Prof R G Hegde Column: ಒಳ್ಳೆಯ ರಾಜಕೀಯಕ್ಕಾಗಿ ಜನರನ್ನು ಕಟ್ಟಲು ಸಾಧ್ಯವಿದೆಯೆ ?
ಮುಖ್ಯವಾಗಿ ರಾಜಕೀಯಕ್ಕೆ ಸಂಬಂಧಿಸಿದಂತೆ, ಜನರ ಮನಸ್ಸನ್ನು ತಿದ್ದಿ, ತೀಡಿ ಅವರನ್ನು ವಿವೇಕವಂತರಾಗುವಂತೆ ಸಿದ್ಧಪಡಿಸಲು ಸಾಧ್ಯವಿದೆಯೇ? ರಾಜಕೀಯ ವ್ಯವಸ್ಥೆಗಳನ್ನು ಗುಣಾ ತ್ಮಕವಾಗಿ ಬದಲಾಯಿಸಲು ಸಾಧ್ಯವಿದೆಯೇ? ಮಾಸ್ ಜನತೆಗೆ ‘ರಾಜಕೀಯ ಶಿಕ್ಷಣ’ ನೀಡಿ ಅವರನ್ನು ‘ಉತ್ತಮ’ರನ್ನಾಗಿಸಲು ಸಾಧ್ಯವಿದೆಯೇ? ಇದ್ದರೆ ಅಂತಹ ತಂತ್ರಗಳು, ಸೂತ್ರಗಳು ಯಾವುವು? ಫಾರ್ಮ್ಯುಲಾಗಳನ್ನು ಕಂಡುಕೊಂಡರೆ ಪ್ರಭುತ್ವಗಳ ಸ್ವರೂಪಗಳನ್ನು ನಿಜಕ್ಕೂ ಬದಲಾಯಿಸಬಹುದೇ? ಐತಿಹಾಸಿಕತೆ ನೋಡಿಕೊಂಡು ಮುಂದೆ ಹೋಗಬೇಕು. ಇಂತಹ ಯೋಚನೆಗಳು ಸಾವಿರಾರು ವರ್ಷಗಳ ಹಿಂದೆಯೇ ಹುಟ್ಟಿಕೊಂಡಿದ್ದವು.
-
ಜನಜಾಗೃತಿ
ಪ್ರೊ.ಆರ್.ಜಿ.ಹೆಗಡೆ
ಒಂದು ಮಾತಿದೆ. ಯುದ್ಧಗಳು ಮೊದಲು ಹುಟ್ಟಿಕೊಳ್ಳುವುದು ಮನಸ್ಸಿನಲ್ಲಿ. ಅದು ಸರಿ. ಜತೆಯೇ ಹೇಳಿಕೊಳ್ಳಬೇಕು. ಏನೆಂದರೆ, ಯುದ್ಧ ಅಷ್ಟೇ ಅಲ್ಲ, ಎಲ್ಲ ರಾಜಕೀಯ ವ್ಯವಸ್ಥೆ ಗಳು, ಸರಕಾರಗಳು ಹುಟ್ಟಿಕೊಳ್ಳುವುದು ಕೂಡ ಮನಸ್ಸಿನೊಳಗಿಂದಲೇ. ಒಳ್ಳೆಯ ಪ್ರಭುತ್ವ ಗಳು ಬಂದರೆ, ಅದಕ್ಕೆ ಕಾರಣ ರಾಜಕೀಯವಾಗಿ ಪ್ರೌಢ ಜನತೆ (ಅವರ ಮನಸ್ಸು). ಕೆಟ್ಟ ಸರಕಾರಗಳು ಬಂದರೆ ಕಾರಣ ಒಳ್ಳೆಯ ಸರಕಾರಗಳನ್ನು ತಂದುಕೊಳ್ಳಬಲ್ಲ ಪ್ರೌಢಿಮೆ ಜನರಿಗೆ ಬಂದಿಲ್ಲ ಎನ್ನುವುದು.
ಎಲ್ಲದಕ್ಕೂ ಕಾರಣ ಮನಸ್ಸು ಎಂದು ನಾವು ಒಪ್ಪಿಕೊಂಡ ಮೇಲೆ ಕೆಲವು ಪೂರಕ ವಿಷಯ ಗಳು, ಮಾತುಗಳು, ಪ್ರಶ್ನೆಗಳು ಬಂದು ನಿಲ್ಲುತ್ತವೆ. ಮುಖ್ಯವಾಗಿ ರಾಜಕೀಯಕ್ಕೆ ಸಂಬಂಧಿಸಿ ದಂತೆ, ಜನರ ಮನಸ್ಸನ್ನು ತಿದ್ದಿ, ತೀಡಿ ಅವರನ್ನು ವಿವೇಕವಂತರಾಗುವಂತೆ ಸಿದ್ಧಪಡಿಸಲು ಸಾಧ್ಯವಿದೆಯೇ? ರಾಜಕೀಯ ವ್ಯವಸ್ಥೆಗಳನ್ನು ಗುಣಾತ್ಮಕವಾಗಿ ಬದಲಾಯಿಸಲು ಸಾಧ್ಯ ವಿದೆಯೇ? ಮಾಸ್ ಜನತೆಗೆ ‘ರಾಜಕೀಯ ಶಿಕ್ಷಣ’ ನೀಡಿ ಅವರನ್ನು ‘ಉತ್ತಮ’ ರನ್ನಾಗಿಸಲು ಸಾಧ್ಯವಿದೆಯೇ? ಇದ್ದರೆ ಅಂತಹ ತಂತ್ರಗಳು, ಸೂತ್ರಗಳು ಯಾವುವು? ಫಾರ್ಮ್ಯುಲಾ ಗಳನ್ನು ಕಂಡುಕೊಂಡರೆ ಪ್ರಭುತ್ವಗಳ ಸ್ವರೂಪಗಳನ್ನು ನಿಜಕ್ಕೂ ಬದಲಾಯಿಸಬಹುದೇ? ಐತಿಹಾಸಿಕತೆ ನೋಡಿಕೊಂಡು ಮುಂದೆ ಹೋಗಬೇಕು. ಇಂತಹ ಯೋಚನೆಗಳು ಸಾವಿರಾರು ವರ್ಷಗಳ ಹಿಂದೆಯೇ ಹುಟ್ಟಿಕೊಂಡಿದ್ದವು. ಕ್ರಿಸ್ತಪೂರ್ವದ ವರ್ಷಗಳಲ್ಲಿ ಗ್ರೀಸ್‌ನಲ್ಲಿ ಇದ್ದ ಎರಡು ಮಹಾನ್ ಮೇಧಾವಿ ತತ್ವಜ್ಞಾನಿಗಳು- ಪ್ಲೇಟೋ ಮತ್ತು ಅರಿಸ್ಟಾಟಲ್, ಈ ವಿಷಯದ ಕುರಿತು ಆಳವಾಗಿ ಚಿಂತನ ನಡೆಸಿದ್ದರು.
ಆದರ್ಶ ರಿಪಬ್ಲಿಕ್ ಅನ್ನು ಕಟ್ಟಲು, ಮಲಿನ ರಾಜಕೀಯವನ್ನು ಸ್ವಚ್ಚಗೊಳಿಸಲು ಸಾಧ್ಯ ವಿದೆಯೇ ಎಂಬುದರ ಕುರಿತು ಬಹಳ ತಲೆಕೆಡಿಸಿಕೊಂಡಿದ್ದರು. ಅವರ ವಾದಗಳ ಹಾಗೂ ನಂತರದ ಗಾಂಧಿವಾದದ ಹಿನ್ನೆಲೆ ಇಟ್ಟುಕೊಂಡು ಒಳ್ಳೆಯ ರಾಜಕೀಯಕ್ಕಾಗಿ ಮನಸ್ಸು ಗಳನ್ನು ಕಟ್ಟಲು ಸಾಧ್ಯವಿದೆಯೇ ಎಂಬುದನ್ನು ಗಮನಿಸಲು ಈ ಲೇಖನ.
ಪ್ಲೇಟೋ ಮತ್ತು ಅರಿಸ್ಟಾಟಲ್ ಅವರ ವಾದಗಳನ್ನು ಸುತ್ತು ಹಾಕಿ ಬರಬೇಕು. ‘ಆದರ್ಶ ರಾಜಕೀಯ ವ್ಯವಸ್ಥೆ’ಯೊಂದನ್ನು ಮೊಟ್ಟಮೊದಲು ಪರಿಕಲ್ಪಿಸಿದವನು ಮತ್ತು ಆ ಕುರಿತಾದ ಚರ್ಚೆಯೊಂದನ್ನು ಹುಟ್ಟುಹಾಕಿದವನು ಪ್ಲೇಟೋ. ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಹಿಂದೆಯೇ ಆತ ಈ ಕುರಿತು ಯೋಚಿಸಿದ. ಚಿಂತನಗಳನ್ನು ತನ್ನ ಪ್ರಸಿದ್ಧ ಪುಸ್ತಕ ‘ರಿಪಬ್ಲಿಕ್’ನಲ್ಲಿ ಹಂಚಿಕೊಂಡ. ವಾದದ ಪ್ರಮುಖ ಅಂಶವೆಂದರೆ ಆದರ್ಶ ರಾಜಕೀಯ ವ್ಯವಸ್ಥೆ ಒಂದನ್ನು ಕಟ್ಟಲು ಸಾಧ್ಯವಿದೆ. ಆದರೆ ಅದಕ್ಕೆ ಭ್ರಮೆ ಇಲ್ಲದ, ಪ್ರೌಢವಾಗಿ ಯೋಚಿಸಬಲ್ಲ ಜನತೆ ಬೇಕು.
ಇದನ್ನೂ ಓದಿ: Prof R G Hegde Column: ಓದುವವರಿಲ್ಲ ಎಂದು ಕೊರಗುವವರು ಇವರತ್ತ ನೋಡಬೇಕು
ಭ್ರಮೆಗಳಲ್ಲಿ ತೇಲಿ ಹೋಗಬಲ್ಲ, ಭಾವನಾತ್ಮಕ ಜನರಿಂದ ಆದರ್ಶ ರಾಜಕೀಯ ಕಟ್ಟಲು ಸಾಧ್ಯವಾಗುವುದಿಲ್ಲ. ಹೀಗೆ ಯೋಚಿಸಿದ ಆತ ಜನರನ್ನು ಭ್ರಮೆಗಳಲ್ಲಿ ಮುಳುಗೇಳಿಸಬಲ್ಲ ಸಾಮಾಜಿಕ ಮೂಲಗಳು ಯಾವವು ಎನ್ನುವುದನ್ನೂ ಹುಡುಕುತ್ತ ಹೋದ. ಇಲ್ಲಿ ಆತನಿಗೆ ಹೊಳೆದಿದ್ದೆಂದರೆ ಜನರನ್ನು ಅವಾಸ್ತವ ಜಗತ್ತಿನಲ್ಲಿ ಇಳಿಸಿ ಅವರ ಮಾನಸಿಕ ಸಮತೋಲ ನವನ್ನೇ ಅಲುಗಾಡಿಸುವ, ಕೆಡಿಸುವ ಕೆಲಸದಲ್ಲಿ ತೊಡಗಿದವು (ಸಮಾಜಬಾಹಿರ ಚಟುವಟಿಕೆಗಳ ಜತೆ) ಕಲೆಗಳು ಮತ್ತು ಸಾಹಿತ್ಯ ಪ್ರಕಾರಗಳು. ಎಲ್ಲ ಕಲಾವಿದರು ಮತ್ತು ಸಾಹಿತಿಗಳ ವ್ಯಕ್ತಿತ್ವಗಳಲ್ಲಿನ ಏನೋ ಒಂದು ಸಮಾನ ಮಾನಸಿಕ ಅಂಶವನ್ನು, ಅಂದರೆ ಪ್ರಾಯ್ಡ್ ಹೇಳುವ ರೀತಿಯ ‘ಕನಸಿನ ರಾಜ್ಯ’ದಲ್ಲಿ ಅವರು ಇರುವುದನ್ನು ಗಮನಿಸಿದ ಆತ ಸಾಹಿತಿಗಳು, ವರ್ಣಚಿತ್ರಕಾರರು, ಶಿಲ್ಪಿಗಳು ಮತ್ತಿತರ ಕಲಾವಿದರನ್ನು ‘ಭ್ರಮಾಧೀನರು’ ಎಂದು ಕರೆದ. ಈ ಕುರಿತಾಗಿ ವಿವರಿಸಲು ತನ್ನ ‘ಅನುಕರಣಾವಾದ’ವನ್ನೇ (ಮಿಮೆಸಿಸ್) ಆತ ಮಂಡಿಸಿದ.
ಅದರಲ್ಲಿ ಆತ ಹೇಳುತ್ತಾನೆ. ಏನೆಂದರೆ ಕಲಾವಿದ ಜಗತ್ತಿನ ಮೂಲ ವಾಸ್ತವವನ್ನು ಅನಾ ವರಣಗೊಳಿಸುವುದಿಲ್ಲ. ವಾಸ್ತವವನ್ನು ನೇರವಾಗಿ ಕೃತಿಗಳಲ್ಲಿ ಹಿಡಿದಿಡುವುದಿಲ್ಲ. ಆತ ಮಾಡುವುದೆಂದರೆ ತನ್ನ ಎದುರಿಗೆ ಸಿಕ್ಕ ವಿಷಯಗಳನ್ನು ಅನುಕರಿಸುವುದು.
ಉದಾಹರಣೆಗೆ ಪ್ಲೇಟೋ ಹೇಳಿದ. ಏನೆಂದರೆ ಒಂದು ಕುರ್ಚಿಯ ಪೇಂಟಿಂಗ್ ಮಾಡುವ ಕಲಾವಿದ, ಬಡಗಿ ತಯಾರಿಸಿದ ಕುರ್ಚಿಯ ಕಲ್ಪನೆಯನ್ನು ಅನುಕರಿಸುತ್ತಾನೆ. ಕಲಾವಿದ ಸೃಷ್ಟಿಸುವುದು ‘ಮೂಲ’ ಕಲ್ಪನೆಯನ್ನಲ್ಲ. ಬಡಗಿಯ ಕಲ್ಪನೆಯಲ್ಲಿ ಬಂದುದನ್ನು. ಆತ ಅನುಕರಿಸಿದ್ದನ್ನು ಅನುಕರಿಸುವವನು ಕಲಾವಿದ. ಹೀಗೆ ಪ್ಲೇಟೋ ಹೇಳುವುದೆಂದರೆ ಕಲಾವಿದ ಸೃಷ್ಟಿಸುವ ಜಗತ್ತು ಒರಿಜಿನಲ್ ಆದುದಲ್ಲ. ಆದು ಒಂದು ಭ್ರಮೆ. ಆಕರ್ಷಕ ವಾದ, ಆದರೆ ಅಪಾಯಕಾರಿಯಾದ ಭ್ರಮೆ.
‘ಆಕರ್ಷಕ’ ಏಕೆಂದರೆ ಅದಕ್ಕೆ ಕಲಾವಿದ ಬಣ್ಣಗಳನ್ನು ತುಂಬಿರುತ್ತಾನೆ. ಕಲೆ ವಿಷಕನ್ಯೆಯ ಹಾಗೆ. ಜನರ ಮನಸ್ಸನ್ನು ಆಕರ್ಷಿಸಿ ನಾಶಗೊಳಿಸುತ್ತದೆ. ಅವರ ಮಾನಸಿಕ ಸಮತೋಲನ ದ ಅಂಶವನ್ನು ಒಳಗಿನಿಂದ ತಿಂದುಬಿಡುತ್ತದೆ. ಹಾಗಾಗಿ ಕಲಾವಿದರು ಸಮಾಜಕ್ಕೆ ಅಪಾಯಕಾರಿ.
ಹೀಗೆ ಯೋಚಿಸಿದ ಪ್ಲೇಟೋ ವಾದಿಸುವುದೆಂದರೆ ಸಮಾಜದ ಸ್ವಾಸ್ಥ್ಯಕ್ಕಾಗಿ, ಹಿತಕ್ಕಾಗಿ, ಆದರ್ಶ ಸಮಾಜವನ್ನು ಕಟ್ಟುವ ಸಲುವಾಗಿ ಕಲಾವಿದರು, ಕವಿಗಳು ಇಂತಹ ಭ್ರಮಾ ಲೋಕದಲ್ಲಿ ತೇಲುತ್ತಿರುವವರನ್ನು ಸಮಾಜದಿಂದ ಹೊರಗಿಡುವುದು ಅನಿವಾರ್ಯ.
ಏಕೆಂದರೆ ಅವರು ಮಾಟಗಾರರು. ಅವರಿಗೆ, ಕಲೆಗೆ ಜನ ಮರುಳಾಗುತ್ತಾರೆ. ಇಂತಹ ಬೇರೆ ಯವರ ಮೇಲೆ ಮಂಕುಬೂದಿ ಎರಚಬಲ್ಲವರು ಆದರ್ಶ ದೇಶವೊಂದಕ್ಕೆ ಅಪಾಯಕಾರಿ. ಈ ಕುರಿತ ಒಂದು ಕಠೋರ ನಿರ್ಧಾರಕ್ಕೆ ಬಂದ ಆತ ಸಾಹಿತಿಗಳನ್ನು, ಕಲಾವಿದರನ್ನು ಆದರ್ಶ ಸಮಾಜದಿಂದ ದೂರವಿಡಬೇಕು ಎಂದು ಹೇಳಿಬಿಟ್ಟ.
ಇಲ್ಲವಾದರೆ ಅವರು ಸಮಾಜವನ್ನೇ ಕೆಡಿಸಿಬಿಡುತ್ತಾರೆ ಎಂದು ಹೇಳಿದ. ಇಂದಿನ ದಿನಗಳಲ್ಲಿ ಆತ ಇದ್ದರೆ ಬಹುಶಃ ಸಿನಿಮಾ ನಟರು, ಕ್ರಿಕೆಟ್ ಆಟಗಾರರು, ಟಿ.ವಿ ಸೀರಿಯಲ್ ಗಳ ನಟರು ಇಂಥವರ ಕುರಿತೂ ಇದೇ ಮಾತನ್ನೇ ಹೇಳುತ್ತಿದ್ದನೋ ಏನೋ? ರಾಜಕೀಯಕ್ಕೆ ಅವರು ಬರಬಾರದು, ಅವರು ಅಪಾಯಕಾರಿ ಎಂದು ಹೇಳುತ್ತಿದ್ದನೋ ಏನೋ!
ಈ ವಾದದ ವಿರುದ್ಧ ವಾದವನ್ನು ಜಾಣ ವಕೀಲನಂತೆ ಮಂಡಿಸಿದವ ಪ್ಲೇಟೋನ ಶಿಷ್ಯ ಅರಿಸ್ಟಾಟಲ್ (ಅಲೆಕ್ಸಾಂಡರ್‌ನ ಗುರು). ತನ್ನ ಗುರುವಿನ ಮಾತನ್ನು ಆತ ಭಾಗಶಃ ಒಪ್ಪಿದ. ಅಂದರೆ ಆದರ್ಶ ಸಮಾಜ ಒಂದನ್ನು ಕಟ್ಟಬೇಕು ಮತ್ತು ಕಟ್ಟಲು ಸಾಧ್ಯವಿದೆ ಎನ್ನುವ ಮಾತನ್ನು ಆತ ಒಪ್ಪಿದ.
ಪ್ಲೇಟೋನ ವಾದವನ್ನೇ ಕೇಂದ್ರದಲ್ಲಿಟ್ಟುಕೊಂಡು ತನ್ನ ಪುಸ್ತಕ ‘ಪೋಯೆಟಿಕ್ಸ್’ ರಚಿಸಿದ. ಆದರೆ ಕುತೂಹಲವೆಂದರೆ ತನ್ನ ಗುರುವಿಗೆ ತಿರುಮಂತ್ರ ಹಾಕಿದ ಆತ ಪ್ಲೇಟೋನಿಗಿಂತ ವಿರುದ್ಧ ದಿಕ್ಕಿನಲ್ಲಿ ತನ್ನ ವಾದಸರಣಿಯನ್ನು ಕೊಂಡೊಯ್ದ. ಆತ ಹೇಳುತ್ತಾನೆ. ಪ್ಲೇಟೋನ ‘ಅನುಕರಣಾ ವಾದ’ ಕಲಾವಿದರ ಮನಸ್ಸಿನ ಕುರಿತಾದ ತಪ್ಪುಗ್ರಹಿಕೆಯಿಂದ ಕೂಡಿದೆ.
ಸಾಹಿತಿಗಳು ಕಲಾವಿದರು ‘ವಾಸ್ತವ’ದ ಅನುಕರಣೆಯಲ್ಲಿ ತೊಡಗುವುದೇನೂ ಇಲ್ಲ. ಅವರ ಕೆಲಸ ಜೀವನವನ್ನು ಪ್ರತಿನಿಧಿಸುವುದು.(representation). ಅಂದರೆ ಜೀವನವನ್ನು ಅದು ಇರುವುದಕ್ಕಿಂತ ಸುಂದರವಾಗಿ ಪ್ರತಿನಿಧಿಸುವುದು. ಅದರಲ್ಲಿ ತಪ್ಪೇನಿಲ್ಲ. ಅಲ್ಲದೆ ಆತ ಇನ್ನೊಂದು ಮಾತು ಹೇಳಿದ. ಏನೆಂದರೆ ಶ್ರೇಷ್ಠ ಕಲಾಕೃತಿಗಳು ಮನಸ್ಸಿನ ಮೇಲೆ ಧನಾತ್ಮಕ ಪರಿಣಾಮ ಬೀರುತ್ತವೆ ಮತ್ತು ಮನಸ್ಸಿನೊಳಗಿನ ಕೊಳೆಯನ್ನು ತೊಳೆಯುತ್ತವೆ (catharsis).
ಹೇಗೆಂದರೆ, ಜನರು(ವಿಶೇಷವಾಗಿ) ಶ್ರೇಷ್ಠ ದುರಂತ ನಾಟಕಗಳನ್ನು ನೋಡಿದಾಗ ಅವರ ಮನಸ್ಸಿನೊಳಗಿನ ಭಾವನೆಗಳು ಉಮ್ಮಳಿಸಿ ಬರುತ್ತವೆ. ಭಾವನಾ ಪರವಶರಾಗುವ ಅವರು ನಗುತ್ತಾರೆ. ಅಳುತ್ತಾರೆ. ಚೀರಾಡುತ್ತಾರೆ. ಕೇಕೆ ಹಾಕುತ್ತಾರೆ. ಹೀಗೆ ಮಾಡಿದಾಗ ಅವರ ಮನಸ್ಸಿನೊಳಗಿನ ‘ಕೀಳು ಭಾವನೆಗಳು’, ಮುಖ್ಯವಾಗಿ ‘ಭಯ’ ನಾಶವಾಗುತ್ತದೆ.
ಹೀಗೆ ಸಾಹಿತ್ಯ ಕಲೆಗಳಿಗೆ ಭಯರಹಿತರಾದ ಜನರನ್ನು ಸ್ರಷ್ಟಿಸುವ, ತನ್ಮೂಲಕ ಒಂದು ಆದರ್ಶ ರಿಪಬ್ಲಿಕ್ ಅನ್ನು ಕಟ್ಟುವ ಸಾಮರ್ಥ್ಯವಿದೆ ಎಂದು ಅರಿಸ್ಟಾಟಲ್ ವಾದಿಸಿದ. ಆತನ ಅಭಿಪ್ರಾಯದಲ್ಲಿ ಪರಿಪೂರ್ಣವಾದ ಸಾಹಿತ್ಯ, ಪಾತ್ರಗಳು, ಚೌಕಟ್ಟು, ಸಂಗೀತ ಇತ್ಯಾದಿಗಳನ್ನು ಹೊಂದಿದ, ದುರಂತ ನಾಟಕಗಳಿಗೆ ಇಂತಹ ಶಕ್ತಿ ಇರುತ್ತದೆ.
ಪಕ್ವವಾದ ಇಂತಹ ಕಲೆ ಜನರ ಮನಸ್ಸಿನ ಮನಸ್ಸಿನ ಮೇಲೆ ಒಳ್ಳೆಯ ಪರಿಣಾಮ ಬೀರು ತ್ತದೆ. ಹಾಗಾಗಿ ಕಲಾಪ್ರಕಾರಗಳಿಗೆ ಮನುಷ್ಯನನ್ನು ಧೀಮಂತ, ಘನತೆವಂತ ವ್ಯಕ್ತಿಯನ್ನಾ ಗಿಸುವ ಮನಶ್ಯಾಸ್ತ್ರೀಯ ಶಕ್ತಿ ಇದೆ. ಈ ಕುರಿತಾದಂತೆ ಇರುವ ಇನ್ನೊಂದು ವಾದ ಗಾಂಧಿ ವಾದ. ಗಮನಿಸಬೇಕು.
ಪ್ಲೇಟೋ ಮತ್ತು ಅರಿಸ್ಟಾಟಲ್‌ನಂತೆ ಈ ಕುರಿತಾಗಿ ಒಂದು ವಾದವನ್ನೇ ಮಂಡಿಸದಿದ್ದರೂ ಗಾಂಧೀಜಿ ಕೂಡ ಆದರ್ಶ ಸಾಮ್ರಾಜ್ಯ ಕಟ್ಟುವ ಭಾಗವಾಗಿ ಜನರ ಮನಸ್ಸನ್ನು ಕಟ್ಟುವುದು ಹೇಗೆ ಎಂಬ ಕುರಿತು ಯೋಚಿಸಿದ್ದರು. ಘನತೆವಂತ ಜನತೆ ನೈತಿಕವಾದ ರಾಜಕೀಯವನ್ನು ಕಟ್ಟಬಲ್ಲರು ಎಂದು ಗಾಂಧಿ ಭಾವಿಸಿದ್ದರು. ಈ ಕುರಿತು ಬಹಳ ಯೋಚಿಸಿದ್ದ ಗಾಂಧಿಗೆ ಜನರ ಮನಸ್ಸಿನಲ್ಲಿ ಆತ್ಮ ಗೌರವ ಮತ್ತು ಆತ್ಮ ಘನತೆಯಂತಹ ಭಾವನೆಗಳನ್ನು ಸೃಷ್ಟಿಸ ಬಲ್ಲ ದಾರಿಗಳು ಹೊಳೆದಿದ್ದವು. ಅವೆಂದರೆ ಸಂಸ್ಕೃತಿ ಮತ್ತು ಧರ್ಮ. ತನ್ನ ಸಂಸ್ಕೃತಿ ಯನ್ನು ಉಸಿರಾಡಿಸುವ ಮತ್ತು ಅದರಲ್ಲಿ ಮಿಂದೆದ್ದ ವ್ಯಕ್ತಿಗಳು ಮಾನಸಿಕವಾಗಿ
ಭ್ರಷ್ಟರಾಗುವುದಿಲ್ಲ. ಏಕೆಂದರೆ ಅಂತಹ ವ್ಯಕ್ತಿಗಳೊಳಗೆ ಇಡೀ ಸಂಸ್ಕೃತಿಯೊಂದರ ಶಕ್ತಿ ತುಂಬಿರುತ್ತದೆ ಎಂದು ಗಾಂಧಿ (ಸರಿಯಾಗಿಯೇ) ಭಾವಿಸಿದ್ದರು. ಹಾಗಾಗಿಯೇ ಗಾಂಧಿ ರಾಜಕೀಯವನ್ನು ತನ್ನ ‘ನೈತಿಕ ಜೀವನ’ದ ಒಂದು ಆಯಾಮ ಮಾತ್ರ ಎಂದು ಭಾವಿಸಿ ದ್ದರು. ಈ ಹಿನ್ನೆಲೆಯಲ್ಲಿಯೇ ಗಾಂಧಿ ರಾಜಕೀಯದಲ್ಲಿ ಧರ್ಮವನ್ನು ಬಳಸಿದ್ದು ಅಥವಾ ರಾಜಕೀಯವನ್ನು ಧಾರ್ಮಿಕತೆಯ ಭಾಗವೆಂದೇ ಪರಿಗಣಿಸಿದ್ದು.
ಆಳವಾಗಿ ಧಾರ್ಮಿಕನಾಗಿರುವ ವ್ಯಕ್ತಿ ಘನತೆವಂತನಾಗಿರುತ್ತಾನೆ ಎಂದು ಗಾಂಧಿ ಭಾವಿಸಿ ದ್ದರು. ಹೀಗಾಗಿ ಧರ್ಮವನ್ನು ನಾವು ನಾಶಗೊಳಿಸಕೂಡದು. ಅದನ್ನು ಸರಳೀಕರಿಸಿ, ಆದರ್ಶ ರಾಜಕೀಯಕ್ಕೆ ಜನರನ್ನು ಸಿದ್ಧಗೊಳಿಸಲು ಬಳಸಿಕೊಳ್ಳಬೇಕು ಎಂದು ಅವರು ನಂಬಿದ್ದರು.
ಒಳ್ಳೆಯ ರಾಜಕೀಯಕ್ಕಾಗಿ ಜನರನ್ನು ಕಟ್ಟಬೇಕಿರುವುದು ಇಂದಿನ ತುರ್ತು ಎಂದೇ ಅನಿಸು ತ್ತದೆ. ಈ ಕುರಿತ ದಾರಿಗಳನ್ನು ಹುಡುಕಬೇಕಿದೆ. ಮೊನ್ನೆ ಮೊನ್ನೆ ನಡೆದ ಬಂಗಾಲದ ಚುನಾವಣೆಯನ್ನು ಗಮನಿಸಿದರೆ ಮಾತಿನ ಜರೂರು ಅರ್ಥವಾಗುತ್ತದೆ. ಪಾರಾ ಮಿಲಿಟರಿ ಪಡೆಗಳ ಕಣ್ಗಾವಲಿನಲ್ಲಿ, ಬಂದೋಬಸ್ತಿನಲ್ಲಿ ಚುನಾವಣೆ ನಡೆಸಬೇಕಾಯಿತು. ಎನ್‌ಕೌಂಟರ್ ತಜ್ಞರು ಬರಬೇಕಾಯಿತು.
ಹೆಚ್ಚು ಕಡಿಮೆ ಯುದ್ಧದ ಪರಿಸ್ಥಿತಿಯೇ ಅಲ್ಲಿ ಇತ್ತು. ಇಂತಹ ವಿಪರೀತಗಳು ಇಂದು ಹುಟ್ಟಿ ಕೊಂಡಿವೆ. ಅಲ್ಲದೆ ಅಪಾಯಕಾರಿ ಕ್ರಿಮಿನಲ್ ವಾತಾವರಣ ರಾಜಕೀಯವನ್ನು ತುಂಬಿ ಕೊಂಡಂತಿದೆ. ಗೂಂಡಾಗಳು ರಾಜಕೀಯವನ್ನು ನಿರ್ದೇಶಿಸುತ್ತಿರುವಂತಿದೆ. ದಿನ ಹೋದಂತೆ ‘ರಾಜಕೀಯವಾಗಿ’ ಜನ ಕೆಟ್ಟವರಾಗುತ್ತ ಹೋಗುತ್ತಿದ್ದಾರೆಯೇ ಎನ್ನುವ ಗಂಭೀರ ಪ್ರಶ್ನೆ ನಮ್ಮ ಮುಂದೆ ಇದೆ.
ಗಮನಿಸಿ. ಮೂವತ್ತು, ನಲವತ್ತು ವರ್ಷಗಳ ಹಿಂದೆ ಓಟಿಗೆ ದುಡ್ಡು ಕೊಡುವ ಧೈರ್ಯ ಯಾವ ರಾಜಕಾರಣಿಗೂ ಇರಲಿಲ್ಲ. ಜನ ಅದನ್ನು ಮುಟ್ಟುತ್ತಲೂ ಇರಲಿಲ್ಲ. ಈಗ ದುಡ್ಡಿಲ್ಲದೆ ಮಾತೇ ಇಲ್ಲ. ಅದಷ್ಟೇ ಅಲ್ಲ ‘ಒಳ್ಳೆಯ ಸರಕಾರಗಳು’ ಇತ್ತೀಚೆಗೆ ಅಲ್ಲಲ್ಲಿ ಒಂದೊಂದನ್ನು ಬಿಟ್ಟಂತೆ ಮರೀಚಿಕೆಗಳಾಗಿ ಹೋಗಿವೆ. ಬಹುಶಃ ಈ ಹಿನ್ನೆಲೆಯಲ್ಲಿ ನಾವು ಬರೇ ರಾಜಕಾರಣಿಗಳನ್ನು ದೂಷಿಸಿದರೆ ಕೆಲಸವಾಗುವುದಿಲ್ಲ. ಒಳ್ಳೆಯ ರಾಜಕೀಯಕ್ಕಾಗಿ ಜನರನ್ನು ಕಟ್ಟಬೇಕು. ರಾಜಕೀಯವಾಗಿ ಪ್ರೌಢರಾದ ಜನತೆಯನ್ನು ಸೃಷ್ಟಿಸಬೇಕು. ಆ ಕುರಿತು ಯೋಚಿಸಿ ಕಾರ್ಯಾಚರಣೆಗೆ ತರಬೇಕು.