Vishweshwar Bhat Column: ಭೂಮಧ್ಯ ರೇಖೆ ಮತ್ತು ಕಾಂಗೋ ನದಿ
ಪ್ರಮುಖವಾಗಿ ಜಾಂಬಿಯಾ ಮತ್ತು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಗಡಿಭಾಗದಲ್ಲಿರುವ ಲುಆಲಾಬಾ ನದಿಯನ್ನು ಕಾಂಗೋ ನದಿಯ ಪ್ರಮುಖ ಮೂಲವೆಂದು ಪರಿಗಣಿಸಲಾಗುತ್ತದೆ. ಅಲ್ಲಿಂದ ಆರಂಭವಾಗುವ ಈ ನದಿಯ ಒಟ್ಟು ಉದ್ದ ಸುಮಾರು 4,700 ಕಿಮೀ. ನೀರಿನ ಹರಿವಿನ ಪ್ರಮಾಣದಲ್ಲಿ ಇದು ದಕ್ಷಿಣ ಅಮೆರಿಕದ ಅಮೆಜಾನ್ ನದಿಯ ನಂತರ ಜಗತ್ತಿನಲ್ಲೇ ಎರಡನೇ ಸ್ಥಾನದಲ್ಲಿದೆ.
-
ಸಂಪಾದಕರ ಸದ್ಯಶೋಧನೆ
ಆಫ್ರಿಕಾ ಖಂಡದಲ್ಲಿ ಹರಿಯುವ ಕಾಂಗೋ ನದಿ ಜಗತ್ತಿನಲ್ಲೇ ಅತ್ಯಂತ ವಿಶಿಷ್ಟವಾದ ಭೌಗೋಳಿಕ ಹೆಗ್ಗುರುತನ್ನು ಹೊಂದಿದೆ. ಇದಕ್ಕೆ ಭೂಮಧ್ಯ ರೇಖೆಯನ್ನು (Equator) ಎರಡು ಬಾರಿ ದಾಟುವ ಜಗತ್ತಿನ ಏಕೈಕ ನದಿ ಎಂಬ ಹೆಗ್ಗಳಿಕೆ. ಈ ನದಿಯನ್ನು ಹಿಂದೆ 'ಜೈರ್ ನದಿ' ಎಂದೂ ಕರೆಯ ಲಾಗುತ್ತಿತ್ತು.
ನೈಲ್ ನದಿಯ ನಂತರ ಆಫ್ರಿಕಾ ಖಂಡದ ಎರಡನೇ ಅತಿ ಉದ್ದವಾದ ನದಿಯಾಗಿರುವ ಕಾಂಗೋ, ಜಗತ್ತಿನ ಅತಿ ಆಳವಾದ ಮತ್ತು ಅತಿ ಹೆಚ್ಚು ನೀರನ್ನು ಹೊರಹಾಕುವ ನದಿಗಳಲ್ಲಿ ಒಂದಾಗಿದೆ. ಕಾಂಗೋ ನದಿಯು ಮಧ್ಯ ಆಫ್ರಿಕಾದ ಪೂರ್ವ ಆಫ್ರಿಕನ್ ಬಿರುಕು ಕಣಿವೆಯ ಎತ್ತರದ ಪ್ರದೇಶ ಗಳಲ್ಲಿ ಹುಟ್ಟುತ್ತದೆ.
ಪ್ರಮುಖವಾಗಿ ಜಾಂಬಿಯಾ ಮತ್ತು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಗಡಿಭಾಗದಲ್ಲಿರುವ ಲುಆಲಾಬಾ ನದಿಯನ್ನು ಕಾಂಗೋ ನದಿಯ ಪ್ರಮುಖ ಮೂಲವೆಂದು ಪರಿಗಣಿಸಲಾಗುತ್ತದೆ. ಅಲ್ಲಿಂದ ಆರಂಭವಾಗುವ ಈ ನದಿಯ ಒಟ್ಟು ಉದ್ದ ಸುಮಾರು 4,700 ಕಿಮೀ. ನೀರಿನ ಹರಿವಿನ ಪ್ರಮಾಣದಲ್ಲಿ ಇದು ದಕ್ಷಿಣ ಅಮೆರಿಕದ ಅಮೆಜಾನ್ ನದಿಯ ನಂತರ ಜಗತ್ತಿನಲ್ಲೇ ಎರಡನೇ ಸ್ಥಾನದಲ್ಲಿದೆ.
ಇದನ್ನೂ ಓದಿ: Vishweshwar Bhat Column: ನಾರ್ಡಿಕ್ ದೇಶಗಳು
ಪ್ರತಿ ಸೆಕೆಂಡಿಗೆ ಸುಮಾರು 41,000 ಕ್ಯೂಬಿಕ್ ಮೀಟರ್ ನೀರನ್ನು ಅಟ್ಲಾಂಟಿಕ್ ಮಹಾಸಾಗರಕ್ಕೆ ಇದು ಬಿಡುಗಡೆ ಮಾಡುತ್ತದೆ. ಕಾಂಗೋ ನದಿಯು ಭೂಮಧ್ಯ ರೇಖೆಯನ್ನು ಎರಡು ಬಾರಿ ದಾಟಲು ಅದರ ವಿಶಿಷ್ಟವಾದ 'ತಿರುವು ಮುರುವು' ಅಥವಾ ಬಿಲ್ಲು ಆಕಾರದ ಹರಿವಿನ ಶೈಲಿಯೇ ಕಾರಣ ವಾಗಿದೆ. ನದಿಯು ತನ್ನ ಮೂಲ ಸ್ಥಾನವಾದ ದಕ್ಷಿಣದ ಎತ್ತರದ ಪ್ರದೇಶಗಳಿಂದ ಹೊರಟು, ಉತ್ತರ ದಿಕ್ಕಿನತ್ತ ಸಾಗುತ್ತದೆ. ಈ ಭಾಗದಲ್ಲಿ ನದಿಯನ್ನು ಲುಆಲಾಬಾ ಎಂದು ಕರೆಯಲಾಗುತ್ತದೆ.
ಉತ್ತರಕ್ಕೆ ಹರಿಯುವಾಗ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ದೇಶದ ಕಿಸಂಗಾನಿ ನಗರದ ಬಳಿ, ನದಿಯು ಮೊದಲ ಬಾರಿಗೆ ದಕ್ಷಿಣದಿಂದ ಉತ್ತರಕ್ಕೆ ಭೂಮಧ್ಯ ರೇಖೆಯನ್ನು ದಾಟುತ್ತದೆ. ಭೂ ಮಧ್ಯ ರೇಖೆಯನ್ನು ದಾಟಿದ ನಂತರವೂ ನದಿಯು ಉತ್ತರದ ಕಡೆಗೇ ಸಾಗಿ, ಸರಿಸುಮಾರು 2 ಡಿಗ್ರಿ ಉತ್ತರ ಅಕ್ಷಾಂಶದವರೆಗೆ ತಲುಪುತ್ತದೆ.
ಅಲ್ಲಿ ವಿಶಾಲವಾದ ಕಾಂಗೋ ಮಳೆಕಾಡುಗಳ ಮೂಲಕ ಹರಿಯುತ್ತಾ, ಪಶ್ಚಿಮಕ್ಕೆ ಮತ್ತು ನಂತರ ಕ್ರಮೇಣ ನೈಋತ್ಯ ದಿಕ್ಕಿನತ್ತ ಬಾಗಲು ಆರಂಭಿಸುತ್ತದೆ. ಈ ಬೃಹತ್ ವಕ್ರರೇಖೆಯು ನದಿಗೆ ಇಂಗ್ಲಿಷ್ ಅಕ್ಷರ 'C' ಅಥವಾ ತಲೆಕೆಳಗಾದ ಬಿಲ್ಲು ಆಕಾರವನ್ನು ನೀಡುತ್ತದೆ. ಪಶ್ಚಿಮ ಮತ್ತು ನೈಋತ್ಯ ದಿಕ್ಕಿಗೆ ತಿರುಗಿ ದಕ್ಷಿಣದ ಕಡೆಗೆ ಮುಖ ಮಾಡುವ ನದಿಯು, ರಿಪಬ್ಲಿಕ್ ಆಫ್ ಕಾಂಗೋ ಮತ್ತು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ದೇಶಗಳ ಗಡಿಯಾಗಿ ಹರಿಯುತ್ತಾ ಎರಡನೇ ಬಾರಿಗೆ ಉತ್ತರದಿಂದ ದಕ್ಷಿಣದ ಕಡೆಗೆ ಭೂಮಧ್ಯ ರೇಖೆಯನ್ನು ದಾಟುತ್ತದೆ.
ನಂತರ ಇದು ರಾಜಧಾನಿ ಕಿನ್ಶಾಸಾ ಮತ್ತು ಬ್ರಜ್ಜಾವಿಲ್ ನಗರಗಳ ಮೂಲಕ ಹಾದು, ಅಂತಿಮವಾಗಿ ಅಟ್ಲಾಂಟಿಕ್ ಮಹಾಸಾಗರವನ್ನು ಸೇರುತ್ತದೆ. ಈ ಭೌಗೋಳಿಕ ವಿದ್ಯಮಾನಕ್ಕೆ ಕಾರಣಗಳೇನು? ಯಾವುದೇ ನದಿಯ ಹರಿವಿನ ಹಾದಿಯನ್ನು ಆ ಪ್ರದೇಶದ ಭೂಪ್ರಕೃತಿ (Topography) ನಿರ್ಧರಿಸು ತ್ತದೆ.
ಕಾಂಗೋ ನದಿಯ ವಿಷಯದಲ್ಲೂ ಇದೇ ಆಗಿದೆ. ಮಧ್ಯ ಆಫ್ರಿಕಾದ ಮಧ್ಯಭಾಗವು ಒಂದು ದೊಡ್ಡ ತಟ್ಟೆಯಾಕಾರದ ತಗ್ಗು ಪ್ರದೇಶವಾಗಿದೆ (Basin). ಇದರ ಸುತ್ತಲೂ ಎತ್ತರದ ಪರ್ವತಗಳು ಮತ್ತು ಪ್ರಸ್ಥಭೂಮಿಗಳಿವೆ. ಪೂರ್ವದಲ್ಲಿ ಬಿರುಕು ಕಣಿವೆಯ ಪರ್ವತಗಳು ಮತ್ತು ಉತ್ತರದಲ್ಲಿ ಉನ್ನತ ಪ್ರಸ್ಥಭೂಮಿಗಳು ಇರುವುದರಿಂದ, ನದಿಗೆ ನೇರವಾಗಿ ಉತ್ತರಕ್ಕೆ ಅಥವಾ ಪೂರ್ವಕ್ಕೆ ಹರಿಯಲು ಸಾಧ್ಯವಾಗುವುದಿಲ್ಲ.
ಭೂ ಗುರುತ್ವಾಕರ್ಷಣೆಯ ನಿಯಮದಂತೆ, ನದಿಯು ಅತ್ಯಂತ ಕಡಿಮೆ ಎತ್ತರವಿರುವ ಮತ್ತು ಕನಿಷ್ಠ ಪ್ರತಿರೋಧವಿರುವ ತಗ್ಗು ಪ್ರದೇಶದ ಹಾದಿಯನ್ನು ಹುಡುಕುತ್ತಾ ಸಾಗುತ್ತದೆ. ಈ ಪ್ರಕ್ರಿಯೆ ಯಲ್ಲಿ ಅದು ಜಲಾನಯನ ಪ್ರದೇಶದ ಸುತ್ತಲೂ ಒಂದು ದೊಡ್ಡ ವೃತ್ತಾಕಾರದ ಹಾದಿಯನ್ನು ನಿರ್ಮಿಸಿಕೊಂಡಿದೆ. ಇದೇ ಕಾರಣದಿಂದಾಗಿ ಅದು ಭೂಮಧ್ಯ ರೇಖೆಯನ್ನು ದಾಟಿ, ಮತ್ತೆ ತಿರುಗಿ ಅದೇ ರೇಖೆಯನ್ನು ದಾಟಬೇಕಾಗಿ ಬರುತ್ತದೆ.
ಭೂಮಧ್ಯ ರೇಖೆಯನ್ನು ಎರಡು ಬಾರಿ ದಾಟುವ ಹೆಗ್ಗಳಿಕೆಯ ಜತೆಗೆ, ಕಾಂಗೋ ನದಿಯು ಇನ್ನೂ ಹಲವು ಜಾಗತಿಕ ದಾಖಲೆಗಳನ್ನು ಮತ್ತು ವೈಶಿಷ್ಟ್ಯಗಳನ್ನು ಹೊಂದಿದೆ. ಕಾಂಗೋ ನದಿಯ ಕೆಲವು ಭಾಗಗಳು, ವಿಶೇಷವಾಗಿ ಅದರ ಕೆಳ ಹರಿವಿನ ಪ್ರದೇಶಗಳಲ್ಲಿ, ಸುಮಾರು 220 ಮೀಟರ್ ಗಿಂತಲೂ ಹೆಚ್ಚು ಆಳವಾಗಿವೆ. ಇಷ್ಟು ಆಳವಾದ ನದಿ ಜಗತ್ತಿನಲ್ಲಿ ಬೇರೊಂದಿಲ್ಲ.