Ranjith H Ashwath Column: ಶಿಕ್ಷಣದಲ್ಲಿ ಮಾತೃಭಾಷೆ ಕಡ್ಡಾಯ ನಿಜಕ್ಕೂ ಸಾಧ್ಯವೇ ?
ರಾಜಕೀಯ ಕಿತ್ತಾಟ ನೋಡುವುದಕ್ಕಿಂತ ಕೇರಳ ಸರಕಾರದ ವಿಧೇಯಕದಲ್ಲಿ ಏನಿದೆ ಎನ್ನುವುದು ಮುಖ್ಯವಾಗುತ್ತದೆ. ಪಿಣರಾಯಿ ವಿಜಯನ್ ನೇತೃತ್ವದ ಸರಕಾರ ಜಾರಿಗೊಳಿಸಿ ರುವ ಮಲಯಾಳಂ ವಿಧೇಯಕದಲ್ಲಿ ಪ್ರಮುಖವಾಗಿ, ಮಲಯಾಳಂ ಅನ್ನು ಕೇರಳದ ಅಧಿಕೃತ ಭಾಷೆಯೆಂದು ಘೋಷಿಸುವುದರೊಂದಿಗೆ, ಸರಕಾರಿ ವ್ಯವಸ್ಥೆಯಲ್ಲಿ ಮಲಯಾಳಂ ಅಧಿಕೃತ ಸಂವಹನ ಭಾಷೆಯಾಗಿರಬೇಕು ಎಂದಿದೆ.
-
ಅಶ್ವತ್ಥಕಟ್ಟೆ
ನೆರೆರಾಜ್ಯ ಕೇರಳ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಹಾಗೂ ಸಿಪಿಎಂ ನಡುವಿನ ಜಟಾಪಟಿ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ; ಮೊದಲಿಗೆ ಕೋಗಿಲು ಅಕ್ರಮ ಕಟ್ಟಡ ವಿಷಯದಲ್ಲಿ ಉಭಯ ರಾಜ್ಯಗಳ ನಾಯಕರು ವಾಕ್ಸಮರ ನಡೆಸಿ ಕೊಂಡರೆ, ಇದೀಗ ಕೇರಳ ಸರಕಾರ ತಂದಿರುವ ಮಲಯಾಳಂ ಭಾಷಾ ವಿಧೇಯಕಕ್ಕೆ ಸಂಬಂಧಿಸಿದಂತೆ ಹಗ್ಗ-ಜಗ್ಗಾಟ ಜೋರಾಗಿದೆ.
ಕೇರಳ ಸರಕಾರ ತರಲು ಮುಂದಾಗಿರುವ ವಿಧೇಯಕದಲ್ಲಿ ಕೇರಳದ ಕಾಸರಗೋಡು ಕನ್ನಡಿ ಗರಿಗೆ ಅನ್ಯಾಯವಾಗಲಿದೆ ಎನ್ನುವ ವಾದ ಒಂದೆಡೆಯಾದರೆ, ಕೆಲ ಕನ್ನಡಪರ ಹೋರಾಟ ಗಾರರು ಕರ್ನಾಟಕದಲ್ಲಿ ಕನ್ನಡವನ್ನು ಉಳಿಸುವುದಕ್ಕೆ ನಮ್ಮ ಸರಕಾರಗಳು ಈ ರೀತಿಯ ಕಠಿಣ ನಿಲುವುಗಳನ್ನು ತೆಗೆದುಕೊಳ್ಳಬೇಕು ಎನ್ನುವ ಒತ್ತಡವನ್ನು ಸರಕಾರದ ಮೇಲೆ ಹೇರುತ್ತಿದ್ದಾರೆ.
ರಾಜಕೀಯ ಕಿತ್ತಾಟ ನೋಡುವುದಕ್ಕಿಂತ ಕೇರಳ ಸರಕಾರದ ವಿಧೇಯಕದಲ್ಲಿ ಏನಿದೆ ಎನ್ನುವುದು ಮುಖ್ಯವಾಗುತ್ತದೆ. ಪಿಣರಾಯಿ ವಿಜಯನ್ ನೇತೃತ್ವದ ಸರಕಾರ ಜಾರಿಗೊಳಿಸಿ ರುವ ಮಲಯಾಳಂ ವಿಧೇಯಕದಲ್ಲಿ ಪ್ರಮುಖವಾಗಿ, ಮಲಯಾಳಂ ಅನ್ನು ಕೇರಳದ ಅಧಿಕೃತ ಭಾಷೆಯೆಂದು ಘೋಷಿಸುವುದರೊಂದಿಗೆ, ಸರಕಾರಿ ವ್ಯವಸ್ಥೆಯಲ್ಲಿ ಮಲಯಾಳಂ ಅಧಿಕೃತ ಸಂವಹನ ಭಾಷೆಯಾಗಿರಬೇಕು ಎಂದಿದೆ.
ಆದರೆ ವಿವಾದಕ್ಕೆ ಕಾರಣವಾಗಿರುವ ಅಂಶವೆಂದರೆ, ಕೇರಳದಲ್ಲಿರುವ ಸರಕಾರಿ, ಅನುದಾನಿತ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಅನ್ನು ಬೋಧಿಸಬೇಕು ಎನ್ನುವ ಅಂಶವನ್ನು ಸೇರಿಸಿರುವುದು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಹಲವರು, ಈ ವಿಧೇಯಕದಿಂದ ಕೇರಳದಲ್ಲಿ ಭಾಷಾ ಅಲ್ಪಸಂಖ್ಯಾತರಾಗಿರುವ ಕನ್ನಡಿಗರು ಹಾಗೂ ತಮಿಳಿಗರಿಗೆ ಅವರ ಭಾಷೆಯಲ್ಲಿ ಅಧ್ಯಯನ ಮಾಡಲು ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: Ranjith H Ashwath Column: ಹೋರಾಟ ಆರಂಭಿಸುವ ಮೊದಲು ಸ್ಪಷ್ಟತೆ ಇರಲಿ
ಆದರೆ ಪ್ರಥಮ ಭಾಷೆ ಮಲಯಾಳಂ ಆಗಬೇಕು ಎನ್ನುವುದು ವಿಧೇಯಕದಲ್ಲಿರುವುದರಿಂದ ಕನ್ನಡಿಗರಿಗೆ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯಲು ಸಮಸ್ಯೆಯಾಗುತ್ತದೆ ಎನ್ನುವುದಾಗಿದೆ. ಭಾಷೆಯ ವಿಷಯಗಳಿಗೆ ಸಂಬಂಧಿಸಿದಂತೆ ಸಂವಿಧಾನದ ಆರ್ಟಿಕಲ್ 29 ಹಾಗೂ 30 ಇವೆ. ಅದರಲ್ಲಿಯೂ ಭಾಷಾ ಅಲ್ಪಸಂಖ್ಯಾತರಿಗೆ ರಕ್ಷಣೆಯನ್ನು ಸಂವಿಧಾನದಲ್ಲಿ ನೀಡಲಾಗಿದೆ.
ಕೇರಳ ಸರಕಾರವು ಮಲಯಾಳಂ ಅನ್ನು ಕಡ್ಡಾಯಗೊಳಿಸಲು ಮುಂದಾಗಿರುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎನ್ನುವ ವಾದವೂ ಶುರುವಾಗಿದೆ. ಏಕೆಂದರೆ, ಸಂವಿಧಾನದ 350-ಎ ವಿಧಿಯಲ್ಲಿ, ರಾಜ್ಯ ಸರಕಾರಗಳು, ಭಾಷಾ ಅಲ್ಪಸಂಖ್ಯಾತರಿಗೆ ಮಾತೃಭಾಷೆಯಲ್ಲಿಯೇ ಶಿಕ್ಷಣ ಕೊಡಬೇಕು ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ.
ರಾಜ್ಯ ಸರಕಾರಗಳು ತಮ್ಮ ತಮ್ಮ ರಾಜ್ಯಭಾಷೆಯನ್ನು ಬೆಳೆಸಲು ಸರಕಾರಿ ಕಚೇರಿಗಳಲ್ಲಿ ಆಯಾ ರಾಜ್ಯಗಳ ಅಧಿಕೃತ ಭಾಷೆಗಳ ಬಳಕೆ ಮಾಡಬಹುದು. ದಾಖಲೆಗಳನ್ನು ನಿಮ್ಮ ನಿಮ್ಮ ಭಾಷೆಯಲ್ಲಿ ಕೊಡಬಹುದು. ಆದರೆ ಅಲ್ಪಸಂಖ್ಯಾತ ಭಾಷೆಗಳ ಶಾಲೆಗಳ ಮುಚ್ಚುವ ಅಥವಾ ಮಗುವಿಗೆ ತಮ್ಮ ಮಾತೃಭಾಷೆಯಲ್ಲದೇ ಬೇರೆ ಭಾಷೆಯಲ್ಲಿ ಕಲಿಕೆ ಮಾಡಬೇಕು ಎನ್ನುವ ಒತ್ತಡವನ್ನು ಹೇರುವ ಯಾವುದೇ ಅಧಿಕಾರ ಸರಕಾರಗಳಿಗೆ ಇಲ್ಲ.
ಸಂವಿಧಾನದಲ್ಲಿರುವ ಈ ಅಂಶಗಳ ಆಧಾರದಲ್ಲಿ ನೋಡಿದರೆ, ಕೇರಳ ಸರಕಾರದ ವಿಧೇಯಕದ ಭವಿಷ್ಯದ ಬಗ್ಗೆ ಹಲವರಿಗೆ ಅನುಮಾನವಿದೆ.
ಕೇರಳ ಹಾಗೂ ಕರ್ನಾಟಕದ ನಡುವೆ ಬಹುತೇಕ ವಿವಾದಕ್ಕೆ ಕಾರಣವಾಗುವುದೇ ಕಾಸರ ಗೋಡಿನಲ್ಲಿ ಮಲಯಾಳಂ ಹಾಗೂ ಕನ್ನಡ ಭಾಷಾ ವಿಷಯಕ್ಕೆ. ಹಾಗೆ ನೋಡಿದರೆ, ಈ ಹಿಂದೆ ಕಾಸರಗೋಡು ಕರ್ನಾಟಕದ ಭಾಗವೇ ಆಗಿತ್ತು. ಆದರೆ 1956ರ ರಾಜ್ಯಗಳ ಪುನರ್ ವಿಗಂಡನೆ ಸಮಯದಲ್ಲಿ ಕಾಸರಗೋಡು ಕೇರಳದ ಭಾಗವಾಯಿತು.
ಆದರೂ, ಕಾಸರಗೋಡಿನಲ್ಲಿ ಕನ್ನಡದ ಕಂಪು ಈಗಲೂ ಇದೆ. ಕಾಸರಗೋಡಿನ ಬಹು ಪಾಲು ಜನರು ಮಂಗಳೂರಿನೊಂದಿಗೆ ವ್ಯವಹಾರ ಹೊಂದಿದ್ದಾರೆ. ಇದಿಷ್ಟೇ ಅಲ್ಲದೇ, ಕಾಸರಗೋಡು ಹಾಗೂ ಮಂಜೇಶ್ವರದಲ್ಲಿಯೇ ಈಗಲೂ 45ಕ್ಕೂ ಹೆಚ್ಚು ಕನ್ನಡ ಮಾಧ್ಯಮ ಸರಕಾರಿ ಶಾಲೆಗಳಿದ್ದರೆ, ಇಡೀ ಕಾಸರಗೋಡು ಜಿಲ್ಲೆಯಲ್ಲಿ 74ಕ್ಕೂ ಹೆಚ್ಚು ಕನ್ನಡ ಶಾಲೆಗಳಿದ್ದು, 40 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈಗಲೂ ಅಲ್ಲಿ ಕನ್ನಡವನ್ನೇ ತಮ್ಮ ಮಾಧ್ಯಮವನ್ನಾಗಿ ತೆಗೆದುಕೊಂಡು ಅಭ್ಯಾಸ ಮಾಡುತ್ತಿದ್ದಾರೆ.
ಕೇರಳ ರಾಜ್ಯದಲ್ಲಿದ್ದರೂ, ಅಲ್ಲಿರುವ ಅನೇಕರು ಕನ್ನಡದೊಂದಿಗಿನ ನಂಟನ್ನು ಬಿಟ್ಟು ಕೊಡಲು ತಯಾರಿಲ್ಲ. ಆದರೆ ಕೇರಳ ಸರಕಾರ ಹಲವು ಬಾರಿ ಕಾಸರಗೋಡಿನ ಕನ್ನಡಿಗರ ಮೇಲೆ ಮಲಯಾಳಂ ಹೇರುವುದಕ್ಕೆ ವಿವಿಧ ರೀತಿಯ ಕಾನೂನನ್ನು ಜಾರಿಗೊಳಿಸಿದೆ.
ಕೆಲವೊಂದಷ್ಟು ಕನ್ನಡ ಮಾಧ್ಯಮ ಶಾಲೆಗಳನ್ನು ಮಲಯಾಳಂ ಶಾಲೆಯನ್ನಾಗಿ ಮಾಡುವ ಪ್ರಯತ್ನದಲ್ಲಿಯೂ ಯಶಸ್ವಿಯಾಗಿದೆ. ಹಾಗೆ ನೋಡಿದರೆ, ತಮ್ಮ ಭಾಷೆಯನ್ನು ಉಳಿಸಿಕೊಳ್ಳಲು ಈ ರೀತಿಯ ಪ್ರಯತ್ನ ನಡೆದಿರುವುದು ಇದೇ ಮೊದಲಲ್ಲ.
ಈ ಹಿಂದೆ ಕರ್ನಾಟಕದಲ್ಲಿಯೂ ಕನ್ನಡವನ್ನು ಕಡ್ಡಾಯಗೊಳಿಸುವ ಹಲವು ಪ್ರಯತ್ನಗಳು ನಡೆದಿದ್ದವು. ಗೋಕಾಕ್ ಚಳವಳಿಯ ಬಳಿಕ ಕರ್ನಾಟಕದಲ್ಲಿ ಪ್ರಥಮ ಭಾಷೆಯಾಗಿ ಕನ್ನಡವೇ ಇರಬೇಕು ಎನ್ನುವ ನಿಯಮವನ್ನು ರೂಪಿಸಲು ಅಂದಿನ ಸರಕಾರ ಮುಂದಾ ಗಿತ್ತು. ಆದರೆ ಕೇರಳ ಸರಕಾರ ಮಲಯಾಳಂ ಕಡ್ಡಾಯ ಮಾಡಲು ಹೊರಟಾಗ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಪ್ರಸ್ತಾಪಿಸಿರುವ ಸಂವಿಧಾನದ ಅಂಶಗಳನ್ನೇ ಪ್ರಶ್ನಿಸಿ ಅನೇಕರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಆಗ ಸರಕಾರದ ಕ್ರಮವನ್ನು ಹೈಕೋರ್ಟ್ ಒಪ್ಪಿರಲಿಲ್ಲ. ಏಕೆಂದರೆ, ಸಂವಿಧಾನದ ಅರ್ಟಿಕಲ್ 29 ಹಾಗೂ 20ರಲ್ಲಿ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳಿಗೆ ಸಂಬಂಧಿಸಿದಂತೆ ಸ್ಪಷ್ಟ ನಿರ್ದೇಶನಗಳನ್ನು ನೀಡಲಾಗಿದೆ. ಭಾರತದಲ್ಲಿ ಯಾವುದೇ ವ್ಯಕ್ತಿ, ತನ್ನ ಮಾತೃ ಭಾಷೆಯಲ್ಲಿ ಶಿಕ್ಷಣ ಪಡೆಯಲು ಅರ್ಹರಾಗಿದ್ದಾರೆ.
ಉದಾಹರಣೆಗೆ, ಮಧ್ಯಪ್ರದೇಶದಲ್ಲಿ ಕನ್ನಡಿಗ ವಿದ್ಯಾರ್ಥಿಯೊಬ್ಬ ಕನ್ನಡದಲ್ಲಿ ಶಿಕ್ಷಣ ಪಡೆಯಲು ಬಯಸಿದರೆ ಆ ಹುಡುಗನಿಗೆ ಶಿಕ್ಷಣ ಕೊಡುವುದು ಆ ಸರಕಾರದ ಜವಾಬ್ದಾರಿ ಯಾಗಿರುತ್ತದೆ. ಅದೇ ರೀತಿ, ಕೇರಳದಲ್ಲಿರುವ ಕನ್ನಡಿಗರು ತಮ್ಮ ಮಕ್ಕಳಿಗೆ ಕನ್ನಡ ಭಾಷೆ ಯಲ್ಲಿಯೇ ಶಿಕ್ಷಣ ಕೊಡಿಸಲು ಇಚ್ಛಿಸಿದರೆ ಕೊಡಿಸುವುದು ಆ ಸರಕಾರದ ಹೊಣೆಯಾಗಿರು ತ್ತದೆ.
ಈ ಕಾರಣಕ್ಕಾಗಿಯೇ ಕೇರಳದಲ್ಲಿ ಮಲಯಾಳಂ ಮಾಧ್ಯಮದಲ್ಲಿ ಶಿಕ್ಷಣ ಪಡೆಯಬೇಕು ಎನ್ನುವ ಕೇರಳ ಸರಕಾರದ ವಿಧೇಯಕಕ್ಕೆ ಕಾನೂನಾತ್ಮಕವಾಗಿ ಮಾನ್ಯತೆ ಎಷ್ಟರ ಮಟ್ಟಿಗೆ ಸಿಗಲಿದೆ ಎನ್ನುವುದು ಈಗಿರುವ ಪ್ರಶ್ನೆ.
ಕೇರಳ ಸರಕಾರದ ನಡೆಯನ್ನು ರಾಜ್ಯ ಕಾಂಗ್ರೆಸ್ ವಿರೋಧಿಸುವುದಕ್ಕೂ ಕಾರಣಗಳು ಭಿನ್ನ ರೀತಿಯಲ್ಲಿವೆ. ಒಂದು, ಕಾಸರಗೋಡಿನ ಕನ್ನಡಿಗರಿಗೆ ಮಾತೃಭಾಷೆ ಕಲಿಯುವ ಹಕ್ಕನ್ನು ಕಲ್ಪಿಸುವುದಾದರೆ, ಇದನ್ನೂ ಮೀರಿ ರಾಜಕೀಯ ಲೆಕ್ಕಾಚಾರಗಳಿವೆ. ಕೇರಳದಲ್ಲಿ ಮೇ ತಿಂಗಳಲ್ಲಿ ಎದುರಾಗಲಿರುವ ವಿಧಾನಸಭಾ ಚುನಾವಣೆಗೆ ಈಗಾಗಲೇ ಪಕ್ಷಗಳು ಸಜ್ಜಾಗು ತ್ತಿವೆ. ಈ ಹಿಂದೆ ಅಸ್ತಿತ್ವದಲ್ಲಿಯೇ ಇಲ್ಲದ ಬಿಜೆಪಿ ಈ ಬಾರಿ ಅಧಿಕಾರಕ್ಕೆ ಬಾರದಿದ್ದರೂ, ಅಧಿಕಾರಕ್ಕೆ ಬರುವವರಿಗೆ ಅಡ್ಡಗಾಲು ಹಾಕುವ ಹಂತ ಹಾಗೂ ಲೆಕ್ಕಾಚಾರದಲ್ಲಿದೆ.
ಇನ್ನು ಕಳೆದೊಂದು ದಶಕದಿಂದ ಆಡಳಿತ ನಡೆಸುತ್ತಿರುವ ಪಿಣರಾಯಿ ವಿಜಯನ್ ನೇತೃತ್ವದ ಸಿಪಿಎಂಗೆ ಈ ಬಾರಿ ತೀವ್ರ ಆಡಳಿತ ವಿರೋಧಿ ಅಲೆಯಿದೆ. ಇನ್ನೊಂದೆಡೆ ಸರಣಿ ಸೋಲುಗಳ ಹೊರತಾಗಿಯೂ ಕೇರಳ ಮುಖ್ಯಮಂತ್ರಿ ಗಾದಿಯ ಮೇಲೆ ಕಟ್ಟಿರುವ ಕಾಂಗ್ರೆಸ್ ತನ್ನದೇ ಆದ ರಣತಂತ್ರವನ್ನು ಹೂಡುತ್ತಿದೆ.
ಅದರಲ್ಲಿಯೂ ಶಶಿ ತರೂರ್ ಪಕ್ಷದಿಂದ ಸಾಧ್ಯವಾದಷ್ಟು ಅಂತರ ಕಾಯ್ದುಕೊಳ್ಳುತ್ತಿರುವು ದರಿಂದ, ಸಿಎಂ ಗಾದಿಯ ಮೇಲೆ ಕಣ್ಣಿಟ್ಟಿರುವ ಕೆ.ಸಿ.ವೇಣುಗೋಪಾಲ್ ಶತಾಯಗತಾಯ ಅಧಿಕಾರಕ್ಕೆ ಬರಬೇಕು ಎನ್ನುವ ಲೆಕ್ಕಾಚಾರದಲ್ಲಿದ್ದಾರೆ.
‘ಇಂಡಿ’ ಒಕ್ಕೂಟದಲ್ಲಿಯೇ ಇದ್ದರೂ ಸಿಪಿಎಂ ಹಾಗೂ ಕಾಂಗ್ರೆಸ್ ನಡುವಿನ ಈ ಹೋರಾಟ ದಲ್ಲಿ ಲಾಭ ಪಡೆಯುವ ಆಲೋಚನೆ ಬಿಜೆಪಿಯದ್ದಾಗಿದೆ. ಕೇರಳದಲ್ಲಿ ಮುಸ್ಲಿಂ ಮತಗಳು ನಿರ್ಣಾಯಕವಾಗಿರುವುದರಿಂದ ಕೆಲ ದಿನಗಳ ಹಿಂದೆ ಪಿಣರಾಯಿ ವಿಜಯನ್ ಬೆಂಗಳೂರಿನ ಕೋಗಿಲು ಲೇಔಟ್ ಅಕ್ರಮ ಮನೆಗಳ ತೆರವಿನ ವಿಷಯವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ಗೆ ಡ್ಯಾಮೇಜ್ ಮಾಡಲು ಪ್ರಯತ್ನಿಸಿದರು.
ಇದಾದ ಬಳಿಕ ಕೇರಳದಲ್ಲಿ ‘ಮಲಯಾಳಂ’ ಭಾಷೆಯ ಹೆಸರಲ್ಲಿ ಒಂದಿಷ್ಟು ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಕೇರಳ ಸರಕಾರ ಮಲಯಾಳಂ ಭಾಷಾ ವಿಧೇಯಕ 2025ನ್ನು ಅನುಮೋದನೆ ಮಾಡಿ, ರಾಜ್ಯಪಾಲರಿಗೆ ರವಾನಿಸಿದೆ. ಈ ವಿಧೇಯಕ ತರುವುದರಿಂದ ಕಾಸರಗೋಡು ಭಾಗದಲ್ಲಿ ಸಿಪಿಎಂಗೆ ಹೊಡೆತ ಬೀಳುವುದು ಗೊತ್ತಿದ್ದರೂ, ಕೇರಳದ ಇತರೆ ಭಾಗದಲ್ಲಿ ಭಾಷೆಯ ಅಸ್ಮಿತೆಯನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗುವ ಲೆಕ್ಕಾಚಾರ ಪಿಣರಾಯಿ ಅವರದ್ದಾಗಿದೆ.
ಈ ವಿಧೇಯಕದಿಂದ ಕಾಸರಗೋಡು ಜಿಲ್ಲೆಯ ಮಂಜೇಶ್ವರ, ಕಾಸರಗೋಡು, ಉಡ್ಮಾ, ಕಾಞ್ಞಂಗಾಡ್ ಹಾಗೂ ತ್ರಿಕ್ಕರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಹಿನ್ನಡೆಯಾದರೂ, ಇನ್ನು ಳಿದ 135 ಕ್ಷೇತ್ರದಲ್ಲಿ ಕನಿಷ್ಠ ಪ್ರಮಾಣದಲ್ಲಿ ಆದರೂ ಪ್ರಭಾವ ಬೀರಲಿದೆ ಎನ್ನುವ ಕಾರಣ ಕ್ಕೆ ವಿಧೇಯಕವನ್ನು ತಂದಿದ್ದಾರೆ. ಈ ವಿಧೇಯಕವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ ಏನಾಗುತ್ತದೆ ಎನ್ನುವುದಕ್ಕಿಂತ ಚುನಾವಣೆಯಲ್ಲಿ ಉತ್ತಮ ’ವಿಷಯ’ ಎನ್ನುವುದು ಪಿಣರಾಯಿ ಲೆಕ್ಕಾಚಾರವಾಗಿದೆ.
ಕೋಗಿಲು ಪ್ರಕರಣದಲ್ಲಿ ಕರ್ನಾಟಕ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ಕೇರಳ ಸರಕಾರಕ್ಕೆ ಟಕ್ಕರ್ ಕೊಡಲು ಹಾಗೂ ಕಾಸರಗೋಡು ಕನ್ನಡಿಗರ ಮಾತೃಭಾಷೆ ರಕ್ಷಣೆಯ ಜತೆಜತೆಗೆ ‘ಮತ’ಗಳನ್ನು ಸೆಳೆಯುವುದಕ್ಕೆ ಕಾಂಗ್ರೆಸ್ ಇದರ ವಿರುದ್ಧ ಧ್ವನಿ ಎತ್ತಿದೆ.
ಸಂವಿಧಾನದಲ್ಲಿ ಭಾಷಾ ಅಲ್ಪಸಂಖ್ಯಾತರಿಗೆ ರಕ್ಷಣೆಯಿರುವುದರಿಂದ ನೇರವಾಗಿ ಕನ್ನಡ ಕಲಿಸುವುದಿಲ್ಲ ಎಂದು ಹೇಳಲು ಬರುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಕಾಸರಗೋಡು ಭಾಗದಲ್ಲಿ ಈಗಾಗಲೇ ಕೇರಳ ಸರಕಾರ ಹಂತಹಂತವಾಗಿ ಮಲಯಾಳಂ ‘ಹೇರಿಕೆ’ ಮಾಡುತ್ತಲೇ ಬಂದಿದ್ದು, ಇದರ ಮುಂದುವರಿದ ಭಾಗವೇ ಈ ವಿಧೇಯಕ ಎನ್ನುವುದು ಸ್ಪಷ್ಟ.
ಯಾವ ಕಾರಣಕ್ಕೆ ಕರ್ನಾಟಕ ಸರಕಾರ ಕೇರಳದ ನಿರ್ಧಾರದ ವಿರುದ್ಧ ಧ್ವನಿ ಎತ್ತಿತ್ತು ಎನ್ನುವುದಕ್ಕಿಂತ, ಕಾಸರಗೋಡಿನಲ್ಲಿರುವ ಕನ್ನಡಿಗರ ರಕ್ಷಣೆಗೆ ಇದು ಉತ್ತಮ ಬೆಳೆವಣಿಗೆ. ಆದರೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ ಅವರು ಹೀಗೆನ್ನುತ್ತಾರೆ: “ಕಾಸರಗೋಡು ಕನ್ನಡಿಗರ ರಕ್ಷಣೆ ಮಾಡುವ ಸಲುವಾಗಿ ಕೇರಳ ಸರಕಾರ ತನ್ನ ರಾಜ್ಯ ಭಾಷೆಯನ್ನು ಉಳಿಸಿಕೊಳ್ಳಲು ತಂದಿರುವ ಈ ವಿಧೇಯಕವನ್ನು ಸಾರಾಸಗಟಾಗಿ ತಿರಸ್ಕರಿಸಿ ದರೆ, ಮುಂದೆ ಕರ್ನಾಟಕದಲ್ಲಿ ಬಹುದೊಡ್ಡ ಸಮಸ್ಯೆಯಾಗುವ ಆತಂಕವಿದೆ.
ಕೇರಳದಲ್ಲಿ ಮಲಯಾಳಂ ಕಲಿಸಿದಂತೆ, ಕರ್ನಾಟಕದಲ್ಲಿ ಕನ್ನಡ ಕಲಿಸುತ್ತೇವೆ ಎನ್ನುವ ದಿಟ್ಟ ತೀರ್ಮಾನವನ್ನು ಸರಕಾರ ಕೈಗೊಳ್ಳಬೇಕು. ಜತೆಗೆ ಆ ನಿಟ್ಟಿನಲ್ಲಿ ಕೇರಳ ಸರಕಾರ ತೆಗೆದುಕೊಂಡಿರುವ ತೀರ್ಮಾನದಂತೆ ಕರ್ನಾಟಕದಲ್ಲಿಯೂ ಕಠಿಣ ನಿಲುವು ತಳೆಯ ಬೇಕಾಗಿದೆ.
ಇಲ್ಲದಿದ್ದರೆ, ಮುಂದೊಂದು ದಿನ ಕರ್ನಾಟಕದಲ್ಲಿ ಕನ್ನಡ ಕಲಿಯುವುದಿಲ್ಲ ಎಂದು ಇಲ್ಲಿರುವ ‘ಭಾಷಾ ಅಲ್ಪಸಂಖ್ಯಾತರು’ ಹೇಳಲು ಶುರು ಮಾಡಿದರೆ ಕನ್ನಡ ಅಸ್ಮಿತೆಗೆ ಏನಾಗ ಲಿದೆ?". ನಾರಾಯಣಗೌಡ ಅವರ ವಾದವನ್ನು ಸಾರಸಗಟಾಗಿ ತಳ್ಳಿಹಾಕುವುದಕ್ಕೂ ಸಾಧ್ಯ ವಿಲ್ಲ. ಆದರೆ ಕರ್ನಾಟಕದಲ್ಲಿ ಭಾಷೆಯ ವಿಷಯದಲ್ಲಿ ಈ ಪ್ರಮಾಣದಲ್ಲಿ ಗಟ್ಟಿ ನಿಲುವು ತಾಳಲು ಸಾಧ್ಯವೇ? ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಕೆಲ ಕಠಿಣ ನಿಲುವು ತೆಗೆದುಕೊಂಡರು.
ಈ ಬಾರಿಯ ಅವಧಿಯಲ್ಲಿಯೂ ಶೇ.60ರಷ್ಟು ಕನ್ನಡ ನಾಮಫಲಕ, ಕನ್ನಡಿಗರಿಗೆ ಉದ್ಯೋಗ ಎನ್ನುವ ಕೆಲ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ. ಆದರೆ ಅವುಗಳ ಅನುಷ್ಠಾನದ ಪ್ರಮಾಣ ಹೇಳಿಕೊಳ್ಳುವಷ್ಟಿಲ್ಲ. ಈ ಎಲ್ಲವನ್ನು ಮೀರಿ ತಮಿಳುನಾಡು, ಕೇರಳ ರಾಜ್ಯಗಳಂತೆ ಕರ್ನಾಟಕದಲ್ಲಿ ಬಹುಪಾಲು ಚುನಾವಣೆಗಳಲ್ಲಿ ಭಾಷೆ ಎನ್ನುವುದು ಚುನಾವಣಾ ವಿಷಯವೇ ಆಗಿಲ್ಲ. ಆದ್ದರಿಂದ ಕನ್ನಡ ಎನ್ನುವುದು ರಾಷ್ಟ್ರೀಯ ಪಕ್ಷಗಳಿಗೆ ರಾಜಕೀಯ ವಿಷಯವೇ ಆಗಿಲ್ಲ.
ಕಾಂಗ್ರೆಸ್ ನಾಯಕರು ಕೇರಳ ಸರಕಾರದ ಮಲಯಾಳಂ ವಿಧೇಯಕದ ವಿರುದ್ಧ ಎತ್ತಿರುವ ಧ್ವನಿ, ಕಾಸರಗೋಡು ಭಾಗದ ಚುನಾವಣೆ ಮುಗಿಯುವ ತನಕವೋ ಅಥವಾ ಅಲ್ಲಿ ನೆಲೆಸಿರುವ ಕನ್ನಡಿಗರಿಗೆ ನಿಜಕ್ಕೂ ಮಾತೃಭಾಷೆಯಲ್ಲಿ ಶಿಕ್ಷಣ ಕೊಡಿಸುವುದಕ್ಕಾಗಿ ಎನ್ನುವ ನೈಜ ಕಾಳಜಿ ಇದೆಯೋ ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕಿದೆ.