ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Basavaraja Shivappa Girgaon Column: ಭಾರತವು ವಿಶ್ವದ ಮಧುಮೇಹ, ಕ್ಯಾನ್ಸರ್‌ ರೋಗಗಳ ರಾಜಧಾನಿ

ಮನುಷ್ಯನಿಗೆ ಬದುಕಲು ದಿನನಿತ್ಯ ಆಹಾರಗಳ ಸೇವನೆ ಅನಿವಾರ್ಯ. ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳಿಗೆ ಸೂಕ್ತ ಶಕ್ತಿಯನ್ನು ದೊರಕಿಸುವಲ್ಲಿ ಸಮಯಾನುಸಾರ ಸೇವಿಸುವ ವೈವಿಧ್ಯ ಮಯ ಆಹಾರಗಳು ಮುಖ್ಯವಾಗಿವೆ. ಪ್ರಸ್ತುತ ದಿನಗಳಲ್ಲಿ ದೈನಂದಿನ ಕಾರ್ಯಗಳಲ್ಲಿನ ಅತಿಯಾದ ಮಾನಸಿಕ ಒತ್ತಡಗಳಿಂದ ಆಹಾರ, ವಿಹಾರ ಮತ್ತು ವಿಶ್ರಾಂತಿಗಳಿಗೆ ಸಂಬಂಧಿಸಿದಂತೆ ಒಟ್ಟಾರೆ ಜೀವನಶೈಲಿಯು ಬದಲಾಗುತ್ತಿದೆ.

ಭಾರತವು ವಿಶ್ವದ ಮಧುಮೇಹ, ಕ್ಯಾನ್ಸರ್‌ ರೋಗಗಳ ರಾಜಧಾನಿ

-

Profile
Ashok Nayak Apr 8, 2026 12:28 PM

ಪ್ರಸ್ತುತ

ಬಸವರಾಜ ಶಿವಪ್ಪ ಗಿರಗಾಂವಿ

ಏಪ್ರಿಲ್ 7ರಂದು ವಿಶ್ವದೆಲ್ಲೆಡೆ ವಿಶ್ವ ಆರೋಗ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಆದರೆ, ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಆಹಾರದ ಅರಿವು ಪಾಲನೆಯಾಗದ ಪರಿಣಾಮ ಅನಾರೋಗ್ಯಪೀಡಿತರಾಗಿ ಅಂದಾಜು ಶೇ.60ರಷ್ಟು ಜನತೆಯು ಪ್ರತಿನಿತ್ಯ ಮಾತ್ರೆಗಳನ್ನು ಅವಲಂಬಿಸಿರುವುದು ವಿಪರ್ಯಾಸ.

ಮನುಷ್ಯನಿಗೆ ಬದುಕಲು ದಿನನಿತ್ಯ ಆಹಾರಗಳ ಸೇವನೆ ಅನಿವಾರ್ಯ. ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳಿಗೆ ಸೂಕ್ತ ಶಕ್ತಿಯನ್ನು ದೊರಕಿಸುವಲ್ಲಿ ಸಮಯಾನುಸಾರ ಸೇವಿಸುವ ವೈವಿಧ್ಯ ಮಯ ಆಹಾರಗಳು ಮುಖ್ಯವಾಗಿವೆ. ಪ್ರಸ್ತುತ ದಿನಗಳಲ್ಲಿ ದೈನಂದಿನ ಕಾರ್ಯಗಳಲ್ಲಿನ ಅತಿಯಾದ ಮಾನಸಿಕ ಒತ್ತಡಗಳಿಂದ ಆಹಾರ, ವಿಹಾರ ಮತ್ತು ವಿಶ್ರಾಂತಿಗಳಿಗೆ ಸಂಬಂಧಿಸಿದಂತೆ ಒಟ್ಟಾರೆ ಜೀವನಶೈಲಿಯು ಬದಲಾಗುತ್ತಿದೆ.

ಭಾರತವು ಸಮಶೀತೋಷ್ಣ ವಲಯದಲ್ಲಿರುವುದರಿಂದ ಸಮತೋಲನ ಆಹಾರ ಸೇವನೆ ಬಹಳ ಮುಖ್ಯವಾಗಿದೆ. ಸದ್ಯ ಹವಾಮಾನಕ್ಕೆ ವಿರುದ್ಧವಾಗಿರುವ ಬಾಯಿ ರುಚಿಗೆ ವಿವಿಧ ಆಹಾರಗಳನ್ನು ಸೇವಿಸುವ ಮತ್ತು ದುಶ್ಚಟಗಳ ಪ್ರವೃತ್ತಿಯು ಹೆಚ್ಚಾಗಿದೆ. ಇದರಿಂದಾಗಿ ಭಾರತವು ವಿಶ್ವದ ಮಧು ಮೇಹ ಮತ್ತು ಕ್ಯಾನ್ಸರ್ ರೋಗಗಳ ರಾಜಧಾನಿಯಾಗಿದೆ.

ಸಮತೋಲಿತ ಮತ್ತು ಸಮಯೋಚಿತ ಆಹಾರ ಸೇವನೆ ಎನ್ನುವುದು ಇಂದಿನ ಶೇ.90 ರಷ್ಟು ಜನರಲ್ಲಿ ಮಾಯವಾಗಿದೆ. ಪ್ರತಿಯೊಬ್ಬರಲ್ಲಿ ಅತಿಯಾದ ಒತ್ತಡವು ಸರ್ವೆ ಸಾಮಾನ್ಯವಾಗಿದ್ದರೂ ಆಹಾರ ಸೇವನೆಯಲ್ಲಿ ಮುಂಜಾಗ್ರತೆ ವಹಿಸದಿರುವುದು ಮತ್ತಷ್ಟು ಅನಾರೋಗ್ಯಕ್ಕೆ ಕಾರಣವಾಗುತ್ತಿದೆ.

ಇದನ್ನೂ ಓದಿ: Basavaraja Shivappa Girgaon Column: ಎಥೆನಾಲ್‌ಗೆ ಉತ್ತೇಜನ ಸಿಗಲಿ

ದಿನನಿತ್ಯದ ಸೇವನೆಗಾಗಿ ಒಂದೇ ರುಚಿಯ ಆಹಾರವನ್ನು ಸೇವಿಸಬಾರದೆಂಬ ಭಗವಂತನ ನಿಯಮದ ಹಿಂದೆ ದೊಡ್ಡ ರಹಸ್ಯವಿದೆ. ಒಂದೇ ಬಗೆಯ ಆಹಾರಗಳನ್ನು ತಿನ್ನುವುದರಿಂದ ಶರೀರಕ್ಕೆ ದೊರೆಯಬೇಕಾದ ಪ್ರತಿಯೊಂದು ಪೋಷಕಾಂಶಗಳು ದೊರೆಯುವುದಿಲ್ಲ.

ಇದಕ್ಕೊಂದು ಸೂಕ್ತ ಉದಾಹರಣೆಯೆಂದರೆ, ಜಮೀನಿನಲ್ಲಿ ಪ್ರತಿವರ್ಷ ಒಂದೇ ಬಗೆಯ ಬೆಳೆಗ ಳನ್ನು ಬೆಳೆಯುವುದರಿಂದ ಭೂಮಿಯು ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ. ಮಣ್ಣಿನ ಫಲವತ್ತತೆಯನ್ನು ಕಾಯ್ದುಕೊಳ್ಳಲು ಭೂಮಿಯಲ್ಲಿ ಬೆಳೆಗಳ ಬದಲಾವಣೆ ಮತ್ತು ಅಂತರ ಬೆಳೆಗಳನ್ನು ಕೈಗೊಳ್ಳುವುದರೊಂದಿಗೆ ಅವಶ್ಯಕ ಲಘುಪೋಷಕಾಂಶಗಳನ್ನು ಒದಗಿಸುತ್ತಿರ ಬೇಕು. ಹಾಗೆಯೆ ಮನುಷ್ಯನು ಸಹ ಉತ್ತಮ ಆರೋಗ್ಯಕ್ಕಾಗಿ ಪ್ರಮಾಣಕ್ಕನುಗುಣವಾಗಿ ವಿವಿಧ ರುಚಿಯ ಸಮತೋಲಿತ ಶುದ್ಧ ಆಹಾರಗಳನ್ನು ಸೇವಿಸುತ್ತಿರಬೇಕು.

ಒಟ್ಟಾರೆ ಜೀವಸಂಕುಲದಲ್ಲಿ ಮನುಕುಲವನ್ನು ಹೊರತುಪಡಿಸಿ ಸ್ವತಂತ್ರವಾಗಿ ಬದುಕುವ ಪ್ರತಿಯೊಂದು ಜೀವಿಗಳು ಬಗೆಬಗೆಯ ಆಹಾರಗಳನ್ನು ಸೇವಿಸುತ್ತ ಆರೋಗ್ಯವಾಗಿರುವುದನ್ನು ಗಮನಿಸಬಹುದು. ಹಾಗಾದರೆ ಸಮತೋಲಿತ ಆಹಾರಗಳನ್ನು ಅರಿತು ಅವುಗಳನ್ನು ನಿತ್ಯ ಜೀವನ ದಲ್ಲಿ ಕಡ್ಡಾಯವಾಗಿ ಪಾಲಿಸಬೇಕಾಗಿದೆ.

ಸಮತೋಲಿತ ಆಹಾರಗಳೆಂದರೆ, ಕಾರ್ಬೋಹೈಡ್ರೇಟ್ (ಜೋಳ, ಅಕ್ಕಿ, ಗೋಧಿ ಮತ್ತು ರಾಗಿ ಯಂತಹ ಧಾನ್ಯಗಳು), ಹಣ್ಣುಗಳು (ತಾಜಾ ಮತ್ತು ಒಣಹಣ್ಣುಗಳು), ಪ್ರೊಟೀನ್‌ಗಳು (ಮಾಂಸ, ಮೊಟ್ಟೆ, ಹಾಲು, ಬೀಜ ಮತ್ತು ನಟ್ಸ್) ಹಾಗೂ ತರಕಾರಿಗಳು (ಹಸಿರು, ಕೆಂಪು, ಕೇಸರಿ ಬಣ್ಣದ ಮತ್ತು ತಪ್ಪಲು ತರಕಾರಿಗಳು) ಎಂದು ನಾಲ್ಕು ಪ್ರಕಾರದ ವಿಂಗಡನೆ ಮಾಡಬಹುದಾಗಿದೆ. ಈ ನಾಲ್ಕು ಪ್ರಕಾರದ ಆಹಾರಗಳು ಪ್ರತಿಹೊತ್ತಿನ ಆಹಾರದಲ್ಲಿ ಸಮಪ್ರಮಾಣದಲ್ಲಿದ್ದಾಗ ಖಂಡಿತವಾಗಿಯೂ ಉತ್ತಮ ಆರೋಗ್ಯವು ಪ್ರಾಪ್ತಿಯಾಗಿ ಮನಸ್ಸು ಹತೋಟಿಯಲ್ಲಿರುವುದರಿಂದ ಒತ್ತಡಗಳು ಭಾರ ವಾಗುವುದಿಲ್ಲ.

ಭಾರತದಲ್ಲಿಂದು ಕಾರ್ಬೋಹೈಡ್ರೇಟ್ ಪ್ರಮಾಣವನ್ನು ಹೆಚ್ಚಾಗಿ ಸೇವಿಸುತ್ತಿರುವ ಪರಿಣಾಮ ಆಹಾರದ ಸಮತೋಲನವಾಗಿ ಮಧುಮೇಹ ಹೆಚ್ಚಾಗುತ್ತಿದೆ. ಆದ್ದರಿಂದ ಆರೋಗ್ಯದ ಮೂಲ ಸಮತೋಲಿತ ಆಹಾರವಾಗಿರುವುದರಿಂದ ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಅನುಭವಿಕರ ಮಾತು ಎಷ್ಟೊಂದು ಪರಿಣಾಮಕಾರಿಯಾಗಿದೆಯಲ್ಲವೆ? ಜಪಾನ್ ದೇಶವಾಸಿಗಳು ಪ್ರತಿಯೊಂದು ಊಟದಲ್ಲಿ ಅವಶ್ಯಕ ತೂಕ ಮತ್ತು ಕ್ಯಾಲೋರಿ ಪ್ರಮಾಣದಲ್ಲಿ ವಿವಿಧ ಬಗೆಯ ಆಹಾರಗಳನ್ನು ಸೇವಿಸುತ್ತಾರೆ. ಬಾಯಿರುಚಿಗೆ ಮತ್ತು ಬಯಕೆಗಳಿಗೆ ಕಟ್ಟುಬಿದ್ದು ಆಹಾರಗಳನ್ನು ಸೇವಿಸುವುದಿಲ್ಲ.

ವಿಶ್ವದಲ್ಲಿಯೆ ಶಿಸ್ತುಬದ್ಧ, ಸಮಯೋಚಿತ ಹಾಗೂ ಸಮತೋಲಿತ ಆಹಾರ ಸಂಸ್ಕೃತಿಯು ಜಪಾನಿ ನಲ್ಲಿರುವುದರಿಂದ ಜಪಾನಿಗರು ಜಗತ್ತಿನಲ್ಲಿ ಅತಿಹೆಚ್ಚು ಸರಾಸರಿ ಆಯುಷ್ಯ, ಖುಷಿ ಮನಸ್ಸು ಹಾಗೂ ಒತ್ತಡ ರಹಿತ ಬದುಕನ್ನು ಹೊಂದಿದ್ದಾರೆ. ಪ್ರಸ್ತುತ ಜಪಾನ್‌ನಲ್ಲಿ ಸರಾಸರಿ 80 ವಯೋ ಮಾನದವರು ಸಹ ನಿರಂತರ ಚಟುವಟಿಕೆಯಿಂದ ಕೂಡಿರುವುದು ವಿಶೇಷ.

ನಿರಂತರ ಚಟುವಟಿಕೆ ಅಥವಾ ಕೈಲಾದಷ್ಟು ದೈಹಿಕ ದುಡಿಮೆಯೆನ್ನುವುದು ಭಗವಂತನು ದಯ ಪಾಲಿಸಿದ ದಿವ್ಯ ಔಷಧವಾಗಿದೆ. ಭಾರತದಲ್ಲಿ ಶಾರೀರಿಕ ದುಡಿಮೆಯು ಕಡಿಮೆಯಾದ ಪ್ರಯುಕ್ತ ಅನಾರೋಗ್ಯವು ಹೆಚ್ಚಾಗುತ್ತಿದೆ. ಹಿಂದೊಂದು ಕಾಲದಲ್ಲಿ ಭಾರತೀಯ ಖಾದ್ಯಗಳು ವಿಶ್ವದಲ್ಲಿಯೇ ಆರೋಗ್ಯದ ದೃಷ್ಟಿಯಿಂದ ಅತಿಹೆಚ್ಚು ಜನಪ್ರಿಯತೆಯನ್ನು ಪಡೆದಿದ್ದವು.

ಇಂತಹ ಆಹಾರ ಖಾದ್ಯಗಳನ್ನು ಸೇವಿಸುತ್ತಿದ್ದ ಅಂದಿನ ಜನರು ವೈದ್ಯಕೀಯ ಕೊರತೆಯ ದಿನಮಾನಗಳಲ್ಲಿಯೂ ಆರೋಗ್ಯಕರ ಬದುಕನ್ನು ಕಟ್ಟಿಕೊಂಡಿದ್ದರು. ದೇಶದೆಲ್ಲೆಡೆ ವಿವಿಧ ಹವಾಮಾನಗಳಿಗೆ ತಕ್ಕುದಾದ ಬೆಳೆಗಳನ್ನು ಬೆಳೆಯುವುದು, ಶಾರೀರಿಕವಾಗಿ ದುಡಿಮೆಗಳನ್ನು ಕೈಗೊಳ್ಳುವುದು ಮತ್ತು ಹವಾಮಾನಕ್ಕನುಗುಣವಾಗಿ ಬೆಳೆದ ಆಹಾರಗಳನ್ನು ಸೇವಿಸುವುದು ಅಂದಿನ ಜನತೆಯ ಆರೋಗ್ಯದ ಗುಟ್ಟಾಗಿತ್ತು.

ಕೃಷಿಯು ಅಂದಿನ ಪ್ರಮುಖ ಕಸುಬಾಗಿತ್ತು, ಕೃಷಿಯಲ್ಲಿ ಮೈಮುರಿದು ದುಡಿಯುವಾಗ ಹೊರ ಬರುವ ಬೆವರಿನಿಂದ ದೇಹದಲ್ಲಿನ ಹೆಚ್ಚುವರಿ ಕೊಬ್ಬು ನಾಶವಾಗಿ ಗುಣಮಟ್ಟದ ಆರೋಗ್ಯವು ಪ್ರಾಪ್ತವಾಗುತ್ತಿತ್ತು. ಅಂದಿನ ಕಡುಬಡತನದ ದಿನಮಾನಗಳಲ್ಲಿ ಸಮತೋಲಿತ ಆಹಾರ ಸಾಧ್ಯ ವಾಗದಿದ್ದರೂ ನಮ್ಮ ಪೂರ್ವಜರು ಪ್ರತಿದಿನದ ಶಾರೀರಿಕ ದುಡಿಮೆಯ ಫಲದಿಂದ ಗಟ್ಟಿಮುಟ್ಟಾದ ಆರೋಗ್ಯವನ್ನು ಕಾಪಾಡಿಕೊಂಡಿದ್ದರು. ಆರೋಗ್ಯವೇ ಭಾಗ್ಯ.