ಇದು ಸ್ಪಷ್ಟವಾಗಿ ಗೋಚರಿಸುತ್ತಿತ್ತು ಕೂಡಾ.

ಒಮ್ಮೆ ರಾಜನ್ ಹಾಗೂ ಸಾಜನ್ ಸಂಗೀತ ಕಛೇರಿ ನಡೆಸುತ್ತಿದ್ದರು, ಕಾರ್ಯಕ್ರಮದುದ್ದಕ್ಕೂ ಒಂದು ಬಾರಿಯೂ ಚಪ್ಪಾಳೆ ಬೀಳದಿರುವುದನ್ನು ನೋಡಿ ಅವರಿಗೆ ಆಶ್ಚರ್ಯವಾಯಿತು, ಆಮೇಲೆ ಯಾರೋ ಬಂದು, ನಾವು ಧ್ಯಾನಸ್ಥರಾಗಿ ಬಿಟ್ಟಿದ್ದೆವು, ನಿಮ್ಮ ಗಾಯನದಿಂದ ಸಮಾಧಿಸ್ಥಿತಿ ತಲುಪಿದ್ದೆವು, ನಿಮ್ಮ ಸಂಗೀತವು ನಮಗೆ ಅಂತಹ ಶಾಂತಿಯನ್ನು ನೀಡಿದೆ, ಚಪ್ಪಾಳೆಯಿಂದ ಆ ಶಾಂತಿಯನ್ನು ಭಂಗಗೊಳಿಸಿಕೊಳ್ಳಲು ಬಯಸಲಿಲ್ಲ ಎಂದಾಗ ಅಚ್ಚರಿಯಾಯಿತು ಎನ್ನುತ್ತಾರೆ ಸಾಜನ್ ಮಿಶ್ರಾ.

ಗಾಯಕನಾದವನು ಕಚೇರಿ ನೀಡುವಾಗ ತನ್ನಿಷ್ಟದ ರಾಗಕ್ಕೆ ಶರಣಾಗಿ ಹಾಡಲು ಪ್ರಯತ್ನಿಸಿದರೆ ಆ ರಾಗವೇ ಅವನನ್ನು ಕೈಹಿಡಿದು ನಡೆಸುತ್ತಾ, ಪ್ರೇಕ್ಷಕರನ್ನು ತಲುಪುತ್ತದೆ, ಅದಲ್ಲದೇ ರಾಗದ ಜೊತೆ ಚೇಷ್ಟೇ ಮಾಡಲು ಹೊರಟರೆ ಯದ್ವಾತದ್ವಾ ಆಗಿಬಿಡುತ್ತದೆ ಎನ್ನುತ್ತಾರೆ ಶ್ರೀ ರಾಜನ್ ಮಿಶ್ರಾ ಅವರು. ತಮ್ಮ ಸಂಪ್ರದಾಯದ ಬಗ್ಗೆ ಅತೀವ ಗೌರವ ಹೊಂದಿದ್ದ ಈ ಸಹೋದರರು ಎಂದಿಗೂ ಆ ಚೌಕಟ್ಟಿನಿಂದ ಈಚೆ ಬಂದು ಕಲೆಯನ್ನು ಗಬ್ಬೆಬ್ಬಿಸಿದವಲ್ಲ.

ಅಪರೂಪದ ಕಾರ್ಯಕ್ರಮ ವೊಂದರಲ್ಲಿ ಬಿರ್ಜು ಮಹರಾಜ್ ಕಥಕ್ ನೃತ್ಯ ಪ್ರಸ್ತುತಪಡಿಸು ತ್ತಿದ್ದರು, ಗಾಯನ ಮಿಶ್ರಾ ಸಹೋದರರದ್ದು. ತಬಲಾ ಸಾಥ್ ನೀಡುತ್ತಿದ್ದವರು ಸ್ವತಃ ಉಸ್ತಾದ್ ಝಾಕೀರ್ ಹುಸೇನ್ ಅವರು. ಮಧ್ಯದಲ್ಲಿ ರಾಜನ್ ಮಿಶ್ರಾ ಅವರು ತಬಲಾ ಬೋಲ್‌ಗಳನ್ನು ಎಷ್ಟು ಸುಂದರವಾಗಿ ಹೇಳಿದರೆಂದರೆ, ಝಾಕೀರ್ ತಮ್ಮ ತಬಲಾವನ್ನು ತೆಗೆದು ರಾಜನ್ ಮಿಶ್ರಾ ಅವರ ಮುಂದಿಟ್ಟು ನೀವೇ ನುಡಿಸಿಬಿಡಿ ಎನ್ನುವಂತೆ ಸಂಜ್ಞೆ ಮಾಡಿದರು. ಹಾಗೆ ಈ ಸಹೋದರರು ಸಂಗೀತದ ಎಲ್ಲ ಆಯಾಮಗಳಲ್ಲಿ ಪ್ರೌಢಿಮೆ ಹೊಂದಿದವರಾಗಿದ್ದರು.

ನಮ್ಮ ಧಾರವಾಡದಂತೆ, ಮನೆಮನೆಯಿಂದಲೂ ಸಂಗೀತದ ನಾದ ಹೊರಹೊಮ್ಮುವ ಇನ್ನೊಂದು ಊರು ಯಾವುದಾದರೂ ಇದ್ದರೆ ಅದು ಬನಾರಸ್ ನಗರ. ಅಂಥಾ ಸಂಗೀತದ ತವರೂರಿನಲ್ಲಿ ಹುಟ್ಟಿ ಬೆಳೆದವರು ಈ ಮಿಶ್ರಾ ಸಹೋದರರು. ತಲೆಮಾರುಗಳಿಂದ ಸಂಗೀತವೇ ಇವರ ಪರಿಚಯ. ಬನಾರಸ್ ಘರಾನಾದ ಮೂರ್ಧನ್ಯ ಕಲಾವಿದರ ಕುಟುಂಬ ಅವರದ್ದು. ರಾಜನ್ ಹಾಗೂ ಸಾಜನ್ ಮಿಶ್ರಾ ಅವರದ್ದು ಸಂಗೀತದಲ್ಲಿ ಐದನೇ ತಲೆಮಾರಂತೆ. ಸುದೈವ ನೋಡಿ! ಈಗ ಅವರ ಮಕ್ಕಳೂ (ಅಂದರೆ ಆರನೇ ತಲೆಮಾರೂ) ಸಂಗೀತದ ದುಡಿಮೆ ಮಾಡುತ್ತಿದ್ದಾರೆ, ಮತ್ತೆ ಅವರ ಮನೆಯ ಅಣ್ಣ ತಮ್ಮಂದಿರು ಒಟ್ಟಿಗೆ ಕಛೇರಿ ಕೊಡುತ್ತಿದ್ದಾರೆ.

ರಾಜನ್ ಮಿಶ್ರಾ ಅವರ ಮಕ್ಕಳಾದ ರಿತೇಶ್ ಮತ್ತು ರಜನೀಶ್ ಮಿಶ್ರಾ ಅವರ ಜುಗಲಬಂದಿ ದೇಶ ವಿದೇಶಗಳಲ್ಲಿ ಜನಪ್ರಿಯವಾಗಿದೆ. ಸಾಜನ್ ಮಿಶ್ರಾ ಅವರ ಮಗ ಸ್ವರಾಂಶ್ ಮಿಶ್ರಾ, ತಂದೆಯ ಜೊತೆಗೆ ಜುಗಲ ಬಂದಿಯಲ್ಲಿ ಭಾಗವಹಿಸುತ್ತಾರೆ. ಸಾಜನ್ ಮತ್ತು ರಾಜನ್ ಅವರು ವಾರಣಾಸಿಯ ದೇವಸ್ಥಾನಗಳಲ್ಲಿ ಹಾಡಲು ಶುರುವಿಟ್ಟುಕೊಂಡಾಗ ಸಾಜನ್‌ಗೆ ಆರು ವರ್ಷ ಹಾಗೂ ಅಣ್ಣ ರಾಜನ್‌ಗೆ ಹನ್ನೊಂದು ವರ್ಷ. ದೇವಸ್ಥಾನಗಳಲ್ಲಿ ಹಾಡಿದರೆ ದೇವರ ಜೊತೆಗೆ ಅಲ್ಲಿಗೆ ಬರುವ ಹಿರಿಯರ ಆಶೀರ್ವಾದವೂ ದೊರೆಯಲಿದೆ ಎನ್ನುವುದು ಅವರ ತಂದೆಯವರ ಆಶಯವಾಗಿತ್ತು.

ಐದು ವರ್ಷಗಳ ತರುವಾಯ ವಾರಣಾಸಿಯ ಪ್ರಸಿದ್ಧ ಸಂಕಟ ಮೋಚನ ಮಂದಿರದಲ್ಲಿಯೇ ಅವರು ಮೊದಲ ಸಾರ್ವಜನಿಕ ಕಾರ್ಯಕ್ರಮವನ್ನು ಕೊಡುತ್ತಾರೆ. ಮುಂದೆ ಕಾರಣಾಂತರದಿಂದ ಮಿಶ್ರಾ ಸಹೋದರರು ದೆಹಲಿಗೆ ತೆರಳಿ ಅಲ್ಲಿಯೇ ನೆಲೆಸುತ್ತಾರೆ. ಪ್ರಾರಂಭದಲ್ಲಿ ಅವರಿಬ್ಬರೂ ಒಂದು ಸಣ್ಣ ಅಂಗಡಿಯಲ್ಲಿ ಅಕೌಂಟೆಂಟ್‌ಗಳಾಗಿದ್ದರಂತೆ, ಅವರ ಪ್ರತಿಭೆಯನ್ನು ಗುರುತಿಸಿದ ಸಂಗೀತ ರಸಿಕ ರೊಬ್ಬರು, ಇವರು ಅಂಗಡಿಯಲ್ಲಿ ಕೆಲಸ ಮಾಡುವ ಬದಲು ಹೆಚ್ಚು ಸಮಯವನ್ನು ಸಂಗೀತಾ ಭ್ಯಾಸಕ್ಕೆ ಮೀಸಲಿಡಲು ಅನುಕೂಲವಾಗಲಿ ಎನ್ನುವ ಕಾರಣಕ್ಕೆ, ಅಂಗಡಿಯಲ್ಲಿ ದುಡಿಯುತ್ತಿರುವು ದಕ್ಕಿಂತ ಹೆಚ್ಚಿನ ಹಣವನ್ನು ನಾನು ಕೊಡುತ್ತೇನೆ, ಸಂಗೀತಾಭ್ಯಾಸದಲ್ಲಿ ಹೆಚ್ಚು ತೊಡಗಿಕೊಳ್ಳಿ ಎಂದು ಪ್ರೋತ್ಸಾಹವಿತ್ತಿದ್ದರಂತೆ.

ಮತ್ತೊಮ್ಮೆ, ಸಂಕಟಮೋಚನ ಮಂದಿರದಲ್ಲಿ ತಮ್ಮ ಕಛೇರಿಯನ್ನು ಮುಗಿಸಿ ಸಹೋದರರು ಏಳುವುದರಲ್ಲಿದ್ದರು, ಅಷ್ಟರಲ್ಲಿ ದೇವರ ದರ್ಶನಕ್ಕೆ ಅಲ್ಲಿಗೆ ಬಂದ ಪಂ.ರವಿಶಂಕರ್ ಅವರು, ನನಗೆ ನಿಮ್ಮ ಸಂಗೀತವನ್ನು ಇನ್ನೂ ಕೇಳುವ ಅಭಿಲಾಷೆಯಿದೆ, ಮುಂದುವರಿಸಬಹುದಾ ಅಂತ ಕೇಳುತ್ತಾರೆ, ಹಿರಿಯರಾದ ಅವರ ಮಾತಿಗೆ ಇಲ್ಲ ಎನ್ನದೇ ಮತ್ತೆ ಸಹೋದರರು ತಮ್ಮ ಕಛೇರಿ ಯನ್ನು ಮುಂದುವರಿಸುತ್ತಾರೆ.

ಪಂಡಿತ್ ರಾಜನ್ ಮಿಶ್ರಾ ಅವರು ನಿಧನರಾಗುವವರೆಗೆ, ಸಹೋದರರು ತಮ್ಮ ಪ್ರಥಮ ಕಛೇರಿ ನಡೆದಿದ್ದ ವಾರಾಣಸಿಯ ಪ್ರಸಿದ್ಧ ಸಂಕಟಮೋಚನ ಹನುಮಾನ್ ಮಂದಿರದಲ್ಲಿ ಗಾನಗಂಗೆ ಯನ್ನು ಹರಿಸಿದ್ದರು. ಆ ದೇಗುಲದಲ್ಲಿ ಪ್ರತಿವರ್ಷ ಹನುಮಾನ್ ಜಯಂತಿಯ ಸಂದರ್ಭದಲ್ಲಿ ನಡೆಯುವ ವಿಶ್ವಪ್ರಸಿದ್ಧ ಸಂಕಟಮೋಚನ ಸಂಗೀತ ಸಮಾರೋಹದಲ್ಲಿ ಇಬ್ಬರೂ ಅದ್ಭುತ ಗಾಯನ ಪ್ರಸ್ತುತಿಯನ್ನು ನೀಡಿzರೆ. ಈ ಸಹೋದರರ ಜುಗಲಬಂದಿ ಗಾಯನವು ಈ ಸಂಗೀತೋ ತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುತ್ತಿತ್ತು. ಈಗ ಸಾಜನ್ ಮಿಶ್ರಾ ಅವರು ತಮ್ಮ ಮಗನ ಜೊತೆಗೆ ಅಲ್ಲಿ ಹಾಡುವ ಮೂಲಕ ಸೇವೆಯನ್ನು ಮುಂದುವರಿಸಿದ್ದಾರೆ.

ಮಕ್ಕಳ ಜೊತೆಗೆ ಹಾಡುವುದು ತುಂಬಾ ಒಳ್ಳೆಯ ಅನುಭವವೇ, ಆದರೆ ನನ್ನ ಸಹೋದರನ ಅನುಪಸ್ಥಿತಿ ಸದಾ ನನ್ನನ್ನು ಕಾಡುತ್ತಿದೆ, 57 ವರ್ಷಗಳ ಕಾಲ ಒಟ್ಟಿಗೆ ಹಾಡಿದ್ದೇವೆ. ಅವರು ನನಗೆ ಕೇವಲ ಸಹೋದರನಾಗಿರಲಿಲ್ಲ, ಸ್ನೇಹಿತ ಗುರು ಎಲ್ಲವೂ ಆಗಿದ್ದರು ಎನ್ನುತ್ತಾರೆ ಸಾಜನ್ ಮಿಶ್ರಾ. ಹೀಗೆ ಒಂದು ದಿನ ತಮ್ಮ ಸಾಜನ್ ಮಿಶ್ರಾ ಮನೆಯಲ್ಲಿ ಕುಳಿತು ಟಿವಿಯಲ್ಲಿ ವಾರ್ತೆಗಳನ್ನು ನೋಡುತ್ತಿದ್ದರು, ಅದರಲ್ಲಿ ಪಂ ಸಾಜನ್ ಮಿಶ್ರಾ ಅವರಿಗೆ ಪದ್ಮಭೂಷಣ ಪ್ರಶಸ್ತಿ ಎಂದು ಬರುತ್ತಿತ್ತು, ಇವರಿಗೆ ಅಚ್ಚರಿಯೋ ಅಚ್ಚರಿ, ವಿದ್ಯೆ ವಯಸ್ಸು ಅನುಭವಗಳಲ್ಲಿ ತನಗಿಂತ ಹಿರಿಯರಾದ ಅಣ್ಣ ರಾಜನ್ ಮಿಶ್ರಾ ಅವರ ಹೆಸರು ಬಿಟ್ಟು ಕೇವಲ ನನ್ನದೊಂದೇ ಹೆಸರು ಹೇಳುತ್ತಿದ್ದಾರೆ ಎನ್ನುವುದು ಸಾಜನ್ ಮಿಶ್ರಾ ಅವರ ಸಂಕಟ.

ಅಣ್ಣನಿಗೆ ಫೋನಾಯಿಸಿದರು, ನಾನೂ ಟಿವಿಯಲ್ಲಿ ನೋಡುತ್ತಿದ್ದೇನೆ, ಏನಾಯಿತು? ಸರಿಯಾಗಿಯೇ ಇದೆಯ! ನಿನಗೆ ಪದ್ಮಭೂಷಣ ಪ್ರಶಸ್ತಿ ಬಂದರೆ ತಪ್ಪೇನು? ನೀನು ಅದಕ್ಕೆ ಯೋಗ್ಯನಿದ್ದೀಯ ಎನ್ನುವುದು ಆ ಕಡೆಯಿಂದ ಬಂದ ಅಣ್ಣನ ಉತ್ತರವಾಗಿತ್ತು. ವಾಸ್ತವಿಕವಾಗಿ ಪದ್ಮಭೂಷಣ ಪ್ರಶಸ್ತಿಯು ಈರ್ವರಿಗೂ ಸಂದಿತ್ತು, ಟಿವಿಯವರು ಎಡವಟ್ಟು ಮಾಡಿದ್ದರು ಅಷ್ಟೇ. ಅಸೂಯೆಗೆ ಜಾಗವೇ ಇಲ್ಲದೇ ಬರೇ ಪ್ರೀತಿ ಗೌರವದಿಂದ ಸಂಗೀತವನ್ನು ಸಾಧಿಸಿದ ಈ ಅಪರೂಪದ ಸಹೋದರ ಜೋಡಿಯ ಬದುಕು ಜುಗಲಬಂದಿಯಲ್ಲಿ ಬಂಧಿಸಲ್ಪಟ್ಟು, ಸಂಗೀತ ಹಾಗೂ ಸಾಹೋದರ್ಯ ಎರಡರಲ್ಲೂ ಮಾದರಿಯಾಯಿತು.