ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Roopa Gururaj Column: ಹರಿಭಕ್ತಿಸಾರ: ಸರ್ವಸಮರ್ಪಣಾ ಭಾವವೇ ಪರಮೋಚ್ಚ ಜ್ಞಾನ

ಉಡುಪಿಯ ಶ್ರೀಕೃಷ್ಣನೇ ಗೋಡೆಯನ್ನು ಸೀಳಿ ದರ್ಶನ ನೀಡಿದ ಮೇಲೆ, ಕನಕದಾಸರ ಕೀರ್ತಿ ನಾಡಿ ನಾದ್ಯಂತ ಹರಡಿತು. ಅವರನ್ನು ಕೀಳಾಗಿ ಕಂಡಿದ್ದ ಸಮಾಜಕ್ಕೆ ತಮ್ಮ ತಪ್ಪಿನ ಅರಿವಾಗಿ ಕನಕದಾಸರ ಕಾಲಿಗೆ ಬಿದ್ದರು. ಸಮಾಜವು ಅವರನ್ನು ಅತ್ಯುನ್ನತ ಸ್ಥಾನದಲ್ಲಿಟ್ಟು ಪೂಜಿಸಲು ಆರಂಭಿಸಿತು.

ಹರಿಭಕ್ತಿಸಾರ: ಸರ್ವಸಮರ್ಪಣಾ ಭಾವವೇ ಪರಮೋಚ್ಚ ಜ್ಞಾನ

-

ಒಂದೊಳ್ಳೆ ಮಾತು

(ಭಾಗ- 4)

ಉಡುಪಿಯ ಶ್ರೀಕೃಷ್ಣನೇ ಗೋಡೆಯನ್ನು ಸೀಳಿ ದರ್ಶನ ನೀಡಿದ ಮೇಲೆ, ಕನಕದಾಸರ ಕೀರ್ತಿ ನಾಡಿನಾದ್ಯಂತ ಹರಡಿತು. ಅವರನ್ನು ಕೀಳಾಗಿ ಕಂಡಿದ್ದ ಸಮಾಜಕ್ಕೆ ತಮ್ಮ ತಪ್ಪಿನ ಅರಿವಾಗಿ ಕನಕದಾಸರ ಕಾಲಿಗೆ ಬಿದ್ದರು. ಸಮಾಜವು ಅವರನ್ನು ಅತ್ಯುನ್ನತ ಸ್ಥಾನದಲ್ಲಿಟ್ಟು ಪೂಜಿಸಲು ಆರಂಭಿಸಿತು.

ಆದರೆ, ಕನಕದಾಸರಿಗೆ ಸಮಾಜ ನೀಡಿದ ಈ ಕೀರ್ತಿ, ಗೌರವ, ಮತ್ತು ಜಯಕಾರಗಳು ಮತ್ತೊಂದು ದೊಡ್ಡ ಪರೀಕ್ಷೆಯಂತೆ ಕಂಡವು. ಭಗವಂತನ ಸಾಕ್ಷಾತ್ಕಾರ ಪಡೆದ ಮೇಲೆಯೂ ಮನುಷ್ಯನನ್ನು ಕಾಡುವ ಅತಿ ದೊಡ್ಡ ಶತ್ರುವೆಂದರೆ ‘ಲೋಕದ ಕೀರ್ತಿ’. ಜನರೆಲ್ಲಾ ತನ್ನನ್ನು ಮಹಾತ್ಮ ಎಂದು ಕೊಂಡಾಡುವಾಗ ಅರಿಯದೆಯೇ ಮನಸ್ಸಿನಲ್ಲಿ ಸೂಕ್ಷ್ಮವಾದ ಅಹಂಕಾರ ತಲೆದೂಗಬಹುದು ಎಂದು ಕನದಾಸರು ಎಚ್ಚೆತ್ತರು.

ತನಗೆ ಸಿಕ್ಕ ಈ ದಿವ್ಯ ಶಕ್ತಿ, ಕಾವ್ಯ ರಚಿಸುವ ಸಾಮರ್ಥ್ಯ ಎಲ್ಲವೂ ಆ ಭಗವಂತನ ಭಿಕ್ಷೆಯೇ ಹೊರತು, ತನ್ನ ಸ್ವಂತ ಸಾಧನೆಯಲ್ಲ ಎಂಬುದನ್ನು ಅವರು ಸಂಪೂರ್ಣವಾಗಿ ಅರಿತಿದ್ದರು.

ತಮ್ಮನ್ನು ಹೊಗಳಲು ಬಂದ ಜನರಿಂದ ದೂರ ಸರಿದ ಕನಕದಾಸರು, ಮೌನವಾಗಿ ಬಾಡದ ಆದಿಕೇಶವನ ಸನ್ನಿಧಿಗೆ ಮರಳಿದರು. ಅಲ್ಲಿ ಅವರು ಭಗವಂತನ ಮುಂದೆ ಮಂಡಿಯೂರಿ ಕುಳಿತು, ಪ್ರಭು, ಜನ ನನ್ನನ್ನು ಜ್ಞಾನಿ ಎನ್ನುತ್ತಿದ್ದಾರೆ, ಕವಿ ಎನ್ನುತ್ತಿದ್ದಾರೆ. ಆದರೆ, ನಿನ್ನ ದಯೆಯಿಲ್ಲದೆ ನನ್ನಿಂದ ಒಂದು ಅಕ್ಷರವೂ ಮೂಡಲು ಸಾಧ್ಯವಿಲ್ಲ.

ಇದನ್ನೂ ಓದಿ: Roopa Gururaj Column: ಹರಿಭಕ್ತಿಸಾರ: ಕೃಷ್ಣನ ದರ್ಶನ ಮತ್ತು ಅನನ್ಯ ಭಕ್ತಿ

ನನ್ನ ದೇಹ, ಮನಸ್ಸು, ಮಾತು ಎಲ್ಲವೂ ನಿನ್ನದೇ ಆಸ್ತಿ ಎಂದು ಸಂಪೂರ್ಣ ಶರಣಾಗತಿಯ ಭಾವ ದಲ್ಲಿ ಕಣ್ಣೀರು ಹಾಕಿದರು. ಪರಮ ವೈರಾಗ್ಯದ ಮತ್ತು ಅಹಂಕಾರ ಮುಕ್ತ ಸ್ಥಿತಿಯಲ್ಲಿ, ಇಡೀ ಬ್ರಹ್ಮಾಂಡದ ಶಕ್ತಿಗೆ ಭಗವಂತನೇ ಕಾರಣ ಎಂದು ಸಾರುವ ‘ಹರಿಭಕ್ತಿಸಾರ’ದ ನಾಲ್ಕನೇ ಪದ್ಯ ಈ ಸಂದರ್ಭಕ್ಕೆ ಪೂರಕವಾಗಿದೆ.

ಹರಿಯೆ ನೀನೊಲಿದಿರಲು ಸಕಲ

ಗ್ರಹಗಳ ಕಾಟವು ಯೇನು ಮಾಡುವು-

ದೊರೆತು ನಿನ್ನಯ ಚರಣ ಕಮಲದ ದಿವ್ಯ ಚಿಂತನೆಯ ||

ನೆರಹಿ ಪಾಪದ ರಾಶಿಯನು ನೀ

ಹೊರಗೆ ಹಾಕುತ ಕಾಯೊ ಯೆನ್ನನು

ಮರಕತದ ಶ್ಯಾಮಲ ಶರೀರನೆ

ಬಾಡದಾದಿಕೇಶ ||4 ||

ಪದ್ಯದ ಭಾವಾರ್ಥ: ಲೋಕದ ಹೊಗಳಿಕೆಗೆ ಬೆನ್ನು ಹಾಕಿ, ಭಗವಂತನ ಪಾದಗಳಲ್ಲಿ ಸಕಲವನ್ನೂ ಅರ್ಪಿಸಿದ ಕನಕದಾಸರು ಕೃತಜ್ಞತೆಯಿಂದ ಹೇ ಹರಿಯೇ, ನಿನ್ನ ದಿವ್ಯ ಅನುಗ್ರಹ ಮತ್ತು ಕೃಪೆ ಒಬ್ಬ ಮನುಷ್ಯನ ಮೇಲಿದ್ದಾಗ, ಜಾತಕದ ನವಗ್ರಹಗಳ ಕಾಟವಾಗಲಿ ಅಥವಾ ಸಮಾಜದ ವಿರೋಧದ ಅಲೆಗಳಾಗಲಿ ಅವನನ್ನು ಏನು ತಾನೇ ಮಾಡಲು ಸಾಧ್ಯ? ನಿನ್ನ ಚರಣ ಕಮಲಗಳ ನಿರಂತರ ಧ್ಯಾನ ಮತ್ತು ದಿವ್ಯ ಚಿಂತನೆ ಒಂದಿದ್ದರೆ ಸಾಕು, ಜಗತ್ತಿನ ಯಾವುದೇ ಕಷ್ಟವೂ ಮನುಷ್ಯನನ್ನು ಧೃತಿಗೆಡಿಸಲಾರದು.

ಮರಕತ ಮಣಿಯಂತೆ (ಪಚ್ಚೆಗಲ್ಲಿನಂತೆ) ಹೊಳೆಯುವ ಶ್ಯಾಮಲ ವರ್ಣದ ದಿವ್ಯ ಶರೀರವನ್ನು ಹೊಂದಿರುವ ಎಲೈ ಬಾಡದ ಆದಿಕೇಶವನೇ... ನಾನು ಲೌಕಿಕ ಜಗತ್ತಿನಲ್ಲಿ ಬದುಕುತ್ತಾ ಅರಿಯದೇ ಮಾಡಿರುವ ಪಾಪಗಳ ರಾಶಿಯನ್ನು ನಿನ್ನ ಕರುಣೆಯ ಬೆಳಕಿನಿಂದ ಹೊರಗೆ ಹಾಕಿ, ನನ್ನ ಅಂತರಂಗವನ್ನು ಶುದ್ಧಗೊಳಿಸು.

ನಿನ್ನ ಕೀರ್ತಿಯನ್ನು ಹಾಡುವ ಈ ದಾಸನನ್ನು ಸದಾ ನಿನ್ನ ಮರೆಯಲ್ಲಿಟ್ಟು ಕಾಯು ಪ್ರಭು!ಮನುಷ್ಯನಿಗೆ ಕಷ್ಟ ಬಂದಾಗ ದೇವರನ್ನು ನೆನೆಯುವುದು ಸುಲಭ, ಆದರೆ ಯಶಸ್ಸು, ಕೀರ್ತಿ ಮತ್ತು ಅಧಿಕಾರ ಬಂದಾಗ ಅಹಂಕಾರ ಪಡದೆ ವಿನಯದಿಂದ ಇರುವುದು ಅತ್ಯಂತ ಕಷ್ಟ.

ನಾವು ಜೀವನದಲ್ಲಿ ದೊಡ್ಡ ಸಾಧನೆ ಮಾಡಿದಾಗ, ಇದೆಲ್ಲಾ ನನ್ನಿಂದಲೇ ಆಯಿತು ಎಂಬ ಭ್ರಮೆಗೆ ಒಳಗಾಗುತ್ತೇವೆ. ಆದರೆ, ನಮ್ಮ ಬುದ್ಧಿ, ಕೌಶಲ್ಯ ಮತ್ತು ಯಶಸ್ಸಿನ ಹಿಂದೆ ಆ ದೈವೀ ಶಕ್ತಿಯ ಕೈವಾಡವಿರುತ್ತದೆ. ಯಾವಾಗ ನಾವು ನಮ್ಮ ಯಶಸ್ಸನ್ನು ಭಗವಂತನಿಗೆ ಅಥವಾ ಸಮಾಜಕ್ಕೆ ಅರ್ಪಿಸಿ ವಿನಮ್ರರಾಗುತ್ತೇವೆಯೋ, ಬಾಹ್ಯ ಅಡೆತಡೆಗಳು ಅಥವಾ ಸಮಾಜದ ಟೀಕೆಗಳು ನಮ್ಮನ್ನು ಕುಗ್ಗಿಸಲು ಸಾಧ್ಯವಿಲ್ಲ. ಈ ಸರ್ವಸಮರ್ಪಣಾ ಭಾವವೇ ಹರಿಭಕ್ತಿಸಾರದ ಪರಮೋಚ್ಚ ಜ್ಞಾನ...