Naveen Sagar Column: ಮುಖ ನೋಡಿ ಮೊಳ ಹಾಕಬೇಡ ಗುಣನೋಡಿ ಅಳೆಯಮ್ಮ !
ಮೊದಲೇ ರೂಪದ ವಿಚಾರಕ್ಕೆ ಟ್ರೋಲ್ ಮತ್ತು ಅಪಹಾಸ್ಯಕ್ಕೆ ಒಳಗಾಗ್ತಾ ಇದ್ದ ಷಣ್ಮುಖ, ಈಗ ರಾಜ್ ಕುಮಾರ್ ಅವರ ಹೆಸರನ್ನು ಸೇರಿಸಿಕೊಳ್ತಾ ಇದ್ದ ಹಾಗೇ, ರಾಜ್ ಕುಟುಂಬದಿಂದ ಬರ್ತಾ ಇರೋ ನಟ ಎಂಬ ಪ್ರಚಾರ ಶುರುವಾಗ್ತಾ ಇದ್ದ ಹಾಗೆ ಸೋಷಿಯಲ್ ಮೀಡಿಯಾ ಪ್ರಜೆಗಳ ಕೈ ಬೆರಳುಗಳು ಯದ್ವಾತದ್ವ ಸಡಿಲಗೊಂಡುಬಿಟ್ಟವು. ಷಣ್ಮುಖ ರಾಜ್‌ಕುಮಾರ್‌ನ ಫೋಟೋ ಇರೋ ಪ್ರತಿ ಪೋಸ್ಟಿನಲ್ಲೂ ಟಾಕ್ಸಿಕ್ ಕಮೆಂಟ್‌ಗಳ ಪ್ರವಾಹ.


ಪದಸಾಗರ
ಒಂದೆರಡು ವಾರಗಳ ಹಿಂದೆ ‘ನಿಂಬಿಯಾ ಬನಾದ ಮ್ಯಾಗೆ’ ಎಂಬ ಸಿನಿಮಾ ಬಿಡುಗಡೆ ಆಯ್ತು. ಸಿನಿಮಾದ ಮುಖ್ಯ ಪಾತ್ರಧಾರಿಯ ಹೆಸರು ಷಣ್ಮುಖ. ಸುಮಾರು ಎರಡು ವರ್ಷಗಳ ಹಿಂದೆ ಅನೌ ಆದ ಸಿನಿಮಾ ಇದು. ಆದರೆ ಆಗ ಯಾರ ಗಮನಕ್ಕೂ ಅಷ್ಟಾಗಿ ಬಂದಿರಲಿಲ್ಲ. ಬಿಡುಗಡೆ ಪೂರ್ವ ದಲ್ಲಿ ಸಿನಿಮಾ ಪ್ರಚಾರ ಶುರುವಾಗ್ತಾ ಇದ್ದ ಹಾಗೇ ಸಾಮಾಜಿಕ ಜಾಲತಾಣಗಳಲ್ಲಿ ನಾಯಕ ಪಾತ್ರಧಾರಿ ಷಣ್ಮುಖನ ಫೋಟೋಗಳು, ಸಿನಿಮಾ ಸ್ಟಿಲ್‌ಗಳು ಹರಿದಾಡತೊಡಗಿದವು.
ಈ ಷಣ್ಮುಖ ಯಾರು ಅಂದ್ರೆ ರಾಜ್‌ಕುಮಾರ್ ಕುಟುಂಬದ ಸದಸ್ಯ. ಪಾರ್ವತಮ್ಮನವರ ಸೋದರ ಗೋವಿಂದರಾಜ್ ಅವರ ಪುತ್ರ. ಸಿನಿಮಾ ರಂಗಕ್ಕೆ ಧುಮುಕುವಾಗ ಹೆಸರು ಬದಲಿಸಿಕೊಳ್ಳೋದು ಅಥವಾ ಐಡೆಂಟಿಟಿಗಾಗಿ ತಮ್ಮ ಕುಟುಂಬದ ಖ್ಯಾತನಾಮರ ಹೆಸರನ್ನು ಜೋಡಿಸಿಕೊಳ್ಳೋದು ಹೊಸ ವಿಚಾರ ಏನಲ್ಲ. ಷಣ್ಮುಖ ಎಂಬ ನವನಟ ಹೆಸರಿನ ಮುಂದೆ ರಾಜ್‌ಕುಮಾರ್ ಅವರ ಹೆಸರನ್ನು ಸೇರಿಸಿಕೊಂಡು ಬಂದ್ರು.
ಮೊದಲೇ ರೂಪದ ವಿಚಾರಕ್ಕೆ ಟ್ರೋಲ್ ಮತ್ತು ಅಪಹಾಸ್ಯಕ್ಕೆ ಒಳಗಾಗ್ತಾ ಇದ್ದ ಷಣ್ಮುಖ, ಈಗ ರಾಜ್‌ಕುಮಾರ್ ಅವರ ಹೆಸರನ್ನು ಸೇರಿಸಿಕೊಳ್ತಾ ಇದ್ದ ಹಾಗೇ, ರಾಜ್ ಕುಟುಂಬದಿಂದ ಬರ್ತಾ ಇರೋ ನಟ ಎಂಬ ಪ್ರಚಾರ ಶುರುವಾಗ್ತಾ ಇದ್ದ ಹಾಗೆ ಸೋಷಿಯಲ್ ಮೀಡಿಯಾ ಪ್ರಜೆಗಳ ಕೈ ಬೆರಳುಗಳು ಯದ್ವಾತದ್ವ ಸಡಿಲಗೊಂಡುಬಿಟ್ಟವು. ಷಣ್ಮುಖ ರಾಜ್‌ಕುಮಾರ್‌ನ ಫೋಟೋ ಇರೋ ಪ್ರತಿ ಪೋಸ್ಟಿನಲ್ಲೂ ಟಾಕ್ಸಿಕ್ ಕಮೆಂಟ್‌ಗಳ ಪ್ರವಾಹ.
ಇದನ್ನೂ ಓದಿ: Naveen Sagar Column: ಅಂತಿಮ ನಿಲ್ದಾಣದಲ್ಲಿ ಕ್ಯಾಪ್ಟನ್ ಕೂಲ್ ಧೋನಿಗೆ ಅಗ್ನಿಪರೀಕ್ಷೆ !
ಎಲ್ಲವೂ ಆತನ ಮುಖಚರ್ಯೆಯನ್ನು, ರೂಪವನ್ನು ಹೀಯಾಳಿಸೋ ಕಮೆಂಟುಗಳೇ. ಜತೆಗೆ ರಾಜ್ ಕುಮಾರ್ ಕುಟುಂಬದ ಹೆಸರು ಬಳಸಿಕೊಂಡು ಸಿನಿಮಾ ಹೀರೋ ಆಗಿರೋ ಬಗ್ಗೆ ತಕರಾರು ಮತ್ತು ಅಪಹಾಸ್ಯ. ಹೌದು ಷಣ್ಮುಖ ರೂಪಿನಲ್ಲಿ ನಿಜಕ್ಕೂ ಟಿಪಿಕಲ್ ಹೀರೋ ಮೆಟೀರಿಯಲ್ ಅಲ್ಲ. ಸಿನಿಮಾ ರಂಗ ಹೀರೋ ಅಂದರೆ ಹೀಗೇ ಇರಬೇಕು ಅಂತ ಪ್ರೇಕ್ಷಕರಿಗೊಂದು ಮನಸ್ಥಿತಿ ಫಿಕ್ಸ್ ಮಾಡಿಬಿಟ್ಟಿದೆ.
ಹೀರೋಗೊಂದು ಲುಕ್ಕಿನ ಕುರಿತ ಪ್ಯಾರಾ ಮೀಟರ್ ಸಿದ್ಧಪಡಿಸಿಟ್ಟು ಬಿಟ್ಟಿದೆ. ಒಬ್ಬ ಹೀರೋ ಆಗಿ ಪ್ರವೇಶ ಮಾಡ್ತಾ ಇದಾನೆ ಅಂದ್ರೆ ಅಭಿನಯ, ಸಿನಿಮಾದಲ್ಲಿ ತನ್ನ ಪಾತ್ರಕ್ಕೆ ಆತ ನೀಡೋ ನ್ಯಾಯ ಇದೆಲ್ಲದಕ್ಕೂ ಮುನ್ನ ಪೇಕ್ಷಕರಿಗೆ ಆತ ಪರಿಚಯ ಆಗೋದು ಮುಖ ಮತ್ತು ದೇಹದ ಮೂಲಕ ಮಾತ್ರ. ಹೀಗಾಗಿ ನಾಯಕನ ಲುಕ್ಸ್ ಬಗ್ಗೆ ವಿಮರ್ಶೆಗಳು ಪ್ರಾರಂಭವಾಗುತ್ತವೆ.
ಅದೇ ಸಿನಿಮವನ್ನು ನೋಡಬೇಕೋ ನೋಡಬಾರದೋ ಅನ್ನೋ ನಿರ್ಧಾರಕ್ಕೂ ಬಹಳಷ್ಟು ಬಾರಿ ಕಾರಣ ಆಗಿ ಬಿಡುತ್ತದೆ. ಷಣ್ಮುಖ ತನ್ನ ದೇಹವನ್ನು ಕಟ್ಟುಮಸ್ತಾಗಿ ಹುರಿಗೊಳಿಸಿಕೊಂಡು ಬಂದಿಲ್ಲ. ಆತ ನೋಡೋಕೆ ಮಿನಿಮಮ್ ಸ್ಪುರದ್ರೂಪಿಯೂ ಅಲ್ಲ. ಮುಖದಲ್ಲಿ ಮೂಗು ಡಾಮಿನೆಂಟಾಗಿ ಕಾಣುತ್ತದೆ. ಬಾಯಿಯ ಭಾಗ ಒಂಚೂರು ಓರೆಕೋರೆ ಹೊಂದಿರುವಂತೆ ಇದೆ.
ಇದರಿಂದಾಗಿ ಆತ ಗಡ್ಡಬಿಟ್ಟರೂ, ಯಾವ ರೀತಿ ಮರೆ ಮಾಚ ಹೊರಟರೂ ಅದು ಸಾಧ್ಯ ಆಗೋ ದಿಲ್ಲ. ಷಣ್ಮುಖ ಹೀರೋ ಆಗೋದಕ್ಕೆ ಲಾಯಕ್ಕು ಅಂತ ಪ್ರೇಕ್ಷಕರಿಗೆ ಅನಿಸುವುದಿಲ್ಲ. ಆದರೆ ಕೇವಲ ರೂಪದ ವಿಷಯಕ್ಕೆ ಅಷ್ಟೊಂದು ಟಾಕ್ಸಿಕ್ ಕಮೆಂಟುಗಳಿಗೆ ಷಣ್ಮುಖ ಗುರಿಯಾಗಬೇಕಾ? ಇದು ಪ್ರಶ್ನೆ. ರಾಜ್ ಕುಟುಂಬದಿಂದ ಬಂದ ಮಾತ್ರಕ್ಕೆ ರಾಜ್ ಅವರಷ್ಟೇ ಸುಂದರವಾಗಿ ಇರಬೇಕಾ? ಅವರಷ್ಟು ಸುಂದರವಾಗಿಲ್ಲದೇ ಹೋದರೆ ಸಿನಿಮಾ ನಾಯಕನಾಗಬಾರದಾ? ಅಥವಾ ಷಣ್ಮುಖ ಒಂದುವೇಳೆ ರಾಜ್ ಕುಟುಂಬಕ್ಕೆ ಸೇರಿಲ್ಲದವನಾಗಿದ್ರೆ ಸಮಾಜ ಸ್ವಲ್ಪ ಮೃದುವಾಗಿ ವರ್ತಿಸಿ ಬಿಡುತ್ತಿತ್ತಾ? ಷಣ್ಮುಖ ನಟನೆಗೆ ಧುಮುಕುವ ಮುನ್ನ ತನ್ನ ರೂಪದ ಬಗ್ಗೆ ಸ್ವವಿಮರ್ಶೆ ಮಾಡಿ ಕೊಂಡಿರೋದಿಲ್ವಾ? ತನ್ನ ನ್ಯೂನತೆಗಳ ಬಗ್ಗೆ ಆತನಿಗೆ ಅರಿವಿರೋದಿಲ್ವಾ? ಖಂಡಿತ ಅರಿವಿರುತ್ತದೆ.
ಆದರೂ ಆತ ನಟನಾಗುವ, ನಾಯಕನನಟನಾಗುವ ಧೈರ್ಯ ಮಾಡಿದ್ದಾನೆ ಅಂದರೆ, ಆತನಲ್ಲಿ ನಟಿಸುವ ಬಲವಾದ ಆಸೆ ಇದ್ದಿರಬಹುದು. ಕಥೆಗೆ ನಿಮ್ಮ ಲುಕ್ಸ್ ಮ್ಯಾಟರ್ ಆಗಲ್ಲ ಅಂತ ಹೇಳಿ ಒಪ್ಪಿಸಿರಬಹುದು. ನಿರ್ಮಾಪಕನಿಗೆ, ‘ರಾಜ್ ಕುಟುಂಬದ ನಟನನ್ನು ಹೀರೋ ಮಾಡಿ ಕುಟುಂಬದ ಹೆಸರು ಎನ್‌ಕ್ಯಾಶ್ ಮಾಡಿಕೊಂಡು ಗೆಲ್ಲಬಹುದು’ ಎಂಬ ಆಲೋಚನೆ ಇದ್ದಿರಬಹುದು.
ಆ ಸಿನಿಮಾದ ಪಾತ್ರ ಇಂಥದ್ದೇ ಲುಕ್ಕನ್ನು ಬೇಡುತ್ತಿರಬಹುದು. ಹೀಗೆ ಹಲವಾರು ಆಯಾಮ ಗಳಿರಬಹುದು. ಆದರೆ ಸಿನಿಮಾ ನೋಡೋಕೂ ಮುನ್ನವೇ ಷಣ್ಮುಖನನ್ನು ಇನ್ನಿಲ್ಲದಷ್ಟು ಕಟು ವಾಗಿ ಹೀಯಾಳಿಸಿ ಟ್ರೋಲ್ ಮಾಡುವುದು ಎಷ್ಟು ಸರಿ? ಸಿನಿಮಾಗೆ ಎಂಟರ್ ಆಗೋದು ಅಂದ್ರೆ ಸಾರ್ವಜನಿಕರಿಗೆ ತೆರೆದುಕೊಂಡಂತೆಯೇ. ಹೀಗಾಗಿ ಹೊಗಳಿಕೆ ತೆಗಳಿಕೆ ಇವೆಲ್ಲವನ್ನೂ ಎದುರಿಸೋ ದಕ್ಕೆ ಸಿದ್ಧವಾಗಲೇಬೇಕು. ಅದಕ್ಕೆ ಷಣ್ಮುಖನೂ ಹೊರತಲ್ಲ. ಆದರೆ ವೈಯಕ್ತಿಕ ಮಟ್ಟದಲ್ಲಿ ಅಂಥ ಹೀಯಾಳಿಕೆಗಳು ಬಂದಾಗ ಎದುರಿಸೋದು ಸುಲಭವಲ್ಲ.
ಈ ಘಟನಾವಳಿಯ ಸುತ್ತ ಮನಸ್ಸು ಗಿರಕಿ ಹೊಡೆಯುತ್ತಿತ್ತು. ಅದೇ ಹೊತ್ತಲ್ಲಿ ರಾಜ್‌ಕುಮಾರ್ ಅವರು ಚಿತ್ರರಂಗಕ್ಕೆ ಪ್ರವೇಶ ಮಾಡಿದಾಗ ಬಂದ ಪತ್ರಿಕಾ ವರದಿಯ ತುಣುಕೊಂದು ವಾಟ್ಸಾಪಲ್ಲಿ ಬಂತು. ವರದಿಯ ಜತೆ ರಾಜ್ ಕುಮಾರ್ ಫೋಟೋ ಕೂಡ ಇತ್ತು. ರಾಜ್‌ಕುಮಾರನಂಥ ರಾಜ್ ಕುಮಾರ್ ಚಿತ್ರರಂಗ ಪ್ರವೇಶಿಸಿದಾಗ ಹೇಗಿದ್ದರು? ಉಹೂಂ. ಅವತ್ತಿಗೆ ರಾಜ್‌ಕುಮಾರ್ ಯಾವ ಕೋನದಿಂದಲೂ ಸ್ಪುರದ್ರೂಪಿ ಅಲ್ಲ.
ಬೇಡರ ಕಣ್ಣಪ್ಪನೇ ಆಗಲಿ, ಅವರ ಪ್ರಾರಂಭದ ದಿನಗಳ ಹಲವಾರು ಚಿತ್ರಗಳೇ ಆಗಲಿ ರಾಜ್ ಕುಮಾರ್ ಹೀರೋ ಥರ ಕಾಣುತ್ತಲೇ ಇರಲಿಲ್ಲ. ರಾಜ್ ಅವರನ್ನು ಚಿತ್ರರಂಗ ಒಪ್ಪಿಕೊಂಡದ್ದು ಹೇಗೆ? ಅಭಿನಯದ ತಾಕತ್ತು, ಪಾತ್ರ ನಿಭಾಯಿಸುವ ಪರಿ ಇವುಗಳ ಆಧಾರದ ಮೇಲೆ. ಆ ನಂತರ ರಾಜ್‌ಕುಮಾರ್ ಮುಖ ಕೂಡ ದಿನದಿಂದ ದಿನಕ್ಕೆ ಕಳೆಗಟ್ಟುತ್ತಾ ಹೋಯ್ತು.
ಚಿತ್ರದಿಂದ ಚಿತ್ರಕ್ಕೆ ರಾಜ್ ಕುಮಾರ್ ಅವರ ಚಾರ್ಮ್ ಹೆಚ್ಚುತ್ತಾ ಹೋಯ್ತು. ಅವರ ರೂಪಿನ ಜತೆ ನಟನಾಸಾಮರ್ಥ್ಯ, ಪಾತ್ರಗಳ ಆಯ್ಕೆ, ಕಥೆ, ಎಲ್ಲವೂ ಸೇರಿ ರಾಜ್‌ಕುಮಾರರನ್ನು ಇನ್ನಷ್ಟು ಮತ್ತಷ್ಟು ಚೆಂದವಾಗಿಸಿದವು. ಸೂಕ್ತ ಮೇಕಪ್, ಮೈಕಟ್ಟು ಹೊಂದುವ ಮೂಲಕ ರಾಜ್ ಎಂಥ ಪಾತ್ರಕ್ಕೂ ತಮ್ಮನ್ನು ಮೌಲ್ಡ ಮಾಡಿಕೊಂಡು ಬಿಡುತ್ತಿದ್ದರು. ಅಲ್ಲಿಂದ ಮುಂದೆ ಅಭಿನಯದಲ್ಲಿ ಪರಕಾಯ ಪ್ರವೇಶ ಮಾಡೋ ಮೂಲಕ ಗೆದ್ದುಬಿಡುತ್ತಿದ್ದರು.
ಕಾಳಿದಾಸ, ಕುರಿಕಾಯೋ ಕುರುಬ, ಲೆಕ್ಚರರ್, ಕಳ್ಳ, ಬೆಸ್ತ, ಪೊಲೀಸ್, ಲಾಯರ್, ರಾಘವೇಂದ್ರ ಸ್ವಾಮಿ, ಕನಕದಾಸ, ಹಿರಣ್ಯಕಶಿಪು, ಹೀಗೆ ಎಂಥ ಪಾತ್ರವಾದರೂ ಅವೆಲ್ಲವೂ ರಾಜ್‌ಕುಮಾರ್ ಮಾತ್ರವೇ ಮಾಡಬಲ್ಲ ಪಾತ್ರಗಳಾಗಿಬಿಡುತ್ತಿದ್ದವು. ಇವತ್ತಿಗೂ ನಮಗೆ ಕಾಳಿದಾಸ, ಕೃಷ್ಣ ದೇವರಾಯ, ರಣಧೀರ ಕಂಠೀರವ ಯಾವುದೇ ಹೆಸರು ಕೇಳಿದರೂ ಕಣ್ಮುಂದೆ ಬರೋದು ರಾಜ್‌ಕುಮಾರ್ ಮುಖವೇ.
ಆದರೆ ರಾಜ್ ಪದಾರ್ಪಣೆಯ ದಿನ ಪತ್ರಿಕೆಯಲ್ಲಿ ಕಂಡ ಫೋಟೋ ನೋಡಿ ರಾಜ್‌ಕುಮಾರ್ ಅವರನ್ನು ನಿಂದಿಸಿ ಹೀಯಾಳಿಸಿ ರೈಟಾಫ್ ಮಾಡಿಬಿಟ್ಟಿದ್ದರೆ? ಅಫ್ ಕೋರ್ಸ್ ಅವತ್ತು ಸೋಷಿಯಲ್ ಮೀಡಿಯಾ ಇರಲಿಲ್ಲ. ಆದರೆ ಇದ್ದ ಮೀಡಿಯಾಗಳೇ ಸಾಕಿತ್ತು. ಯಾರಿಗೆ ಗೊತ್ತು, ಅವತ್ತು ಸಹ ರಾಜ್ ಅವರನ್ನು ನೋಡಿ ಇಂಥ ಕಮೆಂಟುಗಳು ಬಂದಿದ್ದಿರಬಹುದು.
ಇದು ಒಮ್ಮೆ ಹಿಂತಿರುಗಿ ನೋಡಿದರೆ ಸರ್ವೇಸಾಮಾನ್ಯ. ಅಮಿತಾಭ್‌ನಂಥ ಬಚ್ಚನ್‌ನ ಧ್ವನಿಯನ್ನೇ ಅದ್ಯಾವುದೋ ಪ್ರಖ್ಯಾತ ರೇಡಿಯೋ ಸ್ಟೇಷನ್ ರಿಜೆಕ್ಟ್ ಮಾಡಿತ್ತಂತೆ. ಹೈಟ್ ಕಾರಣಕ್ಕೆ ಅಮಿತಾಭ್ ಇನ್ನಿಲ್ಲದ ನಿಂದನೆಗೆ ಒಳಗಾಗಿದ್ದ. ಕನ್ನಡ ಚಿತ್ರರಂಗದ ಲವಲವಿಕೆಯ ನಟ ಗೋಲ್ಡನ್ ಸ್ಟಾರ್ ಖ್ಯಾತಿಯ ಗಣೇಶ್ ಹೀರೋ ಆಗೋದು ಅನೌನ್ಸ್ ಆದಾಗ ನೇಪಾಳಿ ಥರ ಇದಾನೆ ಅಂತ ಜನ ಮಾತಾಡಿಕೊಂಡಿದ್ರು, ಗಾಸಿಪ್ ಹುಟ್ಟು ಹಾಕಿದ್ರು. ದುನಿಯಾ ವಿಜಯ್ ಹೀರೋ ಅಂತ ಘೋಷಣೆ ಆದಾಗ, ಇವ್ರೆಲ್ಲ ಹೀರೋನಾ ಈ ಕಣ್ಣಲ್ಲಿ ಇನ್ನೇನೇನು ನೋಡಬೇಕಪ್ಪಾ ಅಂತ ರಾಗ ಎಳೆದಿದ್ರು.
ಜಗ್ಗೇಶ್ ಹೀರೋ ಆಗೋಕೆ ಹೊರಟಾಗ ಇಂಡಸ್ಟ್ರಿ ಸಲೀಸಾಗಿ ಒಪ್ಪಿಕೊಂಡಿರಲಿಲ್ಲ. ರಘುವೀರ್ ನಾಯಕನಾದಾಗ ಜನ ನಕ್ಕಿದ್ದರು. ಕಾಶೀನಾಥ್ ಹೀರೋ ಆಗೋಕೆ ಬಂದಾಗ ಏನೆಲ್ಲ ಮಾತು ಕೇಳಿಸಿಕೊಂಡಿರಬಹುದು? ತೀರಾ ಇತ್ತೀಚೆಗೆ, ರಾಜ್ ಬಿ.ಶೆಟ್ಟಿಯ ಮೊದಲ ಚಿತ್ರ ಬಿಡುಗಡೆಗೂ ಮುನ್ನ ಹಲವಾರು ಮಂದಿ ನೆಗೆಟಿವ್ ಮಾತನಾಡಿರಬಹುದು.
ಆದರೆ ನಂತರ ಆದದ್ದೇನು? ಕಾಶೀನಾಥ್ ಗೆದ್ದದ್ದು ತಮಗೊಪ್ಪುವಂಥ ಪಾತ್ರಗಳಿಗೆ ನಾಯಕನಾಗಿ ಅಂಥ ಕಥೆಯನ್ನೇ ಆಯ್ಕೆ ಮಾಡಿಕೊಳ್ಳೋ ಮೂಲಕ. ರಾಜ್ ಶೆಟ್ಟಿ ಕೂಡ ಕಥೆಯನ್ನು ನಾಯಕ ನನ್ನಾಗಿ ಮಾಡಿ ತಾವು ಕೇವಲ ಪಾತ್ರವಾಗೋ ಮೂಲಕ ಗೆದ್ದರು. ದರ್ಶನ್ ಸಿನಿಮಾರಂಗಕ್ಕೆ ಕಾಲಿಟ್ಟಾಗ ಆಕರ್ಷಕವಾಗಿರಲಿಲ್ಲ.
ಗಣೇಶ್ ಕಿರುತೆರೆಯಲ್ಲಿ ಖ್ಯಾತರಾಗಿದ್ದರೂ, ಹಾಸ್ಯನಟ ಆಗಬಹುದೇ ಹೊರತು ನಾಯಕನಾಗೋ ಮುಖ ಅಲ್ಲ ಅಂತ ಜನ ಭಾವಿಸಿದ್ದರು. ಆದರೆ ಗಣೇಶ್ ಅಂದ್ರೆ ಈಗ ಹೆಣ್ಮಕ್ಕಳ ಸಾಲೂ ಕ್ಯೂ ನಿಲ್ಲುತ್ತೆ. ತಾಯಂದಿರ ಫೇವರಿಟ್ ಮಗ ಅನಿಸುವಂತೆ ನಟನೆಯಿಂದ ಆಪ್ತನಾಗಿಬಿಟ್ಟರು ಗಣೇಶ್. ದುನಿಯಾ ವಿಜಿ ಕೂಡ ತಮ್ಮನ್ನು ಕರಿಯಾ ಅಂತ ಕರೆದುಕೊಂಡೇ ಸಶಕ್ತ ಪಾತ್ರಗಳಿಂದ ಅಭಿಮಾನಿ ಬಳಗ ಸೃಷ್ಟಿಸಿಕೊಂಡರು. ಜಗ್ಗೇಶ್ ಗೆದ್ದದ್ದು ಅಪ್ಪಟ ಪ್ರತಿಭೆಯಿಂದಲೇ ಹೊರತು ಅವರ ರೂಪ ದಿಂದಲ್ಲ.
ಅಕ್ಕಪಕ್ಕದ ಭಾಷೆಯಲ್ಲೂ ಇಂಥ ಸಾವಿರ ಉದಾಹರಣೆ ಸಿಗುತ್ತೆ. ಪ್ರತಿಭೆಯೊಂದಿದ್ದರೆ, ಅವಕಾಶ ಗಳು ಸಿಕ್ಕಿಬಿಟ್ಟರೆ, ಆರಂಭಿಕ ದಿನಗಳಲ್ಲಿ ಮ್ಯಾಟರ್ ಆಗುವ ಈ ಲುಕ್ ಎಂಬ ದೊಡ್ಡ ತೊಡಕು ಗೌಣವಾಗಿ ಹೋಗಿಬಿಡುತ್ತೆ. ಗೆಲುವುಗಳು ಕೊಡೋ ಆತ್ಮವಿಶ್ವಾಸ ಮುಖದ ಚಾರ್ಮ್ ಹೆಚ್ಚಿಸಿ ಸುಂದರವಾಗಿಸುತ್ತದೆ.
ನಟರಿಗೆ ತಾವು ಯಾವ ಆಂಗಲ್‌ಗಳಲ್ಲಿ ಚೆನ್ನಾಗಿ ಕಾಣ್ತೇವೆ ಅನ್ನೋದು, ತಮ್ಮ ವೀಕ್ನೆಸ್ ಮತ್ತು ಸ್ಟ್ರೆಂತ್‌ಗಳು ಅರ್ಥವಾಗಿ ಏನನ್ನು ಹೈಲೈಟ್ ಮಾಡಬೇಕು, ಏನನ್ನು ಮರೆಮಾಚಬೇಕು ಅನ್ನೋದನ್ನು ಪ್ಲಾನ್ ಮಾಡುತ್ತಾರೆ. ನಿರ್ದೇಶಕರೂ ಅವುಗಳನ್ನು ಆಧರಿಸಿ ಹೀರೋಗಳನ್ನು ತೋರಿಸುತ್ತಾರೆ. ಹೀಗಾಗಿ ಅಂದು ಚೆನ್ನಾಗಿಲ್ಲ ಅನಿಸಿದವರು ಇಂದು ಫೇವರಿಟ್ ಆಗಿಬಿಡ್ತಾರೆ. ಫ್ಯಾನ್‌ಗಳನ್ನು ಸೃಷ್ಟಿಸಿಕೊಳ್ತಾರೆ.
ಹೇಗಿದ್ದವರು ಹೇಗಾದ್ರಪ್ಪಾ ಅನಿಸುವಂತೆ ಆಗಿಬಿಡ್ತಾರೆ. ಇನ್ನು ಕೆಲವು ನಟರು ಎಷ್ಟೇ ಚೆನ್ನಾಗಿ ದ್ದರೂ ರೂಪ ಹೆಚ್ಚು ದಿನ ವರ್ಕ್ ಆಗೋದಿಲ್ಲ. ನಟನೆಯಲ್ಲಿ, ಸಿನಿಮಾಗಳ ಆಯ್ಕೆಯಲ್ಲಿ ಹಿಂದೆ ಬಿದ್ದು ನೇಪಥ್ಯಕ್ಕೆ ಸರಿಯುತ್ತಾರೆ. ಇಲ್ಲಿ ಷಣ್ಮುಖ ವಿಚಾರಕ್ಕೆ ಬಂದರೆ ಅತನಲ್ಲಿ ಪ್ರತಿಭೆ ಇದ್ದರೆ, ತನ್ನ ಲುಕ್ಸ್ ನ ಮೈನಸ್ ಪಾಯಿಂಟ್‌ಗಳನ್ನು ಮೀರಿ ಬೆಳೆಯಬ ಅನ್ನೋ ಆತ್ಮವಿಶ್ವಾಸ ವಿದ್ದರೆ, ಆತ ಅದ್ಬುತ ಕಥೆಗಳನ್ನು ಆಯ್ಕೆ ಮಾಡಿಕೊಂಡು ಪರಿಶ್ರಮ ಹಾಕಿ ಸಿನಿಮಾ ಮಾಡಿದರೆ ಮುಂದೊಂದು ದಿನ ಆತನ ಸಿನಿಮಾಗಳಿಗೆ ಜನ ಕಾಯುವಂತಾದರೂ ಆಗಬಹುದು. ಯಾರಿಗ್ಗೊತ್ತು? ಮಲಯಾಳಂನ ಬಾಸಿಲ್ ಜೋಸಿಫ್ ಬಹಳ ಸೀದಾಸಾದಾ ಕಾಣೋ ಮುಖ. ಅವನನ್ನು ಗೆಲ್ಲಿಸ್ತಾ ಇರೋದು ಸ್ಕ್ರಿಗಳು. ಅವನು ಇಷ್ಟ ಆಗಿರೋದು ಸಿನಿಮಾಗಳಿಂದ. ಧನುಷ್ ಗೆದ್ದದ್ದು ಹೇಗೆ? ಎಷ್ಟೋ ಎಕ್ಸಾಂಪಲ್ಸ ಇವೆ. ಗಟ್ಟಿಯಾದದ್ದು ಉಳಿಯುತ್ತದೆ. ಜೊಳ್ಳು ಹಾರಿಹೋಗುತ್ತದೆ. ಇಲ್ಲಿ ರಾಜ್ ಕುಟುಂಬದಿಂದ ಬಂದವರೆಲ್ಲ ಗೆದೇ ಆಗಿದ್ರೆ ರಾಘವೇಂದ್ರ ರಾಜ್‌ಕುಮಾರ್ ಕೂಡ ಪುನೀತ್ ಮತ್ತು ಶಿವರಾಜ್‌ಕುಮಾರ್ ಅವರಷ್ಟೇ ದೊಡ್ಡ ಸ್ಟಾರ್ ಆಗುತ್ತಿದ್ದರು. ವಿನಯ್ ರಾಜ್‌ಕುಮಾರ್ ಇಷ್ಟು ಸ್ಟ್ರಗಲ್ ಮಾಡಬೇಕಿರಲಿಲ್ಲ. ಕುಟುಂಬದ ಲೆಗೆಸಿ ಎಷ್ಟು ವರವೋ ಅಷ್ಟೇ ಶಾಪ ಕೂಡ ಅಂತ ಹೊರಗಿನವರಿಗೆ ಗೊತ್ತಾಗೋದಿಲ್ಲ. ನಾವು ಹೀರೋ ಅಂದ್ರೆ ವಾಯ್ಸ ಹೀಗೆಯೇ ಇರಬೇಕು, ಎತ್ತರ ಇಷ್ಟಿರಬೇಕು, ಹೀಗೆಯೇ ಮಾತಾಡಬೇಕು ಎಂಬ ಫಾರ್ಮುಲಾಗೆ ಯಾಕೆ ಫಿಕ್ಸಾಗಬೇಕು? ಕಥೆಯಲ್ಲಿ ಆತನ ಪಾತ್ರಕ್ಕೆ ಒಗ್ಗಿದರೆ ಸಾಕಲ್ಲವಾ? ಎಲ್ಲರೂ ರಾಜ್‌ಕುಮಾರ್ ಥರಾನೇ ಇದ್ದಿದ್ರೆ ಸಿನಿಮಾರಂಗ ನೀರಸವಾಗಿರ್ತಾ ಇರಲಿಲ್ವಾ? ಅಂಬರೀಶ್, ಪ್ರಭಾಕರ್, ಶಂಕರ್‌ನಾಗ್, ಅನಂತ್ ನಾಗ್, ಶ್ರೀನಾಥ್, ಲೋಕೇಶ್, ವಿಷ್ಣುವರ್ಧನ್, ಕಾಶೀನಾಥ್, ದರ್ಶನ್, ಸುದೀಪ್, ವಿಜಯ, ಗಣೇಶ್, ರಮೇಶ್, ರಾಜ್, ರಿಷಭ್, ರಕ್ಷಿತ್ ಹೀಗೆ ಒಂದೊಂದು ಹೈಟಿನ, ಧ್ವನಿಯ, ಹಾವಭಾವದ ವೆರೈಟಿಗಳಿದ್ದಾಗ್ಲೇ ಅಲ್ವಾ ಸೊಗಸು? ಈ ಮಾತನ್ನು ಯಾಕೆ ಹೇಳ್ತಿದೀನಿ ಅಂದ್ರೆ.. ಚಿತ್ರರಂಗಕ್ಕೂ ಕೃತಕ ಬುದ್ಧಿಮತ್ತೆ (ಎಐ) ಕಾಲಿಟ್ಟಿದೆ.
ಹೀರೋ ಹೀರೋಯಿನ್‌ಗಳನ್ನು ಕೃತಕ ಬುದ್ಧಿಮತ್ತೆ ಮೂಲಕ ಸೃಷ್ಟಿಸಲಾಗ್ತಾ ಇದೆ. ಗಣೇಶ ಹಬ್ಬದಲ್ಲಿ ಆರ್ಡರ್ ಕೊಟ್ಟು ತರುವ ಗಣೇಶ ಮೂರ್ತಿಗಳಂತೆ ಹೀರೋಗಳನ್ನು ಕಂಪ್ಯೂಟರ್‌ನಲ್ಲಿ ಸೃಷ್ಟಿಸಲಾಗುತ್ತೆ. ನಾಯಕ ಅಂದ್ರೆ ಒಂದು ಸ್ಪುರದ್ರೂಪಿ ಅಚ್ಚು ಸಿದ್ಧವಾಗತ್ತೆ. ನಾಯಕಿ ಕೂಡ. ನ್ಯೂನತೆಗೆ ಚಾನ್ಸೇ ಇಲ್ಲ.
ನಾವೇ ಖುದ್ದು ನ್ಯೂನತೆ ಸೃಷ್ಟಿಸಬೇಕು ಅಷ್ಟೇ. ಇಲ್ಲವಾದಲ್ಲಿ ಎಲ್ಲ ಹೀರೋಗಳೂ ಒಂದೇ ಥರ ಎತ್ತರ ಹ್ಯಾಂಡ್ಸಮ. ಬೇಸ್ ವಾಯ್ಸ್. ಸ್ಪಷ್ಟ ಮಾತು. ರೊಬೋಟಿಕ್ ನಟನೆ! ಅಲ್ಲಿ ಕಾಶೀನಾಥ್ ದೇಹದ ಹೀರೋ ಇರಲ್ಲ. ಶಿವರಾಜ್‌ಕುಮಾರ್ ಥರದ ವಾಯ್ಸ ಇರಲ್ಲ. ಎಲ್ಲವೂ ಪರ್ಫೆಕ್ಟ್ ಫಾರ್ಮುಲಾದಲ್ಲಿ ರೆಡಿ ಆದ ಸರಕು! ಬೇಕಾ? ಸಹಜವಾದದ್ದನ್ನು ಟೀಕಿಸುತ್ತಾ ನಾವು ಏನನ್ನು ಕಳ್ಕೋತಾ ಇದೀವಿ ಅಂತ ಅರ್ಥ ಮಾಡ್ಕೊಳೋದಕ್ಕೆ ಇದು ಸಕಾಲ.