ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

T‌himmanna Bhagwat Column: ರಾಮಪಾದುಕಾ ಪ್ರದಾನ ಪವರ್-ಆಫ್-ಅಟಾರ್ನಿ ಅಲ್ಲವೇ?

POA ನೀಡುವಿಕೆ ವ್ಯಕ್ತಿಗಳ ನಡುವೆ ಅಷ್ಟೇ ಸೀಮಿತವಾಗಿಲ್ಲ. ಅನೇಕ ಸಲ ಕಂಪನಿಗಳು, ಬ್ಯಾಂಕು ಗಳು, ಕಟ್ಟಡ ನಿರ್ಮಾಣ ಕಂಪನಿಗಳು, ಇನ್ನಿತರ ಏಜೆನ್ಸಿ ವ್ಯವಹಾರಗಳು ಮುಂತಾದ ಕಡೆ ಇದು ಅನಿ ವಾರ್ಯ. ನಮಗೆ ಗೊತ್ತಿಲ್ಲದೆ ನಾವು ಅನೇಕ ಸಲ POA ಆಧಾರದಲ್ಲಿ ವ್ಯವಹರಿಸುತ್ತೇವೆ. ಉದಾಹರಣೆಗೆ ಬ್ಯಾಂಕ್ ವ್ಯವಸ್ಥಾಪಕರು ಮತ್ತು ಎಲ್‌ಐಸಿ ಏಜೆಂಟರು ಕೂಡಾ ಈ ಪರಿಪಾಠದ ಪ್ರತಿನಿಧಿಗಳು.

ರಾಮಪಾದುಕಾ ಪ್ರದಾನ ಪವರ್-ಆಫ್-ಅಟಾರ್ನಿ ಅಲ್ಲವೇ?

Ashok Nayak Ashok Nayak Jul 21, 2025 12:28 PM

ಕಾನೂನ್‌ ಸೆನ್ಸ್‌

ತಿಮ್ಮಣ್ಣ ಭಾಗ್ವತ್

'ಪವರ್ ಆಫ್ ಅಟಾರ್ನಿ’ (POA) ನೀಡುವಿಕೆಯು ವ್ಯಕ್ತಿಗಳ ನಡುವಿನ ಒಡಂಬಡಿಕೆಗೆ ಮಾತ್ರವೇ ಸೀಮಿತವಾಗಿಲ್ಲ. ಅನೇಕ ಸಲ ಕಂಪನಿಗಳು, ಬ್ಯಾಂಕುಗಳು, ಕಟ್ಟಡ ನಿರ್ಮಾಣ ಕಂಪನಿಗಳು, ಇನ್ನಿತರ ಏಜೆನ್ಸಿ ವ್ಯವಹಾರಗಳು ಮುಂತಾದ ಕಡೆ ಇದು ಅನಿವಾರ್ಯ. ನಮಗೆ ಗೊತ್ತಿಲ್ಲದೆ ನಾವು ಅನೇಕ ಸಲ POA ಆಧಾರದಲ್ಲಿ ವ್ಯವಹರಿಸುತ್ತೇವೆ. ಉದಾಹರಣೆಗೆ ಬ್ಯಾಂಕ್ ವ್ಯವಸ್ಥಾಪಕರು ಮತ್ತು ಎಲ್‌ಐಸಿ ಏಜೆಂಟರು ಕೂಡಾ ಈ ಪರಿಪಾಠದ ಪ್ರತಿನಿಧಿ ಗಳು.

ಒಬ್ಬರ ಪ್ರತಿನಿಧಿಯಾಗಿ ಇನ್ನೊಬ್ಬರು ವ್ಯವಹರಿಸುವ ವಿಷಯ ಹೊಸತಲ್ಲ. ಶ್ರೀರಾಮನ ಪ್ರತಿನಿಧಿ ಯಾಗಿ ಅಯೋಧ್ಯೆಯ ಚಕ್ರವರ್ತಿಯಾಗಿ 14 ವರ್ಷಗಳ ಕಾಲ ಭರತ ಆಳಿದ್ದು ಬಹುಶಃ ಅತಿ ಪ್ರಾಚೀನ ಉದಾಹರಣೆ. 2500 ವರ್ಷಕ್ಕಿಂತಲೂ ಹಿಂದಿನ ಮೆಸೊಪೊಟಾಮಿಯ ಸಂಸ್ಕೃತಿಯ ಕಾಲದಲ್ಲಿ ಹಾಗೂ ಪ್ರಾಚೀನ ರೋಮನ್ ಮತ್ತು ಇಸ್ಲಾಮಿಕ್ ಕಾಯಿದೆಗಳಲ್ಲಿ ಒಬ್ಬರ ಪರವಾಗಿ ವ್ಯವಹಾರ ನಡೆಸಲು ಇನ್ನೊಬ್ಬರಿಗೆ ಅಧಿಕಾರ ನೀಡಿದ ದಾಖಲೆಗಳಿವೆ.

ಪಾಶ್ಚಾತ್ಯ ರಾಷ್ಟ್ರಗಳಲ್ಲಿ 15ನೇ ಶತಮಾನದಲ್ಲಿಯೇ Qui facit per alium, facit per se ಅಂದರೆ ‘ಯಾವುದೇ ವ್ಯಕ್ತಿ ಇನ್ನೊಬ್ಬನ ಮೂಲಕ ಕಾರ್ಯನಿರ್ವಹಿಸಿದರೆ ಆ ಕಾರ್ಯವನ್ನು ಅವನೇ ಮಾಡಿದಂತೆ’ ಎಂಬ ನಿಯಮ ಜಾರಿಯಲ್ಲಿತ್ತು. 1795ರಲ್ಲಿ ಅಮೇರಿಕದ ಪ್ರಥಮ ಅಧ್ಯಕ್ಷ ಜಾರ್ಜ್ ವಾಷಿಂಗ್ಟನ್, ತನ್ನ ಮಿತ್ರನೊಬ್ಬನಿಗೆ ತನ್ನ ವೈಯಕ್ತಿಕ ವ್ಯವಹಾರ ಕುರಿತಂತೆ ‘ಪವರ್ ಆಫ್ ಅಟಾರ್ನಿ’ ( POA) ನೀಡಿದ್ದ. ಭಾರತದಲ್ಲಿ ಪವರ್ ಆಫ್ ಅಟಾರ್ನಿ ವ್ಯವಸ್ಥೆಗೆ ವಿಧಿಬದ್ಧ ಸ್ವರೂಪ ನೀಡಿದ್ದು ಬ್ರಿಟಿಷ್ ಆಡಳಿತದ ‘ಪವರ್ ಆಫ್ ಅಟಾರ್ನಿ- 1882’ ಕಾಯಿದೆಯ ಮೂಲಕ. ಇದಲ್ಲದೆ ಭಾರತೀಯ ಒಪ್ಪಂದ ಕಾಯಿದೆ 1872, ನೋಂದಣಿ ಕಾಯಿದೆ 1908 ಮತ್ತು ಸ್ಟಾಂಪ್ ಕಾಯಿದೆ 189 ಮುಂತಾದವುಗಳ ವಿವಿಧ ಕಲಮುಗಳು ಕೂಡಾ POA ಗೆ ಅನ್ವಯವಾಗುತ್ತವೆ.‌

ಏನಿದು ಪವರ್ ಆಫ್ ಅಟಾರ್ನಿ (POA)

1882ರ ಪವರ್ ಆಫ್ ಅಟಾರ್ನಿ ಕಾಯಿದೆಯ 1-ಎ ಕಲಮಿನ ಪ್ರಕಾರ, POA ಎಂದರೆ ಅದನ್ನು ನೀಡುವ ವ್ಯಕ್ತಿಯ ಹೆಸರಿನಲ್ಲಿ ಮತ್ತು ಅವನ ಪರವಾಗಿ ಕಾರ್ಯನಿರ್ವಹಿಸಲು ಇನ್ನೊಬ್ಬ ನಿರ್ದಿಷ್ಟ ವ್ಯಕ್ತಿಗೆ ಅಧಿಕಾರ ನೀಡುವ ಲಿಖಿತ ಪತ್ರ. ದೈಹಿಕ ಅಸಾಮರ್ಥ್ಯ, ಕಾಯಿಲೆ, ದೂರದ ಊರಿನಲ್ಲಿ ಅಥವಾ ವಿದೇಶದಲ್ಲಿ ವಾಸ ಅಥವಾ ಇನ್ನಿತರ ವೈಯಕ್ತಿಕ ಕಾರಣಗಳಿಂದ ವಿಶೇಷವಾಗಿ ಸ್ಥಿರಾಸ್ತಿಗಳ ನಿರ್ವಹಣೆ, ಮೇಲ್ವಿಚಾರಣೆ ಅಥವಾ ಮಾರಾಟಕ್ಕೆ ಸಂಬಂಧಿಸಿ ಅಥವಾ ಇತರ ವ್ಯವಹಾರ, ಹಣಕಾಸು ನಿರ್ವಹಣೆಗಳ ವಿಷಯದಲ್ಲಿ ತಾವೇ ಸ್ವತಃ ಪಾಲ್ಗೊಳ್ಳಲು ಸಾಧ್ಯವಾಗದಿರುವ ಸಂದರ್ಭ ಗಳಲ್ಲಿ ತಮ್ಮ ಪರವಾಗಿ ಇನ್ನೊಬ್ಬರಿಗೆ ಆ ಎಲ್ಲ ಅಥವಾ ಆ ಪೈಕಿ ಕೆಲವು ವ್ಯವಹಾರ ನಡೆಸುವುದಕ್ಕೆ ಅಧಿಕಾರ ನೀಡಲು ಪವರ್ ಆಫ್ ಅಟಾರ್ನಿ ಅಥವಾ POA ನೀಡಲಾಗುತ್ತದೆ. ‌

ಇದನ್ನೂ ಓದಿ: Thimmana Mottegalu Movie: ಟ್ರೈಲರ್‌ನಲ್ಲೇ ಕುತೂಹಲ ಮೂಡಿಸಿದ ʼತಿಮ್ಮನ ಮೊಟ್ಟೆಗಳುʼ

POA ನೀಡುವಾತ ಪ್ರಧಾನ ವ್ಯಕ್ತಿ ( Principal, Donor ಅಥವಾ Grantor ), ಅಧಿಕಾರ ಪಡೆದವ ಪ್ರತಿನಿಧಿ ( Agent / Attorney-in-fact/ Donee ) ಆಗಿರುತ್ತಾರೆ. ಕಾನೂನು ರೀತ್ಯಾ ಜಾರಿಗೊಳಿಸ ಲಾದ ಪವರ್ ಆಫ್ ಅಟಾರ್ನಿ ಪಡೆದ ವ್ಯಕ್ತಿ ಅದರಲ್ಲಿ ನಮೂದಿಸಲಾದ ಕಾರ್ಯಗಳನ್ನು ಅದನ್ನು ನೀಡಿದಾತನ ಅನುಪಸ್ಥಿತಿಯಲ್ಲಿ ಮಾಡುವ ಅಧಿಕಾರ ಪಡೆಯುತ್ತಾನೆ ಮತ್ತು ಅವನು ಹಾಗೆ ಮಾಡಿದ ಕಾರ್ಯ ಅಥವಾ ಸಹಿಮಾಡಲಾದ ಕಾಗದ ಪತ್ರಗಳ ಕುರಿತು POAನೀಡಿದಾತ ಸ್ವತಃ ತಾನೇ ಮಾಡಿದ ಹಾಗೆ ಬಾಧ್ಯಸ್ಥನಾಗುತ್ತಾನೆ ಮತ್ತು ಅದನ್ನು ಅಲ್ಲಗಳೆಯಲು ಆಗುವದಿಲ್ಲ (POA ಕಾಯಿದೆಯ 2ನೇ ಕಲಮು).

POA ನೀಡುವಿಕೆ ವ್ಯಕ್ತಿಗಳ ನಡುವೆ ಅಷ್ಟೇ ಸೀಮಿತವಾಗಿಲ್ಲ. ಅನೇಕ ಸಲ ಕಂಪನಿಗಳು, ಬ್ಯಾಂಕು ಗಳು, ಕಟ್ಟಡ ನಿರ್ಮಾಣ ಕಂಪನಿಗಳು, ಇನ್ನಿತರ ಏಜೆನ್ಸಿ ವ್ಯವಹಾರಗಳು ಮುಂತಾದ ಕಡೆ ಇದು ಅನಿವಾರ್ಯ. ನಮಗೆ ಗೊತ್ತಿಲ್ಲದೆ ನಾವು ಅನೇಕ ಸಲ POA ಆಧಾರದಲ್ಲಿ ವ್ಯವಹರಿಸುತ್ತೇವೆ. ಉದಾಹರಣೆಗೆ ಬ್ಯಾಂಕ್ ವ್ಯವಸ್ಥಾಪಕರು ಮತ್ತು ಎಲ್‌ಐಸಿ ಏಜೆಂಟರು ಕೂಡಾ ಈ ಪರಿಪಾಠದ ಪ್ರತಿನಿಧಿಗಳು. ಕೆಲವು ಕಂಪನಿಗಳು ಇನ್ನೊಂದು ಕಂಪನಿಯನ್ನು ಏಜೆನ್ಸಿ ಒಪ್ಪಂದದನ್ವಯ ತಮ್ಮ ಏಜೆಂಟ್ ಆಗಿ ನಿಯುಕ್ತಿಗೊಳಿಸುತ್ತವೆ.

POAಯನ್ನು ಹೇಗೆ ನೀಡುವುದು?

ಭಾರತೀಯ ಒಪ್ಪಂದ ಕಾಯಿದೆ 1872ರ 182ರಿಂದ 238ನೇ ವರೆಗಿನ ಕಲಮುಗಳು ಏಜೆನ್ಸಿ ಒಪ್ಪಂದ ಗಳ ( Conttract of Agency) ಕುರಿತಾಗಿ ಇವೆ. ಪ್ರಧಾನ ವ್ಯಕ್ತಿ ( Principal) ಮತ್ತು ಏಜೆಂಟರ ನಡುವೆ ನಡೆಯುವ ಏಜೆನ್ಸಿ ಒಪ್ಪಂದದ ರೂಪರೇಷೆ ಮತ್ತು ವಿವಿಧ ಷರತ್ತುಗಳನ್ನು ಪವರ್ ಆಫ್ ಅಟಾರ್ನಿ ಮೂಲಕ ಸ್ಪಷ್ಟ ಪಡಿಸಲಾಗುತ್ತದೆ. ನೀವು POAನೀಡುವುದಿದ್ದಲ್ಲಿ ಕಾನೂನು ತಜ್ಞರಿಂದ ಅದನ್ನು ಬರೆಯಿಸಬೇಕು. POA ಯಲ್ಲಿ ಸಾಮಾನ್ಯವಾಗಿ, ಅದನ್ನು ನೀಡುವಾತ ಮತ್ತು ಪಡೆದವನ ಹೆಸರು ಮುಂತಾದ ವೈಯಕ್ತಿಕ ವಿವರಗಳು, ನೀಡಿಕೆಯ ಕಾರಣ ಮತ್ತು ಉದ್ದೇಶ ಮತ್ತು ಎಲ್ಲಕ್ಕಿಂತ ಮುಖ್ಯ ವಾಗಿ ಆ ಮೂಲಕ ನೀಡಲಾದ ಅಧಿಕಾರದ ಸ್ಪಷ್ಟನೆ, ನಡೆಸಬೇಕಾದ ವ್ಯವಹಾರದ ಸ್ವರೂಪ ಮತ್ತು ಅದರಲ್ಲಿ ಪ್ರತಿನಿಧಿಯ ಪಾತ್ರ ಮತ್ತು ಅಧಿಕಾರದ ಬಗ್ಗೆ ಉಲ್ಲೇಖಗಳಿರುತ್ತವೆ.

ಆಸ್ತಿ ನಿರ್ವಹಣೆಯ ವಿಷಯವಾದರೆ ಅಂಥ ಆಸ್ತಿಯ ವಿವರವಿರುವ ಷೆಡ್ಯೂಲ್ ಮತ್ತು ಆ ಕುರಿತು ಪ್ರತಿನಿಧಿ ಕೈಗೊಳ್ಳಬಹುದಾದ ಕ್ರಮಗಳ ವಿವರ- ಉದಾಹರಣೆಗೆ ಆಸ್ತಿ ಮಾರಾಟದ ವಿಷಯವಾದರೆ ಖರೀದಿದಾರರನ್ನು ಹುಡುಕುವುದು, ದರದ ಚರ್ಚೆ ಮತ್ತು ನಿಗದಿ, ಖರೀದಿ ಒಪ್ಪಂದ ಮಾಡಿಕೊಡು ವುದು, ಹಣ ಸ್ವೀಕಾರ, ಕ್ರಯಪತ್ರವನ್ನು ಸಿದ್ಧ ಪಡಿಸುವುದು ಮತ್ತು ನೋಂದಣಿಗೆ ತಯಾರಿ, ಸ್ಟ್ಯಾಂಪ್ ಶುಲ್ಕ ಮತ್ತು ನೋಂದಣಿ ಶುಲ್ಕದ ಪಾವತಿ, ಮಾರಾಟ ಮೊತ್ತದ ಸ್ವೀಕಾರ, ಕ್ರಯಪತ್ರಕ್ಕೆ ಸಹಿಮಾಡುವುದು, ನೋಂದಣಿ ಕಚೇರಿಯಲ್ಲಿ ಸಹಿ ಮಾಡುವುದು ಮತ್ತು ನೋಂದಣಿ ಮಾಡಿಸು ವುದು ಮುಂತಾದ ವಿವಿಧ ಹಂತಗಳ ಕ್ರಮಗಳನ್ನು ಸ್ಪಷ್ಟವಾಗಿ ಬರೆಯುವುದರ ಜತೆಗೆ ಆ ಕುರಿತು ಕೈಗೊಳ್ಳಬೇಕಾದ ಎಲ್ಲ ಕ್ರಮಗಳನ್ನು ಕೂಡ ಬರೆಯಬೇಕಾಗುತ್ತದೆ.

ಆದರೆ ಈ ಪೈಕಿ ಯಾವುದಾದರೂ ಒಂದು ಅಥವಾ ಕೆಲವು ಕ್ರಮಗಳನ್ನು- ಉದಾಹರಣೆಗೆ ಹಣ ಸ್ವೀಕಾರ, ಕ್ರಯಪತ್ರಕ್ಕೆ ಸಹಿಮಾಡುವುದು, ನೋಂದಣಿ ಕಚೇರಿಯಲ್ಲಿ ಸಹಿ ಮಾಡುವುದು ಮುಂತಾ ದವನ್ನು ಮಾಲೀಕನೇ ಮಾಡುವುದಿದ್ದಲ್ಲಿ ಹಾಗೆ ಸ್ಪಷ್ಟ ಪಡಿಸಬೇಕು. 1908ರ ನೋಂದಣಿ ಕಾಯಿದೆ ಯ ಪ್ರಕಾರ ಸ್ಥಿರಾಸ್ತಿಗಳ ವ್ಯವಹಾರ ಕುರಿತಾದ POAಗಳ ನೋಂದಣಿ ಮತ್ತು ಸ್ಟ್ಯಾಂಪ್ ಕಾಯಿದೆ ಯನ್ವಯ ಸ್ಟ್ಯಾಂಪ್ ಶುಲ್ಕ ಭರಿಸುವುದು ಕಡ್ಡಾಯ.

ಆದರೆ ಇತರ ವ್ಯವಹಾರಗಳ POA ಗಳ ನೋಂದಣಿ ಕಡ್ಡಾಯವಲ್ಲ. ಇಬ್ಬರು ಸಾಕ್ಷಿಗಳ ಸಮಕ್ಷಮ ಅಥವಾ ನೋಟರಿ ಎದುರು POA ನೀಡುವವ ಮತ್ತು ಪಡೆಯುವವರು ಸಹಿ ಮಾಡಬೇಕು. ‘ಮಾಹಿತಿ ತಂತ್ರಜ್ಞಾನ ಕಾಯಿದೆ 2000’ ಇದರ ಪ್ರಕಾರ ಡಿಜಿಟಲ್ ಸಹಿ ಕೂಡಾ ಮಾಡಬಹುದು. ಏಜೆನ್ಸಿ ಒಪ್ಪಂದಕ್ಕೆ ಪರಿಗಣನೆ ( Consideration ) ಬೇಕಿಲ್ಲವಾದರೂ ಪ್ರತಿನಿಧಿಗೆ ನೀಡಬಹುದಾದ ಸಂಭಾ ವನೆಯನ್ನು ಕೂಡಾ ನಮೂದಿಸಬಹುದು. ವಿದೇಶದಲ್ಲಿರುವವರು ಆ ದೇಶದಲ್ಲಿನ ಭಾರತದ ವಿದೇಶಾಂಗ ಕಾರ್ಯಾಲಯದಲ್ಲಿ ಅಥವಾ ನೋಟರಿಯ ಎದುರು ಸಹಿಮಾಡಿದ POAಯನ್ನು ಭಾರತದಲ್ಲಿ ನೋಂದಣಿ ಮಾಡಿಸಬೇಕು.

Puಅ ನೀಡುವವ ಮತ್ತು ಪಡೆಯುವವರಿಬ್ಬರೂ ಅಪ್ರಾಪ್ತ ವಯಸ್ಕರು ಆಗಿರಬಾರದು. ಅವರಿಗೆ ಮಾನಸಿಕ ಅಸ್ವಸ್ಥತೆ ಅಥವಾ ಇನ್ಯಾವುದೇ ರೀತಿಯಲ್ಲಿ ಒಪ್ಪಂದ ಮಾಡಲು ಅಸಾಮರ್ಥ್ಯ ( Incompetence to Contract) ಇರಬಾರದು. POA ಯ ಆಧಾರದಲ್ಲಿ ಯಾವುದೇ ಆಸ್ತಿಯ ನೋಂದಣಿ ಮಾಡುವಾಗ ಸಂಬಂಧಿತ ನೋಂದಣಿ ಅಧಿಕಾರಿಯು ಅದರ ನೈಜತೆ ಮತ್ತು ಅದನ್ನು ಹಾಜರುಪಡಿಸುತ್ತಿರುವ ವ್ಯಕ್ತಿಯ ಗುರುತನ್ನು ಖಾತರಿಪಡಿಸಿಕೊಳ್ಳಬೇಕಾಗುತ್ತದೆ. POA ಪಡೆದವ ಯಾವುದೇ ದಾಖಲೆಗೆ ಸಹಿ ಮಾಡುವಾಗ ಅವನು ಅದನ್ನು ನೀಡಿದವನ ಪರವಾಗಿ ಸಹಿ ಮಾಡು ತ್ತಾನೆಯೇ ಹೊರತು ತನ್ನ ಹೆಸರಿನಲ್ಲಲ್ಲ.

POAಯ ವಿವಿಧ ಪ್ರಕಾರಗಳು

ಉದ್ದೇಶ ಮತ್ತು ಅಧಿಕಾರ ವ್ಯಾಪ್ತಿಗಳ ಆಧಾರದಲ್ಲಿ ಅನೇಕ ಬಗೆಯ POA ಗಳಿದ್ದರೂ ಮುಖ್ಯವಾಗಿ ಸಾಮಾನ್ಯ (General), ನಿರ್ದಿಷ್ಟ (Specific), ಬಾಳಿಕೆ ಬರುವ ( Durable) POA ಎಂಬ ಪ್ರಕಾರ ವುಗಳು ಹೆಚ್ಚು ಬಳಕೆಯಲ್ಲಿವೆ. General POA ಅಥವಾ GPAಯ ಮೂಲಕ ಪ್ರತಿನಿಧಿಯು ಬಹುತೇಕ ಎಲ್ಲಾ ಕಾರ್ಯಗಳನ್ನೂ ಮಾಡಲು ಅಧಿಕಾರ ಪಡೆಯುತ್ತಾನೆ.

Specific POA ಯನ್ನು ನಿರ್ದಿಷ್ಟ ಉದ್ದೇಶಕ್ಕೆ ಮಾತ್ರ ನೀಡಲಾಗುತ್ತದೆ ಮತ್ತು ಆ ಉದ್ದೇಶ ಈಡೇರಿ ದಾಗ ಅದು ರದ್ದಾಗುತ್ತದೆ. Durable POA ನೀಡಿದಾಗ ಸ್ವಸ್ಥನಾಗಿದ್ದ ವ್ಯಕ್ತಿ, ನಂತರ ಮಾನಸಿಕ ವಾಗಿ ಅಸ್ವಸ್ಥನಾದರೂ ಅದು ಚಾಲ್ತಿಯಲ್ಲಿರುತ್ತದೆ. ಹೀಗಾಗಿ Durable POA ಹೆಚ್ಚು ಸುರಕ್ಷಿತ.

POAಯನ್ನು ರದ್ದು ಪಡಿಸುವುದು ಅಥವಾ ಹಿಂಪಡೆಯುವುದು ( Revocation ) ಹಿಂಪಡೆಯಲಾಗದ ( Irrevocable) POAಗಳನ್ನು ಬಿಟ್ಟು ಇತರ POAಗಳನ್ನು ರದ್ದು ಪಡಿಸಬಹುದು ಅಥವಾ ಹಿಂಪಡೆಯಬಹುದು. POAಯ ಷರತ್ತು ಉಲ್ಲಂಘನೆಯಾದರೆ ಹಿಂಪಡೆಯ ಲಾಗದ POAಯನ್ನು ಕೂಡಾ ರದ್ದುಗೊಳಿಸಬಹುದು. POA ಪಡೆದಾತನಿಗೆ ರದ್ದತಿ ಪತ್ರವನ್ನು ಅಥವಾ ನೋಟಿಸ್ ಅನ್ನು ನೀಡುವ ಮೂಲಕ POAಯನ್ನು ರದ್ದು ಪಡಿಸಬಹುದು. POA ಆಧಾರದಲ್ಲಿ ಮೂರನೇ ವ್ಯಕ್ತಿ ಈಗಾಗಲೇ ಪ್ರತಿನಿಧಿಯ ಜತೆ ವ್ಯವಹಾರ ನಡೆಸಿದ್ದು ಗೊತ್ತಿದ್ದಲ್ಲಿ ಅವರಿಗೂ ನೋಟಿಸ್ ನೀಡಬೇಕು. ಮೂಲ POA ನೋಂದಣಿಯಾಗಿದ್ದರೆ ರದ್ದತಿ ಪತ್ರದ ನೋಂದಣಿ ಕಡ್ಡಾಯ.

ಎಲ್ಲಾ ಬಗೆಯ POA ಗಳ ರದ್ದತಿಗೆ ಪತ್ರಿಕಾ ಪ್ರಕಟಣೆಯನ್ನೂ ನೀಡುವುದು ಸೂಕ್ತ. POA ನೀಡಿದವ ಮೃತಪಟ್ಟರೆ, ಮಾನಸಿಕನಾಗಿ ಅಸ್ವಸ್ಥನಾದರೆ ( Durable POA ಹೊರತುಪಡಿಸಿ) ಅಥವಾ ದಿವಾಳಿಯಾದರೆ POA ರದ್ದಾಗುತ್ತದೆ. POA ಒಂದು ಹಕ್ಕಲ್ಲವಾದ್ದರಿಂದ ಅದನ್ನು ಪಡೆದವ ಮೃತನಾದರೆ ವಾರಸುದಾರಿಕೆ ಹಕ್ಕು ಬರುವುದಿಲ್ಲ.

ಆದರೆ ರದ್ದಾಗುವವರೆಗೆ ಅದರ ಆಧಾರದಲ್ಲಿ ನಡೆಸಲಾಗುವ ವ್ಯವಹಾರಗಳು ಕಾನೂನು ರೀತ್ಯಾ ಊರ್ಜಿತವಿರುತ್ತವೆ. POA ಕಾಯಿದೆಯ 3ನೇ ಕಲಮಿನ ಪ್ರಕಾರ POA ಪಡೆದವ ಅದನ್ನು ನೀಡಿದ ವ್ಯಕ್ತಿಯ ಸಾವು, ಮಾನಸಿಕ ಅಸ್ವಸ್ಥತೆ, ದಿವಾಳಿ ಅಥವಾ POA ಯ ರದ್ದತಿ ಕುರಿತು ಯಾವುದೇ ಮಾಹಿತಿಯಿಲ್ಲದೆ ಅದರನ್ವಯ ಹಣನೀಡಿದರೆ ಅಥವಾ ವ್ಯವಹರಿಸಿದರೆ ಆ ಕುರಿತು ಅವನು ಬಾಧ್ಯಸ್ಥನಾಗುವುದಿಲ್ಲ. ಆದರೆ ಹಣ ಪಡೆದವರಿಗೆ ಅಥವಾ ಇತರ ವ್ಯವಹಾರ ಮಾಡಿದವರಿಗೆ ಈ ರಕ್ಷಣೆ ಸಿಗುವುದಿಲ್ಲ. ‌

ಪವರ್ ಆಫ್ ಅಟಾರ್ನಿ ಕಾಯಿದೆ 1882ರ 4ನೇ ಕಲಮಿನ ಪ್ರಕಾರ POAಯನ್ನು ಜಿಲ್ಲಾ ನ್ಯಾಯಾ ಲಯ ಅಥವಾ ಉಚ್ಚ ನ್ಯಾಯಾಲಯದಲ್ಲಿ ಸುರಕ್ಷಿತವಾಗಿ ಇಡುವ ಅವಕಾಶವಿದೆ. ಹಾಗೆ ಇಟ್ಟಾಗ ಅಂಥ POAಯ ದೃಢೀಕೃತ ಪ್ರತಿಯ ಆಧಾರದಲ್ಲಿ ಮೂಲಪ್ರತಿಯಷ್ಟೇ ಅಧಿಕೃತವಾಗಿ ವ್ಯವಹರಿಸ ಬಹುದು. ಅಂಥ POA ಗಳನ್ನು ತಿದ್ದುಪಡಿ ಮಾಡುವ ಇಲ್ಲವೇ ನಕಲಿ ಮಾಡುವ ಸಾಧ್ಯತೆ ಇರುವುದಿಲ್ಲ.

ಪವರ್ ಆಫ ಅಟಾರ್ನಿ ಮೂಲಕ ನಡೆಯುವ ಪ್ರಕ್ರಿಯೆಗಳು ಕಾನೂನುಬದ್ಧವಾಗಿ ನಡೆದಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ ಮತ್ತು ಆ ಎಲ್ಲ ವ್ಯವಹಾರಗಳು ಮಾಲೀಕರೇ ಸ್ವತಃ ನಡೆಸಿದಷ್ಟೇ ಊರ್ಜಿತವಾಗಿರುತ್ತವೆ. ಆದರೆ POAಯನ್ನು ದುರುಪಯೋಗಪಡಿಸಿಕೊಂಡು ಮೋಸ ಮಾಡುವ ಸಾಧ್ಯತೆ ಇರುವುದರಿಂದ POA ನೀಡುವವರು, ಪಡೆದವರು ಮತ್ತು ವಿಶೇಷವಾಗಿ ಅದರ ಆಧಾರ ದಲ್ಲಿ ವ್ಯವಹರಿಸುವವರು ಅನೇಕ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಂಥ ಮೋಸದ ಸಾಧ್ಯತೆಗಳು ಮತ್ತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕುರಿತು ಮುಂದಿನ ಭಾಗದಲ್ಲಿ ಚರ್ಚಿಸೋಣ.

(ಮುಂದುವರಿಯುವುದು)

(ಲೇಖಕರು ಕಾನೂನು ತಜ್ಞರು ಮತ್ತು ಕೆವಿಜಿ ಬ್ಯಾಂಕ್‌ನ

ನಿವೃತ್ತ ಎಜಿಎಂ)