ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Ravi Sajangadde Column: ಕ್ರಿಕೆಟ್‌ ಆತಿಥ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಮತ್ತೆ ಸಜ್ಜು !

ಹಲವಾರು ಇವೆಂಟ್‌ಗಳ ಕೇಂದ್ರಬಿಂದುವಾಗಿದ್ದ ಚಿನ್ನಸ್ವಾಮಿ ಕ್ರೀಡಾಂಗಣವು ಜನರಿಲ್ಲದೆ, ಯಾವುದೇ ಸಮಾರಂಭ-ಮನರಂಜನಾ ಕಾರ್ಯಕ್ರಮಗಳು ನಡೆಯದೆ ಖಾಲಿ ಹೊಡೆದು, ಬಿಕೋ ಎನ್ನುತ್ತಿತ್ತು. ವೆಂಕಟೇಶ್ ಪ್ರಸಾದ್ ಅಧ್ಯಕ್ಷತೆಯಲ್ಲಿ ಕೆಎಸ್‌ಸಿಎಗೆ ಹೊಸ ಆಡಳಿತ ಮಂಡಳಿ ಬಂದು ಮೂರು ತಿಂಗಳಾದವು. ಆ ತಂಡದ ನಿರಂತರ ಮಾತುಕತೆ, ಪ್ರಯತ್ನದ ಫಲವಾಗಿ ಕೊನೆಗೂ ಈ ಬಾರಿಯ ಐಪಿಎಲ್ ಪಂದ್ಯಾವಳಿಯ ಕೆಲವು ಪಂದ್ಯಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಸಲು ಅನುಮತಿ ದೊರಕಿದೆ!

ಕ್ರಿಕೆಟ್‌ ಆತಿಥ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಮತ್ತೆ ಸಜ್ಜು !

-

Ashok Nayak
Ashok Nayak Mar 14, 2026 7:29 AM

ರಾಯಲ್‌ ಸೀಮೆ

ರವೀ ಸಜಂಗದ್ದೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 18 ವರ್ಷಗಳ ತರುವಾಯ ಚೊಚ್ಚಲ ಐಪಿಎಲ್ ಗೆದ್ದ ಸಂಭ್ರಮಾಚರಣೆ ಸಂದರ್ಭ (ಜೂನ್ 04, 2025) ನಡೆದ ಕಾಲ್ತುಳಿತ ದುರಂತದಲ್ಲಿ 11 ಜನರು ಸಾವಿಗೀಡಾಗಿ 50ಕ್ಕೂ ಹೆಚ್ಚು ಜನರು ಗಾಯಗೊಂಡ ದಿನದಿಂದ ಚಿನ್ನಸ್ವಾಮಿ ಕ್ರೀಡಾಂಗಣ ಅಕ್ಷರಶಃ ಸೂತಕದ ಮನೆಯಾಗಿತ್ತು. ಕಳೆದ 9 ತಿಂಗಳುಗಳಿಂದ ಅಲ್ಲಿ ಯಾವುದೇ ಕ್ರಿಕೆಟ್ ಪಂದ್ಯ ನಡೆದೇ ಇಲ್ಲ!

ಹಲವಾರು ಇವೆಂಟ್‌ಗಳ ಕೇಂದ್ರಬಿಂದುವಾಗಿದ್ದ ಚಿನ್ನಸ್ವಾಮಿ ಕ್ರೀಡಾಂಗಣವು ಜನರಿಲ್ಲದೆ, ಯಾವುದೇ ಸಮಾರಂಭ-ಮನರಂಜನಾ ಕಾರ್ಯಕ್ರಮಗಳು ನಡೆಯದೆ ಖಾಲಿ ಹೊಡೆದು, ಬಿಕೋ ಎನ್ನುತ್ತಿತ್ತು. ವೆಂಕಟೇಶ್ ಪ್ರಸಾದ್ ಅಧ್ಯಕ್ಷತೆಯಲ್ಲಿ ಕೆಎಸ್‌ಸಿಎಗೆ ಹೊಸ ಆಡಳಿತ ಮಂಡಳಿ ಬಂದು ಮೂರು ತಿಂಗಳಾದವು. ಆ ತಂಡದ ನಿರಂತರ ಮಾತುಕತೆ, ಪ್ರಯತ್ನದ ಫಲವಾಗಿ ಕೊನೆಗೂ ಈ ಬಾರಿಯ ಐಪಿಎಲ್ ಪಂದ್ಯಾವಳಿಯ ಕೆಲವು ಪಂದ್ಯಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಸಲು ಅನುಮತಿ ದೊರಕಿದೆ!

‘ಆರ್‌ಸಿಬಿ ಅಭಿಮಾನಿಗಳಿಗಾಗಿ ಪಂದ್ಯಗಳನ್ನು ತವರು ನೆಲದಲ್ಲಿ ನಡೆಸುವ ಉದ್ದೇಶದ ನಮ್ಮ ಹಲವು ತಿಂಗಳ ಪರಿಶ್ರಮ ಮತ್ತು ಸಮನ್ವಯದ ಫಲವಾಗಿ ಈ ಮಹತ್ವದ ಬೆಳವಣಿಗೆ ಸಾಧ್ಯವಾಗಿದೆ’ ಎಂದು ಆರ್‌ಸಿಬಿ ಫ್ರಾಂಚೈಸಿ ಹೇಳಿದೆ. ಚಿನ್ನಸ್ವಾಮಿ ಕ್ರೀಡಾಂ ಗಣಕ್ಕೆ ತಟ್ಟಿದ್ದ ಶಾಪ ಕೊನೆಗೂ ವಿಮೋಚನೆ ಆದಂತಾಗಿದೆ!

ಬಿಡುಗಡೆಯಾದ ಈ ಬಾರಿಯ ಐಪಿಎಲ್ ವೇಳಾಪಟ್ಟಿಯಲ್ಲಿ ಮಾರ್ಚ್ 28ರಂದು ನಡೆಯಲಿರುವ ಉದ್ಘಾಟನಾ ಪಂದ್ಯ ಈ ಕ್ರೀಡಾಂಗಣದಲ್ಲಿ ನಡೆಯಲಿದೆ.... ವಾವ್! ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, 2025ರ ಕೊನೆಗೆ ಭಾರತದಲ್ಲಿ ನಡೆದ ಐಸಿಸಿ ಮಹಿಳಾ ವಿಶ್ವಕಪ್‌ನ ಉದ್ಘಾಟನಾ ಪಂದ್ಯ, ಫೈನಲ್ ಪಂದ್ಯ ಸೇರಿದಂತೆ 5 ಮಹತ್ವದ ಪಂದ್ಯಗಳಿಗೆ, ಪುರುಷರ ಟಿ-20 ವಿಶ್ವಕಪ್ ಪಂದ್ಯಾವಳಿಯ 2-3 ಪಂದ್ಯಗಳಿಗೆ ಚಿನ್ನಸ್ವಾಮಿ ಕ್ರೀಡಾಂಗಣ ಮಡಿಲಾಗಬೇಕಿತ್ತು.

2026ರ ಮಹಿಳಾ ಪ್ರೀಮಿಯರ್ ಲೀಗ್‌ನ (ಡಬ್ಲ್ಯುಪಿಎಲ್) ಆರ್‌ಸಿಬಿ ತಂಡದ ಎಲ್ಲಾ ಲೀಗ್ ಪಂದ್ಯಗಳೂ ಇ ನಡೆಯಬೇಕಿತ್ತು. ಆದರೆ ಆರ್‌ಸಿಬಿ ವಿಜಯೋತ್ಸವ ಸಂದರ್ಭದ ಕಾಲ್ತುಳಿತ ವು ಈ ಅಪೂರ್ವ ಅವಕಾಶಗಳನ್ನು ಕಿತ್ತುಕೊಂಡಿತ್ತು. ಪ್ರಕರಣದ ತನಿಖೆ ನಡೆಸಿದ ಜಾನ್ ಮೈಕಲ್ ಡಿ’ಕುನ್ಹಾ ಆಯೋಗವು, ‘ಕ್ರೀಡಾಂಗಣವು ದೊಡ್ಡ ಪ್ರಮಾಣದ, ತುಂಬಾ ಜನರು ಸೇರುವ ಕಾರ್ಯಕ್ರಮಗಳನ್ನು ಆಯೋಜಿಸಲು ಸುರಕ್ಷಿತವಾಗಿಲ್ಲ’ ಎಂದು ತೀರ್ಪು ನೀಡಿತ್ತು.

ಕ್ರೀಡಾಂಗಣದ ವಿನ್ಯಾಸ ಮತ್ತು ರಚನೆಯು ‘ಅಭದ್ರ’ವಾಗಿದೆ, ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ಕಾರ್ಯಕ್ರಮಗಳನ್ನು ಇಲ್ಲಿ ಆಯೋಜಿಸುವುದು ‘ಸಾರ್ವಜನಿಕ ಸುರಕ್ಷತೆ, ತುರ್ತು ಪರಿಸ್ಥಿತಿ ನಿರ್ವಹಣೆಗೆ ಅಪಾಯಕಾರಿ’ ಎಂದೂ ತೀರ್ಪಿನಲ್ಲಿ ಉಲ್ಲೇಖಿಸಲಾಗಿತ್ತು.

‘ಕಾಲ್ತುಳಿತಕ್ಕೆ ಆರ್‌ಸಿಬಿ ಆಡಳಿತ ಮಂಡಳಿಯ ತರಾತುರಿ ನಿರ್ಧಾರವೇ ಕಾರಣ’ ಎಂದು ಸಿಐಡಿ ತನಿಖಾ ವರದಿ ಸಲ್ಲಿಸಿತ್ತು. ಈ ಎಲ್ಲಾ ಕಾರಣಗಳಿಂದ ಚಿನ್ನಸ್ವಾಮಿ ಕ್ರೀಡಾಂಗಣ ದಲ್ಲಿ ಕ್ರಿಕೆಟ್ ಮತ್ತು ಯಾವುದೇ ಸಮಾರಂಭ ನಡೆಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಬೆಂಗಳೂರು ನಗರ ಪೊಲೀಸರು ಹಲವಾರು ಷರತ್ತುಗಳನ್ನು ವಿಧಿಸಿದ್ದರು.

ಇದ್ದ ಬಹುತೇಕ ದೋಷಗಳನ್ನು ಸರಿಪಡಿಸಿ, ಷರತ್ತುಗಳನ್ನೂ ಪೂರೈಸಿ, ಅಡೆತಡೆಗಳನ್ನು ನಿವಾರಿಸಿ, ಆ ಕುರಿತು ಸರಕಾರ ಮತ್ತು ಸಂಬಂಧಪಟ್ಟ ಇಲಾಖೆಗಳೊಂದಿಗೆ ನಿರಂತರ ಸಭೆ-ಚರ್ಚೆ ನಡೆಸಿ, ಅವರ ಮನವೊಲಿಸಿ ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸಲು ಅನುಮತಿ ಪಡೆಯುವಲ್ಲಿ ಕೆಎಸ್ʼಸಿಎ ಯಶ ಕಂಡಿದೆ.

‘ನಮ್ಮ ಹೊಸ ಆಡಳಿತ ಮಂಡಳಿಯ ಪ್ರಾಮಾಣಿಕ ಪ್ರಯತ್ನದಿಂದ ಇದು ಸಾಧ್ಯವಾಗಿದೆ. ನಮ್ಮ ತಂಡವು ಆರ್‌ಸಿಬಿ ಅಭಿಮಾನಿಗಳಿಗೆ ನೀಡಿದ ಮಾತನ್ನು ಉಳಿಸಿಕೊಂಡಿದೆ’ ಎಂದು ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಸಂತಸ ವ್ಯಕ್ತಪಡಿಸಿದ್ದಾರೆ. ಈ ಶುಭವಾರ್ತೆ ತಿಳಿದು ಕ್ರಿಕೆಟ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಕೊಹ್ಲಿ ಮತ್ತು ಆರ್‌ಸಿಬಿಯ ಪುನರಾಗಮನ ವನ್ನು ಈ ಅಂಗಳದಲ್ಲಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರಿಸುತ್ತಿದ್ದಾರೆ!

ಕಾಲ್ತುಳಿತ ದುರಂತದ ವಿಚಾರಣೆಯ ತೀರ್ಪಿನ ಅನ್ವಯ ಮಾಡಬೇಕಾದ ಎಲ್ಲಾ ಸಿದ್ಧತೆ ಮತ್ತು ಸುರಕ್ಷತಾ ಕ್ರಮಗಳನ್ನು ಪಾಲಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿ, ಭದ್ರತೆ ಮುಂತಾದ ವಿಚಾರಗಳಲ್ಲಿ ಸಂಬಂಽತ ಇಲಾಖೆಗಳು ಸಂತೃಪ್ತವಾದ ಪರಿಣಾಮ, ಚಿನ್ನಸ್ವಾಮಿಯಲ್ಲಿ ಕೊನೆಗೂ ಐಪಿಎಲ್ ಪಂದ್ಯಗಳಿಗೆ ಅನುಮತಿ ದೊರೆತಿದೆ.

ಐಪಿಎಲ್ 2025ರ ಚಾಂಪಿಯನ್ ಆರ್‌ಸಿಬಿ ತಂಡದ 2026ರ ಮೊದಲ ಪಂದ್ಯ ಮಾರ್ಚ್ 28ರಂದು ಮತ್ತು ಫೈನಲ್ ಪಂದ್ಯ ಇಲ್ಲಿ ನಡೆಯಲಿದೆ. ಜತೆಗೆ ಆರ್‌ಸಿಬಿಯ 5 ಲೀಗ್ ಪಂದ್ಯಗಳಿಗೂ ‘ಚಿನ್ನಸ್ವಾಮಿ’ ಮಡಿಲಾಗಲಿರುವುದು ಕ್ರಿಕೆಟ್ ಪ್ರಿಯರನ್ನು ಹುಚ್ಚೆಬ್ಬಿಸಿವೆ!

ಭಾರತ ಮತ್ತು ಕರ್ನಾಟಕದ ಕ್ರಿಕೆಟ್ ಪರಂಪರೆ ಮತ್ತು ಇತಿಹಾಸದಲ್ಲಿ ಈ ಕ್ರೀಡಾಂಗಣ ಹಲವಾರು ಮೈಲಿಗಲ್ಲುಗಳಿಂದ ಚಿರಸ್ಥಾಯಿಯಾಗಿದೆ. ಮಳೆ ನಿಂತು ಕೆಲವೇ ನಿಮಿಷಗಳಲ್ಲಿ ನೀರು ಇಂಗಿ ಪಂದ್ಯವನ್ನು ಆರಂಭಿಸಬಹುದಾದ ತಂತ್ರಜ್ಞಾನವಿರುವ ವಿಶಿಷ್ಟ ಕ್ರೀಡಾಂ ಗಣವಿದು.

ಕಪಿಲ್ ದೇವ್ ಅವರು, ರಿಚರ್ಡ್ ಹ್ಯಾಡ್ಲಿಯವರ ಆಗಿನ ಅತಿ ಹೆಚ್ಚು ಟೆಸ್ಟ್ ವಿಕೆಟ್‌ಗಳ ದಾಖಲೆಯನ್ನು (431) ಸರಿಗಟ್ಟಿದ್ದು ಇಲ್ಲೇ! ಅನಿಲ್ ಕುಂಬ್ಳೆ ತಮ್ಮ ಟೆಸ್ಟ್ ಜೀವನದ 100ನೆಯ (1996), 300ನೆಯ (2002), 400ನೆಯ (2004) ವಿಕೆಟ್‌ಗಳನ್ನು ಪಡೆದ ಸಂಭ್ರಮ ವನ್ನು ಇಲ್ಲಿ ದಾಖಲಿಸಿಕೊಂಡರು!

ಮೊಹಮ್ಮದ್ ಅಜರುದ್ದೀನ್ ತಮ್ಮ ಟೆಸ್ಟ್ ಜೀವನದ 100ನೆಯ ಕ್ಯಾಚನ್ನು ಹಿಡಿದಿದ್ದು ಇಲ್ಲೇ. ಸಚಿನ್ 14000 ರನ್‌‌ʼಗಳನ್ನು ಇದೇ ಪಿಚ್‌ನಲ್ಲಿ ಪೂರೈಸಿದ್ದು. 1998ರ ‘ಟೈಟನ್ ಕಪ್’ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಭಾರತದ ರೋಮಾಂಚಕ ಜಯ ಎಲ್ಲರ ಮನದಲ್ಲಿನ್ನೂ ಹಸಿರಾಗಿದೆ!

ಆಸ್ಟ್ರೇಲಿಯಾ ನೀಡಿದ 216 ರನ್‌ಗಳ ಗುರಿ ಬೆನ್ನಟ್ಟಿದ ಭಾರತ 164 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು. ಆಗ ಜತೆಯಾದ ಕನ್ನಡಿಗರಾದ ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ 9ನೆಯ ವಿಕೆಟ್‌ಗೆ ಅಜೇಯ 52 ರನ್‌ಗಳ ಜತೆಯಾಟ ವಾಡಿ ಭಾರತವನ್ನು ಗೆಲ್ಲಿಸಿದ್ದು ಇಲ್ಲಿ ದಾಖಲಾದ ಅಪೂರ್ವ ಕ್ಷಣಗಳಂದು!

ಅಂದು ಪಂದ್ಯಾಟವನ್ನು ಗ್ಯಾಲರಿಯಲ್ಲಿ ಕುಳಿತು ವೀಕ್ಷಿಸಿದ್ದ ಇಬ್ಬರ ತಾಯಂದಿರೂ ಆನಂದಬಾಷ್ಪ ಸುರಿಸಿದ್ದು ಮರೆಯಲಾಗದ ನೆನಪು!ಆರ್‌ಸಿಬಿ ತಂಡಕ್ಕೆ ಮತ್ತು ಅದರ ಅಭಿಮಾನಿ ಪ್ರೇಕ್ಷಕರಿಗೆ ‘ಚಿನ್ನಸ್ವಾಮಿ ಕ್ರೀಡಾಂಗಣ’ ಎಂದರೆ ಬೆಂಗಳೂರಿನ ಅಸ್ಮಿತೆ, ನೂರಾರು ನೆನಪುಗಳ ಸುಂದರ ಭಿತ್ತಿ, ಪ್ರೀತ್ಯಾದರದ ತವರುಮನೆ!

ಇಲ್ಲಿ ಆರ್‌ಸಿಬಿ ಆಟಗಾರರಿಗೆ ಪ್ರತಿ ಹಂತದಲ್ಲೂ ಸಿಗುವ ಸೂರ್ತಿ ಅನನ್ಯವಾದುದು. ತವರು ನೆಲದಲ್ಲಿ ಆರ್‌ಸಿಬಿ ಆಡುವ ಆಟವನ್ನು ಕಣ್ಮನ ತುಂಬಿಕೊಳ್ಳಲು ಅಭಿಮಾನಿಗಳು ತುದಿ ಗಾಲಲ್ಲಿದ್ದಾರೆ. ‘ಸೋತ್ರೂ ಆರ್‌ಸಿಬಿ, ಸತ್ರೂ ಆರ್‌ಸಿಬಿ’ ರೀತಿಯ ಘೋಷಣೆಗಳು ಚಿನ್ನಸ್ವಾಮಿ ಕ್ರೀಡಾಂಗಣದಿಂದ ಮುಗಿಲಿನೆತ್ತರಕ್ಕೆ ಮತ್ತೆ ಮತ್ತೆ ಚಿಮ್ಮಲಿವೆ! ಈ ಸಂಭ್ರಮ ಕ್ಕಾಗಿ, ಮೈದಾನವು ಜನರಿಂದ ಮೈದುಂಬಿ, ಮದುವಣಗಿತ್ತಿಯಂತೆ ತಯಾರಾದಾಗ ಅದು ‘ಸಿಂಗಾರ ಸಿರಿಯೇ’ ಸರಿ! ಒಟ್ಟಿನಲ್ಲಿ, ಚಿನ್ನಸ್ವಾಮಿಯಲ್ಲಿ ಪುನಃ ಕ್ರಿಕೆಟ್ ಘರ್ಜಿಸಲಿದೆ, ವಿಜೃಂಭಿಸಲಿದೆ!

ಈ ಹಿಂದಿನ ಎಲ್ಲಾ ದಾಖಲೆಗಳನ್ನು ಅಳಿಸಿ, ಮಗದಷ್ಟು ಪ್ರೇಕ್ಷಕರು ಸೇರುವ ‘ಕ್ರಿಕೆಟ್ ಜಾತ್ರೆ’ ಯನ್ನು ನಾವೆಲ್ಲ ಕಣ್ತುಂಬಿಕೊಳ್ಳೋಣ. ಪಂದ್ಯದ ದಿನ ಕ್ರೀಡಾಂಗಣದ ಸುತ್ತ ಹೆಚ್ಚಿನ ಭದ್ರತೆ ಮತ್ತು ಸೂಕ್ತ ಬಂದೋಬ ಇರಲಿದೆ.

ತಪ್ಪುಗಳಿಂದ ಪಾಠ ಕಲಿತು, ಕ್ರಿಕೆಟ್ ಹುಚ್ಚಿನಲ್ಲಿ ಮೈಮರೆಯದೆ, ಜವಾಬ್ದಾರಿಯುತವಾಗಿ ವರ್ತಿಸುವ ಹೊಣೆ ನಮ್ಮೆಲ್ಲರದ್ದು. ಪಂದ್ಯ ವೀಕ್ಷಿಸಲು ಕ್ರೀಡಾಂಗಣಕ್ಕೆ ಹೋಗುವ ಎಲ್ಲರೂ ಸಂಯಮ-ಶಿಸ್ತಿನಿಂದ ವರ್ತಿಸುವ ಪ್ರತಿಜ್ಞೆ ಮಾಡೋಣ. ಕ್ರಿಕೆಟ್ ಮತ್ತು ಬದುಕನ್ನು ಸದಾ ಸಂಭ್ರಮಿಸೋಣ!

ಆರ್‌ಸಿಬಿಯ ‘ತವರುಮನೆ’ಯಲ್ಲಿ ಕ್ರಿಕೆಟ್ ಪಂದ್ಯಗಳು ಸುಸೂತ್ರವಾಗಿನಡೆಯಲಿ. ಮಾರ್ಚ್ 28ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಗೋಣ.

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)