Ashok Gulati Column: ಗುಜರಾತ್ʼನಿಂದ ಭಾರತಕ್ಕೆ ಹಬ್ಬಿದ ಕೃಷಿ ರೂಪಾಂತರ
2001-02ರಿಂದ 2013-14ರ ನಡುವೆ, ಗುಜರಾತ್‌ನ ಕೃಷಿ ಜಿಡಿಪಿ ವರ್ಷಕ್ಕೆ ಸುಮಾರು ಶೇ.9ರಷ್ಟು ದರದಲ್ಲಿ ಬೆಳೆಯಿತು, ಇದು ಪ್ರಮುಖ ರಾಜ್ಯಗಳಲ್ಲಿ ಅತ್ಯಂತ ಹೆಚ್ಚಾಗಿತ್ತು. ಇದನ್ನು ಸಾಧ್ಯವಾಗಿ ಸಿದ್ದು ಯಾವುದೇ ಒಂದು ಯೋಜನೆ ಅಥವಾ ಒಂದು ಬೆಳೆಯಲ್ಲ; ಅದೊಂದು ಸಮಗ್ರ ಪರಿಸರ ವ್ಯವಸ್ಥೆಯಾಗಿತ್ತು. ಗುಜರಾತ್ ಕೃಷಿ ಭೂಮಿಗೆ ನೀರನ್ನು ತರಲು ಮತ್ತು ಪ್ರಕೃತಿ ಒದಗಿಸಿದ ನೀರನ್ನು ಸಂಗ್ರಹಿಸಿಡಲು ಭಾರಿ ಹೂಡಿಕೆ ಮಾಡಿತು.
-
ರಜತ ಕೃಷಿ
ಅಶೋಕ್ ಗುಲಾಟಿ
ನರೇಂದ್ರ ಮೋದಿ 2001ರಲ್ಲಿ ಗುಜರಾತ್‌ನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಇಂದಿಗೆ (ಅ.7) 25 ವರ್ಷಗಳು ಪೂರ್ಣಗೊಳ್ಳಲಿವೆ. ಬಿಜೆಪಿ ತನ್ನ ‘ಸೇವಾ ಸಂಕಲ್ಪ ಅಭಿಯಾನ’ದ ಅಡಿಯಲ್ಲಿ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 17ರವರೆಗೆ ಒಂದು ತಿಂಗಳ ಕಾಲ ಸೇವಾ ಆಧಾರಿತ ಕಾರ್ಯಕ್ರಮ ಗಳು ಮತ್ತು ಸಾರ್ವಜನಿಕ ಸಂಪರ್ಕ ಉಪಕ್ರಮಗಳನ್ನು ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ, ಕೃಷಿ ಭಾರತಕ್ಕೆ ಮೋದಿ ಕೊಡುಗೆ ಕುರಿತ ಲೇಖನ ಇಲ್ಲಿದೆ.
ಮೊದಲು ಮುಖ್ಯಮಂತ್ರಿಯಾಗಿ ಮತ್ತು ನಂತರ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಅವರ ಆಡಳಿತವು ಭಾರತೀಯ ಕೃಷಿಗೆ ನೀಡಿದ ಕೊಡುಗೆ ಏನು ಎಂದು ಸಿಂಹಾವಲೋಕನ ಮಾಡಲು ಮತ್ತು ಪ್ರಶ್ನಿಸಲು ಇಪ್ಪತ್ತೈದು ವರ್ಷಗಳು ಸಾಕಷ್ಟು ಸುದೀರ್ಘ ಅವಧಿಯಾಗಿದೆ. ಈ ಪ್ರಯಾಣವು ಅಕ್ಟೋಬರ್ 2001ರಲ್ಲಿ ಗುಜ ರಾತ್‌ನಲ್ಲಿ ಅವರು ಮುಖ್ಯಮಂತ್ರಿಯಾದಾಗ ಪ್ರಾರಂಭವಾಯಿತು ಮತ್ತು ಮೇ 2014ರಲ್ಲಿ ರಾಷ್ಟ್ರವ್ಯಾಪಿ ವಿಸ್ತರಿಸಿತು. ಈ ಮೊದಲೇ ಹೇಳಿದಂತೆ, ಗುಜರಾತ್‌ನ ಕಥೆಯನ್ನು ಸ್ಮರಿಸುವುದು ಸೂಕ್ತ, ಏಕೆಂದರೆ ಅದು ಒಂದು ಕೃಷಿ ಪವಾಡವಾಗಿತ್ತು.
2001-02ರಿಂದ 2013-14ರ ನಡುವೆ, ಗುಜರಾತ್‌ನ ಕೃಷಿ ಜಿಡಿಪಿ ವರ್ಷಕ್ಕೆ ಸುಮಾರು ಶೇ.9ರಷ್ಟು ದರದಲ್ಲಿ ಬೆಳೆಯಿತು, ಇದು ಪ್ರಮುಖ ರಾಜ್ಯಗಳಲ್ಲಿ ಅತ್ಯಂತ ಹೆಚ್ಚಾಗಿತ್ತು. ಇದನ್ನು ಸಾಧ್ಯವಾಗಿ ಸಿದ್ದು ಯಾವುದೇ ಒಂದು ಯೋಜನೆ ಅಥವಾ ಒಂದು ಬೆಳೆಯಲ್ಲ; ಅದೊಂದು ಸಮಗ್ರ ಪರಿಸರ ವ್ಯವಸ್ಥೆಯಾಗಿತ್ತು. ಗುಜರಾತ್ ಕೃಷಿ ಭೂಮಿಗೆ ನೀರನ್ನು ತರಲು ಮತ್ತು ಪ್ರಕೃತಿ ಒದಗಿಸಿದ ನೀರನ್ನು ಸಂಗ್ರಹಿಸಿಡಲು ಭಾರಿ ಹೂಡಿಕೆ ಮಾಡಿತು.
ಇದನ್ನೂ ಓದಿ: D K Shivakumar Column: ಎಸ್ʼಐಆರ್ ಒಂದು, ಪ್ರಶ್ನೆ ನೂರಾರು
ಚೆಕ್ ಡ್ಯಾಮ್‌ಗಳು ಮತ್ತು ಕೃಷಿ ಹೊಂಡಗಳು ಮಳೆನೀರನ್ನು ಸಂರಕ್ಷಿಸಲು ಮತ್ತು ಅಂತರ್ಜಲ ವನ್ನು ಮರುಪೂರಣಗೊಳಿಸಲು ಸಹಾಯ ಮಾಡಿದವು. ನರ್ಮದಾ ಕಾಲುವೆ ವ್ಯವಸ್ಥೆಯು ನೀರಾವರಿಯನ್ನು ವಿಸ್ತರಿಸಿತು. ಸೂಕ್ಷ ನೀರಾವರಿಯು ರೈತರಿಗೆ ಕಡಿಮೆ ನೀರಿನಿಂದ ಹೆಚ್ಚಿನ ಇಳುವರಿ ಪಡೆಯಲು ಸಹಾಯ ಮಾಡಿತು. ವಿದ್ಯುತ್ ಸಹ ಅಷ್ಟೇ ಮುಖ್ಯವಾದದ್ದು.
‘ಜ್ಯೋತಿಗ್ರಾಮ’ ಯೋಜನೆಯು ಕೃಷಿ ಫೀಡರ್‌ಗಳನ್ನು ಪ್ರತ್ಯೇಕಿಸಿ ರೈತರಿಗೆ ವಿಶ್ವಾಸಾರ್ಹ ವಿದ್ಯುಚ್ಛಕ್ತಿಯನ್ನು ಪೂರೈಸಿತು. ಇದು ನೀರಾವರಿಗೆ ಹೆಚ್ಚಿನ ನಿಶ್ಚಿತತೆಯನ್ನು ಒದಗಿಸಿದ್ದಲ್ಲದೆ, ಗ್ರಾಮೀಣ ಪ್ರದೇಶದ ಜೀವನಮಟ್ಟವನ್ನು ಸುಧಾರಿಸಿತು. ಗ್ರಾಮೀಣ ವಿದ್ಯುತ್ ಪೂರೈಕೆಯಲ್ಲಿ ಆದ ಈ ಬದಲಾವಣೆಯು ಹಳ್ಳಿಗಳಲ್ಲಿ ಕೃಷಿಯೇತರ ಚಟುವಟಿಕೆಗಳಿಗೂ ಸಹಾಯಕವಾಯಿತು. ಆನಂತರ ರಸ್ತೆಗಳು.
ಎಲ್ಲಾ ಹವಾಮಾನಕ್ಕೂ ಸೂಕ್ತವಾದ ಗ್ರಾಮೀಣ ರಸ್ತೆ ಸಂಪರ್ಕವು ಹಳ್ಳಿಗಳನ್ನು ಮಾರುಕಟ್ಟೆಗಳು, ಪರಿಕರ ಪೂರೈಕೆದಾರರು, ವಿಸ್ತರಣಾ ಸೇವೆಗಳು ಮತ್ತು ನಗರಗಳಿಗೆ ಹೆಚ್ಚು ಪರಿಣಾಮಕಾರಿಯಾಗಿ ಸಂಪರ್ಕಿಸಿತು. ರೈತರು ಉಳಿದ ಆರ್ಥಿಕತೆಯೊಂದಿಗೆ ಸಂಯೋಜನೆಗೊಂಡಾಗ ಕೃಷಿಯು ಪ್ರಗತಿಯ ಇಂಜಿನ್ ಆಗಬಲ್ಲದು. ಒಂದು ಆಸಕ್ತಿದಾಯಕ ಸಾಂಸ್ಥಿಕ ಆವಿಷ್ಕಾರವೆಂದರೆ ರೈತನಿಗೆ ಜ್ಞಾನವನ್ನು ತಲುಪಿಸುವ ಪ್ರಯತ್ನ.
‘ಕೃಷಿ ಮಹೋತ್ಸವ’ ಮತ್ತು ‘ಕೃಷಿ ರಥ’ಗಳು ಕೃಷಿ ವಿಜ್ಞಾನಿಗಳು, ವಿಸ್ತರಣಾ ಅಧಿಕಾರಿಗಳು ಹಾಗೂ ಮಣ್ಣು, ನೀರು, ತಂತ್ರಜ್ಞಾನ ಮತ್ತು ಸುಧಾರಿತ ಪದ್ಧತಿಗಳ ಕುರಿತ ಮಾಹಿತಿಯನ್ನು ನೇರವಾಗಿ ಹಳ್ಳಿಗಳಿಗೆ ತಲುಪಿಸಿದವು. ರೈತರು ಜ್ಞಾನಕ್ಕಾಗಿ ಸಂಸ್ಥೆಗಳಿಗೆ ಅಲೆಯುವ ಬದಲು, ಕೃಷಿ ಜ್ಞಾನವೇ ರೈತರ ಬಳಿಗೆ ತಲುಪಬೇಕು ಎಂಬುದು ಇದರ ಹಿಂದಿನ ಉದ್ದೇಶವಾಗಿತ್ತು.
ಆದ್ದರಿಂದ ಗುಜರಾತ್‌ನಿಂದ ಕಲಿತ ಪಾಠವು ಯಾವುದೇ ಪ್ರತ್ಯೇಕ ಮಧ್ಯಸ್ಥಿಕೆಗಿಂತ ದೊಡ್ಡದಾಗಿತ್ತು. ನೀರು, ವಿದ್ಯುತ್, ರಸ್ತೆಗಳು, ತಂತ್ರಜ್ಞಾನ, ಕೃಷಿ ವಿಸ್ತರಣೆ ಮತ್ತು ಮಾರುಕಟ್ಟೆಗಳು ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡಿದವು. ಇವೆಲ್ಲವೂ ಒಟ್ಟಿಗೆ ಸೇರಿದಾಗ, ರೈತರು ಧನಾತ್ಮಕವಾಗಿ ಸ್ಪಂದಿಸಿ ದರು ಮತ್ತು ಕೃಷಿಯು ಬೆಳವಣಿಗೆಯ ಇಂಜಿನ್ ಆಯಿತು. ರೈತಾಪಿ ವರ್ಗ ಮತ್ತು ಅರ್ಥವ್ಯವಸ್ಥೆ ಸಮೃದ್ಧಿಯಾಗಲು ಬಯಸುವ ಯಾವುದೇ ರಾಜ್ಯಕ್ಕೆ ಇದು ಇಂದಿಗೂ ಮಾದರಿಯಾಗಿದೆ. ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾದಾಗ, ಕಾರ್ಯಕ್ಷೇತ್ರವು ಒಂದು ರಾಜ್ಯದಿಂದ ಇಡೀ ರಾಷ್ಟ್ರಕ್ಕೆ ವಿಸ್ತರಿಸಿತು.
ಗುಜರಾತ್ ಅನುಭವದ ಕೆಲವು ಅಂಶಗಳನ್ನು ರಾಷ್ಟ್ರೀಯ ಕಾರ್ಯಕ್ರಮಗಳಾಗಿ ಪರಿವರ್ತಿಸ ಲಾಯಿತು. ಜಲ ನಿರ್ವಹಣೆಗೆ ಹೆಚ್ಚಿನ ಗಮನ ನೀಡಲಾಯಿತು. ಮಣ್ಣಿನ ಆರೋಗ್ಯ ಕಾರ್ಡುಗಳು ವೈಜ್ಞಾನಿಕ ಮಣ್ಣು ಪರೀಕ್ಷೆ ಮತ್ತು ಸುಧಾರಿತ ಪೋಷಕಾಂಶಗಳ ನಿರ್ವಹಣೆಯನ್ನು ಮುಖ್ಯ ವಾಹಿನಿಗೆ ತಂದವು. ಜಲಾನಯನ ಪ್ರದೇಶದ ಅಭಿವೃದ್ಧಿ, ಸೂಕ್ಷ್ಮ ನೀರಾವರಿ ಮತ್ತು ಪ್ರತಿ ಹನಿ ನೀರಿಗೆ ಹೆಚ್ಚು ಬೆಳೆ ಉದ್ದೇಶದೊಂದಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ನೀರಾವರಿಯು ಹೆಚ್ಚು ಸಮಗ್ರ ವಿಧಾನ ಪಡೆಯಿತು.
’ಅಮೃತ ಸರೋವರ’ ಉಪಕ್ರಮವು ನೀರಿನ ಸಂಪನ್ಮೂಲಗಳನ್ನು ಸೃಷ್ಟಿಸುವ ಮತ್ತು ಪುನಶ್ಚೇತನ ಗೊಳಿಸುವ ಶ್ರಮಕ್ಕೆ ಮತ್ತೊಂದು ಆಯಾಮವನ್ನು ಸೇರಿಸಿದೆ. ಈ ಎಲ್ಲಾ ಉಪಕ್ರಮಗಳ ಹಿಂದಿರುವ ಮೂಲ ತತ್ವವು ಭಾರತಕ್ಕೆ ವಿಶೇಷವಾಗಿ ಸೂಕ್ತವಾಗಿದೆ. ನೀರು ಕೇವಲ ಕೃಷಿಯ ಒಂದು ಪರಿಕರ ವಲ್ಲ. ನೀರಿನ ಕೊರತೆ ಇರುವ ದೇಶದಲ್ಲಿ, ಉತ್ಪಾದಕ ನೀರಿನ ನಿರ್ವಹಣೆಯು ಸ್ವತಃ ಕೃಷಿ ಬೆಳವಣಿಗೆಯ ಮೂಲವಾಗಿದೆ.
ಪ್ರಧಾನಮಂತ್ರಿ ಮೋದಿ ಅವರ ಆಡಳಿತದಲ್ಲಿ, ರೈತ ಮತ್ತು ಸರ್ಕಾರದ ನಡುವಿನ ಸಂಬಂಧದಲ್ಲಿ ಕೂಡ ಮೂಲಭೂತ ಬದಲಾವಣೆಯಾಗಿದೆ. ‘ಪಿಎಂ-ಕಿಸಾನ್’ ಯೋಜನೆಯು ರೈತರ ಕೈಗೆ ನೇರ ಆದಾಯದ ಬೆಂಬಲವನ್ನು ನೀಡಿತು. ಜೂನ್ 2026ರ ವೇಳೆಗೆ, 23 ಕಂತುಗಳ ಮೂಲಕ 4.46 ಲಕ್ಷ ಕೋಟಿಗಿಂತಲೂ ಹೆಚ್ಚು ಹಣವನ್ನು ವರ್ಗಾಯಿಸಲಾಗಿದೆ. ಸರ್ಕಾರ ಮತ್ತು ರೈತರ ನಡುವೆ ನೇರ, ಡಿಜಿಟಲ್ ಮತ್ತು ಪಾರದರ್ಶಕ ಹಣಕಾಸು ಮಾರ್ಗವನ್ನು ಸೃಷ್ಟಿಸಿ ರುವುದು ಇದರ ಮಹತ್ವ ವಾಗಿದ್ದು, ಇದು ಸಾಂಪ್ರದಾಯಿಕ ಕಲ್ಯಾಣ ವಿತರಣೆಯಲ್ಲಿದ್ದ ಮಧ್ಯವರ್ತಿಗಳ ಹಂತಗಳನ್ನು ಕಡಿಮೆ ಮಾಡಿದೆ.
ಪಿಎಂ-ಕಿಸಾನ್ ಯೋಜನೆಯು ಕೃಷಿ ಬೆಂಬಲದ ಚೌಕಟ್ಟಿನಲ್ಲಿ ಖರೀದಿಸುವ ಶಕ್ತಿಯನ್ನು ನೇರವಾಗಿ ರೈತರಿಗೆ ನೀಡುವ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ಅವರ ಮೇಲೆ ಭರವಸೆಯೊಂದಿಗೆ ತಂದ ಬದಲಾವಣೆಯನ್ನು ಪ್ರತಿನಿಧಿಸುತ್ತದೆ. ನೇರ ಆದಾಯ ಬೆಂಬಲವು ಸಾಲ ಮನ್ನಾಗಳು ಅಥವಾ ನಿರ್ದಿಷ್ಟ ಬೆಳೆಗಳನ್ನು ಬೆಳೆಯುವ ರೈತರಿಗೆ ಮಾತ್ರ ಪ್ರಯೋಜನ ನೀಡುವ ನೀತಿಗಳಿಗಿಂತ ಹೆಚ್ಚು ಪಾರದರ್ಶಕ, ಕಡಿಮೆ ಅಸಮತೋಲನ ಸೃಷ್ಟಿಸುವಂತಹ ಮತ್ತು ಬಹುಪಾಲು ಕೃಷಿ ಕುಟುಂಬಗಳನ್ನು ತಲುಪಬಲ್ಲ ವ್ಯವಸ್ಥೆ.
ಇದು ಪರಿಣಾಮಕಾರಿಯಲ್ಲದ ಪರಿಕರ ಸಬ್ಸಿಡಿಗಳನ್ನು ಕ್ರಮೇಣ ಸುವ್ಯವಸ್ಥಿತಗೊಳಿಸುವ ಮತ್ತು ರೈತರಿಗೆ ನೇರ ಬೆಂಬಲ ನೀಡುವ ಕಡೆಗೆ ಭಾರತೀಯ ಕೃಷಿಗೆ ದೊಡ್ಡ ಸುಧಾರಣೆಯ ದಾರಿಯನ್ನು ತೆರೆಯುತ್ತದೆ, ಹಾಗೂ ಉಳಿತಾಯವನ್ನು ಕೃಷಿ ಮೂಲಸೌಕರ್ಯ, ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ವೈವಿಧ್ಯೀ ಕರಣಕ್ಕೆ ಬಳಸಲು ನೆರವಾಗುತ್ತದೆ.
2014ರ ನಂತರದ ಅವಧಿಯಲ್ಲಿ ಕೃಷಿಯನ್ನು ಬೆಳೆಗಳಿಗಿಂತ ಮಿಗಿಲಾದದ್ದೆಂದು ಅರ್ಥೈಸಿಕೊಳ್ಳ ಲಾಗಿದೆ. ಸಹಕಾರ ಕ್ಷೇತ್ರಕ್ಕೆ ವಿಶೇಷ ಗಮನ ಹರಿಸಲು ತನ್ನದೇ ಆದ ಸಚಿವಾಲಯವಿದೆ. ಸಮೃದ್ಧ ವಾದ ಹೈನುಗಾರಿಕೆ ಸಹಕಾರ ಪರಿಸರ ವ್ಯವಸ್ಥೆಯನ್ನು ಹೊಂದಿರುವ ಗುಜರಾತ್ ರಾಜ್ಯದಲ್ಲಿ ನರೇಂದ್ರ ಮೋದಿ ಅವರ ಸ್ವಂತ ಅನುಭವವನ್ನು ಪರಿಗಣಿಸಿದರೆ ಇದು ಸಹಜವಾಗಿದೆ. ಹೈನುಗಾರಿಕೆ, ಮೀನುಗಾರಿಕೆ, ಪಶುಸಂಗೋಪನೆ, ಕೋಳಿ ಸಾಕಣೆ, ತೋಟಗಾರಿಕೆ ಮತ್ತು ಜೇನುಸಾಕಣೆ ಗ್ರಾಮೀಣ ಆದಾಯದ ಕಥೆಯ ಪ್ರಮುಖ ಅಂಶಗಳಾಗಿವೆ.
ಸಣ್ಣ ರೈತನಿಗೆ, ಕೃಷಿಗೆ ಪೂರಕವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅತ್ಯಂತ ಪ್ರಯೋಜನಕಾರಿಯಾಗಿದೆ. ಮೋದಿ ಸರ್ಕಾರದ ‘ಸಿಹಿ ಕ್ರಾಂತಿ’ಯ ಕಲ್ಪನೆ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಕಳೆದ ದಶಕದಲ್ಲಿ ಭಾರತದ ಜೇನುತುಪ್ಪ ಉತ್ಪಾದನೆಯು ದುಪ್ಪಟ್ಟಾಗಿದೆ. ಜೇನುನೊಣಗಳು ಪರಾಗಸ್ಪರ್ಶ ಸೇವೆಗಳನ್ನು ಒದಗಿಸಿದರೆ, ಜೇನುಸಾಕಣೆಯು ರೈತರಿಗೆ ಮತ್ತೊಂದು ಆದಾಯದ ಮೂಲವನ್ನು ನೀಡುತ್ತದೆ.
ರಾಷ್ಟ್ರೀಯ ಜೇನುಸಾಕಣೆ ಮತ್ತು ಜೇನು ಮಿಷನ್ ಹಾಗೂ ರಫ್ತು-ಬೆಂಬಲ ಉಪಕ್ರಮಗಳು ಈ ನಿಟ್ಟಿನಲ್ಲಿ ಇಟ್ಟ ಸರಿಯಾದ ಹೆಜ್ಜೆಗಳಾಗಿವೆ. ಸಣ್ಣ ರೈತರನ್ನು ಸಬಲೀಕರಿಸುವ ತರ್ಕವು ‘ರೈತ ಉತ್ಪಾದಕ ಸಂಸ್ಥೆಗಳ’ ಹಿಂದೆ ಇದೆ. ಸಣ್ಣ ರೈತ ಸಮೃದ್ಧಿಯಾಗಲು ದೊಡ್ಡ ರೈತನಾಗಬೇಕಾದ ಅಗತ್ಯವಿಲ್ಲ. ಆತನಿಗೆ ಕೃಷಿ ಸಾಮಗ್ರಿಗಳನ್ನು ಖರೀದಿಸಲು, ತಂತ್ರಜ್ಞಾನವನ್ನು ಪಡೆದುಕೊಳ್ಳಲು, ಉತ್ಪನ್ನಗಳನ್ನು ಸಂಗ್ರಹಿಸಲು ಮತ್ತು ಸಂಸ್ಕರಿಸಲು, ಖರೀದಿದಾರರೊಂದಿಗೆ ಮಾತುಕತೆ ನಡೆಸಲು ಮತ್ತು ದೊಡ್ಡ ಮಾರುಕಟ್ಟೆಗಳನ್ನು ತಲುಪಲು ಬೃಹತ್ ಪ್ರಮಾಣದ ಅನುಕೂಲಗಳು ಅಗತ್ಯವಿದೆ.
ರೈತ ಉತ್ಪಾದಕ ಸಂಸ್ಥೆಗಳನ್ನು ರೈತರ ಸಂಘಟನೆ ಮತ್ತು ಮೌಲ್ಯವರ್ಧನೆಯ ಆಧಾರ ಸ್ತಂಭ ವನ್ನಾಗಿ ಮಾಡಲು ನೀಡಿದ ರಾಜಕೀಯ ಬೆಂಬಲವು ಭಾರತದ ಕೃಷಿ ರೂಪಾಂತರದ ಪ್ರಮುಖ ಭಾಗವಾಗಿದೆ. ಇದರೊಂದಿಗೆ, ಚರ್ಚೆ ಮತ್ತು ಕಾರ್ಯಚಟುವಟಿಕೆಗಳು ವಾಣಿಜ್ಯ ಕಾರ್ಯಸಾಧ್ಯತೆ, ವೃತ್ತಿಪರ ನಿರ್ವಹಣೆ, ಸಾಲ ಮತ್ತು ತಂತ್ರಜ್ಞಾನದ ಲಭ್ಯತೆ, ಸಂಸ್ಕರಣಾಕಾರರು ಮತ್ತು ಖರೀದಿದಾರರೊಂದಿಗೆ ಬಲವಾದ ಸಂಪರ್ಕಗಳು ಹಾಗೂ ಅರ್ಥಪೂರ್ಣ ಪ್ರಮಾಣದಲ್ಲಿ ಉತ್ಪನ್ನ ಗಳನ್ನು ಒಗ್ಗೂಡಿಸುವ ಸಾಮರ್ಥ್ಯದತ್ತ ಸಾಗಬಹುದು.
ಕೃಷಿಯನ್ನು ಗ್ರಾಮೀಣ ಕುಟುಂಬದ ಪರಿವರ್ತನೆಯೊಂದಿಗೆ ಜೊತೆಗೂಡಿಸಿ ನೋಡಬೇಕು. ಗ್ರಾಮೀಣ ಅಭಿವೃದ್ಧಿ ಮತ್ತು ಕೃಷಿ ಅಭಿವೃದ್ಧಿಯ ನಡುವಿನ ವ್ಯತ್ಯಾಸವು ಕೃತಕವಾದದ್ದು, ಏಕೆಂದರೆ ಕೃಷಿ ಕುಟುಂಬವು ಉತ್ಪಾದಕನಾಗಿದ್ದರೂ, ಅದು ಒಂದು ಗ್ರಾಮೀಣ ಕುಟುಂಬವೂ ಆಗಿರುತ್ತದೆ ಮತ್ತು ಅದರ ಉತ್ಪಾದಕತೆಯು ಅದು ವಾಸಿಸುವ ಪರಿಸರದ ಗುಣಮಟ್ಟವನ್ನು ಅವಲಂಬಿಸಿರುತ್ತದೆ. ವಸತಿ, ವಿದ್ಯುತ್, ರಸ್ತೆಗಳು ಮತ್ತು ಕುಡಿಯುವ ನೀರು ಒಟ್ಟಾಗಿ ಗ್ರಾಮೀಣ ಪರಿಸರವನ್ನು ಬದಲಾಯಿಸಿವೆ.
ಪಿಎಂಎವೈ-ಜಿ ಅಡಿಯಲ್ಲಿ 3 ಕೋಟಿಗೂ ಹೆಚ್ಚು ಗ್ರಾಮೀಣ ಮನೆಗಳ ನಿರ್ಮಾಣ ಪೂರ್ಣ ಗೊಂಡಿದೆ, ಜಲ ಜೀವನ್ ಮಿಷನ್ ಅಡಿಯಲ್ಲಿ ಗ್ರಾಮೀಣ ನಲ್ಲಿ-ನೀರಿನ ಸಂಪರ್ಕವು ಶೇ. 17ರಿಂದ ಶೇ. 80ಕ್ಕಿಂತ ಹೆಚ್ಚಾಗಿದೆ ಮತ್ತು ಪಿಎಂಜಿಎಸ್‌ವೈ ಅರ್ಹ ಗ್ರಾಮೀಣ ಕುಟುಂಬಗಳ ಪೈಕಿ ಶೇ. 99ಕ್ಕಿಂತ ಹೆಚ್ಚು ಕುಟುಂಬಗಳಿಗೆ ಎಲ್ಲಾ ಹವಾಮಾನಕ್ಕೂ ಸೂಕ್ತವಾದ ರಸ್ತೆ ಸಂಪರ್ಕವನ್ನು ತಂದಿದೆ. ಇವು ಕಲ್ಯಾಣ ಯೋಜನೆಗಳಷ್ಟೇ ಆಗಿರದೆ ಆರ್ಥಿಕ ಹೂಡಿಕೆಗಳೂ ಆಗಿವೆ.
ರಸ್ತೆಗಳು ರೈತರನ್ನು ಮಾರುಕಟ್ಟೆ ಮತ್ತು ಸೇವೆಗಳಿಗೆ ಸಂಪರ್ಕಿಸುತ್ತವೆ, ವಿದ್ಯುತ್, ನೀರಾವರಿ ಮತ್ತು ಕೃಷಿಯೇತರ ಉದ್ಯಮಕ್ಕೆ ಬೆಂಬಲ ನೀಡುತ್ತದೆ, ಮನೆಯಲ್ಲಿಯೇ ನಲ್ಲಿ ನೀರು ಸಿಗುವುದರಿಂದ ವಿಶೇಷವಾಗಿ ಮಹಿಳೆಯರ ಸಮಯ ಉಳಿತಾಯವಾಗುತ್ತದೆ ಮತ್ತು ಸುಸಜ್ಜಿತ ಮನೆಯು ಕುಟುಂಬಕ್ಕೆ ಹೆಚ್ಚಿನ ಸ್ಥಿರತೆಯನ್ನು ಒದಗಿಸುತ್ತದೆ ಮತ್ತು ಒಂದು ಆಸ್ತಿಯಾಗಿರುತ್ತದೆ. ಕೃಷಿಯ ಮುಂದಿನ ಹಂತವು ಕೇವಲ ಹೆಚ್ಚಿನ ಉತ್ಪಾದನೆ ಮಾಡುವುದನ್ನು ಮೀರಿ ಸಾಗಲಿದೆ.
ಇದು ಹೆಚ್ಚಿನ ಮೌಲ್ಯದ, ಹೆಚ್ಚು ಪೌಷ್ಟಿಕ ಮತ್ತು ಹವಾಮಾನ ಬದಲಾವಣೆಯನ್ನು ತಡೆದುಕೊಳ್ಳಬಲ್ಲ ಕೃಷಿಯ ಬಗ್ಗೆ ಇರಲಿದೆ. ಸಿರಿಧಾನ್ಯಗಳಿಗೆ ನೀಡಲಾಗುತ್ತಿರುವ ಉತ್ತೇಜನವು ಈ ಕಾರ್ಯಸೂಚಿಗೆ ಸಹಜವಾಗಿ ಹೊಂದಿಕೊಳ್ಳುತ್ತದೆ. ಈ ನಿಟ್ಟಿನಲ್ಲಿ ನರೇಂದ್ರ ಮೋದಿ ಅವರ ಶ್ರಮಕ್ಕೆ ಸಮಾಜದ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ನಗರದ ಮಧ್ಯಮ ವರ್ಗದವರು ದೀರ್ಘ ಕಾಲದವರೆಗೆ ಮರೆತಿದ್ದ ಸಿರಿಧಾನ್ಯಗಳ ಹೆಚ್ಚುತ್ತಿರುವ ಜನಪ್ರಿಯತೆಯೇ ಇದಕ್ಕೆ ಸಾಕ್ಷಿ. ಬೇಳೆಕಾಳು ಗಳು ಮತ್ತು ಎಣ್ಣೆಕಾಳುಗಳ ಮೇಲಿನ ನವೀಕೃತ ಒತ್ತು ಕೂಡ ಅದೇ ರೀತಿ ಮಹತ್ವದ್ದಾಗಿದೆ.
ಸ್ವದೇಶೀ ಬೇಳೆಕಾಳುಗಳ ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿರುವ 11,440 ಕೋಟಿ ಮೌಲ್ಯದ ಬೇಳೆಕಾಳುಗಳಲ್ಲಿ ಆತ್ಮನಿರ್ಭರತೆಗಾಗಿನ ಮಿಷನ್, ಪೌಷ್ಟಿಕಾಂಶದ ಭದ್ರತೆ ಯನ್ನು ಸುಧಾರಿಸಲು, ಆಮದು ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಮಣ್ಣಿನ ಆರೋಗ್ಯವನ್ನು ಹೆಚ್ಚಿಸಲು ಕೊಡುಗೆ ನೀಡುತ್ತದೆ.
ರೈತನನ್ನು ‘ಅನ್ನದಾತ’ ಮತ್ತು ‘ಊರ್ಜಾದಾತ’ ಎನ್ನುವ ನರೇಂದ್ರ ಮೋದಿ ಅವರ ಪರಿಕಲ್ಪನೆಯು ಮತ್ತೊಂದು ಭರವಸೆಯ ಗಡಿಯನ್ನು ತೆರೆಯುತ್ತದೆ, ಅಲ್ಲಿ ರೈತರು ಸುಸ್ಥಿರ ಇಂಧನ ಕ್ರಾಂತಿಯಲ್ಲಿ ಪಾತ್ರವಹಿಸಬಹುದು. ರೈತರು ಆಹಾರ ಮತ್ತು ಸೌರಶಕ್ತಿ ಎರಡನ್ನೂ ಉತ್ಪಾದಿಸಿದಾಗ, ಅದು ಭಾರತದ ಇಂಧನ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುವುದರ ಜೊತೆಗೆ ಕೃಷಿ ಆದಾಯದ ಹೆಚ್ಚುವರಿ ಮೂಲವನ್ನು ಸೃಷ್ಟಿಸುತ್ತದೆ.
ನರೇಂದ್ರ ಮೋದಿ ಅವರ 25 ವರ್ಷಗಳ ಕೆಲಸವನ್ನು ಸಿಂಹಾವಲೋಕನ ಮಾಡಿದಾಗ, ಕೃಷಿ ಅಭಿವೃದ್ಧಿಯ ವಿಸ್ತರಿಸುತ್ತಿರುವ ಪರಿಕಲ್ಪನೆ ಕಾಣಿಸುತ್ತದೆ. ಗುಜರಾತ್ ರಾಜ್ಯದಲ್ಲಿ, ಅವರು ಕೃಷಿಯನ್ನು ತಳಮಟ್ಟದಿಂದ ಅರಿತುಕೊಂಡರು ಮತ್ತು ಭಾರತೀಯ ಕೃಷಿ ಬದಲಾಗಬಹುದು ಎಂಬುದನ್ನು ತೋರಿಸಿಕೊಟ್ಟರು. ಕಳೆದ ಹನ್ನೆರಡು ವರ್ಷಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ, ಆ ಕಲ್ಪನೆಗಳಲ್ಲಿ ಹೆಚ್ಚಿನವುಗಳನ್ನು ವಿಸ್ತರಿಸಲಾಗಿದೆ, ಜೊತೆಗೆ ಹೊಸ ಮತ್ತು ಭರವಸೆಯ ನೀತಿ ನಿರ್ದೇಶನಗಳೂ ಹೊರಹೊಮ್ಮಿವೆ.
(ಲೇಖಕರು ಐಸಿಆರ್‌ಐಇಆರ್ ಕೃಷಿ ವಿಭಾಗ ಪ್ರಾಧ್ಯಾಪಕರು, ಸಿಎಸಿಪಿ ಮಾಜಿ ಅಧ್ಯಕ್ಷರು, ಐಎಫ್ ಪಿಆರ್‌ಐ ನಿರ್ದೇಶಕರು, ಪಿಎಂಇಎಸಿ ಸದಸ್ಯರು