Janamejaya Umarji Column: ಕಾಗಜ್ ನಹೀ ದಿಖಾಯೇಂಗೆ ಮತ್ತು ದಾಖಲೆ ತೋರಿಸಿ ದ್ವಂದ್ವ
ಸಂಘಟನೆ ರಚಿಸುವ ಹಕ್ಕಿನ ಬಗ್ಗೆ ಸುಪ್ರೀಂ ಕೋರ್ಟ್ ಹಲವಾರು ಬಾರಿ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದೆ. ದಮಯಂತಿ ನಾರಂಗ ವರ್ಸಸ್ ಯೂನಿಯನ್ ಆಫ್ ಇಂಡಿಯಾ (1971) ಪ್ರಕರಣದಲ್ಲಿ ಸುಪ್ರೀಂ ಕೋಟ, ಸಂಘಟನೆ ರಚಿಸುವ ಹಕ್ಕು ಮಾತ್ರವಲ್ಲ, ಅದರ ಸ್ವರೂಪವನ್ನು ಉಳಿಸಿಕೊಳ್ಳುವ ಹಕ್ಕೂ ಸದಸ್ಯರಿಗೆ ಸೇರಿದೆ ಎಂದು ತೀರ್ಪು ನೀಡಿದೆ.
-
ಗಣತಂತ್ರ
ಜನಮೇಜಯ ಉಮರ್ಜಿ
ಶಾಹೀನ್ ಬಾಗ್‌ನಲ್ಲಿ ಕಾಗಜ್ ನಹೀ ದಿಖಾಯೇಂಗೆ ಎಂದು ಘೋಷಣೆ ಕೂಗಿದ ರಾಜಕೀಯ ಶಕ್ತಿಗಳು ಇಂದು ದಾಖಲೆ ತೋರಿಸಿ ಎಂದು ಒತ್ತಾಯಿಸುತ್ತಿವೆ. ನಿನ್ನೆ ನಾಗರಿಕರಿಂದ ದಾಖಲೆ ಕೇಳಿದರೆ ಪ್ರಜಾಪ್ರಭುತ್ವ ವಿರೋಧಿ ಎಂದು ಹೇಳಿದವರು, ಇಂದು ಸಂಘಟನೆಯೊಂದರಿಂದ ದಾಖಲೆ ಕೇಳುವುದನ್ನು ಪಾರದರ್ಶಕತೆ ಎಂದು ಕರೆಯುತ್ತಿದ್ದಾರೆ.
ಗಾಳಿ ಬಂದತ್ತ ತೂರಿಕೊಳ್ಳುವುದು ರಾಜಕೀಯ ಪಕ್ಷಗಳ ಸ್ವಭಾವ. ಅವುಗಳ ನಿಲುವುಗಳು ಕಾಲಾನು ಸಾರ ಬದಲಾಗುವುದು ಸಹಜ. ನಿನ್ನೆ ವಿರೋಧಿಸಿದ್ದನ್ನೇ ಇಂದು ಸಮರ್ಥಿಸಿಕೊಳ್ಳುವುದು ವಿರೋಧಾಭಾಸ. ಈ ಅವಕಾಶವಾದಿತನವನ್ನು ಜನ ಗುರುತಿಸದೇ ಇರರು. ಇತ್ತೀಚೆಗೆ ಕರ್ನಾಟಕದ ಮಾನ್ಯ ಗೃಹ ಸಚಿವರು, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಬರೆದ ಬಹಿರಂಗ ಪತ್ರವು ಇಂತಹ ಸಂಶಯವನ್ನು ಹುಟ್ಟುಹಾಕಿದೆ.
ಆ ಪತ್ರದಲ್ಲಿ ಆರ್‌ಎಸ್‌ಎಸ್ ನೋಂದಾಯಿತ ಸಂಸ್ಥೆಯೇ? ಅದರ ಹಣಕಾಸಿನ ಮೂಲಗಳೇನು? ತೆರಿಗೆ ಪಾವತಿಸುತ್ತದೆಯೇ? ಅದರ ಆಡಳಿತಾತ್ಮಕ ರಚನೆ ಏನು? ಎಂಬ ಪ್ರಶ್ನೆಗಳನ್ನು ಕೇಳಲಾಗಿದೆ. ಪ್ರಜಾಪ್ರಭುತ್ವದಲ್ಲಿ ಯಾವುದೇ ಸಂಘಟನೆ ಪ್ರಶ್ನಾತೀತವಲ್ಲ. ಆದರೆ ಈ ಪ್ರಶ್ನೆಗಳನ್ನು ಕೇಳುತ್ತಿರುವ ಶಕ್ತಿಗಳ ಹಿಂದಿನ ನಿಲುವುಗಳನ್ನು ಗಮನಿಸಿದಾಗ ಒಂದು ದೊಡ್ಡ ವೈಚಾರಿಕ ವಿರೋಧಾಭಾಸ ಕಾಣಿಸುತ್ತದೆ.
ಏಕೆಂದರೆ ಇಂತಹುದೇ ಶಕ್ತಿಗಳು 2019-20ರ ಅವಧಿಯಲ್ಲಿ ನಡೆದ ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಗಳಲ್ಲಿ ‘ಕಾಗಜ್ ನಹೀ ದಿಖಾಯೇಂಗೆ’ ಎಂಬ ಘೋಷಣೆಯನ್ನು ಬೆಂಬಲಿಸಿದ್ದವು. ಅಂದು ನಾಗರಿಕರಿಂದ ದಾಖಲೆ ಕೇಳುವುದು ಪ್ರಜಾಪ್ರಭುತ್ವ ವಿರೋಧಿ ಎಂದು ವಾದಿಸಿದ್ದ ಶಕ್ತಿಗಳು ಇಂದು ಒಂದು ಸಂಘಟನೆಯ ಬಳಿ ದಾಖಲೆ ಕೇಳುತ್ತಿರುವುದು ರಾಜಕೀಯ ದ್ವಂದ್ವ ನೀತಿಯ ಉದಾಹರಣೆಯಾಗಿ ಕಾಣುತ್ತಿದೆ.
ಇದನ್ನೂ ಓದಿ: Janamejaya Umarji Column: ಶರಣರ ಹಿಂದೂ ಸಮಾವೇಶಕ್ಕೆ ಯಾಕಿಷ್ಟು ಭಯ ?
ಕಾಗಜ್ ನಹೀ ದಿಖಾಯೇಂಗೆ
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ವಿರುದ್ಧ ದೆಹಲಿಯ ಶಾಹೀನ್ ಬಾಗ್‌ನಲ್ಲಿ ಆರಂಭವಾದ ಪ್ರತಿಭಟನೆ ದೇಶವ್ಯಾಪಿ ಚಳವಳಿಯಾಗಿ ರೂಪುಗೊಂಡಿತ್ತು. ವಿಚಿತ್ರ ಎಂದರೆ 2005-2013ರ ಅವಧಿಯಲ್ಲಿ ಕಾಂಗ್ರೆಸ್ ಸರಕಾರವೇ ಅಸ್ಸಾಂ ನಲ್ಲಿ ಎನ್‌ಆರ್‌ಸಿ ಪ್ರಕ್ರಿಯೆಯನ್ನು ಬೆಂಬಲಿಸಿತ್ತು.
ನಂತರ ಎನ್‌ಆರ್‌ಸಿ ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ಬಂದಾಗ ಅದೇ ಪಕ್ಷ ವಿರೋಧಿಸಿತು. ಆ ಪ್ರತಿಭಟನೆಗಳ ಪ್ರಮುಖ ಘೋಷಣೆಯೇ ‘ಹಮ್ ಕಾಗಜ್ ನಹೀ ದಿಖಾಯೇಂಗೆ.’ ಸರಕಾರ ಕೇಳಿದರೂ ದಾಖಲೆ ತೋರಿಸುವುದಿಲ್ಲ. ಕಾಂಗ್ರೆಸ್ ಸೇರಿದಂತೆ ಅನೇಕ ವಿರೋಧ ಪಕ್ಷಗಳು ಈ ಪ್ರತಿಭಟನೆಗಳಿಗೆ ಬೆಂಬಲ ನೀಡಿದ್ದವು. ಹಲವು ನಾಯಕರು ಶಾಹೀನ್ ಬಾಗಿಗೆ ಹೋಗಿ ಪ್ರತಿಭಟನಾಕಾರರೊಂದಿಗೆ ಕುಳಿತಿದ್ದರು. ಅಷ್ಟೇ ಅಲ್ಲ ಸರಕಾರ ಕೇಳುವ ದಾಖಲೆಗಳ ವಿರುದ್ಧ ಹೋರಾಟವನ್ನು ಪ್ರಜಾ ಪ್ರಭುತ್ವದ ಹೋರಾಟ ಎಂದು ಬಿಂಬಿಸಲಾಯಿತು.
ನಾಗರಿಕರ ಬಳಿ ದಾಖಲೆ ಕೇಳುವುದು ಸಂವಿಧಾನ ವಿರೋಧಿ ಎಂಬ ವಾದವನ್ನೂ ಮುಂದಿಡ ಲಾಯಿತು. ಆದರೆ ಇಂದು ಅದೇ ರಾಜಕೀಯ ಶಕ್ತಿಗಳು ಆರ್‌ಎಸ್‌ಎಸ್‌ಗೆ ದಾಖಲೆ ತೋರಿಸಿ ಎಂದು ಕೇಳುತ್ತಿರುವುದು ಜನರಲ್ಲಿ ಸಹಜವಾಗಿಯೇ ಅವರ ದ್ವಂದ್ವಗಳನ್ನು ಅನಾವರಣ ಮಾಡುತ್ತಿದೆ.
ನೋಂದಣಿ ಕಡ್ಡಾಯವೇ?
ಭಾರತೀಯ ಸಂವಿಧಾನದ ಅನುಚ್ಛೇದ 19(1)(ಸಿ) ಪ್ರಕಾರ ನಾಗರಿಕರಿಗೆ ಸಂಘಟನೆಗಳನ್ನು ಹಾಗೂ ಸಂಘಗಳನ್ನು ರಚಿಸುವ ಮೂಲಭೂತ ಹಕ್ಕು ಇದೆ. ಸಂವಿಧಾನ ಎಲ್ಲಿಯೂ ಒಂದು ಸಂಘಟನೆ ಅಸ್ತಿತ್ವದಲ್ಲಿರಲು ಅದು ಕಡ್ಡಾಯವಾಗಿ ಸೊಸೈಟಿ, ಟ್ರಸ್ಟ್ ಅಥವಾ ಕಂಪನಿಯಾಗಿ ನೋಂದಾಯಿ ತವಾಗಿರಬೇಕು ಎಂದು ಹೇಳುವುದಿಲ್ಲ. ಭಾರತದಲ್ಲಿ ಸಾವಿರಾರು ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸ್ವಯಂಸೇವಾ ಗುಂಪುಗಳು ಯಾವುದೇ ಪ್ರತ್ಯೇಕ ನೋಂದಣಿಯಿಲ್ಲದೆ Association of Persons ಅಥವಾ Body of Individuals ರೂಪದಲ್ಲಿ ಕಾರ್ಯನಿರ್ವಹಿಸುತ್ತಿವೆ.
1925ರಲ್ಲಿ ಸ್ಥಾಪನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘ ತನ್ನನ್ನು ಇದೇ ರೀತಿಯ ಅಸೋಸಿ ಯೇಶನ್ ಆಫ್ ಇಂಡಿವಿಜುವಲ್ಸ್ ಆಗಿ ಗುರುತಿಸಿಕೊಂಡಿದೆ. ಹೀಗಾಗಿ ನೋಂದಣಿ ಇಲ್ಲ ಎಂದರೆ ಅಕ್ರಮ ಎಂಬ ವಾದ ಕಾನೂನು ದೃಷ್ಟಿಯಿಂದ ಸಮರ್ಥನೀಯವಲ್ಲ. ನೊಂದಣಿ ಕಡ್ಡಾಯ ಎನ್ನುವ ಕಾನೂನು ಯಾವುದಾದರು ಇದ್ದರೆ ಅದನ್ನು ಸಾರ್ವಜನಿಕಗೊಳಿಸುವುದು ಒಳಿತು. ನೋಂದಣಿ ಇಲ್ಲದಿರುವುದು ಅಪರಾಧವಲ್ಲ. ಆದರೆ ತೆರಿಗೆ ವಂಚನೆ, ಕಾನೂನುಬಾಹಿರ ಹಣಕಾಸು ವ್ಯವಹಾರ ಅಥವಾ ರಾಷ್ಟ್ರೀಯ ಭದ್ರತೆಗೆ ಧಕ್ಕೆ ಉಂಟುಮಾಡುವ ಚಟುವಟಿಕೆಗಳಿದ್ದರೆ ತನಿಖೆಯ ಪ್ರಶ್ನೆ ಬರುತ್ತದೆ.
ಸಂಘಟನೆ ರಚಿಸುವ ಹಕ್ಕಿನ ಬಗ್ಗೆ ಸುಪ್ರೀಂ ಕೋರ್ಟ್ ಹಲವಾರು ಬಾರಿ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದೆ. ದಮಯಂತಿ ನಾರಂಗ ವರ್ಸಸ್ ಯೂನಿಯನ್ ಆಫ್ ಇಂಡಿಯಾ (1971) ಪ್ರಕರಣ ದಲ್ಲಿ ಸುಪ್ರೀಂ ಕೋಟ, ಸಂಘಟನೆ ರಚಿಸುವ ಹಕ್ಕು ಮಾತ್ರವಲ್ಲ, ಅದರ ಸ್ವರೂಪವನ್ನು ಉಳಿಸಿ ಕೊಳ್ಳುವ ಹಕ್ಕೂ ಸದಸ್ಯರಿಗೆ ಸೇರಿದೆ ಎಂದು ತೀರ್ಪು ನೀಡಿದೆ.
ಒಂದು ಸಂಘಟನೆಯ ಅಸ್ತಿತ್ವವನ್ನು ಕೇವಲ ನೋಂದಣಿ ಎಂಬ ತಾಂತ್ರಿಕ ಅಂಶಕ್ಕೆ ಸೀಮಿತಗೊಳಿ ಸಲು ಸಾಧ್ಯವಿಲ್ಲ. ಜೋರಾಸ್ಟ್ರಿಯನ್ ಕೋಆಪರೇಟಿವ್ ಹೌಸಿಂಗ್ ಸೊಸೈಟಿ ವರ್ಸಸ್ ಡಿಸ್ಟ್ರಿಕ್ಟ್ ರಿಜಿಸ್ಟ್ರಾರ್ (2005) ಪ್ರಕರಣದಲ್ಲಿ ಸ್ವಯಂಪ್ರೇರಿತ ಸಂಘಗಳ ಸ್ವಾತಂತ್ರ್ಯವನ್ನು ಪುನರುಚ್ಚರಿಸಿ, ಸಂಘಟನೆಗಳು ತಮ್ಮ ಉದ್ದೇಶ ಮತ್ತು ನಿಯಮಗಳ ಪ್ರಕಾರ ಕಾರ್ಯನಿರ್ವಹಿಸುವ ಹಕ್ಕು ಹೊಂದಿವೆ ಎಂದು ಹೇಳಿದೆ.
ಮಾನ್ಯ ಸಚಿವರು ಕೇಳಿರುವ ಪ್ರಶ್ನೆಗಳು ಹೊಸದೇನಲ್ಲ. 1948ರಲ್ಲಿ ಮಹಾತ್ಮ ಗಾಂಧೀಜಿ ಹತ್ಯೆಯ ನಂತರ ಆರ್ʼಎಸ್‌ಎಸ್ ಮೇಲೆ ನಿಷೇಧ ಹೇರಲಾಗಿತ್ತು. ಆದರೆ ನಂತರದ ತನಿಖೆಗಳಲ್ಲಿ ಗಾಂಧೀಜಿ ಹತ್ಯೆಗೆ ಆರ್‌ಎಸ್‌ಎಸ್‌ನ ಸಂಬಂಧ ಸಾಬೀತಾಗಲಿಲ್ಲ. ಪರಿಣಾಮವಾಗಿ ನಿಷೇಧ ಹಿಂತೆಗೆದು ಕೊಳ್ಳಲಾಯಿತು.
1975ರ ತುರ್ತು ಪರಿಸ್ಥಿತಿ ಅವಧಿಯಲ್ಲಿ ಇಂದಿರಾ ಗಾಂಧಿ ಸರಕಾರ ಮತ್ತೊಮ್ಮೆ ಆರ್ʼಎಸ್‌ಎಸ್ ಮೇಲೆ ನಿಷೇಧ ಹೇರಿತು. ಆದರೆ 1977ರಲ್ಲಿ ಜನತಾ ಸರಕಾರ ಅಧಿಕಾರಕ್ಕೆ ಬಂದ ನಂತರ ಆ ನಿಷೇಧ ವನ್ನು ರದ್ದುಪಡಿಸಲಾಯಿತು. ಕಳೆದ ಒಂದು ಶತಮಾನದಲ್ಲಿ ಆರ್ʼಎಸ್‌ಎಸ್ ವಿರುದ್ಧ ನಿಷೇಧ ಗಳೂ ಬಂದಿವೆ, ಆರೋಪಗಳೂ ಕೇಳಿಬಂದಿವೆ, ತನಿಖೆಗಳೂ ನಡೆದಿವೆ. ಆದರೆ ಪ್ರತಿ ಬಾರಿ ಆರೋಪ ಗಳು ರಾಜಕೀಯ ಚರ್ಚೆಗಳ ಕೊನೆಗೊಂಡಿವೆ. ಸಂಘದ ವಿಸ್ತರಣೆ ಮಾತ್ರ ದೇಶದಾದ್ಯಂತ ಮುಂದು ವರಿದಿದೆ. ಮತ್ತೆ ಅದೇ ಪ್ರಶ್ನೆಗಳನ್ನು ಎತ್ತುವುದು ಪಾರದರ್ಶಕತೆಯ ಚಿಂತನೆಯೇ ಅಥವಾ ರಾಜಕೀಯ ಪ್ರಚಾರವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ರಾಜ್ಯ ಗೃಹ ಇಲಾಖೆಗೆ ಕಾನೂನು ಸುವ್ಯವಸ್ಥೆ, ಅಪರಾಧ ನಿಯಂತ್ರಣ, ಅಕ್ರಮ ವಲಸೆ, ಸಾರ್ವಜನಿಕ ಸುರಕ್ಷತೆ ಮತ್ತು ರಾಜ್ಯದ ಆಂತರಿಕ ಭದ್ರತೆಯಂತಹ ಪ್ರಮುಖ ಜವಾಬ್ದಾರಿಗಳಿವೆ. ಒಂದು ಸಂಘಟನೆಯ ತೆರಿಗೆ ಪಾವತಿ, ಆದಾಯ ಮೂಲ, ನೋಂದಣಿ ಅಥವಾ ಹಣಕಾಸಿನ ನಿರ್ವಹಣೆ ಕುರಿತ ಪ್ರಶ್ನೆಗಳು ಸಾಮಾನ್ಯವಾಗಿ ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ (ಇಡಿ), ಕೇಂದ್ರ ಗೃಹ ಸಚಿವಾಲಯ ಅಥವಾ ಇತರೆ ನಿಯಂತ್ರಕ ಸಂಸ್ಥೆಗಳ ವ್ಯಾಪ್ತಿಗೆ ಸೇರುತ್ತವೆ. ಹೀಗಿರುವಾಗ ರಾಜ್ಯ ಗೃಹ ಸಚಿವರು ಈ ಪ್ರಶ್ನೆಗಳನ್ನು ಬಹಿರಂಗ ಪತ್ರದ ಮೂಲಕ ಕೇಳುವುದು ಆಡಳಿತಾತ್ಮಕ ಕ್ರಮಕ್ಕಿಂತ ರಾಜಕೀಯ ಸಂದೇಶದಂತೆಯೇ ಕಾಣಿಸುತ್ತದೆ.
ಎಸ್‌ಐಆರ್ ದಾಖಲೆ ತೋರಿಸಿ ವಿರೋಧ ಇತ್ತೀಚಿನ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ( Special Intensive Revision - SI) ಸಂದರ್ಭದಲ್ಲಿಯೂ ಇದೇ ರೀತಿಯ ರಾಜಕೀಯ ವಿರೋಧಾಭಾಸ ಕಂಡುಬರುತ್ತಿದೆ. ಭಾರತೀಯ ಸಂವಿಧಾನದ ಆರ್ಟಿಕಲ್ 324 ಚುನಾವಣಾ ಆಯೋಗಕ್ಕೆ ಚುನಾವಣೆ ಗಳನ್ನು ನಿರ್ವಹಿಸುವ ಹಾಗೂ ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಅಧಿಕಾರ ನೀಡುತ್ತದೆ.
Representation of the People Act, 1950 ಹಾಗೂ Registration of Electors Rules, 1960 ಪ್ರಕಾರ ಮತದಾರರ ಅರ್ಹತೆಯನ್ನು ಪರಿಶೀಲಿಸುವುದು ಚುನಾವಣಾ ಆಯೋಗದ ಕಾನೂನುಬದ್ಧ ಕರ್ತವ್ಯವಾಗಿದೆ.
ಮೃತ ವ್ಯಕ್ತಿಗಳ ಹೆಸರು, ನಕಲಿ ಮತದಾರರು, ಸ್ಥಳಾಂತರಗೊಂಡವರ ದಾಖಲೆಗಳು ಮತ್ತು ಅನರ್ಹ ನೋಂದಣಿಗಳನ್ನು ತೆಗೆದುಹಾಕಲು ದಾಖಲೆ ಪರಿಶೀಲನೆ ಅಗತ್ಯವಾಗುತ್ತದೆ. ಆದರೆ ಇದೇ ಪ್ರಕ್ರಿಯೆಗೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿವೆ. ದಾಖಲೆ ಕೇಳುವುದು ಜನರ ಹಕ್ಕುಗಳ ಉಲ್ಲಂಘನೆ ಎಂದು ವಾದಿಸುತ್ತಿವೆ. ಕರ್ನಾಟಕದಲ್ಲಂತೂ ಸ್ವತಃ ಹಿಂದಿನ ಮುಖ್ಯಮಂತ್ರಿ ಗಳು ಎಸ್‌ಐಆರ್ ವಿರೋಧಿ ಗುಂಪುಗಳೊಂದಿಗೆ ವಿಧಾನಸೌಧದಲ್ಲಿ ಸಭೆ ಮಾಡಿದ್ದರು.
ಒಂದೆಡೆ ಚುನಾವಣಾ ಆಯೋಗದ ದಾಖಲೆ ಪರಿಶೀಲನೆಗೆ ವಿರೋಧ, ಮತ್ತೊಂದೆಡೆ ಆರ್‌ಎಸ್‌ಎಸ್ ಗೆ ದಾಖಲೆ ಕೇಳುವ ಒತ್ತಾಯ. ಇದು ದ್ವಂದ್ವ ನಿಲುವಲ್ಲದೆ ಮತ್ತೇನು? ಕಾಂಗ್ರೆಸ್ಸಿನ ರಾಜಕೀಯ ಇತಿಹಾಸವನ್ನು ನೋಡಿದರೆ ಇಂತಹ ವಿರೋಧಾಭಾಸಗಳು ಹೊಸದೇನಲ್ಲ. 1985ರ ಶಾಹ್‌ಬಾನೋ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಕಾಂಗ್ರೆಸ್ ಸರಕಾರ ಸಂಸತ್ತಿನ ಮೂಲಕ ದುರ್ಬಲಗೊಳಿಸಿತ್ತು. ನ್ಯಾಯಾಂಗದ ತೀರ್ಪಿಗೆ ವಿರೋಧವಾಗಿ ರಾಜಕೀಯ ನಿರ್ಧಾರ ತೆಗೆದು ಕೊಂಡ ಪಕ್ಷವೇ ಇಂದು ಸಂವಿಧಾನ ಮತ್ತು ಕಾನೂನಿನ ಹೆಸರಿನಲ್ಲಿ ಇತರರಿಗೆ ಉಪದೇಶ ನೀಡುತ್ತಿರುವುದು ಹಲವರ ವಿಚಿತ್ರ ಎನಿಸುತ್ತದೆ.
ಪ್ರಶ್ನೆ ಆರ್‌ಎಸ್‌ಎಸ್ ಬಗ್ಗೆ ಮಾತ್ರವಲ್ಲ
ದೇಶದಲ್ಲಿ ಸಾವಿರಾರು ಎನ್‌ಜಿಒಗಳು, ಧಾರ್ಮಿಕ ಸಂಸ್ಥೆಗಳು, ಕಾರ್ಮಿಕ ಸಂಘಟನೆಗಳು, ಸಾಮಾಜಿಕ ಚಳವಳಿಗಳು ಮತ್ತು ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ ವಿವಿಧ ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳ ಹಣಕಾಸಿನ ಮೂಲಗಳು, ವಿದೇಶಿ ಅನುದಾನ, ಆಸ್ತಿ ವಿವರಗಳು ಮತ್ತು ತೆರಿಗೆ ಪಾಲನೆ ಕುರಿತು ಇದೇ ಮಟ್ಟದ ಆಸಕ್ತಿ ತೋರಲಾಗುತ್ತಿದೆಯೇ? ಅಥವಾ ಆರ್‌ಎಸ್‌ಎಸ್ ವಿರುದ್ಧ ಮಾತ್ರ ಪ್ರಶ್ನೆಗಳು ಕೇಳಲಾಗುತ್ತಿದೆಯೇ? ಎಷ್ಟೋ ಅಕ್ರಮವಾಗಿ ವಿದೇಶಿ ಹಣ ಪಡೆದ ಸ್ವಯಂ ಸೇವಾ ಸಂಸ್ಥೆಗಳನ್ನು ಕೇಂದ್ರ ಸರಕಾರ ಮುಚ್ಚಿಸಿದೆ.
ಪ್ರಜಾಪ್ರಭುತ್ವದಲ್ಲಿ ಪಾರದರ್ಶಕತೆ ಎಲ್ಲರಿಗೂ ಅನ್ವಯಿಸಬೇಕು. ಇಲ್ಲಿ ಆಯ್ಕೆಯು ಅನುಮಾನ ಹುಟ್ಟಿಸುತ್ತದೆ. ಶಾಹೀನ್ ಬಾಗ್‌ನಲ್ಲಿ ಕಾಗಜ್ ನಹೀ ದಿಖಾಯೇಂಗೆ ಎಂದು ಘೋಷಣೆ ಕೂಗಿದ ರಾಜಕೀಯ ಶಕ್ತಿಗಳು ಇಂದು ದಾಖಲೆ ತೋರಿಸಿ ಎಂದು ಒತ್ತಾಯಿಸುತ್ತಿವೆ. ನಿನ್ನೆ ನಾಗರಿಕರಿಂದ ದಾಖಲೆ ಕೇಳಿದರೆ ಪ್ರಜಾಪ್ರಭುತ್ವ ವಿರೋಧಿ ಎಂದು ಹೇಳಿದವರು, ಇಂದು ಸಂಘಟನೆ ಯೊಂದರಿಂದ ದಾಖಲೆ ಕೇಳುವುದನ್ನು ಪಾರದರ್ಶಕತೆ ಎಂದು ಕರೆಯುತ್ತಿದ್ದಾರೆ.
ಕಾನೂನು ಎಲ್ಲರಿಗೂ ಒಂದೇ ಆಗಿದ್ದರೆ ಮಾನದಂಡವೂ ಒಂದೇ ಆಗಬೇಕು. ದಾಖಲೆ ಪರಿಶೀಲನೆ ಪ್ರಜಾಪ್ರಭುತ್ವದ ಭಾಗವೆಂದರೆ ಅದು ಎಲ್ಲರಿಗೂ ಅನ್ವಯಿಸಬೇಕು. ಆದ್ದರಿಂದ ಮಾನ್ಯ ಸಚಿವರ ಪತ್ರವು ಈ ರೀತಿಯ ಶಕ್ತಿಗಳ ಕಳೆದ ಕೆಲವು ವರ್ಷಗಳ ದ್ವಂದ್ವ ರಾಜಕೀಯ ನಿಲುವುಗಳನ್ನೇ ಮತ್ತೆ ಸಾರ್ವಜನಿಕ ಚರ್ಚೆಗೆ ತಂದು ನಿಲ್ಲಿಸಿದೆ. ಕಾಗಜ್ ನಹೀ ದಿಖಾಯೇಂಗೆಯಿಂದ ದಾಖಲೆ ತೋರಿಸಿವರೆಗೆ ಈ ದ್ವಂದ್ವ ಮುಂದುವರಿಯುತ್ತಲೇ ಇದೆ.