ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shishir Hegde Column: ಇಲ್ಲಿ ನ್ಯಾಯಾಧೀಶರಾಗಬೇಕೆಂದರೆ ಚುನಾವಣೆಯಲ್ಲಿ ಗೆಲ್ಲಬೇಕು ?

ಬಹುತೇಕ ಕಟ್ಟುಕಥೆಗಳು. ಬಹುಶಃ ಇಂಥ ಕೆಲವು ಕಲ್ಪಿತ ಕಥೆಗಳನ್ನು ರಾಜಾಶ್ರಯದಲ್ಲಿಯೇ ಇತಿಹಾಸ ವೆಂಬಂತೆ ಸುಳ್ಳುಸುಳ್ಳೇ ಕಟ್ಟಿರಲೂಬಹುದು. ಉದಾಹರಣೆಗೆ ಅಕ್ಬರನ ಬಗ್ಗೆ ಇರುವ ಅದೆಷ್ಟೋ ನ್ಯಾಯ ಪರ ಕಥೆಗಳು. ಚಿತ್ತೋರ್‌ಗಢದ ರಜಪೂತರನ್ನು ಗೆದ್ದ ನಂತರ ಹೆಂಗಸರು, ಮಕ್ಕಳು ಎನ್ನುವುದನ್ನು ನೋಡದೆ- ಕೋಟೆಯೊಳಗಿದ್ದ ಸುಮಾರು ಐವತ್ತು ಸಾವಿರ ಮುಗ್ಧ ಹಿಂದೂಗಳನ್ನು ಕೊಂದ ಇತಿಹಾಸ ವಿರುವ ಅಕ್ಬರ್ ಇಂಥ ಚಿಲ್ಲರೆ ಕಥೆಗಳಲ್ಲಿ ನ್ಯಾಯದೇವತೆಯ ರೂಪ ಪಡೆದು ಬಿಡುತ್ತಾನೆ.

ಇಲ್ಲಿ ನ್ಯಾಯಾಧೀಶರಾಗಬೇಕೆಂದರೆ ಚುನಾವಣೆಯಲ್ಲಿ ಗೆಲ್ಲಬೇಕು ?

ಶಿಶಿರಕಾಲ

shishirh@gmail.com

ಅಮೆರಿಕ ಕಾನೂನು ವ್ಯವಸ್ಥೆ ಭಾಗ-3

ಕೆಲವು ಚಂದಮಾಮ ಕಥೆಗಳಲ್ಲಿ, ಅಕ್ಬರ್-ಬೀರ್ ಬಲ್ ತರಹದ ಅದೆಷ್ಟೋ ನೀತಿಕಥೆಗಳಲ್ಲಿ ಇಂಥ ಘಟನೆಗಳಿರುತ್ತವೆ. ತೀರಾ ಚಿಕ್ಕಪುಟ್ಟ ಬೇಲಿ ಜಗಳ, ಕಾಕ-ಪೋಕ್ ವಿವಾದವನ್ನು ಪ್ರಜೆಗಳು ಮಹಾ ರಾಜರ ಮುಂದೆ ತಂದು ನ್ಯಾಯಕ್ಕಾಗಿ ಬೇಡುವ ಸನ್ನಿವೇಶ. ಭಾರತವಷ್ಟೇ ಅಲ್ಲ, ನಾನು ಓದಿದ ಚೀನಾ, ಪರ್ಷಿಯಾ, ಯುರೋಪ್, ಅತ್ತ ದಕ್ಷಿಣ ಅಮೆರಿಕದ ರಾಜರುಗಳ ಕಥೆಗಳೆಲ್ಲ ಹೆಚ್ಚು ಕಡಿಮೆ ಹೀಗೆಯೇ.

ಅಲ್ಲಿ ಕೂಡ ಒಬ್ಬ ಸಮರ್ಥ ರಾಜನ ಬುದ್ಧಿವಂತಿಕೆ ಮತ್ತು ನ್ಯಾಯಪರತೆ ಹೇಗಿತ್ತು ಎನ್ನುವುದಕ್ಕೆ ಇಂಥದೇ ಲಾಟ್-ಪೂಟ್ ಕಥೆಗಳು. “ಮಹಾರಾಜ, ನನ್ನ ಬೆಕ್ಕನ್ನು ಪಕ್ಕದ ಮನೆಯವನು ಕದ್ದಿದ್ದಾನೆ" ಎಂಬ ತೀರಾ ಯಃಕಶ್ಚಿತ್ ದಾವೆಗಳು. ಅವು ರಾಜನ ಮುಂದೆ ಬರುವುದಂತೆ, ಚತುರ ಮಂತ್ರಿ ಅಥವಾ ಖುದ್ದು ಮಹಾರಾಜನೇ ಬುದ್ಧಿವಂತಿಕೆಯಿಂದ ಬಗೆಹರಿಸಿ ನ್ಯಾಯ ಕೊಡುವುದಂತೆ. ನಾವು ನೀವೆಲ್ಲ ಅಂಥ ಎಷ್ಟೋ ದೊಡ್ಡ ದೊಡ್ಡ ಚಕ್ರವರ್ತಿಗಳ ಚಿಲ್ಲರೆ ನ್ಯಾಯದ ಕಥೆಗಳನ್ನು ಓದಿರುತ್ತೇವೆ, ಕೇಳುತ್ತಲೇ ಇರುತ್ತೇವೆ. ಇವುಗಳು ರಂಜನೆಗೆ, ನೀತಿಗೆ ಆದೀತು. ಇತಿಹಾಸಕ್ಕಲ್ಲ. ಆದರೆ ಅಂಥ ಕಥೆ ಗಳೇ ಇತಿಹಾಸಕ್ಕಿಂತ ಪ್ರಚಲಿತ!

ಆದರೆ ಕೃಷ್ಣದೇವರಾಯ, ಅಕ್ಬರ, ಈಜಿಪ್ಟಿನ ಫೆಹ್ರೋ, ಚೀನಾದ ಗಾಂಗ್, ವಾಂಗ್ (ರಾಜರು) ಇವರಿಗೆಲ್ಲ ಅಸಲಿಗೂ ಬೇರೆ ಕೆಲಸವೇ ಇರಲಿಲ್ಲವೇ? ಅಥವಾ ಅವರಿಗೆ ಅಗಸನ ಕತ್ತೆಗೂ ನ್ಯಾಯ ಕೊಡುವಷ್ಟು ಪುರುಸೊತ್ತಿರುತ್ತಿತ್ತೆ? ಇರಲಿಕ್ಕಿಲ್ಲ. ಇಂದಿನ ಒಬ್ಬ ಎಂಎಲ್ಎಯನ್ನು ಭೇಟಿ‌ ಯಾಗುವುದೇ ಜನಸಾಮಾನ್ಯರಿಗೆ ಅಸಾಧ್ಯವಾಗಿರುವಾಗ “ಅವನು ನನ್ನ ಬೆಕ್ಕನ್ನು ಕದ್ದೊಯ್ದಿ ದ್ದಾನೆ" ಎಂಬಂಥ ಮೊಕದ್ದಮೆಗಳು ರಾಜನ ಎದುರು ಬಗೆಹರಿಯಲು ಬರುತ್ತಿದ್ದವು ಎಂಬುದನ್ನು ನಂಬುವುದು ಕಷ್ಟ.

ಇದನ್ನೂ ಓದಿ: Shishir Hegde Column: ಅಪರಾಧಿಯೆಂದು ನಿರ್ಧರಿಸುವುದು ನ್ಯಾಯಾಧೀಶರ ಕೆಲಸವಲ್ಲ !

ಬಹುತೇಕ ಕಟ್ಟುಕಥೆಗಳು. ಬಹುಶಃ ಇಂಥ ಕೆಲವು ಕಲ್ಪಿತ ಕಥೆಗಳನ್ನು ರಾಜಾಶ್ರಯದಲ್ಲಿಯೇ ಇತಿಹಾಸವೆಂಬಂತೆ ಸುಳ್ಳುಸುಳ್ಳೇ ಕಟ್ಟಿರಲೂಬಹುದು. ಉದಾಹರಣೆಗೆ ಅಕ್ಬರನ ಬಗ್ಗೆ ಇರುವ ಅದೆಷ್ಟೋ ನ್ಯಾಯಪರ ಕಥೆಗಳು. ಚಿತ್ತೋರ್‌ಗಢದ ರಜಪೂತರನ್ನು ಗೆದ್ದ ನಂತರ ಹೆಂಗಸರು, ಮಕ್ಕಳು ಎನ್ನುವುದನ್ನು ನೋಡದೆ- ಕೋಟೆಯೊಳಗಿದ್ದ ಸುಮಾರು ಐವತ್ತು ಸಾವಿರ ಮುಗ್ಧ ಹಿಂದೂಗಳನ್ನು ಕೊಂದ ಇತಿಹಾಸವಿರುವ ಅಕ್ಬರ್ ಇಂಥ ಚಿಲ್ಲರೆ ಕಥೆಗಳಲ್ಲಿ ನ್ಯಾಯದೇವತೆಯ ರೂಪ ಪಡೆದುಬಿಡುತ್ತಾನೆ.

ಆ ಮೂಲಕ ನಮ್ಮ ಬುದ್ಧಿಜೀವಿಗಳ ಕಣ್ಣಲ್ಲಿ ಅಕ್ಬರನು ಕೃಷ್ಣದೇವರಾಯ ಲೆವೆಲ್ಲಿನಲ್ಲಿ ತೂಗು ತ್ತಾನೆ. ಈ ಯಾವ ಕಥೆಗಳೂ ಇತಿಹಾಸದ ನ್ಯಾಯವ್ಯವಸ್ಥೆಯ ರೂಪಕವಲ್ಲ. ಭಾರತದಲ್ಲಿ, ಅಷ್ಟೇಕೆ ಯುರೋಪ್, ಚೀನಾ ಎಲ್ಲಿ ನಾಗರಿಕತೆಗಳು ಬೆಳೆದವೋ, ಸಮಾಜ ಒಂದು ವ್ಯವಸ್ಥೆಯಾಗಿ ನಿರ್ಮಾಣವಾಯಿತೋ ಅಲ್ಲ ಬಹುಸ್ತರದ ನ್ಯಾಯವ್ಯವಸ್ಥೆ ಜೈವಿಕ ವೇಗದಲ್ಲಿ, ಜತೆಯಲ್ಲಿ ಬೆಳೆದು ಬಂದಿದೆ.

Screenshot_7 R

ರಾಜರ ಕಾಲದಿಂದಲೂ ಪಂಚರು, ಊರ ಮುಖ್ಯಸ್ಥರು, ಸಭಾಪತಿಗಳು ಇತ್ಯಾದಿ ವಿವಿಧ ಹಂತದಲ್ಲಿ ನ್ಯಾಯದ ತೀರ್ಪು ನೀಡುವ ವ್ಯವಸ್ಥೆ ಇದ್ದ ಬಗ್ಗೆ ನಮಗೆಲ್ಲ ಗೊತ್ತಿದೆ. ಅದೇ ಬಹುಸ್ತರದ ನ್ಯಾಯ ವ್ಯವಸ್ಥೆಗಳು ಇಂದು ರೂಪಾಂತರವಾಗಿ ಆಧುನಿಕ ನ್ಯಾಯಾಲಯಗಳಾಗಿವೆ. ಆ ಕಾರಣಕ್ಕೆ ದೇಶ ದೇಶಗಳ ಸಾಂಸ್ಕೃತಿಕ ಭಿನ್ನತೆಯಂತೆ, ಅದರಿಂದಲೇ ರೂಪುಗೊಂಡ ನ್ಯಾಯವ್ಯವಸ್ಥೆಯಲ್ಲಿ ಕೂಡ ಸಾಕಷ್ಟು ಭಿನ್ನತೆಯಿದೆ. ಆ ಪರಿಕಲ್ಪನೆಯನ್ನು ಅಮೆರಿಕದ ಉದಾಹರಣೆಯೊಂದಿಗೆ ನಿಮ್ಮೊಂದಿಗೆ ಹಂಚಿಕೊಳ್ಳುವುದು ಈ ಲೇಖನ ಸರಣಿಯ ಉದ್ದೇಶ. ಇಡೀ ಮನುಷ್ಯ ಸಮಾಜದ ವರ್ತನೆಯನ್ನು ನಿರ್ದೇಶಿಸುವುದು ನ್ಯಾಯ ವ್ಯವಸ್ಥೆ.

ಅಲ್ಲಿ ತೀರ್ಪು ನೀಡುವವನು ಅತ್ಯಂತ ಮುಖ್ಯ. ಮೊದಲೋ, ಸಭಾಸದರು, ಕೆಳ ಹಂತದ ನ್ಯಾಯಾ ಧೀಶರನ್ನು ಆಯ್ಕೆ ಮಾಡುತ್ತಿದ್ದುದು ಮಹಾರಾಜ. ಆದರೆ ಈಗ ಪ್ರಜಾಪ್ರಭುತ್ವ. ಇಲ್ಲಿ ಯಾರು ನ್ಯಾಯಾಧೀಶರಾಗಬೇಕು ಎಂದು ನಿರ್ಧರಿಸುವವರು ಯಾರು? ಅವರ ಆಯ್ಕೆ ಹೇಗೆ? ಈ ಹೋಲಿಕೆ ಇಂದಿನ ವಿಷಯ. ಯಾವುದು ಉತ್ತಮ- ಯಾವುದು ಸರಿ.

ಅದೆಲ್ಲ ನಿಮ್ಮ ವಿವೇಚನೆಗೆ. ಭಾರತದಲ್ಲಿ ಜಿಲ್ಲಾ ಸತ್ರ ನ್ಯಾಯಾಲಯ, ಸಿವಿಲ್ ನ್ಯಾಯಾಧೀಶರಾಗಿ ನೇರ ನೇಮಕಾತಿ, ಅಥವಾ ಬಡ್ತಿ ಪಡೆದು ಆಯ್ಕೆಯಾಗುತ್ತಾರೆ. ಆದರೆ ಕೊಲಾಜಿಯಂ ಪದ್ಧತಿಯ ಬಗ್ಗೆ ನೀವು ತಿಳಿದಿರಬಹುದು. ಹೈಕೋರ್ಟ್, ಸುಪ್ರೀಂ ಕೋರ್ಟಿನ ಹಿರಿಯ ನ್ಯಾಯಾಧೀಶರೇ ಇಲ್ಲಿ ನ್ಯಾಯಾಧೀಶರನ್ನು ಆರಿಸುವುದು. ಈ ವ್ಯವಸ್ಥೆಯಿಂದಾಗಿ ಅಲ್ಲಿಯೂ ವಂಶಾವಳಿ ಅಧಿಕಾರ ಹಸ್ತಾಂತರವಾಗುತ್ತಿದೆ ಎಂದು ಇತ್ತೀಚೆಗೆ ಗಲಾಟೆಗಳೆದ್ದದ್ದು ಕೇಳಿರುತ್ತೀರಿ.

ಸುಪ್ರೀಂ ಕೋರ್ಟಿನ ನ್ಯಾಯಾಧೀಶರನ್ನು ಆಯ್ಕೆ ಮಾಡುವುದು ಚೀಫ್ ಜಸ್ಟೀಸ್ ಮತ್ತು ನಾಲ್ಕು ಹಿರಿಯ ನ್ಯಾಯಾಧೀಶರು. ಇತ್ತ ಹೈಕೋರ್ಟಿನ ನ್ಯಾಯಾಧೀಶರ ಆಯ್ಕೆಯೂ ಹಾಗೆಯೇ. ಹೈ‌ ಕೋರ್ಟ್ ಚೀಫ್ ಜಸ್ಟೀಸ್ ಮತ್ತು ಇಬ್ಬರು ಹಿರಿಯ ನ್ಯಾಯಾಧೀಶರು ಸೇರಿ ಹೈಕೋರ್ಟ್ ನ್ಯಾಯಾ ಧೀಶರನ್ನು ಆಯ್ಕೆ ಮಾಡುವುದು. ಕರ್ನಾಟಕ ಹೈಕೋರ್ಟ್‌ನಲ್ಲಿ ಸದ್ಯ 47 ನ್ಯಾಯಾಧೀಶರಿದ್ದಾರೆ.

ನ್ಯಾಯಾಧೀಶರನ್ನು ನೇಮಿಸುವುದು ರಾಷ್ಟ್ರಪತಿಗಳು ಎಂದು ನಾವು ಶಾಲೆಯಲ್ಲಿ ಓದಿದ್ದು. ಆದರೆ ಅಸಲಿಗೆ ರಾಷ್ಟ್ರಪತಿಗಳ ಪಾತ್ರ ಏನೆಂದು ಪಠ್ಯ ಕಲಿಸಿರಲಿಲ್ಲ. ಅವರಿಗೆ ನ್ಯಾಯಾಧೀಶರ ಹೆಸರು ಸೂಚಿಸುವುದು ಈ ಕೊಲಾಜಿಯಂ. ಅದನ್ನು ರಾಷ್ಟ್ರಪತಿಗಳು ಪ್ರಶ್ನಿಸಿ ಮರುಪರಿಶೀಲನೆಗೆ ನೀಡ ಬಹುದು. ಆದರೆ ಅದೇ ಹೆಸರನ್ನು ಮರು ಆಯ್ಕೆ ಮಾಡಿ ಎರಡನೇ ಬಾರಿ ರಾಷ್ಟ್ರಪತಿಗೆ ಕಳುಹಿಸಿದರೆ ಅದನ್ನು ಅವರು ತಿರಸ್ಕರಿಸುವಂತಿಲ್ಲ.

ಇದರಲ್ಲಿ ಗಮನಿಸಬೇಕಾದದ್ದು ಏನೆಂದರೆ ನಮ್ಮಲ್ಲಿನ ಕೊಲಾಜಿಯಂ ವ್ಯವಸ್ಥೆ ಕಾನೂನು ರಚಿತ ವಲ್ಲ. ಬದಲಿಗೆ ನ್ಯಾಯಾಲಯದ ತೀರ್ಪುಗಳಿಂದಾಗಿಯೇ ಹುಟ್ಟಿಕೊಂಡ ವ್ಯವಸ್ಥೆ. ಒಂದೇ ನೆಂದರೆ, ಈ ವ್ಯವಸ್ಥೆಯ ಮೂಲಕ ನಮ್ಮಲ್ಲಿ ಶಾಸಕಾಂಗವು ನ್ಯಾಯಾಂಗದಿಂದ ಸಂಪೂರ್ಣ ಹೊರಗುಳಿ ಯಲು ಸಾಧ್ಯವಾಗಿದೆ. ಇದು ಒಳ್ಳೆಯದು- ಏಕೆಂದರೆ ರಾಜಕಾರಣಿಗಳು- ಖುದ್ದು ಪ್ರಧಾನಿ, ರಾಷ್ಟ್ರ ಪತಿ ಕೂಡ ನ್ಯಾಯಾಂಗದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ.

ಆದರೆ- ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗದ ಅತ್ಯುನ್ನತ ಪದವಿಯನ್ನು ಅವರವರೇ ಆಯ್ಕೆ ಮಾಡಿಕೊಳ್ಳುವುದು ಎಷ್ಟು ಸರಿ? ಆ ಪ್ರಶ್ನೆಯೂ ಸಮಂಜಸವೇ. ನ್ಯಾಯಾಧೀಶರ ಆಯ್ಕೆ ಯಲ್ಲಿ ಅಮೆರಿಕದ ವ್ಯವಸ್ಥೆ ಭಾರತಕ್ಕಿಂತ ಸಂಪೂರ್ಣ ವಿಭಿನ್ನ. ಅಮೆರಿಕದಲ್ಲಿ ಸುಪ್ರೀಂ ಕೋರ್ಟಿನ ನ್ಯಾಯಾಧೀಶರ ಆಯ್ಕೆಯೇ ಬೇರೆ- ಕೆಳ ಹಂತದ ನ್ಯಾಯಾಧೀಶರ ಆಯ್ಕೆಯ ಬಗೆಯೇ ಬೇರೆ. ಇಲ್ಲಿನ ಬಹುತೇಕ ರಾಜ್ಯಗಳಲ್ಲಿ ಎಲ್ಲಾ ಹಂತದ ನ್ಯಾಯಾಧೀಶರುಗಳನ್ನು ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್ ಅನ್ನು ಆಯ್ಕೆ ಮಾಡುವುದು ಜನರು!

ಹೌದು. ಹೈಕೋರ್ಟ್‌ನಿಂದ ಹಿಡಿದು ಜಿಲ್ಲಾ ಮತ್ತು ಸ್ಥಳೀಯ ಹಂತದ ನ್ಯಾಯಾಧೀಶರೂ ಚುನಾ ವಣೆಗೆ ನಿಲ್ಲಬೇಕು. ನಮ್ಮಲ್ಲಿ ಕೋರ್ಟು ಕಚೇರಿಯ ಸುಳಿಯಲ್ಲಿ ಸಿಕ್ಕಿಕೊಂಡವರ ಹೊರತಾಗಿ ಉಳಿದ ಸಾಮಾನ್ಯ ಜನರಿಗೆ ತಾಲೂಕಿನ, ಜಿಲ್ಲೆಯ ಜಡ್ಜ್ ಹೆಸರು ಗೊತ್ತಿರುವುದಿಲ್ಲ, ಮುಖವನ್ನೂ ನೋಡಿ ರುವುದಿಲ್ಲ. ಆದರೆ ಅಮೆರಿಕದಲ್ಲಿ ನ್ಯಾಯಾಧೀಶನಾಗಬೇಕು ಎಂದರೆ ಜನರೆದುರು ಬಂದು ಭಾಷಣ ಮಾಡಬೇಕು, ಮತಪರೀಕ್ಷೆಗೊಳಗಾಗಬೇಕು. ಅಂಥ ಚುನಾವಣೆ ಆಗೀಗ ನಡೆಯುತ್ತಿರುತ್ತದೆ. ಆಗ ರಸ್ತೆ ಅಕ್ಕಪಕ್ಕದಲ್ಲಿ ನಿಲ್ಲಿಸುವ ಚಿಕ್ಕ ಬೋರ್ಡುಗಳಲ್ಲಿ, ಟಿವಿಯಲ್ಲಿ ’ Vote Tom, Tough on crime' , 'Vote Martin, Reform the system’ ಈ ರೀತಿ,

ನನ್ನನ್ನು ನಿಮ್ಮ ನ್ಯಾಯಾಧೀಶರನ್ನಾಗಿ ಆಯ್ಕೆ ಮಾಡಿ, ನಾನು ಕೆಟ್ಟವರನ್ನು ಬಿಡುವುದಿಲ್ಲ, ಶಿಕ್ಷಿಸು ತ್ತೇನೆ, ಸಮಾಜದಲ್ಲಿ ಸುಧಾರಣೆ ತರುತ್ತೇನೆ ಇತ್ಯಾದಿ ಸ್ಲೋಗನ್ನುಗಳು. 19ನೇ ಶತಮಾನದಲ್ಲಿ ಇಲ್ಲಿ ಒಂದಿಷ್ಟು ಸಮಾಜ ಸುಧಾರಣಾ ಕೆಲಸಗಳಾದವು. ನ್ಯಾಯಾಧೀಶರನ್ನು ಆಯ್ಕೆ ಮಾಡುವವರು ಮಂತ್ರಿಗಳೇ ಆಗಿಬಿಟ್ಟರೆ ಇಬ್ಬರೂ ಕೂಡಿ ಸಮಾಜವನ್ನು ಬಿಗಡಾಯಿಸಿ ಬಿಡಬಹುದು.

ಆ ಕಾರಣಕ್ಕೆ ಜನರೇ ಮತ ಚಲಾಯಿಸಿ ನ್ಯಾಯಾಧೀಶರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಶುರು ವಾದದ್ದು. ಈಗ ಅಮೆರಿಕದ ಶೇ. 90ರಷ್ಟು ನ್ಯಾಯಾಧೀಶರು ಈ ರೀತಿ ಚುನಾವಣೆಯಲ್ಲಿಯೇ ಆಯ್ಕೆ ಯಾಗುವುದು. ನಿಗದಿತ ಅವಧಿಗಷ್ಟೇ ಆಯ್ಕೆ. ನಾಲ್ಕರಿಂದ ಆರು ವರ್ಷ, ಕೆಲವು ಕಡೆ ಹನ್ನೆರಡು. ಅದಾದ ಮೇಲೆ ಮತ್ತೆ ಚುನಾವಣೆ ಎದುರಿಸಬೇಕು. ಅವಧಿ ಒಂದೊಂದು ರಾಜ್ಯದಲ್ಲಿ ಒಂದೊಂದು, ಆದರೆ ನಿಗದಿತ. ಅದು ನಿವೃತ್ತಿ ಆಗುವಷ್ಟು ಕಾಲದ ಹುದ್ದೆಯಲ್ಲ.

ಚುನಾವಣೆಯಲ್ಲಿ ಜನರೇ ಆಯ್ಕೆ ಮಾಡಿದರೆ ಒಳ್ಳೆಯದೇ ಅಲ್ಲವೇ? ಒಳ್ಳೆಯದೇ ಹೌದು- ಆದರೆ ಇದು ರೂಪಾಂತರಗೊಳ್ಳುತ್ತಾ ಇಂದು ನಡೆಯುವ ರೀತಿ ಮಾತ್ರ ವಿಚಿತ್ರವಾಗಿದೆ. ಏನೆಂದರೆ- ಈ ರೀತಿ ಸ್ಪರ್ಧಿಸುವ ನ್ಯಾಯಾಧೀಶರು ಇಲ್ಲಿನ ಎರಡು ಪಕ್ಷದಲ್ಲಿ ಒಂದರ ಜತೆ ಗುರುತಿಸಿಕೊಂಡು ಚುನಾವಣೆಗೆ ನಿಲ್ಲಬಹುದು.

“ನಾನು ರಿಪಬ್ಲಿಕನ್ ಪಕ್ಷದ ನ್ಯಾಯಾಧೀಶ ಆಕಾಂಕ್ಷಿ, ನಾನು ಡೆಮೋಕ್ರಟಿಕ್ ಪಕ್ಷದ ವತಿಯಿಂದ ನಿಲ್ಲುತ್ತಿರುವ ನ್ಯಾಯಾಧೀಶ ಆಕಾಂಕ್ಷಿ"- ಹೀಗೆ. ಪಕ್ಷೇತರರಾಗಿಯೂ ನಿಲ್ಲಬಹುದು. ವಕೀಲರಾಗಿದ್ದ ರಾಯ್ತು- ಇಂತಿಷ್ಟು ವರ್ಷ ಪರಿಣತಿ ಇದ್ದರಾಯ್ತು. ಸ್ಪರ್ಧೆ, ಚುನಾವಣೆ ಎಂದಾಕ್ಷಣ ನಾನೇಕೆ ಇನ್ನೊಬ್ಬನಿಗಿಂತ ಉತ್ತಮ ಎಂದು ಮತದಾರರಲ್ಲಿ ವಿವರಿಸಬೇಕಾಯ್ತಲ್ಲ. ತಮ್ಮನ್ನು ಆಯ್ಕೆ ಮಾಡಿದರೆ ಯಾವ ರೀತಿ ಶಿಕ್ಷೆ ನೀಡುತ್ತೇವೆ ಎಂದೆಲ್ಲ ಪ್ರಚಾರ ನಡೆಯುತ್ತದೆ.

ಕೆಲವು ಅತಿ ಚರ್ಚಿತ ವಿಷಯಗಳಲ್ಲಿ ತಮ್ಮ ಒಲವೇನು ಇತ್ಯಾದಿಯನ್ನು ಬಹಿರಂಗವಾಗಿಯೇ ಪ್ರಚಾರಕ್ಕೆ ಬಳಸಿಕೊಳ್ಳುತ್ತಾರೆ. ಒಂದು ವೇಳೆ ಹಾಲಿ ನ್ಯಾಯಾಧೀಶರೇ ಅವಧಿ ಮುಗಿಸಿ ಮರು ಆಯ್ಕೆ ಬಯಸಿದಲ್ಲಿ- ಅವರ ಎದುರಿಗೆ ಚುನಾವಣೆಗೆ ನಿಲ್ಲುವ ಇನ್ನೊಬ್ಬ ಆಕಾಂಕ್ಷಿಯು ಹಾಲಿ ನ್ಯಾಯಾ ಧೀಶರ ತಪ್ಪುಗಳನ್ನೆಲ್ಲ ಬಹಿರಂಗಮಾಡುತ್ತಾರೆ.

ಇನ್ನು, ಚುನಾವಣೆ ಎಂದರೆ ಪ್ರಚಾರದ ಖರ್ಚು. ಜಾಹೀರಾತು ಕೊಡಬೇಕು ಇತ್ಯಾದಿ. ಹಾಗಾಗಿ ಸ್ಪರ್ಧಿಗಳು ಚಂದಾ ಎತ್ತಬೇಕು. ಮರು ಆಯ್ಕೆ ಬಯಸುವ ನ್ಯಾಯಾಧೀಶರು ಚುನಾವಣೆ ಬರು ತ್ತಿದ್ದಂತೆ ಉಗ್ರ ಶಿಕ್ಷೆಗಳನ್ನು ಕೊಟ್ಟು ಪ್ರಚಾರ ಪಡೆಯುತ್ತಾರೆ ಎಂಬುದು ಸಾಮಾನ್ಯ ಆರೋಪ. ಸಾಮಾನ್ಯವಾಗಿ ರಾಜಕೀಯ ಪಕ್ಷದ ಹೆಸರಿನ ಜತೆ ನಿಂತವರೇ ಆಯ್ಕೆಯಾಗುವುದು; ಪಕ್ಷೇತರರು ನಮ್ಮಲ್ಲಿನ ಪಕ್ಷೇತರರಂತೆ- ಗೆಲ್ಲುವುದು ಅಪರೂಪ. ಹಾಗಾಗಿ ಎಲ್ಲಾ ನ್ಯಾಯಾಧೀಶರ ನ್ಯಾಯದ ಒಲವು ರಾಜಕೀಯ ಪಕ್ಷದ ಒಲವಿಗೆ ಹೊಂದಿಕೊಂಡಿರುತ್ತವೆ.

ಇನ್ನು ಕೆಲವೇ ರಾಜ್ಯಗಳಲ್ಲಿ ಕೆಳ ಹಂತದ ನ್ಯಾಯಾಧೀಶರ ಪದವಿಗೆ ಯಾರು ಬೇಕಾದರೂ ಚುನಾ ವಣೆಗೆ ನಿಲ್ಲಬಹುದು- ವಕೀಲರಾಗಿರಬೇಕೆಂದಿಲ್ಲ. ಅಥವಾ ನ್ಯಾಯಾಂಗದ ಜ್ಞಾನವಿರಬೇಕಾದದ್ದು ಕೂಡ ಅವಶ್ಯಕತೆಯಲ್ಲ. ಆದರೆ ಸಾಮಾನ್ಯವಾಗಿ ಆ ರೀತಿಯ ಆಕಾಂಕ್ಷಿ ಗಳನ್ನು ಜನರೇ ಮತದಲ್ಲಿ ತಿರಸ್ಕರಿಸಿಬಿಡುತ್ತಾರೆ.

ಒಟ್ಟಾರೆ ವಿಷಯ- ಹಿಂದೆ ಹೇಳಿದಂತೆ, ಶೇ.90ರಷ್ಟು ನ್ಯಾಯಾಧೀಶರು ನ್ಯಾಯಾಂಗದಲ್ಲಿನ ಜನ ಪ್ರತಿನಿಧಿಗಳು, ಚುನಾಯಿತರು. ಇದೆಲ್ಲ ಹೈಕೋರ್ಟ್‌ಗಿಂತ ಕೆಳ ಹಂತದ ನ್ಯಾಯಾಧೀಶರ ವಿಷಯ ವಾಯಿತು. ಸುಪ್ರೀಂ ಕೋರ್ಟಿನ ನ್ಯಾಯಾಧೀಶರ ಆಯ್ಕೆಯಲ್ಲಿ ಚುನಾವಣೆಯಿಲ್ಲ. ಸುಪ್ರೀಂ ಕೋರ್ಟಿನ ಪರಮೋಚ್ಚ ನ್ಯಾಯಾಧೀಶರು ಯಾವತ್ತೂ ಒಟ್ಟು 9 ಮಂದಿ. ಅವರನ್ನು ನೇರ ನೇಮಿಸುವುದು ಅಮೆರಿಕದ ಅಧ್ಯಕ್ಷರು. ಅವರ ಆಯ್ಕೆಯನ್ನು ಇಲ್ಲಿನ ಕೆಳಮನೆ ಅನುಮೋದಿಸಿದರೆ ಆಯಿತು.

ಒಮ್ಮೆ ಆಯ್ಕೆಯಾದರೆ ಅವರಿಗೆ ನಿವೃತ್ತಿ ಎಂಬುದೇ ಇಲ್ಲ. ಸಾಯುವವರೆಗೂ ಅವರೇ ಪರಮೋಚ್ಚ ನ್ಯಾಯಾಧೀಶರು. ಅವರನ್ನು ತೆಗೆದು ಹಾಕಲು ಕಷ್ಟದ ರಾಜಕೀಯ ಮಾರ್ಗವಿದೆ- ಆದರೆ ಅದು ಕೊನೆಯ ಬಾರಿ ನಡೆದದ್ದು 1804ನೇ ಇಸವಿಯಲ್ಲಿ. ಅದಾದ ಮೇಲೆ ಇಲ್ಲಿಯವರೆಗೆ ಯಾರ‍್ಯಾರು ಅಮೆರಿಕದ ಸುಪ್ರೀಂ ನ್ಯಾಯಾಧೀಶರಾಗಿದ್ದಾರೋ ಅವರೆಲ್ಲ ಸತ್ತ ಮೇಲೆಯೇ ವಿಶ್ರಾಂತರಾದದ್ದು. ಈಗ 2-3 ವರ್ಷಗಳ ಹಿಂದೆ ಸುಪ್ರೀಂ ನ್ಯಾಯಾಧೀಶ ರುತ್ ಗಿನ್ಸ್‌ಬರ್ಗ್ ತೀರಿಕೊಂಡಾಗ ಆಕೆಗೆ 87 ವರ್ಷ!

ಸುಪ್ರೀಂ ಕೋರ್ಟಿನ ಈ 9 ನ್ಯಾಯಾಧೀಶರು ಅತ್ಯಂತ ಬಲಿಷ್ಠರು- ಪವರ್ ಫುಲ್. ಹೀಗೆಂದರೆ ಸರಕಾರದ ನಡೆ, ಕಾನೂನು, ನ್ಯಾಯಸಮ್ಮತವೇ ಎಂದು ನಿರ್ಧರಿಸುವವರು ಇವರೇ 9 ಮಂದಿ. ನೂರಾರು ಮಂದಿ ಜನಪ್ರತಿನಿಧಿಗಳು ಸೇರಿ ಮಾಡಿದ ಕಾನೂನನ್ನು ಅಧ್ಯಕ್ಷರು ಒಪ್ಪಿ ಸಹಿ ಹಾಕಬೇಕು. ಅದನ್ನು ಕೂಡ ಪ್ರಶ್ನಿಸಿ- ತಿರಸ್ಕರಿಸುವ ಶಕ್ತಿ ಈ 9 ಜನರಿಗಿದೆ. ಅಧ್ಯಕ್ಷರೇ ನೇಮಿಸಿದರೂ ಈ ಆಯ್ಕೆ ರಾಜಕೀಯದಿಂದ ಹೊರತಾಗಿಲ್ಲ. ನಮ್ಮಲ್ಲಿ ಲೆಕ್ಕದಂತೆ ರಾಷ್ಟ್ರಪತಿ ಪಕ್ಷಾತೀತ- ಅಮೆರಿಕ ದಲ್ಲಿ ರಾಷ್ಟ್ರಾಧ್ಯಕ್ಷ ರಾಜಕೀಯ ಪಕ್ಷದವರು.

ಹಾಗಾಗಿ ಆಯ್ಕೆ ಕೂಡ ರಾಜಕೀಯವೇ. ಈ 9 ಮಂದಿಯಲ್ಲಿ ಯಾರೇ ಒಬ್ಬ ನ್ಯಾಯಾಧೀಶ ಮೃತನಾದ ಎಂದಿಟ್ಟುಕೊಳ್ಳಿ- ಆಗ ಮಾತ್ರ ಹಾಲಿ ಅಧ್ಯಕ್ಷನಿಗೆ ಆಯ್ಕೆ ಮಾಡುವ ಸೌಭಾಗ್ಯ. ಆಗ ಅಧ್ಯಕ್ಷ ಆರಿಸಿದ ನ್ಯಾಯಾಧೀಶನನ್ನು ಇಲ್ಲಿನ ಸಂಸತ್ತಿನ ಕೆಳಮನೆಯವರು ಅನುಮೋದಿಸಬೇಕು. ಕೆಲವೊಮ್ಮೆ ಅಧ್ಯಕ್ಷರ ವಿರೋಧಪಕ್ಷ ಕೆಳಮನೆಯಲ್ಲಿ ಬಹುಮತವನ್ನು ಹೊಂದಿರುತ್ತದೆ. ಆಗ ಅಧ್ಯಕ್ಷರ ಆಯ್ಕೆಯನ್ನು ಕೆಳಮನೆ ಒಪ್ಪುವುದಿಲ್ಲ, ತಿರಸ್ಕರಿಸುತ್ತದೆ.

ಅಂಥ ಸಂದರ್ಭದಲ್ಲಿ ಅಧ್ಯಕ್ಷರು ಮತ್ತು ಕೆಳಮನೆಯ ಸದಸ್ಯರ ನಡುವೆ ರಾಜಕೀಯ ಜಟಾಪಟಿ ನಡೆಯುತ್ತದೆ. ಒಬಾಮಾ ಆಡಳಿತದ ಸಮಯದಲ್ಲಿ ಹಾಗೆಯೇ ಆಯಿತು. ಒಂಬತ್ತರಲ್ಲಿ ಒಬ್ಬರು ತೀರಿಕೊಂಡರು. ಒಬಾಮ ಒಬ್ಬರನ್ನು ಆಯ್ಕೆ ಮಾಡಿ ಕೆಳಮನೆಯ ಅನುಮೋದನೆಗೆ ಕಳುಹಿಸಿದ. ಆದರೆ ಕೆಳಮನೆಯಲ್ಲಿ ಅವರ ಪಕ್ಷಕ್ಕೆ ಬಹುಮತವಿರಲಿಲ್ಲ.

ಅವರು ಒಪ್ಪಲಿಲ್ಲ. ಒಬಾಮಾ ಬದಲಿಸಲಿಲ್ಲ. ಹೀಗಾಗಿ ಒಂದಿಡೀ ವರ್ಷ ಎಂಟೇ ಮಂದಿ ಮುಖ್ಯ ನ್ಯಾಯಾಧೀಶರು. ಚುನಾವಣೆಯಾಗಿ ಟ್ರಂಪ್ ಅಧಿಕಾರಕ್ಕೆ ಬಂದ ನಂತರ, ಅವರದೇ ಪಕ್ಷ ಕೆಳಮನೆ ಯಲ್ಲಿ ಬಹುಮತದಲ್ಲಿದ್ದದ್ದರಿಂದ ಆ ಜಾಗವನ್ನು ತುಂಬಿಸಿದ್ದು. ರಿಪಬ್ಲಿಕನ್ ಪಕ್ಷ ಎಂದರೆ ಇಲ್ಲಿನ ಬಲಪಂಥ. ಡೆಮೊಕ್ರಟಿಕ್ ಪಕ್ಷ ಎಡಪಂಥ. ಇಲ್ಲಿನ ಎಡ-ಬಲ ಪಂಥವನ್ನು ಭಾರತದ ಕಾಂಗ್ರೆಸ್-ಬಿಜೆಪಿ ಎಂದೆಲ್ಲ ಹೋಲಿಸಿಕೊಳ್ಳುವುದು ಬೇಡ.

ಒಟ್ಟಿನಲ್ಲಿ ಹೆಚ್ಚಿನ ವಿಷಯಗಳಲ್ಲಿ ಈ ಎರಡು ಪಕ್ಷಗಳು- ಎರಡು ಧ್ರುವಗಳು. ಒಬ್ಬೊಬ್ಬರ ಒಲವು ಒಂದೊಂದು ಕಡೆ. ಅಂತೆಯೇ ಆಯಾ ಪಕ್ಷದವರು ಅಧ್ಯಕ್ಷರಾಗಿದ್ದಾಗ- ಒಂಬತ್ತರಲ್ಲಿ ಖಾಲಿಯಾದ ಜಾಗಕ್ಕೆ ಅವರ ಪಕ್ಷದ ಒಲವಿಗೆ ಹೊಂದಿಕೊಳ್ಳುವ ನ್ಯಾಯಾಧೀಶರನ್ನೇ ಆಯ್ಕೆ ಮಾಡುವುದು.

ಹೀಗೆ ಆಯ್ಕೆ ಮಾಡಿದ ನ್ಯಾಯಾಧೀಶರಲ್ಲಿ ಒಂದೋ ಎಡದ ಒಲವು, ಇಲ್ಲ ಬಲದ ಒಲವು. ಹಾಗಾಗಿ ಅಲ್ಲಿಯೂ ನ್ಯಾಯದ ತಕ್ಕಡಿ ಇತ್ತಿಂದತ್ತ-ಅತ್ತಿಂದಿತ್ತ ಸರಿಯುತ್ತದೆ. ಈ ಸಮತೋಲನ ಪ್ರತಿ ಬಾರಿ ಉಚ್ಚ ನ್ಯಾಯಾಧೀಶರಬ್ಬ ತೀರಿಕೊಂಡಾಗಲೂ ಬದಲಾಗುತ್ತದೆ. ಅಮೆರಿಕದ ಅಧ್ಯಕ್ಷರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ತುಣುಕನ್ನು ನೀವು ನೋಡಿದ್ದರೆ ಅಲ್ಲಿ ಕಪ್ಪು ರೋಬ್ ಧರಿಸಿದ ಈ ೯ ನ್ಯಾಯಾಧೀಶರು ಕಾಣಿಸಿರುತ್ತಾರೆ.

ಇವರಲ್ಲಿ ಪ್ರಮುಖರೇ ಅಮೆರಿಕ ಅಧ್ಯಕ್ಷರಿಗೆ ಪ್ರಮಾಣವಚನ ಬೋಧಿಸುವುದು. ಇವರ ಪಾತ್ರ ಬಹುಮುಖ್ಯ. ರಾಜಕೀಯ ಪಕ್ಷ-ಜನಪ್ರತಿನಿಧಿಗಳು ತೆಗೆದುಕೊಳ್ಳಲಾಗದ ಕೆಲವು ನಿರ್ಧಾರಗಳನ್ನು ಈ ನವನ್ಯಾಯಮೂರ್ತಿಗಳ ವ್ಯವಸ್ಥೆ ಅಮೆರಿಕದ ಇತಿಹಾಸದಲ್ಲಿ ತೆಗೆದುಕೊಂಡಿದೆ.

ಕಪ್ಪುವರ್ಣೀಯ ಮಕ್ಕಳ ಶಾಲೆಯಲ್ಲಿನ ಅಸಮಾನತೆಯನ್ನು ಕೊನೆಯಾಗಿಸಿದ್ದು ಇಲ್ಲಿನ ಸರಕಾರ ವಲ್ಲ- ಅಂದಿನ ಈ ನ್ಯಾಯಮೂರ್ತಿಗಳು. ಗರ್ಭಪಾತ ಹೆಣ್ಣಿನ ಹಕ್ಕು ಎಂದು ಕಾನೂನು ಮಾಡಿದ್ದು ಕೂಡ ಅವರೇ. ಬುಷ್ ಮತ್ತು ಆಲ್ ಗೋರ್ ಅಧ್ಯಕ್ಷೀಯ ಚುನಾವಣೆಯಲ್ಲಿ ಆದ ಗೊಂದಲವನ್ನು ಬಗೆಹರಿಸಿದ್ದೂ ಇವರೇ. ಡೊನಾಲ್ಡ್ ಟ್ರಂಪ್ ಹಿಂದಿನ ಬಾರಿ ಆಯ್ಕೆ ಮಾಡಿದ ನ್ಯಾಯಾಧೀಶರಿಂದ ಈ 9 ಜನರಲ್ಲಿ ಸಮತೋಲನ ಬದಲಾಗಿದೆ.‌

ಸದ್ಯ ಸಂಪ್ರದಾಯವಾದಿ ನ್ಯಾಯಾಧೀಶರದ್ದೇ ಮೇಲುಗೈ. ಹಾಗಾಗಿಯೇ ಸಂಪ್ರದಾಯದ ವಿಷಯ ವಾದ ‘ಗರ್ಭಪಾತ ಹೆಣ್ಣಿನ ಹಕ್ಕು’ ಎನ್ನುವ ಪರಿಭಾಷೆಯ ದಶಕಗಳ ಹಿಂದಿನ ಕೋರ್ಟ್ ತೀರ್ಪನ್ನು ಈಗ ಈ ತಂಡ ತಿರಸ್ಕರಿಸಿದೆ. ಪರಿಣಾಮ, ಗರ್ಭಪಾತ ನ್ಯಾಯಸಮ್ಮತವೋ ಅಲ್ಲವೋ ಎಂಬುದನ್ನು ರಾಜ್ಯಗಳೇ ಈಗ ನಿರ್ಧರಿಸಬಹುದು. ರಾಜ್ಯ ನ್ಯಾಯಾಲಯದಲ್ಲೂ ಇದೇ ರೀತಿ.

ಎಲ್ಲಿ ನ್ಯಾಯಮೂರ್ತಿಗಳ ಒಲವು ಅತ್ತಲಿದೆಯೋ ಆ ಎಲ್ಲಾ ರಾಜ್ಯಗಳಲ್ಲಿ, ಈಗ ಅರ್ಧ ಅಮೆರಿಕ ದಲ್ಲಿ ಗರ್ಭಪಾತ ಪೂರ್ಣ ನಿಷಿದ್ಧ!!

(ಮುಂದುವರಿಯುತ್ತದೆ)