Vishweshwar Bhat Column: ಇದು ‘ವಿಕಸಿತ ಭಾರತ’ವೋ, ‘ಕುಸಿತ ಭಾರತ’ವೋ?
ಬಿಹಾರದ ಖಗರಿಯಾ ಮತ್ತು ಭಾಗಲ್ಪುರ ಜಿಲ್ಲೆಗಳನ್ನು ಸಂಪರ್ಕಿಸಲು ಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿದ್ದ ಸುಲ್ತಾನ್‌ಗಂಜ್- ಅಗ್ವಾನಿ ಘಾಟ್ ಸೇತುವೆ ಕುಸಿತವು ಭಾರತದ ಮೂಲ ಸೌಕರ್ಯ ಇತಿಹಾಸದಲ್ಲಿಯೇ ಅತ್ಯಂತ ಅತಿರೇಕದ ಕಳಪೆ ಕಾಮಗಾರಿಗೆ ಉದಾಹರಣೆಯಾಗಿದೆ. ಸುಮಾರು 1700 ಕೋಟಿ ರುಪಾಯಿ ಭಾರಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದ ಈ ನಾಲ್ಕು ಪಥದ ಸೇತುವೆಯು ಉದ್ಘಾಟನೆ ಯಾಗುವ ಮೊದಲೇ ಎರಡೆರಡು ಬಾರಿ ಜಲಸಮಾಧಿಯಾಯಿತು.
-
ನೂರೆಂಟು ವಿಶ್ವ
ಮೊನ್ನೆ ಡೆಹ್ರಾಡೂನ್‌ನಲ್ಲಿ ನೂತನವಾಗಿ ನಿರ್ಮಿಸಿ ಉದ್ಘಾಟನೆಯಾದ ಕೇವಲ ಹದಿನಾರು ದಿನಗಳಲ್ಲಿ ಸೇತುವೆಯ ಮೇಲ್ಭಾಗ ತೂತಾಗಿ, ಇಡೀ ಸೇತುವೆ ಬಂದ್ ಆಯಿತು. ಒಂದು ವೇಳೆ ವಾಹನವೇನಾದರೂ ಆ ಸಂದರ್ಭದಲ್ಲಿ ಚಲಿಸುತ್ತಿದ್ದರೆ ಅದು ಆ ತೂತಿನಲ್ಲಿ ತೂರಿ ನದಿಗೆ ಬೀಳುತ್ತಿತ್ತು. ಅದರ ಒಳಭಾಗದಲ್ಲಿ ಹಾಕಿದ ಕಬ್ಬಿಣ ಮತ್ತು ಕಾಂಕ್ರೀಟ್ ತೀರಾ ಕಳಪೆ ಎಂಬ ಸತ್ಯ ಬಯಲಾಯಿತು. ಈ ಘಟನೆ ಬಳಿಕ ತಪಾಸಣೆ ಮಾಡಿದಾಗ, ಇನ್ನೂ ನಾಲ್ಕೆ ದು ಕಡೆಗಳಲ್ಲಿ ಯಾವ ಕ್ಷಣದದರೂ ಸೇತುವೆ ತೂತು ಬೀಳುವ ಅಪಾಯವಿದೆ ಎಂಬ ಸಂಗತಿ ಗಮನಕ್ಕೆ ಬಂದಿತು.
ಬಿಹಾರದ ಖಗರಿಯಾ ಮತ್ತು ಭಾಗಲ್ಪುರ ಜಿಲ್ಲೆಗಳನ್ನು ಸಂಪರ್ಕಿಸಲು ಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿದ್ದ ಸುಲ್ತಾನ್‌ಗಂಜ್- ಅಗ್ವಾನಿ ಘಾಟ್ ಸೇತುವೆ ಕುಸಿತವು ಭಾರತದ ಮೂಲ ಸೌಕರ್ಯ ಇತಿಹಾಸದಲ್ಲಿಯೇ ಅತ್ಯಂತ ಅತಿರೇಕದ ಕಳಪೆ ಕಾಮಗಾರಿಗೆ ಉದಾಹರಣೆಯಾಗಿದೆ. ಸುಮಾರು 1700 ಕೋಟಿ ರುಪಾಯಿ ಭಾರಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದ ಈ ನಾಲ್ಕು ಪಥದ ಸೇತುವೆಯು ಉದ್ಘಾಟನೆ ಯಾಗುವ ಮೊದಲೇ ಎರಡೆರಡು ಬಾರಿ ಜಲಸಮಾಧಿಯಾಯಿತು. ಮೊದಲ ಬಾರಿಗೆ ಏಪ್ರಿಲ್ 2022ರಲ್ಲಿ ಬಲವಾದ ಗಾಳಿಗೆ ಸೇತುವೆಯ ಸೂಪರ್‌ಸ್ಟ್ರಕ್ಚರ್ ನದಿಗೆ ಬಿzಗ, ಅದನ್ನು ಕೇವಲ ನೈಸರ್ಗಿಕ ವಿಕೋಪ ವೆಂದು ಬಿಂಬಿಸಲು ಯತ್ನಿಸಲಾಯಿತು.
ಆದರೆ, ಜೂನ್ 2023ರಲ್ಲಿ ಸುಮಾರು ಮುನ್ನೂರು ಮೀಟರ್‌ಗೂ ಹೆಚ್ಚಿನ ಉದ್ದದ ಸೇತುವೆಯ ಭಾಗವು ಇಡೀ ಕಾಂಕ್ರೀಟ್ ರಚನೆಯೊಂದಿಗೆ ನದಿಯೊಳಗೆ ಕುಸಿದು ಜಲಸಮಾಧಿಯಾಯಿತು. ಈ ಭೀಕರ ದೃಶ್ಯವು ಕೆಮರಾಗಳಲ್ಲಿ ಸೆರೆಯಾಗಿ ಇಡೀ ದೇಶವೇ ಬೆಚ್ಚಿಬೀಳುವಂತೆ ಮಾಡಿತು. ತಾಂತ್ರಿಕ ವಿನ್ಯಾಸದ ದೋಷ, ಕಳಪೆ ಗುಣಮಟ್ಟದ ಕಾಂಕ್ರೀಟ್ ಮತ್ತು ಸಿಮೆಂಟ್ ಬಳಕೆ ಹಾಗೂ ನಿಯಂತ್ರಣ ವಿಲ್ಲದ ಭ್ರಷ್ಟಾಚಾರವೇ ಈ ದುರಂತಕ್ಕೆ ಮುಖ್ಯ ಕಾರಣ. ಪ್ರಮುಖ ಐಐಟಿ ತಜ್ಞರ ತನಿಖೆಯಿಂದಲೂ ವಿನ್ಯಾಸದಲ್ಲಿ ತೀವ್ರ ಲೋಪ ವಿರುವುದು ಸಾಬೀತಾಯಿತು.
ಸಾರ್ವಜನಿಕರ ಕೋಟ್ಯಂತರ ತೆರಿಗೆ ಹಣವನ್ನು ಗಂಗೆಯಲ್ಲಿ ಹರಿಸಿದಂತಾದ ಈ ಘಟನೆಯು ದೇಶದ ಎಂಜಿನಿಯರಿಂಗ್ ವ್ಯವಸ್ಥೆಗೆ ದೊಡ್ಡ ಕಳಂಕ ತಂದಿತು. ಕೇವಲ ಹಣದ ಪೋಲಷ್ಟೇ ಅಲ್ಲ, ಗುತ್ತಿಗೆದಾರರು ಮತ್ತು ಅಧಿಕಾರಿಗಳ ಅಪವಿತ್ರ ಮೈತ್ರಿಗೆ ಇದು ಜೀವಂತ ಸಾಕ್ಷಿಯಾಯಿತು.
ಇದನ್ನೂ ಓದಿ: Vishweshwar Bhat Column: ಭೂಮಧ್ಯ ರೇಖೆ ಮತ್ತು ಕಾಂಗೋ ನದಿ
ಉತ್ತರ ಪ್ರದೇಶದ ಮೂಲಸೌಕರ್ಯ ಅಭಿವೃದ್ಧಿಯ ಮೈಲಿಗಲ್ಲು ಎಂದು ಬಿಂಬಿತವಾಗಿದ್ದ, ಸುಮಾರು 296 ಕಿಮೀ ಉದ್ದದ ‘ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ’ ಉದ್ಘಾಟನೆಯಾದ ಕೇವಲ ಐದೇ ದಿನಗಳಲ್ಲಿ ಹಾನಿಗೊಳಗಾಗಿ ದೇಶಾದ್ಯಂತ ದೊಡ್ಡ ಚರ್ಚೆಗೆ ಗ್ರಾಸವಾಯಿತು.
ಜುಲೈ 2022ರಲ್ಲಿ ಪ್ರಧಾನಮಂತ್ರಿ ಯವರಿಂದ ಉದ್ಘಾಟನೆಗೊಂಡ ಈ ನಾಲ್ಕು ಪಥದ ಹೆದ್ದಾರಿಯು, ಸಾರ್ವಜನಿಕ ಸಂಚಾರಕ್ಕೆ ಮುಕ್ತವಾದ ಬೆನ್ನ ಮೊದಲ ಸಾಧಾರಣ ಮಳೆಗೆ ರಸ್ತೆಯ ಮೇಲ್ಭಾಗದ ತಾರ್ ಸಂಪೂರ್ಣವಾಗಿ ಕೊಚ್ಚಿ ಹೋಗಿ, ಕನಿಷ್ಠ ಎರಡರಿಂದ ಮೂರು ಅಡಿ ಆಳದ ಭಾರಿ ಹಳ್ಳ ನಿರ್ಮಾಣವಾಯಿತು. ರಾತ್ರಿ ವೇಳೆಯಲ್ಲಿ ವೇಗವಾಗಿ ಬಂದ ಕೆಲವು ವಾಹನಗಳು ಈ ಹಳ್ಳಕ್ಕೆ ಸಿಲುಕಿ ಅಪಘಾತಕ್ಕೀಡಾದವು. ಅದೃಷ್ಟವಶಾತ್ ಭಾರಿ ಪ್ರಾಣಾಪಾಯ ತಪ್ಪಿದರೂ, ಸುಮಾರು 14850 ಕೋಟಿ ರುಪಾಯಿ ಭಾರಿ ವೆಚ್ಚದಲ್ಲಿ ನಿರ್ಮಿಸಲಾದ ಹೈ-ಸ್ಪೀಡ್ ಎಕ್ಸ್‌ಪ್ರೆಸ್‌ವೇ ಬಾಳಿಕೆ ಕೇವಲ ಐದು ದಿನಕ್ಕೆ ಸೀಮಿತವಾಗಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಯಿತು.
ದೇಶದ ರಾಜಧಾನಿ ದೆಹಲಿಯಲ್ಲಿ ಸುಗಮ ಸಂಚಾರಕ್ಕಾಗಿ ಸುಮಾರು 920 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ‘ಪ್ರಗತಿ ಮೈದಾನ ಸುರಂಗ ಮಾರ್ಗ’ ಕಳಪೆ ಯೋಜನೆ ಮತ್ತು ದೋಷ ಪೂರಿತ ವಿನ್ಯಾಸಕ್ಕೆ ಮತ್ತೊಂದು ಉದಾಹರಣೆಯಾಯಿತು. ಜೂನ್ 2022ರಲ್ಲಿ ಪ್ರಧಾನಮಂತ್ರಿ ಯವರಿಂದ ಅತ್ಯಂತ ವಿಜೃಂಭಣೆಯಿಂದ ಉದ್ಘಾಟನೆಗೊಂಡ ಈ ಸುರಂಗವು, ತಂತ್ರಜ್ಞಾನದ ಅದ್ಭುತ ಎಂದು ಬಿಂಬಿತವಾಗಿತ್ತು. ಆದರೆ, ಉದ್ಘಾಟನೆಯಾದ ಕೆಲವೇ ತಿಂಗಳಲ್ಲಿ ಬಂದ ಮೊದಲ ಮಳೆಗೆ ಸುರಂಗದ ಗೋಡೆಗಳಿಂದ ನೀರು ಸೋರಲು ಪ್ರಾರಂಭವಾಯಿತು.
ಕಾಂಕ್ರೀಟ್ ಗೋಡೆಗಳಲ್ಲಿ ತೀವ್ರ ಬಿರುಕುಗಳು ಕಾಣಿಸಿಕೊಂಡು, ಇಡೀ ರಸ್ತೆಯ ಮೇಲೆ ನೀರು ಸಂಗ್ರಹವಾಗಿ ಈಜು ಕೊಳದಂತಾಯಿತು. ಇದರಿಂದಾಗಿ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಸುರಂಗ ಮಾರ್ಗವನ್ನು ಪದೇ ಪದೆ ಬಂದ್ ಮಾಡಬೇಕಾ ಯಿತು. ಸುರಂಗದ ವಾಟರ್‌ಪ್ರೂಫಿಂಗ್ ಕಾಮಗಾರಿ ತೀರಾ ಕಳಪೆಯಾಗಿದ್ದು, ಒಳಚರಂಡಿ ಮತ್ತು ನೀರು ಹೊರಹೋಗುವ ವ್ಯವಸ್ಥೆಯಲ್ಲಿ ತೀವ್ರ ತಾಂತ್ರಿಕ ಲೋಪಗಳಿರುವುದು ದೃಢಪಟ್ಟಿತು.
ಜೂನ್ 2024ರಲ್ಲಿ ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1ರ ನಿರ್ಗಮನ ಭಾಗದಲ್ಲಿದ್ದ ಬೃಹತ್ ಕಬ್ಬಿಣದ ಮೇಲ್ಚಾವಣಿ ಭಾರಿ ಮಳೆಯಿಂದಾಗಿ ಹಠಾತ್ತನೆ ಕುಸಿದುಬಿದ್ದಿತು. ಈ ಭೀಕರ ದುರಂತದಲ್ಲಿ ಕ್ಯಾಬ್ ಚಾಲಕನೊಬ್ಬ ಕಾರಿನೊಳಗೆ ನುಜ್ಜು ಗುಜ್ಜಾಗಿ ಮೃತಪಟ್ಟರೆ, ಎಂಟು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡರು. ಈ ಆಘಾತ ಮಾಸುವ ಮುನ್ನವೇ, ಕೇವಲ 36 ಗಂಟೆಗಳ ಅಂತರದಲ್ಲಿ ಗುಜರಾತ್‌ನ ನೂತನ ರಾಜ್‌ಕೋಟ್ ವಿಮಾನ ನಿಲ್ದಾಣ ಮತ್ತು ಜೈಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಹೊರಾಂಗಣ ಮೇಲ್ಚಾವಣಿ ಹಾಗೂ ಶೀಟ್‌ಗಳು ಮಳೆಗೆ ಕುಸಿದುಬಿದ್ದವು. ರಾಜ್‌ಕೋಟ್ ನಿಲ್ದಾಣವನ್ನು ಕೇವಲ ಒಂದು ವರ್ಷದ ಹಿಂದೆಯಷ್ಟೇ ಉದ್ಘಾಟಿಸಲಾಗಿತ್ತು.
ಆಗ 2024ರಲ್ಲಿ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ರಾಜಕೋಟ್ ಕೋಟೆಯಲ್ಲಿ ಸ್ಥಾಪಿಸ ಲಾಗಿದ್ದ 35 ಅಡಿ ಎತ್ತರದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಹಠಾತ್ತನೆ ಕುಸಿದು ಬಿದ್ದಿತು. ನೌಕಾಪಡೆಯ ದಿನದ ಅಂಗವಾಗಿ ಡಿಸೆಂಬರ್ 2023ರಲ್ಲಿ ಉದ್ಘಾಟನೆಗೊಂಡಿದ್ದ ಈ ಪ್ರತಿಮೆಯು ಕೇವಲ ಒಂಬತ್ತು ತಿಂಗಳಲ್ಲಿ ಧರೆಗುರುಳಿದ್ದು, ನಿರ್ಮಾಣದ ಕಳಪೆ ಮಟ್ಟಕ್ಕೆ ಸಾಕ್ಷಿಯಾಯಿತು. ಸ್ಥಳೀಯರ ಭಾವನೆ ಗಳೊಂದಿಗೆ ಬೆಸೆದುಕೊಂಡಿದ್ದ ಮಹಾನ್ ನಾಯಕರ ಪ್ರತಿಮೆಯನ್ನು ಕಳಪೆ ಸಾಮಗ್ರಿಗಳನ್ನು ಬಳಸಿ ನಿರ್ಮಿಸಿದ್ದು ಸಾರ್ವಜನಿಕರ ತೀವ್ರ ಖಂಡನೆಗೆ ಗುರಿಯಾಯಿತು.
ಅಕ್ಟೋಬರ್ 2022ರಲ್ಲಿ ಗುಜರಾತ್‌ನ ಮೊರ್ಬಿಯಲ್ಲಿ ಮಚ್ಚು ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ನೂರು ವರ್ಷ ಹಳೆಯ ತೂಗು ಸೇತುವೆಯು ದುರಸ್ತಿಯಾದ ಕೆಲವೇ ದಿನಗಳಲ್ಲಿ ಕುಸಿದು ಬಿದ್ದು 135ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡರು. ಸೇತುವೆಯ ನಿರ್ವಹಣೆ ಮತ್ತು ನವೀಕರಣದ ಗುತ್ತಿಗೆಯನ್ನು ವಾಚ್ ತಯಾರಿಸುವ ‘ಓರೆವಾ’ ಕಂಪನಿಗೆ ನೀಡಲಾಗಿತ್ತು. ಹಳೆಯ ಮತ್ತು ತುಕ್ಕು ಹಿಡಿದ ಕೇಬಲ್‌ಗಳನ್ನು ಬದಲಾಯಿಸದೇ, ಕೇವಲ ಮೇಲ್ಮೆ ಅಲಂಕಾರ ಮಾಡಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಿದ್ದು ಈ ಭೀಕರ ನರಮೇಧಕ್ಕೆ ಕಾರಣವಾಯಿತು.
ಜೂನ್ ಮತ್ತು ಜುಲೈ 2024ರ ಕೇವಲ 15 ದಿನಗಳ ಅಂತರದಲ್ಲಿ ಬಿಹಾರದ ಅರರಿಯಾ, ಸಿವಾನ್, ಶರಣ, ಕಿಶನ್‌ಗಂಜ್ ಮತ್ತು ಮಧುಬನಿ ಜಿಲ್ಲೆಗಳಲ್ಲಿ 12ಕ್ಕೂ ಹೆಚ್ಚು ಸೇತುವೆಗಳು ಒಂದೊಂದಾಗಿ ಕುಸಿದುಬಿದ್ದವು. ಇವುಗಳಲ್ಲಿ ಕೆಲವು ನೂತನವಾಗಿ ನಿರ್ಮಿಸಿ ಇನ್ನೂ ಉದ್ಘಾಟನೆಯಾಗದ ಸೇತುವೆ ಗಳಾಗಿದ್ದರೆ, ಇನ್ನು ಕೆಲವು ವರ್ಷಗಳ ಹಿಂದೆ ಕಟ್ಟಿದ ಸೇತುವೆಗಳಾಗಿದ್ದವು. ನದಿ ಪಾತ್ರದಲ್ಲಿ ಸರಿಯಾದ ಪಿಲ್ಲರ್ ಬೇಸ್ ಇಲ್ಲದಿರುವುದು ಮತ್ತು ಕಳಪೆ ನಿರ್ವಹಣೆ ಇದಕ್ಕೆ ಮುಖ್ಯ ಕಾರಣ ವಾಗಿತ್ತು.
ಸಿಲಿಕಾನ್ ಸಿಟಿ ಬೆಂಗಳೂರು ಮತ್ತು ಆರ್ಥಿಕ ರಾಜಧಾನಿ ಮುಂಬೈನಲ್ಲಿ ಪ್ರತಿ ವರ್ಷ ಮುಂಗಾರು ಪ್ರವೇಶಿಸುತ್ತಿದ್ದಂತೆ ಸಾವಿರಾರು ರಸ್ತೆ ಗುಂಡಿಗಳು ಪ್ರತ್ಯಕ್ಷವಾಗುತ್ತವೆ. ‘ಪಾಟ್‌ಹೋಲ್’ಗಳಿಂದಾಗಿ ಸಂಭವಿಸುವ ಅಪಘಾತಗಳಲ್ಲಿ ಪ್ರತಿವರ್ಷ ನೂರಾರು ಜನರು ತಮ್ಮದಲ್ಲದ ತಪ್ಪಿಗೆ ವಿನಾಕಾರಣ ಜೀವ ಕಳೆದುಕೊಳ್ಳುತ್ತಿದ್ದಾರೆ.
ಈ ಘಟನೆಗಳು ಏನನ್ನು ಸೂಚಿಸುತ್ತವೆ?
ಭ್ರಷ್ಟಾಚಾರ, ಅದಕ್ಷತೆ, ಉತ್ತರದಾಯಿತ್ವ ಇಲ್ಲದಿರುವುದು, ರಾಜಕಾರಣಿಗಳು- ಅಧಿಕಾರಿಗಳು- ಗುತ್ತಿಗೆ ದಾರರ ನಡುವೆ ಅಪವಿತ್ರ ಮೈತ್ರಿ ಹಾಗೂ ದೇಶ ನಿರ್ಮಾಣದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದಿರು ವುದು!
ಜಪಾನ್ ಮತ್ತು ಕೆನಡಗಳಂಥ ತೀವ್ರ ನಿಸರ್ಗ ವಿಕೋಪಗಳಿಗೆ ಒಳಗಾಗುವ ದೇಶಗಳಲ್ಲಿ ಮೂಲ ಸೌಕರ್ಯಗಳು ಅತ್ಯಂತ ಸುಸ್ಥಿತಿಯಲ್ಲಿರುವುದನ್ನು ಕಾಣಬಹುದು. ಪ್ರತಿವರ್ಷ ಭಾರಿ ಭೂಕಂಪ ಗಳು ಹಾಗೂ ಭೀಕರ ಚಂಡಮಾರುತಗಳನ್ನು ಎದುರಿಸುವ ಜಪಾನ್‌ನಲ್ಲಿ, ರಸ್ತೆ ಹಾಗೂ ಸೇತುವೆಗಳ ಜೀವಿತಾವಧಿ ಹೆಚ್ಚಿಸಲು ಉತ್ತಮ ಒಳಚರಂಡಿ ಮತ್ತು ಇಳಿಜಾರು ವಿನ್ಯಾಸಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ. ರಸ್ತೆಯ ಮೇಲೆ ನೀರು ನಿಲ್ಲುವುದೇ ಕಾಂಕ್ರೀಟ್ ಮತ್ತು ಟಾರ್ ಹಾಳಾಗಲು ಪ್ರಮುಖ ಕಾರಣ ಎಂಬುದನ್ನು ಅರಿತಿರುವ ಜಪಾನಿ ಎಂಜಿನಿಯರ್‌ಗಳು, ನೀರು ತಕ್ಷಣವೇ ಹರಿದುಹೋಗುವಂತೆ ‘ಪೋರಸ್ ಆಸಾಲ್ಟ್’ ಎಂಬ ನೀರನ್ನು ಹೀರಿಕೊಳ್ಳುವ ವಿಶೇಷ ರಸ್ತೆ ಮೇಲ್ಮೈ ಬಳಸುತ್ತಾರೆ. ಜತೆಗೆ, ಸೇತುವೆಗಳನ್ನು ಭೂಕಂಪದ ಕಂಪನಗಳನ್ನು ತಡೆಯುವ ‘ಶಾಕ್ ಅಬ್ಸಾರ್ಬರ್’ ಹಾಗೂ ‘ರಬ್ಬರ್ ಬೇರಿಂಗ್’ ತಂತ್ರಜ್ಞಾನದಿಂದ ನಿರ್ಮಿಸಲಾಗುತ್ತದೆ.
ಕೆನಡದಲ್ಲಿ ತಾಪಮಾನವು ಶೂನ್ಯಕ್ಕಿಂತ ಸರಿ ಸುಮಾರು ಮೈನಸ್ 30 ಸೆಂಟಿಗ್ರೇಡ್‌ಗಿಂತಲೂ ಕೆಳಗೆ ಕುಸಿಯುತ್ತದೆ. ಅಲ್ಲಿ ಸಾಮಾನ್ಯ ರಸ್ತೆಗಳು ಹಿಮಾವೃತಗೊಂಡು ಕಾಂಕ್ರೀಟ್ ಬಿರುಕು ಬಿಡುವ ಅಪಾಯವಿರುತ್ತದೆ. ಇದನ್ನು ತಡೆಯಲು ಕೆನಡ ‘ಪಾಲಿಮರ್- ಮಾರ್ಪಡಿಸಿದ ಆಸಾಲ್ಟ್’ ಮಿಶ್ರಣ ವನ್ನು ಬಳಸುತ್ತದೆ. ಇದು ಕೊರೆಯುವ ಚಳಿಯಲ್ಲೂ ರಸ್ತೆ ಕುಗ್ಗದಂತೆ ಅಥವಾ ಒಡೆಯದಂತೆ -ಕ್ಸಿಬಲ್ ಆಗಿ ಇರಿಸುತ್ತದೆ. ಅಲ್ಲದೇ, ಹಿಮವನ್ನು ಕರಗಿಸಲು ಬಳಸುವ ಉಪ್ಪಿನ ರಾಸಾಯನಿಕಗಳಿಗೆ ರಸ್ತೆ ಹಾಳಾಗದಂತೆ ವಿಶೇಷ ‘ಸೀಲಾಂಟ’ಗಳನ್ನು ಬಳಸಲಾಗುತ್ತದೆ.
ಈ ಎರಡೂ ದೇಶಗಳಲ್ಲಿ ‘ಮುಂಜಾಗ್ರತಾ ನಿರ್ವಹಣೆ’ ಅತ್ಯಂತ ಕಡ್ಡಾಯ ನಿಯಮ. ರಸ್ತೆಯಲ್ಲಿ ಸಣ್ಣ ಬಿರುಕು (Micro- crack) ಕಾಣಿಸಿಕೊಂಡ ತಕ್ಷಣವೇ ಡಿಜಿಟಲ್ ಸೆನ್ಸರ್ ಮತ್ತು ಲೇಸರ್ ತಂತ್ರ ಜ್ಞಾನದ ಮೂಲಕ ಗುರುತಿಸಿ, ಕೆಲವೇ ಗಂಟೆಗಳಲ್ಲಿ ಅದನ್ನು ಸಂಪೂರ್ಣವಾಗಿ ಮುಚ್ಚಲಾಗುತ್ತದೆ. ಇದರಿಂದಾಗಿ ಸಣ್ಣ ಬಿರುಕುಗಳು ದೊಡ್ಡ ರಸ್ತೆ ಗುಂಡಿಗಳಾಗಿ ಬದಲಾಗುವುದೇ ಇಲ್ಲ. ಅಲ್ಲಿನ ಅತ್ಯಾಧುನಿಕ ಎಂಜಿನಿಯ ರಿಂಗ್ ತಂತ್ರಜ್ಞಾನ, ಕಟ್ಟುನಿಟ್ಟಿನ ಗುಣಮಟ್ಟ ಮತ್ತು ಮುಂಜಾಗ್ರತಾ ಆಡಳಿತ ವ್ಯವಸ್ಥೆ ನೋಡಿಯೂ ನಾವು ಪಾಠ ಕಲಿಯುವುದಿಲ್ಲ ಅಂದರೇನು?
ಪ್ರಯಾಗ್‌ರಾಜ್‌ನಲ್ಲಿ 1865ರಿಂದ ಯಮುನಾ ನದಿಯ ಮೇಲೆ ರೈಲುಗಳನ್ನು ಹೊತ್ತೊಯ್ಯುವ ‘ನೈನಿ ಸೇತುವೆ’ (ಬ್ರಿಡ್ಜ್ ನಂ. 30) ಮತ್ತು ಜಾನ್ಪುರದಲ್ಲಿ ಅಕ್ಬರನ ಅವಧಿಯಲ್ಲಿ (1568) ನಿರ್ಮಾಣವಾಗಿ ಇಂದಿಗೂ ಸಣ್ಣ ವಾಹನಗಳ ಸಂಚಾರಕ್ಕೆ ನೆರವಾಗುತ್ತಿರುವ ‘ಶಾಹಿ ಸೇತುವೆ’ ನಮಗೆ ಭಾರತೀಯ ಮೂಲಸೌಕರ್ಯದ ಎರಡು ವಿಭಿನ್ನ ಮುಖಗಳನ್ನು ತೋರಿಸುತ್ತವೆ. ಈ ಹಳೆಯ ರಚನೆಗಳು ಶತಮಾನಗಳಿಂದ ಗಟ್ಟಿಯಾಗಿ ನಿಂತಿದ್ದರೆ, ಇತ್ತೀಚಿನ ಕೆಲವು ಆಧುನಿಕ ರಸ್ತೆ-ಸೇತುವೆಗಳು ಉದ್ಘಾಟನೆ ಗೊಂಡ ಕೆಲ ದಿನಗಳಲ್ಲಿ ಕುಸಿಯುತ್ತಿವೆ. ನಮ್ಮ ಬಾಗಲಕೋಟೆ, ಗದಗ ಪಟ್ಟಣಗಳಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ನಿರ್ಮಿಸಿದ ರಸ್ತೆಗಳು ಈಗಲೂ ಗಟ್ಟಿಯಾಗಿವೆ. ಆದರೆ ಕಳೆದ ಐದಾರು ವರ್ಷಗಳಲ್ಲಿ ನಿರ್ಮಿಸಿದ ರಸ್ತೆಗಳು ಮಳೆಗೆ ಕೊಚ್ಚಿ ಹೋಗಿವೆ.
ನಾವು ಒಂದೆಡೆ ‘ವಿಕಸಿತ ಭಾರತ’ದ ಬಗ್ಗೆ ಮಾತಾಡುತ್ತಿದ್ದೇವೆ, ಅಂತಾರಾಷ್ಟ್ರೀಯ ಮಾಧ್ಯಮಗಳು ಮತ್ತು ಪ್ರವಾಸಿಗರು ಭಾರತದ ಮೂಲಸೌಕರ್ಯಗಳನ್ನು ‘ಪಾಟ್‌ಹೋಲ್ ನೇಷನ್’ ಎಂದು ಅಪಹಾಸ್ಯ ಮಾಡುತ್ತಿವೆ. ಚೀನಾ, ಜಪಾನ್ ಮತ್ತು ಯುರೋಪ್ ದೇಶಗಳಲ್ಲಿ ನೂರು ವರ್ಷಗಳಾ ದರೂ ಕೊಂಕದ ರಸ್ತೆ ಹಾಗೂ ಸೇತುವೆಗಳನ್ನು ನಿರ್ಮಿಸಲಾಗುತ್ತದೆ. ಆದರೆ ಭಾರತದಲ್ಲಿ ಪ್ರತಿವರ್ಷ ರಸ್ತೆ ರಿಪೇರಿ ಮತ್ತು ಮರು ನಿರ್ಮಾಣಕ್ಕಾಗಿ ಸಾವಿರಾರು ಕೋಟ್ಯಂತರ ರುಪಾಯಿ ಮೀಸಲಿಟ್ಟರೂ, ಪರಿಸ್ಥಿತಿ ಬದಲಾಗುವುದಿಲ್ಲ.
ರಸ್ತೆ ಗುಂಡಿಗಳು ಮತ್ತು ಸೇತುವೆ ಕುಸಿತಗಳಿಂದಾಗಿ ದೇಶದಲ್ಲಿ ಪ್ರತಿದಿನವೂ ಅಮಾಯಕ ವಾಹನ ಸವಾರರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ವಾಹನಗಳ ದುರಸ್ತಿ, ಇಂಧನದ ಪೋಲು ಮತ್ತು ಪ್ರಯಾ ಣದ ಸಮಯ ಹೆಚ್ಚಾಗುವುದರಿಂದ ದೇಶದ ಆರ್ಥಿಕತೆಗೆ ಭಾರಿ ಹೊಡೆತ ಬೀಳುತ್ತದೆ. ಪ್ರತಿದಿನ ಕಳಪೆ ರಸ್ತೆಗಳಲ್ಲಿ ಪ್ರಯಾಣಿಸುವ ನಾಗರಿಕರು ದೈಹಿಕ ಹಾಗೂ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ.
ಭಾರತವು ನಿಜವಾದ ಅರ್ಥದಲ್ಲಿ ಪ್ರಗತಿ ಹೊಂದಬೇಕಾದರೆ, ಮೂಲಸೌಕರ್ಯ ನಿರ್ಮಾಣದ ಪ್ರಕ್ರಿಯೆಯಲ್ಲಿ ಮೂಲಭೂತ ಬದಲಾವಣೆಗಳನ್ನು ತರಲೇಬೇಕಾಗಿದೆ. ಯಾವುದೇ ರಸ್ತೆ ಅಥವಾ ಸೇತುವೆ ನಿರ್ಮಿಸಿದ ನಂತರ ಕನಿಷ್ಠ ಐದರಿಂದ ಹತ್ತು ವರ್ಷಗಳ ಕಾಲ ಅದರ ಸಂಪೂರ್ಣ ನಿರ್ವಹಣೆಯ ಹೊಣೆಯನ್ನು ಗುತ್ತಿಗೆದಾರನಿಗೇ ನೀಡಬೇಕು. ಈ ಅವಧಿಯಲ್ಲಿ ಹಾನಿಯಾದರೆ ಗುತ್ತಿಗೆದಾರನ ಸ್ವಂತ ವೆಚ್ಚದ ದುರಸ್ತಿ ಮಾಡಿಸುವ ಕಾನೂನು ಕಡ್ಡಾಯವಾಗಬೇಕು.
ಕಳಪೆ ಕೆಲಸಗಳನ್ನು ಎಸಗಿದ ಗುತ್ತಿಗೆದಾರರು ಮತ್ತು ಅದಕ್ಕೆ ಅಂಕಿತ ಹಾಕಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಜೈಲಿಗಟ್ಟಬೇಕು. ಕಂಪನಿಯ ಆಸ್ತಿಯನ್ನು ಮುಟ್ಟು ಗೋಲು ಹಾಕಿಕೊಳ್ಳಬೇಕು. ಕಾಮಗಾರಿಯ ಪ್ರತಿಯೊಂದು ಹಂತದಲ್ಲೂ ಜಿಯೋ-ಟ್ಯಾಗಿಂಗ್, ಡ್ರೋನ್ ಸಮೀಕ್ಷೆ ಮತ್ತು ಎಐ ಆಧಾರಿತ ತಂತ್ರಜ್ಞಾನ ಬಳಸಿ ಕಾಂಕ್ರೀಟ್ ಹಾಗೂ ಸಿಮೆಂಟ್‌ನ ಗುಣಮಟ್ಟವನ್ನು ಪರೀಕ್ಷಿಸಬೇಕು. ಪ್ರತಿಯೊಂದು ಯೋಜನೆಯ ವೆಚ್ಚ, ಬಳಸಿದ ಸಾಮಗ್ರಿಗಳ ವಿವರ, ಗುತ್ತಿಗೆದಾರನ ಹೆಸರು ಮತ್ತು ಉಸ್ತುವಾರಿ ಎಂಜಿನಿಯರ್ ಹೆಸರುಗಳನ್ನು ಸ್ಥಳದಲ್ಲಿ ಸ್ಪಷ್ಟವಾಗಿ ಪ್ರದರ್ಶಿಸುವ ಫಲಕಗಳನ್ನು ಕಡ್ಡಾಯಗೊಳಿಸಬೇಕು.
ನಂದ ಕಿ ಚೌಕಿ ಸೇತುವೆಯಂಥ ಘಟನೆಗಳು ನಮ್ಮ ದೇಶದ ಅಭಿವೃದ್ಧಿಯ ಮೇಲಿರುವ ದೊಡ್ಡ ಕಪ್ಪುಚುಕ್ಕಿ. ಸಾರ್ವಜನಿಕರ ಹಣವನ್ನು ಲೂಟಿ ಮಾಡುವ ಇಂಥ ವ್ಯವಸ್ಥೆಗೆ ತಕ್ಷಣವೇ ತಿಲಾಂಜಲಿ ನೀಡಬೇಕಿದೆ. ಸರಕಾರಗಳು ಕೇವಲ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯ ಪ್ರಚಾರಕ್ಕೆ ಆದ್ಯತೆ ನೀಡದೇ, ನಿರ್ಮಾಣದ ಗುಣಮಟ್ಟ ಮತ್ತು ದೀರ್ಘಕಾಲೀನ ಬಾಳಿಕೆಗೆ ಆದ್ಯತೆ ನೀಡಿದಾಗ ಮಾತ್ರ ಭಾರತವು ನಿಜವಾದ ಅರ್ಥದಲ್ಲಿ ಬಲವಾದ ಮೂಲಸೌಕರ್ಯವನ್ನು ಹೊಂದಲು ಸಾಧ್ಯ.