ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Roopa Gururaj Column: ಹರಿಭಕ್ತಿಸಾರ: ಅಹಂಕಾರದ ಭಂಗ ಮತ್ತು ನಿಜವಾದ ಜ್ಞಾನ

ನಮ್ಮ ಬದುಕಿನಲ್ಲಿ ಸಿಗುವ ಸುಖದ ಪಾತ್ರೆ ನೀನೇ, ಹಾಗೆಯೇ ನಮ್ಮ ಪಾಪಕರ್ಮಗಳಿಂದ ಬರುವ ದುಃಖದ ಬೆಂಕಿಯೂ ನೀನೇ ಆಗಿದ್ದೀಯೆ. ಅಂದರೆ, ನಮ್ಮ ಬದುಕಿನ ಪ್ರತಿಯೊಂದು ಘಟನೆಯೂ ನಿನ್ನ ಇಚ್ಛೆಯಂತೆಯೇ ನಡೆಯುತ್ತದೆ. ಸರ್ವೋತ್ತಮನಾದ ಎಲೈ ದೇವನೇ, ನನ್ನ ಅಹಂಕಾರವನ್ನು ಸಂಪೂರ್ಣವಾಗಿ ಸುಟ್ಟು, ನಿನ್ನ ಶರಣಾಗತನಾದ ನನ್ನನ್ನು ಮತ್ತು ಈ ಜಗತ್ತನ್ನು ಕಾಯ ಕರುಣಿಸು ಪ್ರಭು!

ಹರಿಭಕ್ತಿಸಾರ: ಅಹಂಕಾರದ ಭಂಗ ಮತ್ತು ನಿಜವಾದ ಜ್ಞಾನ

-

ಒಂದೊಳ್ಳೆ ಮಾತು

(ಭಾಗ- 2)

ಬಾಡದ ಆದಿಕೇಶವನ ಅಡಿದಾವರೆಗಳಿಗೆ ಶರಣಾಗಿ ‘ಹರಿಭಕ್ತಿಸಾರ’ದ ಮೊದಲ ಪದ್ಯವನ್ನು ಬರೆದ ನಂತರ, ಕನಕದಾಸರು ಒಬ್ಬ ಪರಮ ವೈರಾಗ್ಯಶಾಲಿಯಾಗಿ ದೇಶ ಸಂಚಾರಕ್ಕೆ ಹೊರಟರು. ಲೌಕಿಕ ಸಂಪತ್ತನ್ನು ತೊರೆದಿದ್ದರೂ, ತಾನು ಒಬ್ಬ ದೊಡ್ಡ ದಂಡನಾಯಕನಾಗಿದ್ದೇ ಎಂಬ ಸೂಕ್ಷ್ಮ ಅಹಂಕಾರ ಮತ್ತು ಜಾತಿಯ ಮೇಲಿರುವ ಸಮಾಜದ ಕಣ್ಣು ಅವರನ್ನು ಪೂರ್ತಿಯಾಗಿ ಬಿಟ್ಟಿರಲಿಲ್ಲ.

ಹೀಗಿರುವಾಗ, ಅವರು ಅಂದಿನ ಪರಮ ಜ್ಞಾನಿ ಹಾಗೂ ಆಧ್ಯಾತ್ಮಿಕ ಗುರುಗಳಾದ ಶ್ರೀ ವ್ಯಾಸರಾಜರ ಕೀರ್ತಿಯನ್ನು ಕೇಳಿ ಉಡುಪಿಗೆ ಬಂದರು. ವ್ಯಾಸರಾಜರು ಕನಕರ ಭಕ್ತಿಯ ಆಳವನ್ನು ಅರಿತು ಅವರಿಗೆ ಮಂತ್ರದೀಕ್ಷೆ ನೀಡಿ, ತಮ್ಮ ಶಿಷ್ಯರನ್ನಾಗಿ ಸ್ವೀಕರಿಸಿದರು. ಆದರೆ, ವ್ಯಾಸರಾಜರ ಇತರ ಶಿಷ್ಯರಿಗೆ ಇದು ಸಹಿಸಲಾಗಲಿಲ್ಲ. ಒಬ್ಬ ಕೆಳಜಾತಿಯವನಿಗೆ ನಮ್ಮ ಗುರುಗಳು ಇಷ್ಟೊಂದು ಪ್ರಾಮು ಖ್ಯತೆ ಕೊಡುವುದೇ? ಎಂದು ಅವರು ಕನಕದಾಸರನ್ನು ಸದಾ ಕೀಳಾಗಿ ಕಾಣುತ್ತಿದ್ದರು, ಹೀಯಾಳಿಸು ತ್ತಿದ್ದರು.

ಇದನ್ನು ಗಮನಿಸಿದ ವ್ಯಾಸರಾಜರು, ಕನಕದಾಸರ ಯೋಗ್ಯತೆ ಮತ್ತು ಅವರ ಅಂತರಾಳದ ಭಕ್ತಿಯನ್ನು ಎಲ್ಲರಿಗೂ ಸಾಬೀತುಪಡಿಸಲು ಒಂದು ದಿವ್ಯ ನಾಟಕವಾಡಿದರು. ಒಂದು ದಿನ ಗುರುಗಳು ಎಲ್ಲ ಶಿಷ್ಯರನ್ನು ಕರೆದು, ತಲಾ ಒಂದೊಂದು ಬಾಳೆಹಣ್ಣನ್ನು ನೀಡಿ ಹೀಗೆ ಹೇಳಿದರು, “ಶಿಷ್ಯರೇ, ಈ ಹಣ್ಣನ್ನು ಯಾರೂ ಇಲ್ಲದ, ಯಾರ ಕಣ್ಣಿಗೂ ಬೀಳದ ಕತ್ತಲೆಯ ಜಾಗದಲ್ಲಿ ಕುಳಿತು ತಿಂದು ಬರಬೇಕು. ಇದನ್ನು ಯಾರೂ ನೋಡಬಾರದು, ನೆನಪಿರಲಿ."

ಇದನ್ನೂ ಓದಿ: Roopa Gururaj Column: ಪರಮ ಭಕ್ತ ಕನಕದಾಸರ ಹರಿಭಕ್ತಿಸಾರ ಹುಟ್ಟಿದ ಕಥೆ

ಎಲ್ಲ ಶಿಷ್ಯರು ಸಂತೋಷದಿಂದ ಹೊರಟರು. ಒಬ್ಬರು ಕೋಣೆಯ ಮೂಲೆಗೆ ಹೋಗಿ ಕದ ಮುಚ್ಚಿ ತಿಂದರೆ, ಮತ್ತೊಬ್ಬರು ಯಾರು ಇಲ್ಲದ ಕಾಡಿಗೆ ಹೋಗಿ ಮರದ ಮರೆಯಲ್ಲಿ ತಿಂದರು. ಇನ್ನು ಕೆಲವರು ಗುಹೆಯೊಳಗೆ ಹೋಗಿ ತಿಂದು ಮುಗಿಸಿ, ನಮ್ಮನ್ನು ಯಾರೂ ನೋಡಲಿಲ್ಲ ಎಂದು ಬೀಗುತ್ತಾ ಗುರುಗಳ ಬಳಿ ವಾಪಸ್ ಬಂದರು.ಆದರೆ, ಕನಕದಾಸರು ಮಾತ್ರ ಹಣ್ಣನ್ನು ಕೈಯ ಹಿಡಿದುಕೊಂಡು ಸಂಜೆಯಾದರೂ ಗುರುಗಳ ಆಶ್ರಮಕ್ಕೆ ಮರಳಿ ಬಂದರು. ಹಣ್ಣು ಹಾಗೇ ಇತ್ತು!

ಇದನ್ನು ನೋಡಿ ಉಳಿದ ಶಿಷ್ಯರು, ನೋಡಿ, ಗುರುಗಳ ಆಜ್ಞೆಯನ್ನು ಪಾಲಿಸಲು ಇವನಿಗೆ ಯೋಗ್ಯತೆ ಇಲ್ಲ! ಎಂದು ನಕ್ಕರು. ಆಗ ವ್ಯಾಸರಾಜರು, ಕನಕ, ನೀನೇಕೆ ಹಣ್ಣನ್ನು ತಿನ್ನಲಿಲ್ಲ? ಎಂದು ಕೇಳಿದರು. ಅದಕ್ಕೆ ಕನಕದಾಸರು ಕಣ್ಣೀರು ಹಾಕುತ್ತಾ ವಿನಯದಿಂದ ಕೈಮುಗಿದು ಹೀಗೆಂದರು, “ಗುರುದೇವ, ನೀವು ಯಾರೂ ನೋಡದ ಜಾಗದಲ್ಲಿ ತಿನ್ನಲು ಹೇಳಿದಿರಿ. ಎತ್ತ ಹೋದರು ಭಗವಂತ ನಿದ್ದ, ನನ್ನ ಅಂತರಾತ್ಮದಲ್ಲೂ ಅವನಿದ್ದಾನೆ. ಅವನ ಕಣ್ಣ ತಪ್ಪಿಸಿ ನಾನು ಹಣ್ಣು ತಿನ್ನುವ ಜಾಗ ಈ ಬ್ರಹ್ಮಾಂಡದಲ್ಲಿ ಎಲ್ಲಿದೆ ಪ್ರಭು? ಅದಕ್ಕೇ ತಿನ್ನಲಾಗಲಿಲ್ಲ."

ಈ ಮಾತನ್ನು ಕೇಳಿ ಉಳಿದ ಶಿಷ್ಯರ ತಲೆ ತಾನಾಗಿಯೇ ತಗ್ಗಿತು. ತಾವಷ್ಟೇ ಶ್ರೇಷ್ಠರು ಎಂಬ ಅವರ ಅಹಂಕಾರ ಕರಗಿ ನೀರಾಯಿತು. ಕನಕದಾಸರಿಗೆ ಭಗವಂತನ ಸರ್ವವ್ಯಾಪಿತ್ವದ ದರ್ಶನವಾಗಿತ್ತು. ಜಗತ್ತಿನ ಕಣ ಕಣದಲ್ಲೂ ಭಗವಂತನೇ ತುಂಬಿದ್ದಾನೆ, ಅವನನ್ನು ಬಿಟ್ಟು ಬೇರೇನೂ ಇಲ್ಲ ಎಂದು ಸಾರುವ ಕನಕದಾಸರ ಅಂತರಾಳದಿಂದ ಮೂಡಿಬಂದ ‘ಹರಿಭಕ್ತಿಸಾರ’ದ ಎರಡನೇ ಪದ್ಯ ಇಲ್ಲಿದೆ:

ಅಖಿಲ ಲೋಕದ ನಾಥ ನೀನೇ

ಸಖನು ನೀನೇ ಸರ್ವಕಾಲಕೆ

ನಿಖಿಳ ಯೋನಿಗಳೊಳಗೆ ಮುಳುಗಿಸಿ ತೇಲಿಸುವ ನೀನೇ||

ಸುಖದ ಭಾಜನ ನೀನೇ ದುಃಖದ

ಶಿಖಿಯು ನೀನೇ ಸಕಲ ಜೀವಕೆ

ಅಖಿಳ ದೇವನೆ ಕಾಯೊ ನಮ್ಮನು ಬಾಡದಾದಿಕೇಶ|| ೨||

ಪದ್ಯದ ಭಾವಾರ್ಥ:

ಎಲೈ ಬಾಡದ ಆದಿಕೇಶವನೇ, ಈ ಇಡೀ ಸೃಷ್ಟಿಗೆ ಒಡೆಯನು ನೀನೊಬ್ಬನೇ. ಕಷ್ಟ-ಸುಖಗಳ ಯಾವುದೇ ಪರಿಸ್ಥಿತಿಯಿರಲಿ, ಎಲ್ಲ ಕಾಲದಲ್ಲೂ ಕೈಬಿಡದ ನಿಜವಾದ ಗೆಳೆಯ ನೀನೇ ಆಗಿದ್ದೀಯೆ. ಈ ಜಗತ್ತಿನ ಎಂಬತ್ತನಾಲ್ಕು ಲಕ್ಷ ಜೀವರಾಶಿಗಳ ಜನ್ಮ-ಮರಣಗಳ ಚಕ್ರದಲ್ಲಿ ಜೀವಿಗಳನ್ನು ಮುಳುಗಿಸುವವನೂ ನೀನೇ, ಅದರಿಂದ ಪಾರು ಮಾಡಿ ತೇಲಿಸುವವನೂ ನೀನೇ.

ನಮ್ಮ ಬದುಕಿನಲ್ಲಿ ಸಿಗುವ ಸುಖದ ಪಾತ್ರೆ ನೀನೇ, ಹಾಗೆಯೇ ನಮ್ಮ ಪಾಪಕರ್ಮಗಳಿಂದ ಬರುವ ದುಃಖದ ಬೆಂಕಿಯೂ ನೀನೇ ಆಗಿದ್ದೀಯೆ. ಅಂದರೆ, ನಮ್ಮ ಬದುಕಿನ ಪ್ರತಿಯೊಂದು ಘಟನೆಯೂ ನಿನ್ನ ಇಚ್ಛೆಯಂತೆಯೇ ನಡೆಯುತ್ತದೆ. ಸರ್ವೋತ್ತಮನಾದ ಎಲೈ ದೇವನೇ, ನನ್ನ ಅಹಂಕಾರವನ್ನು ಸಂಪೂರ್ಣವಾಗಿ ಸುಟ್ಟು, ನಿನ್ನ ಶರಣಾಗತನಾದ ನನ್ನನ್ನು ಮತ್ತು ಈ ಜಗತ್ತನ್ನು ಕಾಯ ಕರುಣಿಸು ಪ್ರಭು!

ಈ ಕಥೆಯ ಸೂಕ್ಷ್ಮ ಅರಿತಾಗ ನಾವು ಕನಸು ಮನಸ್ಸಿನಲ್ಲೂ ಕೆಟ್ಟ ಯೋಚನೆ ಮಾಡುವುದಿಲ್ಲ. ನಾನು ನನ್ನಿಂದ ಎನ್ನುವ ಅಹಂಕಾರವೂ ನಮ್ಮಲ್ಲಿರುವುದಿಲ್ಲ ಅಲ್ಲವೇ ?