Srivathsa Joshi Column: ಚ್ಯೂಯಿಂಗ್ʼಗಮ್ಮ ಗಮ್ಮಾಡಿಸ್ತಾವ ಹಲ್ಲಿಗೀ, ಮತ್ತ ಗ್ವಾಡಿಗೀ...
ನ್ಯೂಯಾರ್ಕ್ ನಗರದ ಥಾಮಸ್ ಆಡಮ್ಸ್ ಜೂನಿಯರ್ ಎಂಬ ಸಂಶೋಧಕರು ಚಿಕಲ್‌ನಿಂದ ರಬ್ಬರ್ ತಯಾರಿಸಲೆತ್ನಿಸಿದಾಗ ಅದು ರಬ್ಬರಿನಂತೆ ಗಟ್ಟಿಯಾಗಲೇ ಇಲ್ಲ. ಅದನ್ನು ಕುದಿಸಿ ಚ್ಯೂ ಯಿಂಗ್ ಗಮ್ ತಯಾರಿಸಿ 1870ರಲ್ಲಿ ಮಾರುಕಟ್ಟೆಗೆ ತಂದರು. ಹೀಗೆ ಪ್ರಪಂಚಕ್ಕೆ ಗಮ್ ಮೆಲ್ಲುವ ಚಟ ಕಲಿಸಿದ ಕೀರ್ತಿಗೆ ಪಾತ್ರರಾದರು. ಬಬಲ್‌ಗಮ್ ಮೊದಲ ಬಾರಿಗೆ 1906ರಲ್ಲಿ ತಯಾರಾಯಿತಾದರೂ ಅದು ಪರಿಪೂರ್ಣ ಗೊಂಡು, ಮಾರಾಟಕ್ಕೆ ಬಂದದ್ದು 1928ರ ವೇಳೆಗೆ.
-
ತಿಳಿರುತೋರಣ
ಅನಾದಿಕಾಲದಿಂದಲೂ ಮನುಷ್ಯನಿಗೆ ಬಾಯಿಯಲ್ಲಿ ಏನಾದರೊಂದು ಅಗಿಯುತ್ತ ಜಗಿಯುತ್ತ ಇರುವ ಅಭ್ಯಾಸ ಇತ್ತೆಂದು ಕಾಣುತ್ತದೆ, ಅದರ ಆಧುನಿಕ ರೂಪವೇ ಚ್ಯೂಯಿಂಗ್ ಗಮ್. ಚ್ಯೂಯಿಂಗ್ ಗಮ್ ಬಳಕೆ ಶುರುವಾದದ್ದು ಯಾವಾಗ? ಅಂತೊಂದು ಪ್ರಶ್ನೆ ದಶಕಗಳ ಹಿಂದೆ ಸುಧಾದಲ್ಲಿ ‘ಚೌ ಚೌ ಚೌಕಿ’ ಅಂಕಣದಲ್ಲಿ ಬಂದಿತ್ತು. ಅದು ನನಗೆ ಚೆನ್ನಾಗಿ ನೆನಪಿರಲಿಕ್ಕೆ ಕಾರಣ ವಿದೆ: ಆ ಪ್ರಶ್ನೆಗೆ ತಮಾಷೆ ಉತ್ತರ ಕಳುಹಿಸಿದವರಲ್ಲಿ ನಾನೂ ಇದ್ದೆ!
ನನ್ನ ಆ ಉತ್ತರ ಪ್ರಕಟವಾಗಿರಲಿಲ್ಲವಾದರೂ ಚೌ ಚೌ ಚೌಕಿಯ ಬೇರೆ ಹಲವಾರು ಪ್ರಶ್ನೆಗಳಿಗಾಗಿನ ತಮಾಷೆ ಉತ್ತರಗಳಲ್ಲಿ ನನ್ನವೂ ಪ್ರಕಟವಾಗಿವೆ, ಹಾಗಾಗಿ ಬೇಸರವೇನಿಲ್ಲ. ಆಮೇಲೆ ಆ ಅಂಕಣವು ‘ನಗ್‌ನಗ್ತಾ ವಿಜ್ಞಾನ’ ಎಂಬ ಶೀರ್ಷಿಕೆಯ ಪುಸ್ತಕರೂಪದಲ್ಲಿ ಬಂತು. ಮೊನ್ನೆ ಅದನ್ನೊಮ್ಮೆ ಹೀಗೇ ತೆರೆದು ಓದುತ್ತಿದ್ದಾಗ ಚ್ಯೂಯಿಂಗ್ ಗಮ್ ಜಾತಕ ಕಣ್ಣಿಗೆ ಬಿತ್ತು.
ಪ್ರಶ್ನೆಗೆ ಅಂಕಣಕಾರರು (ಡಾ.ಟಿ.ಆರ್.ಅನಂತರಾಮು ಮತ್ತು ಡಾ.ಶರಣಬಸವೇಶ್ವರ ಅಂಗಡಿ) ಕೊಟ್ಟಿದ್ದ ಮೂಲ ಉತ್ತರ ಏನಿತ್ತೆಂದು ನಿಮ್ಮ ಓದಿಗೆ ಇಲ್ಲಿ ದಾಖಲಿಸಿದ್ದೇನೆ: “ಪ್ರಾಚೀನ ಗ್ರೀಕರು, ಮ್ಯಾಸ್ಟಿಕ್ ಮರದ ತೊಗಟೆಯ ರಾಳ (ಅಂಟು ಪದಾರ್ಥ)ದಿಂದ ಮಾಡಿದ ಮ್ಯಾಚ್ ಎಂಬ ಗಮ್ ಅಗಿಯುತ್ತಿದ್ದರು.
ಸಾವಿರ ವರ್ಷಗಳಿಗೂ ಹಿಂದೆ ದಕ್ಷಿಣ ಮೆಕ್ಸಿಕೋದ ಮಾಯಾ ಜನಾಂಗ, ಮಧ್ಯ ಅಮೆರಿಕಾದಲ್ಲಿನ ಸಪೋಡಿಲ್ಲಾ ಮರದ ತೊಗಟೆಯಿಂದ ಪಡೆದ ‘ಚಿಕಲ್’ ಗಮ್ ಅಗಿಯುತ್ತಿದ್ದರಂತೆ. ಕಾಡು ಸಪೋಡಿಲ್ಲಾ ಮರದ ತೊಗಟೆಯನ್ನು ಕತ್ತರಿಸಿ, ಅಲ್ಲಿ ಒಸರುವ ಜಿಗುಟು ಹಾಲಿನಂಥ ದ್ರವ (ಲ್ಯಾಟೆಕ್ಸ್)ವನ್ನು ಗಟ್ಟಿಯಾಗಿಸಿ ಚಿಕಲ್ ತಯಾರಿಸುತ್ತಿದ್ದರು.
ಇದನ್ನೂ ಓದಿ: Srivathsa Joshi Column: ದಿನರಾತ್ರಿಯಲಿ ಏಕಾಂತದಲಿ ಏಕೋ ಹೇನೋ ನೋವಾಗುವುದು
ಕ್ರಿ.ಶ 1850ರ ವೇಳೆಗೆ ಸಿಹಿಗೊಳಿಸಿದ ಪ್ಯಾರಫಿನ್ ಮೇಣ, ಚಿಕಲ್‌ಗಿಂತಲೂ ಜನಪ್ರಿಯವಾಯ್ತು. ಇಂದು ನಾವು ಅಗಿಯುವಂಥ ಗಮ್ ತಯಾರಾದದ್ದು 1870ರಲ್ಲಿ. ಆಗ ಸ್ವಲ್ಪ ಚಿಕಲ್ ಅನ್ನು ಅಮೆರಿಕದಲ್ಲಿ ಒಂದು ವಿಧದ ರಬ್ಬರ್ ಎಂದು ಮಾರುವ ಉದ್ದೇಶದಿಂದ ಒಯ್ಯಲಾಗಿತ್ತು.
ನ್ಯೂಯಾರ್ಕ್ ನಗರದ ಥಾಮಸ್ ಆಡಮ್ಸ್ ಜೂನಿಯರ್ ಎಂಬ ಸಂಶೋಧಕರು ಚಿಕಲ್‌ನಿಂದ ರಬ್ಬರ್ ತಯಾರಿಸಲೆತ್ನಿಸಿದಾಗ ಅದು ರಬ್ಬರಿನಂತೆ ಗಟ್ಟಿಯಾಗಲೇ ಇಲ್ಲ. ಅದನ್ನು ಕುದಿಸಿ ಚ್ಯೂ ಯಿಂಗ್ ಗಮ್ ತಯಾರಿಸಿ 1870ರಲ್ಲಿ ಮಾರುಕಟ್ಟೆಗೆ ತಂದರು. ಹೀಗೆ ಪ್ರಪಂಚಕ್ಕೆ ಗಮ್ ಮೆಲ್ಲುವ ಚಟ ಕಲಿಸಿದ ಕೀರ್ತಿಗೆ ಪಾತ್ರರಾದರು. ಬಬಲ್‌ಗಮ್ ಮೊದಲ ಬಾರಿಗೆ 1906ರಲ್ಲಿ ತಯಾರಾಯಿತಾ ದರೂ ಅದು ಪರಿಪೂರ್ಣಗೊಂಡು, ಮಾರಾಟಕ್ಕೆ ಬಂದದ್ದು 1928ರ ವೇಳೆಗೆ.
ಚ್ಯೂಯಿಂಗ್ ಗಮ್‌ಗೆ ಬೇಡಿಕೆ ಹೆಚ್ಚಾದಂತೆಲ್ಲಾ ಮಾಯಾ ನಾಗರಿಕತೆಯ ಮೂಲನಿವಾಸಿಗಳು, ಲ್ಯಾಟೆಕ್ಸ್ ಒಸರುವ ಸಪೋಡಿಲ್ಲಾ ಮರಗಳಿಗಾಗಿ ಹಗಲಿರುಳೂ ಹುಡುಕಬೇಕಾಯ್ತು. ಈ ಹುಡು ಕಾಟದ ಸಂದರ್ಭದಲ್ಲಿ ಕಾಲಗರ್ಭದಲ್ಲಡಗಿ ಹೋಗಿದ್ದ ಮಾಯಾ ಸಂಸ್ಕೃತಿಯ ಪಟ್ಟಣಗಳು ಪತ್ತೆಯಾದವು. ಹೀಗೆ ಚ್ಯೂಯಿಂಗ್ ಗಮ್ ಪ್ರಾಚ್ಯ ಸಂಶೋಧನೆಗೆ ಇಂಬು ನೀಡಿತು.
1960ರ ದಶಕದಲ್ಲಿ ಕಂಪನಿಗಳು ಸಕ್ಕರೆರಹಿತ ಚ್ಯೂಯಿಂಗ್ ಗಮ್ ತಯಾರಿಸತೊಡಗಿದವು. ಸಕ್ಕರೆ ದಂತಕ್ಷಯಕ್ಕೆ ಕಾರಣವಾಗಬಹುದಾದ್ದರಿಂದ ಬಹಳಷ್ಟು ದಂತವೈದ್ಯರು ಸಿಹಿಮುಕ್ತ ಗಮ್ ಶಿಫಾ ರಸು ಮಾಡುತ್ತಾರೆ. ಆದರೆ ಸಾಮಾನ್ಯ ಗಮ್‌ನೊಳಗಣ ಸಕ್ಕರೆ ಅಗಿಯುವಾಗ ಇತರ ಘಟಕಗಳಿಂದ ಬೇರ್ಪಡುತ್ತದೆ ಹಾಗೂ ಅಗಿಯುವುದರಿಂದ ಉತ್ಪಾದನೆಯಾಗುವ ಅಧಿಕ ಜೊಲ್ಲು ಅಥವಾ ಲಾಲಾರಸ ದಂತಕ್ಷಯದ ಸಾಧ್ಯತೆಯನ್ನು ತಗ್ಗಿಸುತ್ತದೆ ಎಂದು ಕೂಡ ಸಂಶೋಧಕರು ಅಭಿಪ್ರಾಯ ಪಡುತ್ತಾರೆ".
ಮೇಲಿನ ವಿವರಣೆಯಲ್ಲಿ ‘ಚ್ಯೂಯಿಂಗ್ ಗಮ್‌ಗೆ ಬೇಡಿಕೆ ಹೆಚ್ಚಾದಂತೆಲ್ಲಾ...’ ಅಂತ ಇದೆಯಲ್ಲ, ಅದಕ್ಕೆ ಕಾರಣವಾದದ್ದು ಏನು ಅಥವಾ ಯಾರು ಎಂದು ನಿಮಗೆ ಗೊತ್ತೇ? ಅಮೆರಿಕದ ವಿಲಿಯಂ ರಿಗ್ಲೇ ಜೂನಿಯರ್ ಎಂಬೊಬ್ಬ ಅಪ್ರತಿಮ ಛಲಗಾರ ಉದ್ಯಮಿ! ಆತನ ಛಲದ ಕಥೆಯನ್ನು ಚ್ಯೂಯಿಂಗ್ ಗಮ್‌ನಂತೆ ಎಳೆಯದೆ, ಯಥೋಚಿತ (ಯಥಾ ಉಚಿತ) ವಿವರಗಳೊಂದಿಗೆ ಸಂಕ್ಷಿಪ್ತ ವಾಗಿ ಹೇಳುವುದಾರೆ-ಉಚಿತ!
ಜಾಹಿರಾತು ಜಗತ್ತಿನ ಅತಿ ಪ್ರಭಾವಶಾಲಿ ಅಯಸ್ಕಾಂತವೇ ‘ಉಚಿತ’ ಎಂಬ ಪದ ಎಂದು ನಮಗೆಲ್ಲ ಗೊತ್ತೇ ಇದೆ. ಒಂದು ಕೊಂಡರೆ ಇನ್ನೊಂದು ಉಚಿತ- ರವಾಇಡ್ಲಿ ಮಿಕ್ಸ್ ಕೊಂಡರೆ ಗುಲಾಬ್ ಜಾಮೂನ್ ಮಿಕ್ಸ್ ಉಚಿತ; ಬಿನಾಕಾ(ಸಿಬಾಕಾ) ಟೂತ್‌ಪೇಸ್ಟ್ ಕೊಂಡರೆ ಒಳಗೊಂದು ಪ್ಲಾಸ್ಟಿಕ್ ಪ್ರಾಣಿ ಉಚಿತ; ದೀಪಾವಳಿ ವಿಶೇಷಾಂಕ ಕೊಂಡರೆ ಪಟಾಕಿ ಗಿಫ್ಟ್ ಹಾಂಪರ್ ಉಚಿತ; ರೀಡರ್ಸ್ ಡೈಜೆಸ್ಟ್ ಚಂದಾದಾರರಾದರೆ ಡೈರಿ ಉಚಿತ... ಹೀಗೆ ‘ಬಾ ನೊಣವೆ ಬಾ ನೊಣವೆ ಬಾ ನನ್ನ ಬಲೆಗೆ’ ಎಂದು ಗ್ರಾಹಕರನ್ನು ಸೆಳೆಯುವ ಮಾಯಾಮಂತ್ರವೇ ‘ಉಚಿತ’ ಎಂಬ ಮಾರ್ಕೆಟಿಂಗ್ ಟೆಕ್ನಿಕ್.
ಮತ್ತೆ ಕೆಲವು ಜೋಕುಗಳಲ್ಲಿ ಮಾತ್ರ ಔಚಿತ್ಯಪೂರ್ಣ ಆಗುವಂಥವೂ ಇವೆ- ಕೇಶವರ್ಧಿನಿ ತೈಲ ಕೊಂಡರೆ ಬಾಚಣಿಗೆ ಉಚಿತ; ಬಲ್ಬ್ ಕೊಂಡರೆ ಮೇಣದಬತ್ತಿ ಉಚಿತ; ಆರ್ಟ್‌ಮೂವಿ ಟಿಕೆಟ್ ನೊಂದಿಗೆ ಅಮೃ ತಾಂಜನ್ ಡಬ್ಬಿ ಉಚಿತ... ಇತ್ಯಾದಿ. ಒಟ್ಟಿನಲ್ಲಿ ‘ಉಚಿತ’ದ ಮಹಿಮೆ ಏನೆಂದರೆ, ಅಂಥ ಜಾಹೀರಾತಿನಿಂದಾಗಿ ಆ ಉತ್ಪನ್ನ ಜಾಸ್ತಿ ಮಾರಾಟವಾಗುವುದು ಖಚಿತ.
ಆದರೆ, ಬೇರೊಂದು ಉತ್ಪನ್ನದ ಪ್ರಮೋಷನ್‌ಗಾಗಿ ಉಚಿತವಾಗಿ ಮಾರಲ್ಪಟ್ಟ ವಸ್ತುವೊಂದು ಕೊನೆಗೆ ತಾನೇ ಅತಿ ಜನಪ್ರಿಯವಾಗಿ ಜಗದ್ವಿಖ್ಯಾತವಾದ ನಿದರ್ಶನವೊಂದಿದೆ, ಅದೇ ನಮಗೆಲ್ಲ ಚಿರಪರಿಚಿತವಾದ ಚ್ಯೂಯಿಂಗ್ ಗಮ್! ನಿಖರವಾಗಿ ಹೇಳಬೇಕೆಂದರೆ ಜಾಗತಿಕ ಮಾರುಕಟ್ಟೆಯಲ್ಲಿ ಇಂದು ನಂ.1 ಸ್ಥಾನದಲ್ಲಿರುವ ‘ರಿಗ್ಲೇ’ (Wrigley) ಚ್ಯೂಯಿಂಗ್ ಗಮ್.
ಆರಂಭದಲ್ಲಿ ಬರೀ ಒಂದು ‘ಅದು ಕೊಂಡರೆ ಇದು ಉಚಿತ’ ಎಂದು ಉಚಿತವಾಗಿ ಮಾರಲ್ಪಡುತ್ತಿದ್ದ ಉತ್ಪನ್ನ, ಈಗ ವಿಶ್ವಮಾನ್ಯ. 1891ರಲ್ಲಿ ವಿಲಿಯಂ ರಿಗ್ಲೇ ಜ್ಯೂನಿಯರ್ ಎಂಬ 29ರ ವಯಸ್ಸಿನ ಕನಸುಗಣ್ಣಿನ ಸುದೃಢ ಯುವಕ ಫಿಲಡೆಲಿಯಾದಿಂದ ಶಿಕಾಗೋ ನಗರಕ್ಕೆ ವಲಸೆ ಬಂದನು. ಅವನ ಜೇಬಿನಲ್ಲಿದ್ದುದು ಬರೀ 32 ಡಾಲರ್; ಆದರೆ ಅದಮ್ಯ ಉತ್ಸಾಹ ಮತ್ತು ಅಪರಿಮಿತ ಚೈತನ್ಯದ ಬುಗ್ಗೆಯೇ ಆಗಿದ್ದನವನು.
ಒಬ್ಬ ಸೇಲ್ಮನ್ ಆಗಿ ಅವನಿಗೆ ಅಲ್ಪಸ್ವಲ್ಪ ಅನುಭವ ಅದಾಗಲೇ ಇತ್ತು. ಏಕೆಂದರೆ ವಿಲಿಯಂನ ಅಪ್ಪ ಫಿಲಡೆಲಿಯಾದಲ್ಲಿ ಒಂದು ಸೋಪ್ ಫ್ಯಾಕ್ಟರಿ ಇಟ್ಟುಕೊಂಡಿದ್ದನು ಮತ್ತು ಸಾಬೂನು ವ್ಯಾಪಾರದಲ್ಲಿ ಮಗನನ್ನೂ ಪಳಗಿಸಿದ್ದನು. ಶಿಕಾಗೋಕ್ಕೆ ಬಂದ ವಿಲಿಯಂ ಆರಂಭದಲ್ಲಿ ತನ್ನ ಅಪ್ಪನ ಕಂಪನಿಯ ‘ರಿಗ್ಲೇ’ ಬ್ರ್ಯಾಂಡ್‌ನ ಸೋಪ್ ಮಾರಾಟಕ್ಕೆ ತೊಡಗಿದನು.
ಚಾಣಾಕ್ಷನಾದ ಆತ ಅಂಗಡಿ ಮಾಲೀಕರಿಗೂ, ಗ್ರಾಹಕರಿಗೂ ಆಕರ್ಷಣೆಯಾಗುವಂತೆ “ರಿಗ್ಲೇ ಸೋಪ್ ಕೊಂಡರೆ ಒಂದು ಡಬ್ಬಿ ಬೇಕಿಂಗ್ ಪೌಡರ್ ಉಚಿತ!" ಎಂದು ಘೋಷಿಸಿದನು. ಜನ ಇಷ್ಟಪಟ್ಟರು; ಎಷ್ಟೆಂದರೆ ಉಚಿತವಾಗಿ ಬರುತ್ತಿದ್ದ ಬೇಕಿಂಗ್ ಪೌಡರನ್ನೇ ಮೆಚ್ಚಿ ಅದಕ್ಕಾಗಿ ಸೋಪ್ ಖರೀದಿಸು ತ್ತಿದ್ದರು! ಇದನ್ನು ಗಮನಿಸಿದ ವಿಲಿಯಂ 1892ರಲ್ಲಿ ತನ್ನದೇ ಒಂದು ಬೇಕಿಂಗ್ ಪೌಡರ್ ಉದ್ದಿಮೆ ಯನ್ನು ತೆರೆದನು.
ಅಪ್ಪನ ಸೋಪ್ ಸೆಲ್ಲಿಂಗ್‌ಗೆ ಗುಡ್‌ಬೈ ಹೇಳಿ ತನ್ನ ಬೇಕಿಂಗ್ ಪೌಡರ್ ಮಾರಾಟ ಆರಂಭಿಸಿದನು. ಬೇಕಿಂಗ್ ಪೌಡರನ್ನು ದುಡ್ಡು ಕೊಟ್ಟು ಕೊಳ್ಳುವಂತೆ ಜನರನ್ನು ಆಕರ್ಷಿಸಬೇಕಲ್ಲ, ಅದಕ್ಕೆ “ಬೇಕಿಂಗ್ ಪೌಡರ್ ಜತೆ ಚ್ಯೂಯಿಂಗ್ ಗಮ್ ಪ್ಯಾಕೆಟ್ ಉಚಿತ!" ಎಂದು ಜಾಹೀರಾತು ಹೊರಡಿಸಿ ದನು.
ಕಿಂದರಿ ಜೋಗಿಯ ಹಿಂದೆ ಇಲಿಗಳ ಜಾತ್ರೆಯಂತೆ ಮತ್ತೆ ಜನ ಮುಗಿಬಿದ್ದರು; ಯಾವುದಕ್ಕೆ? ಬೇಕಿಂಗ್ ಪೌಡರ್‌ಗಲ್ಲ, ಉಚಿತವಾಗಿ ಸಿಗುತ್ತಿದ್ದ ಚ್ಯೂಯಿಂಗ್ ಗಮ್‌ಗೆ! ಆಗ ವಿಲಿಯಂ ತನ್ನ ಬೇಕಿಂಗ್ ಪೌಡರ್ ಉದ್ಯಮದ ಬಾಗಿಲು ಮುಚ್ಚಿ ‘ರಿಗ್ಲೇ ಚ್ಯೂಯಿಂಗ್ ಗಮ್’ ಫ್ಯಾಕ್ಟರಿ ಸ್ಥಾಪಿಸಿದನು.
ಮೊದಲು ಲೊಟ್ಟಾ ಮತ್ತು ವೇಸರ್ ಹೆಸರಿನ ಚ್ಯೂಯಿಂಗ್ ಗಮ್ ಉತ್ಪಾದಿಸಿ ಮಾರಲಾ ರಂಭಿಸಿದನು. 1893ರಲ್ಲಿ ರಿಗ್ಲೇಯ ವಿಶ್ವವಿಖ್ಯಾತ ‘ಜ್ಯೂಸಿ ಫ್ರುಟ್’ ಮತ್ತು ‘ಸ್ಪಿಯರ್ ಮಿಂಟ್’ ಚ್ಯೂಯಿಂಗ್ ಗಮ್ ಜನ್ಮತಾಳಿದವು. ಆವಾಗಿನ್ನೂ ಅಮೆರಿಕದಲ್ಲಿ ಬೇರೆ ಬ್ರ್ಯಾಂಡ್‌ನ (ಚಿಕ್ಲೆಟ್, ಡೆಂಟೈನ್ ಇತ್ಯಾದಿ) ಚ್ಯೂಯಿಂಗ್ ಗಮ್ ಕೂಡ ಭರ್ಜರಿ ವ್ಯಾಪಾರ ನಡೆಸುತ್ತಿದ್ದವಾದ್ದರಿಂದ ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿಯಿತ್ತು.
ಆದರೂ ವಿಲಿಯಂನ ಅಸಾಧಾರಣ ಮಾರ್ಕೆಟಿಂಗ್, ಅಡ್ವರ್ಟೈಸ್‌ಮೆಂಟ್ ತಂತ್ರಗಳಿಂದ ರಿಗ್ಲೇ ಬ್ರ್ಯಾಂಡ್ ದಾಪುಗಾಲಿಡುತ್ತ ಮುನ್ನಡೆಯಿತು; ಯಶಸ್ಸಿನ ಒಂದೊಂದೇ ಮೆಟ್ಟಿಲನ್ನೇರುತ್ತ ವಿಶ್ವಾ ದ್ಯಂತ ಪ್ರಸಿದ್ಧವಾಯ್ತು. ಉಚಿತವಾಗಿ ಬಿಕರಿಯಾಗುತ್ತಿದ್ದುದನ್ನು ವಿಶ್ವದ ನಂ.1 ಸ್ಥಾನಕ್ಕೊಯ್ಯ ಬೇಕಿದ್ದರೆ ವಿಲಿಯಂ ರಿಗ್ಲೇಗೆ ಇದ್ದ ಛಲ, ಸಾಧಿಸಬೇಕೆಂಬ ಹಂಬಲ, ಸಾಧಿಸುತ್ತೇನೆಂಬ ಆತ್ಮ ವಿಶ್ವಾಸ ಮೆಚ್ಚಲೇಬೇಕಾದ್ದು. ಅವನ ಸಹೋದ್ಯೋಗಿಗಳಿಗೆಲ್ಲ ಆತ ಚೈತನ್ಯದ ಚಿಲುಮೆಯೇ ಆಗಿದ್ದನಂತೆ.
ಮಾರುಕಟ್ಟೆಯಲ್ಲೂ ಅಷ್ಟೆ, ಗ್ರಾಹಕರ ಮನೋಭಾವವನ್ನರಿತು ಅದಕ್ಕೆ ತಕ್ಕಂತೆ ಉತ್ಪನ್ನದ ಪೂರೈಕೆ, ಯೋಗ್ಯ ಬೆಲೆ ಮತ್ತು ಎಲ್ಲಕ್ಕೂ ಹೆಚ್ಚಾಗಿ ಚ್ಯೂಯಿಂಗ್ ಗಮ್‌ನಂಥ ಸಣ್ಣ ವಸ್ತುವಿನ ಉತ್ಪಾದನೆಯಲ್ಲೂ ಗುಣಮಟ್ಟಕ್ಕೆ ನೀಡುತ್ತಿದ್ದ ಮಹತ್ತ್ವ- ಇವೆಲ್ಲ ಯಾವುದೇ ಉದ್ಯಮ ನಡೆಸು ವವರಾದರೂ ವಿಲಿಯಂ ರಿಗ್ಲೇಯಿಂದ ಕಲಿಯಬೇಕಾದ ಪಾಠಗಳು.
1915ರಲ್ಲಿ ಹೊಸದೊಂದು ಫ್ಲೇವರ್ ಆರಂಭಿಸಿದಾಗ ಮಿಲಿಯಗಟ್ಟಲೆ ಅಮೆರಿಕನ್ನರಿಗೆ ಉಚಿತ ಸ್ಯಾಂಪಲ್ ವಿತರಿಸಿದ್ದನಂತೆ. ಹೀಗೆ ಯಶಸ್ವಿ ಉದ್ಯಮಿಯಾಗಿ ಬೆಳೆದ ರಿಗ್ಲೇ ಶಿಕಾಗೋದ ವಿಖ್ಯಾತ ಬೇಸ್‌ಬಾಲ್ ಟೀಮ್ ‘ಶಿಕಾಗೋ ಕಬ್ಸ್’ನ ಪ್ರಾಯೋಜಕತ್ವ ವಹಿಸಿ ಅವರಿಗೊಂದು ಬೇಸ್‌ಬಾಲ್ ಪಾರ್ಕ್ ನಿರ್ಮಿಸಿಕೊಟ್ಟನು.
ಶಿಕಾಗೋ ನಗರದ ನಕ್ಷೆಯಲ್ಲಿ ರಿಗ್ಲೇ ಬಿಲ್ಡಿಂಗ್ ಮತ್ತು ಅದಕ್ಕೆ ಹತ್ತಿರದಲ್ಲೇ ಇರುವ ರಿಗ್ಲೇ ಫೀಲ್ಡ್ (ಬೇಸ್‌ಬಾಲ್ ಪಾರ್ಕ್) ಪ್ರಮುಖ ಲ್ಯಾಂಡ್‌ಮಾರ್ಕ್‌ಗಳಾದುವು. ರಿಗ್ಲೇಯ ಕಥೆಯ ಜತೆಗೇ, ಚ್ಯೂಯಿಂಗ್ ಗಮ್ ತಯಾರಿಸುವುದು ಹೇಗೆ, ಅದರಲ್ಲಿ ಏನೇನು ಇರುತ್ತದೆ ಎಂಬುದನ್ನೂ ನೋಡೋಣ.
ಚ್ಯೂಯಿಂಗ್ ಗಮ್‌ನಲ್ಲಿರುವ ನಾಲ್ಕು ಪ್ರಧಾನ ವಸ್ತುಗಳೆಂದರೆ ರೋಸಿನ್ ಎಂಬ ಅಂಟು ಪದಾರ್ಥ, ಶರ್ಕರ ಪಿಷ್ಟ (ಸಕ್ಕರೆ), ಗ್ಲಿಸರಿನ್ ಅಥವಾ ಖಾದ್ಯತೈಲದಂಶ, ಮತ್ತು ಸುಗಂಧದಂಶ. ರೇಸಿನ್ ಅಂಟು ಮಧ್ಯಅಮೆರಿಕದಲ್ಲಿ ಹೇರಳವಾಗಿ ಬೆಳೆಯುವ ಪೈನ್ ಮರಗಳ ತೊಗಟೆಯಿಂದ ರಬ್ಬರ್‌ನಂತೆ ತೆಗೆಯುವ ಉತ್ಪನ್ನ. ಇತ್ತೀಚೆಗೆ ನೈಸರ್ಗಿಕ ಅಂಟುಗಳ ಬದಲಾಗಿ ಸಿಂಥೆಟಿಕ್ ಅಂಟುಗಳ ಬಳಕೆ ಶುರುವಾಗಿದೆ.
ಜೋಳದ ಗಂಜಿಯಂಥ ಪದಾರ್ಥವೂ ಚ್ಯೂಯಿಂಗ್ ಗಮ್ ತಯಾರಿಗೆ ಬೇಕು. ಸುಗಂಧವಸ್ತುವಾಗಿ ಮಿಂಟ್ (ಪುದಿನಾ) ಪ್ರಮುಖ ಕಚ್ಚಾಪದಾರ್ಥ. ರಿಗ್ಲೇ ಕಂಪನಿಗೆ ಸೇರಿದ, ಪುದಿನಾ ಬೆಳೆಯುವ ಹೆಕ್ಟೇರ್‌ಗಟ್ಟಲೆ ದೊಡ್ಡ ಹೊಲಗಳಿವೆ ಅಮೆರಿಕದ ವಿಸ್ಕಾನ್ಸಿನ್, ಇಂಡಿಯಾನಾ ಮತ್ತು ಮಿಷಿಗನ್ ಸಂಸ್ಥಾನಗಳಲ್ಲಿ. ಪುದಿನಾ ಎಲೆಗಳಿಂದ ತೆಗೆದ ತೈಲವನ್ನು ರಿಫೈನರಿ ಮತ್ತು ಡಿಸ್ಟಿಲರಿಗಳಲ್ಲಿ ಶೋಧಿಸಿ ಸಂಗ್ರಹಿಸಲಾಗುತ್ತದೆ.
ಇತರ ಕಚ್ಚಾಪದಾರ್ಥಗಳನ್ನೂ ಸೇರಿಸಿ ಚಪಾತಿಹಿಟ್ಟಿನಂತೆ ದಪ್ಪ ಮುದ್ದೆಗಳನ್ನು ಮಾಡಿ ಯಂತ್ರ ಗಳ ಮೂಲಕ ತೆಳುಹಾಳೆಗಳಾಗಿಸಿ ನಿರ್ದಿಷ್ಟ ಆಕಾರದಲ್ಲಿ ಕಟಿಂಗ್ ಆದಮೇಲೆ ಸಕ್ಕರೆಯಂಶ ಸಿಂಪಡಿಸಿ ಪ್ಯಾಕೇಜ್ ಮಾಡಲಾಗುತ್ತದೆ.
ಚ್ಯೂಯಿಂಗ್ ಗಮ್ ಜಗಿಯುವುದರಿಂದ ಏನು ಲಾಭ? ರಿಗ್ಲೇಯ ಪ್ರಕಾರ ಖಂಡಿತವಾಗಿಯೂ ಲಾಭಗಳಿವೆ. ಏಕಾಗ್ರತೆ ಬೆಳೆಸಿಕೊಳ್ಳಲಿಕ್ಕೆ ಇದು ತುಂಬ ಸಹಕಾರಿ ಎಂದು ಅನೇಕರು ಒಪ್ಪುತ್ತಾರೆ. ಬೇಸ್‌ಬಾಲ್, ಕ್ರಿಕೆಟ್ ಆಟಗಾರರಂತೂ ಹೌದೇ ಹೌದು. ರಿಗ್ಲೇ ಕಂಪನಿಯ ಅಂಕಿ-ಅಂಶಗಳ ಪ್ರಕಾರ ಅಮೆರಿಕದ ಟ್ರಕ್ ಚಾಲಕರೂ ಚ್ಯೂಯಿಂಗ್ ಗಮ್ ಜಗಿಯುತ್ತ ಡ್ರೈವ್ ಮಾಡುತ್ತಿದ್ದರೆ ಎಚ್ಚರ ತಪ್ಪುವುದಿಲ್ಲ ಅಂತ ಭಾವಿಸುತ್ತಾರಂತೆ.
1939ರಷ್ಟು ಹಿಂದೆಯೇ ನಡೆದ ವೈಜ್ಞಾನಿಕ ಅಧ್ಯಯನಗಳ ಪ್ರಕಾರ ಚ್ಯೂಯಿಂಗ್ ಗಮ್ ಜಗಿಯುತ್ತ ಇರುವುದು ಒಂದು ನಮೂನೆಯಲ್ಲಿ ಆತಂಕ (ಟೆನ್ಷನ್) ನಿವಾರಣೆಗೆ ಸಹಕಾರಿಯಾಗುತ್ತದಂತೆ. ಪ್ರಪಂಚ ಯುದ್ಧಾನಂತರ ಅಮೆರಿಕನ್ ಆರ್ಮಿಯಲ್ಲಿ ಸೈನಿಕರಿಗೆ ರೇಷನ್ ಸಪ್ಲೈಯಲ್ಲಿ ಕಂಪಲ್ಸರಿ ಯಾಗಿ ಚ್ಯೂಯಿಂಗ್ ಗಮ್ ಪ್ಯಾಕೆಟ್ಸ್ ಇರುತ್ತವೆ.
ಮಿಂಟ್ ಅಥವಾ ಸಿನಮನ್ ಫ್ಲೇವರ್‌ನ ಚ್ಯೂಯಿಂಗ್ ಗಮ್ ಉಸಿರಿನ ದುರ್ವಾಸನೆ ಮತ್ತು ದಂತ ಕ್ಷಯವನ್ನೂ ತಡೆಗಟ್ಟುತ್ತದೆ. ತಿಂಡಿಪೋತರಾಗಿದ್ದು ಬೊಜ್ಜು ಇಳಿಸಲು ಶತಪ್ರಯತ್ನ ನಡೆಸುವವ ರಿಗೆ ಆವಾಗಾವಾಗ ಸ್ನ್ಯಾಕ್ಸ್ ನೆನಪಾದರೆ ಅದರ ಬದಲಿಗೆ ಗಮ್ ಜಗಿಯುವುದರಿಂದ ಬಾಯಿಗೆ ವ್ಯಾಯಾಮವೂ ಆಯ್ತು, ಒಟ್ಟು ಕ್ಯಾಲೊರಿಗಳು ನಗಣ್ಯವಾದ್ದರಿಂದ ಅತಿಯಾದ ಆಹಾರಸೇವನೆ ಆಗದಂತೆ ಪಥ್ಯವೂ ಆಯ್ತು!
ಚ್ಯೂಯಿಂಗ್ ಗಮ್‌ನ ಇನ್ನೂ ಕೆಲವು ಪ್ರಯೋಜನಗಳಿವೆ, ಚೌ ಚೌ ಚೌಕಿ ಅಂಕಣದ ಓದುಗರು “ಚ್ಯೂಯಿಂಗ್ ಗಮ್ ಬಳಕೆ ಶುರುವಾದದ್ದು ಯಾವಾಗ?" ಪ್ರಶ್ನೆಗೆ ಒದಗಿಸಿದ್ದ ತಮಾಷೆ ಉತ್ತರ ಗಳಲ್ಲಿ: ಕೈತುಂಬಾ ಕೆಲಸವಿರದವರು ಬಾಯ್ತುಂಬ ಕೆಲಸ ಹುಡುಕಿದಾಗಿನಿಂದ. ಮಾತಿಗೆ ಮಾತು ಬೆಳೆದು ಶಬ್ದ ಸಮರವಾಗುವುದನ್ನು ತಪ್ಪಿಸಲು ಬಾಯಿಗೆ ಪರ್ಯಾಯ ಕಾರ್ಯವೊಂದನ್ನು ಕಲ್ಪಿಸುವ ಅಗತ್ಯ ಉಂಟಾದಾಗ. ತಿಂದ ಮೇವನ್ನು ಮೆಲುಕು ಹಾಕುವ ಎಮ್ಮೆ, ಹಸು, ಕೋಣ, ಎತ್ತುಗಳಿಂದ ಸ್ಪೂರ್ತಿಗೊಂಡು ಅವುಗಳನ್ನು ಅನುಕರಿಸುವ ಆಸೆ ಹುಟ್ಟಿದಾಗ. ಹೆಂಡತಿಯರಿಗೆ ಹೆದರಿ ಬಾಯ್ಮುಚ್ಚಿಕೊಂಡಿದ್ದ ಬಡಪಾಯಿ ಗಂಡಂದಿರು ಬಂಡಾಯವೆದ್ದು ಬಾಯಾಡಿಸಲು ನಿರ್ಧರಿಸಿದಾಗಿನಿಂದ.
ಮಾನವರು ಪರಸ್ಪರ ದ್ವೇಷದಿಂದ ಹಲ್ಲು ಮಸೆಯತೊಡಗಿದಾಗ ದಂತಕ್ಕೆ ಆಗಬಹುದಾದ ಧಕ್ಕೆ ಯನ್ನು ತಡೆಯಲು. ಪರೀಕ್ಷೆಗಳಲ್ಲಿ ಸುದೀರ್ಘ ಉತ್ತರ ಬರೆಯಬೇಕಾದ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದಾಗಿನಿಂದ. ನೂತನ ದಂಪತಿಗಳಿಗೆ ವಿವಾಹದ ಸಾಂಕೇತಿಕ ಉಡುಗೊರೆಯಾಗಿ ಅರ್ಥಾತ್ ಮದುವೆಯ ಹೊಸತರಲ್ಲಿ ಗರಿಗರಿ ಸವಿರುಚಿ ಕ್ರಮೇಣ ಸಿಹಿ ಕರಗಿ ಸಪ್ಪೆಯಾದ ಬಂಧನ ಎಂದು ಎಚ್ಚರಿಸುವುದಕ್ಕಾಗಿ.
ಹಲವು ‘ಉತ್ತಮ’ ಚಟಗಳಿಂದ ಬಾಯಿಗೆ ‘ಗಂ’ ಎಂಬ ದುರ್ಗಂಧ ಅಂಟತೊಡಗಿದಾಗಿಂದ. ಸುಧಾ ದಲ್ಲಿ ಇವೆಲ್ಲವೂ ಓದುಗರ ಗಮ್-ಮತ್ತಿನ ಉತ್ತರಗಳು ಎಂದು ಪ್ರಕಟವಾಗಿದ್ದವು. ಇಷ್ಟೆಲ್ಲ ಉಪಯೋಗಗಳಿಂದಾಗಿಯೇ, ಅಮೆರಿಕದಲ್ಲಂತೂ ಚ್ಯೂಯಿಂಗ್ ಗಮ್ ಜಗಿಯುವ ಚಟ ವಿಪರೀತ. ಪ್ರಪಂಚದ ಮಿಕ್ಕೆಲ್ಲ ದೇಶಗಳ ಒಟ್ಟು ಮೊತ್ತಕ್ಕಿಂತ ಆರು ಪಟ್ಟು ಹೆಚ್ಚು ಚ್ಯೂಯಿಂಗ್ ಗಮ್ ಅಮೆರಿಕವೊಂದರಲ್ಲೇ ಖರ್ಚಾಗುತ್ತದೆಯಂತೆ.
ಅಮೆರಿಕದ ಹಾಸ್ಯಸಾಹಿತಿ ಮಾರ್ಕ್ ಟ್ವೈನ್ ಹೇಳಿರುವಂತೆ ಇಲ್ಲಿಯವರಿಗೆ Sharing someone’s ABC (already been chewed) gum is a sign of true love ಅಂತೆ! ನ್ಯೂಯಾರ್ಕ್ ನಗರದ ಸಬ್‌ವೇ ಸ್ಟೇಷನ್‌ಗಳಲ್ಲಿ ಜಗಿದು ಉಗಿದ ಚ್ಯೂಯಿಂಗ್ ಗಮ್ ತೆಗೆದುಹಾಕಲೆಂದೇ ಪ್ರತ್ಯೇಕ ಸಿಬ್ಬಂದಿ ಇರುತ್ತಾರೆ.
ಅಂತೆಯೇ ಸಿಯಾಟಲ್ ನಗರದ ‘ಗಮ್ ವಾಲ್’ ಬಗ್ಗೆಯೂ ಒಂದೆರಡು ಮಾತು ಹೇಳಲೇಬೇಕು. ಅಲ್ಲಿನ ಪೈಕ್ ಪ್ಲೇಸ್ ಮಾರ್ಕೆಟ್‌ನ ಕೆಳಗಡೆ ಅಂಡರ್‌ಪಾಸ್‌ನ ಒಂದು ಗೋಡೆಯ ತುಂಬೆಲ್ಲ ಜಗಿದ ಚ್ಯೂಯಿಂಗ್ ಗಮ್ ತೊಪ್ಪೆಗಳನ್ನು ಅಂಟಿಸಲಾಗಿದೆ. ಸುಮಾರು 50 ಅಡಿ ಉದ್ದ, 15 ಅಡಿ ಎತ್ತರದ ಗೋಡೆಗೆ ಬೆರಣಿ ತಟ್ಟಿದಂತೆ ಕಲರ್ ಕಲರ್ ಚ್ಯೂಯಿಂಗ್ ಗಮ್ ತೊಪ್ಪೆಗಳು. ಮೂರು ದಶಕಗಳ ಹಿಂದೆ ಅದೊಂದು ಆಕಸ್ಮಿಕ ಪೌರನಿರ್ಲಕ್ಷ್ಯವಾಗಿ ಆರಂಭವಾದದ್ದು.
ಹೇಗೆಂದರೆ, ಅಲ್ಲೊಂದು ಹಾಸ್ಯನಾಟಕಗಳನ್ನು ಪ್ರದರ್ಶಿಸುವ ರಂಗಮಂದಿರ ಇದೆ. ಸಿಯಾಟಲ್‌ನ ಪ್ರಖ್ಯಾತ ನಾಟಕ ಕಂಪನಿ Unexpected Productions ಆ ರಂಗಮಂದಿರದಲ್ಲಿ ವರ್ಷವಿಡೀ ನಾಟಕ ಪ್ರದರ್ಶನ ನಡೆಸುತ್ತದೆ.
1991ರಲ್ಲಿ ಕೆಲವು ನಾಟಕಪ್ರೇಕ್ಷಕರು ನಾಟಕಪ್ರದರ್ಶನದ ವೇಳೆ ಬಾಯಿಯಲ್ಲಿ ಚ್ಯೂಯಿಂಗ್ ಗಮ್ ಜಗಿಯುತ್ತಿದ್ದು, ನಾಟಕ ಮುಗಿದ ಮೇಲೆ ರಂಗಮಂದಿರದಿಂದ ಹೊರಬರುವಾಗ ಚ್ಯೂಯಿಂಗ್ ಗಮ್ ತೊಪ್ಪೆಯನ್ನು ಆ ಗೋಡೆಗೆ ಅಂಟಿಸಿದರು. ನಾಟಕ ಚೆನ್ನಾಗಿತ್ತು ಎಂಬುದರ ಸಂಕೇತವದು ಎಂದು ಯಾರೋ ಅದನ್ನೊಂದು ನಂಬಿಕೆ ಅಥವಾ ಸಂಪ್ರದಾಯವನ್ನಾಗಿಸಿದರು.
ಈಗ ನಾಟಕ ನೋಡದವರೂ ಅಲ್ಲಿ ಚ್ಯೂಯಿಂಗ್ ಗಮ್ ತೊಪ್ಪೆ ಅಂಟಿಸಿ ಬರುತ್ತಾರೆ, ಪಕ್ಕದಲ್ಲಿ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾರೆ. ಆ ಗೋಡೆಯನ್ನು ಸ್ವಚ್ಛಗೊಳಿಸುವ ಪ್ರಯತ್ನಗಳಾವುವೂ ಯಶಸ್ವಿಯಾಗಲಿಲ್ಲ. ಬದಲಿಗೆ ಅಲ್ಲಿಯ ಮೇಯರ್ ಸ್ವತಃ ಒಪ್ಪಿಕೊಂಡಿರುವಂತೆ ಈಗ ಅದೊಂದು ಪ್ರವಾಸಿ ಆಕರ್ಷಣೆ!
ನಮ್ಮ ವರಕವಿ ಬೇಂದ್ರೆಯಜ್ಜನಿಗೆ ಈ ರಸವಾರ್ತೆಯೇನಾದರೂ ಗೊತ್ತಾಗಿದ್ದರೆ “ಚ್ಯೂಯಿಂಗ್‌ಗಮ್ಮ ಗಮ್ಮಾಡಿಸ್ತಾವ ಹಲ್ಲಿಗೀ... ಮತ್ತ ಗ್ವಾಡಿಗೀ..." ಎಂದು ಹಾಡಿ ಹೊಗಳುತ್ತಿದ್ದರೇನೋ.