Raghava Sharma Nidle Column: ವಿಜಯೇಂದ್ರರೊಬ್ಬರನ್ನೇ ಹೊಣೆ ಮಾಡುವುದೇಕೆ ?
ದೇಶದಲ್ಲಿ ಪೊಲಿಟಿಕಲ್ ಡೈನಾಮಿಕ್ಸ್‌ಗಳು ಬದಲಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಹಳೆತಲೆ ಗಳಿಗೆ ದೊಡ್ಡ ಹುದ್ದೆಯನ್ನು ನೀಡುವ ಮನಸ್ಸಿನಲ್ಲಂತೂ ಹೈಕಮಾಂಡ್ ಇದ್ದಂತಿಲ್ಲ. ಆದರೆ, ವಿಧಾನ ಪರಿಷತ್ ಚುನಾವಣೆಯನ್ನು ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಆರ್.ಅಶೋಕ್ ನಿರ್ವಹಿಸಿದ ರೀತಿ ಮತ್ತು ಬಿಜೆಪಿ ಶಾಸಕರ ಅಡ್ಡಮತದಾನ ತಡೆಯುವಲ್ಲಿ ನಾಯಕತ್ವ ವಿಫಲವಾಗಿರುವುದು ದಿಕ್ಕೆಟ್ಟು ಕೂತಿರುವ ಪಕ್ಷನಿಷ್ಠ ಮತ್ತು ತಟಸ್ಥ ಕಾರ್ಯಕರ್ತ ವರ್ಗದ ನೋವನ್ನು ಮತ್ತಷ್ಟು ಗಾಢವಾಗಿಸಿದೆ
-
ಜನಪಥ
ಹಿಂದೆ ಜೆಡಿಎಸ್- ಕಾಂಗ್ರೆಸ್ ದೋಸ್ತಿ ಸರಕಾರ ಪತನಗೊಂಡು, ಬಿಜೆಪಿ ಅಧಿಕಾರಕ್ಕೇರಲು ಆಪರೇಷನ್ ಕಮಲ ಕಾರಣವಾಗಿತ್ತು. ಈಗ ಇಂಥದ್ದೇ ಕಾರ್ಯಾಚರಣೆಗೆ ತಮ್ಮ ಪಕ್ಷವೇ ತುತ್ತಾಗಿರುವುದು ಬಿಜೆಪಿ ನಾಯಕರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ದೇಶಾದ್ಯಂತ ಪ್ರಾದೇಶಿಕ ಪಕ್ಷಗಳ ನಾಯಕರು ಕಮಲ ಮುಡಿಗೇರಿಸಿಕೊಳ್ಳುತ್ತಿರುವಾಗ ಕರ್ನಾಟಕದಲ್ಲಿ ತದ್ವಿರುದ್ಧ ಬೆಳವಣಿಗೆ ರಾಜ್ಯಕ್ಕಿಂತ ಕೇಂದ್ರ ನಾಯಕರಿಗೆ ಮುಜುಗರ ತಂದಿದೆ.
2023ರ ನವೆಂಬರ್ ತಿಂಗಳಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರು ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾದ ದಿನದಿಂದಲೂ ಪಕ್ಷದ ಕೆಲವು ಹಳೆ ತಲೆಗಳು ಅವರ ಮೇಲೆ ಕಣ್ಣಿಟ್ಟಿದ್ದರು. ಮೇಲಾಗಿ ಅನುಭವದಲ್ಲಿ, ವಯಸ್ಸಿನಲ್ಲಿ ಕಿರಿಯನಾಗಿದ್ದವ ನಿಗೆ ದೊಡ್ಡ ಹುದ್ದೆ ಸಿಕ್ಕಿದ್ದು ಅವರಿಗೆ ಅರಗಿಸಿಕೊಳ್ಳಲಾಗಲಿಲ್ಲ. ಅವರ ಅಸಹಕಾರ, ಅಸಹನೆಗಳು ಈಗಲೂ ಮುಂದುವರಿಯುತ್ತಿವೆ.
ಈ ವರ್ಷದ ನವೆಂಬರ್ ತಿಂಗಳಿಗೆ ವಿಜಯೇಂದ್ರರ ಮೂರು ವರ್ಷಗಳ ಅವಧಿ ಪೂರ್ಣಗೊಳ್ಳುತ್ತಲೇ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಸೂಕ್ತ ವ್ಯಕ್ತಿಗೆ ಜವಾಬ್ದಾರಿಗಳನ್ನು ನೀಡಬೇಕು ಎಂಬ ಸಂದೇಶವನ್ನು ವಿರೋಧಿ ಬಣ ಈಗಾಗಲೇ ಹೈಕಮಾಂಡ್‌ಗೆ ಹಲವು ಬಾರಿ ಕಳುಹಿಸಿಕೊಟ್ಟಿದೆ.
ದೇಶದಲ್ಲಿ ಪೊಲಿಟಿಕಲ್ ಡೈನಾಮಿಕ್ಸ್‌ಗಳು ಬದಲಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಹಳೆತಲೆ ಗಳಿಗೆ ದೊಡ್ಡ ಹುದ್ದೆಯನ್ನು ನೀಡುವ ಮನಸ್ಸಿನಲ್ಲಂತೂ ಹೈಕಮಾಂಡ್ ಇದ್ದಂತಿಲ್ಲ. ಆದರೆ, ವಿಧಾನಪರಿಷತ್ ಚುನಾವಣೆಯನ್ನು ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಆರ್. ಅಶೋಕ್ ನಿರ್ವಹಿಸಿದ ರೀತಿ ಮತ್ತು ಬಿಜೆಪಿ ಶಾಸಕರ ಅಡ್ಡಮತದಾನ ತಡೆಯುವಲ್ಲಿ ನಾಯಕತ್ವ ವಿಫಲ ವಾಗಿರುವುದು ದಿಕ್ಕೆಟ್ಟು ಕೂತಿರುವ ಪಕ್ಷನಿಷ್ಠ ಮತ್ತು ತಟಸ್ಥ ಕಾರ್ಯಕರ್ತ ವರ್ಗದ ನೋವನ್ನು ಮತ್ತಷ್ಟು ಗಾಢವಾಗಿಸಿದೆ. ಹೀಗಾಗಿ, ಬದಲಾವಣೆಗೆ ಮನಸ್ಸು ಮಾಡಲೇಬೇಕಾದ ಅನಿವಾರ್ಯ ಸ್ಥಿತಿ ಹೈಕಮಾಂಡ್ ಮುಂದಿದೆ ಎಂಬ ಮಾತುಗಳು ಪಕ್ಷದ ಅಂಗಳದಲ್ಲಿ ಕೇಳಿ ಬರುತ್ತಿದೆ.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಅಡ್ನಾಡಿಗಳು ಯಾರು ಎಂಬುದು ಪತ್ತೆ ಹಚ್ಚುವುದು ಕಷ್ಟ. ಬಿ.ವೈ.ವಿಜಯೇಂದ್ರ ಮತ್ತು ಆರ್. ಅಶೋಕ್‌ಗೆ ಅಡ್ಡ ಮತದಾನದ ಬಗ್ಗೆ ಮೊದಲೇ ಸುಳಿವಿತ್ತೇ? ಸುಳಿವಿದ್ದರೂ ಸುಮ್ಮನೇ ಕೂತರೇ ಎಂಬ ಅನುಮಾನ ಕೆಲವರನ್ನು ಕಾಡುತ್ತಿದ್ದರೆ, ವಿಜಯೇಂದ್ರರ ನಾಯಕತ್ವಕ್ಕೆ ಮಸಿ ಬಳಿಯಲು ಇದೇ ಒಳ್ಳೆಯ ಅವಕಾಶ ಎಂದು ಅವರ ವಿರೋಧಿ ಬಣದ ಹಳೆ ತಲೆಗಳೇ ಕೆಲ ಶಾಸಕರಿಂದ ಅಡ್ಡ ಮತದಾನ ಮಾಡಿಸಿರಲೂ ಬಹುದು ಎಂಬ ಸಂಶಯವೂ ಅನೇಕರಲ್ಲಿದೆ. ಈ ನಡುವೆ, ಬಿಜೆಪಿಯ ಕೆಲ ಶಾಸಕರನ್ನು ಕಾಂಗ್ರೆಸ್‌ನ ಪ್ರಮುಖ ನಾಯಕರೇ ಸಂಪರ್ಕಿಸಿ ಹಣದ ಆಮಿಷವೊಡ್ಡಿ ಅಥವಾ ಅವರಿಗೆ ಕೇಸುಗಳ ಬಗ್ಗೆ ಹೆದರಿಸಿ ಅಡ್ಡ ಮತದಾನ ಮಾಡಿಸಿರಬಹುದು.
ಇದನ್ನೂ ಓದಿ: Raghava Sharma Nidle Column: ಒಂದು ವೋಟಿನ ಕರಾಮತ್ತು ಹೇಗಿದೆ ನೋಡಿ...!
ಹೇಗೂ ಅಡ್ಡ ಮತದಾನ ಮಾಡಿದ್ದು ಗೊತ್ತಾಗುವುದಿಲ್ಲ. ಹಾಗಾಗಿ, ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್‌ಗೆ ನೆರವಾಗಿರಬಹುದು. ಅದೇನೇ ಇರಲಿ, ಪರಿಷತ್ ಹಿನ್ನಡೆ ವಿಜಯೇಂದ್ರ ಇಮೇಜ್‌ಗೆ ಡ್ಯಾಮೇಜ್ ಮಾಡಿರುವುದು ಸುಳ್ಳಲ್ಲ. ಬಿಜೆಪಿ ಶಾಸಕರು ಪಕ್ಷದ ಅಧ್ಯಕ್ಷರ ಮಾತನ್ನು ಕೇಳುವ ಸ್ಥಿತಿಯಲ್ಲಿಲ್ಲ ಮತ್ತು ಅಧ್ಯಕ್ಷರು ಅವರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ವಿಫಲರಾಗು ತ್ತಿದ್ದಾರೆ. ಇದು ಸಂಘಟನೆಯ ಸೋಲು ಕೂಡ ಹೌದು. ಇದನ್ನೇ ಮುಂದಿಟ್ಟುಕೊಂಡು, ಅಧ್ಯಕ್ಷ ಸ್ಥಾನದಿಂದ ಅವರನ್ನು ಕೆಳಗಿಳಿಸಬೇಕೆಂಬ ವಿರೋಧಿ ಬಣದ ಒತ್ತಾಯಕ್ಕೆ ಬಲ ಸಿಕ್ಕಿದಂತಾಗಿದೆ.
ಹಿಂದೆ ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರಕಾರ ಪತನಗೊಂಡು, ಬಿಜೆಪಿ ಅಧಿಕಾರಕ್ಕೇರಲು ಆಪರೇಷನ್ ಕಮಲ ಕಾರಣವಾಗಿತ್ತು ಎನ್ನುವುದು ಗುಟ್ಟಿನ ವಿಷಯವೇನಲ್ಲ. ಕಂಪೌಂಡ್ ಮೇಲೆ ಕುಳಿತು ಅಲ್ಲಿಂದಿಲ್ಲಿಗೆ ಹಾರುವ ಶಾಸಕರನ್ನು ಗುರುತಿಸಿ, ಅವರ ಜೇಬು ತುಂಬಿಸಿಯೇ ಬಿಜೆಪಿಗೆ ಬೆಂಬಲ ಪಡೆದುಕೊಳ್ಳಲಾಗಿತ್ತು. ಬಂದ ಶಾಸಕರಿಗೆ ಹಣ ನೀಡಲಾಗಿತ್ತು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರು ನೀಡಿರುವ ಹೇಳಿಕೆ ಆಧಾರರಹಿತ ಎಂದು ದೇವರ ಮುಂದೆ ಪ್ರಮಾಣ ಮಾಡಿ ಹೇಳಿ ಎಂದು ಸವಾಲು ಹಾಕಿದರೆ ಬಹುಶಃ ಯಾರೂ ಕೂಡ ಪ್ರಮಾಣ ಮಾಡಲು ಮುಂದೆ ಬರಲಿಕ್ಕಿಲ್ಲ. ಏಕೆಂದರೆ, ವಾಸ್ತವ ಅವರೆಲ್ಲರಿಗೂ ತಿಳಿದಿದೆ. ಅನ್ಯ ಪಕ್ಷದ ಶಾಸಕರನ್ನು ತಮ್ಮತ್ತ ಸೆಳೆಯಲು ಕಾರ್ಯಾಚರಣೆ ನಡೆಸಿದ್ದ ನಾಯಕರೊಬ್ಬರು ಹಿಂದೊಮ್ಮೆ ದೆಹಲಿಯಲ್ಲಿ ಸಿಕ್ಕಿದ್ದಾಗ, ಕಾರ್ಯಾಚರಣೆಯನ್ನು ಹೇಗೆ ನಡೆಸಲಾಯಿತು ಎಂಬುದನ್ನು ಭಾರೀ ದೊಡ್ಡ ಸಾಹಸ ಮಾಡಿದ್ದೇವೆ ಎಂಬಂತೆ ಹೇಳಿಕೊಂಡಿದ್ದರು. ಹೀಗಾಗಿ, ಈಶ್ವರಪ್ಪನವರ ಮಾತು ಹಸಿ ಸುಳ್ಳು ಎಂದು ನಾನಂತೂ ಹೇಳಲಾರೆ!
ಈಗ ಇಂಥದ್ದೇ ಕಾರ್ಯಾಚರಣೆಗೆ ತಮ್ಮ ಪಕ್ಷವೇ ತುತ್ತಾಗಿರುವುದು ಬಿಜೆಪಿ ನಾಯಕರಿಗೆ ಅರಗಿಸಿ ಕೊಳ್ಳಲಾಗುತ್ತಿಲ್ಲ. ದೇಶಾದ್ಯಂತ ಪ್ರಾದೇಶಿಕ ಪಕ್ಷಗಳ ಜನಪ್ರತಿನಿಧಿಗಳು, ಮುಖಂಡರು, ಕಾರ್ಯ ಕರ್ತರು ಕಮಲವನ್ನು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಮುಡಿಗೇರಿಸಿ ಕೊಳ್ಳುತ್ತಿರುವಾಗ ಕರ್ನಾಟಕದಲ್ಲಿ ಅದಕ್ಕೆ ತದ್ವಿರುದ್ಧ ಬೆಳವಣಿಗೆ ನಡೆಯುತ್ತಿರುವುದು ರಾಜ್ಯ ನಾಯಕರಿಗಿಂತ ಹೆಚ್ಚು ಕೇಂದ್ರ ಬಿಜೆಪಿ ನಾಯಕರಿಗೆ ಮುಜುಗರ ಉಂಟುಮಾಡುತ್ತಿದೆ. ದಿಕ್ಕೆಟ್ಟ ಕರ್ನಾಟಕ ಬಿಜೆಪಿಗೆ ದಿಕ್ಕು ತೋರಿಸಲು ಹೈಕಮಾಂಡಿಗೂ ಸಾಧ್ಯವಾಗದಿರುವುದರಿಂದ ಪಕ್ಷನಿಷ್ಠ ಕಾರ್ಯಕರ್ತರು ಮೌನಕ್ಕೆ ಜಾರಿದ್ದಾರೆ. ನಾಯಕರ ಗುಂಪುಗಾರಿಕೆಯಿಂದ ಹಾನಿಯಾಗುತ್ತಿರುವುದು ಪಕ್ಷಕ್ಕೆ. ನಾಯಕರ ಒಣ ಪ್ರತಿಷ್ಠೆಯಿಂದ ಪಕ್ಷ ಹೊಡೆತ ತಿನ್ನುತ್ತಾ ಬಡವಾಗಿದೆ ಎನ್ನುವುದು ಅವರ ಅಳಲು.
ಅಡ್ಡ ಮತದಾನ ಯಾರು ಮಾಡಿದ್ದಾರೆ ಎನ್ನುವುದು ಧರ್ಮಸ್ಥಳದಲ್ಲಿ ಆಣೆ ಪ್ರಮಾಣದ ಮೂಲಕ ಸಾಬೀತಾಗಲಿ ಎಂಬ ವಿಜಯೇಂದ್ರ ಹೇಳಿಕೆ ಹಿಂದೆ ಹತಾಶೆ, ಬೇಸರ ತುಂಬಿದ್ದರೂ, ನಾಯಕನ ಸ್ಥಾನದಲ್ಲಿರುವ ವ್ಯಕ್ತಿಯಿಂದ ಈ ಹೇಳಿಕೆಯನ್ನು ಯಾರೂ ನಿರೀಕ್ಷಿಸಿರಲಿಲ್ಲ. ಧರ್ಮಸ್ಥಳ ಆಣೆ-ಪ್ರಮಾಣದ ಸವಾಲು ಹಾಕಿ ಎಂದು ಯಾವ ಪುಣ್ಯಾತ್ಮ ಅವರ ತಲೆಗೆ ಹಾಕಿದರೋ ಗೊತ್ತಿಲ್ಲ. ಬಿಜೆಪಿಯ ಈ ದುಃಸ್ಥಿತಿ ಬಗ್ಗೆ ಯಡಿಯೂರಪ್ಪನವರ ಗುಂಪಿನಲ್ಲಿದ್ದ ಹಿರಿಯ ನಾಯಕರೊಬ್ಬರಿಗೆ ಫೋನಾಯಿಸಿ, ಏನು ಸಾರ್, ನಿಮ್ಮ ಪಕ್ಷಕ್ಕೆ ಯಾಕೆ ಈ ಗತಿ ಬಂತು ಎಂದು ನಾನು ಕೇಳಿದೆ.
ದೇವಸ್ಥಾನದ ಪರಿಕಲ್ಪನೆಯನ್ನೇ ಹಾಳು ಮಾಡುವ ಮಾತುಗಳನ್ನು ಯಾಕಾದರೂ ಈ ರಾಜಕಾರಣಿ ಗಳು ಆಡುತ್ತಾರೋ ಅರ್ಥವಾಗದು. ಬದಲಿಗೆ, ಎಲ್ಲಾ ಬಿಜೆಪಿ ಶಾಸಕರಿಗೆ ನಾರ್ಕೋ ಅನಾಲಿಸಿಸ್ ಮಾಡುತ್ತೇವೆ ಎಂದು ವಿಜಯೇಂದ್ರರು ಹೇಳಬೇಕಿತ್ತು. ದುಡ್ಡಿನ ವ್ಯವಹಾರ ಆಗಿದೆ ಎಂದರೆ ಸಿಬಿಐ ಅಥವಾ ಇಡಿ ತನಿಖೆಯಾಗಲಿ. ಕೋಟಿ ಹಣ ವ್ಯವಹಾರ ಆಗಿದೆ ಎಂದರೆ ಇಡಿ ಬರಬೇಕಿತ್ತು, ಅಲ್ಲವೇ ಎಂದವರು ಪ್ರಶ್ನಿಸಿದರು. ವಿಜಯೇಂದ್ರ ಹತಾಶೆಯಿಂದ ಹಾಗೆ ಹೇಳಿರಬಹುದಲ್ಲವೇ ಎಂಬ ನನ್ನ ಮಾತಿಗೆ, ಹತಾಶರಾಗಿದ್ದರೆ ಪಕ್ಷವನ್ನು ಏಕೆ ದೇವಸ್ಥಾನಕ್ಕೆ ಎಳೆಯಬೇಕು? ವಿಜಯೇಂದ್ರರದ್ದು ವೈಯಕ್ತಿಕ ಸಮಸ್ಯೆಯಾಗಿದ್ದರೆ ನಾವು ಕೇಳುತ್ತಿರಲಿಲ್ಲ. ಆದರೆ, ಅಧ್ಯಕ್ಷರಾಗಿ ಪಕ್ಷವನ್ನು ನಗೆಪಾಟಲಿ ಗೀಡು ಮಾಡುವುದು ಎಷ್ಟು ಸರಿ? ಈಗಾಗಲೇ ನಾವು ನಗೆಪಾಟಲಿಗೀಡಾಗಿ, ಜನರ ಮುಂದೆ ನಿತ್ಯವೂ ಬೆತ್ತಲಾಗುತ್ತಿದ್ದೇವೆ.
ಕಾರ್ಯಕರ್ತರ ಶಾಪಕ್ಕೆ ಗುರಿಯಾಗಿದ್ದೇವೆ. ಸಾಮಾಜಿಕ ಜಾಲತಾಣದಲ್ಲಂತೂ ಜನರು ..ಛೀ..ಥೂ.. ಎಂದು ಉಗಿಯುತ್ತಿದ್ದಾರೆ. ಹೀಗಿದ್ದಾಗ, ನಾಯಕನಾದವನು ನಮ್ಮ ಮರ್ಯಾದೆ ಉಳಿಸಲು ನೋಡಬೇಕು. ಇಲ್ಲವಾದಲ್ಲಿ, ಈಗಿರುವ ಸ್ಥಿತಿಯನ್ನು ಹಾಗೆ ಕಾಪಿಟ್ಟುಕೊಳ್ಳಲಾದರೂ ಪ್ರಯತ್ನಿಸ ಬೇಕು ಎಂದು ಸಿಡಿಮಿಡಿಗೊಂಡರು.
2021ರಲ್ಲಿ ಯಡಿಯೂರಪ್ಪನವರು ಹೈಕಮಾಂಡ್ ಒತ್ತಾಯಕ್ಕೆ ಮಣಿದು ಮುಖ್ಯಮಂತ್ರಿ ಸ್ಥಾನಕ್ಕೆ ಭಾರದ ಹೃದಯದಿಂದ ರಾಜೀನಾಮೆ ನೀಡಿದ್ದರು. ಆಗ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದರು. ಯಡಿಯೂರಪ್ಪನವರ ರಾಜೀನಾಮೆಗೆ ಕಾರಣವೇನು ಎಂಬು ದನ್ನು ಹೈಕಮಾಂಡ್ ಅಥವಾ ರಾಜ್ಯ ಬಿಜೆಪಿ ನಾಯಕರು ಬಹಿರಂಗಪಡಿಸಲಿಲ್ಲ. ಹೈಕಮಾಂಡ್ ನನ್ನ ರಾಜೀನಾಮೆ ಪಡೆದಿಲ್ಲ. ಹೊಸಬರಿಗೆ ಅವಕಾಶ ನೀಡುವ ಸಲುವಾಗಿ ರಾಜೀನಾಮೆ ನೀಡು ತ್ತಿದ್ದೇನೆ ಎಂದು ವಿಧಾನಸಭೆಯಲ್ಲಿ ಭಾಷಣ ಮಾಡಿದ್ದಾಗ ಯಡಿಯೂರಪ್ಪ ನವರ ಕಣ್ಣಾಲಿಗಳು ಒದ್ದೆಯಾಗಿದ್ದವು. ತಮ್ಮ ರಾಜೀನಾಮೆಗೆ ಕಾರಣವೇನು ಎನ್ನುವುದು ಅವರಂತೆ ಸದನದಲ್ಲಿ ಕುಳಿತಿದ್ದ ಎಲ್ಲಾ ಜನಪ್ರತಿನಿಧಿಗಳಿಗೂ ತಿಳಿದಿತ್ತು.
ಆದರೆ ಬಹಿರಂಗವಾಗಿ ಹೇಳುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ. ಬಿಜೆಪಿಯಲ್ಲಿದ್ದ ಬಿಎಸ್‌ವೈ ವಿರೋಧಿ ಬಣ ಅಂದು ಬಿಎಸ್‌ವೈ ರಾಜೀನಾಮೆಯನ್ನು ಸಂಭ್ರಮಿಸಿತ್ತು ಕೂಡ. 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಜ್ಯಾಧ್ಯಕ್ಷ ಹುದ್ದೆಗೆ ಬಿಎಸ್‌ವೈ ಪುತ್ರ ವಿಜಯೇಂದ್ರರನ್ನು ಆಯ್ಕೆ ಮಾಡಿದ್ದು ಅನೇಕರಿಗೆ ಸಹಿಸಿಕೊಳ್ಳಲಾಗಲಿಲ್ಲ. ಇವರನ್ನು ಅಧ್ಯಕ್ಷರನ್ನಾಗಿ ಮಾಡುವು ದಾದರೆ ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಏಕೆ ಕೆಳಗಿಳಿಸಬೇಕಿತ್ತು ಎಂದು ವಿರೋಧಿಗಳು ಮುನಿಸಿಕೊಂಡರು.
ಆದರೆ, ಪಕ್ಷದ ಬೆಂಬಲಿಗರ ವಲಯದಲ್ಲಿ ಮತ್ತು ಮುಖ್ಯವಾಗಿ ಲಿಂಗಾಯತ ವೋಟ್ ಬ್ಯಾಂಕ್ ರಕ್ಷಣೆಗೆ ಯಡಿಯೂರಪ್ಪನವರ ಪ್ರಭಾವಳಿ ಮುಖ್ಯ ಎಂದು ಮತ್ತೊಮ್ಮೆ eನೋದಯವಾದ್ದರಿಂದ ಹಾಗೂ ಯಡಿಯೂರಪ್ಪನವರಿಂದ ಸಿಎಂ ಸ್ಥಾನವನ್ನು ಕಸಿದುಕೊಳ್ಳಲಾಯಿತು ಎಂಬ ಲಿಂಗಾಯತ ಸಮುದಾಯದ ಆಕ್ರೋಶ/ಆರೋಪ ತಣಿಸಲು ವಿಜಯೇಂದ್ರರಿಗೆ ಸ್ಥಾನ ನೀಡಲು ಹೈಕಮಾಂಡ್ ಮುಂದಾಗಿತ್ತು. ಆದರೆ, ಏನೇ ಆಗಲಿ, ಬಂದದ್ದನ್ನು ಎದುರಿಸೋಣ, ವಿಜಯೇಂದ್ರರಿಗೆ ಬೇರೆ ಗೌರವಯುತ ಸ್ಥಾನಮಾನ ನೀಡಿ ಮನವೊಲಿಸೋಣ ಎಂಬ ಸಾಹಸಮಯ ನಿರ್ಧಾರ ತೆಗೆದುಕೊಳ್ಳುವ ಧೈರ್ಯವನ್ನು ಹೈಕಮಾಂಡ್ ಪ್ರದರ್ಶಿಸಲಿಲ್ಲ.
ಹಾಗಾಗಿ, ಈಗ ಆಗುತ್ತಿರುವ ಎಲ್ಲಾ ಅನಾಹುತಗಳಿಗೆ ವಿಜಯೇಂದ್ರರೇ ಕಾರಣ ಎಂದು ಗೂಬೆ ಕೂರಿಸುವ ಬದಲು ಕರ್ನಾಟಕದ ವಿಷಯದಲ್ಲಿ ದಿಲ್ಲಿ ನಾಯಕರ ದೂರದೃಷ್ಟಿಯ ಕೊರತೆಯೂ ಕಾರಣ ಎನ್ನುವುದನ್ನೂ ಒಪ್ಪಬೇಕಲ್ಲವೇ? ಹೋಗಲಿ, ವಿಜಯೇಂದ್ರರನ್ನು ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ಅವರು ಯುವ ನಾಯಕ, ಉಜ್ವಲ ಭವಿಷ್ಯವಿದೆ. ಅವರಿಗೆ ಸಹಕಾರ ನೀಡುತ್ತಾ ಪಕ್ಷ ಸಂಘಟನೆ ಬಲಗೊಳಿಸಬೇಕು. ವಿನಾಕಾರಣ ಕಾಲೆಳೆಯುವ ರಾಜಕಾರಣ ಮಾಡಬೇಡಿ. ಅದೇ ನಿಮ್ಮ ಆದ್ಯತೆಯಾಗಿದ್ದರೆ ನೀವು ಪಕ್ಷ ಬಿಡಬಹುದು. ನೀವಿಲ್ಲದಿದ್ದರೂ ಪಕ್ಷ ಮುನ್ನಡೆಯುತ್ತದೆ ಎಂದು ರಾಜ್ಯ ಬಿಜೆಪಿಯ ಹಿರಿ/ಕಿರಿ ತಲೆಗಳಿಗೆ ದಿಲ್ಲಿ ನಾಯಕರು ಎಚ್ಚರಿಕೆ ನೀಡಬಹುದಿತ್ತು. ಆದರೆ, ಅದನ್ನೂ ಮಾಡಲಿಲ್ಲ. ಯಡಿಯೂರಪ್ಪ ಮತ್ತು ಪುತ್ರ ವಿಜಯೇಂದ್ರರ ವಿರುದ್ಧ ಶಾಸಕ ಬಸನಗೌಡ ಪಾಟಿಲ್ ಯತ್ನಾಳ್ ನಿತ್ಯವೂ ಆರೋಪಗಳನ್ನು ಮಾಡುತ್ತಿದ್ದರೂ ಹೈಕಮಾಂಡ್ ಸುಮ್ಮನೆ ಕುಳಿತಿತ್ತು. ಪಕ್ಷಕ್ಕೆ ಪೂರ್ತಿ ಹಾನಿಯಾದ ಮೇಲೆ ಅವರ ವಿರುದ್ಧ ಉಚ್ಛಾಟನೆಯ ಕ್ರಮ ಕೈಗೊಳ್ಳ ಲಾಯಿತು.
ಈಗಲೂ, ಒಂದು ಬಣ ವಿಜಯೇಂದ್ರ ವಿರುದ್ಧ ಬುಸುಗುಡುತ್ತಲೇ ಇದೆ. ಮುಂದೆಯೂ ವಿಜಯೇಂದ್ರ ರನ್ನೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸುವ ಉದ್ದೇಶ ಹೈಕಮಾಂಡಿಗಿದ್ದರೆ ಆ ಬಗ್ಗೆ ಕ್ಲಾರಿಟಿ ನೀಡುವುದು ಮಾತ್ರವಲ್ಲ, ಪಕ್ಷ ಮೊದಲು ನಂತರ ನೀವು ಎಂದು ವಿರೋಧಿ ಬಣಕ್ಕೆ ಇನ್ನಾದರೂ ಎಚ್ಚರಿಕೆ ನೀಡಬೇಕು. ರಾಜ್ಯಕ್ಕೆ ಪ್ರಬಲ ವಿಪಕ್ಷ ಬೇಕು ಎಂಬ ಸಾರ್ವಜನಿಕ ಹಿತದೃಷ್ಟಿ ಯಿಂದಾದರೂ ಹೈಕಮಾಂಡ್ ಇಂಥದ್ದೊಂದು ದಿಟ್ಟ ನಡೆ ಪ್ರದರ್ಶಿಸಬೇಕು ಎಂದು ಪಕ್ಷದ ತಟಸ್ಥ ಬಣ ಬಯಸುತ್ತಿದೆ.
ರಾಜ್ಯದ ಹೊಸ ಸಿಎಂ ಡಿ.ಕೆ.ಶಿವಕುಮಾರ್ ಅವರು ಸ್ಟ್ರೀಟ್ ಸ್ಮಾರ್ಟ್ ಪೊಲಿಟಿಷಿಯನ್. ರಾಜಕೀಯ ಪರಿಸ್ಥಿತಿಗೆ ತಕ್ಕಂತೆ ಎಲ್ಲಿ, ಹೇಗೆ ಬಾಣ ಬಿಡಬೇಕು ಎಂಬ ಕಲೆ ಅವರಿಗೆ ಚೆನ್ನಾಗಿ ಕರಗತವಾಗಿದೆ. ೫೫ ದಿನ ತಿಹಾರ್ ಜೈಲುವಾಸ ಅನುಭವಿಸಿದ ನಂತರ ಕರ್ನಾಟಕಕ್ಕೆ ವಾಪಸಾಗಿ ಪಕ್ಷದ ಸಾರಥ್ಯ ವಹಿಸಿಕೊಂಡು, ಬಿಜೆಪಿಯ ಬೆದರಿಕೆ/ಆಮಿಷಗಳ ಹೊರತಾಗಿಯೂ ಪಕ್ಷ ಸಂಘಟನೆ ಬಲಗೊಳಿಸಿ, ಕಾಂಗ್ರೆಸನ್ನು ಅಧಿಕಾರಕ್ಕೆ ತರಲು ಅವರು ಹಾಕಿದ ಪರಿಶ್ರಮ ನಿಜಕ್ಕೂ ಅಧ್ಯಯನ ಯೋಗ್ಯ. ಹಣಕಾಸು ಸಂಪನ್ಮೂಲದ ಬಲವೂ ಡಿಕೆಶಿ ಬೆನ್ನಿಗಿದೆ.
ಸದ್ಯ ಬಿಡದಿ ಟೌನ್‌ಶಿಪ್ ಯೋಜನೆ ‘ಡಿಕೆಶಿ ವಿರೋಧಿ ಅಭಿಯಾನ’ಕ್ಕೆ ಹೊಸ ಶಕ್ತಿ ತುಂಬಬಹುದು. ಆದರೆ, ಅದನ್ನು ಅಷ್ಟೇ ಸ್ಮಾರ್ಟ್ ಆಗಿ ನಿರ್ವಹಿಸುವ ಸಾಮರ್ಥ್ಯ ಅವರಲ್ಲಿ ಇಲ್ಲದೇನಿಲ್ಲ. ಇದೇ ಕಾರಣಕ್ಕೆ, ಸಿದ್ದರಾಮಯ್ಯರೇ ಸಿಎಂ ಸ್ಥಾನದಲ್ಲಿ ಮುಂದುವರಿಯುವುದು ರಾಜಕೀಯವಾಗಿ ನಮಗೆ ಲಾಭ.
ಶಿವಕುಮಾರ್ ಮುಖ್ಯಮಂತ್ರಿಯಾದರೆ, ಅವರೇ ನಮಗೆ ದೊಡ್ಡ ಸವಾಲಾಗಬಲ್ಲರು. ಹಿಂದು ಮತಗಳ ಕ್ರೋಢೀಕರಣಕ್ಕೂ ಅಡ್ಡಿಯಾಗಬಲ್ಲರು ಎಂದು ಬಿಜೆಪಿಯೊಳಗೇ ಅನೇಕ ಬಾರಿ ಚರ್ಚೆ ಯಾಗಿದ್ದುಂಟು. ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಗೆ ಅನುಕೂಲಕರವಾದ, ಪೂರಕ ರಾಜಕೀಯ ವಾತಾವರಣ ಕರ್ನಾಟಕದಲ್ಲಿಲ್ಲ.
ಆದರೆ, ವಾತಾವರಣ ಬದಲಿಸುವ ಶಕ್ತಿ/ಸಾಮರ್ಥ್ಯವುಳ್ಳ ನಾಯಕತ್ವ ಹಾಗೂ momentum shift ಮಾಡಿಸುವ ಆಕ್ರಮಣಕಾರಿ ಕಾರ್ಯತಂತ್ರಗಳು ಕಳೆಗುಂದಿದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ, ಹುರುಪನ್ನು ವೃದ್ಧಿಸಬಲ್ಲದು. ಚುನಾವಣೆಯಲ್ಲಿ ರಾಜ್ಯದ ಪ್ರಬಲ ಲಿಂಗಾಯತ ಸಮುದಾಯದ ವೋಟಿಂಗ್ ಪ್ಯಾಟರ್ನ್ ಹೇಗಿರುತ್ತದೆ ಎಂಬುದು ಇತ್ತೀಚಿನ ಉಪಚುನಾವಣೆ ಫಲಿತಾಂಶದಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಆ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗದಂತಹ ರಾಜಕೀಯ ತೀರ್ಮಾನ ಕೈಗೊಳ್ಳುವುದು ಹೈಕಮಾಂಡಿಗೆ ತಂತಿ ಮೇಲಿನ ನಡಿಗೆಯಷ್ಟೇ ಸವಾಲಿನದ್ದು. ಹೀಗಾಗಿ, ವಿಜಯೇಂದ್ರರಿಗೆ ಮತ್ತೊಂದು ಅವಕಾಶ ನೀಡಲಾಗುತ್ತದೋ ಅಥವಾ ಹೈಕಮಾಂಡ್ ಹೊಸ ಸಾಹಸಕ್ಕೆ ಮುಂದಾಗುವುದೋ ಎಂಬ ಪ್ರಶ್ನೆಗೆ ಕೆಲ ದಿನಗಳ ಉತ್ತರ ಸಿಗಬಹುದು.