ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Raghava Sharma Nidle Column: ತಿವಾರಿ ಜಾತಿ ಕೇಳಿ ಹಲ್ಲೆಗೈದದ್ದು ಸಾಮಾನ್ಯ ಘಟನೆಯೇ ?

ಘಟನೆ ನಡೆದು ಇಷ್ಟು ದಿನಗಳಾದರೂ ಬೆತ್ತಲೆ ಮೆರವಣಿಗೆ ಮಾಡುತ್ತೇವೆ ಎಂದೆ ನಾಲಗೆ ಹರಿಬಿಟ್ಟವರ ದುರ್ವರ್ತನೆಗಳ ಬಗ್ಗೆ ಸ್ವಯಂಘೋಷಿತ ಸ್ತ್ರೀವಾದಿ ಸಂಘಟನೆಗಳು, ಪ್ರಗತಿ ಪರರು, ಸ್ತ್ರೀ ಸಂವೇದಿಗಳ ಬಾಯಿಂದ ಒಂದು ಮಾತೂ ಹೊರಡಲಿಲ್ಲ. ಬದಲಿಗೆ, ರುಚಿ ತಿವಾರಿಯೇ ಹಲ್ಲೆ ಮಾಡಲು ಮುಂದಾದಳು ಎಂದೂ ವಿರೋಧಿ ಗುಂಪು ಆರೋಪ ಮಾಡಿತು.

ತಿವಾರಿ ಜಾತಿ ಕೇಳಿ ಹಲ್ಲೆಗೈದದ್ದು ಸಾಮಾನ್ಯ ಘಟನೆಯೇ ?

-

ಜನಪಥ

ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಜಾರಿಗೆ ತರಲು ಮುಂದಾಗಿದ್ದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆ ಉತ್ತೇಜನ ನಿಯಮಗಳು-2026ಕ್ಕೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆಯನ್ನೇನೋ ನೀಡಿದೆ. ಆದರೆ, ಈ ನಿಯಮದ ಪರ-ವಿರೋಧದ ದನಿಗಳು ವಿವಿ ಕ್ಯಾಂಪಸ್ ಒಳ-ಹೊರಗೆ ಹೆಚ್ಚಾಗುತ್ತಿದ್ದು, ಫೆ.13ರಂದು ದಿಲ್ಲಿ ವಿಶ್ವವಿದ್ಯಾ ಲಯದ ನಾರ್ಥ್ ಕ್ಯಾಂಪಸ್ನಲ್ಲಿ ಯೂಟ್ಯೂಬರ್‌ʼನ, ಪತ್ರಕರ್ತೆ ರುಚಿ ತಿವಾರಿ ಮೇಲೆ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳ (ಆಲ್ ಇಂಡಿಯಾ ಸ್ಟೂಡೆಂಟ್ ಯೂನಿಯನ್- AISA) ಸದಸ್ಯರು ಮಾಡಿದ ದೈಹಿಕ ಹಲ್ಲೆ ಬೆಚ್ಚಿ ಬೀಳಿಸುವಂತಿದೆ.

ಯುಜಿಸಿ ಜಾರಿ ಮಾಡಲು ಉದ್ದೇಶಿಸಿದ್ದ ನಿಯಮಾವಳಿ ಯುವ ಸಮೂಹದಲ್ಲಿ ಪರಸ್ಪರ ಜಾತಿ ಸಂಘರ್ಷಕ್ಕೆ ಕಾರಣವಾಗುತ್ತಿರುವುದು ಕಳವಳಕಾರಿ ಬೆಳವಣಿಗೆ.

ಪತ್ರಕರ್ತೆ ರುಚಿ ತಿವಾರಿಯನ್ನು ಎಳೆದಾಡುತ್ತಾ, ಆಕೆಯ ಬಟ್ಟೆ ಬಿಚ್ಚಿಸಿ, ಬೆತ್ತಲೆ ಮೆರವಣಿಗೆ ಮಾಡಬೇಕು ಎಂದು ಮಾತನಾಡಿಕೊಂಡ ವಿದ್ಯಾರ್ಥಿ ಸಂಘಟನೆಗಳ ಸದಸ್ಯರ ಮಧ್ಯದಿಂದ ಆಕೆ ಪಾರಾಗಿ ಬಂದದ್ದೇ ಒಂದು ಸಾಹಸ.

ಘಟನೆ ನಡೆದು ಇಷ್ಟು ದಿನಗಳಾದರೂ ಬೆತ್ತಲೆ ಮೆರವಣಿಗೆ ಮಾಡುತ್ತೇವೆ ಎಂದೆ ನಾಲಗೆ ಹರಿಬಿಟ್ಟವರ ದುರ್ವರ್ತನೆಗಳ ಬಗ್ಗೆ ಸ್ವಯಂಘೋಷಿತ ಸ್ತ್ರೀವಾದಿ ಸಂಘಟನೆಗಳು, ಪ್ರಗತಿ ಪರರು, ಸ್ತ್ರೀ ಸಂವೇದಿಗಳ ಬಾಯಿಂದ ಒಂದು ಮಾತೂ ಹೊರಡಲಿಲ್ಲ. ಬದಲಿಗೆ, ರುಚಿ ತಿವಾರಿಯೇ ಹಲ್ಲೆ ಮಾಡಲು ಮುಂದಾದಳು ಎಂದೂ ವಿರೋಧಿ ಗುಂಪು ಆರೋಪ ಮಾಡಿತು.

ಇದನ್ನೂ ಓದಿ: Raghava Sharma Nidle Column: ಮತದಾರರ ಪಟ್ಟಿ ಪರಿಷ್ಕರಣೆ ವಿರೋಧದ ಹಿಂದಿನ ಗುಟ್ಟೇನು ?

ಒಂದು ವೇಳೆ ರುಚಿ ತಿವಾರಿ ಬ್ರಾಹ್ಮಣ ಅಲ್ಲದೆ ಬೇರಿನ್ಯಾವುದೋ ಜಾತಿ ಅಥವಾ ಧರ್ಮ ದವಳಾಗಿದ್ದಿದ್ದರೆ ನಾರ್ಥ್ ಕ್ಯಾಂಪಸ್ ಘಟನೆ ಖಂಡಿತವಾಗಿಯೂ ಅಂತಾರಾಷ್ಟ್ರೀಯ ಸುದ್ದಿಯಾಗಿ ಬದಲಾಗುತ್ತಿತ್ತು. ಆದರೆ, ಹಾಗಾಗಲಿಲ್ಲ.

ಪ್ರತಿಭಟನೆ ಮಾಡುತ್ತಿದ್ದವರು ರುಚಿ ತಿವಾರಿ ಜಾತಿ ಕೇಳಿ ಹಲ್ಲೆ ಮಾಡಿದ್ದಾರೆನ್ನುವುದು ಉಲ್ಲೇಖಾರ್ಹ. ಆಕೆ ಮೇಲ್ಜಾತಿಯವಳೆಂದೇ ಬುದ್ಧಿ ಕಲಿಸಲು ಮುಂದಾದರು ಎನ್ನುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಮುಖ್ಯವಾಗಿ, ಯುಜಿಸಿ ನಿಯಮಾವಳಿ ಬಗ್ಗೆ ಪ್ರತಿಭಟನಾ ಕಾರರಿಗೆ ಹಿತವೆನಿಸದ ಪ್ರಶ್ನೆಗಳನ್ನು ಕೇಳಿದ್ದು ಕೂಡ ಆಕ್ರೋಶ ಹೆಚ್ಚಿಸಿತ್ತು.

ನೀನು ತಿವಾರಿಯಲ್ಲವೇ ಎಂದು ಹಗೆ ಯತ್ನಿಸಿದ್ದರು. ಉತ್ತರ ಭಾರತದಲ್ಲಿ ತಿವಾರಿ ಎಂದರೆ ಬ್ರಾಹ್ಮಣರಲ್ಲಿನ ಒಂದು ಉಪಜಾತಿ. ಅದೇ ಕಾರಣಕ್ಕೆ ಆಕೆ ಮೇಲೆರಗಿದ ಹೋರಾಟಗಾರರು (?) ನಿನಗಿಂದು ಬುದ್ಧಿ ಕಲಿಸದೇ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ, ವಿವಸ್ತ್ರಗೊಳಿ ಸಲೂ ಸಜ್ಜಾಗಿದ್ದರು. ಅದೃಷ್ಟವಷಾತ್ ಅಂಥದ್ದೊಂದು ಅಪಾಯದಿಂದ ಹೇಗೋ ಆಕೆ ಪಾರಾಗಿದ್ದಳು.

ಹಲ್ಲೆಯಿಂದ ಆಘಾತಕ್ಕೀಡಾದ ರುಚಿ ತಿವಾರಿ, ನಂತರ ದೆಹಲಿಯ ಮಾರಿಸ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಳು. ಅಲ್ಲಿಯೂ ಆಕೆಗೆ ಆಕ್ಷೇಪಾರ್ಹ ಪದ ಬಳಸಿ ಹೀಯಾಳಿಸಲಾಯಿತು. ಇಡೀ ಘಟನೆಗೆ ರುಚಿ ತಿವಾರಿಯೇ ಕಾರಣ ಎಂದ ಎಐಎಸ್‌ಎ ಸಂಘಟನೆ, ತಿವಾರಿ ವಿರುದ್ಧವೇ ದೂರು ದಾಖಲು ಮಾಡಿದರು.

Screenshot_1 R

ಒಟ್ಟಿನಲ್ಲಿ, ಎರಡೂ ಕಡೆಯಿಂದ ದೂರು-ಪ್ರತಿ ದೂರು ದಾಖಲಾದವು. ಘಟನೆ ಬಗ್ಗೆ ಮಾತನಾಡಿದ ರುಚಿ ತಿವಾರಿ, ನನ್ನ ಮೇಲೆ ನಡೆಸಲಾದ ಹಲ್ಲೆ ಕುರಿತ ವಿಡಿಯೋ ಎಡೆ ವೈರಲ್ ಆಗಿದೆ. ಯಾರು ಯಾರನ್ನು ಕೆರಳಿಸಿದರು ಎಂದು ಜನರೇ ತೀರ್ಮಾನ ಮಾಡಬಹುದು. ನಾನು ಪ್ರತಿಭಟನೆಯ ವರದಿ ಮಾಡಲು ಪತ್ರಕರ್ತೆಯಾಗಿ ಅಲ್ಲಿ ಹೋಗಿದ್ದೆ.

ಪ್ರತಿಭಟನಾಕಾರರ ಬಳಿಗೆ ಹೋದೆ. ಅವರು ನನ್ನ ಪೂರ್ಣ ಹೆಸರು ಮತ್ತು ಜಾತಿಯನ್ನು ಕೇಳಿ ಹಲ್ಲೆಗೆ ಮುಂದಾದರು ಎಂದು ನಾರ್ಥ್ ಕ್ಯಾಂಪಸ್ ನದ ಘಟನೆ ಬಗ್ಗೆ ಹೇಳಿದ್ದಾಳೆ. ಅಲ್ಲಿದ್ದ ಒಬ್ಬ ಹುಡುಗ ನನ್ನನ್ನು ಕರೆದುಕೊಂಡು ಹೋಗಲು ಇತರರಿಗೆ ಸಿಗ್ನಲ್ ಮಾಡು ತ್ತಿದ್ದ. ಹಾಗಾದರೆ ಅವರಲ್ಲಿ ನನ್ನನ್ನು ಅಪಹರಿಸುವ ಉದ್ದೇಶ ಇತ್ತಾ? ನನ್ನ ಬಟ್ಟೆಗಳನ್ನು ಹರಿದು ಹಾಕುವ ಯತ್ನ ಮಾಡಿದರು. ದೇಹವನ್ನು ಅನುಚಿತವಾಗಿ ಮುಟ್ಟಿದರು.

ಖಂಡಿತವಾಗಿಯೂ ಅವರು ಗೂಂಡಾಗಳು. ವಿದ್ಯಾರ್ಥಿಗಳಾಗಲು ಸಾಧ್ಯವೇ ಇಲ್ಲ. ಜಾತಿಯ ಕಾರಣಕ್ಕೆ ನನ್ನ ಮೇಲೆ ಹಲ್ಲೆ ನಡೆಸಿದರು. ಅಲ್ಲಿ ನನ್ನನ್ನು ಯಾರೂ ಬೆಂಬಲಿಸಲಿಲ್ಲ. ಕಾನೂನು ವಿಭಾಗದ ಕೆಲ ಮಂದಿ ಮಾನವೀಯತೆ ತೋರಿದರು. ಅವರ ಸಹಾಯದಿಂದ ಮತ್ತು ಕೆಲವು ಮಹಿಳಾ ಪೊಲೀಸ್ ಸಿಬ್ಬಂದಿಯಿಂದಾಗಿ ಹೊರಬಂದೆ. ಗುಂಪು ಹಲ್ಲೆಯಿಂದ ಹೇಗೋ ತಪ್ಪಿಸಿಕೊಂಡದ್ದೇ ದೊಡ್ಡ ವಿಷಯ ಎಂದು ತಿವಾರಿ ಎಳೆಎಳೆಯಾಗಿ ವಿವರಿಸಿ ದ್ದಾಳೆ.

ರುಚಿ ತಿವಾರಿ ವರದಿಗಾರಿಕೆ ಬಗ್ಗೆ ಯುಜಿಸಿ ನಿಯಮಗಳ ಪರ ಹೋರಾಟ ಮಾಡುತ್ತಿರು ವವರಿಗೆ ಆಕ್ಷೇಪಗಳಿದ್ದಂತೆ ಕಾಣುತ್ತದೆ. ಫೆ.11ರಂದು ಸಂಸದ ಚಂದ್ರಶೇಖರ ಆಜಾದ್ ಅವರ ಆಜಾದ್ ಸಮಾಜ್ ಪಾರ್ಟಿಯಿಂದ ದೆಹಲಿಯ ಜಂತರ್ ಮಂತರ್‌ʼನಲ್ಲಿ ಪ್ರತಿಭಟನೆ ಏರ್ಪಡಿಸಲಾಗಿತ್ತು.

ಅಲ್ಲಿ ಯುಜಿಸಿ ನಿಯಮಕ್ಕೆ ಸುಪ್ರೀಂಕೋರ್ಟ್ ನೀಡಿರುವ ಮಧ್ಯಂತರ ತಡೆಯನ್ನು ತೆರವು‌ ಗೊಳಿಸಬೇಕು ಎಂದು ಘೋಷಣೆ ಕೂಗಲಾಗುತ್ತಿತ್ತು. ಈ ಬಗ್ಗೆ ಪ್ರತಿಭಟನಾಕಾರರಲ್ಲಿ ರುಚಿ ತಿವಾರಿ ಪ್ರಶ್ನೆ ಕೇಳಿದಾಗ, ನಿನ್ನ ಜಾತಿ ಯಾವುದು ಎಂದು ತಿವಾರಿಗೆ ಮರು ಪ್ರಶ್ನೆ ಹಾಕಲಾಯಿತು. ಇದನ್ನು ಖಂಡಿಸಿದ ತಿವಾರಿ, ನೋಡಿ ಇಲ್ಲೂ ಜಾತಿ ಹೆಸರು ಕೇಳುತ್ತೀರಿ. ಅಂದರೆ ಜಾತಿ ವಿಂಗಡಣೆಯೇ ನಿಮ್ಮ ಉದ್ದೇಶ ಎಂದು ಚಾನೆಲ್ ಮುಂದೆ ಮಾತಾಡಿದಳು.

ಪ್ರತಿಭಟನಾಕಾರರು ಆಕೆ ಮಧ್ಯೆ ಸುತ್ತುವರಿದಾಗ ಹೈಡ್ರಾಮ ಸೃಷ್ಟಿಯಾಯಿತು. ನನ್ನ ಜಾತಿ ಕೇಳಿದರೆಂದು ರುಚಿ ತಿವಾರಿ ಕೂಡ ವ್ಯಂಗ್ಯದ ಮಾತುಗಳಿಂದ ಯುವಕರನ್ನು ಕೆರಳಿಸಿದ ವಿಡಿಯೋ ವೈರಲ್ ಆಯಿತು. ಹೀಗಾಗಿ, ಹೋರಾಟಗಾರರಿಗೆ ತಿವಾರಿ ವಿಲನ್ ಆಗಿದ್ದರು.

ಪರಿಣಾಮವಾಗಿ, ಫೆ.13ರಂದು ನಾರ್ಥ್ ಕ್ಯಾಂಪಸ್ನಲ್ಲಿ ಎಡ ಸಂಘಟನೆಯ ವಿದ್ಯಾರ್ಥಿಗಳು ರುಚಿ ತಿವಾರಿಯನ್ನು ಟಾರ್ಗೆಟ್ ಮಾಡಿ, ಹಗೆ ಯತ್ನಿಸಲು ಅದು ಕೂಡ ಕಾರಣವಾಗಿತ್ತು ಎಂದು ಹೇಳಲಾಗಿದೆ. ಹಾಗಂತ, ರುಚಿ ತಿವಾರಿಯ ಬಟ್ಟೆ ಎಳೆದಾಡಿ, ದೈಹಿಕ ಹಲ್ಲೆ ನಡೆಸಲು ಹೋರಾಟಗಾರರಿಗೆ ಅಧಿಕಾರವಿದೆಯೇ? ಬಾಯಿ ಬಿಟ್ಟರೆ ಸಂವಿಧಾನ, ಪ್ರಜಾಪ್ರಭುತ್ವ, ಸಮಾನತೆ ಎಂದು ಭಾಷಣ ಮಾಡುವವರು ಆಕೆಯನ್ನು ವಿಸ್ತ್ರಗೊಳಿ ಸಲೂ ಹೇಸುವುದಿಲ್ಲ ಎಂದರೆ? ಇರಲಿ, ವಿದ್ಯಾರ್ಥಿ ಜೀವನದಲ್ಲಿರುವ ಪ್ರತಿಭಟನಾಕಾರರು ಬಿಸಿ ರಕ್ತದವರು ಎಂದಿಟ್ಟುಕೊಳ್ಳೋಣ.

ಈ ಹೋರಾಟಗಾರ ಪೋಷಕರಂತೆ ಕಾಣಿಸಿಕೊಳ್ಳುವ ಮಹಾನುಭಾವರಾದರೂ ಎಲ್ಲಿ ಹೋದರು? ಅವರ ನಾಲಿಗೆಗಳು ಬಿದ್ದು ಹೋಗಿವೆಯೇ? ಸಾರ್ವಜನಿಕ ಸ್ಥಳದಲ್ಲಿ ಬಟ್ಟೆ ಬಿಚ್ಚೋಣ ಎಂದು ಹೆದರಿಸುವುದನ್ನು ಇವರೇಕೆ ಖಂಡಿಸಿಲ್ಲ? ಯುಜಿಸಿ ನಿಯಮ ಸಮರ್ಥಿಸಿ ಸಮಾನತೆ ಹೆಸರಲ್ಲಿ ಪ್ರತಿಭಟನೆ ಮಾಡುತ್ತಿದ್ದವರು ಘೋಷಣೆ ಕೂಗುತ್ತಿದ್ದದ್ದು ಮಾತ್ರ ಬ್ರಾಹ್ಮಣವಾದ್ ಸೇ ಆಜಾದಿ.. ಮನುವಾದ್ ಸೇ ಆಜಾದಿ ಎಂಬುದಾಗಿ. ಸಮಾನತೆ ಗಾಗಿ ಮಾಡುತ್ತಿದ್ದ ಕೊನೆಗೆ ಬ್ರಾಹ್ಮಣ ವಿರೋಧಿ ಹೋರಾಟದ ರೂಪ ಪಡೆದದ್ದಲ್ಲದೆ, ಪತ್ರಕರ್ತೆ ಬ್ರಾಹ್ಮಣಳಾದ ಕಾರಣ ಆಕೆಯ ಬಟ್ಟೆ ಬಿಚ್ಚಬೇಕೆಂಬ ಹಂತಕ್ಕೂ ಹೋಗಿತ್ತು.

ನಾರ್ಥ್ ಕ್ಯಾಂಪಸ್ ಪ್ರತಿಭಟನೆಯಲ್ಲಿ ನಕ್ಸಲ್‌ವಾದಿಗಳ ಬಗ್ಗೆ ಅನುಕಂಪ ಹೊಂದಿದ್ದ ವರೂ ಕಾಣಿಸಿಕೊಂಡಿದ್ದರು. ಹಾಗಾಗಿ, ಪ್ರತಿಭಟನೆಗಳು ಯಾವ ದಿಕ್ಕಿನಲ್ಲಿವೆ ಎಂಬುದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದು. ಫೆ.13ರ ಘಟನೆಯ ವೀಡಿಯೊ ಗಳಲ್ಲಿ ರುಚಿ ತಿವಾರಿ ಅವರನ್ನು ಸುತ್ತುವರಿದವರಲ್ಲಿ ಎಡ ವಿದ್ಯಾರ್ಥಿ ಸಂಘಟನೆಯಾದ ಭಗತ್ ಸಿಂಗ್ ಛತ್ರ ಏಕ್ತಾ ಮಂಚ್‌ನ ( bsCEM ) ಅಧ್ಯಕ್ಷೆ ಗುರ್ಕಿರತ್ ಕೌರ್ ಕೂಡ ಇದ್ದರು ಎಂದು ವರದಿಯಾಗಿದೆ.

ಗುರ್ಕಿರತ್ ಈ ಹಿಂದೆ ನಿಷೇಧಿತ ವಿದ್ಯಾರ್ಥಿ ಸಂಘಟನೆ ರ‍್ಯಾಡಿಕಲ್ ಸ್ಟೂಡೆಂಟ್ಸ್ ಯೂನಿಯನ್ (RSU) ಅನ್ನು ಬಹಿರಂಗವಾಗಿ ಬೆಂಬಲಿಸಿದ್ದವರು. ಈ ಸಂಘಟನೆಯ ಮೂಲಕ ಮಾವೋವಾದಿಗಳು ಭಾರತೀಯ ಸಶಸ್ತ್ರ ಪಡೆಗಳ ವಿರುದ್ಧ ಹೋರಾಡಲು ನಿಯೋಜಿಸಲಾಗುತ್ತಿದ್ದ ನಕ್ಸಲ್ ಉಗ್ರವಾದಿಗಳನ್ನು ನೇಮಿಸಿಕೊಳ್ಳುತ್ತಿದ್ದರು ಎನ್ನುವುದು ಗಮನಾರ್ಹ.

ಉನ್ನತ ಶಿಕ್ಷಣದಲ್ಲಿ ಸಮಾನತೆ ತರಲು ಯುಜಿಸಿ ರೂಪಿಸಿರುವ ಹೊಸ ನಿಯಮಗಳು ಎಸ್ಸಿ/ಎಸ್‌ಟಿ, ಒಬಿಸಿಗಳ ಪರವಾಗಿ ರೂಪಿಸಲಾಗಿದೆ. ಇದರಿಂದ ಸಾಮಾನ್ಯ ವರ್ಗದ ವಿದ್ಯಾರ್ಥಿ ಗಳು ಹರಕೆಯ ಕುರಿಗಳಾಗಲಿದ್ದಾರೆ. ಅಲ್ಲದೆ, ದುರುದ್ದೇಶದಿಂದ ಸುಳ್ಳು ದೂರು ನೀಡು ವವರ ವಿರುದ್ಧ ಕ್ರಮಕ್ಕೆ ಯಾವುದೇ ನಿಯಮಗಳಿಲ್ಲ ಎನ್ನುವುದು ಸಾಮಾನ್ಯ ವರ್ಗದವರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿ ಕೇಂದ್ರ ಸರ್ಕಾರದ ವಿರುದ್ಧ ಜನ ಬೀದಿಗಿಳಿದಿದ್ದರು.

ಯಾವುದೇ ಕಾರಣಕ್ಕೂ ನಾವು ಇನ್ನು ಬಿಜೆಪಿಗೆ ಮತ ಹಾಕುವುದಿಲ್ಲ ಎಂಬ ಯುವಕರ ಮಾತುಗಳು ಉತ್ತರ ಭಾರತದಲ್ಲಿ ರಾಜಕೀಯ ಸಂಚಲನ ಸೃಷ್ಟಿಸಿತ್ತು. ಯಾವ ಕಾರಣಕ್ಕಾಗಿ ಇಂಥದ್ದೊಂದು ನಿಯಮ ಮಾಡಿದ್ದಾರೆ? ನಮ್ಮ ಕ್ಷೇತ್ರಗಳಲ್ಲಿ ಜನರಿಗೆ ಉತ್ತರ ಕೊಡಲಾಗು ತ್ತಿಲ್ಲ ಎಂದು ಬಿಜೆಪಿ ಸಂಸದರು, ಶಾಸಕರು, ಮುಖಂಡರು ಒಳಗೊಳಗೇ ಅಸಮಾಧಾನ ಗೊಂಡಿದ್ದರು.

ನಂತರ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಿ, ಮಧ್ಯಂತರ ತಡೆ ನೀಡಿದ್ದರಿಂದ ಅವರೆಲ್ಲರೂ ನಿರಾಳರಾಗಿದ್ದರು. ನಿಯಮಗಳಿಂದ ಉಂಟಾದ ಸಂಘರ್ಷಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅಥವಾ ಪ್ರಮುಖರು ಯಾರೂ ಮಾತನಾಡ ಲಿಲ್ಲ.

ಸುಪ್ರೀಂ ಕೋರ್ಟ್ ವಿಚಾರಣೆ ಸಂದರ್ಭದಲ್ಲೂ ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್, ವಕೀಲರು ಮೌನದಿಂದಲೇ ಮಧ್ಯಂತರ ತಡೆಗೆ ಒಪ್ಪಿಗೆ ನೀಡಿದರು. ಸರ್ಕಾರದ ನಿಯಮಾ ವಳಿ ಸರಿಯಾಗಿದೆ ಎನ್ನುವುದಾದರೆ ಅವರು ತಡೆ ನೀಡಬೇಡಿ ಎಂದು ವಾದಿಸಬೇಕಿತ್ತು. ಆದರೆ, ಹಾಗೆ ಮಾಡಲಿಲ್ಲ. ವಿವಾದಿತ ಯುಜಿಸಿ ನಿಯಮಾವಳಿಗಳಿಗೆ ನಾವು ತಡೆ ನೀಡಲಿಲ್ಲ. ಇದು ಸುಪ್ರೀಂ ಕೋರ್ಟ್ ಆದೇಶ. ಇಲ್ಲಿ ನಮ್ಮ ಪಾತ್ರವಿಲ್ಲ ಎಂಬ ಸಂದೇಶ ರವಾನಿಸಿ ಕೇಂದ್ರ ಸರ್ಕಾರ ಸೇಫ್ ಆಗಲು ಯತ್ನಿಸಿತು. ‌

ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಸಮುದಾಯದವರು ನಮ್ಮ ವಿರುದ್ಧ ತಿರುಗಿ ಬೀಳಬಾರದು ಎಂದೇ ಈ ಮೌನ ತಂತ್ರ ಅನುಸರಿಸಿತು ಎಂದು ಬಿಡಿಸಿ ಹೇಳಬೇಕಿಲ್ಲ. ಯುಜಿಸಿ ನಿಯಮ ಹಾಗೂ ನಂತರದ ಘಟನಾವಳಿಗಳ ಬಗ್ಗೆ ಉತ್ತರ ಪ್ರದೇಶ ಮಾಜಿ ಸಿಎಂ ಮಾಯಾವತಿ ಅವರು ಮಾತನಾಡುತ್ತಾ, ಕ್ಯಾಂಪಸ್‌ಗಳಲ್ಲಿ ಶೋಷಣೆ, ತಾರತಮ್ಯ ದೂರ ಮಾಡಲು ನಿಯಮಾವಳಿ ಅಗತ್ಯ. ಆದರೆ, ಸಮಾಜದಲ್ಲಿ ಒಗ್ಗಟ್ಟು ಕಾಪಾಡುವ ದೃಷ್ಟಿಯಿಂದ ಎಲ್ಲರೊಂದಿಗೆ ಸಮಾಲೋಚಿಸಿ ಇಂಥಾ ನಿಯಮಗಳನ್ನು ಜಾರಿ ಮಾಡಬೇಕು ಎಂಬ ಅಭಿಪ್ರಾಯ ನೀಡಿ, ರಾಜಕೀಯ-ಸಾಮಾಜಿಕ ಸಮತೋಲನ ಕಾಯ್ದುಕೊಂಡರು.

ಯುಜಿಸಿ ನಿಯಮ ಜಾರಿಯಾಗುವ ಮುನ್ನವೇ ಇದು ದೇಶದ ಯುವ ಸಮೂಹದ ಮಧ್ಯೆ ಕೋಲಾಹಲ ಎಬ್ಬಿಸಿದೆ. ಮುಖ್ಯವಾಗಿ, ಯುವಕರ ನಡುವಿನ ಜಾತಿ ವಿಭಜನೆಗೂ ಕಾರಣ ವಾಗಿದೆ. ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾನೂನುಗಳು ದುರ್ಬಳಕೆಯಾಗುತ್ತಿರುವುದು ಹಾಗೂ ಅಮಾಯಕರು ಶಿಕ್ಷೆಗೆ ಗುರಿಯಾಗುತ್ತಿರುವ ಹತ್ತಾರು ಉದಾಹರಣೆಗಳು ಕಣ್ಣ ಮುಂದಿರುವಾಗ ಉನ್ನತ ಶಿಕ್ಷಣ ಕೇಂದ್ರಗಳಲ್ಲಿ ಇಂಥಾ ನಿಯಮಾವಳಿಗಳ ದುರುಪಯೋಗ ವಾಗದು ಎನ್ನುವುದಕ್ಕೆ ಏನು ಗ್ಯಾರಂಟಿ? ಹಾಗಾದರೆ ಸುಳ್ಳು ಕೇಸ್ ದಾಖಲು ಮಾಡಿದವರಿಗೆ ಶಿಕ್ಷೆಯ ಬಗ್ಗೆ ನಿಯಮಗಳಲ್ಲಿ ಸ್ಪಷ್ಟತೆ ಏಕಿಲ್ಲ? ಈ ನಿಯಮಗಳು ಸಮಾಜದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣ ಮಾಡಲಿವೆ ಎನ್ನುವುದು ಕೇಂದ್ರ ಶಿಕ್ಷಣ ಇಲಾಖೆಗೆ, ಕೇಂದ್ರ ಸಚಿವರಿಗೆ ತಿಳಿದಿರಲಿಲ್ಲವೇ? ಅಥವಾ ಶಿಕ್ಷಣ ಸಚಿವರ ಗಮನಕ್ಕೆ ತರದೆ ನಿಯಮ ರೂಪಿಸ ಲಾಯಿತೇ? ಅಥವಾ ಸಾಮಾನ್ಯ ವರ್ಗದವರು ಹೇಗೂ ನಮ್ಮನ್ನು ಬೆಂಬಲಿಸುತ್ತಾರೆ.

ಹೀಗಾಗಿ ಎಸ್‌ಸಿ-ಎಸ್‌ಟಿ, ಒಬಿಸಿ ಮತ ಬ್ಯಾಂಕನ್ನು ಮತ್ತಷ್ಟು ಗಟ್ಟಿಗೊಳಿಸಬೇಕೆಂಬ ಬಿಜೆಪಿಯ ರಾಜಕೀಯ ರಣನೀತಿಯ ಭಾಗ ಇದಾಗಿತ್ತೇ? ನಿಯಮಾವಳಿ ರೂಪಿಸಿದ್ದ ಸಮಿತಿ ಯಲ್ಲಿದ್ದವರು ಯಾರಾದರೂ ಹೊಸ ನಿಯಮಗಳ ಬಗ್ಗೆ ಆಕ್ಷೇಪಿಸಿದ್ದರೇ? ಇಂಥಾ ಹತ್ತಾರು ಪ್ರಶ್ನೆಗಳಿಗೆ ಉತ್ತರ ಮಾತ್ರ ಸಿಕ್ಕಿಲ್ಲ. ಬಿಜೆಪಿಯವರ ಮೌನ ನೋಡಿದರೆ ಉತ್ತರವನ್ನು ನಮ್ಮ ವಿವೇಚನೆಯಿಂದಲೇ ಅರ್ಥಮಾಡಿಕೊಳ್ಳಬಹುದು.