ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shishir Hegde Column: ಅಪರಾಧಿಯೆಂದು ನಿರ್ಧರಿಸುವುದು ನ್ಯಾಯಾಧೀಶರ ಕೆಲಸವಲ್ಲ !

ಬ್ಲಿಟ್ಜ್ ಟ್ಯಾಬ್ಲಾಯ್ಡ್ ಇದಕ್ಕೆ ತನ್ನದೇ ಹೊಸತೊಂದು ನಿರೂಪಣೆ ನೀಡಿತು. ನಾನಾವತಿ ಶ್ರೀರಾಮ‌ ಚಂದ್ರ, ಸಿಲ್ವಿಯಾ ಸೀತೆ. ಅಹುಜಾ ಮೋಸದಿಂದ ಸಿಲ್ವಿಯಾನನ್ನು ವಶೀಕರಿಸಿಕೊಂಡಿದ್ದಾನೆ. ಅವನ ಕಿಸೆಯಲ್ಲಿ ಯಾವತ್ತೂ ಒಂದು ಹಳದಿ ಬಣ್ಣದ ಪುಡಿ ಇರುತ್ತಿತ್ತು ಇತ್ಯಾದಿ. ಈ ಕೇಸಿನ ವಿವರ ನೋಡುತ್ತಿದ್ದರೆ ಇಂದಿನ ಕನ್ನಡ ಟಿವಿ ವಾಹಿನಿಗಳು ಯಾವ ಲೆಕ್ಕವೂ ಅಲ್ಲ - ಅಷ್ಟು ಸಂಚಲನ ವನ್ನು ಪತ್ರಿಕೆಗಳು ಮೂಡಿಸಿದ್ದವು.

ಅಪರಾಧಿಯೆಂದು ನಿರ್ಧರಿಸುವುದು ನ್ಯಾಯಾಧೀಶರ ಕೆಲಸವಲ್ಲ !

ಶಿಶಿರ ಕಾಲ

shishirh@gmail.com

(ಅಮೆರಿಕ ಕಾನೂನು ವ್ಯವಸ್ಥೆ ಭಾಗ-2)

ಅವನು ಆರು ಫೂಟ್ ಎತ್ತರದ ಕಟ್ಟುಮಸ್ತಾದ ಆಳು, ಸ್ಪುರದ್ರೂಪಿ. ಸ್ವತಂತ್ರ ಭಾರತದ ಜಲಸೇನೆಯ ಕಮಾಂಡರ್. ಅವನೆಂದರೆ ಶಿಸ್ತಿನ ಯೂನಿಫಾರ್ಮ್, ಆಕರ್ಷಕ, ಮಿಲಿಟರಿ ಗತ್ತು. ಹೆಸರು ಕವಾಸ್ ಮಾಣಿಕ್ಶಾ ನಾನಾವತಿ. ಅವನ ಹೆಂಡತಿ ಇಂಗ್ಲೆಂಡಿನ ಬಿಳಿ ಸುಂದರಿ - ಹೆಸರು ಸಿಲ್ವಿಯಾ. ನಾನಾ ವತಿ ಆಗಾಗ ಕೆಲಸದ ನಿಮಿತ್ತ ಮನೆಯಿಂದ ತಿಂಗಳುಗಟ್ಟಲೆ ಹೊರಗಿರುತ್ತಿದ್ದ. ಸಿಲ್ವಿಯಾ ಮೂರು ಮಕ್ಕಳನ್ನು ನೋಡಿಕೊಂಡು ಮುಂಬೈನಲ್ಲಿ ವಾಸವಾಗಿದ್ದಳು. ಹಾಗಿರುವಾಗ ಸಿಲ್ವಿಯಾ ಮತ್ತು ಪ್ರೇಮ್ ಅಹುಜಾ ಎಂಬವನ ನಡುವೆ ವಿವಾಹದಾಚೆಯ ಸಂಬಂಧ ಶುರು ವಾಯಿತು, ಬೆಳೆಯಿತು.

ಇದೆಲ್ಲ ನಡೆದದ್ದು 1959ರಲ್ಲಿ. ಕವಾಸ್ ನಾನಾವತಿ ಸಾಮಾನ್ಯದವನಾಗಿರಲಿಲ್ಲ. ನೇವಿ ಕಮಾಂಡರ್ ಎನ್ನುವುದಕ್ಕಿಂತ ನೆಹರು-ಗಾಂಧಿ ಕುಟುಂಬಕ್ಕೆ ಹತ್ತಿರದವನು. ಅತ್ತ ಸಿಲ್ವಿಯಾಳ ಪ್ರಿಯತಮ ಪ್ರೇಮ್ ಭಗವಾನ್ ದಾಸ್ ಅಹುಜಾ, ಅವನು ನಾನಾವತಿಗೆ ಅeತನಲ್ಲ, ಸ್ನೇಹಿತ. ಅವನೂ ಪ್ರಭಾವಶಾಲಿ ಉದ್ಯಮಿ, ಶ್ರೀಮಂತ, ಜಂಗಿ-ಚೈನಿ ಮನುಷ್ಯ. ಸಿಲ್ವಿಯಾ ಮತ್ತು ಪ್ರೇಮ್ ಅಹುಜಾ ನಡುವಿನ ಸಂಬಂಧ ಕೆಲವು ಕಾಲ ಗೌಪ್ಯವಾಗಿಯೇ ಇತ್ತು.

ಆದರೆ ಒಮ್ಮೆ ನಾನಾವತಿ ಕೆಲ ದಿನ ಹೊರಗಿದ್ದು ಮನೆಗೆ ಮರಳಿದಾಗ - ಹೆಂಡತಿ ಸಿಲ್ವಿಯಾ ಮತ್ತು ಗೆಳೆಯ ಅಹುಜಾ ಸಂಬಂಧ ಅವನಿಗೆ ತಿಳಿಯಿತು. ತಿಳಿದದ್ದೇ ತಡ, ನಾನಾವತಿ ರುದ್ರಕೋಪಿತನಾದ. ತನ್ನ ಸರ್ವೀಸ್ ರಿವಾಲ್ವರ್ ಹಿಡಿದು ಅಹುಜಾ ಮನೆಗೆ ಹೋದ. ಹೋದವನೇ - ಅಹುಜಾ ಸ್ನಾನ ಮಾಡಿ ಬಚ್ಚಲು ಮನೆಯಿಂದ ಹೊರಬರುತ್ತಿದ್ದಂತೆ ನಾನಾವತಿ ಹೆಂಡತಿಯ ಪ್ರಿಯತಮ ಅಹುಜಾನನ್ನು ಮೂರು ಗುಂಡು ಹಾರಿಸಿ ಕೊಂದೇ ಬಿಟ್ಟ.

ಇದನ್ನೂ ಓದಿ: Shishir Hegde Column: ಇಲ್ಲಿ ಶೇ.98 ಕ್ರಿಮಿನಲ್ ಮೊಕದ್ದಮೆಗಳು ವಿಚಾರಣೆಗೆ ಬರುವುದೇ ಇಲ್ಲ!

ಆಗಿನ ಕಾಲದಲ್ಲಿ ಅತ್ಯಂತ ಸಂಚಲನ ಮೂಡಿಸಿದ ಹೈ ಪ್ರೊಫೈಲ್ ಕೇಸ್ ಇದು. ಇಂದಿನ ಕೆಲವು ಜೀವಂತ ಕೇಸುಗಳಂತೆ ಇದು ಕೂಡ - ನೂರೆಂಟು ಸ್ವರೂಪ ಪಡೆದಿತ್ತು. ಟಿವಿಗಳಿಲ್ಲದ, ಟ್ಯಾಬ್ಲಾಯ್ಡ ಕಾಲ.. ಏನೇನೋ ನಿರೂಪಣೆಗಳು. ನಾನಾವತಿ ಪಾರ್ಸಿ. ಅಹುಜಾ ಸಿಂಧಿ. ಹಾಗಾಗಿ ಎಂದಿನ ಭಾರತದಂತೆ ಮೊದಲು ಜಾತಿ - ಧರ್ಮದ ರೂಪ ; ನಂತರ ಸಿಲ್ವಿಯಾ ಇಂಗ್ಲೆಂಡಿನವಳು, -ರಿನ್, ಪಾಶ್ಚಾತ್ಯಳು ಹಾಗಾಗಿ ಸಂಸ್ಕಾರ ವಿಹೀನಳು ಎಂದು.

ಬ್ಲಿಟ್ಜ್ ಟ್ಯಾಬ್ಲಾಯ್ಡ್ ಇದಕ್ಕೆ ತನ್ನದೇ ಹೊಸತೊಂದು ನಿರೂಪಣೆ ನೀಡಿತು. ನಾನಾವತಿ ಶ್ರೀರಾಮ‌ ಚಂದ್ರ, ಸಿಲ್ವಿಯಾ ಸೀತೆ. ಅಹುಜಾ ಮೋಸದಿಂದ ಸಿಲ್ವಿಯಾನನ್ನು ವಶೀಕರಿಸಿಕೊಂಡಿದ್ದಾನೆ. ಅವನ ಕಿಸೆಯಲ್ಲಿ ಯಾವತ್ತೂ ಒಂದು ಹಳದಿ ಬಣ್ಣದ ಪುಡಿ ಇರುತ್ತಿತ್ತು ಇತ್ಯಾದಿ. ಈ ಕೇಸಿನ ವಿವರ ನೋಡುತ್ತಿದ್ದರೆ ಇಂದಿನ ಕನ್ನಡ ಟಿವಿ ವಾಹಿನಿಗಳು ಯಾವ ಲೆಕ್ಕವೂ ಅಲ್ಲ - ಅಷ್ಟು ಸಂಚಲನ ವನ್ನು ಪತ್ರಿಕೆಗಳು ಮೂಡಿಸಿದ್ದವು.

ನ್ಯಾಯಾಲಯದಲ್ಲಿ ಮೊಕದ್ದಮೆ ಶುರುವಾಯಿತು. ಆಗ ಭಾರತದ ಕಾನೂನು ವ್ಯವಸ್ಥೆಯಲ್ಲಿ ‘ಜ್ಯೂರಿ’ ವ್ಯವಸ್ಥೆ ಇತ್ತು. ‘ಜ್ಯೂರಿ’ ಎಂದರೆ ಹತ್ತು ಹನ್ನೆರಡು ಮಂದಿ ಜನಸಾಮಾನ್ಯರೇ ಕೋರ್ಟಿ ನಲ್ಲಿ ಕೂತು ವಾದ ವಿವಾದವನ್ನು ವೀಕ್ಷಿಸುವುದು ಮತ್ತು ಆರೋಪಿ ಅಪರಾಧಿಯೋ ಅಲ್ಲವೋ ಎಂದು ನಿರ್ಧರಿಸುವ ವ್ಯವಸ್ಥೆ. ಆರೋಪಿಯು ಅಪರಾಧಿ - ನಿರಪರಾಧಿ - ಹೌದು ಅಥವಾ ಅಲ್ಲ ಎಂದಷ್ಟೇ ನಿರ್ಧರಿಸುವುದು ‘ಜ್ಯೂರಿ’ ತಂಡದ ಕೆಲಸ.

ಎಷ್ಟು ಶಿಕ್ಷೆ ಇತ್ಯಾದಿ ನ್ಯಾಯಾಧೀಶರು ಕಾನೂನಿನ್ವಯ ನೀಡಬೇಕು. ಈ ನಾನಾವತಿ ವರ್ಸಸ್ ಸ್ಟೇಟ್ ಆಫ್ ಮಹಾರಾಷ್ಟ್ರ ಕೇಸಿನಲ್ಲಿ ಅಹುಜಾನನ್ನು ಗುಂಡಿಕ್ಕಿ ಕೊಂದದ್ದು ನಾನಾವತಿ ಎಂಬುದರ ಮೇಲೆ ಅನುಮಾನವಿರಲಿಲ್ಲ. ಪ್ರಾಸಿಕ್ಯುಶನ್ ಇದನ್ನು old blooded murder ಎಂದು ವಾದ ಮಾಡಿತು.

ಡಿಫೆನ್ಸ್ - ನಾನಾವತಿ ಪರವಾಗಿರುವ ವಕೀಲರದು ಇದು ಸಿಟ್ಟಿನ ಭರದಲ್ಲಿ ನಡೆದದ್ದು, ಪೂರ್ವ ನಿರ್ಧರಿತ ಕೊಲೆಯಲ್ಲ’ ಎಂದು ವಾದ. ಒಂಭತ್ತು ಜನ ಜ್ಯೂರಿ ಅಲ್ಲಿ ನಡೆದ ಕೋರ್ಟ್ ಡ್ರಾಮಾ ವನ್ನು ನೋಡಿದರು. ವಾದ ಪ್ರತಿವಾದ ಕೇಳಿದರು. ಹೊರಗಡೆ ಪತ್ರಿಕೆಗಳು, ಟ್ಯಾಬ್ಲಾಯ್ಡ ಗಳು ಯೂನಿಫಾರ್ಮ್ ಧರಿಸಿ ದುಃಖದಲ್ಲಿ ನಿಂತ ನಾನಾವತಿ, ಐಶೋರಾಮಿ ಜೀವನ ನಡೆಸುತ್ತಿದ್ದ ಅಹುಜಾ ಫೋಟೋ ಸಹಿತ ವರದಿಗಳು. ನಾನಾವತಿ ನೆಹರು ಆಪ್ತವಲಯದವನು.

ಹಾಗಾಗಿ ಕೆಲವು ದೊಡ್ಡ ದೊಡ್ಡ ಮಂದಿ, ರಾಜಕಾರಣಿಗಳು ಈ ಜ್ಯೂರಿಯಲ್ಲಿನ ಕೆಲವರನ್ನು ಭೆಟ್ಟಿಯೂ ಆಗಿದ್ದರಂತೆ. ಒಟ್ಟಾರೆ ಹೊರಗಿನ ಒತ್ತಡ, ನಾನಾವತಿ ಶ್ರೀರಾಮಚಂದ್ರ - ಅಹುಜಾ ರಾವಣನೆನ್ನುವ ನಿರೂಪಣೆ. ಮೊಕದ್ದಮೆ ನಡೆಯಿತು. ಕೊನೆಗೆ ತೀರ್ಪಿನ ದಿನ ಬಂತು - ತೀರ್ಪು ಯಾರೂ ನಿರೀಕ್ಷಿಸಿರಲಿಲ್ಲ. ಜ್ಯೂರಿ ಗುಂಪಿನ ಒಂಭತ್ತು ಜನರಲ್ಲಿ ಎಂಟು ಮಂದಿ ನಾನಾವತಿ ಯನ್ನು ನಿರಪರಾಧಿ ಎಂದು ತೀರ್ಪು ಕೊಟ್ಟುಬಿಟ್ಟರು!

ಅಲ್ಲಿ ಆತ ಅಪರಾಧಿ ಎಂದು ಎಲ್ಲರಿಗೂ ತಿಳಿದಿತ್ತು - ಆದರೆ ಅವನು ಮಾಡಿದ್ದು ತಪ್ಪಲ್ಲ, ‘ನಾನಾವತಿ ನಿರ್ದೋಷಿ’ ಎಂದು ಜ್ಯೂರಿಗಳ ತೀರ್ಪು ಬಂತು. ಇದು ಸಂಪೂರ್ಣ ಅನ್ಯಾಯವಾಗಿತ್ತು. ಆಮೇಲೆ ನ್ಯಾಯಾಲಯ ಜ್ಯೂರಿಯ ತೀರ್ಪನ್ನು ಒಪ್ಪಲಿಲ್ಲ. ಮೇಲಿನ ಕೋರ್ಟಿನಲ್ಲಿ ನಾನಾವತಿ ಯೇ ತಪ್ಪಿತಸ್ಥ ಎಂದು ಜೀವಾವಽ ಶಿಕ್ಷೆಯಾಯಿತು. ಆಮೇಲೆ ಮೂರು ವರ್ಷ ಅವನು ಜೈಲಿ ನಲ್ಲಿದ್ದ. ಅಷ್ಟರಲ್ಲಿ ನೆಹರು ಸಹೋದರಿ, ರಾಜ್ಯಪಾಲೆ ವಿಜಯಲಕ್ಷ್ಮಿ ಪಂಡಿತ್ ಅವನಿಗೆ ಕ್ಷಮಾ ದಾನ ನೀಡಿದರು. ಅವನು ಸಿಲ್ವಿಯಾ ಮತ್ತು ತನ್ನ ಮೂರು ಮಕ್ಕಳೊಂದಿಗೆ ಕೆನಡಾಕ್ಕೆ ದೇಶಾಂತರ ಹೋಗಿ ನೆಲೆಸಿದ.

ಇವಿಷ್ಟು ನೈಜ ಕಥೆ. ಈ ಕಥೆಯನ್ನು ನೀವು ಎಲ್ಲಿಯೋ ಕೇಳಿದ್ದೀರಿ ಎಂದೆನಿಸಿದರೆ ಸಾಧ್ಯವಿದೆ. ಈ ಒಂದು ಕಥೆಯ ಎಳೆಯನ್ನು ಆಧರಿಸಿ ಆರೆಂಟು ಚಲನಚಿತ್ರಗಳು ಹಿಂದಿಯಲ್ಲಿ, ಅನ್ಯಭಾಷೆಗಳಲ್ಲಿ ಬಂದಿವೆ. ಏ ರಾಸ್ತೆ ಹೈ ಪ್ಯಾರ್ ಕಿ, ಅಚಾನಕ್, ಅಕ್ಷಯ್ ಕುಮಾರ್ ಅಭಿನಯದ ರುಸ್ತುಂ ಇತ್ಯಾದಿ.

ಅಲ್ಲಿಂದ ಮುಂದೆ 2003ರ ವರೆಗೆ ನಾನಾವತಿ ಕೆನಡಾದಲ್ಲಿಯೇ ಬದುಕಿದ್ದ. ಸಿಲ್ವಿಯಾ ಇನ್ನೂ ಮಕ್ಕಳು ಮೊಮ್ಮಕ್ಕಳ ಜೊತೆ ಕೆನಾಡಲ್ಲಿಯೇ ಬದುಕಿದ್ದಾಳೆ. ವಿಷಯ ಅದಲ್ಲ - ಮುಖ್ಯವಾಗಿ ಈ ಇಡೀ ಪ್ರಕರಣದಿಂದ ಜ್ಯೂರಿ ವ್ಯವಸ್ಥೆಯ ಮೇಲೆ ಆರೋಪಗಳು ಬಂದವು. ಜನರು ಭಾವನಾತ್ಮಕ ವಾಗಿ - ಬೇಕಾಬಿಟ್ಟಿ ನ್ಯಾಯ ಕೊಡಬಹುದು ಹಾಗಾಗಿ ಈ ಜ್ಯೂರಿ ಪದ್ಧತಿಯೇ ಬೇಡ ಎಂದಾಯಿತು.

ಒಟ್ಟಾರೆ 1960ರಲ್ಲಿ ನಮ್ಮ ನ್ಯಾಯಾಂಗದಲ್ಲಿ ಜ್ಯೂರಿ ಪದ್ಧತಿ ಕೊನೆಗೊಂಡಿತು. ಅಲ್ಲಿಂದ ಮುಂದೆ ನ್ಯಾಯಾಧೀಶರೇ ತೀರ್ಪು ನೀಡುವುದು ಮತ್ತು ಶಿಕ್ಷೆಯ ಪ್ರಮಾಣವನ್ನು ಕೊಡುವುದು ನಡೆದು ಬಂದಿದೆ. ಆದರೆ ಅಮೆರಿಕಾದಲ್ಲಿ ಈ ಜ್ಯೂರಿ ಪದ್ಧತಿ ಇಂದಿಗೂ ಇದೆ. ಜ್ಯೂರಿ ಪದ್ಧತಿ ಬ್ರಿಟಿಷರ ಕಾಲದ್ದು. ಅಮೆರಿಕಾದ ಬ್ರಿಟಿಷರ ಕಾಲ ಎಂದರೆ ಸ್ವಾತಂತ್ರ್ಯ ಬಂದದ್ದು 1791ರಲ್ಲಿ. ಎರಡು ಶತಮಾನ ಕಳೆದಿದೆ.

ಏನಾಗಿದೆಯೆಂದರೆ, ಅಮೆರಿಕಾದ ಮೂಲ ಸಂವಿಧಾನದಲ್ಲಿಯೇ ಈ ಜ್ಯೂರಿ ವ್ಯವಸ್ಥೆಯನ್ನು ಸೇರಿಸಲಾಗಿದೆ. ಹೇಗೆಂದರೆ ಜ್ಯೂರಿ ವ್ಯವಸ್ಥೆಯ ಮೂಲಕ ನ್ಯಾಯ ಪಡೆಯುವುದು ಅಮೆರಿಕನ್ ಪ್ರಜೆಯ ಹಕ್ಕು ಎಂದು ಸಂವಿಧಾನದಲ್ಲಿ ಬರೆಯಲಾಗಿದೆ. ಹಾಗಾಗಿ ಇದನ್ನು ಬದಲಿಸುವುದು ಸುಲಭವಲ್ಲ. ನ್ಯಾಯ ಕೊಡುವವರೂ ಪ್ರಜೆಗಳು. ಇಲ್ಲಿಯೂ ಪ್ರಜಾಪ್ರಭುತ್ವ. ಈ ಇಡೀ ವ್ಯವಸ್ಥೆಯ ಹಕೀಕತ್ತು ಗೊತ್ತಾಗಬೇಕೆಂದರೆ ಕೆಲವೊಂದಿಷ್ಟು ವಿವರಣೆಗಳನ್ನು ನಿಮ್ಮ ಜೊತೆ ಹಂಚಿಕೊಳ್ಳ‌ ಬೇಕು.

‘ಜ್ಯೂರಿ’ ಎಂದರೆ ಮೊಕದ್ದಮೆ ನಡೆಯುವ ಕೌಂಟಿಯ, ಸ್ಥಳೀಯ ನಾಗರೀಕರು, ಜನಸಾಮಾನ್ಯರು. ಇಲ್ಲಿನ ಕೋರ್ಟ್ ಆಗಾಗ ಮತದಾರರ ಪಟ್ಟಿಯಿಂದ ಅಥವಾ ಡ್ರೈವಿಂಗ್ ಲೈಸೆನ್ಸ್ ಪಟ್ಟಿಯಿಂದ ಒಂದಿಷ್ಟು ನಾಗರಿಕರನ್ನು ಯಾದೃಚ್ಛಿಕ ( random ) ಆಯ್ಕೆ ಮಾಡಿಟ್ಟುಕೊಳ್ಳುತ್ತದೆ. ಅವರೆಲ್ಲ ಜ್ಯೂರಿ ಕೆಲಸ ಮಾಡುವುದಕ್ಕಿಂತ ಮೊದಲು ಹಿರಿಯ ವಕೀಲರ, ನ್ಯಾಯಾಧೀಶರ ಕಮೀಟಿಯ ಮುಂದೆ ಹಾಜರಾಗಬೇಕು. ಅವರ ಹಿನ್ನೆಲೆಯೇನು, ಕ್ರಿಮಿನಲ್ ಇತಿಹಾಸವಿದೆಯೇ?, ಜೀವವಾನು ಭವವೇನು? ಅವರ ನಂಬಿಕೆಗಳು, ಒಲವು, ನಿಲುವು? ಅಷ್ಟಕ್ಕೂ ಇವರಿಗೆ ಅಮೆರಿಕನ್ ನ್ಯಾಯಾ ಲಯದ ಬಗ್ಗೆ ನಂಬಿಕೆ ಇದೆಯೇ? ಇದೆಲ್ಲವನ್ನೂ ಕೇಳುವ ಇಂಟರ್‌ವ್ಯೂ ನಡೆಯುತ್ತದೆ.

ಅದರಲ್ಲಿ ಆಯ್ಕೆಯಾದವರು ಮಾತ್ರ ಜ್ಯೂರಿ ಕೆಲಸಕ್ಕೆ ಕರೆಯಲಾಗುತ್ತದೆ. ಅವರಲ್ಲಿ ಮತ್ತೆ ಯಾದೃಚ್ಛಿಕ 6-12 ಮಂದಿಗೆ ಪ್ರತೀ ಪ್ರಕರಣಕ್ಕೆ ನೇಮಿಸಲ್ಪಡುತ್ತಾರೆ. ಒಟ್ಟಾರೆ ಸ್ಥಳೀಯ ನಾಗರೀಕರೇ ಜ್ಯೂರಿ - ತೀರ್ಪುದಾರರಾಗುವುದು.

ಜ್ಯೂರಿ ಡ್ಯುಟಿ - ಕೆಲಸಕ್ಕೆ ಕರೆ ನಾಗರಿಕರಲ್ಲಿ ಯಾರಿಗೆ ಬೇಕಾದರೂ ಬರಬಹುದು. ಬುಲಾವ್ ಬಂದರೆ ಅದನ್ನು ಅಲಕ್ಷಿಸುವಂತಿಲ್ಲ, ತಪ್ಪಿಸಿಕೊಳ್ಳುವಂತಿಲ್ಲ. ಹೋಗಲು ಸಾಧ್ಯವಿಲ್ಲವೆಂದರೆ ಸಕಾರಣ ಕೊಡಬೇಕು, ಕಾರಣಕ್ಕೆ ಸಾಕ್ಷ್ಯ ಇರಬೇಕು. ಅಕಾರಣ ತಪ್ಪಿಸಿಕೊಂಡರೆ ಶಿಕ್ಷಾರ್ಹ. ಕೆಲವೊಮ್ಮೆ ಈ ಜ್ಯೂರಿ ಕೆಲಸ ದೊಡ್ಡ ಸಿನಿಮಾ ನಟರಿಗೆ, ಸೆಲೆಬ್ರಿಟಿಗಳಿಗೂ ಬಂದುಬಿಡುತ್ತದೆ. ಅವರು ಸಾಮಾನ್ಯವಾಗಿ ಏನೋ ಒಂದು ಕಾರಣ ಕೊಟ್ಟು ಇದರಿಂದ ತಪ್ಪಿಸಿಕೊಳ್ಳುತ್ತಾರೆ. ಈಗೀಗ ಈ ಸೆಲೆಬ್ರಿಟಿಗಳನ್ನು ಜ್ಯೂರಿಯಾಗಿ ಬಳಸಿಕೊಳ್ಳುವುದು ಕೋರ್ಟಿಗೆ ತಲೆಬಿಸಿಯ ಕೆಲಸ.

ಅವರ ರಕ್ಷಣೆ ಇತ್ಯಾದಿ. ಹಾಗಾಗಿ ಕೋರ್ಟಿನವರೇ ಅವರನ್ನು ಕೈಬಿಟ್ಟುಬಿಡುತ್ತದೆಯಂತೆ. ಆ ನಡುವೆ ಜ್ಯೂರಿ ಕೆಲಸಕ್ಕೆ ಹಾಜರಾಗಿ ನಾವು ನಾಗರೀಕ ಕರ್ತವ್ಯವನ್ನು ನಿಭಾಯಿಸಿದೆವು ಎಂದು ಬೀಗುವ, ಸೆಲಿ ಹೊಡೆದು ಹವಾ ಎಬ್ಬಿಸುವ ಸೆಲೆಬ್ರಿಟಿಗಳು ಕೂಡ ಇದ್ದಾರೆ. ಇರಲಿ. ಒಂದು ಮೊಕದ್ದಮೆಗೆ ಒಂದು ಜ್ಯೂರಿ ತಂಡ. ಈ ರೀತಿ ಆಯ್ಕೆಯಾದ ಜ್ಯೂರಿಗಳು ಪ್ರಶ್ನಾತೀತರಲ್ಲ.

ಅವರು ನ್ಯಾಯ ಕೊಡಲಾರರು ಎಂದು ನ್ಯಾಯಾಲಯಕ್ಕೆ ಅನಿಸಿದರೆ ಅಥವಾ ವಕೀಲರು ರಗಳೆ ತೆಗೆದರೆ ಅಂತಹ ವ್ಯಕ್ತಿಯನ್ನು ಜ್ಯೂರಿಯಿಂದ ಕೈಬಿಡಲಾಗುತ್ತದೆ. ಮೊಕದ್ದಮೆ ನಡೆಯುವುದು ನ್ಯಾಯಾಧೀಶರ ಆಣತಿಯಂತೆ. ಜ್ಯೂರಿಯಾಗಿ ಆಯ್ಕೆಯಾದವರಿಗೆ ಎರಡು ಕೆಲಸ. ಮೊದಲನೆ ಯದು ಯಾವುದೇ ಪ್ರಕರಣ ಕೋರ್ಟಿನಲ್ಲಿ ಮೊಕದ್ದಮೆಯಾಗಿ ಸ್ವೀಕಾರವಾಗಬೇಕೆ ಇಲ್ಲವೇ ಎನ್ನುವುದನ್ನು ನಿರ್ಧರಿಸುವುದು. ಸುಮ್ಮನೆ ಸಾಕ್ಷ್ಯಗಳಿಲ್ಲದೆ ‘ಬುರುಡೆ’ ಬಿಡುವ ಕೇಸ್ ಆಗಿದ್ದರೆ ಜ್ಯೂರಿ ಅಲ್ಲಿಯೇ ಆ ಮೊಕದ್ದಮೆಯನ್ನು ಕಸದ ಬುಟ್ಟಿಗೆ ಎಸೆದುಬಿಡಬಹುದು.

ಸಾಮಾನ್ಯವಾಗಿ ಪ್ರಾಸಿಕ್ಯೂಷನ್ ಜ್ಯೂರಿ ಗುಂಪಿನ ಎದುರು ಕೇಸಿನ ವಿವರ ಮೊದಲು ಆಗಿರುವ ಅನ್ಯಾಯದ ಬಗ್ಗೆ ವಿವರಿಸಬೇಕು - ಈ ಕಾರಣಕ್ಕೆ ಇದು ಮೊಕದ್ದಮೆಯಾಗಿ ಸ್ವೀಕರಿಸಲ್ಪಡಬೇಕು ಎಂದು ಒಪ್ಪಿಸಬೇಕು. ಹೀಗೆ ಮೊಕದ್ದಮೆಯೊಂದು ಸ್ವೀಕಾರವಾಗುವುದೇ ಜ್ಯೂರಿಯಿಂದ. ಅದಾದ ಮೇಲೆ ಕೋರ್ಟ್ ಟ್ರಯಲ. ಈ ಹಂತದಲ್ಲಿ ಜ್ಯೂರಿಯಾದವರು ಸುಮ್ಮನೆ ಪಕ್ಕಕ್ಕೆ ಕುಳಿತು ವಾದ ಪ್ರತಿವಾದವನ್ನು ಕೇಳಿಸಿಕೊಳ್ಳಬೇಕು.

ಅದಾದ ನಂತರ ಆರೋಪಿ ಅಪರಾಧಿಯೋ ಅಥವಾ ನಿರಪರಾಧಿಯೋ ಎಂದು ನಿರ್ಧರಿಸಬೇಕು. ಒಬ್ಬ ವ್ಯಕ್ತಿ ಆರೋಪಿಯೆಂದಾದರೆ ಅದನ್ನು ಜ್ಯೂರಿ ಗುಂಪಿನ ಅಷ್ಟೂ ಮಂದಿ ಒಮ್ಮತದಿಂದ ಒಪ್ಪಬೇಕು. ಒಂದು ವೇಳೆ ಒಂದು ಕ್ರಿಮಿನಲ್ ಕೇಸ್ ನಲ್ಲಿ ಹನ್ನೆರಡು ಜನ ಜ್ಯೂರಿ ಇದ್ದಾರೆ ಎಂದಿಟ್ಟುಕೊಳ್ಳಿ.

ಅದರಲ್ಲಿ ಹನ್ನೊಂದು ಮಂದಿ ಇವನೇ ಅಪರಾಧಿ ಎಂದು ಒಬ್ಬನೇ ಒಬ್ಬ ನಿರಪರಾಧಿಯೆಂದರೆ ಇಡೀ ಕೇಸ್ ಬಿದ್ದುಹೋಗಬಹುದು. ಸಾಮಾನ್ಯವಾಗಿ ಅಂತಹ ಸಂದರ್ಭದಲ್ಲಿ ಎಲ್ಲಾ ಹನ್ನೆರಡೂ ಜ್ಯೂರಿಗಳನ್ನು ಒಂದು ಕೋಣೆಯೊಳಗೆ ಚರ್ಚೆಗೆ ಕೂಡಿಸಲಾಗುತ್ತದೆ. ಅವರು ಅಲ್ಲಿ ಚರ್ಚೆ ಮಾಡಿ ಏಕ ಮತಕ್ಕೆ ಬರಬೇಕು. ಇದು ಹಲವು ದಿನ ನಡೆಯುತ್ತದೆ. ಜ್ಯೂರಿ ತಂಡ ಏಕಾಭಿಪ್ರಾಯಕ್ಕೆ ಬಾರ ದಿದ್ದರೆ ಮೊಕದ್ದಮೆಯನ್ನು ತಪ್ಪಿದ ವಿಚಾರಣೆ ( mistrial) ಎಂದು ಘೋಷಿಸಿ ಅಲ್ಲಿಗೇ ಖುಲಾಸೆ ಯಾಗಿ ಬಿಡುತ್ತದೆ.

ಇವರೆಲ್ಲರೂ ಸಾಮಾನ್ಯ ನಾಗರಿಕರು. ಹಾಗಾಗಿ ಅವರು ಹೊರಗಿನ ಒತ್ತಡ, ಮಧ್ಯಮ ನಿರೂಪಣೆ ಇವೆಲ್ಲರಿಂದ ಪ್ರಭಾವಿತರಾಗುವುದು ಸಹಜ. ಹಾಗಾದಲ್ಲಿ ಅತ್ಯಂತ ಸಂಚಲನ ಮೂಡಿಸಿದ ದೊಡ್ಡ ಪ್ರಕರಣಗಳಲ್ಲಿ ಈ ಜ್ಯೂರಿಗಳನ್ನು ಕೋರ್ಟ್ ಟಿವಿ ಸಂಪರ್ಕವೂ ಇಲ್ಲದ ಹೋಟೆಲ್ ರೂಮು ಗಳನ್ನು ಕೊಟ್ಟು ಅಲ್ಲಿಯೇ ಕೆಲವು ದಿನ ಉಳಿಯುವಂತೆ ನಿರ್ದೇಶಿಸುವ ಉದಾಹರಣೆಗಳಿವೆ.

ಇನ್ನು ಸಿವಿಲ್ ಪ್ರಕರಣಗಳಲ್ಲಿ ಕೂಡ ಜ್ಯೂರಿ - ನಾಗರಿಕ ತೀರ್ಪುಗಾರರು ಮಹತ್ವದ ಪಾತ್ರ ವಹಿಸುತ್ತಾರೆ. ಯಾವುದಾದರೂ ಒಂದು ಕಂಪನಿ, ಉದಾಹರಣೆಗೆ ಆಹಾರ ತಯಾರಿಸುವ, ಔಷಧಿ ತಯಾರಿಸುವ ಕಂಪನಿ ತಪ್ಪೆಸಗಿತು ಎಂದಿಟ್ಟುಕೊಳ್ಳಿ. ಏನೋ ಒಂದು ಸುಳ್ಳು ಹೇಳಿ ಗ್ರಾಹಕರಿಗೆ ಮೋಸ ಮಾಡಿತು, ಅಥವಾ ಹಾನಿಗೆ ಕಾರಣವಾಯಿತು ಎಂದರೆ ಅವುಗಳಿಗೆ ದಂಡದ ಪ್ರಮಾಣ ವನ್ನು ನಿರ್ಧರಿಸುವುದು ಜ್ಯೂರಿಗಳು.

ಉದಾಹರಣೆಗೆ ಯಾವುದೋ ಒಂದು ದೊಡ್ಡ ಕಂಪನಿ ತಪ್ಪು ಮಾಡಿದೆಯೋ ಇಲ್ಲವೋ, ಎಷ್ಟು ದಂಡ, ಪರಿಹಾರ ಕೊಡಬೇಕು ಎಂದು ನಿರ್ಧರಿಸುವುದು ಅವರ ವಿರುದ್ಧ ಕೇಸ್ ಆದ ಜಾಗದ ಸ್ಥಳೀಯ ಜನರು !!

ಅದಷ್ಟೇ ಅಲ್ಲದ ಸರಕಾರದ್ದೇ ಏನೋ ಒಂದು ತಪ್ಪಿದೆ ಎಂದಿಟ್ಟುಕೊಳ್ಳಿ, ಅಥವಾ ರಸ್ತೆಯಲ್ಲಿ ಹೊಂಡದಿಂದಾಗಿ ಬಿದ್ದು ಯಾರೋ ಸತ್ತರು, ಅಲ್ಲಿ ಸರಿಯಾದ ಸೈನ್ - ಫಲಕಗಳು ಹಾಕಿರಲಿಲ್ಲ ಎಂದರೆ ; ಗಾಯಗೊಂಡವನು ಸರಕಾರದ ಅಥವಾ ರಸ್ತೆ ಇಲಾಖೆಯ ಮೇಲೆ ಕೇಸ್ ಮಾಡಬಹುದು. ಅಂತಹ ಸಂದರ್ಭದಲ್ಲಿ ಅದಕ್ಕೆ ದಂಡ ವಿಧಿಸುವವರು, ಪರಿಹಾರ ಎಷ್ಟೆಂದು ನಿರ್ಧರಿಸುವವರು ಸ್ಥಳೀಯ ನಾಗರೀಕರು - ಜ್ಯೂರಿಗಳು.

ಇದೆಲ್ಲ ಕೆಲವೊಮ್ಮೆ ಹೇಗಾಗುತ್ತೆಯೆಂದರೆ ಲಕ್ಷ ಕೋಟಿ ಗಾತ್ರದ ಕಂಪನಿಗೆ ನೂರಿನ್ನೂರು ಕೋಟಿ ದಂಡವನ್ನು ಸಾಮಾನ್ಯರಲ್ಲಿ ಸಾಮಾನ್ಯರಾದ ಜನಸಾಮಾನ್ಯರು ವಿಧಿಸುತ್ತಾರೆ. ಅದರರ್ಥ ಅಷ್ಟು ಶಕ್ತಿ ಈ ವ್ಯವಸ್ಥೆಯ ಮೂಲಕ ಜನಸಾಮಾನ್ಯನಿಗೆ ದತ್ತವಾಗುತ್ತದೆ. ಈ ಕಾರಣದಿಂದಾಗಿ ಇದನ್ನೇ ಬಳಸಿಕೊಂಡು ದುಡ್ಡು ಮಾಡುವವರೂ ಇಲ್ಲಿದ್ದಾರೆ. ಕೆಲವೊಮ್ಮೆ ಏನೋ ಒಂದು ನಷ್ಟವಾದರೆ ನಾವು ಕೇಸ್ ನಡೆಸುತ್ತೇವೆ ಎಂದು ವಕೀಲರೇ ಮುಂದೆ ಬರುತ್ತಾರೆ.

ಪರಿಹಾರದಲ್ಲಿ ಇಂತಿಷ್ಟು ಪರ್ಸೆಂಟೇಜ್ ವಕೀಲರಿಗೆ. ಒಮ್ಮೆ ಹೀಗಾಗಿತ್ತು - ಮ್ಯಾಕ್ ಡೊನಾಲ್ಡ ನಲ್ಲಿ ಕಾಫಿ ಪಡೆದ ಅಜ್ಜಿಯೊಬ್ಬಳು ಬಿಸಿ ಕಾಫಿಯನ್ನು ತೊಡೆಯ ಮೇಲೆ ತಾನೇ ಚೆಲ್ಲಿ ಸುಟ್ಟು ಕೊಂಡಿದ್ದಳು. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತು. ಅಜ್ಜಿ ಪರಿಹಾರ ಕೇಳಿದ್ದಳು! ಪ್ರಕರಣ ಏನೇನೋ ಆಯಿತು - ಆಮೇಲೆ ಕೊನೆಯಲ್ಲಿ ಜ್ಯೂರಿಗಳು ಮ್ಯಾಕ್ ಡೊನಾಲ್ಡ್‌ ದೇ ತಪ್ಪು ಎಂದು ತೀರ್ಪುಕೊಟ್ಟರು. ‌

ಮ್ಯಾಕ್ ಡೊನಾಲ್ಡ್ ಅಜ್ಜಿ ಕಾಫಿಯನ್ನು ಚೆಲ್ಲದಂತೆ ಏನು ಬೇಕೋ ವ್ಯವಸ್ಥೆ ಮಾಡಬೇಕಿತ್ತು. ಇದು ಕಂಪನಿಯ ನಿರ್ಲಕ್ಷ್ಯ ಎಂದು ತೀರ್ಪಾಗಿತ್ತು. ಅಷ್ಟೇ ಅಲ್ಲ, ಮ್ಯಾಕ್ ಡೊನಾಲ್ಡ್ 50 ಕೋಟಿ ರೂಪಾಯಿಯಷ್ಟು ಪರಿಹಾರ ಕೊಡಬೇಕಾಯಿತು. ಇನ್ನೊಂದು ಮೊಕದ್ದಮೆ - ಜಾನ್ಸನ್ ಅಂಡ್ ಜಾನ್ಸನ್ ಮಗುವಿನ ಪೌಡರ್ ನಲ್ಲಿ ಕ್ಯಾನ್ಸರ್ ಕಾರಕ ವಸ್ತುಗಳಿದೆ ಎಂದು. ಇದರಲ್ಲಿಯೂ ಜ್ಯೂರಿ ಗಳು ಯಥೇಚ್ಛ - ಬಿಲಿಯನ್ ಡಾಲರ್ ಗಟ್ಟಲೆ - ಸಾವಿರಾರು ಕೋಟಿ ದಂಡ ವಿಧಿಸಿದವು.

ಜ್ಯೂರಿ ವ್ಯವಸ್ಥೆಯಲ್ಲಿ ಅದರದೇ ಆದ ಹುಳುಕುಗಳಿವೆ. ಸಾಕಷ್ಟು ಅಪಸವ್ಯಗಳಿರಬಹುದು. ಆದರೆ ಅದೆಲ್ಲವನ್ನೂ ಮೀರುವ ಒಂದೇ ಒಂದು ಗುಣವೆಂದರೆ ಅಪರಾಧ ನಿರ್ಣಯವನ್ನು ಮಾಡುವವನು ಜನಸಾಮಾನ್ಯ ಮತ್ತು ಸ್ಥಳೀಯ. ಈ ಕಾರಣಕ್ಕೆ ಜ್ಯೂರಿ ವ್ಯವಸ್ಥೆಯನ್ನು ನಿಭಾಯಿಸುವುದು ಸುಲಭವಲ್ಲ.

ಇಂದಿನ ಕಾಲದಲ್ಲಿ ಒಬ್ಬೊಬ್ಬರು ಒಂದೊಂದು ನಿಲುವು ತೆಗೆದುಕೊಳ್ಳಬಹುದು, ಸುಳ್ಳು ಸುದ್ದಿ - ಮಾಧ್ಯಮ ಪ್ರಭಾವಕ್ಕೊಳಗಾಗಬಹುದು . ಯಾರು ಯಾವ ಚಾನೆಲ್ ನೋಡುತ್ತಾರೆ ಎನ್ನುವುದರ ಮೇಲೆ ನಿರೂಪಣೆಗಳು ನಿರ್ಧಾರವಾಗುವ ಈ ಕಾಲದಲ್ಲಿ ಜ್ಯೂರಿ ವ್ಯವಸ್ಥೆಯ ನೈರ್ಮಲ್ಯವನ್ನು ಕಾಪಾಡಿಕೊಳ್ಳುವಲ್ಲಿ ಅದರದೇ ಆದ ಸವಾಲುಗಳಿವೆ. ಆದರೆ ಅಮೆರಿಕಾ ಅದನ್ನು ಬಹಳ ಅಚ್ಚು ಕಟ್ಟಾಗಿಯೇ ನಡೆಸಿಕೊಂಡು ಬಂದಿದೆ.

ಸುಮ್ಮನೆ ಒಮ್ಮೆ ಯೋಚಿಸಿ - ಒಂದೊಮ್ಮೆ ನಟ ದರ್ಶನ್, ಪ್ರಜ್ವಲ್ ರೇವಣ್ಣ ಮೊದಲಾದ ಕೇಸ್ ಗಳಲ್ಲಿ ಸ್ಥಳೀಯರೇ ನ್ಯಾಯ ಕೊಡುವ ಜ್ಯೂರಿ ಪದ್ಧತಿ ನಮ್ಮನಾದರೂ ಇದ್ದಿದ್ದರೆ ವಿಚಾರಣೆ ಸ್ಥಿತಿ ಹೇಗಿರಬಹುದಿತ್ತು ??!!