Gudibande News: ಮೂಲಸೌಕರ್ಯ ಪರಿಶೀಲನೆಗೆ ಪುಲಸಾನಿವೊಡ್ಡು, ನಲ್ಲಗೊಂಡಯ್ಯಗಾರಹಳ್ಳಿ ಗ್ರಾಮಗಳಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಭೇಟಿ
ಗ್ರಾಮಗಳಲ್ಲಿ ಸ್ವಚ್ಛತೆ ಕೊರತೆಯಿರುವುದು ಗಮನಕ್ಕೆ ಬಂದಿದ್ದು, ಮನೆಗಳ ಮುಂದೆ ಕಸ ಸಂಗ್ರಹ ವಾಗಿರುವುದರಿಂದ ಚರಂಡಿಗಳು ಮುಚ್ಚಿ ಸೊಳ್ಳೆಗಳ ಉತ್ಪತ್ತಿ ಹೆಚ್ಚುವ ಸಾಧ್ಯತೆ ಇದೆ. ಇದರಿಂದ ಸಾಂಕ್ರಾಮಿಕ ರೋಗಗಳ ಹರಡುವಿಕೆ ತಡೆಯಲು ಸಾರ್ವಜನಿಕರು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ವಚ್ಛತೆಗೆ ಆದ್ಯತೆ ನೀಡಬೇಕು
-
ಗುಡಿಬಂಡೆ: ತಾಲೂಕಿನ ಹಂಪಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಲಸಾನಿವೊಡ್ಡು ಹಾಗೂ ನಲ್ಲಗೊಂಡಯ್ಯಗಾರಹಳ್ಳಿ ಗ್ರಾಮಗಳಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯ ದರ್ಶಿ ಬಿ.ಶಿಲ್ಪ ಭೇಟಿ ನೀಡಿ, ಗ್ರಾಮಗಳಲ್ಲಿನ ಮೂಲಸೌಕರ್ಯಗಳ ಸ್ಥಿತಿಗತಿಯನ್ನು ಪರಿಶೀಲಿಸಿ ದರು. ಮನೆ ಮನೆಗೆ ತೆರಳಿ ಗ್ರಾಮಸ್ಥರ ಅಹವಾಲು ಆಲಿಸಿದ ಅವರು, ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಿ.ಶಿಲ್ಪ, ಮೂಲಸೌಕರ್ಯಗಳ ಕೊರತೆಯ ಕುರಿತು ಗ್ರಾಮಸ್ಥರು ಹೈಕೋರ್ಟ್ ನ್ಯಾಯಾಧೀಶ ಹಂಜಾಚಿ ಸಂಜೀವಕುಮಾರ್ ಅವರಿಗೆ ದೂರು ಸಲ್ಲಿಸಿದ್ದ ಹಿನ್ನೆಲೆಯಲ್ಲಿ, ಹೈಕೋರ್ಟ್ ನಿರ್ದೇಶನದಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಅದರಂತೆ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ, ಸಮಗ್ರ ವರದಿಯನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: Gudibande News: ಸಮಾಜದ ಧ್ವನಿಯಾಗಿ ಪತ್ರಿಕಾ ರಂಗ ಕಾರ್ಯನಿರ್ವಹಿಸಬೇಕು: ಬಿಇಒ ಕಾಳೇಗೌಡ
ಗ್ರಾಮಗಳಲ್ಲಿ ಸ್ವಚ್ಛತೆ ಕೊರತೆಯಿರುವುದು ಗಮನಕ್ಕೆ ಬಂದಿದ್ದು, ಮನೆಗಳ ಮುಂದೆ ಕಸ ಸಂಗ್ರಹ ವಾಗಿರುವುದರಿಂದ ಚರಂಡಿಗಳು ಮುಚ್ಚಿ ಸೊಳ್ಳೆಗಳ ಉತ್ಪತ್ತಿ ಹೆಚ್ಚುವ ಸಾಧ್ಯತೆ ಇದೆ. ಇದರಿಂದ ಸಾಂಕ್ರಾಮಿಕ ರೋಗಗಳ ಹರಡುವಿಕೆ ತಡೆಯಲು ಸಾರ್ವಜನಿಕರು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ನಲ್ಲಗೊಂಡಯ್ಯಗಾರಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆ ಕಳೆದ ಏಳು ವರ್ಷಗಳಿಂದ ಮುಚ್ಚಿರುವ ಕಾರಣ ಮಕ್ಕಳು ಹಂಪಸಂದ್ರಕ್ಕೆ ನಡೆದುಕೊಂಡು ಶಾಲೆಗೆ ತೆರಳಬೇಕಾಗಿದೆ ಎಂದು ಗ್ರಾಮಸ್ಥರು ಮನವಿ ಮಾಡಿದರು. ಈ ಕುರಿತು ಬಿಇಒಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಬಿ. ಶಿಲ್ಪ, ಮಕ್ಕಳ ದಾಖಲಾತಿ ಪೂರ್ಣಗೊಂಡ ತಕ್ಷಣ ಶಾಲೆ ಪುನರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬಿಇಒ ಕಾಳೇಗೌಡ ಭರವಸೆ ನೀಡಿದರು.
ಈ ವೇಳೆ ಗ್ರಾಮಸ್ಥರು ಚರಂಡಿ, ವಸತಿ, ಬೀದಿದೀಪ, ಸ್ವಚ್ಛತೆ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದರು. ಪಿಡಿಒ ಲೋಕೇಶ್ ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಭೇಟಿಯ ಸಂದರ್ಭದಲ್ಲಿ ತಹಸೀಲ್ದಾರ್ ಸಿಗ್ಬತ್ತುಲ್ಲಾ, ಜಿಲ್ಲಾ ಪಂಚಾಯಿತಿ ಅಧಿಕಾರಿ ನಿರ್ಮಲಾ, ಸಿಡಿಪಿಒ ಜಗದೀಶ್, ವಕೀಲರ ಸಂಘದ ಪದಾಧಿಕಾರಿಗಳು, ಪ್ಯಾರಾಲೀಗಲ್ ಸ್ವಯಂಸೇವಕರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.