ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Leena Joshi Column: ಭಾರತದ ಬುದ್ಧಿಜೀವಿಗಳು ದೇಶವಿರೋಧಿಗಳೇ ?

ಆಂಟಿ ಗವರ್ನ್‌ಮೆಂಟ್ ಅಂದರೆ ಆಂಟಿ ಇಂಡಿಯಾ ಅಲ್ಲ. ಸರಕಾರವನ್ನು ವಿರೋಧಿಸುವುದು ಭಾರತ ವನ್ನು ವಿರೋಧಿಸುವುದಲ್ಲ. ಬಾಬೋ, ರಾಜದೀಪಗೆ ಒಂದು ಕಠಿಣ ಪ್ರಶ್ನೆ ಕೇಳಿದ್ದರು. ನಿಮ್ಮ ವಿರೋಧ ತತ್ವಾಧಾರಿತವೇ? ಅಥವಾ ವ್ಯಕ್ತಿ ಮತ್ತು ಪಕ್ಷಾಧಾರಿತವೇ? ಸರಕಾರ ಬದಲಾದಾಗ ನಿಮ್ಮ ಮಾನದಂಡ ಯಾಕೆ ಬದಲಾಗುತ್ತದೆ? ಒಂದು ಪಕ್ಷ ಅಧಿಕಾರದಲ್ಲಿದ್ದಾಗ ನೀವು ಒಂದು ಕೃತ್ಯವನ್ನು ಪ್ರಜಾಪ್ರಭುತ್ವದ ಅಪಾಯ ಎಂದು ಕರೆಯುತ್ತೀರಿ.

Leena Joshi Column: ಭಾರತದ ಬುದ್ಧಿಜೀವಿಗಳು ದೇಶವಿರೋಧಿಗಳೇ ?

-

Profile
Ashok Nayak Sep 5, 2026 7:20 AM

ಅಮೃತಕಾಲ

ಲೀನಾ ಜೋಶಿ

ಇಂಡಿಯಾ’ಸ್ ಇಂಟೆಲೆಕ್ಚುಯಲ್ ಕ್ಲಾಸ್ ಈಸ್ ಆಂಟಿ ಇಂಡಿಯಾ. ಒಂದು ವಾಕ್ಯ, ಭಾರತದ ಬೌದ್ಧಿಕ ವಲಯದ ಮೇಲೆ ಹಲವು ಪ್ರಶ್ನೆಗಳ ಬಿರುಗಾಳಿಯನ್ನು ಎಬ್ಬಿಸಿತು. 2022ರ ಇಂಡಿಯಾ ಟುಡೇ ಕಾನ್‌ಕ್ಲೇವ್‌ನಲ್ಲಿ ಆಸ್ಟ್ರೇಲಿಯಾದ ಸಮಾಜಶಾಸ್ತ್ರಜ್ಞ ಸಾಲ್ವರ್ಟೋ ಬಾಬೋ, ಪತ್ರಕರ್ತ ರಾಜದೀಪ್ ಸರ್ದೇಸಾಯಿ ಅವರೊಂದಿಗೆ ನಡೆದ ಸಂಭಾಷಣೆಯಲ್ಲಿ ಈ ಮಾತು ಹೇಳಿದರು. ಅವರ ಪ್ರಕಾರ ಭಾರತದ ಬೌದ್ಧಿಕ ವರ್ಗ ಜಾಗತಿಕ ವೇದಿಕೆಯಲ್ಲಿ ಭಾರತವನ್ನು ನೋಡುವಾಗ ಅದರ ವೈಫಲ್ಯಗಳಿಗೆ ಅತ್ಯಧಿಕ ಪ್ರಮಾಣದ ಒತ್ತು ನೀಡುತ್ತದೆ. ಘಟನೆ ನಡೆದು 4 ವರ್ಷಗಳಾದರೂ, ಅವರ ಮಾತು ಇಂದಿಗೂ ಪ್ರಸ್ತುತ.

ಇತ್ತೀಚೆಗಂತೂ ಟೀಕೆ ಅಸಭ್ಯ, ವೈಯಕ್ತಿಕ ನಿಂದನೆಗೆ ಸೀಮಿತವಾಗಿದೆ. ಭಾರತದ ಬಗ್ಗೆ ಜಗತ್ತು ಏನು ಯೋಚಿಸುತ್ತದೆ ಎಂಬುದನ್ನು ಯಾರು ನಿರ್ಧರಿಸುತ್ತಾರೆ? ವಿದೇಶಿ ಪತ್ರಕರ್ತರೇ? ಅಂತಾರಾಷ್ಟ್ರೀಯ ಸಂಸ್ಥೆಗಳೇ? ಭಾರತೀಯ ಸರಕಾರವೇ? ವಿರೋಧ ಪಕ್ಷಗಳೇ? ಅಥವಾ ಭಾರತದ ಬಗ್ಗೆ ಜಗತ್ತಿನ ಮುಂದೆ ಮಾತನಾಡುವ ನಮ್ಮದೇ ಪತ್ರಕರ್ತರು, ಪ್ರಾಧ್ಯಾಪಕರು, ಸಂಶೋಧಕರು ಮತ್ತು ಬುದ್ಧಿ ಜೀವಿಗಳೇ? ನಾವು ಜಗತ್ತಿಗೆ ಭಾರತದ ಸಂಪೂರ್ಣ ಚಿತ್ರಣವನ್ನು ತೋರಿಸುತ್ತಿದ್ದೇವೆಯೇ? ಅಥವಾ ನಮ್ಮ ರಾಜಕೀಯ ಅಸಮಾಧಾನವನ್ನು ಭಾರತದ ರಾಷ್ಟ್ರೀಯ ಚಿತ್ರಣದೊಂದಿಗೆ ಬೆರೆಸುತ್ತಿದ್ದೇ ವೆಯೇ? ಪ್ರಜಾಪ್ರಭುತ್ವದಲ್ಲಿ ಸರಕಾರವನ್ನು ಪ್ರಶ್ನಿಸುವುದು ಹಕ್ಕು.

ಪ್ರಧಾನಿಯನ್ನು ಟೀಕಿಸಬಹುದು, ಮುಖ್ಯಮಂತ್ರಿಯನ್ನು ಟೀಕಿಸಬಹುದು, ಸಂಸದರನ್ನು ಪ್ರಶ್ನಿಸ ಬಹುದು, ನ್ಯಾಯಾಲಯದ ತೀರ್ಪಿನ ಬಗ್ಗೆ ಭಿನ್ನಾಭಿಪ್ರಾಯ ಹೊಂದಬಹುದು, ಕಾನೂನನ್ನು ವಿರೋಧಿಸಬಹುದು- ಇವೆಲ್ಲವೂ ಪ್ರಜಾಪ್ರಭುತ್ವದ ಉಸಿರು. ಸಮಸ್ಯೆ ಶುರುವಾಗುವುದು ಸರಕಾರ ಮತ್ತು ದೇಶ ಒಂದೇ ಎಂಬ ಭ್ರಮೆ ಹುಟ್ಟಿದಾಗ. ಸರಕಾರದ ನೀತಿ ತಪ್ಪಾಗಬಹುದು, ಕಾನೂನು ಕೂಡ ಅನ್ಯಾಯವೆಸಗಬಹುದು, ಆಡಳಿತ ವಿಫಲವಾಗಬಹುದು. ಅದರಿಂದ ಭಾರತ ವಿಫಲ ರಾಷ್ಟ್ರವಾಗುವು ದಿಲ್ಲ. ಅದೇ ರೀತಿ, ಸರಕಾರದ ಸಾಧನೆಯನ್ನು ಒಪ್ಪಿಕೊಂಡರೆ ಸರಕಾರದ ಪ್ರಚಾರಕನಾಗುವುದಿಲ್ಲ.

ಇದನ್ನೂ ಓದಿ: Leena Joshi Column: ಒಬ್ಬಳಿಗೆ ನಿಗೂಢ ಅಂತ್ಯ, ಮತ್ತೊಬ್ಬಳಿಗೆ ವಿಶ್ವಗೌರವ

Anti ಗವರ್ನ್‌ಮೆಂಟ್ ಅಂದರೆ Anti ಇಂಡಿಯಾ ಅಲ್ಲ. ಸರಕಾರವನ್ನು ವಿರೋಧಿಸುವುದು ಭಾರತವನ್ನು ವಿರೋಧಿಸುವುದಲ್ಲ. ಬಾಬೋನ್ಸ್, ರಾಜದೀಪಗೆ ಒಂದು ಕಠಿಣ ಪ್ರಶ್ನೆ ಕೇಳಿದ್ದರು. ನಿಮ್ಮ ವಿರೋಧ ತತ್ವಾಧಾರಿತವೇ? ಅಥವಾ ವ್ಯಕ್ತಿ ಮತ್ತು ಪಕ್ಷಾಧಾರಿತವೇ? ಸರಕಾರ ಬದಲಾದಾಗ ನಿಮ್ಮ ಮಾನದಂಡ ಯಾಕೆ ಬದಲಾಗುತ್ತದೆ? ಒಂದು ಪಕ್ಷ ಅಧಿಕಾರದಲ್ಲಿದ್ದಾಗ ನೀವು ಒಂದು ಕೃತ್ಯವನ್ನು ಪ್ರಜಾಪ್ರಭುತ್ವದ ಅಪಾಯ ಎಂದು ಕರೆಯುತ್ತೀರಿ.‌ ಅದೇ ಕೃತ್ಯ ಮತ್ತೊಂದು ಪಕ್ಷ ಮಾಡಿದಾಗ? ಅದು ರಾಜಕೀಯದ ಅನಿವಾರ್ಯತೆ ಆಗಿ ಬಿಡುತ್ತದೆಯೇ? ಅಲ್ಲಿಯೇ ಸಮಸ್ಯೆ ಇರುವುದು. ಅದು ಎಡಪಂಥೀಯರಿಗಷ್ಟೇ ಅಲ್ಲ, ಬಲಪಂಥೀಯರಿಗೂ ಇದೇ ಕನ್ನಡಿ. ಫ್ರೀಡಮ್ ಹೌಸ್ ತನ್ನ 2026ರ ಫ್ರೀಡಮ್ ಇನ್ ದಿ ವರ್ಲ್ಡ್ ವರದಿಯಲ್ಲಿ ಭಾರತಕ್ಕೆ 100ರಲ್ಲಿ 64 ಅಂಕಗಳನ್ನು ನೀಡಿ, ‘ಭಾಗಶಃ ಫ್ರೀ’ ಎಂದು ವರ್ಗೀಕರಿಸಿದೆ.

ರಾಜಕೀಯ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳ ಹಲವು ಅಂಶಗಳ ಬಗ್ಗೆ ಅದು ಆತಂಕ ವ್ಯಕ್ತಪಡಿಸಿದೆ. ಈ ವರದಿಗಳನ್ನು ತಕ್ಷಣವೇ ಭಾರತ ವಿರೋಧಿ ಪಿತೂರಿ ಎಂದು ತಳ್ಳಿಹಾಕುವುದು ಸುಲಭ. ಅದೇ ರೀತಿ ಈ ವರದಿಗಳಲ್ಲಿರುವ ಪ್ರತಿಯೊಂದು ತೀರ್ಮಾನವನ್ನೂ ಅಂತಿಮ ಸತ್ಯವೆಂದು ಒಪ್ಪಿಕೊಳ್ಳಲೂ ಆಗುವುದಿಲ್ಲ. ಯಾಕೆಂದರೆ ಯಾವುದೇ ಸೂಚ್ಯಂಕದ ಹಿಂದೆ ಒಂದು ಮೆಥಡಾಲಜಿ ಇರುತ್ತದೆ. ಯಾವ ಪ್ರಶ್ನೆ ಕೇಳಬೇಕು? ಯಾರ ಅಭಿಪ್ರಾಯ ಪಡೆಯಬೇಕು? ಯಾವ ಘಟನೆಗೆ ಎಷ್ಟು ತೂಕ ಕೊಡಬೇಕು? ಯಾವುದನ್ನು ಸ್ವಾತಂತ್ರ್ಯದ ಸೂಚಕವೆಂದು ಪರಿಗಣಿಸಬೇಕು? ಈ ಎಲ್ಲವೂ ಅಂತಿಮ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತವೆ.

mike R

ಭಾರತದ ಬಗ್ಗೆ ಜಾಗತಿಕ ಮೌಲ್ಯಮಾಪನಕ್ಕೆ ಮಾಹಿತಿ ನೀಡುವ ಬೌದ್ಧಿಕ ಪರಿಸರವೇ ಒಂದು ನಿರ್ದಿಷ್ಟ ರಾಜಕೀಯ ದೃಷ್ಟಿಕೋನದಿಂದ ಪ್ರಭಾವಿತವಾಗಿದ್ದರೆ? ಫಲಿತಾಂಶ ಹೇಗಿರಬಹುದು? ಭಾರತ 140 ಕೋಟಿ ಜನರು ವಾಸಿಸುವ ದೇಶ. ಕೆಲವೇ ಕೆಲವು ಇಂಗ್ಲಿಷ್ ಮಾತನಾಡುವ ಬುದ್ಧಿಜೀವಿ ಗಳಿಂದ ದೇಶದ ಪರಿಸ್ಥಿತಿ ಯನ್ನು ಅವಲೋಕಿಸಲು ಸಾಧ್ಯವಿಲ್ಲ. ಅಂದ ಹಾಗೆ ಭಾರತವನ್ನು ಹೊಗಳಿದರೆ ಸಮಸ್ಯೆಗಳು ಮಾಯ ವಾಗುವುದಿಲ್ಲ. ರಾಷ್ಟ್ರವಾದಕ್ಕೂ ಆತ್ಮಪರಿಶೀಲನೆ ಅಗತ್ಯ. ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯದ ಬಗ್ಗೆ ಪ್ರಶ್ನೆಗಳಿದ್ದರೆ ಮಾತನಾಡಬೇಕು.

ಧಾರ್ಮಿಕ ಹಿಂಸಾಚಾರ ನಡೆದರೆ ಖಂಡಿಸಬೇಕು. ರಾಜಕೀಯ ಧ್ರುವೀಕರಣ ಹೆಚ್ಚಾದರೆ ಎಚ್ಚರಿಸ ಬೇಕು. ವಿಶ್ವವಿದ್ಯಾಲಯಗಳ ಸ್ವಾತಂತ್ರ್ಯದ ಬಗ್ಗೆ ಆತಂಕವಿದ್ದರೆ ಚರ್ಚಿಸಬೇಕು. ಸರಕಾರದ ತಪ್ಪನ್ನು ಸರಕಾರದ ತಪ್ಪು ಎಂದೇ ಕರೆಯಬೇಕು. ಆದರೆ ಇನ್ನೊಂದು ಕಡೆ ಭಾರತದ ಪ್ರತಿ ಯೊಂದು ಸಮಸ್ಯೆಯನ್ನು ಭಾರತದ ಸಂಪೂರ್ಣ ಪರಿಚಯವನ್ನಾಗಿ ಮಾಡುವುದು ಕೂಡ ಬೌದ್ಧಿಕ ಪ್ರಾಮಾಣಿಕತೆಯಲ್ಲ. ಒಂದು ದೇಶವನ್ನು ಅದರ ಕೆಟ್ಟ ಸುದ್ದಿಗಳಿಂದ ಮಾತ್ರ ಅಳೆಯುವುದು ಎಷ್ಟು ತಪ್ಪೋ, ಅದರ ಒಳ್ಳೆಯ ಸುದ್ದಿಗಳನ್ನು ನಿರಂತರವಾಗಿ ಪ್ರಚಾರ ಎಂದು ತಳ್ಳಿಹಾಕುವುದೂ ಅಷ್ಟೇ ತಪ್ಪು.

ಹಾಗಾದರೆ ಭಾರತದ ಯಶಸ್ಸಿನ ಕಥೆಯನ್ನು ಯಾರು ಹೇಳಬೇಕು? ವಿಶ್ವ ಬ್ಯಾಂಕ್‌ನ ಪ್ರಸ್ತುತ ದೇಶವಾರು ಪ್ರೊಫೈಲ್ ಪ್ರಕಾರ, 2000ರಿಂದ ಭಾರತದ ಆರ್ಥಿಕತೆ ವಾಸ್ತವ ಮೌಲ್ಯದಲ್ಲಿ ಸುಮಾರು ನಾಲ್ಕು ಪಟ್ಟು ವಿಸ್ತರಿಸಿದೆ ಮತ್ತು ತಲಾ ಆದಾಯವು ಸುಮಾರು ಮೂರು ಪಟ್ಟು ಹೆಚ್ಚಾಗಿದೆ. ಇದು ಸರಕಾರದ ಜಾಹೀರಾತು ಅಲ್ಲ, ಅದು ಅಂಕಿಅಂಶ. ಭಾರತದ ಡಿಜಿಟಲ್ ಸಾರ್ವಜನಿಕ ಮೂಲ ಸೌಕರ್ಯ, ತಂತ್ರಜ್ಞಾನ, ಬಾಹ್ಯಾಕಾಶ ಮತ್ತು ಸ್ಟಾರ್ಟ್‌ಅಪ್ ಕ್ಷೇತ್ರಗಳ ಬೆಳವಣಿಗೆಯೂ ವಾಸ್ತವ.

ಜುಲೈ 2026ನಲ್ಲಿ ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆಯ ವಿಕ್ರಮ್ 1 ಕಕ್ಷೆ ತಲುಪಿದ್ದು ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಗಮನಾರ್ಹ ಮೈಲಿಗಯಿತು. ಇವುಗಳ ಬಗ್ಗೆ ಮಾತನಾಡಿದರೆ ನಾವು ರಾಷ್ಟ್ರೀಯ ತಾವಾದಿ ಪ್ರಚಾರಕರು ಆಗುತ್ತೇವೆಯೇ? ಇಲ್ಲ! ಒಳ್ಳೆಯ ಸುದ್ದಿ ಬಂದರೆ- ಇದೇನೂ ಗ್ರೇಟ್ ಸಾಧನೆಯಲ್ಲ, ಕೆಟ್ಟ ಸುದ್ದಿ ಬಂದರೆ- ನೋಡಿ, ಭಾರತ ಹೀಗೆಯೇ ಇದೆ.

ಒಂದು ಬೌದ್ಧಿಕ ವರ್ಗವು ನಿರಂತರವಾಗಿ ದೇಶದ ದೋಷಗಳನ್ನೇ ಹುಡುಕುತ್ತಾ, ಸಾಧನೆಗಳನ್ನು ಮಾತ್ರ ಸರಕಾರದ ಪ್ರೊಪಗಾಂಡ ಎಂದು ತಳ್ಳಿ ಹಾಕುತ್ತಿದ್ದರೆ, ಅದು ವಿಮರ್ಶೆಯಲ್ಲ. ದೇಶವನ್ನು ಟೀಕಿಸುವ ಹಕ್ಕು ಬೇಕಾದರೆ, ದೇಶದ ಸಾಧನೆಗಳನ್ನು ಒಪ್ಪಿಕೊಳ್ಳುವ ಪ್ರಾಮಾಣಿಕತೆಯೂ ಬೇಕು. ಅದೇ ರೀತಿ ದೇಶದ ಸಾಧನೆಗಳನ್ನು ಹೊಗಳುವ ಹಕ್ಕು ಬೇಕಾದರೆ, ಅದರ ವೈಫಲ್ಯಗಳನ್ನು ಒಪ್ಪಿಕೊಳ್ಳುವ ಧೈರ್ಯವೂ ಬೇಕು. ಬ್ರಿಟಿಷರ ಕಾಲದಲ್ಲಿ ಭಾರತವನ್ನು ಹಿಂದುಳಿದ, ಅಸಂಸ್ಕೃತ ಮತ್ತು ಸ್ವಯಂಆಡಳಿತಕ್ಕೆ ಅಸಮರ್ಥ ಸಮಾಜವೆಂದು ಚಿತ್ರಿಸುವುದು ವಸಾಹತುಶಾಹಿ ಆಡಳಿತಕ್ಕೆ ನೈತಿಕ ಸಮರ್ಥನೆ ನೀಡುವ ಒಂದು ಮಾರ್ಗವಾಗಿತ್ತು. ಸ್ವಾತಂತ್ರ್ಯಾನಂತರ ಭಾರತ ತನ್ನದೇ ಕಥೆಯನ್ನು ಬರೆಯಬೇಕಿತ್ತು.

ದುರದೃಷ್ಟವಶಾತ್ ಇಂದಿಗೂ ನಾವು ಹೊರಗಿನ ಪ್ರಮಾಣಪತ್ರಕ್ಕಾಗಿ ಕಾಯುತ್ತೇವೆ. ಪಾಶ್ಚಾತ್ಯ ಸಂಸ್ಥೆ ಭಾರತವನ್ನು ಹೊಗಳಿದರೆ, ಜಗತ್ತು ಭಾರತವನ್ನು ಒಪ್ಪಿಕೊಂಡಿದೆ. ಅದೇ ಸಂಸ್ಥೆ ಟೀಕಿಸಿದರೆ, ಅವರಿಗೆ ಭಾರತ ಅರ್ಥವಾಗುವುದಿಲ್ಲ. ಎರಡೂ ಅತಿರೇಕ. ಜಗತ್ತಿನ ವರದಿಗಳನ್ನು ಓದಬೇಕು, ಅವುಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಆದರೆ ಅಂತಿಮ ಮಾನದಂಡ- ನಮ್ಮದೇ ಸಂಶೋಧನೆ, ನಮ್ಮದೇ ವಾಸ್ತವಾಂಶ ಮತ್ತು ನಮ್ಮದೇ ಅನುಭವ. ಭಾರತದ ಬಗ್ಗೆ ಜಗತ್ತಿನ ಮುಂದೆ ಮಾತನಾಡುವಾಗ ಬುದ್ಧಿಜೀವಿಗಳು ಸಂಪೂರ್ಣ ಸತ್ಯವನ್ನು ಹೇಳುವುದಿಲ್ಲ.

ಭಾರತದ ಬಡತನದ ಬಗ್ಗೆ ಮಾತನಾಡುತ್ತಾರೆ, ಬಡತನ ಕಡಿಮೆಯಾಗಿರುವುದನ್ನೂ ಹೇಳುವುದಿಲ್ಲ. ಧಾರ್ಮಿಕ ಸಂಘರ್ಷ ದ ಬಗ್ಗೆ ಮಾತನಾಡುತ್ತಾರೆ, ಕೋಟ್ಯಂತರ ಜನರು ಶಾಂತಿಯುತವಾಗಿ ಸಹಬಾಳ್ವೆ ನಡೆಸುತ್ತಿರುವು ದನ್ನೂ ಹೇಳುವುದಿಲ್ಲ. ಜೊತೆಗೆ, ರಾಷ್ಟ್ರವಾದಿಗಳೂ ತಮ್ಮನ್ನು ತಾವೇ ಪರೀಕ್ಷಿಸಿಕೊಳ್ಳಬೇಕು, ಭಾರತ ವಿರೋಧಿ ಎಂಬ ಪದವನ್ನು ಎಲ್ಲರ ಮೇಲೂ ಎಸೆಯಲು ಆರಂಭಿಸಿ ದರೆ ಅದರ ಅರ್ಥವೇ ನಾಶವಾಗುತ್ತದೆ.

ಸರಕಾರವನ್ನು ಟೀಕಿಸಿದವನು ಭಾರತ ವಿರೋಧಿಯಲ್ಲ, ಬಡತನದ ಬಗ್ಗೆ ಬರೆದವನು ಭಾರತ ವಿರೋಧಿ ಯಲ್ಲ, ಧಾರ್ಮಿಕ ಹಿಂಸಾಚಾರವನ್ನು ಖಂಡಿಸಿದವನು ಭಾರತ ವಿರೋಧಿಯಲ್ಲ, ಸಂವಿಧಾನವನ್ನು ಬಲಪಡಿಸಬೇಕು ಎಂದವನು ಭಾರತ ವಿರೋಧಿಯಲ್ಲ. ದೇಶವನ್ನು ಉತ್ತಮ ಗೊಳಿಸಲು ಮಾಡುವ ವಿಮರ್ಶೆ ದೇಶದ್ರೋಹವಲ್ಲ. ನಿಜವಾದ ಪ್ರಶ್ನೆ ಏನೆಂದರೆ ಯಾರಾದರೂ ನಿರಂತರವಾಗಿ ಸುಳ್ಳು, ಆಯ್ದ ಮಾಹಿತಿ ಅಥವಾ ದ್ವೇಷಪೂರಿತ ಕಥನದ ಮೂಲಕ ಭಾರತದ ವಿರುದ್ಧ ಅಭಿಪ್ರಾಯ ನಿರ್ಮಿಸುತ್ತಿzರೆಯೇ? ಅಥವಾ ಅವರು ದೇಶದ ಸಮಸ್ಯೆಗಳನ್ನು ಸರಿಪಡಿಸಲು ವಿಮರ್ಶಿಸುತ್ತಿದ್ದಾರೆಯೇ? ಈ ವ್ಯತ್ಯಾಸವನ್ನು ಗುರುತಿಸುವಷ್ಟು ಪ್ರಬುದ್ಧತೆ ರಾಷ್ಟ್ರವಾದಕ್ಕೂ ಬೇಕು.

ಬಾಬೋ, ಭಾರತದ ಬುದ್ಧಿಜೀವಿ ವರ್ಗದ ಮುಂದೆ ಒಂದು ಕನ್ನಡಿ ಹಿಡಿದಿದ್ದಾರೆ. ನಮ್ಮಲ್ಲಿ ರಾಜಕೀಯ ಪೂರ್ವಾಗ್ರಹ ಅಂಟು ರೋಗದಂತಾಗಿದೆ. ಒಂದು ಸರಕಾರದ ತಪ್ಪನ್ನು ಪ್ರಜಾಪ್ರಭುತ್ವ ದ ಅಪಾಯ ಎಂದು ಕರೆಯುವವರು, ಅದೇ ತಪ್ಪನ್ನು ಇನ್ನೊಂದು ಸರಕಾರ ಮಾಡಿದಾಗ ಮೌನ ವಾಗಿ ಬಿಡುತ್ತಾರೆ. ಒಂದು ಪಕ್ಷದ ಹಿಂಸಾಚಾರವನ್ನು ಖಂಡಿಸುವವರು, ಮತ್ತೊಂದು ಪಕ್ಷದ ಹಿಂಸಾಚಾರಕ್ಕೆ ಕಾರಣ ಹುಡುಕಿ ಅದನ್ನು ಸಮರ್ಥಿಸುತ್ತಾರೆ. ಮುಸ್ಲಿಂ ಸಮುದಾಯದ ತಪ್ಪನ್ನು ಸಾಮಾಜಿಕ ಪ್ರತಿಕ್ರಿಯೆ ಎಂದು ಕರೆಯುತ್ತಾ, ಹಿಂದೂ ಸಮುದಾಯದ ತಪ್ಪನ್ನು ದೇಶದ ಆತ್ಮದ ಮೇಲೆ ದಾಳಿ ಎಂದು ಕರೆಯುತ್ತಾರೆ.

ಬೌದ್ಧಿಕತೆ ಎಂದರೆ ಎಡದಲ್ಲಿರುವುದಲ್ಲ. ಬಲದಲ್ಲಿರುವುದಲ್ಲ. ಒಂದೇ ಮಾನದಂಡವನ್ನು ಎಲ್ಲರಿಗೂ ಅನ್ವಯಿಸುವುದೇ ನಿಜವಾದ ಬೌದ್ಧಿಕತೆ. ಭಾರತದ ಶಕ್ತಿ ಅದರ ಸೇನೆಯಲ್ಲಿ ಮಾತ್ರವಿಲ್ಲ, ಆರ್ಥಿಕತೆಯಲ್ಲಿ ಮಾತ್ರವಿಲ್ಲ, ತಂತ್ರeನದಲ್ಲೂ ಮಾತ್ರವಿಲ್ಲ. ಭಾರತದ ನಿಜವಾದ ಶಕ್ತಿ ಭಿನ್ನಾಭಿಪ್ರಾಯಗಳ ನಡುವೆಯೂ ಒಂದೇ ರಾಷ್ಟ್ರವಾಗಿ ಉಳಿಯುವ ಸಾಮರ್ಥ್ಯದಲ್ಲಿದೆ. ಸರಕಾರದ ಬೆಂಬಲಿಗನಿಗೂ ಈ ದೇಶ ಸೇರಿದೆ, ಸರಕಾರದ ಕಟು ವಿಮರ್ಶಕನಿಗೂ ಈ ದೇಶ ಸೇರಿದೆ.

ಎಡಪಂಥೀಯನಿಗೂ ಈ ದೇಶ ಸೇರಿದೆ, ಬಲಪಂಥೀಯನಿಗೂ ಈ ದೇಶ ಸೇರಿದೆ. ಅವರ ನಡುವಿನ ಸಂಘರ್ಷ, ವಾದ, ಭಿನ್ನಾಭಿಪ್ರಾಯ ಇವೆಲ್ಲವೂ ಪ್ರಜಾಪ್ರಭುತ್ವದ ಭಾಗ. ಆದರೆ ಒಂದು ನಿಯಮ ಮಾತ್ರ ಇರಬೇಕು- ಸತ್ಯವನ್ನು ತಿರುಚಬಾರದು ಮತ್ತು ದೇಶದ ಮಾನವನ್ನು ಹರಾಜಿಗಿಡಬಾರದು. ಒಂದು ಸಮಾಜ ತನ್ನ ಬಗ್ಗೆ ಯಾವ ಕಥೆಯನ್ನು ನಿರಂತರವಾಗಿ ಹೇಳಿಕೊಳ್ಳುತ್ತದೆ ಎಂಬುದು ಮುಖ್ಯ. ನಾವು ನಮ್ಮ ವೈಫಲ್ಯಗಳನ್ನು ಮಾತ್ರ ಹೇಳಿಕೊಂಡರೆ, ನಿಧಾನವಾಗಿ ನಮ್ಮ ಯಶಸ್ಸುಗಳ ಮೇಲಿನ ನಂಬಿಕೆ ಯನ್ನು ಕಳೆದುಕೊಳ್ಳಬಹುದು.

ನಾವು ನಮ್ಮ ಯಶಸ್ಸುಗಳನ್ನು ಮಾತ್ರ ಹೇಳಿಕೊಂಡರೆ, ನಮ್ಮ ವೈಫಲ್ಯಗಳನ್ನು ಸರಿಪಡಿಸುವ ಸಾಮರ್ಥ್ಯ ಕಳೆದುಕೊಳ್ಳಬಹುದು. ಹೀಗಾಗಿ ದೇಶಕ್ಕೆ ಬೇಕಾಗಿರುವುದು ಹೊಗಳಿಕೆಯ ಕಥೆಯೂ ಅಲ್ಲ, ದೂಷಣೆಯ ಕಥೆಯೂ ಅಲ್ಲ. ದೇಶಕ್ಕೆ ಬೇಕಿರುವುದು ಸತ್ಯ ಕಥೆ. ಭಾರತದಲ್ಲಿ ಸಮಸ್ಯೆಗಳಿವೆ, ಅದನ್ನು ನಿರಾಕರಿಸುವುದರಿಂದ ಸಮಸ್ಯೆಗಳು ಮಾಯವಾಗುವುದಿಲ್ಲ. ಬಡತನವಿದೆ, ಅಸಮಾನತೆ ಯಿದೆ, ಸಾಮಾಜಿಕ ಸಂಘರ್ಷ ಗಳಿವೆ, ಇವೆಲ್ಲವನ್ನೂ ಹೇಳಬೇಕು. ಆದರೆ ಅದೇ ಕನ್ನಡಿಯಲ್ಲಿ ಭಾರತದ ಮತ್ತೊಂದು ಮುಖವೂ ಕಾಣಬೇಕು.

ಆರ್ಥಿಕ ಬೆಳವಣಿಗೆ, ಡಿಜಿಟಲ್ ಪರಿವರ್ತನೆ. ವಿಜ್ಞಾನ ಮತ್ತು ತಂತ್ರಜ್ಞಾನ, ಬಾಹ್ಯಾಕಾಶ ಕ್ಷೇತ್ರದ ಸಾಧನೆ, ಹೊಸ ಉದ್ಯಮಶೀಲತೆ, ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಭಾರತದ ಪ್ರಭಾವ. ಒಂದು ಮುಖವನ್ನು ಮಾತ್ರ ತೋರಿಸುವ ಕನ್ನಡಿ ಕೂಡ ಸತ್ಯ ಹೇಳುವುದಿಲ್ಲ, ಅದು ಸತ್ಯದ ಒಂದು ತುಣುಕನ್ನು ಮಾತ್ರ ಹೇಳುತ್ತದೆ ಮತ್ತು ಅರ್ಧಸತ್ಯವು ಕೆಲವೊಮ್ಮೆ ಸುಳ್ಳಿಗಿಂತ ಹೆಚ್ಚು ಅಪಾಯಕಾರಿ.