ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಗೆಲ್ಲುವ ತನಕ ಹೋರಾಡದಿದ್ದರೆ, ಸೋಲುವ ಹೊತ್ತಿಗೆ ಅದಿರುವುದಿಲ್ಲ !

ತಮ್ಮ ತಾಯ್ನಾಡನ್ನು ರಕ್ಷಿಸಿಕೊಳ್ಳುವುದು ಹೇಗೆ ಎಂಬುದು ಇಸ್ರೇಲಿಗಳಿಗೆ ಯಾರೂ ಹೇಳಿಕೊಡ ಬೇಕಿಲ್ಲ. ತಮ್ಮನ್ನು ಕೆಣಕಿದವರನ್ನು ಅವರು ಹುಟ್ಟಡಗಿಸದೇ ಬಿಟ್ಟ ನಿದರ್ಶನವೇ ಇಲ್ಲ. ಯಹೂ ದಿಯರ ಧರ್ಮದಂದು ಮಾತಿದೆ - ಒಬ್ಬ ಮನುಷ್ಯನ ಜೀವ ಉಳಿಸಿದರೆ ಜಗತ್ತನ್ನು ಉಳಿಸಿದಂತೆ. ಒಬ್ಬನ ಜೀವ ತೆಗೆದರೆ, ಇಡೀ ಜಗತ್ತನ್ನು ನಾಶಪಡಿಸಿದಂತೆ.

ಗೆಲ್ಲುವ ತನಕ ಹೋರಾಡದಿದ್ದರೆ, ಸೋಲುವ ಹೊತ್ತಿಗೆ ಅದಿರುವುದಿಲ್ಲ !

-

ನೂರೆಂಟು ವಿಶ್ವ

vbhat@me.com

Gaza was a land without people for a people without land. - ಇಸ್ರೇಲ್ ಜಾಂಗ್ವಿಲ್, ಜಿಯೋನಿಸಂ ಪ್ರತಿಪಾದಕ ಅಂದು ಜಗತ್ತಿನಲ್ಲಿಯೇ ಅತ್ಯಂತ ಆಯಕಟ್ಟಿನ, ಅತಿ ಸೂಕ್ಷ್ಮಪ್ರದೇಶ ದಲ್ಲಿದೆ!

ಅಲ್ಲಿಂದ ಕೇವಲ ನೂರಿನ್ನೂರು ಮೀಟರ್ ಸನಿಹದಲ್ಲಿ ನಿಂತು ಗಾಜಾ ಕಡೆ ದೃಷ್ಟಿ ನೆಟ್ಟಿದೆ. ದೃಷ್ಟಿ ಹಾಯುವ ಆರಂಭದಲ್ಲಿ, ಭೂಮಿ ಮರುಭೂಮಿಯ ಚಾದರ ಹೊದ್ದು ಮಲಗಿರುವಂತೆ ಕಾಣುವ, ನಂತರ ಅಲ್ಲಲ್ಲಿ ಕಟ್ಟಡಗಳು, ಜನವಸತಿ ಪ್ರದೇಶಗಳು ಇರುವಂತೆ ಗೋಚರಿಸುವ, ಮರ- ಗಿಡಗಳಿಲ್ಲದ, ಸಪಾಟು ಮೈದಾನದಂತೆ ಕಾಣುವ ಮೆಡಿಟರೇನಿಯನ್ ಸಮುದ್ರದ ಪೂರ್ವ ಕರಾವಳಿಯಲ್ಲಿರುವ ಒಂದು ಕಿರಿದಾದ ಭೂಪ್ರದೇಶವದು.

ಗಾಜಾ-ಇಸ್ರೇಲ್ ಗಡಿಗುಂಟ ಎತ್ತರದ ಗೋಡೆ ಮತ್ತು ಅದರ ಮೇಲೆ ಸುರುಳಿ ಸುತ್ತಿದ ತಂತಿ ಸಾಲು. ಅದರ ಪಕ್ಕದಲ್ಲಿಯೇ ಹಾದು ಹೋಗುವ ಹೆದ್ದಾರಿ. ಗಾಜಾಕ್ಕೆ ಹೊಂದಿಕೊಂಡಿರುವ ಇಸ್ರೇಲಿನ ಸೆಡೆರಾಟ್ ಪಟ್ಟಣದ ಒಂದು ದಿಬ್ಬದ ಮೇಲೆ ನಿಂತು ಗಾಜಾವನ್ನು ದಿಟ್ಟಿಸುತ್ತಿದ್ದರೆ, ಅತ್ತ ದಟ್ಟವಾದ ಹೊಗೆ ಮುಗಿಲಿಗೆ ಮೋಡಕಟ್ಟಿತ್ತು.

ಅಂದು ಗಾಜಾದಿಂದ ಯಾವ ರಾಕೆಟ್ ಅಥವಾ ಕ್ಷಿಪಣಿ ದಾಳಿಗಳು ನಡೆದಿರಲಿಲ್ಲ. ಇತ್ತ ಇಸ್ರೇಲಿ ಸೇನೆ ದಾಳಿಯನ್ನು ಮುಂದುವರಿಸಿತ್ತು. ಒಂದು ವೇಳೆ ಗಾಜಾದಿಂದ ಕ್ಷಿಪಣಿ ದಾಳಿಯಾಗುತ್ತಿದ್ದರೆ, ನಾವು ಆ ದಿಬ್ಬದ ಮೇಲೆ ನಿಂತು ಗಾಜಾವನ್ನು ನೋಡುವುದು ಸಹ ಸಾಧ್ಯವಿರಲಿಲ್ಲ. ಗಾಜಾದಿಂದ ಯಾವಾಗ ಕ್ಷಿಪಣಿ, ರಾಕೆಟ್ ದಾಳಿಗಳಾಗುತ್ತವೆ ಎಂಬುದನ್ನು ಊಹಿಸುವುದು ಸಾಧ್ಯವಿಲ್ಲ. 2023ರ ಅಕ್ಟೋಬರ್ 7ರಿಂದ ದಿನವೂ ಎರಡೂ ಕಡೆಗಳಿಂದ ಚಕಮಕಿಗಳಾಗುತ್ತಿರುವುದು ದಿಟ.

ಇದನ್ನೂ ಓದಿ: Vishweshwar Bhat Column: ಈಗಲೂ ವಾರದಲ್ಲಿ ಒಂದು ದಿನ ಇಸ್ರೇಲಿಗರು ಮೊಬೈಲ್‌ ಮುಟ್ಟುವುದಿಲ್ಲ !

ಗಾಜಾದಿಂದ ಹಾರಿದ ರಾಕೆಟ್ ಇಸ್ರೇಲಿನ ಸೆಡೆರಾಟ್ ನಗರಕ್ಕೆ ಬಂದು ಬೀಳಲು ನಾಲ್ಕರಿಂದ ಎಂಟು ಸೆಕೆಂಡುಗಳು ಸಾಕು. ಆದರೆ ಇಸ್ರೇಲಿನ ಐರನ್ ಡೋಮ್‌ಗಳು ಅವುಗಳನ್ನು ಹೊಡೆದುರುಳಿಸುತ್ತಿ ರುವುದರಿಂದ ಇಸ್ರೇಲಿಗಳು ಬಚಾವ್. ಆದರೆ ಈ ಐರನ್ ಡೋಮ್‌ಗಳ ಕಣ್ಣು ತಪ್ಪಿಸಿಯೂ ಕ್ಷಿಪಣಿ‌ ಗಳು ಇಸ್ರೇಲಿನ ನಗರಗಳ ಮೇಲೆ ಬಂದು ಬಿದ್ದಿವೆ.

ಗಾಜಾ ಪಟ್ಟಿಯ ನಲವತ್ತು ಕಿಮೀ ಉದ್ದದವರೆಗೂ ಇಸ್ರೇಲಿ ಪಡೆಗಳ ಸೈನಿಕರು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಾ ಇದ್ದರೂ, ಗಾಜಾದಲ್ಲಿರುವ ಹಮಾಸ್ ಉಗ್ರಗಾಮಿಗಳು ಯಾವಾಗ ಬೇಕಾದರೂ ಬಾಲ ಬಿಚ್ಚಬಹುದು. ಹಮಾಸ್ ದಾಳಿ ಮಾಡಿದಾಗಲೆಲ್ಲ ಇಸ್ರೇಲಿ ಪಡೆ ಪ್ರತೀಕಾರ ತೀರಿಸಿಕೊಳ್ಳದೇ ಹೋಗಿಲ್ಲ. ಗಾಜಾದಿಂದ ಹತ್ತು ಕ್ಷಿಪಣಿ ಬಂದು ಬಿದ್ದರೆ, ಇಸ್ರೇಲಿಗಳು ನೂರು ಕ್ಷಿಪಣಿ ಹಾರಿಸದೇ ಬಿಟ್ಟಿಲ್ಲ.

ಇಸ್ರೇಲಿ ಸಚಿವರೊಬ್ಬರು ಹೇಳಿದಂತೆ I prefer one thousand Palestinian mothers crying than letting one Jewish mother cry. ಇದು ಇಸ್ರೇಲಿಗಳ ವರಸೆ. ಎಲ್ಲಿ ತನಕ ಹಮಾಸ್‌ಗಳು ಕಾಲು ಕೆರೆದು ಯುದ್ಧ ನಿಲ್ಲಿಸುವುದಿಲ್ಲವೋ, ಅಲ್ಲಿ ತನಕ ಇಸ್ರೇಲ್ ಶಾಂತಿಮಂತ್ರ ವನ್ನು ಪಠಿಸುವ ಮಾತೇ ಇಲ್ಲ. ಹೀಗಾಗಿ ಯುದ್ಧ ಸದ್ಯಕ್ಕೆ ನಿಲ್ಲುವ ಯಾವ ಸೂಚನೆಯೂ ಕಾಣುತ್ತಿಲ್ಲ.

ಹೀಗಾಗಿ ಗಾಜಾ ನಿತ್ಯವೂ ಸುದ್ದಿಯಲ್ಲಿದೆ. ಇಸ್ರೇಲಿನ ನೈಋತ್ಯಕ್ಕೆ ಈಜಿಪ್ಟ್ ಮತ್ತು ಉತ್ತರ ಹಾಗೂ ಪೂರ್ವಕ್ಕೆ ಇಸ್ರೇಲ್‌ನೊಂದಿಗೆ ಗಡಿಯನ್ನು ಹಂಚಿಕೊಂಡಿರುವ, ಸುಮಾರು 41 ಕಿಲೋಮೀಟರ್ ಉದ್ದ ಮತ್ತು 6 ರಿಂದ 12 ಕಿಮೀ ಅಗಲವಿರುವ ಗಾಜಾ, ವಿಶ್ವದ ಅತಿ ಹೆಚ್ಚು ಜನಸಾಂದ್ರತೆಯುಳ್ಳ ಪ್ರದೇಶಗಳಲ್ಲಿ ಒಂದಾಗಿದೆ.

ಗಾಜಾ ಪಟ್ಟಿಯು ಸುಮಾರು 365 ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಹೊಂದಿದೆ. ಇಲ್ಲಿನ ಜನಸಂಖ್ಯೆ ಸುಮಾರು ಇಪ್ಪತ್ತೈದು ಲಕ್ಷ. ಅವರಲ್ಲಿ ಹೆಚ್ಚಿನವರು ಪ್ಯಾಲೆಸ್ತೀನಿ ಅರಬ್ಬರು. ಜನಸಂಖ್ಯೆಯ ಬಹುಪಾಲು ಸುನ್ನಿ ಮುಸ್ಲಿಮರು. ಗಾಜಾ ನಗರವು ಈ ಪ್ರದೇಶದ ಅತಿದೊಡ್ಡ ನಗರ ಮತ್ತು ಆಡಳಿತ ಕೇಂದ್ರವೂ ಹೌದು.

ಐತಿಹಾಸಿಕವಾಗಿ, ಗಾಜಾಪಟ್ಟಿಯು ವಿವಿಧ ಸಾಮ್ರಾಜ್ಯಗಳ ಮತ್ತು ಆಡಳಿತಗಳ ನಿಯಂತ್ರಣ ದಲ್ಲಿತ್ತು. 1948ರ ಅರಬ್ -ಇಸ್ರೇಲಿ ಯುದ್ಧದ ನಂತರ, ಇದನ್ನು ಈಜಿಪ್ಟ್ ಆಕ್ರಮಿಸಿಕೊಂಡಿತು. 1967ರ ಆರು ದಿನಗಳ ಯುದ್ಧದಲ್ಲಿ ಇಸ್ರೇಲ್ ಗಾಜಾ ಪಟ್ಟಿಯನ್ನು ವಶಪಡಿಸಿಕೊಂಡಿತು. 2005 ರಲ್ಲಿ, ಇಸ್ರೇಲ್ ಏಕಪಕ್ಷೀಯವಾಗಿ ತನ್ನ ಸೈನ್ಯವನ್ನು ಮತ್ತು ವಸಾಹತುಗಳನ್ನು ಗಾಜಾಪಟ್ಟಿ ಯಿಂದ ಹಿಂತೆಗೆದುಕೊಂಡಿತು.

2007ರಲ್ಲಿ, ಹಮಾಸ್ ಮತ್ತು ಫತಾಹ್ ಬಣಗಳ ನಡುವಿನ ಸಂಘರ್ಷದ ನಂತರ, ಹಮಾಸ್ ಗಾಜಾ ಪಟ್ಟಿಯ ಸಂಪೂರ್ಣ ನಿಯಂತ್ರಣವನ್ನು ತೆಗೆದುಕೊಂಡಿತು. ಅಂದಿನಿಂದ, ಈ ಪ್ರದೇಶವು ಹಮಾಸ್‌ ನ ಆಡಳಿತದಲ್ಲಿದೆ. ಗಾಜಾಪಟ್ಟಿಯ ಆರ್ಥಿಕತೆಯು ಕೃಷಿ, ಸಣ್ಣ ಪ್ರಮಾಣದ ಕೈಗಾರಿಕೆಗಳು ಮತ್ತು ಮೀನುಗಾರಿಕೆಯನ್ನು ಅವಲಂಬಿಸಿದೆ.

ಆದರೆ ಇಸ್ರೇಲ್ ಮತ್ತು ಈಜಿಪ್ಟ್ ವಿಧಿಸಿರುವ ದಿಗ್ಬಂಧನಗಳಿಂದಾಗಿ ಈ ಪ್ರದೇಶದ ಆರ್ಥಿಕತೆಯು ತೀವ್ರವಾಗಿ ಕುಂಠಿತಗೊಂಡಿದೆ. ನಿರುದ್ಯೋಗ ಮತ್ತು ಬಡತನದ ಪ್ರಮಾಣವು ಅತ್ಯಂತ ಹೆಚ್ಚಾಗಿದೆ. ಇಸ್ರೇಲಿಗಳನ್ನು ಕೇಳಿದರೆ, ಭಯೋತ್ಪಾದನೆಯೇ ಅವರ ಪರಮ ಕಸುಬು ಮತ್ತು ಪೂರ್ಣಾವಧಿ ಉದ್ಯೋಗ ಅಂತಾರೆ. ಇಸ್ರೇಲನ್ನು ದುರ್ಬಲಗೊಳಿಸುವುದು ಮತ್ತು ಸದಾ ಯುದ್ಧಸನ್ನದ್ಧ ಸ್ಥಿತಿ ಯಲ್ಲಿಡುವುದು ಹಮಾಸ್ ಉಗ್ರರ ಉದ್ದೇಶ. ಹರಿದು ತಿನ್ನುವ ಬಡತನವಿದ್ದರೂ ಗಾಜಾದಲ್ಲಿರು ವವರೂ ಯುದ್ಧಮಾಡುವ ಸ್ಥಿತಿಯಲ್ಲಿ ಇಲ್ಲವೇ ಇಲ್ಲ.

ಆದರೆ ಸಿರಿಯಾದ ಹಿಜ್ಬು ಉಗ್ರ ಸಂಘಟನೆ ಮತ್ತುಇರಾನ್, ಹಮಾಸ್‌ಗಳಿಗೆ ನೆರವು ನೀಡುತ್ತಿವೆ. ಎರಡು ವರ್ಷಗಳ ನಿರಂತರ ಯುದ್ಧದಿಂದ ಗಾಜಾ ಹಣ್ಣುಗಾಯಿ ನೀರುಗಾಯಿಯಾಗಿದ್ದರೂ ಹಮಾಸ್ ಉಗ್ರರಿಗೆ ಯುದ್ಧವೇ ಕಸುಬಾಗಿರುವುದರಿಂದ, ಅದನ್ನು ಮುಂದುವರಿಸುವುದು ಅನಿವಾರ್ಯವಾಗಿರುವುದು ದುರ್ದೈವ.

ಅಂದು ಹೆಣ ಬೀಳದಿದ್ದರೆ ಅದನ್ನು ಸುಡುವವ ಇಂದು ಉಪವಾಸ ಬೀಳುವಂತೆ, ಹಮಾಸ್ ಉಗ್ರರ ಸ್ಥಿತಿಯಾಗಿದೆ. ಅವರು ಯುದ್ಧ ನಿಲ್ಲಿಸಿದರೆ ನಿರುದ್ಯೋಗಿಗಳು. ಇರಾನ್ ಮತ್ತು ಇಸ್ರೇಲಿ ವಿರೋಧಿ ಶಕ್ತಿಗಳು ಈ ಯುದ್ಧವನ್ನು ಜಾರಿಯಲ್ಲಿಡಲು ನಿರಂತರ ಶ್ರಮಿಸುತ್ತಿವೆ. ನಿರಂತರ ಕದನದಿಂದ ಇಸ್ರೇಲ್ ತುಸು ಬಸವಳಿದಿದ್ದರೂ, ಅದು ಕೈಚೆಲ್ಲಿಲ್ಲ. ಈ ಯುದ್ಧ ಹೀಗೆ ಎಷ್ಟು ದಿನ ಮುಂದುವರಿ ದರೂ, ಅದನ್ನು ಎದುರಿಸುವುದು ಇಸ್ರೇಲಿಗೂ ಅನಿವಾರ್ಯ.

ಇಸ್ರೇಲ್ ಮೇಲೆ ಯುದ್ಧ ಸಾರಲು ಹಮಾಸ್ ಉಗ್ರರಿಗೆ ಕುಮ್ಮಕ್ಕೂ ನೀಡುತ್ತಿರುವುದು ಇರಾನ್ ಮತ್ತು ಕತಾರ್. ಇಸ್ರೇಲಿ ಸಚಿವ ಹೇಳಿದಂತೆ, ತಿನ್ನಲು ಗತಿಯಿಲ್ಲದ ಹಮಾಸ್ ಗಳಿಗೆ ಯುದ್ಧ ಬೇರೆ ಕೇಡು. ಆದರೆ ಅವರನ್ನು ಬಳಸಿಕೊಂಡು ಇರಾನ್ ಮತ್ತು ಕತಾರ್, ಇಸ್ರೇಲ್ ಮೇಲೆ ಯುದ್ಧವನ್ನು ಚಾಲ್ತಿ ಯಲ್ಲಿಟ್ಟಿದೆ. ಗಾಜಾದಲ್ಲಿ ಪ್ರಸ್ತುತ ನಡೆಯುತ್ತಿರುವ ಕದನವು ಇಸ್ರೇಲ್ ಮತ್ತು ಹಮಾಸ್ ನಡುವಿನ ದೀರ್ಘಕಾಲದ ಸಂಘರ್ಷದ ಅತ್ಯಂತ ವಿನಾಶಕಾರಿ ಅಧ್ಯಾಯಗಳಲ್ಲಿ ಒಂದಾಗಿದೆ.

ಈ ದಾಳಿಯನ್ನು ತನ್ನ ಮೇಲಿನ ಯುದ್ಧ ಘೋಷಣೆ ಎಂದು ಪರಿಗಣಿಸಿದ ಇಸ್ರೇಲ್, ಹಮಾಸ್ ಅನ್ನು ಸಂಪೂರ್ಣವಾಗಿ ನಾಶಮಾಡುವ ಮತ್ತು ಎಲ್ಲ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಗುರಿ ಯೊಂದಿಗೆ ಆಪರೇಷನ್ ಸ್ವೋರ್ಡ್ಸ್ ಆಫ್ ಐರನ್ (Operation Swords of Iron) ಎಂಬ ಬೃಹತ್ ಸೇನಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.

ಇಸ್ರೇಲಿ ರಕ್ಷಣಾ ಪಡೆಗಳು (IDF) ಗಾಜಾ ಪಟ್ಟಿಯಾದ್ಯಂತ,‌ ವಿಶೇಷವಾಗಿ ಗಾಜಾ ನಗರ, ಖಾನ್ಯೂನಿಸ್ ಮತ್ತು ರಫಾಹ್ ನಂಥ ಪ್ರಮುಖ ಪ್ರದೇಶಗಳಲ್ಲಿ ತೀವ್ರವಾದ ವಾಯುದಾಳಿಗಳನ್ನು ನಿರಂತರ ನಡೆಸುತ್ತಿವೆ. ಇದರ ಜತೆಗೆ, ಭೂಸೇನೆಗಳು ಗಾಜಾದೊಳಗೆ ಪ್ರವೇಶಿಸಿ ಹಮಾಸ್‌ನ ನೆಲೆಗಳು, ಸುರಂಗ ಜಾಲ ಮತ್ತು ನಾಯಕರನ್ನು ಗುರಿಯಾಗಿಸಿಕೊಂಡು ಹೋರಾಡುತ್ತಿವೆ. ಇಸ್ರೇಲ್ ಸೇನೆಯು ಗಾಜಾ ನಗರದ ಬಹುತೇಕ ಭಾಗವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ ಮತ್ತು ಉತ್ತರ ಗಾಜಾದಿಂದ ದಕ್ಷಿಣದ ಕಡೆಗೆ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸುತ್ತಿದೆ.

ಹಮಾಸ್ ಮತ್ತು ಇತರ ಸಶಸ್ತ್ರ ಗುಂಪುಗಳು ಇಸ್ರೇಲಿ ಪಡೆಗಳ ವಿರುದ್ಧ ಗೆರಿ ಮಾದರಿಯ ಯುದ್ಧ ತಂತ್ರಗಳನ್ನು ಬಳಸುತ್ತಿವೆ. ನಗರ ಪ್ರದೇಶಗಳಲ್ಲಿ ಮತ್ತು ವ್ಯಾಪಕವಾದ ಭೂಗತ ಸುರಂಗ ಜಾಲ ಗಳಲ್ಲಿ ಹೊಂಚುಹಾಕಿ ದಾಳಿಗಳನ್ನು ನಡೆಸುತ್ತಿವೆ. 2023ರ ಅಕ್ಟೋಬರ್ 7ರಂದು ಹಮಾಸ್ ಉಗ್ರರು ಇಸ್ರೇಲಿ ಬೇಹುಗಾರರ ಕಣ್ಣು ತಪ್ಪಿಸಿ, ಗಡಿಯೊಳಗೆ ನುಸುಳಲು ಸಾಧ್ಯವಿಲ್ಲದಿದ್ದರೂ ಪ್ಯಾರಾ ಗ್ಲೈಡರ್ ನೆರವಿನಿಂದ ಆಕಾಶದಿಂದ ಧರೆಗಿಳಿದು ಇಸ್ರೇಲ್ ಒಳಗೆ ಬಂದು, ಗಾಜಾ ಪಟ್ಟಿಯಿಂದ ಮೂರ್ನಾಲ್ಕು ಕಿಮೀ ಸನಿಹದಲ್ಲಿ ನಡೆಯುತ್ತಿದ್ದ ಸಂಗೀತಗೋಷ್ಠಿಯಲ್ಲಿ ಭಾಗವಹಿಸಿದ್ದ ಅಮಾಯಕ ಜನರ ಮೇಲೆ ಏಕಾಏಕಿ ಗುಂಡುಹಾರಿಸಿ 378 ಮಂದಿಯನ್ನು ಸಾಯಿಸಿದರು.

ಇದು ಇತ್ತೀಚಿನ ವರ್ಷಗಳಲ್ಲಿ ಇಸ್ರೇಲಿನ ಮಣ್ಣಿನಲ್ಲಿ ನಡೆದ ಅತಿ ದೊಡ್ಡ ಮಾರಣ ಹೋಮ ವಾಗಿತ್ತು. ಗಾಜಾ ಪಟ್ಟಿಗೆ ಹೊಂದಿಕೊಂಡ ಹತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ ಮತ್ತು ಕಿಬುಟ್ಸ್‌ಗಳ ಮೇಲೂ ಹಮಾಸ್ ಉಗ್ರರು ಏಕಾಏಕಿ ದಾಳಿ ಮಾಡಿ ನೂರಾರು ಅಮಾಯಕರನ್ನು ಕೊಂದು ಹಾಕಿ ದರು. ಇಷ್ಟೇ ಅಲ್ಲ, ಈ ಘಟನೆಯಲ್ಲಿ ಹಮಾಸ್ ಉಗ್ರರು 44 ಮಂದಿಯನ್ನು ಅಪಹರಿಸಿಕೊಂಡು ಒತ್ತೆಯಾಳುಗಳನ್ನಾಗಿರಿಸಿಕೊಂಡರು. ಇದು ಇತ್ತೀಚಿನ ದಿನಗಳಲ್ಲಿ ಇಸ್ರೇಲಿನ ಪಾಲಿಗೆ ಸಹಿಸಿ ಕೊಳ್ಳಲು ಆಗದ ದೊಡ್ಡ ಅವಮಾನ ಮತ್ತು ಬಹುದೊಡ್ಡ ಬೇಹುಗಾರಿಕೆ ವೈಫಲ್ಯ.

ಸಾವಿರಾರು ಉಗ್ರರು ಇಸ್ರೇಲ್ ಗಡಿಯನ್ನು ಭೇದಿಸಿ ಒಳ ಬಂದು, ಬೇಕಾಬಿಟ್ಟಿ ದಾಳಿ ನಡೆಸಿ ಅಮಾಯಕರನ್ನು ಕೊಂದು ಹಾಕಿದ್ದು ಇಸ್ರೇಲಿ ಸೇನೆಗೆ ಇಂದಿಗೂ ನುಂಗಲಾರದ ಬಿಸಿತುಪ್ಪ. ಒತ್ತೆಯಾಳುಗಳನ್ನು ಬಿಡಿಸಿಕೊಂಡು ಬರಲೇಬೇಕಾದ ಅನಿವಾರ್ಯತೆ ಬೇರೆ. ಅಂದಿನಿಂದ ಇಂದಿನ ವರೆಗೆ ಇಸ್ರೇಲಿನ Bring them home now ಎಂಬ ಅಭಿಯಾನ ದೇಶಾದ್ಯಂತ ವ್ಯಾಪಿಸಿ ಬಿಟ್ಟಿದೆ.

ಹಮಾಸ್‌ಗಳು ಈ ಒತ್ತೆಯಾಳುಗಳನ್ನು ಮಾನವ ಕವಚಗಳನ್ನಾಗಿ ಬಳಸಿಕೊಂಡಿದ್ದಾರೆ. ಇಸ್ರೇಲ್ ತನ್ನ ಮೇಲೆ ದಾಳಿಯನ್ನು ತೀವ್ರಗೊಳಿಸಿದರೆ, ಒತ್ತೆಯಾಳುಗಳ ಪೈಕಿ ಒಬ್ಬರನ್ನು ಸಾಯಿಸಿ ಇಸ್ರೇಲಿಗರ ಕೋಪಾಗ್ನಿಗೆ ತುಪ್ಪ ಸುರಿಯುತ್ತಿದೆ. ಒಂದೆಡೆ ಎಲ್ಲ ಒತ್ತೆಯಾಳುಗಳನ್ನು ಬಿಡಿಸಿಕೊಂಡು ಬರಲೇಬೇಕಾದ ಒತ್ತಡ ಇಸ್ರೇಲಿ ರಕ್ಷಣಾ ಪಡೆಗಳ ಮೇಲೆ ಮತ್ತು ಸರಕಾರದ ಮೇಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಒಂದು ಅಂದಾಜಿನ ಪ್ರಕಾರ ನಲವತ್ನಾಲ್ಕು ಮಂದಿ ಪೈಕಿ ಈಗ ಕೇವಲ ಇಪ್ಪತ್ತು ಒತ್ತೆಯಾಳುಗಳು ಮಾತ್ರ ಬದುಕಿದ್ದಾರೆ. ಒಬ್ಬೊಬ್ಬ ಒತ್ತೆಯಾಳನ್ನು ಸಾಯಿಸಿದಾಗಲೂ ಇಸ್ರೇಲಿಗಳ ಸಹನೆಯ ಕಟ್ಟೆ ಒಡೆಯುತ್ತಾ ಹೋಗುತ್ತಿದೆ. ಒಂದು ವೇಳೆ ಹಮಾಸ್ ಉಗ್ರರು ಎಲ್ಲ ಇಸ್ರೇಲಿ ಒತ್ತೆಯಾಳುಗಳನ್ನು ಸಾಯಿಸಿದರೆ, ಅದು ಗಾಜಾದ ಶವಪೆಟ್ಟಿಗೆಗೆ ಅಂತಿಮ ಮೊಳೆ ಹೊಡೆದಂತೆ. ಅಂಥ ದುಃಸ್ಸಾಹಸಕ್ಕೆ ಹಮಾಸ್‌ಗಳು ಮುಂದಾದರೆ, ಭೂಪಟದಲ್ಲಿ ಗಾಜಾ ಇರುವುದಿಲ್ಲ ಎಂದು ಈಗಾಗಲೇ ಇಸ್ರೇಲ್ ಖಡಕ್ ಎಚ್ಚರಿಕೆ ನೀಡಿದೆ.

ಈಗಾಗಲೇ ಗಾಜಾವನ್ನು ಎಲ್ಲ ದಿಕ್ಕುಗಳಿಂದ ಸುತ್ತುವರಿದಿರುವ ಇಸ್ರೇಲಿ ರಕ್ಷಣಾ ಪಡೆಗಳು, ಗಾಜಾ ವನ್ನು ಎರಡು ಭಾಗಗಳಾಗಿ ಹೋಳು ಮಾಡಿದೆ. ಅಷ್ಟೇ ಅಲ್ಲ, ಗಾಜಾಕ್ಕೆ ಹೊಂದಿಕೊಂಡಿರುವ ಮೆಡಿಟರೇನಿಯನ್ ಸಮುದ್ರ ಪ್ರದೇಶವನ್ನು ವಶಪಡಿಸಿಕೊಂಡಿದೆ. ಹಮಾಸ್‌ಗೆ ಶಸ್ತ್ರಾಸ್ತ್ರ ಮತ್ತು ಆಹಾರಗಳನ್ನು ಸಾಗಿಸುತ್ತಿದ್ದ ಸುರಂಗ ಮಾರ್ಗವನ್ನೇ ಇಸ್ರೇಲಿ ಸೇನೆ ಬಂದ್ ಮಾಡಿ ಬಿಟ್ಟಿದೆ.

ಗಾಜಾ ಪಟ್ಟಿಯಲ್ಲಿ ನಡೆಯುವ ವಿದ್ಯಮಾನವನ್ನು ಟಿವಿಗಳಲ್ಲಿ ನೋಡುವುದು, ಪತ್ರಿಕೆಗಳಲ್ಲಿ ಓದುವುದೇ ಬೇರೆ, ಸಾಕ್ಷತ್ ಗಾಜಾ ಗಡಿಯಲ್ಲಿ ನಿಂತು ನೋಡುವುದು ಬೇರೆ. ಸೆಡೆರಾಟ್ ನಗರ ಸತತ ದಾಳಿಗೆ ಜರ್ಜರಿತವಾಗಿದೆ. ನಾನು ಟೆಲ್ ಅವಿವ್‌ನಲ್ಲಿ ಉಳಿದುಕೊಂಡ ಹೋಟೆಲಿನಲ್ಲಿ ಮಧ್ಯ ವಯಸ್ಸಿನ ಹೆಂಗಸೊಬ್ಬಳು ತನ್ನ ಮೂರು ಮಕ್ಕಳೊಂದಿಗೆ ಎರಡು ತಿಂಗಳಿನಿಂದ ವಾಸಿಸುತ್ತಿದ್ದಳು.

ಹಮಾಸ್ ದಾಳಿಗೆ ಸೆಡೆರಾಟ್‌ನಲ್ಲಿರುವ ಅವಳ ಮನೆ ನೆಲಸಮ ಆಗಿತ್ತು. ಇಂಥ ಹೃದಯವಿದ್ರಾವಕ ಗೋಳಿನ ಕಥೆಗಳು ಅಸಂಖ್ಯ. ತಮ್ಮ ಪಾಡಿಗೆ ತಾವಿದ್ದ ಅಮಾಯಕ ಕುಟುಂಬಗಳನ್ನು ಸುಟ್ಟು ಹಾಕಿ ಕೊಂದು ಹಾಕಿದವರ ಗೋಳಿನ ಕಥೆಗಳನ್ನು ಕೇಳಲಾಗದು.

ಪ್ರಸ್ತುತ, ಗಾಜಾ ಪಟ್ಟಿಯು ತೀವ್ರ ರಾಜಕೀಯ ಮತ್ತು ಮಾನವೀಯ ಬಿಕ್ಕಟ್ಟನ್ನು ಎದುರಿಸು ತ್ತಿದಂತೂ ನಿಜ. ಇಸ್ರೇಲ್ ಮತ್ತು ಹಮಾಸ್ ನಡುವಿನ ಪುನರಾವರ್ತಿತ ಸಂಘರ್ಷಗಳು ಅಪಾರ ಸಾವುನೋವು ಮತ್ತು ವಿನಾಶಕ್ಕೆ ಕಾರಣವಾಗಿವೆ. ಮೂಲಭೂತ ಸೌಕರ್ಯಗಳಾದ ವಿದ್ಯುತ್, ನೀರು ಮತ್ತು ವೈದ್ಯಕೀಯ ಸೇವೆಗಳ ಕೊರತೆಯಿಂದ ಗಾಜಾ ಜನರ ಜೀವನ ಹೈರಾಣಾಗಿದೆ.

ಅಂತಾರಾಷ್ಟ್ರೀಯ ಸಂಸ್ಥೆಗಳು ಮಾನವೀಯ ನೆರವು ನೀಡಲು ಪ್ರಯತ್ನಿಸುತ್ತಿದ್ದರೂ, ರಾಜಕೀಯ ಅಸ್ಥಿರತೆಯು ಈ ಪ್ರಯತ್ನಗಳಿಗೆ ಅಡ್ಡಿಯಾಗಿದೆ. ಯಾರ ಮಾತನ್ನು ಯಾರೂ ಕೇಳುವ ಸ್ಥಿತಿ ಯಲ್ಲಿಲ್ಲ. ಇಸ್ರೇಲ್ ಪಾಲಿಗೆ ಸ್ವಾತಂತ್ರ್ಯ ಗಳಿಸಿದ ಬಳಿಕ ಇದು ಅತಿ ದೀರ್ಘಯುದ್ಧ. ಯಹೂದಿ, ಕ್ರಿಶ್ಚಿಯನ್ ಮತ್ತು ಮುಸ್ಲಿಂ ಧರ್ಮೀಯರಿಗೆ ಪವಿತ್ರಭೂಮಿಯಾದ ಇಸ್ರೇಲ್ ಅಂತರಂಗದಲ್ಲಿ ಅಕ್ಷರಶಃ ಬೇಯುತ್ತಿದೆ.

ತಮ್ಮ ತಾಯ್ನಾಡನ್ನು ರಕ್ಷಿಸಿಕೊಳ್ಳುವುದು ಹೇಗೆ ಎಂಬುದು ಇಸ್ರೇಲಿಗಳಿಗೆ ಯಾರೂ ಹೇಳಿಕೊಡ ಬೇಕಿಲ್ಲ. ತಮ್ಮನ್ನು ಕೆಣಕಿದವರನ್ನು ಅವರು ಹುಟ್ಟಡಗಿಸದೇ ಬಿಟ್ಟ ನಿದರ್ಶನವೇ ಇಲ್ಲ. ಯಹೂ ದಿಯರ ಧರ್ಮದಂದು ಮಾತಿದೆ - ಒಬ್ಬ ಮನುಷ್ಯನ ಜೀವ ಉಳಿಸಿದರೆ ಜಗತ್ತನ್ನು ಉಳಿಸಿದಂತೆ. ಒಬ್ಬನ ಜೀವ ತೆಗೆದರೆ, ಇಡೀ ಜಗತ್ತನ್ನು ನಾಶಪಡಿಸಿದಂತೆ. ಈ ಹಿನ್ನೆಲೆಯಲ್ಲಿ ಒತ್ತೆಯಾಳುಗಳನ್ನು ಕರೆತರುವ ಇಸ್ರೇಲ್ ಪ್ರಯತ್ನವನ್ನು ನೋಡಬೇಕು. ಗೆಲ್ಲುವ ತನಕ ಹೋರಾಡದಿದ್ದರೆ, ಸೋಲುವ ಹೊತ್ತಿಗೆ ಇಸ್ರೇಲ್ ಇರುವುದಿಲ್ಲ!