ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Ranjith H Ashwath Column: ಕೊನೆಗೂ ಸದನದಲ್ಲಿ ಅಬ್ಬರಿಸಿದ ಕಮನ ಕಲಿಗಳು !

ಈ ಬಾರಿ ಬಿಜೆಪಿಗೆ ಸಿಕ್ಕ ಮತ್ತೊಂದು ಪ್ಲಸ್ ಪಾಯಿಂಟ್ ಎಂದರೆ ಹೊಸ ಸಭಾಧ್ಯಕ್ಷರು. ಒಲ್ಲದ ಮನಸ್ಸಿನಿಂದಲೇ ಸ್ಪೀಕರ್ ಸ್ಥಾನದ ಮೇಲೆ ಕುಳಿತ ರೋಣ ಕ್ಷೇತ್ರದ ಶಾಸಕ ಜಿ.ಎಸ್.ಪಾಟೀಲ್ ಅವರಿಗೆ ಸದನದ ನಡಾವಳಿ ಹಾಗೂ ಕಾರ್ಯಕಲಾಪದ ಬಗ್ಗೆ ಸ್ಪಷ್ಟತೆ ಇಲ್ಲ. ಘೋಷಣೆಗಳು ಜೋರಾಗುತ್ತಿದ್ದಂತೆ ಸದನವನ್ನು ಮುಂದೂಡುವ ತೀರ್ಮಾನವನ್ನು ಪಾಟೀಲ್ ಅವರು ತೆಗೆದುಕೊಂಡಿದ್ದರಿಂದ, ಬಿಜೆಪಿ ಶಾಸಕರಿಗೂ ಘೋಷಣೆ ಕೂಗಲು, ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ‘ಶಕ್ತಿ’ ಉಳಿಯಿತು.

ಕೊನೆಗೂ ಸದನದಲ್ಲಿ ಅಬ್ಬರಿಸಿದ ಕಮನ ಕಲಿಗಳು !

-

ಅಶ್ವತ್ಥಕಟ್ಟೆ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ, ಧರಣಿಗಳು ಪ್ರತಿಯೊಬ್ಬರ ಹಕ್ಕು. ಅದರಲ್ಲಿಯೂ ಕಲಾಪಗಳಲ್ಲಿ ಧರಣಿ ನಡೆಸುವುದು ಪ್ರತಿಪಕ್ಷಗಳಿಗೆ ಸಂವಿಧಾನವೇ ನೀಡಿರುವ ಹಕ್ಕು. ಆದರೆ ಈ ಹಕ್ಕುಗಳ ಕಾರಣಕ್ಕೆ ಅನೇಕ ಬಾರಿ ಇಡೀ ಸದನವೇ ವ್ಯರ್ಥವಾಗಿರುವ, ಸಾರ್ವಜನಿಕರಿಗೆ ಕಿರಿಕಿರಿ ಎನಿಸಿರುವ ಅನೇಕ ಉದಾಹರಣೆಗಳಿವೆ. ಇತ್ತೀಚಿನ ವರ್ಷಗಳಲ್ಲಿ ದೆಹಲಿಯ ಸಂಸತ್ ಭವನದಲ್ಲಿ ಸದನ ನಡೆದಿದ್ದಕ್ಕಿಂತ ಬಲಿಯಾಗಿದ್ದೇ ಹೆಚ್ಚು ಎನ್ನುವ ಪರಿಸ್ಥಿತಿಯಿದೆ. ರಾಜ್ಯದ ಮಟ್ಟಿಗೂ ಸದನಗಳು ಪ್ರತಿಪಕ್ಷಗಳ ಧರಣಿಗೆ ಬಲಿಯಾಗಿದ್ದು ಹೊಸ ವಿಷಯವೇನಲ್ಲ. ಆದರೆ 2023ರ ಬಿಜೆಪಿ ಪ್ರತಿಪಕ್ಷ ಸ್ಥಾನದಲ್ಲಿ ಕೂತ ಬಳಿಕ ಕರ್ನಾಟಕದಲ್ಲಿ ಪ್ರತಿಪಕ್ಷ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಹಲವು ಪ್ರಶ್ನೆಗಳು ಮೂಡಿದ್ದವು. ಈ ಎಲ್ಲ ಪ್ರಶ್ನೆಗಳ ನಡುವೆ, ಪ್ರತಿಪಕ್ಷ ಸ್ಥಾನದಲ್ಲಿ ಕೂತ ಮೂರು ವರ್ಷದ ಬಳಿಕ ಇದೇ ಮೊದಲ ಬಾರಿಗೆ ನಾಗೇಂದ್ರ ರಾಜೀನಾಮೆ ವಿಷಯದಲ್ಲಿ ತನ್ನ ಪಟ್ಟನ್ನು ಗಟ್ಟಿಗೊಳಿಸಿ, ಸರಕಾರದ ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿರುವುದು ಬಿಜೆಪಿಯ ಮಟ್ಟಿಗೆ ಬಹುದೊಡ್ಡ ಗೆಲುವು.

ಸದನದ ಕಾರ್ಯಕಲಾಪವನ್ನು ವ್ಯರ್ಥಮಾಡುವುದೇ ಪ್ರತಿಪಕ್ಷಗಳ ಸಾಧನೆ ಎಂದಲ್ಲ. ಆದರೆ ಸರಕಾರದ ಲೋಪಗಳಿದ್ದಾಗಲೂ ಸ್ಪಂದಿಸದೇ ಸುಗಮವಾಗಿ ಸದನ ನಡೆದಾಗ ಪ್ರತಿಪಕ್ಷಗಳ ಅಸ್ತಿತ್ವದ ಬಗ್ಗೆ ಹಲವು ಪ್ರಶ್ನೆಗಳು ಏಳುತ್ತವೆ. ಕಳೆದ ಮೂರು ವರ್ಷಗಳಿಂದ ಕಾಂಗ್ರೆಸ್ ನಾಯಕರೇ ಹತ್ತಾರು ವಿವಾದಗಳನ್ನು ಬಿಜೆಪಿ ಕೈಗಿತ್ತರೂ ಅದನ್ನು ಗಂಭೀರವಾಗಿ ಎತ್ತಿಕೊಂಡಿರಲಿಲ್ಲ.

ಕರ್ನಾಟಕದಲ್ಲಿ ಪ್ರತಿಪಕ್ಷ ಸ್ಥಾನದಲ್ಲಿ ಕೂತ ದಿನದಿಂದಲೂ ಹೋರಾಟದ ವಿಷಯ ಬಂದಾಗಲೆಲ್ಲ ಸಾಮಾಜಿಕ ಜಾಲತಾಣದ ಪೋಸ್ಟರ್‌ಗೆ ಅಥವಾ ಮಾಧ್ಯಮಗಳ ಮುಂದೆ ಹೇಳಿಕೆ ನೀಡಲು ಸೀಮಿತ ವಾಗಿರುತ್ತಿತ್ತು. ಸರಕಾರದ ವಿರುದ್ಧ ಹೋರಾಟ ನಡೆಸಲು ಸದನದೊಳಗೆ ಹತ್ತಾರು ಅವಕಾಶ ಸಿಕ್ಕರೂ ಆ ಎಲ್ಲವನ್ನು ಕೈಚೆಲ್ಲುವ ಮೂಲಕ, ಸ್ವಪಕ್ಷೀಯರಿಂದಲೇ ತೀವ್ರ ಟೀಕೆಗೆ ಗುರಿಯಾಗಿದ್ದ ಅನೇಕ ಉದಾಹರಣೆಗಳಿವೆ. ಅದರಲ್ಲಿಯೂ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅಧಿಕಾರ ವಹಿಸಿಕೊಂಡ ಮೊದಲ ಎರಡು ಸದನದಲ್ಲಿ, ಅಶೋಕ್ ನಡೆದುಕೊಂಡ ರೀತಿಗೆ ಸದನದಲ್ಲಿಯೇ ಹಲವು ಶಾಸಕರು ಆಕ್ರೋಶ ಹೊರಹಾಕಿ ಸದನದಿಂದ ಹೊರನಡೆದ ಘಟನೆಗಳು ನಡೆದಿದ್ದವು.

ಇದನ್ನೂ ಓದಿ: Ranjith H Ashwath Column: ಎಲ್ಲಿದ್ದೇವೆ ಎನ್ನುವುದರ ಮೇಲೆ ಹೋರಾಟ ನಿರ್ಣಯವೇ ?

ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇಳಿ ಬಂದಿದ್ದ ಮುಡಾ ಪ್ರಕರಣವನ್ನು ಸದನದಲ್ಲಿ ಎತ್ತುವ ಮೊದಲೇ ಬಾವಿಗಿಳಿಯುವ ಹಾಗೂ ಸಭಾತ್ಯಾಗ ಮಾಡುವ ತೀರ್ಮಾನ ಬಿಜೆಪಿ ತೀವ್ರ ವಿರೋಧಕ್ಕೆ ಕಾರಣವಾಗಿತ್ತು. ಇದ್ದ 64 ಚಿಲ್ಲರೆ ಶಾಸಕರಲ್ಲಿ ಕೆಲವರು ಬಾವಿಗಿಳಿದು ಪ್ರತಿಭಟನೆಗೆ ಮುಂದಾದರೆ, ಇನ್ನು ಕೆಲವರು ಸಭಾತ್ಯಾಗ ಮಾಡುವುದಾಗಿ ಘೋಷಿಸಿ ಸದನದ ಹೊರಗೆ ನಡೆದಿದ್ದರು. ಇದರಿಂದಾಗಿ, ಅಂದು ಸಿದ್ದರಾಮಯ್ಯ ವಿರುದ್ಧ ಸದನದಲ್ಲಿ ದಾಖಲಿಸಬಹು ದಾದ ಬಹುದೊಡ್ಡ ಅವಕಾಶವನ್ನು ಕೈಚೆಲ್ಲಿತ್ತು.

ಸಭಾತ್ಯಾಗದ ಗೊಂದಲ ನಡುವೆಯೇ ಪಾದಯಾತ್ರೆ ಮಾಡುವುದಾಗಿ ಘೋಷಿಸಿದರೂ, ಪಾದಯಾತ್ರೆಯಲ್ಲಿ ವಿಜಯೇಂದ್ರ ಮೈಲೇಜ್ ಪಡೆಯಬಾರದು ಎಂದು ಒಂದು ಬಣ, ಅಶೋಕ್‌ಗೆ ಅವಕಾಶ ಸಿಗಬಾರದು ಎಂದು ಇನ್ನೊಂದು ಬಣ ಪ್ರಯತ್ನಿಸಿತ್ತು. ಈ ನಡುವೆ ಮೈತ್ರಿ ಪಕ್ಷ ಜೆಡಿಎಸ್‌ನೊಂದಿಗೆ ಸಮಾಲೋಚನೆ ನಡೆಸದೇ ಏಕಾಏಕಿ ಪಾದಯಾತ್ರೆ ಘೋಷಿಸಿದ್ದರಿಂದ ಕೇಂದ್ರ ಸಚಿವ ಕುಮಾರಸ್ವಾಮಿ ಸಹ ಅಸಮಾಧಾನ ಹೊರಹಾಕಿ, ನಾವು ಬರುವುದಿಲ್ಲ ಎಂದು ಹೇಳಿದ್ದರು.

ದೆಹಲಿ ನಾಯಕರ ಮಧ್ಯಸ್ಥಿಕೆಯಲ್ಲಿ ಒಂದು ದಿನದ ಮಟ್ಟಿಗೆ ಕುಮಾರಸ್ವಾಮಿ ಭಾಗವಹಿಸಿದ್ದರೂ, ಅದು ನಾಮ್ ಕೆವಾಸ್ತೆಯಾಗಿತ್ತು ಎಂದರೆ ತಪ್ಪಾಗುವುದಿಲ್ಲ. ಈ ನಡುವೆ ಕುಮಾರಸ್ವಾಮಿ- ಡಿಕೆ ಶಿವಕುಮಾರ್ ನಡುವೆ ವಾಕ್ಸಮರ ಶುರುವಾಗಿ, ಬಿಜೆಪಿಗಿಂತ ಒಂದು ದಿನ ಮೊದಲೇ ಮೈಸೂರಿನಲ್ಲಿ ಕಾಂಗ್ರೆಸಿಗರು ಬೃಹತ್ ಸಮಾವೇಶ ನಡೆಸಿದ್ದರಿಂದ ಮುಡಾ ಪ್ರಕರಣವನ್ನು ರಾಜಕೀಯವಾಗಿ ಬಹುದೊಡ್ಡ ವಿಷಯವನ್ನಾಗಿ ಪರಿವರ್ತನೆ ಮಾಡಲು ಬಿಜೆಪಿಗರು ವಿಫಲವಾದರು.

BJP lead

ಇದೇ ರೀತಿ ವಕ್ಫ್ ಗೊಂದಲ, ಸಂಘದ ನಿರ್ಬಂಧ, ಗ್ಯಾರಂಟಿ ಯೋಜನೆಗೆ ಎಸ್‌ಸಿಪಿ-ಟಿಎಸ್‌ಪಿ ಅನುದಾನ ಬಳಕೆ, ಕಿಯೋನಿಕ್ಸ್ ಅಕ್ರಮದ ಆರೋಪ, ಅಬಕಾರಿ ಇಲಾಖೆಯಲ್ಲಿ ವರ್ಗಾವಣೆಯ ಅಕ್ರಮದ ವಾಸನೆ, ಜಾತಿ ಗಣತಿ, ಮೂಲಸೌಕರ್ಯ ಸಮಸ್ಯೆ, ಕಾಂಗ್ರೆಸ್ ಭವನಕ್ಕೆ ಸರಕಾರದ ಭೂಮಿ, ಬೆಂಗಳೂರಿನ ಟನೆಲ್ ಸೇರಿದಂತೆ ಹತ್ತು ಹಲವು ಆರೋಪಗಳು ಸರಕಾರದ ವಿರುದ್ಧ ಕೇಳಿಬಂದಿತ್ತು. ‌

ಇದಿಷ್ಟೇ ಅಲ್ಲದೇ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಸಚಿವರ ವಿವಾದಾತ್ಮಕ ಹೇಳಿಕೆಗಳಿಂದಲೇ ಸರಕಾರ ಮುಜುಗರಕ್ಕೆ ಸಿಲುಕಿದರೂ, ಈ ವಿಷಯವನ್ನು ಎತ್ತಿಕೊಳ್ಳುವಲ್ಲಿ ಬಿಜೆಪಿ ವಿಫಲವಾಗಿದ್ದರಿಂದ ಆಡಳಿತರೂಢ ಕಾಂಗ್ರೆಸ್‌ಗೆ ಪ್ರತಿಪಕ್ಷವನ್ನು ಎದುರಿಸುವ ಬಹುದೊಡ್ಡ ತಲೆನೋವು ಕಡಿಮೆಯಾಗಿತ್ತು. ಹಾಗೇ ನೋಡಿದರೆ, ಈ ಹಿಂದೆ ಸಚಿವ ನಾಗೇಂದ್ರ ವಿರುದ್ಧ ಕೇಳಿಬಂದ ವಾಲ್ಮೀಕಿ ನಿಗಮದ ಹಗರಣದಲ್ಲಿ ಬಿಜೆಪಿಯ ಒತ್ತಡಕ್ಕಿಂತ ಹೆಚ್ಚಾಗಿ, ಜೈಲಿಗೆ ಹೋಗು ವುದು ಬಹುತೇಕ ನಿಶ್ಚಿತ ಎನ್ನುವ ವಾತಾವರಣ ನಿರ್ಮಾಣವಾಗಿದ್ದರಿಂದ ಡ್ಯಾಮೇಜ್ ಕಂಟ್ರೋಲ್‌ ಗಾಗಿ ಕಾಂಗ್ರೆಸ್ ನಾಯಕರೇ ರಾಜೀನಾಮೆಯನ್ನು ಪಡೆದುಕೊಂಡರು.

ಈ ಬಾರಿ ಮಳೆಗಾಲದ ಅಧಿವೇಶನದ ಆರಂಭದಲ್ಲಿಯೂ, ನಾಗೇಂದ್ರ ಅವರನ್ನು ಸಂಪುಟಕ್ಕೆ ಪುನರ್ ಸೇರ್ಪಡೆ ಮಾಡಿಕೊಂಡಿರುವುದನ್ನು ವಿರೋಧಿಸಿ, ಹೋರಾಟ ಮಾಡುತ್ತೇವೆ ಎನ್ನುವ ಮಾತನ್ನು ಪ್ರತಿಪಕ್ಷ ನಾಯಕ ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದಾಗ ಬಹುತೇಕರು, ‘ಈ ಹಿಂದಿನ ಹೋರಾಟಗಳಂತೆ ಇದೂ ಒಂದು’ ಎನ್ನುವ ಕುಹಕವನ್ನೇ ಆಡಿದ್ದರು. ಆದರೆ ಈ ಬಾರಿ ಸದನ ಆರಂಭ ಗೊಂಡ ಮೂರನೇ ದಿನದಿಂದ ಶುರುವಾದ ಹೋರಾಟದಲ್ಲಿ ಜಿಗುಟು ಹಾಗೂ ಸ್ಪಷ್ಟತೆ ಇದ್ದಿದ್ದರಿಂದ ಗದ್ದಲದಲ್ಲಿಯೇ ಕಾರ್ಯಕಲಾಪ ಮುಗಿಸುವ ಅನಿವಾರ್ಯತೆ ಕಾಂಗ್ರೆಸ್‌ಗೆ ಎದುರಾಯಿತು.

ಆರಂಭದ ಎರಡು ದಿನ ಅಂದರೆ ಸಂತಾಪ ಕಲಾಪ ಹಾಗೂ ಸಭಾಧ್ಯಕ್ಷ, ಸಭಾಪತಿಗಳ ಆಯ್ಕೆಯ ದಿನ ಡಿ.ಕೆ. ಶಿವಕುಮಾರ್ ಅವರ ಮಾತಿನ ಹೊಡೆತಕ್ಕೆ ಒಂದು ಹಂತಕ್ಕೆ ಬಿಜೆಪಿ ನಾಯಕರು ಮೌನಕ್ಕೆ ಶರಣಾಗಿದ್ದರು.

ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಮಾತುಗಳನ್ನು ಪದೇಪದೆ ಆಡಿದ್ದರಿಂದ ಈ ಬಾರಿಯ ಅಧಿವೇಶನದಲ್ಲಿಯೂ ಬಿಜೆಪಿಯ ಹೋರಾಟ ಹೆಚ್ಚು ಹೈಲೈಟ್ ಆಗುವುದಿಲ್ಲ ಎನ್ನುವ ಮಾತುಗಳೇ ಹೆಚ್ಚಾಗಿ ಕೇಳಿ ಬಂದಿತ್ತು. ಆದರೆ ಸೋಮವಾರದಿಂದ ನಾಗೇಂದ್ರ ರಾಜೀನಾಮೆ ವಿಷಯದಲ್ಲಿ ಬಿಜೆಪಿ ನಾಯಕರು ಕೈಗೆತ್ತಿಕೊಂಡಿದ್ದು, ಈ ವಿಷಯದಲ್ಲಿ ‘ದಾರಿ ತಪ್ಪದ’ ರೀತಿಯಲ್ಲಿ ಉಭಯ ಸದನದಲ್ಲಿ ನಾಯಕರು ನಡೆದುಕೊಂಡಿದ್ದರಿಂದ ತಮ್ಮ ಸಂಖ್ಯಾಬಲದ ಕೊರತೆಯ ಹೊರತಾಗಿಯೂ, ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವಲ್ಲಿ ಯಶಸ್ವಿಯಾಗಿದೆ.

ವಿಧಾನಸಭೆಗೆ ಹೋಲಿಸಿದರೆ ವಿಧಾನಪರಿಷತ್‌ನಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಬಲ ಹಾಗೂ ಧ್ವನಿ ಹೆಚ್ಚಾಗಿರುವುದರಿಂದ ಕಳೆದ ಮೂರು ವರ್ಷದ ಅವಧಿಯಲ್ಲಿ ಸಭೆಗಿಂತ ಪರಿಷತ್‌ನಲ್ಲಿ ಬಿಜೆಪಿ ಪ್ರಬಲ ವಾಗಿ ಹೋರಾಟ ನಡೆಸಿತ್ತು. ವಿಧಾನಸಭೆಯಲ್ಲಿ ಬಿಜೆಪಿ ಯಾವುದೇ ವಿಷಯ ಕೈಗೆತ್ತಿ ಕೊಂಡರೂ, ಈ ಹಿಂದಿನ ಸ್ಪೀಕರ್ ಯು.ಟಿ. ಖಾದರ್ ಅವರು ಪ್ರತಿಭಟನೆಯನ್ನು ಪಕ್ಕಕ್ಕಿಟ್ಟು ಸದನದ ಕಾರ್ಯಕಲಾಪ ಗಳನ್ನು ಕೈಗೆತ್ತಿಕೊಂಡಿದ್ದ ಅನೇಕ ಉದಾಹರಣೆಗಳಿವೆ.

ಇನ್ನು ಬಿಜೆಪಿ ಶಾಸಕರು ಸಹ ಯಾವುದೇ ವಿಷಯ ಎತ್ತಿಕೊಂಡು ಕೆಲಕಾಲದ ವಾಕ್ಸಮರ ಬಳಿಕ ಬಾವಿಗಿಳಿದು ಪ್ರತಿಭಟನೆಗೆ ಮುಂದಾಗುತ್ತಿದ್ದರು. ಆದರೆ ಬಿಜೆಪಿಯವರು ಬಾವಿಗಿಳಿದರೂ, ಖಾದರ್ ಅವರು ಸದನವನ್ನು ಮುಂದೂಡದೇ ಕಾರ್ಯಕಲಾಪ ನಡೆಸುತ್ತಿದ್ದರು. ಆದರೆ ಬಾವಿಯಿಂದ ಹೊರಬರಲಾಗದೇ, ಅಲ್ಲಿಯೇ ವಾರಗಟ್ಟಲೇ ಉಳಿಯಲು ಆಗದ ಸಂಕಷ್ಟಕ್ಕೆ ಪ್ರತಿಪಕ್ಷ ಸದಸ್ಯರು ಸಿಲುಕುತ್ತಿದ್ದರು. ಆದ್ದರಿಂದ ಈ ಬಾರಿ ನಾಗೇಂದ್ರ ವಿಷಯದಲ್ಲಿ ಬಿಜೆಪಿಗರು, ಬಾವಿಗಿಳಿಯದೇ, ತಮ್ಮ ತಮ್ಮ ಆಸನದ ಬಳಿಯೇ ಘೋಷಣೆಗಳನ್ನು ಕೂಗುವ ತೀರ್ಮಾನವನ್ನು ಕೈಗೊಂಡಿದ್ದರಿಂದ ಈ ಬಾರಿಯ ಹೋರಾಟದಲ್ಲಿ ಸದನದೊಳಗೆ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವಲ್ಲಿ ಯಶಸ್ವಿ ಯಾಗಿದೆ.

ಈ ಬಾರಿ ಬಿಜೆಪಿಗೆ ಸಿಕ್ಕ ಮತ್ತೊಂದು ಪ್ಲಸ್ ಪಾಯಿಂಟ್ ಎಂದರೆ ಹೊಸ ಸಭಾಧ್ಯಕ್ಷರು. ಒಲ್ಲದ ಮನಸ್ಸಿನಿಂದಲೇ ಸ್ಪೀಕರ್ ಸ್ಥಾನದ ಮೇಲೆ ಕುಳಿತ ರೋಣ ಕ್ಷೇತ್ರದ ಶಾಸಕ ಜಿ.ಎಸ್.ಪಾಟೀಲ್ ಅವರಿಗೆ ಸದನದ ನಡಾವಳಿ ಹಾಗೂ ಕಾರ್ಯಕಲಾಪದ ಬಗ್ಗೆ ಸ್ಪಷ್ಟತೆ ಇಲ್ಲ. ಘೋಷಣೆಗಳು ಜೋರಾಗುತ್ತಿದ್ದಂತೆ ಸದನವನ್ನು ಮುಂದೂಡುವ ತೀರ್ಮಾನವನ್ನು ಪಾಟೀಲ್ ಅವರು ತೆಗೆದು ಕೊಂಡಿದ್ದರಿಂದ, ಬಿಜೆಪಿ ಶಾಸಕರಿಗೂ ಘೋಷಣೆ ಕೂಗಲು, ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ‘ಶಕ್ತಿ’ ಉಳಿಯಿತು.

ಖಾದರ್ ರೀತಿ ಇಡೀ ದಿನ ಸದನ ನಡೆಸುವ ತೀರ್ಮಾನ ಕೈಗೊಂಡಿದ್ದರೆ ಬಿಜೆಪಿಗರು ಮತ್ತೊಮ್ಮೆ ಇಕ್ಕಟ್ಟಿಗೆ ಸಿಲುಕುವ ಅನಿವಾರ್ಯ ಎದುರಿಸಬೇಕಿತ್ತು. ಇಷ್ಟು ದಿನ ಮೌನವಾಗಿದ್ದ ಬಿಜೆಪಿಗರು ಏಕಾಏಕಿ ‘ಅಗ್ರೇಸಿವ್’ ಮೋಡ್‌ಗೆ ಸದನದಲ್ಲಿ ಬದಲಾಗಲು ಕಾರಣ ದೆಹಲಿ ನಾಯಕರಿಂದಲೂ ಕೆಲ ಸಂದೇಶಗಳು ಬಂದಿವೆ ಎನ್ನುವುದು ಮೊಗಸಾಲೆಯ ಗುಸುಗುಸು. ರಾಜ್ಯ ನಾಯಕರ ಪ್ರಕಾರ, ಇಡೀ ಸದನ ನಾಗೇಂದ್ರ ವಿಷಯ ದಲ್ಲಿ ಹೋರಾಟ ಮಾಡುವುದು ಸ್ಥಳೀಯ ತೀರ್ಮಾನ ಎನ್ನಲಾಗುತ್ತಿದೆ. ಆದರೆ ನೀಟ್ ಅಕ್ರಮ ಸೇರಿದಂತೆ ವಿವಿಧ ವಿವಾದಗಳನ್ನು ಮುಂದಿಟ್ಟುಕೊಂಡು ಸಂಸತ್‌ನಲ್ಲಿ ಇಂಡಿ ಒಕ್ಕೂಟ ಹೋರಾಡುತ್ತಿದೆ.

ಆದರೆ ಕರ್ನಾಟಕದಲ್ಲಿ ಹಲವು ವಿಷಯಗಳು ನಿಮ್ಮ ಕೈಯಲ್ಲೇ ಇದ್ದರೂ ಅವುಗಳನ್ನು ಏಕೆ ಸಮರ್ಥವಾಗಿ ಬಳಸಿಕೊಳ್ಳುತ್ತಿಲ್ಲ. ಈ ಬಾರಿಯ ಸದನದಲ್ಲಿ ಈ ಎಲ್ಲವನ್ನು ಮುಂದಿಟ್ಟುಕೊಂಡು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿ ಎನ್ನುವ ‘ಸಂದೇಶ’ ಬಂದಿದೆ. ಆದರೆ ನಾಗೇಂದ್ರ ವಿಷಯವನ್ನು ಬಿಟ್ಟು ಬಿಡದಿ, ನೈಸ್ ಹಾಗೂ ಬರ ವಿಷಯ ಪ್ರಸ್ತಾಪಿಸಿದ್ದರೂ ಮೂರು ವಿಷಯವೂ ಒಂದಿಲ್ಲೊಂದು ರೀತಿ ಕೇಂದ್ರದ ಬಿಜೆಪಿ ಸರಕಾರ ಅಥವಾ ಬಿಜೆಪಿ-ಜೆಡಿಎಸ್ ನಾಯಕರ ಸುತ್ತಲೇ ತಿರುಗುತ್ತಿದ್ದವು.

ಬಿಡದಿ ಟೌನ್‌ಶಿಪ್ ವಿಷಯ ಎತ್ತಿಕೊಂಡರೆ ‘ಈ ಯೋಜನೆ ಕುಮಾರಸ್ವಾಮಿ ಅವರ ಕನಸಿನ ಕೂಸು. ಯಡಿಯೂರಪ್ಪ ಸರಕಾರದ ಅವಧಿಯಲ್ಲಿ ಬೆಳವಣಿಗೆ ನಡೆದಿವೆ’ ಎನ್ನುವ ಸಿದ್ಧ ಉತ್ತರವಿದೆ. ಇನ್ನು ಬರದ ವಿಷಯ ಎತ್ತಿಕೊಂಡರೆ ಕೇಂದ್ರದಿಂದ ಬರ ಅಧ್ಯಯನ ತಂಡ ಬಂದಿಲ್ಲ, ಅನುದಾನ ನೀಡಿಲ್ಲವೆಂದು ಕೇಂದ್ರದ ವಿರುದ್ಧ ಟೀಕಾಪ್ರಹಾರ ನಡೆಸುತ್ತಾರೆ. ಆದ್ದರಿಂದ ನಾಗೇಂದ್ರ ವಿಷಯ ದಲ್ಲಿಯೇ ಗಟ್ಟಿಯಾಗಿ ನಿಲ್ಲುವ ತೀರ್ಮಾನಕ್ಕೆ ರಾಜ್ಯ ನಾಯಕರು ಬಂದಿದ್ದಾರೆ ಎನ್ನುವುದು ಸ್ಪಷ್ಟ. ಈ ಎಲ್ಲ ಮೇಲಾಟದ ನಡುವೆ ಗುರುವಾರದವರೆಗೆ ನಡೆಯಬೇಕಿದ್ದ ವಿಧಾನಮಂಡಲ ಅಧಿವೇಶನ ವನ್ನು ಏಕಾಏಕಿ ಸೋಮವಾರವೇ ಮುಗಿಸಲು ಸರಕಾರ ತೀರ್ಮಾನಿಸುವ ಹಿಂದೆಯೂ ಜಾಣ ನಡೆಯಿದೆ.

ಏಕೆಂದರೆ, ನಿತ್ಯ ನಾಗೇಂದ್ರ ವಿಷಯದಲ್ಲಿ ಬಿಜೆಪಿ-ಜೆಡಿಎಸ್ ಶಾಸಕರು ಧರಣಿ ನಡೆಸುತ್ತಿರುವು ದರಿಂದ ಹಾಗೂ ಸೋಮವಾರದಿಂದ ಅಹೋರಾತ್ರಿ ಧರಣಿಗೆ ಬಿಜೆಪಿ ಕರೆ ನೀಡಿದ್ದು ಸರಕಾರಕ್ಕೆ ಮುಜುಗರವನ್ನು ತಂದಿತ್ತು. ಒಂದು ವೇಳೆ ಅಹೋರಾತ್ರಿ ಧರಣಿ ನಡೆಸಿದ್ದರೆ, ಡಿ.ಕೆ.ಶಿವಕುಮಾರ್ ಅಧಿಕಾರ ವಹಿಸಿಕೊಂಡ ಮೊದಲ ಸದನದಲ್ಲಿಯೇ ಅಹೋರಾತ್ರಿ ಧರಣಿ ನಡೆಯಿತು ಎನ್ನುವ ಕಪ್ಪುಚುಕ್ಕೆ ಅಂಟುತ್ತಿತ್ತು.

ಆದ್ದರಿಂದ ಈ ಮುಜುಗರದಿಂದ ತಪ್ಪಿಸಿಕೊಳ್ಳಲು, ಎಲ್ಲ ಬಿಲ್‌ಗಳನ್ನು ಪಾಸ್ ಮಾಡಿಕೊಂಡು, ಹೆಚ್ಚುವರಿ ಬಜೆಟ್‌ಗೂ ಅನುಮೋದನೆ ಪಡೆದುಕೊಂಡು ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡುವ ಮೂಲಕ ಬಿಜೆಪಿಯ ಅಹೋರಾತ್ರಿ ಧರಣಿಯ ಯೋಚನೆಯನ್ನು ಉಲ್ಟಾ ಮಾಡಿದ್ದಾರೆ. ಇದರೊಂದಿಗೆ ನಾಗೇಂದ್ರ ರಾಜೀನಾಮೆ ವಿರುದ್ಧ ಹೋರಾಟದ ಕಾವನ್ನು ತಗ್ಗಿಸುವ ಪ್ಲಾನ್ ಅನ್ನು ಸರಕಾರ ಮಾಡಿದೆ ಎಂದರೆ ತಪ್ಪಾಗುವುದಿಲ್ಲ.

ಹಾಗೇ ನೋಡಿದರೆ, ಸದನ ನಡೆಸಲು ಬಿಡದೇ ಇಡೀ ಸದನ ವ್ಯರ್ಥವಾಗಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಬಿಜೆಪಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಸಮಯದಲ್ಲಿ ರೆಡ್ಡಿ ಗಣಿ ಗದ್ದಲವನ್ನು ಮುಂದಿಟ್ಟುಕೊಂಡು ಸರಕಾರವನ್ನು ‘ಒಂಟಿ ಕಾಲಲ್ಲಿ’ ನಿಲ್ಲಿಸುವಂತೆ ಅಂದಿನ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಾಡಿದ್ದರು.

ಯಡಿಯೂರಪ್ಪ ಅವರು ಪ್ರತಿಪಕ್ಷ ಸ್ಥಾನದಲ್ಲಿ ಕೂತಾಗ ಪ್ರಶ್ನೋತ್ತರ ಅವಧಿಯಲ್ಲಿ ಉದ್ಭವಿಸಿದ ಸಮಸ್ಯೆಯನ್ನೇ ಮುಂದಿಟ್ಟುಕೊಂಡು ಅಹೋರಾತ್ರಿ ಧರಣಿ ನಡೆಸಿದ ಅದೆಷ್ಟೋ ಉದಾಹರಣೆ ಗಳಿವೆ. ಗದ್ದಲ ಗಲಾಟೆಯಲ್ಲಿಯೇ, ಎರಡು ವಾರಗಳ ಸದನ ಬಾವಿಯಲ್ಲಿಯೇ ಮುಗಿದಿರುವ ನಿದರ್ಶನಗಳಿವೆ. ಆದರೆ ಕಳೆದ ನಾಲ್ಕೈದು ವರ್ಷಗಳಿಂದ ಈ ರೀತಿಯ ಧರಣಿ, ಗದ್ದಲ, ಗಲಾಟೆ ಕಡಿಮೆಯಾಗಿತ್ತು. ಅದರಲ್ಲಿಯೂ ಬಿಜೆಪಿ ಪ್ರತಿಪಕ್ಷ ಸ್ಥಾನದಲ್ಲಿ ಕೂತ ಬಳಿಕ ಬಿಜೆಪಿಯೊಳಗಿನ ಭಿನ್ನಾಭಿಪ್ರಾಯಗಳು, ಸಂಖ್ಯಾಬಲದ ಕೊರತೆ ಹಾಗೂ ನಾಯಕರಗಳು ವಿಷಯವನ್ನು ಕೈಗೆತ್ತಿಕೊಳ್ಳುವ ರೀತಿಯ ಕಾರಣಕ್ಕೆ ‘ಸುಗಮ ಕಲಾಪ’ಗಳೇ ಕರ್ನಾಟಕದ ಉಭಯ ಸದನ ಕಂಡಿತ್ತು.

ಚುನಾವಣೆಗೆ ಒಂದುವರೆ ವರ್ಷ ಚಿಲ್ಲರೆ ಅವಧಿ ಇರುವಾಗಲಾದರೂ ಬಿಜೆಪಿ ಎಚ್ಚೆತ್ತಿರುವುದು ಕಾರ್ಯ ಕರ್ತರ ಪಾಲಿಗೆ ಕೊಂಚ ನೆಮ್ಮದಿಯ ವಿಷಯವಾಗಿದೆ. ಆದರೆ ಈ ‘ಕಿಚ್ಚ’ನ್ನು ಯಾವ ಹಂತದವರೆಗೆ ತೆಗೆದುಕೊಂಡು ರಾಜ್ಯ ನಾಯಕರು ಹೋಗಲಿದ್ದಾರೆ ಎನ್ನುವುದು ಈಗಿರುವ ಕುತೂಹಲ.