Naveen Sagar Column: ಇಲ್ಲಿ ವಿಶ್ವಸುಂದರಿಗಿರುವ ಅದೃಷ್ಟ ಮಿ.ಯೂನಿವರ್ಸ್ʼಗಿಲ್ಲ !
ನಮ್ಮೂರ ಎಲ್ಲ ಯುವಕರಿಗೂ ಗುರುಮೂರ್ತಿ ಸ್ಫೂರ್ತಿಯಾಗಿ ಕಂಡಿದ್ದರು. ಬಾಡಿ ಬಿಲ್ಡ್ ಮಾಡುವುದರ ಜೊತೆಗೆ ಕೆಲಸವೂ ಸಿಗುತ್ತದೆಂಬ ಆಸೆ ಹುಟ್ಟಿತ್ತು. ಅದಕ್ಕೆ ಸರಿಯಾಗಿ ಅವರ ನಂತರದಲ್ಲಿ ಕೆಲವರಿಗೆ ಪೊಲೀಸ್ ಇಲಾಖೆಯಲ್ಲಿ, ಸೇನೆಯಲ್ಲಿ ಇನ್ನು ಕೆಲವು ರಾಜ್ಯ-ಕೇಂದ್ರ ಸರಕಾರದ ಇಲಾಖೆಗಳಲ್ಲಿ ಕೆಲಸ ಸಿಕ್ಕಿ, ನಮ್ಮ ಆಸೆಯನ್ನು ದುಪ್ಪಟ್ಟುಗೊಳಿಸಿತ್ತು
-
ಪದಸಾಗರ
ಸುಮಾರು ನಲವತ್ತು ವರ್ಷ ಹಿಂದಿನ ನೆನಪು. ನನ್ನ ಹುಟ್ಟೂರು ಸಾಗರದ ಕಥೆ. ಅವರ ಹೆಸರು ಗುರುಮೂರ್ತಿ. ಬಹಳ ಆಕಸ್ಮಿಕವಾಗಿ ಅವರ ಮನೆಗೆ ಹೋಗುವ ಅವಕಾಶ ಸಿಕ್ಕಿತು. ಅದು ಮನೆಯಲ್ಲ. ಗರಡಿ ಮನೆ! ಹೌದು. ತಮ್ಮ ಮನೆಯನ್ನು ಆತ ಅಕ್ಷರಶಃ ಗರಡಿ ಮನೆಯಾಗಿಸಿ ಕೊಂಡಿದ್ದರು. ಇಂದು ನಾವು ಅತ್ಯಾಧುನಿಕ ಜಿಮ್ ಗಳಲ್ಲಿ ನೋಡುವ ರೀತಿಯ ಯಾವುದೇ ಸಲಕರಣೆಗಳು ಅಲ್ಲಿರಲಿಲ್ಲ. ತೂಕ ಎತ್ತುವುದಕ್ಕೆ ಅದೇನೋ ಕಲ್ಲು ಗುಂಡುಗಳು, ಕಬ್ಬಿಣದ ತುಂಡುಗಳು, ತೂಕ ಎಳೆಯುವುದಕ್ಕೆ ಅವರೇ ಸಿದ್ಧಪಡಿಸಿದ್ದ ಯಂತ್ರಗಳು, ಗುಡ್ಡೆ ಹಾಕಿದ ಮರಳು, ಮಣ್ಣು, ಗುದ್ದಲಿ, ಪಿಕಾಸಿ, ಮರದ ಗದೆ, ಹೀಗೆ ಏನೇನೋ ವಸ್ತುಗಳು.
ಗಂವ್ವೆನ್ನುವ ನಿಶ್ಶಬ್ದ ವಾತಾವರಣದಲ್ಲಿ ಧ್ಯಾನದಂತೆ ಆತ ದೇಹ ದಂಡಿಸುತ್ತಿದ್ದರು. ಮನೆಯ ಒಂದು ಭಾಗವನ್ನೇ ವ್ಯಾಯಾಮ ಶಾಲೆಯನ್ನಾಗಿಸಿಕೊಂಡು ತಪಸ್ಸಿನಂತೆ ದೇಹ ಕಟ್ಟುವ ಕಾರ್ಯದಲ್ಲಿ ತೊಡಗಿದ್ದರು. ಅಲ್ಲಿಯ ತನಕ ಬಾಡಿ ಬಿಲ್ಡಿಂಗ್ ಅಂದರೇನು ಅಂತ ಗೊತ್ತಿರಲಿಲ್ಲ. ಅದ್ಯಾವ ಬಾಡಿ ಬಿಲ್ಡರನ್ನೂ ನೋಡಿರಲಿಲ್ಲ. ಸಿನಿಮಾಗಳಲ್ಲಿ ಪ್ರಭಾಕರ್ ಥರದ ನಟರು ಎಣ್ಣೆ ಹಚ್ಚಿದ ಮೈಯಲ್ಲಿ ತೋಳಬಲ ತೋರಿಸುತ್ತಾ ಎದೆಮಾಂಸವನ್ನು ಕುಣಿಸುತ್ತಿದ್ದುದನ್ನು ನೋಡಿದ್ದರೂ ಅದು ಈ ರೀತಿ ಸೆಳೆದಿರಲಿಲ್ಲ.
ಗುರುಮೂರ್ತಿಯವರ ದೈತ್ಯಾಕಾರದ ದೇಹ, ಬಟ್ಟೆಯಲ್ಲಿ ಅವರ ನಿಲುವು, ನಡಿಗೆ ಇದೆಲ್ಲ ಬಹಳವಾಗಿ ಆಕರ್ಷಿಸಿ, ದೊಡ್ಡವನಾದ ಮೇಲೆ ನಾನೂ ಹೀಗೆ ಆಗಬೇಕು ಅನಿಸಿಬಿಟ್ಟಿತ್ತು. ಗುರುಮೂರ್ತಿಯವರ ವಿಚಾರದಲ್ಲಿ ಅವರ ದೇಹದಾರ್ಢ್ಯದ ಜೊತೆಯಲ್ಲಿಯೇ ಆಕರ್ಷಿಸಿದ ಇನ್ನೊಂದು ವಿಷಯವೆಂದರೆ, ಅವರಿಗೆ ಸರಕಾರಿ ನೌಕರಿ ಸಿಕ್ಕಿತ್ತು ಎಂಬ ಸುದ್ದಿ! ಆಗ ನಡೆಯುತ್ತಿದ್ದ ಸಾಲುಸಾಲು ದೇಹದಾರ್ಢ್ಯ ಸ್ಪರ್ಧೆ ಗಳಲ್ಲಿ ಗುರುಮೂರ್ತಿ ಕರ್ನಾಟಕ ಉದಯ, ಭಾರತ ಉದಯ, ಕಿಶೋರ, ಹೀಗೆ ಏನೇನೋ ಟೈಟಲ್‌ಗಳ ಅವಾರ್ಡ್‌ಗಳನ್ನು ಗೆದ್ದ ಪರಿಣಾಮ, ಅವರಿಗೆ ರೈಲ್ವೇಸ್ ನಲ್ಲೇನೋ ಕೆಲಸವೂ ಸಿಕ್ಕಿಬಿಟ್ಟಿತ್ತು.
ಇದನ್ನೂ ಓದಿ: Naveen Sagar Column: ಎಲ್ಲೂ ನಾನೇ ಎಲ್ಲೆಲ್ಲೂ ನಾನೇ ಎನ್ನುವ ಸರ್ವಾಂತರ್ಯಾಮಿ !
ನಮ್ಮೂರ ಎಲ್ಲ ಯುವಕರಿಗೂ ಗುರುಮೂರ್ತಿ ಸ್ಫೂರ್ತಿಯಾಗಿ ಕಂಡಿದ್ದರು. ಬಾಡಿ ಬಿಲ್ಡ್ ಮಾಡುವುದರ ಜೊತೆಗೆ ಕೆಲಸವೂ ಸಿಗುತ್ತದೆಂಬ ಆಸೆ ಹುಟ್ಟಿತ್ತು. ಅದಕ್ಕೆ ಸರಿಯಾಗಿ ಅವರ ನಂತರದಲ್ಲಿ ಕೆಲವರಿಗೆ ಪೊಲೀಸ್ ಇಲಾಖೆಯಲ್ಲಿ, ಸೇನೆಯಲ್ಲಿ ಇನ್ನು ಕೆಲವು ರಾಜ್ಯ-ಕೇಂದ್ರ ಸರಕಾರದ ಇಲಾಖೆಗಳಲ್ಲಿ ಕೆಲಸ ಸಿಕ್ಕಿ, ನಮ್ಮ ಆಸೆಯನ್ನು ದುಪ್ಪಟ್ಟುಗೊಳಿಸಿತ್ತು. ಆದರೆ ಒಮ್ಮೆ ವ್ಯಾಯಾಮ ಶಾಲೆಗೆ ಹೊಕ್ಕು ವ್ಯಾಯಾಮ ಶುರುಮಾಡುತ್ತಿದ್ದಂತೆ, ಈ ಸರಕಾರಿ ನೌಕರಿಯ ವಿಷಯ ಮರೆತುಬಿಟ್ಟೆವು. ಅದು ಕೊಡುತ್ತಿದ್ದ ಆತ್ಮವಿಶ್ವಾಸವೇ ಬೇರೆ ಇತ್ತು.
ಗಟ್ಟಿಗೊಳ್ಳುತ್ತಿದ್ದ ಸ್ನಾಯುಗಳು, ನೇರಗೊಳ್ಳುತ್ತಿದ್ದ ನಿಲುವು, ಉಬ್ಬುತ್ತಿದ್ದ ತೋಳು ಅಗಲಗೊಳ್ಳುತ್ತಿದ್ದ ಎದೆ, ಭುಜ ಭಾಗಗಳು, ಅಪಾರ ಧೈರ್ಯ ಕೊಡುತ್ತಿದ್ದವು. ಹುಡುಗಿಯರೆದುರು ಓಡಾಡಲು ಬೇರೆಯದೇ ಕಾನ್ಫಿಡೆನ್ಸ್ ತುಂಬುತ್ತಿದ್ದವು. ಯಾರನ್ನಾದರೂ ಎದುರಿಸಬಲ್ಲೆವೆಂಬ ಮನೋಬಲವನ್ನೂ ನೀಡುತ್ತಿದ್ದವು. ಅಂದಿಗೆ ಸಿಕ್ಸ್ ಪ್ಯಾಕ್ ಎಂಬ ಶೋಕಿಗಳಿರಲಿಲ್ಲ. ಜೀರೋ ಫ್ಯಾಟ್, ಜೀರೋ ಸೈಜ್, ಫ್ಯಾಟ್ ಬರ್ನಿಂಗ್, ಮಾಸ್, ಬಲ್ಕ್ ಇತ್ಯಾದಿಗಳ ಅರಿವೇ ಇರಲಿಲ್ಲ.
ಬಸ್ಕಿ ಹೊಡಿ, ದಂಡ ಹೊಡಿ, ಪುಲ್ ಅಪ್ಸ್ ಮಾಡು, ದೇಹ ಹುರಿಗೊಳಿಸು. ಅಷ್ಟೇ ಗೊತ್ತಿದ್ದಿದ್ದು. ಮೊಳಕೆ ಕಾಳು, ಮೊಟ್ಟೆ, ತರಕಾರಿ, ಹಣ್ಣು ಇದಿಷ್ಟರ ಹೊರತಾಗಿ (ವೆಜಿಟೇರಿಯನ್ ಗಳಿಗೆ) ಬೇರೆ ಫುಡ್ ಸಜೆಶನ್ ಕೂಡ ಇರಲಿಲ್ಲ. ಇಂಥ ಶಿಸ್ತಿನ ಬಾಡಿ ಬಿಲ್ಡಿಂಗ್ ಅಭ್ಯಾಸಗಳನ್ನು ನೋಡಿ ಬೆಳೆದ ನಮಗೆ ಇದ್ದದ್ದು, ಇನ್ನೊಂದು ಹತ್ತೋ ಹದಿನೈದೋ ವರ್ಷ ಇವರ ಹಾಗೆಯೇ ವ್ಯಾಯಾಮ ಮಾಡಿದರೆ ನಾವೂ ಇವರಂತೆ ಆಗುತ್ತೇವೆ ಎಂಬ ಶುದ್ಧವಿಶ್ವಾಸ.
ಸತತ ಅಭ್ಯಾಸವೊಂದೇ ಗುರಿಸಾಧನೆಗೆ ಮಾರ್ಗ ಎಂಬ ನಂಬಿಕೆ. ಕನ್ನಡ ಚಿತ್ರರಂಗದಲ್ಲಿ ಯೋಗ ಮತ್ತು ವ್ಯಾಯಾಮದಿಂದಲೇ ದೇಹ ಚೆನ್ನಾಗಿಟ್ಟಿದ್ದ ರಾಜ್ ಕುಮಾರ್ ಇದ್ದರು. ಹಿಂದಿ ಚಿತ್ರರಂಗ ದಲ್ಲಿ ಆಗ ಸನ್ನಿಡಿಯೋಲ್ ನಾವು ಕಂಡ ಬಾಡಿ ಬಿಲ್ಡರ್. ಆ ನಂತರ ಸಲ್ಮಾನ್ ಖಾನ್ ಬಂದ. ಸುನೀಲ್ ಶೆಟ್ಟಿ ಬಂದ. ಅದಕ್ಕೂ ಮುನ್ನ ರಾಮಾಯಣ ಧಾರಾವಾಹಿಯ ಹನುಮಂತ ಧಾರಾ ಸಿಂಗ್, ಮಹಾಭಾರತದ ಭೀಮ ಪ್ರವೀಣ್ ಕುಮಾರ್ ಅವರ ದೇಹ ನೋಡಿ ಚಕಿತರಾಗಿದ್ದೆವು. ಅವರದ್ದು ಕುಸ್ತಿಪಟುಗಳ ದೇಹವೆಂದು ಓದಿ ತಿಳಿದಿದ್ದೆವು. ಆದರೆ, ಮಿಲೆನಿಯ ಶುರುವಾದದ್ದೇ ಆದದ್ದು ದೇಹದಾರ್ಢ್ಯದ ಪರಿಕಲ್ಪನೆಯೇ ಬದಲಾಗಿ ಹೋಯಿತು. ಅದು ಹೃತಿಕ್ ರೋಷನ್ ಯುಗ. ಕಹೋ ನಾ ಪ್ಯಾರ್ ಹೈ ಬರ್ತಾ ಇದ್ದ ಹಾಗೆ ಜಿಮ್‌ಗಳು ನಾಯಿಕೊಡೆಯಂತೆ ತೆರೆಯಲಾ ರಂಭಿಸಿದವು.
ಎಲ್ಲಿ ನೋಡಿದರೂ ಜಿಮ್ ಗಳು. ಜಿಮ್ ತುಂಬ ಯುವಕರು. ಎಲ್ಲರಿಗೂ ಹೃತಿಕ್ ರೋಷನ್ನನ ವಿ ಶೇಪ್ ಬಾಡಿ ಬೇಕು, ಬೈಸೆಪ್ಸ್ ಬೇಕು. ತಕ್ಷಣವೇ ಬೇಕು! ಜಿಮ್‌ಗಳು ಬದುಕಬೇಕು ಅಂದ್ರೆ, ತನ್ನ ಗ್ರಾಹಕರ ಆಸೆ ಪೂರೈಸಬೇಕು. ಆತ ಜಿಮ್ ಆಸಕ್ತಿ ಕಳೆದುಕೊಳ್ಳುವುದರೊಳಗಾಗಿ ಅವನಿಗೆ ರಿಸಲ್ಟ್ ಕೊಡಬೇಕು. ಆಗ ಬಂದಿದ್ದು ಶಾರ್ಟ್ ಕಟ್ ಸಪ್ಲಿಮೆಂಟ್‌ಗಳೆಂಬ ಭೂತಗಳು. ದೇಹದ ತೂಕ ಹೆಚ್ಚಿಸುವುದಕ್ಕಾಗಿ ಸ್ಟೆರಾಯಿಡ್ ತುಂಬಿದ ಪೌಡರ್ ಗಳು, ಅಗ್ಗದ ಮಾತ್ರೆಗಳು ಮತ್ತು ಇಂಜೆಕ್ಷನ್ ಗಳು ಬರತೊಡಗಿದವು.
ಕುದುರೆಗಳಿಗೆ, ಎತ್ತುಗಳಿಗೆ, ಮೀನುಗಳಿಗೆ ಕೊಡುವ ಔಷಧಗಳನ್ನೆಲ್ಲ ಮನುಷ್ಯನಿಗೆ ಕೊಟ್ಟು ದೇಹವನ್ನು ರಾಕ್ಷಸೀಯಗೊಳಿಸುವ ನೀಚಪದ್ಧತಿಗಳು ಬಂದವು. ಸ್ಟೆರಾಯಿಡ್‌ಗಳಿಂದ ಪುರುಷತ್ವ ಕಳೆದುಕೊಳ್ಳು ವವರು, ಸಣ್ಣಗಾಗಲು ಹೋಗಿ ಕಿಡ್ನಿ, ಲಿವರ್‌ಗೆ ಕುತ್ತು ತಂದುಕೊಳ್ಳುವವರು, ಪ್ರಮಾಣಿತವಲ್ಲದ ಯಾವ್ಯಾವುದೋ ಪೌಡರ್‌ಗಳಿಂದ ದೇಹದ ಮೇಲೆ ಅತ್ಯಾಚಾರ ಮಾಡಿಕೊಂಡು ಅಕಾಲಿಕ ವೃದ್ಧಾಪ್ಯ ತಂದುಕೊಳ್ಳುವವರು, ತೊಂಬತ್ತೇ ದಿನದಲ್ಲಿ ಹೆಂಗಿದ್ದವ್ರು ಹೆಂಗೋ ಆಗೋಗ್ತೀರಿ ಅನ್ನೋ ಬಲೆಗೆ ಬೀಳಿಸಿ ಅವೈಜ್ಞಾನಿಕವಾದ ವರ್ಕೌಟ್ ಮತ್ತು ಆಹಾರಪದ್ಧತಿ ಅಭ್ಯಾಸ ಮಾಡಿಸಿ, ಸಲ್ಲದ ಸಪ್ಲಿಮೆಂಟ್ ಗಳನ್ನು ಕೊಡುವ ಕೆಟ್ಟ ಟ್ರೆಂಡ್ ಶುರುವಾಯಿತು.
ರಿಸಲ್ಟೇನೋ ಸಿಕ್ಕಿರುತ್ತಿತ್ತು. ಆದರೆ ಅದರ ಅಡ್ಡ ಪರಿಣಾಮಗಳು ಕಾಣಿಸುವ ಹೊತ್ತಿಗೆ ಇವರು ಜಿಮ್ ಬಿಟ್ಟಿರುತ್ತಾರೆ. ಟ್ರೇನರ್ ಇನ್ಯಾವುದೋ ಜಿಮ್ ಸೇರಿ ಅಲ್ಲಿ ಮತ್ತಷ್ಟು ಹತ್ಯೆಗೆ ಹೊಂಚು ಹಾಕಿರು ತ್ತಾನೆ. ಸರಿಯಾದ ಅಧ್ಯಯನ ಇಲ್ಲದ ಟ್ರೇನರ್‌ಗಳು, ತಕ್ಷಣವೇ ರಿಸಲ್ಟ್ ಬೇಕೆಂದು ಹಪಹಪಿಸುವ ಜನರು, ವಾರ್ಷಿಕ ಪ್ಯಾಕೇಜ್ ತಗೊಂಡ್ರೆ ಸಾಕು ಎಂದು ಕ್ಯಾಚ್ ಹಾಕಲು ನಿಂತಿರುವ ಜಿಮ್ ಗಳು ಎಲ್ಲರೂ ಸೇರಿ ಬಾಡಿಬಿಲ್ಡಿಂಗ್ ಅಥವಾ ವ್ಯಾಯಾಮ ಕ್ರೀಡೆ ಮತ್ತು ಕಲೆಯನ್ನು ನಿರ್ನಾಮ ಗೊಳಿಸಿದ್ದಾರೆ.
ಈ ಅವಧಿಯ ನಾನು ಗಮನಿಸಿದ್ದು, ಬಾಡಿ ಬಿಲ್ಡರ್‌ಗಳನ್ನು ಅವರ ದೇಹದಾರ್ಢ್ಯದ ಆಧಾರದ ಮೇಲೆ, ಅವರು ಗೆದ್ದಿರುವ ಪ್ರಶಸ್ತಿಗಳ ಆಧಾರದ ಮೇಲೆ ಸರಕಾರಿ ನೌಕರಿಗಳಿಗೆ ಪರಿಗಣಿಸುತ್ತಿಲ್ಲ ಎಂಬ ವಾಸ್ತವ. ಇದಕ್ಕೆ ಕಾರಣವೇ ಸ್ಟಿರಾಯಿಡ್ ಎಂಬ ಭೂತ. ನ್ಯಾಚುರಲ್ ಬಾಡಿಬಿಲ್ಡಿಂಗ್ ಎಂಬ ಪರಿಕಲ್ಪನೆಯನ್ನೇ ಹೊಡೆದು ಹಾಕಿದ್ದು ಸ್ಟಿರಾಯಿಡ್‌ಗಳು. ಯಾವುದೇ ಜಿಮ್‌ಗೆ ಹೋದರೂ ಅಲ್ಲಿ ನಾನು ಚಿಕ್ಕಂದಿನಲ್ಲಿ ಕಂಡಿದ್ದ ಗುರುಮೂರ್ತಿಯನ್ನು ಮೀರಿಸುವಂಥ ದೇಹ ಹೊಂದಿರುವ ಹತ್ತಾರು ಮಂದಿ. ಮಸಲ್‌ಗಳು ಕಿತ್ತು ಬರುತ್ತವೇನೋ ಎಂಬಂತೆ ಕಾಣುವ ಆ ದೇಹಗಳೆಲ್ಲವೂ ಸ್ಟಿರಾಯಿಡ್‌ಗಳ ಮಹಿಮೆಯಿಂದ ಆದವುಗಳು.
ಇಡೀ ಬೆಂಗಳೂರಲ್ಲಿ ಸಾವಿರಾರು ಜಿಮ್‌ಗಳು, ಲಕ್ಷಾಂತರ ಸ್ಟಿರಾಯಿಡ್ ಬಾಡಿಬಿಲ್ಡರ್‌ಗಳು. ಸರಕಾರ ಹೇಗೆ ತಾನೇ ಕೆಲಸ ಕೊಟ್ಟೀತು! ಇಷ್ಟಕ್ಕೂ ಇವರಾರಿಗೂ ಸರಕಾರಿ ಕೆಲಸದ ಆಸೆಗಳೇನೂ ಇಲ್ಲ ಬಿಡಿ. ಸಿನಿಮಾ ಗಾಗಿ, ಯಾರಿಗೋ ಬೌನ್ಸರ್ ಆಗುವ ಸಲುವಾಗಿ, ಇನ್‌ಸ್ಟಾ ರೀಲ್ಸ್ʼಗಾಗಿ, ಯಾರನ್ನೋ ಪಟಾಯಿಸುವು ದಕ್ಕಾಗಿ ಬೆಳೆಸೋ ದೇಹಗಳು ಅವು. ಅಂದಿನ ನ್ಯಾಚುರಲ್ ಬಾಡಿಬಿಲ್ಡರ್ ಗಳು ವ್ಯಸನಗಳಿಂದ ದೂರ ಇರುತ್ತಿದ್ದರು.
ಬ್ರಹ್ಮಚರ್ಯವೋ ಸನ್ಯಾಸವೋ ಪಾಲಿಸುತ್ತಿದ್ದಾರೆ ಎಂಬಂತೆ ದೇಹದಾರ್ಢ್ಯ ಕಲೆಯ ಪಾವಿತ್ರ್ಯ ಕಾಪಾಡಿಕೊಳ್ಳುತ್ತಿದ್ದರು. ಅವರಿಗೆ ಅದು ಜೀವನದ ಭಾಗವಾಗಿತ್ತು. ಪ್ರೊಫೆಷನ್ ಆಗಿತ್ತು. ಆಂಜನೇಯನನ್ನು ಆದರ್ಶವಾಗಿಟ್ಟುಕೊಂಡು ಗರಡಿಮನೆಯಲ್ಲಿ ದೇಹ ದಂಡಿಸುತ್ತಿದ್ದ ವಿದ್ಯೆಗೆ ಈಗ ಸ್ಟಿರಾಯಿಡ್ ಮತ್ತು ಶಾರ್ಟ್ ಕಟ್ ಮೆಡಿಸಿನ್‌ಗಳು ದೇವರಾಗಿ ಹೋದದ್ದು ದುರಂತ. ನ್ಯಾಚುರಲ್ ಬಾಡಿ ಬಿಲ್ಡಿಂಗ್ ಅನ್ನೂ ದೇಶ ನಿರ್ಲಕ್ಷ್ಯ ಮಾಡುವಂತೆ ಮಾಡಿದ್ದು ಅದಕ್ಕಿಂತ ದೊಡ್ಡ ದುರಂತ. ಇದೆಲ್ಲವನ್ನೂ ಯೋಚಿಸುವಂತೆ ಮಾಡಿದ್ದು ಹದಿನೈದು ದಿನಗಳ ಹಿಂದೆ ಸಿಂಗಾಪೂರ ದಲ್ಲಿ ನಡೆದ ವಿಶ್ವ ನ್ಯಾಚುರಲ್ ಬಾಡಿಬಿಲ್ಡಿಂಗ್ ಸ್ಪರ್ಧೆ.
ಈ ಸ್ಪರ್ಧೆಯಲ್ಲಿ ಕರ್ನಾಟಕದ ರಘುರಾಮಪ್ಪ ಮೂರು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಧೀರಜ್ ಬೆಳ್ಳಿಯಪ್ಪ ಒಂದು ಸ್ವರ್ಣ ಗೆದ್ದಿದ್ದಾರೆ. ಭಾರತದ ಸ್ಪರ್ಧಿಗಳು ಒಟ್ಟು ಒಂಬತ್ತು ಬಂಗಾರ, ಒಂದು ಬೆಳ್ಳಿ ಮತ್ತು ಮೂರು ಕಂಚಿನ ಪದಕ ಸೇರಿ ಒಟ್ಟು ಹದಿಮೂರು ಪದಕಗಳನ್ನು ತಂದಿದ್ದಾರೆ. ಗಮನಿಸಬೇಕಿರೋ ವಿಷಯ ಏನೆಂದರೆ, ಇವರಾರೂ ವೈಯಕ್ತಿಕ ಹಿರಿಮೆಗಾಗಿ ಈ ಸ್ಪರ್ಧೆಯಲ್ಲಿ ಭಾಗವಹಿಸಿಲ್ಲ. ಇವರೆಲ್ಲರೂ ದೇಶವನ್ನು ಪ್ರತಿನಿಧಿಸಿದ್ದು.
ಐಎನ್‌ಬಿಎ (ಅಂತಾರಾಷ್ಟ್ರೀಯ ನ್ಯಾಚುರಲ್ ಬಾಡಿ ಬಿಲ್ಡಿಂಗ್ ಅಸೋಸಿಯೇಷನ್) ನಡೆಸಿದ ಈ ಸ್ಪರ್ಧೆಯಲ್ಲಿ ಪದಕ ನೀಡುವುದು ದೇಶದ ಹೆಸರಿನಲ್ಲಿ. ಆದರೆ ದೇಶಕ್ಕೆ ಹದಿಮೂರು ಪದಕಗಳನ್ನು ಗೆದ್ದು ತಂದ ಈ ಸುದ್ದಿ ನಮ್ಮ ಪತ್ರಿಕೆಗಳಿಗೆ, ಟಿವಿ ಸುದ್ದಿ ಮಾಧ್ಯಮಗಳಿಗೆ ಸುದ್ದಿಯೇ ಅಲ್ಲ! ಕನಿಷ್ಠ ಬರಗೆಟ್ಟ ಸೋಷಿಯಲ್ ಮೀಡಿಯಾ ಪೇಜುಗಳು, ಡಿಜಿಟಲ್ ಮೀಡಿಯಾಗಳಿಗೂ ಇದೊಂದು ಹೆಮ್ಮೆಯ ಸುದ್ದಿ, ಪ್ರಸಾರ ಮಾಡಲೇಬೇಕಾದ ಸುದ್ದಿ ಅನಿಸಲೇ ಇಲ್ಲ.
ಕ್ರಿಕೆಟಿಗರು ವರ್ಲ್ಡ್ ಕಪ್ ಗೆದ್ದು ಬಂದರೆ, ಯಾವುದೋ ಬೈಲ್ಯಾಟರಲ್ ಸರಣಿ ಗೆದ್ದು ಬಂದರೆ ದೇಶ ಪಟಾಕಿ ಸುಡುತ್ತದೆ. ರೋಡ್ ಶೋ ಆಗುತ್ತದೆ. ವಿಮಾನದಿಂದ ಇಳಿದು ಮನೆ ಸೇರುವ ತನಕ ಮೆರವಣಿಗೆ ನಡೆಯುತ್ತದೆ. ಮರುದಿನದ ಪತ್ರಿಕೆಯಲ್ಲಿ ಮೊದಲಪುಟದ ಸುದ್ದಿಯಾಗುತ್ತದೆ. ಟಿವಿಗಳಲ್ಲಿ ವಾರಗಟ್ಟಲೆ ಅದರದ್ದೇ ಸಂಭ್ರಮ ನಡೆಯುತ್ತದೆ. ಆಟಗಾರರ ಕಡೆಗೆ ಹಣದ ಹೊಳೆ ಹರಿಯುತ್ತದೆ. ಪ್ರಧಾನಿಯಿಂದ ಹಿಡಿದು ಪಂಚಾಯ್ತಿ ಮೆಂಬರ್ ತನಕ ಎಲ್ಲರೂ ಅಭಿನಂದನೆ ಸಲ್ಲಿಸುತ್ತಾರೆ. ಕರೆದು ಸನ್ಮಾನ ಮಾಡುತ್ತಾರೆ. ಕ್ರಿಕೆಟ್ ಬಿಡಿ, ‘ಯಃಕಶ್ಚಿತ್’ (ಪ್ರಜ್ಞೆಯಿಂದಲೇ ಬಳಸಿದ್ದೇನೆ) ಬಿಗ್ ಬಾಸ್ ಮನೆಗೆ ಹೋಗಿ ಬಂದವರೂ ರಾತ್ರೋರಾತ್ರಿ ಸೆಲೆಬ್ರಿಟಿ ಆಗಿ ಹೋಗ್ತಾರೆ. ರೀಲ್ಸ್ʼಲ್ಲಿ ಮೈ ತೋರಿಸುವಾಕೆ, ಕಿರಿಚುವಾತ, ಬಿದ್ದು ಹೊರಳಾಡುವಾತ, ಕೆಟ್ಟದಾಗಿ ಹಾಡುವಾತ, ಮಾತನಾಡುವಾಕೆ, ಎಲ್ಲರೂ ಮಾಧ್ಯಮಗಳ ಲೈಮ್ ಲೈಟಿನಲ್ಲಿರುತ್ತಾರೆ.
ಅವರ ಕಾರ್ಯಕ್ರಮಗಳಿಗೆ ಅತಿಥಿಗಳಾಗುತ್ತಾರೆ. ಆದರೆ ನ್ಯಾಚುರಲ್ ಬಾಡಿಬಿಲ್ಡಿಂಗ್‌ನಲ್ಲಿ ದೇಶಕ್ಕೆ ಹಿರಿಮೆ ತಂದಿರುವ ಪಟುಗಳನ್ನು ಕೇಳುವವರೇ ಇಲ್ಲ. ಅವರದ್ದೇ ಖರ್ಚಿನಲ್ಲಿ ವರ್ಷಗಟ್ಟಲೇ ದೇಹ ದಂಡಿಸಿ, ದೇಹಕ್ಕೆ ಬೇಕಿರುವ ಆಹಾರಕ್ಕಾಗಿ, ವ್ಯಾಯಾಮ ಉಪಕರಣಗಳಿಗಾಗಿ, ಜಿಮ್‌ಗಾಗಿ ಲಕ್ಷಗಟ್ಟಲೆ ಖರ್ಚು ಮಾಡುತ್ತಾರೆ. ಸ್ವಂತ ಖರ್ಚಿನಲ್ಲಿ ಸ್ಪರ್ಧೆಗೆ ಅರ್ಜಿ ಸಲ್ಲಿಸುತ್ತಾರೆ, ಸ್ವಂತ ಖರ್ಚಿನಲ್ಲಿ ವಿಮಾನದ ಟಿಕೆಟ್ ಬುಕ್ ಮಾಡುತ್ತಾರೆ, ಅಲ್ಲಿನ ವಾಸ್ತವ್ಯಕ್ಕೆ ಹಣ ತೆರುತ್ತಾರೆ. ಕೊನೆಗೆ ಡೋಪಿಂಗ್ ಟೆಸ್ಟ್ ಮಾಡಿಸಲೂ ಕೈಯ್ಯಿಂದಲೇ ಕಾಸು ಕೊಡುತ್ತಾರೆ.
ಇವೆಲ್ಲವೂ ಸೇರಿದರೆ ಲಕ್ಷಗಳ ಬಾಬ್ತು. ಯಾರೊ ಬ್ಬರೂ ಪ್ರಾಯೋಜಕರೂ ಸಿಗುವುದಿಲ್ಲ. ಸರಕಾರ ವೂ ಹಣ ಕೊಡುವುದಿಲ್ಲ. ಹೋಗಲಿ ಗೆದ್ದು ಬಂದಿರುವವರಿಗೆ ಒಂದು ಅಭಿನಂದನೆ ಸಲ್ಲಿಸೋದಕ್ಕೂ ಮೈಭಾರವೇ? ಇಷ್ಟೊಂದು ನಿರ್ಲಕ್ಷ್ಯವೇ? ದೇಶವನ್ನು ಪ್ರತಿನಿಧಿಸಿ ರಾಜ್ಯಕ್ಕೆ ನಾಲ್ಕು ಪದಕ ತಂದಿರುವ ಸ್ಪರ್ಧಿಗಳಿಗೆ ಕಡೇಪಕ್ಷ ಮುಖ್ಯಮಂತ್ರಿ ಮತ್ತು ಕ್ರೀಡಾಮಂತ್ರಿ ಅಭಿನಂದನೆ ಸಲ್ಲಿಸಿದ್ದರೆ, ಸ್ಪರ್ಧಿಗಳು ಸಣ್ಣ ಸಮಾಧಾನವನ್ನಾದರೂ ಅನುಭವಿಸಿರುತ್ತಿದ್ದರು.
ತಾವಾಗಿಯೇ ಸುದ್ದಿ ಕೊಟ್ಟರೂ ಪ್ರಕಟಿಸುವ ಆಸ್ಥೆ ತೋರದ ಮಾಧ್ಯಮಗಳು, ಸಿನಿಮಾ ತಾರೆಯರು, ರೀಲ್ಸ್ ಗಿರಾಕಿಗಳು, ಕ್ರಿಕೆಟಿಗರು ಮಾತ್ರ ಸೆಲೆಬ್ರಿಟಿಗಳು ಎಂದು ನಂಬಿರುವ ಜನತೆಗೆ ನ್ಯಾಚುರಲ್ ಬಾಡಿಬಿಲ್ಡಿಂಗ್ ಸ್ಪರ್ಧಿಗಳು ಹೇಗೆ ತಾನೇ ವಿಶೇಷವೆನಿಸುತ್ತಾರೆ? ನ್ಯಾಚುರಲ್ ಬಾಡಿಬಿಲ್ಡರ್ಸ್ ಮಾತ್ರವೇ ಅಲ್ಲ, ಇಂಥ ಅದೆಷ್ಟು ಇತರ ಕಲೆ ಮತ್ತು ಕ್ರೀಡೆಗಳು ಅಸಡ್ಡೆಗೆ ಒಳಗಾಗಿವೆ.
ವರ್ಷಗಟ್ಟಲೆ ತಿದ್ದಿತೀಡಿ, ಇಂತಿಷ್ಟೇ ಪ್ರೊಟೀನ್, ಇಂತಿಷ್ಟೇ ಕೊಬ್ಬು, ದೇಹದ ತೂಕ ಇಷ್ಟೇ ಇರಬೇಕು, ಎಂಬಂತೆ ಶಿಲೆಯನ್ನು ಕೆತ್ತುವ ಹಾಗೆ ದೇಹಕ್ಕೆ ರೂಪುಕೊಡುವ ಬಾಡಿಬಿಲ್ಡರ್‌ಗಳು ಸ್ವಯಂಶಿಲ್ಪಿಗಳು. ನೈಸರ್ಗಿಕ ದೇಹದಾರ್ಢ್ಯ ಎಂಬುದು ಕಲೆ ಅನಿಸುವ ಕ್ರೀಡೆ. ಅರೇ ದೇಹ ಬೆಳೆಸೋದು ಯಾವ ಮಹಾ ವಿಷಯ ಬಿಡು ಅನ್ನದಿರಿ. ಹಾಗೆ ಹೇಳುವುದೇ ಆದರೆ, ಎಸೆದ ಚೆಂಡನ್ನು ಬ್ಯಾಟಿಂದ ಬೀಸಿ ಹೊಡೆಯೋದು ಯಾವ ಮಹಾ ವಿಷಯ ಅಂತ ಕೇಳಬೇಕಾಗುತ್ತದೆ.
ಸಿನಿಮಾದಲ್ಲಿ ಹೀರೋ ಆಗುವುದು ಯಾವ ದೊಡ್ಡ ವಿಷಯ ಅಂತ ಕೇಳಬೇಕಾಗುತ್ತದೆ. ಹೆಣ್ಣುಮಕ್ಕಳ ಸೌಂದರ್ಯ ಸ್ಪರ್ಧೆಗೆ ಅಷ್ಟೊಂದು ಮಹತ್ವ ಕೊಡುವ ಜಗತ್ತು, ಪುರುಷರ ದೇಹದಾರ್ಢ್ಯವನ್ನೇಕೆ ನಿರ್ಲಕ್ಷಿಸುತ್ತಿದೆ. ಮಿಸ್ ಯೂನಿವರ್ಸ್, ಮಿಸ್ ವರ್ಲ್ಡ್, ಮಿಸ್ ಫೋಟೋ ಜೆನಿಕ್, ಮಿಸ್ ಸ್ಮೈಲ್ ಹೀಗೆ ದೇಹದ ಇರೋಬರೋ ಭಾಗಕ್ಕೆಲ್ಲ ಪ್ರಶಸ್ತಿ ಕೊಡುವ, ಪ್ರಶಸ್ತಿ ಪಡೆದುಬಂದ ನಂತರ ಸೆಲೆಬ್ರಿಟಿಗಳಾಗುವ ಸುಂದರಿಯರಿಗಿರುವ ಭಾಗ್ಯ ವರ್ಷಗಟ್ಟಲೆ ದೇಹದಂಡಿಸಿ ದೇಶವನ್ನು ಪ್ರತಿನಿಧಿಸಿ ಗೆದ್ದುಬಂದ ದೇಹದಾರ್ಢ್ಯ ಪಟುಗಳಿಗೇಕಿಲ್ಲ? ನಾನು ತಪ್ಪಾಗಿ ಕೇಳಿಲ್ಲವಲ್ಲವೇ?