Dr D C Nanjunda Column: ಅಮೆರಿಕ ಪ್ರತಿಭೆಯನ್ನು ಕೇಳಿದರೆ, ಚೀನಾ ಕೌಶಲವನ್ನು ಕೇಳುತ್ತದೆ !
ಮತ್ತೊಂದೆಡೆ, ಚೀನಾ ದೇಶವು ಅನುಸರಿಸಿರುವುದು ಸಂಪೂರ್ಣ ಭಿನ್ನವಾದ, ಆದರೆ ಪರಿಣಾಮಕಾರಿ ಯಾದ ಮಾರ್ಗವನ್ನು; ಅದು ಪ್ರತಿಭೆಯನ್ನು ಆಮದು ಮಾಡಿಕೊಳ್ಳುವುದಕ್ಕಿಂತ ರಾಷ್ಟ್ರವ್ಯಾಪಿ ನೀತಿಗಳ ಮೂಲಕ ಕೌಶಲದ ಉತ್ಪಾದನೆಗೆ ಹೆಚ್ಚು ಒತ್ತು ನೀಡಿದೆ. ಶಿಕ್ಷಣಕ್ಕೆ ಜಿಡಿಪಿಯಲ್ಲಿ ಶೇ.4ಕ್ಕಿಂತ ಹೆಚ್ಚು ವೆಚ್ಚ ಮಾಡುತ್ತಿರುವ ಚೀನಾ, ಪ್ರತಿ ವರ್ಷ ಸುಮಾರು 1.4 ಕೋಟಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಪದವೀ ಧರರನ್ನು ಹುಟ್ಟು ಹಾಕುತ್ತಿದೆ (ಇದು ಜಗತ್ತಿನಲ್ಲೇ ಅತಿದೊಡ್ಡ ಸಂಖ್ಯೆ).
-
ವಿಶ್ಲೇಷಣೆ
ಡಾ.ಡಿ.ಸಿ.ನಂಜುಂಡ
ಇಂದಿನ ಜಾಗತಿಕ ವ್ಯವಸ್ಥೆಯಲ್ಲಿ ಸೇನಾಶಕ್ತಿ ಮಾತ್ರವೇ ರಾಷ್ಟ್ರಗಳನ್ನು ಅಳೆಯುವ ಮಾನದಂಡ ವಲ್ಲ; ಬದಲಾಗಿ ಆಯಾ ರಾಷ್ಟ್ರಗಳು ಮಾನವ ಸಂಪನ್ಮೂಲವನ್ನು ಹೇಗೆ ಗುರುತಿಸಿ, ಬೆಳೆಸಿ, ಪರಿಣಾಮಕಾರಿಯಾಗಿ ಬಳಸುತ್ತವೆ ಎಂಬುದೂ ಪರಿಗಣನೆಗೆ ಬರುತ್ತದೆ. ಈ ನಿರ್ಣಾಯಕ ಕ್ಷೇತ್ರದಲ್ಲಿ ಅಮೆರಿಕ, ಚೀನಾ ಮತ್ತು ಭಾರತ ದೇಶಗಳು ಮೂರು ವಿಭಿನ್ನ ಅಭಿವೃದ್ಧಿ ತತ್ವಗಳನ್ನು ಹೊಂದಿವೆ.
ಅಮೆರಿಕವು ಪ್ರತಿಭೆಯನ್ನು ಹುಡುಕಿದರೆ, ಚೀನಾ ಕೌಶಲವನ್ನು ವ್ಯವಸ್ಥಿತವಾಗಿ ನಿರ್ಮಿಸುತ್ತದೆ; ಆದರೆ ಭಾರತವು ಇನ್ನೂ ಜಾತಿ ಪ್ರಮಾಣಪತ್ರಗಳ ರಾಜಕಾರಣದಲ್ಲಿ ಸಿಲುಕಿಕೊಂಡಿದೆ. ಇದರಿಂದಾಗಿ ಭಾರತದಲ್ಲಿ ಉತ್ಪಾದಕತೆ, ನಾವೀನ್ಯ ಮತ್ತು ಜಾಗತಿಕ ಸ್ಪರ್ಧಾತ್ಮಕತೆಗಳ ಮೇಲೆ ಗಂಭೀರ ಪರಿಣಾಮವಾಗುತ್ತಿದೆ.
ಅಮೆರಿಕದ ಅಭಿವೃದ್ಧಿ ಮಾದರಿಯು ಬಹುಕಾಲದಿಂದಲೂ ‘ಪ್ರತಿಭೆ-ಕೇಂದ್ರಿತ’ವಾಗಿರುವಂಥದ್ದು. ಉನ್ನತ ಶಿಕ್ಷಣ, ಸಂಶೋಧನೆ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಅದು ವ್ಯಕ್ತಿಯ ಸಾಮಾಜಿಕ ಹಿನ್ನೆಲೆ ಗಿಂತ ಅವನಲ್ಲಿ ಹುದುಗಿರುವ ಸಾಮರ್ಥ್ಯ/ಕೌಶಲ ಮತ್ತು ಫಲಿತಾಂಶಗಳಿಗೆ ಒತ್ತು ನೀಡುತ್ತಾ ಬಂದಿದೆ.
ಇದರ ಫಲವಾಗಿ, ಅಮೆರಿಕದ ಇಂಥ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವವರಲ್ಲಿ ಸುಮಾರು ಶೇ.45 ರಷ್ಟು ಮಂದಿ ವಲಸಿಗರು ಅಥವಾ ವಲಸಿಗರ ಸಂತತಿಯವರು ಆಗಿದ್ದು, ಸಿಲಿಕಾನ್ ವ್ಯಾಲಿಯ ಶತಕೋಟಿ ಡಾಲರ್ ಮೌಲ್ಯದ ಸ್ಟಾರ್ಟ್-ಅಪ್ ಕಂಪನಿಗಳ ಪೈಕಿ ಶೇ.55ಕ್ಕಿಂತ ಹೆಚ್ಚಿನವು ಕನಿಷ್ಠ ಒಬ್ಬ ವಲಸಿಗ ಸ್ಥಾಪಕನನ್ನು ಹೊಂದಿವೆ ಎನ್ನಬಹುದು.
ಇದನ್ನೂ ಓದಿ: Dr D C Nanjunda Column: ಫುಲ್ ಮತ್ತು ಡಲ್ʼಗಳ ನಡುವೆ ಕ್ರಿಕೆಟಿಗರ ಹೋಟೆಲ್ ಉದ್ಯಮ !
ಪ್ರತಿ ವರ್ಷವೂ, ಹತ್ತು ಲಕ್ಷಕ್ಕೂ ಹೆಚ್ಚಿನ ಅಂತಾರಾಷ್ಟ್ರೀಯ ಪ್ರತಿಭೆಗಳು ಅಮೆರಿಕದ ವಿಶ್ವ ವಿದ್ಯಾ ಲಯಗಳನ್ನು ಆರಿಸುವುದು ಶಿಕ್ಷಣಕ್ಕಾಗಿ ಮಾತ್ರವೇ ಅಲ್ಲ; ಇದು ಪ್ರತಿಭೆಗೆ ಅವಕಾಶ ನೀಡುವ ಅಲ್ಲಿನ ವ್ಯವಸ್ಥೆಯ ಮೇಲೆ ಅವರು ಇಟ್ಟಿರುವ ವಿಶ್ವಾಸದ ದ್ಯೋತಕವೂ ಹೌದು.
ಅಮೆರಿಕ ತನ್ನ ಜಿಡಿಪಿಯಲ್ಲಿ ಶೇ.3.5ಕ್ಕಿಂತ ಹೆಚ್ಚು ಮೊತ್ತವನ್ನು ಸಂಶೋಧನೆ ಮತ್ತು ಅಭಿವೃದ್ಧಿಗೆ ವೆಚ್ಚ ಮಾಡುತ್ತಿರುವುದು, ಜಾಗತಿಕ ತಂತ್ರಜ್ಞಾನ ಸಂಸ್ಥೆಗಳ ಪೈಕಿ ಶೇ.60ಕ್ಕೂ ಹೆಚ್ಚಿನವು ಅಲ್ಲಿಯೇ ನೆಲೆಸಿರುವುದು, ಪ್ರತಿಭೆಯನ್ನು ಆರ್ಥಿಕ ಶಕ್ತಿಯಾಗಿ ಮತ್ತು ಭೌಗೋಳಿಕ ಪ್ರಭಾವವಾಗಿ ರೂಪಿಸುವ ಅದರ ಸಾಮರ್ಥ್ಯವನ್ನು ಸ್ಪಷ್ಟಪಡಿಸುತ್ತದೆ.
ಮತ್ತೊಂದೆಡೆ, ಚೀನಾ ದೇಶವು ಅನುಸರಿಸಿರುವುದು ಸಂಪೂರ್ಣ ಭಿನ್ನವಾದ, ಆದರೆ ಪರಿಣಾಮ ಕಾರಿಯಾದ ಮಾರ್ಗವನ್ನು; ಅದು ಪ್ರತಿಭೆಯನ್ನು ಆಮದು ಮಾಡಿಕೊಳ್ಳುವುದಕ್ಕಿಂತ ರಾಷ್ಟ್ರವ್ಯಾಪಿ ನೀತಿಗಳ ಮೂಲಕ ಕೌಶಲದ ಉತ್ಪಾದನೆಗೆ ಹೆಚ್ಚು ಒತ್ತು ನೀಡಿದೆ. ಶಿಕ್ಷಣಕ್ಕೆ ಜಿಡಿಪಿಯಲ್ಲಿ ಶೇ.4 ಕ್ಕಿಂತ ಹೆಚ್ಚು ವೆಚ್ಚ ಮಾಡುತ್ತಿರುವ ಚೀನಾ, ಪ್ರತಿ ವರ್ಷ ಸುಮಾರು 1.4 ಕೋಟಿ ಎಂಜಿನಿಯ ರಿಂಗ್ ಮತ್ತು ತಾಂತ್ರಿಕ ಪದವೀಧರರನ್ನು ಹುಟ್ಟು ಹಾಕುತ್ತಿದೆ (ಇದು ಜಗತ್ತಿನಲ್ಲೇ ಅತಿದೊಡ್ಡ ಸಂಖ್ಯೆ).
ಮಾತ್ರವಲ್ಲ, ‘ಮೇಡ್ ಇನ್ ಚೀನಾ’, ‘ಸ್ಕಿಲ್ಡ್ ಚೀನಾ’ ಮತ್ತು ಇತರ ದೀರ್ಘಾವಧಿ ಯೋಜನೆಗಳ ಮೂಲಕ ಗ್ರಾಮೀಣ ಪ್ರದೇಶದ ಜನಸಂಖ್ಯೆಯನ್ನು ಕೈಗಾರಿಕಾ ಮತ್ತು ತಂತ್ರಜ್ಞಾನಾಧಾರಿತ ಕಾರ್ಮಿಕ ಶಕ್ತಿಯಾಗಿ ಅದು ಪರಿವರ್ತಿಸಿದೆ. ಪರಿಣಾಮವಾಗಿ ಕೌಶಲಾಭಿವೃದ್ಧಿಯು ರಾಷ್ಟ್ರದ ಆದ್ಯತೆಯಾಗಿದೆ.
ನಗರದ ಕೈಗಾರಿಕಾ ವಲಯಗಳಿಗಾಗಿ ಗ್ರಾಮೀಣ ಪ್ರದೇಶಗಳಿಂದ ಕಾರ್ಮಿಕರನ್ನು ತರಬೇತುಗೊಳಿಸಿ, ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವಂತೆ ಮಾಡುವುದೇ ಈ ನೀತಿಗಳ ಉದ್ದೇಶ. ಚೀನಾ ದೇಶವಿಂದು ‘ಕಡಿಮೆ ವೆಚ್ಚದ ಉತ್ಪಾದನಾ ಕೇಂದ್ರ’ ಎಂಬ ಹಣೆಪಟ್ಟಿಯನ್ನು ಕಳಚಿಕೊಂಡು, ಕೃತಕ ಬುದ್ಧಿ ಮತ್ತೆ, ನವೀಕರಿಸಬಹುದಾದ ಇಂಧನ, ಹೈಸ್ಪೀಡ್ ರೈಲು, ಕಟ್ಟಡ ತಂತ್ರಜ್ಞಾನ ಮತ್ತು ಉನ್ನತ ಇಲೆಕ್ಟ್ರಾನಿಕ್ಸ್ ಕ್ಷೇತ್ರಗಳಲ್ಲಿ ಜಾಗತಿಕ ನಾಯಕತ್ವವನ್ನು ಸಾಧಿಸಿದೆ ಹಾಗೂ ಕೌಶಲನಿರ್ಮಾಣವೇ ರಾಷ್ಟ್ರನಿರ್ಮಾಣದ ಕೇಂದ್ರಬಿಂದು ಎಂಬುದನ್ನು ತೋರಿಸಿಕೊಟ್ಟಿದೆ. ಒಂದರ್ಥದಲ್ಲಿ ಚೀನಾ, 2050ರ ವರ್ಷದಲ್ಲಿ ವಾಸಿಸುತ್ತಿದೆ ಎನ್ನಬಹುದು!
ಈಗ ಭಾರತದ ವಿಷಯಕ್ಕೆ ಬರೋಣ. ಜಗತ್ತಿನ ಅತಿಹೆಚ್ಚು ಪ್ರಮಾಣದ ಯುವಜನರು ನಮ್ಮಲ್ಲಿ ದ್ದರೂ, ಆ ಜನಸಾಂಖ್ಯಿಕ ಲಾಭವನ್ನು ‘ಉತ್ಪಾದಕ ಶಕ್ತಿಯಾಗಿ’ ಪರಿವರ್ತಿಸಿಕೊಳ್ಳುವಲ್ಲಿ ಭಾರತ ವಿಫಲವಾಗಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ, ‘ಅವಕಾಶ’ ಮತ್ತು ‘ಪ್ರತಿಭೆ’ ಎಂಬುದು ಈಗಲೂ ಜಾತಿ ಪ್ರಮಾಣಪತ್ರ ಮತ್ತು ರಾಜಕೀಯ ಲೆಕ್ಕಾಚಾರಗಳ ಮೂಲಕ ನಿರ್ಧಾರಗೊಳ್ಳುತ್ತಿರುವುದು.
ಇತಿಹಾಸದ ಅನ್ಯಾಯಗಳನ್ನು ಸರಿಪಡಿಸಲು ರೂಪುಗೊಂಡ ಮೀಸಲಾತಿ ವ್ಯವಸ್ಥೆಯು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಅನಿವಾರ್ಯವಾಗಿದ್ದರೂ, ಕಾಲಕ್ರಮೇಣ ಅದು ಆಡಳಿತಾತ್ಮಕ ಜಟಿಲತೆ ಮತ್ತು ಚುನಾವಣಾ ಉದ್ದೇಶದ ಸಾಧನವಾಗಿ ವಿಸ್ತರಿಸಿಕೊಂಡಿದೆ.
ಭಾರತದಲ್ಲಿ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಒಟ್ಟು ಜನಸಂಖ್ಯೆಯ ಸುಮಾರು ಶೇ.65 ರಷ್ಟು ಇದ್ದರೂ, ಆ ಸಂಪನ್ಮೂಲವನ್ನು ನಮ್ಮಲ್ಲಿ ಆರ್ಥಿಕ ಶಕ್ತಿಯಾಗಿ ಮಾರ್ಪಡಿಸಲಾಗುತ್ತಿಲ್ಲ. ಲಭ್ಯ ಅಂಕಿ-ಅಂಶಗಳ ಪ್ರಕಾರ, 18 ರಿಂದ 23 ವರ್ಷದವರೆಗಿನ ಯುವಜನರಲ್ಲಿ ಸುಮಾರು ಶೇ.42 ರಷ್ಟು ಮಂದಿ ಉನ್ನತ ಶಿಕ್ಷಣ ಅಥವಾ ಯಾವುದೇ ಅಧಿಕೃತ ಕೌಶಲ ತರಬೇತಿಯ ಹೊರಗೇ ಉಳಿದಿದ್ದು, ಉನ್ನತ ಶಿಕ್ಷಣದಲ್ಲಿ ಒಟ್ಟು ದಾಖಲಾತಿ ಪ್ರಮಾಣ ಕೇವಲ ಶೇ.28ರಷ್ಟು ಇದೆ.
ಇದಕ್ಕೂ ಮೀರಿದ ಸಮಸ್ಯೆಯೆಂದರೆ, ಪದವಿ ಪಡೆದವರಲ್ಲಿಯೇ ನಿರುದ್ಯೋಗ ಪ್ರಮಾಣ ಹೆಚ್ಚುತ್ತಿರು ವುದು. ಮತ್ತೊಂದು ಗಂಭೀರ ಅಂಶವೆಂದರೆ, ಭಾರತದಲ್ಲಿ ಉದ್ಯೋಗದಲ್ಲಿರುವ ಯುವಕರಲ್ಲಿ ಶೇ.90ರಷ್ಟು ಮಂದಿ ಅಸಂಘಟಿತ ವಲಯದಲ್ಲೇ ಕೆಲಸ ಮಾಡುತ್ತಿರುವುದು; ಇವರು ಯಾವುದೇ ಸಾಮಾಜಿಕ ಭದ್ರತೆ, ಉನ್ನತೀಕರಿಸಲ್ಪಟ್ಟ ಕೌಶಲ ಅಥವಾ ವೃತ್ತಿಪರ ಪ್ರಗತಿಯ ಅವಕಾಶವಿಲ್ಲದೆ ಬದುಕುತ್ತಿದ್ದಾರೆ.
ಸುಮಾರು ಶೇ.45-50ರಷ್ಟು ಭಾರತೀಯ ಪದವೀಧರರು ಉದ್ಯೋಗಕ್ಕೆ ತಕ್ಷಣ ಯೋಗ್ಯರಲ್ಲ ಎಂದು ಸೂಚಿಸುತ್ತವೆ ಉದ್ಯೋಗದಾತರ ಸಮೀಕ್ಷೆಗಳು. ಭಾರತದಲ್ಲಿ ಪ್ರತಿ ವರ್ಷ ಸುಮಾರು 1 ಲಕ್ಷ ಮಂದಿ ಎಂಜಿನಿಯರಿಂಗ್ ಪದವೀಧರರು ಹೊರ ಬರುತ್ತಿದ್ದು, ಅದರಲ್ಲಿ ಎಂಜಿನಿಯರ್ ಆಗುವ ನಿಜವಾದ ಅರ್ಹತೆಯಿರುವುದು 7000 ಮಂದಿಗೆ ಮಾತ್ರ ಎನ್ನುತ್ತಾರೆ ಮಾಹಿತಿ ತಂತ್ರಜ್ಞಾನ ಕಂಪನಿಯೊಂದರ ಮುಖ್ಯಸ್ಥರು. ಇದು ಶಿಕ್ಷಣ ಮತ್ತು ಉದ್ಯೋಗ ಮಾರುಕಟ್ಟೆಯ ನಡುವಿನ ವ್ಯಾಪಕ ಅಂತರವನ್ನು ಬಹಿರಂಗಪಡಿಸುತ್ತದೆ.
ಭಾರತವು ತನ್ನ ಜಿಡಿಪಿಯಲ್ಲಿ ಶಿಕ್ಷಣಕ್ಕೆ ವೆಚ್ಚ ಮಾಡುತ್ತಿರುವುದು ಶೇ.2.9ರಷ್ಟನ್ನು ಮಾತ್ರ; ಇದು ಯುನೆಸ್ಕೊ ಶಿಫಾರಸು ಮಾಡಿದ ಶೇ.6ರ ಗುರಿಯ ಅರ್ಧಕ್ಕೂ ಕಡಿಮೆ. ಇನ್ನು ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರಕ್ಕೆ ದೇಶದ ಜಿಡಿಪಿಯಲ್ಲಿ ಮೀಸಲಿಟ್ಟಿರುವ ವೆಚ್ಚ ಕೇವಲ ಶೇ.0.7ರಷ್ಟು.
ಭಾರತದಲ್ಲಿ Skill India, PMKVY ಮತ್ತು ಇತರ ಕೌಶಲಾಭಿವೃದ್ಧಿ ಯೋಜನೆಗಳ ಮೂಲಕ ಕೋಟ್ಯಂತರ ಯುವಜನರಿಗೆ ತರಬೇತಿ ನೀಡಲಾಗಿದೆ ಎಂದು ಸರಕಾರ ಹೇಳಿದರೂ, ಇಂಥ ತರಬೇತಿ ಪಡೆದವರಲ್ಲಿ ಶೇ.20-25ರಷ್ಟು ಮಂದಿಗೆ ಮಾತ್ರ ಸ್ಥಿರ ಉದ್ಯೋಗ ದೊರೆತಿದೆ ಎನ್ನುತ್ತವೆ ವಿವಿಧ ಮೌಲ್ಯಮಾಪನ ವರದಿಗಳು.
ತರಬೇತಿಯ ಗುಣಮಟ್ಟ ಮತ್ತು ಕೈಗಾರಿಕಾ ಬೇಡಿಕೆಯ ಕುರಿತಾದ ಪ್ರಶ್ನೆಯನ್ನು ಇದು ಹುಟ್ಟು ಹಾಕುತ್ತದೆ. ಇದೇ ವೇಳೆಗೆ, ಭಾರತದಲ್ಲಿ ಸರಕಾರಿ ಉದ್ಯೋಗಗಳಿಗೆ ಅರ್ಜಿ ಹಾಕುವವರ ಸಂಖ್ಯೆ ಮತ್ತು ಲಭ್ಯವಿರುವ ಹುದ್ದೆಗಳ ಸಂಖ್ಯೆಯ ನಡುವೆ ಭಾರಿ ಅಂತರವಿದ್ದು, ಒಂದು ಮಧ್ಯಮ ಸ್ತರದ ಸರಕಾರಿ ಹುದ್ದೆಗೆ ಸರಾಸರಿ 800 ರಿಂದ 1000 ಅಭ್ಯರ್ಥಿಗಳು ಅರ್ಜಿ ಹಾಕುವಂಥ ಸ್ಥಿತಿಯಿದೆ.
ಇದರಿಂದಾಗಿ, ಯುವಕರು ಕೌಶಲಾಭಿವೃದ್ಧಿಯತ್ತ ಮುಖ ಮಾಡುವುದಕ್ಕಿಂತ, ಜಾತಿ ಪ್ರಮಾಣಪತ್ರ ಮತ್ತು ಮೀಸಲಾತಿ ಆಧಾರಿತ ಅವಕಾಶಗಳತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ಉನ್ನತ ಶಿಕ್ಷಣವಿದ್ದರೂ ಮಾರುಕಟ್ಟೆಗೆ ಬೇಕಾದ ಪಠ್ಯಕ್ರಮಗಳು ಇಲ್ಲ, ವಿಶ್ವವಿದ್ಯಾಲಯಗಳು ಕೇವಲ ಬೋಧನೆಯಲ್ಲಿ ಮುಳುಗಿವೆ.
ಐಐಟಿಗಳು ಜಾತಿಕೂಪಗಳಾಗಿ ಬದಲಾಗುತ್ತಿವೆ. ಪ್ರತಿಭಾ ಪಲಾಯನ ದೇಶಕ್ಕೆ ದೊಡ್ಡ ಪಿಡುಗಾ ಗಿದ್ದು, ಬುದ್ಧಿವಂತರು ಅಮೆರಿಕದ ವಿಮಾನವನ್ನು ಹತ್ತುತ್ತಿದ್ದಾರೆ. ರಾಜಕೀಯ ನಾಯಕರು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಉತ್ತರ ಪ್ರದೇಶದಲ್ಲಿ ರೈಲ್ವೆ ಟ್ರ್ಯಾಕ್ ಅನ್ನು ಸ್ವಚ್ಛ ಗೊಳಿಸುವ ಕೆಲಸಕ್ಕೆ ಸಾಕಷ್ಟು ಮಂದಿ ಎಂಜಿನಿಯರಿಂಗ್ ಪದವೀಧರರು ಅರ್ಜಿ ಸಲ್ಲಿಸಿದ್ದನ್ನು ಇತ್ತೀಚೆಗೆ ಪತ್ರಿಕೆಗಳಲ್ಲಿ ಓದಿದ್ದೇವೆ.
ಭಾರತದಲ್ಲಿ ಪ್ರತಿಭೆಗಿಂತಲೂ, ‘ವ್ಯಕ್ತಿ ಯಾರು?’ ಮತ್ತು ‘ಅವನ ಹಿನ್ನೆಲೆ ಏನು?’ ಎಂಬ ಪ್ರಶ್ನೆಗಳು ಎಲ್ಲವನ್ನೂ ಮೀರಿ ನಿಲ್ಲುತ್ತವೆ; ‘ಮೆರಿಟ್’ ಕುರಿತ ಚರ್ಚೆಗಳು ಮಾಧ್ಯಮಗಳಲ್ಲಿ ನಡೆಯುತ್ತವೆಯೇ ಹೊರತು, ಅವು ನೀತಿಗಳಾಗಿ ಪರಿಣಾಮಕಾರಿಯಾಗಿ ಜಾರಿಗೆ ಬರುವುದಿಲ್ಲ. ಇದು ಸಾಮಾಜಿಕ ನ್ಯಾಯವನ್ನು ತಳ್ಳಿ ಹಾಕುವ ಪ್ರಶ್ನೆಯಲ್ಲ, ಬದಲಾಗಿ ಪ್ರತಿಭೆಯನ್ನು ಸ್ಥಿರ ಸಾಮರ್ಥ್ಯಗಳಿಂದ ಪರಿವರ್ತಿಸುವ ಅಗತ್ಯದ ಕುರಿತಾದ ಎಚ್ಚರಿಕೆಯಾಗಿದೆ.
ಬಡತನ, ಪ್ರಾದೇಶಿಕ ಹಿಂದುಳಿಕೆ, ಶಿಕ್ಷಣದ ಗುಣಮಟ್ಟ ಮತ್ತು ಕೌಶಲದ ಕೊರತೆಯಂಥ ಅಂಶಗಳು ಚರ್ಚೆಗೆ ಬರುವುದಿಲ್ಲ. ಕೃತಕ ಬುದ್ಧಿಮತ್ತೆ, ಸ್ವಯಂಚಾಲಿತ ವ್ಯವಸ್ಥೆಗಳು ಮತ್ತು ಜ್ಞಾನಾಧಾರಿತ ಆರ್ಥಿಕತೆ ಅಧಿಪತ್ಯ ವಹಿಸುತ್ತಿರುವ 21ನೇ ಶತಮಾನದಲ್ಲಿ ಕೌಶಲವನ್ನು ನಿರ್ಲಕ್ಷಿಸುವ ರಾಷ್ಟ್ರ ಗಳು ಜನಸಾಂಖ್ಯಿಕ ಲಾಭವನ್ನು ಆರ್ಥಿಕ ಬೆಳವಣಿಗೆಗೆ ಪರಿವರ್ತಿಸಲು ಸಾಧ್ಯವಾಗದ ಅಪಾಯ ವನ್ನು ಎದುರಿಸುತ್ತಿವೆ.
ಭಾರತವಿಂದು ಆ ಸಂದಿಗ್ಧ ಕಾಲಘಟ್ಟದಲ್ಲಿ ನಿಂತಿದ್ದು, ಅದು ಜಾತಿ ಮತ್ತು ಪ್ರಮಾಣಪತ್ರಗಳನ್ನು ಪರಿಶೀಲಿಸುವ ಸಮಾಜವಾಗಿ ಉಳಿಯುವುದೋ ಅಥವಾ ಸಾಮರ್ಥ್ಯಗಳನ್ನು ನಿರ್ಮಿಸುವ ಸಮಾಜ ವಾಗಿಯೇ ರೂಪುಗೊಳ್ಳುವುದೋ ಎಂಬುದನ್ನು ನಿರ್ಧರಿಸಬೇಕಾಗಿದೆ.
ಪ್ರತಿಭೆಗೆ ಮುಕ್ತ ಅವಕಾಶವನ್ನು ನೀಡಿದರೆ ಜಗತ್ತು ನಿಮ್ಮತ್ತ ಹರಿದು ಬರುತ್ತದೆ ಎಂಬ ಪಾಠವನ್ನು ಅಮೆರಿಕ ನಮಗೆ ಕಲಿಸಿದರೆ, ಕೌಶಲವನ್ನು ನಿರ್ಮಿಸಿದರೆ ಭವಿಷ್ಯವನ್ನು ರೂಪಿಸಬಹುದು ಎಂಬು ದನ್ನು ಚೀನಾ ಜಗತ್ತಿಗೆ ತೋರಿಸುತ್ತದೆ. ಭಾರತವು ತನ್ನ ಸಾಮಾಜಿಕ ಸಮಾನತೆಯ ಬದ್ಧತೆಯನ್ನು ಉಳಿಸಿಕೊಂಡು ಆರ್ಥಿಕ ಕಾರ್ಯಕ್ಷಮತೆ ಮತ್ತು ನಾವೀನ್ಯವನ್ನು ಕೇಂದ್ರವಾಗಿಟ್ಟುಕೊಂಡಾಗ ಮಾತ್ರ ನಿಜವಾದ ಜಾಗತಿಕ ನಾಯಕತ್ವವನ್ನು ಸಾಧಿಸಬಲ್ಲದು. ಏಕೆಂದರೆ 21ನೇ ಶತಮಾನದಲ್ಲಿ ಭಾರತವು ಜಾತಿ-ವರ್ಗಗಳನ್ನು ಎಣಿಸುವುದರಿಂದಲ್ಲ, ನಿಜವಾದ ಪ್ರತಿಭೆಗಳನ್ನು ಬೆಳೆಸುವುದರಿಂದ ವಿಶ್ವಗುರುವಾಗಲು ಸಾಧ್ಯ.
(ಲೇಖಕರು ಸಹ-ಪ್ರಾಧ್ಯಾಪಕರು)