Rangaswamy Mookanahally Column: ಗಣಪನ ಮೂರ್ತಿ ಹಿಂದಿನ ಮಾರುಕಟ್ಟೆ ಸೈಕಾಲಜಿ !
ಕುಟುಂಬದ ಜನರ ಜೊತೆಗೆ ಬೆಳಕಿನ ಮಧ್ಯೆ ವಿವಿಧ ಭಂಗಿಯಲ್ಲಿ ಫೋಟೋಗಳನ್ನ ಕ್ಲಿಕ್ಕಿಸುತ್ತಾ, ತನ್ನ ಬದುಕಿನ ಖುಷಿಯ ಕ್ಷಣಗಳನ್ನ ತಮ್ಮ ಮೊಬೈಲಿನಲ್ಲಿ ಕೈದು ಮಾಡಿಕೊಳ್ಳುತ್ತ ಸಾಗುತ್ತಾರೆ. ಮೈಸೂರು ದಸರಾ ಸಮಯದಲ್ಲಿ ಇಲ್ಲಿನ ಜನ, ಗುಂಪು ಯಾವ ಕೆಲಸವನ್ನ ಮಾಡುತ್ತಾರೋ, ಬಾರ್ಸಿಲೋನಾದ ಜನ, ಗುಂಪು ಅದೇ ಕೆಲಸವನ್ನ ಮಾಡಿದ್ದು ನಾನು ಕಂಡಿದ್ದೇನೆ.
-
ವಿಶ್ವರಂಗ
ಮೈಸೂರು ದಸರಾ ವಿಶ್ವವಿಖ್ಯಾತಿ. ಇಲ್ಲಿನ ನಗರದ ಎಲ್ಲಾ ಪ್ರಮುಖ ರಸ್ತೆಗಳನ್ನ ಕೂಡ ದೀಪದಿಂದ ಅಲಂಕಾರ ಮಾಡಲಾಗುತ್ತದೆ. ಅದಕ್ಕೇ ಇರಬೇಕು, ಮೈಸೂರು ದಸರಾ ಎಷ್ಟೊಂದು ಸುಂದರ ಎಂದಿರಬೇಕು. ನಗರದ ವಿವಿಧ ಭಾಗಗಳಲ್ಲಿ ಬಹಳ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಸಾಯಂಕಾಲ ಆಗುವುದನ್ನ ಜನತೆ ಕಾಯುತ್ತಿರುತ್ತಾರೆ. ಇಡೀ ನಗರ ನವವಧುವಿನಂತೆ ಶೃಂಗಾರ ಗೊಂಡು ನಿಂತಿರುತ್ತದೆ. ಕೇವಲ ಮೈಸೂರು ಮಾತ್ರವಲ್ಲ, ಕರ್ನಾಟಕ ಮಾತ್ರವಲ್ಲ, ಭಾರತದ ವಿವಿಧ ರಾಜ್ಯಗಳಿಂದ, ಜಗತ್ತಿನ ಬಹಳಷ್ಟು ದೇಶಗಳಿಂದ ಮೈಸೂರು ದಸರಾ ನೋಡಲು ಜನರು ಬರುತ್ತಾರೆ.
ಮೈಸೂರು ವರ್ಷದ ಇತರ ದಿನಗಳಲ್ಲಿ ಕಾಣದ ಸಡಗರದ ಜೊತೆಗೆ ಜನಸಾಗರವನ್ನ ಕೂಡ ಕಾಣುತ್ತದೆ. ಬಾರ್ಸಿಲೋನಾದಲ್ಲಿ ಹದಿನೆಂಟಕ್ಕೂ ಹೆಚ್ಚಿನ ವರ್ಷದ ಬದುಕಿನಲ್ಲಿ ಥೇಟ್ ಇದೇ ಸಂಭ್ರಮವನ್ನ ನಾನು ಕ್ರಿಸ್ಮಸ್ ಹಬ್ಬದಲ್ಲಿ ಕಂಡಿದ್ದೇನೆ. ಬಾರ್ಸಿಲೋನಾ ನಗರದ ಎಲ್ಲಾ ಪ್ರಮುಖ ರಸ್ತೆಗಳನ್ನೂ ದೀಪದಿಂದ ಅಲಂಕಾರ ಮಾಡಲಾಗುತ್ತದೆ. ಕ್ರಿಸ್ಮಸ್ ಹಬ್ಬಕ್ಕೆ ಒಂದೆರಡು ತಿಂಗಳು ಮುಂಚಿನಿಂದಲೇ ರಸ್ತೆಗೆ ಎಲೆಕ್ಟ್ರಿಕ್ ದೀಪವನ್ನ ಕಟ್ಟುವ ಕೆಲಸ ಇಲ್ಲಿನ ಮುನಿಸಿಪಾಲಿಟಿ ಜನ ಶುರು ಮಾಡಿರುತ್ತಾರೆ. ಹಾಗೆ ನೋಡಲು ಹೋದರೆ ಬಾರ್ಸಿಲೋನಾ ಒಂದು ನಗರವಲ್ಲ, ಸ್ಪೇನ್‌ನ ಎಲ್ಲಾ ನಗರಗಳೂ ಕೂಡ ಕ್ರಿಸ್ಮಸ್ ಹಬ್ಬದ ಸಮಯದಲ್ಲಿ ಹೀಗೆ ಇರುತ್ತದೆ. ಸತ್ಯ ಹೇಳಬೇಕೆಂದರೆ ಪೂರ್ಣ ಯೂರೋಪು ಹಬ್ಬದ ವಾತಾವರಣದಲ್ಲಿ ಮಿಂದೇಳುತ್ತದೆ. ಎಡೆಯೂ ದೀಪz ಅಬ್ಬರ. ಇತ್ತೀಚಿನ ದಿನಗಳಲ್ಲಿ ಮುಸ್ಲಿಂ ದೇಶಗಳಲ್ಲಿ ಕೂಡ ಕ್ರಿಸ್ಮಸ್ ಹಬ್ಬದ ಸಮಯದಲ್ಲಿ ದೀಪಾಲಂಕಾರ ಮಾಡುವುದು ಸಾಮಾನ್ಯವಾಗಿದೆ.
ದುಬೈ ನಗರವನ್ನು ಕ್ರಿಸ್ಮಸ್ ಹಬ್ಬದಲ್ಲಿ ಕಣ್ತುಂಬಿಕೊಳ್ಳುವ ಮಜವೇ ಬೇರೆ. ಇರಲಿ. ಹಬ್ಬದ ಸಮಯದಲ್ಲಿ ವ್ಯಾಪಾರ ಕೂಡ ಎಡೆ ಜೋರು. ಮನುಷ್ಯ ಮೂಲದಲ್ಲಿ ಉಂಡುಟ್ಟು ಖುಷಿಯಾಗಿರ ಬೇಕು, ಅದು ಬಾರ್ಸಿಲೋನಾದಲ್ಲಿ ಜೀವಿಸುವ ವ್ಯಕ್ತಿಯಿರಬಹದು ಅಥವಾ ಮೈಸೂರಿನಲ್ಲಿ, ಅಥವಾ ಸೌದಿ ಅರೇಬಿಯಾ ದಲ್ಲಿ. ಹೀಗಾಗಿ ಹಬ್ಬ ಎನ್ನುವುದು ಖುಷಿಪಡಲು ಒಂದು ನೆಪ ಮಾತ್ರ.
ಇದನ್ನೂ ಓದಿ: Rangaswamy Mookanahalli Column: ಸಂಘರ್ಷವಿಲ್ಲದ ಬದುಕೇ ಇಲ್ಲಿಲ್ಲ!
ಕುಟುಂಬದ ಜನರ ಜೊತೆಗೆ ಬೆಳಕಿನ ಮಧ್ಯೆ ವಿವಿಧ ಭಂಗಿಯಲ್ಲಿ ಫೋಟೋಗಳನ್ನ ಕ್ಲಿಕ್ಕಿಸುತ್ತಾ, ತನ್ನ ಬದುಕಿನ ಖುಷಿಯ ಕ್ಷಣಗಳನ್ನ ತಮ್ಮ ಮೊಬೈಲಿನಲ್ಲಿ ಕೈದು ಮಾಡಿಕೊಳ್ಳುತ್ತ ಸಾಗುತ್ತಾರೆ. ಮೈಸೂರು ದಸರಾ ಸಮಯದಲ್ಲಿ ಇಲ್ಲಿನ ಜನ, ಗುಂಪು ಯಾವ ಕೆಲಸವನ್ನ ಮಾಡುತ್ತಾರೋ, ಬಾರ್ಸಿಲೋನಾದ ಜನ, ಗುಂಪು ಅದೇ ಕೆಲಸವನ್ನ ಮಾಡಿದ್ದು ನಾನು ಕಂಡಿದ್ದೇನೆ.
ನಮ್ಮೆ ಭಿನ್ನತೆಗಳ ನಡುವೆ ನಾವು ಖುಷಿಯನ್ನ ಹುಡಕುತ್ತೇವೆ. ನಮ್ಮ ಕುಟುಂಬ, ನಮ್ಮ ಪರಿವಾರ ಸುಖಿ ಯಾಗಿರಬೇಕು ಎಂದು ಬಯಸುತ್ತೇವೆ. ನಮ್ಮವರ ಸುಖ ಶಾಂತಿಗೆ ನಾವು ದುಡಿಯುತ್ತೇವೆ. ಒಟ್ಟಿನಲ್ಲಿ ಬದುಕಿನಲ್ಲಿ ನಾನು ಕಂಡುಕೊಂಡ ಸಾರ ಬಹಳ ಸರಳ. ಕ್ರಿಸ್ಮಸ್ ಅಥವಾ ದಸರಾ, ಈದ್ ಅಥವಾ ಹೋಳಿ, ದೀಪಾವಳಿ ಅಥವಾ ಮೆರ್ಸೆ ಹಬ್ಬ ಯಾವುದೇ ಇರಲಿ ಮನುಷ್ಯನಿಗೆ ಬೇಕಿರುವುದು ಉತ್ತಮ ಆಹಾರ, ಬಟ್ಟೆ ಮತ್ತು ಖುಷಿಯಾದ ವಾತಾವರಣ ಮಾತ್ರ.
ಇದು ಜಗತ್ತಿನ ಬಹು ಪಾಲು ಜನರ ಆಶಯ, ಮನಸ್ಸಿನ ಮಾತು. ಆದರೆ ಜಗತ್ತಿನೆಡೆ ಒಂದೆರಡು ಪ್ರತಿಶತ ಜನರಿಗೆ ಹೀಗೆ ಉಂಡುಟ್ಟು ನಲಿಯುವುದು ಸಹ್ಯವಾಗುವುದಿಲ್ಲ. ಈ ಒಂದೆರಡು ಪ್ರತಿಶತ ಜನರ ಮನೋ ವಿಕೃತಿಗೆ ಉಳಿದ 98 ಪ್ರತಿಶತವೇಕೆ ನೋವು ತಿನ್ನಬೇಕು? ಇದರ ಅರಿವು ಬಹುಪಾಲು ಜನರಿಗೆ ಆದ ದಿನ ವಿಶ್ವದಲ್ಲಿ ಶಾಂತಿ ನೆಲಸುತ್ತದೆ. ಆ ದಿನಕ್ಕಾಗಿ ಕಾಯೋಣ. ದಸರಾ ಹಬ್ಬಕ್ಕೆ ಮುನ್ನ ಗೌರಿ ಮತ್ತು ಗಣೇಶ ಹಬ್ಬ ಬರುತ್ತದೆ. ಸೆಪ್ಟೆಂಬರ್ ತಿಂಗಳಿಂದ ಡಿಸೆಂಬರ್‌ವರೆಗೂ ವ್ಯಾಪಾರಿ ಗಳಿಗೆ ನಿತ್ಯ ಹಬ್ಬ. ವರ್ಷದ ವಹಿವಾಟನ್ನು ಈ ನಾಲ್ಕೈದು ತಿಂಗಳಲ್ಲಿ ಅವರು ಮಾಡಿ ಮುಗಿಸು ತ್ತಾರೆ. ಈ ಬಾರಿ ಗೌರಿ ಮತ್ತು ಗಣೇಶ ಎರಡೂ ಒಂದೇ ದಿನ ಬಂದಿರುವ ಕಾರಣ ಮೈಸೂರು ನಗರದ ಬಹಳಷ್ಟು ರಸ್ತೆಗಳು ಜನರಿಂದ ತುಂಬಿ ತುಳುಕುತ್ತಿದ್ದವು.
ಭಾನುವಾರ ಸಂಜೆ ಗಣಪತಿ ಮೂರ್ತಿ ಜೊತೆಗೆ ಹೂವು ಮತ್ತು ಹಣ್ಣನ್ನು ಕೊಂಡು ತರಲು ನಾನು ಮತ್ತು ರಮ್ಯ ಹೋಗಿದ್ದೆವು. ಕಳೆದ ವರ್ಷಕ್ಕಿಂತ ಎಲ್ಲಾ ಪದಾರ್ಥಗಳೂ ದುಪ್ಪಟ್ಟು, ಕೆಲವೊಂದು ವಸ್ತುಗಳು ಅದಕ್ಕಿಂತ ಹೆಚ್ಚಿನ ಬೆಲೆ ಪಟ್ಟಿಯನ್ನು ಹೊತ್ತು ಕುಳಿತಿದ್ದವು. ಇದೇನಪ್ಪ ಈ ಮಟ್ಟದ ಹಣದುಬ್ಬರ ಎಂದುಕೊಂಡು ಗಣೇಶನ ಮೂರ್ತಿ ಖರೀದಿಸಲು ಮಾರಾಟ ಮಾಡುತ್ತಿದ್ದ ಒಬ್ಬಾಕೆ ಯನ್ನು ಬೆಲೆ ಕೇಳಿದೆ. ಆಕೆ 850 ರೂಪಾಯಿ ಎಂದರು. ಕಳೆದ ವರ್ಷ ಇದೇ ಗಾತ್ರದ ಗಣಪನಿಗೆ 350 ರೂಪಾಯಿ ಕೊಟ್ಟಿದ್ದೆ!
ಅದನ್ನು ರಮ್ಯಳಿಗೆ ಹೇಳಿದೆ. ವರ್ಷದ ಹಿಂದೆ ಕೊಂಡ ಗಣಪನ ಬೆಲೆ ಹೇಗೆ ನೆನಪಲ್ಲಿರುತ್ತದೆ? ಎನ್ನುವುದು ಅವಳ ಪ್ರಶ್ನೆ. ಹತ್ತು ಹೆಜ್ಜೆ ದೂರದಲ್ಲಿ ಇನ್ನೊಂದೆರಡು ಗಣಪನ ಮೂರ್ತಿ ಮಾಡುವ ಅಂಗಡಿಗಳು ಕಂಡವು. ದೀಪಾವಳಿ ಸಮಯದಲ್ಲಿ ಪಟಾಕಿ ಮಾರಲು ಇಡುವ ಅಂಗಡಿಗಳಂತೆ ಗಣಪನ ವಿಗ್ರಹಗಳನ್ನು ಇಟ್ಟು ಕೊಂಡ ಐದಾರು ಅಂಗಡಿಗಳು ಕಣ್ಣಿಗೆ ಬಿದ್ದವು. ಒಬ್ಬಾತ ಅದೇ ಗಣಪನ ಮೂರ್ತಿಗೆ 650 ಎಂದರು, ಇನ್ನೊಬ್ಬರು 600, ಹೀಗೆ ಕೊನೆಗೊಬ್ಬ 450 ಎಂದರು. ಅವರೆಲ್ಲರೂ ಒಂದೇ ಕಡೆಯಿಂದ ಗಣಪತಿ ಮೂರ್ತಿಯನ್ನು ತಂದಿzರೆ ಎನ್ನುವುದು ಗಣಪನನ್ನು ನೋಡಿದ ಕೂಡಲೇ ಗೊತ್ತಾಗುತ್ತಿತ್ತು.
450 ರೂಪಾಯಿ ಹೇಳಿದವನ ಬಳಿ ಜನ ಚೌಕಾಸಿ ಮಾಡದೆ ಕೊಂಡು ಹೋಗುತ್ತಿದ್ದರು. ಮನುಷ್ಯನ ಗುಣವೇ ಹೀಗೆ ಅಲ್ಲವೇ? 850 ರೂಪಾಯಿ ಎಲ್ಲಿ 450 ರೂಪಾಯಿ ಎಲ್ಲಿ? 850 ರೂಪಾಯಿ ಬಹಳ ಜಾಸ್ತಿ ಎನ್ನುವ ಮನೋಭಾವ ಗ್ರಾಹಕನಲ್ಲಿ ಉತ್ಪತ್ತಿಯಾಗುತ್ತದೆ. 450 ಎಂದ ತಕ್ಷಣ ಸೂಪರ್ ಆಫರ್ ಎನ್ನಿಸಿ ಬಿಡುತ್ತದೆ. ಹೀಗಾಗಿ ಜನ ಚೌಕಾಸಿ ಮಾಡದೆ 450 ರೂಪಾಯಿ ಕೊಟ್ಟು ಕೊಂಡು ಹೋಗುತ್ತಿದ್ದರು. ನಿಮಗೆ ಗೊತ್ತಿರಲಿ, ಇದನ್ನು ಹಾರ್ವರ್ಡ್‌ನಂತಹ ವಿಶ್ವವಿದ್ಯಾಲಯಗಳಲ್ಲಿ, ಬಿಸಿನೆಸ್ ಮಾಡುವುದು ಹೇಗೆ ಎನ್ನುವುದಕ್ಕೆ ವರ್ಷಾನುಗಟ್ಟಲೆ ಪಾಠ ಮಾಡುತ್ತಾರೆ. ಮನುಷ್ಯನ ಸೈಕಾಲಜಿ ಹೇಳಿಕೊಡುತ್ತಾರೆ.
ಮ್ಯಾನೇಜ್ಮೆಂಟ್ ಪರಿಭಾಷೆಯಲ್ಲಿ ಇದಕ್ಕೆ price anchoring ಎನ್ನಲಾಗುತ್ತದೆ. ಮನುಷ್ಯನ ಮೆದುಳು ಪ್ರಥಮ ಬಾರಿಗೆ ಕೇಳಿದ ಸಂಖ್ಯೆಯನ್ನು, ಪ್ರಥಮ ಬಾರಿಗೆ ಸಿಕ್ಕ ಮಾಹಿತಿಯನ್ನು ಬೇಸ್ ಆಗಿ ತೆಗೆದು ಕೊಳ್ಳುತ್ತದೆ. ಆ ನಂತರ ಸಿಕ್ಕ ಮಾಹಿತಿಯನ್ನು, ಸಂಖ್ಯೆಯನ್ನು ಅದು ಗೊತ್ತಿಲ್ಲದೇ ಪ್ರಥಮ ಬಾರಿಗೆ ಸಿಕ್ಕ ಸಂಖ್ಯೆಯೊಂದಿಗೆ ಹೋಲಿಕೆ ಮಾಡಿ ಸರಿ ತಪ್ಪುಗಳನ್ನು ನಿರ್ಧರಿಸುತ್ತದೆ. ಅದನ್ನು ರಮ್ಯಳಿಗೆ ಹೇಳಿದೆ.
350 ಅಥವಾ 400 ರೂಪಾಯಿಗಿಂತ ಹೆಚ್ಚು ಈ ಗಣಪನಿಗೆ ಕೊಡುವಂತಿಲ್ಲ ಎಂದಿದ್ದೆ. ಆಕೆ, ಮೈಸೂರಿನ ಗಲ್ಲಿಯೊಂದರಲ್ಲಿ ಗಣಪನ ಮೂರ್ತಿ ಮಾರುವವರಿಗೆ ಅಷ್ಟು ಬುದ್ಧಿ ಇರಲು ಸಾಧ್ಯವೇ? ನೀನು ಸ್ವಲ್ಪ ಹೆಚ್ಚು ಯೋಚನೆ ಮಾಡುತಿದ್ದೀಯ. 450 ಕೊಟ್ಟು ಸುಮ್ಮನೆ ತೆಗೆದು ಕೊಂಡು ಹೋಗೋಣ ಎಂದಳು. ಸರಿ, ಆದರೆ ಐದತ್ತು ನಿಮಿಷ ನಿಂತು ಜನರ ವರ್ತನೆಯನ್ನು ಗಮನಿಸೋಣ ಎನ್ನುವ ನನ್ನ ಮಾತಿಗೆ ಅವಳು ಒಪ್ಪಿದ್ದಳು. ಹದಿನೈದು ನಿಮಿಷದಲ್ಲಿ ಆತನ ಬಳಿ ಇದ್ದ ಗಣಪನ ಮೂರ್ತಿಗಳಲ್ಲಿ 80 ಪ್ರತಿಶತ ಮಾರಾಟ ವಾದವು. ಆತ ತನ್ನ ಮೊಬೈಲ್ ಮೂಲಕ ಯಾರಿಗೋ ಕರೆ ಮಾಡಿದ.
ಒಂದು ನಿಮಿಷದಲ್ಲಿ ಹತ್ತಾರು ಹುಡುಗರು ಗಣೇಶನ ಮೂರ್ತಿ ಸ್ಟಾಕ್ ತುಂಬಿಸಿದರು. ಅರಗಿಸಿ ಕೊಳ್ಳಲು ಕಷ್ಟ, ಆದರೆ ಕಣ್ಣಾರೆ ಕಂಡದ್ದು ಹೇಳಲೇ ಬೇಕು. 850 ರೂಪಾಯಿ ಬೆಲೆ ಹೇಳಿದ್ದ ಅಂಗಡಿಯ ಹೊಕ್ಕು ಅಲ್ಲಿದ್ದ ಸ್ಟಾಕ್‌ನಿಂದ ತಂದು ಇಲ್ಲಿಟ್ಟಿದ್ದರು!
ವರ್ಷಗಳ ಕಾಲ ಬಿಸಿನೆಸ್ ಸ್ಕೂಲ್‌ನಲ್ಲಿ ಕಲಿಸುವ ಮನೋಶಾಸ್ತ್ರ ಇವರಿಗೆ ಸಹಜವಾಗಿ ಸಿದ್ಧಿಸಿತ್ತು. ಇನ್ನೊಂದು ಸತ್ಯ ಅರಗಿಸಿಕೊಳ್ಳಲು ಕಷ್ಟವಾದದ್ದು, ಅಲ್ಲಿ ಅಂಗಡಿ ಹಾಕಿದವರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದರು! ಗಣಪನ ಮೂರ್ತಿ ಕೊಳ್ಳಲು ಹೋಗುವುದು ವಿಶ್ವವಾಣಿ ಅಂಕಣ ಬರಹಕ್ಕೆ ಸರಕು ಒದಗಿಸುತ್ತೆ ಎನ್ನುವ ಲವಲೇಶ ಐಡಿಯಾ ಇರಲಿಲ್ಲ. ಎಲ್ಲಾ ಬಡಾವಣೆಯಲ್ಲಿ ಇವತ್ತು ಮಾರವಾಡಿ ಕಮ್ಯುನಿಟಿಯವರು ಅಂಗಡಿ ಇಟ್ಟಿರುತ್ತಾರೆ. ಅವರೆಲ್ಲರ ಅಂಗಡಿಯಲ್ಲಿ ಬೆಲೆಗಳು ಸೇಮ್ ಇರುತ್ತದೆ. ಒಂದು ಅಂಗಡಿಯನ್ನು ಹೊಕ್ಕರೆ ಸಾಕು. ಅವರು ನಮಗೆ ಬೇಕಾಗಿರುವ ವಸ್ತುವನ್ನು ನಮ್ಮ ಬಳಿ ಇಲ್ಲ ಎಂದು ಎಂದಿಗೂ ಹೇಳುವುದಿಲ್ಲ.
ನಮ್ಮದೇ ಇನ್ನೊಂದು ಅಂಗಡಿಯಲ್ಲಿದೆ ಐದು ನಿಮಿಷ ಕುಳಿತುಕೊಳ್ಳಿ ತರಿಸಿಕೊಡುತ್ತೇನೆ, ಎನ್ನು ತ್ತಾರೆ. ನೀವು ಬೇಡ ಎಂದು ಹೋದರೂ ಬೆಲೆಯೇನೂ ಬದಲಾಗುವುದಿಲ್ಲ. ಎಲ್ಲೆಡೆ ಅವರ ಬೆಲೆ ಸೇಮ್ ಇರುತ್ತದೆ. ಅವರ ಅಂಗಡಿಗೆ ಬರುವ ಎಲ್ಲಾ ವಸ್ತುಗಳನ್ನು ಕೂಡ ಅವರು ಒಟ್ಟಾಗಿ ಕೊಂಡಿರುತ್ತಾರೆ. ಹೀಗಾಗಿ ಅವರ ಕಾ ಸೇಮ್ ಇರುತ್ತದೆ. ಹೀಗಾಗಿ ಆ ಕಮ್ಯುನಿಟಿ ಬಿಸಿನೆಸ್‌ನಲ್ಲಿ ಸೋಲು ಕಾಣುವುದಿಲ್ಲ. ಆದರೆ ಕನ್ನಡಿಗರು ಈ ಮಟ್ಟಕ್ಕೆ ಸೈಕಾಲಜಿ ಬಳಸಿದ್ದು ಕಂಡದ್ದು ಇದೇ ಮೊದಲ ಬಾರಿ!
ಕೊನೆಗೆ ಆ ಅಂಗಡಿಯವರು 350 ರುಪಾಯಿಗೆ ನನಗೆ ಗಣಪನ ಮೂರ್ತಿ ಕೊಟ್ಟರು. ಸಾರ್ ವರ್ಷ ಕ್ಕೊಮ್ಮೆ ಬರುವ ಹಬ್ಬ, ಅಲ್ಲದೆ ಹಬ್ಬದ ಸಮಯದಲ್ಲಿ ಜನ ಹೆಚ್ಚು ಯೋಚಿಸುವುದಿಲ್ಲ. ಅವರ ಬಳಿ ಹೆಚ್ಚು ವೇಳೆ ಕೂಡ ಇರುವುದಿಲ್ಲ. ಹೀಗಾಗಿ ನಾಲ್ಕು ಕಾಸು ಮಾಡಿಕೊಳ್ಳುತ್ತೇವೆ ಎನ್ನುವ ಮಾತನ್ನು ಆಡಿದರು. ಎಲ್ಲಾ ಸಮಯದಲ್ಲೂ ಈ ಸೈಕಾಲಜಿ ವರ್ಕ್ ಆಗುವುದಿಲ್ಲ ಸಾರ್, ಗ್ರಾಹಕರು ಕೂಡ ಬುದ್ಧಿವಂತರಾಗುತ್ತಿದ್ದಾರೆ ಎಂದರು.
ಅಂಗಡಿಯವರ ಮಾತು ನನ್ನನ್ನು ಗೆಳೆಯ ಅಮುದಾ ಗಣೇಶ್ ಜೊತೆಯಲ್ಲಿ ಮೆಜೆಸ್ಟಿಕ್‌ನಲ್ಲಿ ಶೂಸ್ ಕೊಳ್ಳಲು ಹೋದಾಗಿನ ಘಟನೆಯನ್ನು ನೆನಪಿಗೆ ತಂದಿತು. ರಸ್ತೆ ಬದಿಯಲ್ಲಿ ಬಟ್ಟೆ, ಶೂಸ್ ಮಾರು ವವರ ಸುತ್ತ ಒಂದಷ್ಟು ಜನ ಗ್ರಾಹಕರಂತೆ ನಿಂತಿರುತ್ತಿದ್ದರು. ಅವರಾರೂ ನಿಜವಾದ ಗ್ರಾಹಕರಲ್ಲ. ಅವರೆಲ್ಲರೂ ಆ ವ್ಯಾಪಾರಸ್ಥನ ಪರಿಚಿತರು. ಸಾವಿರ ರೂಪಾಯಿ ಶೂಸ್ 800 ರುಪಾಯಿಗೆ ಅವರು ಕೇಳುತ್ತಾರೆ. ವ್ಯಾಪರಸ್ಥ ಒಂದಷ್ಟು ಕೊಸರಾಡಿ ಕೊನೆಗೆ 800ಕ್ಕೆ ಶೂಸ್ ಮಾರುತ್ತಾರೆ. ಅಲ್ಲಿ ಶೂಸ್ ಕೊಳ್ಳಲು ಹೋದ ನಮ್ಮಂತಹ ನಿಜವಾದ ಗ್ರಾಹಕರು ಕೂಡ 800ಕ್ಕೆ ಕೊಡಿ ಎನ್ನುತ್ತೇವೆ. ಆತ ನೀವು ಅವರಿಗೆ ಕೊಟ್ಟದ್ದನ್ನು ನೋಡಿದ್ದೀರಿ, ನನಗೆ ಬೇರೆ ದಾರಿಯಿಲ್ಲ, ಹೀಗಾಗಿ ಕೊಡುತ್ತಿದ್ದೇನೆ. ನನಗೆ ಇದರಲ್ಲಿ ಲಾಭವೇ ಇಲ್ಲ ಎನ್ನುವ ಗೊಣಗಾಟ ಮಾಡಿ ಮಾರುತ್ತಾನೆ!
ಈ ಟ್ರಿಕ್ ಮೆಜೆಸ್ಟಿಕ್‌ಗೆ ಪ್ರಥಮ ಬಾರಿಗೆ ಹೋದವರಿಗೆ, ವರ್ಷಕ್ಕೊಮ್ಮೆ ಹೋಗುವವರಿಗೆ ಅರ್ಥ ವಾಗುವುದಿಲ್ಲ. ಆದರೆ ಅಮುದ ಗಣೇಶ್ ನುರಿತ ಗ್ರಾಹಕನಾಗಿದ್ದ. ನೀವು ನಂಬುವುದಿಲ್ಲ, ಅವತ್ತಿಗೆ ಸಾವಿರ ರೂಪಾಯಿ ಶೂಸ್ ಇನ್ನೂರು ರುಪಾಯಿಗೆ ಕೊಡಿಸಿದ್ದ! ಚೌಕಾಸಿ ಎನ್ನುವುದು ಮನಷ್ಯನ ಸಹಜ ಗುಣ. ಹೇಳಿದ ಬೆಲೆ ಕೊಟ್ಟು ತೆಗೆದುಕೊಂಡು ಬಂದರೆ ಮೋಸ ಹೋಗಿದ್ದೇವೆ ಎನ್ನುವ ಭಾವನೆ ಬಹಳಷ್ಟು ಭಾರತೀಯರಲ್ಲಿ ಮನೆ ಮಾಡಿದೆ. ಇದಕ್ಕೆ ಕಾರಣ ನಮ್ಮ ವ್ಯಾಪಾರಸ್ಥರು. ಹೇಗೂ ಚೌಕಾಸಿ ಮಾಡುತ್ತಾರೆ ಎನ್ನುವ ಕಾರಣಕ್ಕೆ ಅವರು ಹೆಚ್ಚಿನ ಬೆಲೆಯನ್ನು ಹೇಳುತ್ತಾರೆ.
ಇದು ಕೋಳಿ ಮೊದಲಾ ಅಥವಾ ಮೊಟ್ಟೆ ಮೊದಲಾ ಎನ್ನುವ ಪ್ರಶ್ನೆಯಂತೆ. ಯಾರು ಮೊದಲು ಇದನ್ನು ಶುರು ಮಾಡಿದರು ಎನ್ನುವುದು ಯಕ್ಷ ಪ್ರಶ್ನೆ. ಹೀಗಾಗಿ ಚೌಕಾಸಿ ಎನ್ನುವುದು ನಮ್ಮ ರಕ್ತದಲ್ಲಿ ಬಂದು ಬಿಟ್ಟಿದೆ. ಯೂರೋಪಿನ ಬಹಳಷ್ಟು ದೇಶಗಳಲ್ಲಿ ಕೂಡ ಚೌಕಾಸಿ ಮಾಡಬೇಕಾಗು ತ್ತದೆ.
ಕೆಲವೊಂದು ದೇಶಗಳಲ್ಲಿ ಚೌಕಾಸಿ ಮಾತೇ ಇಲ್ಲ. ಗ್ರಾಹಕನ ಮನಸ್ಸನ್ನು ಅರಿತುಕೊಂಡು ಅವನಿಗೆ ಮಾರಲು ದೊಡ್ಡ ದೊಡ್ಡ ಮಾರ್ಕೆಟಿಂಗ್ ಕಂಪನಿಗಳು ಹುಟ್ಟಿಕೊಂಡಿವೆ. ಗ್ರಾಹಕನಿಗೆ ಗೊತ್ತಿಲ್ಲದ ಸತ್ಯಗಳು ಅವಕ್ಕೆ ಗೊತ್ತಿವೆ. ಮಾರಾಟ ಎನ್ನುವುದು ಬೇಕಾದ ವಸ್ತುಗಳನ್ನು ಹಣ ಕೊಟ್ಟು ಕೊಳ್ಳುವ ಸರಳ ಪ್ರಕ್ರಿಯೆಯಾಗಿ ಉಳಿಯದೆ, ಅದೊಂದು ಮನಶ್ಶಾಸವಾಗಿ, ಅದನ್ನು ಅಧ್ಯಯನ ಮಾಡುವುದೇ ಸಾವಿರಾರು ಕೋಟಿ ರೂಪಾಯಿ ಉದ್ಯಮವಾಗಿ ಬೆಳೆದು ನಿಂತಿದೆ.