Tamil Nadu Assembly Election: ಸಮಿಶ್ರ ಸರ್ಕಾರ ರಚನೆಗೆ ಎನ್‌ಡಿಎ ತಂತ್ರ ರೂಪಿಸುತ್ತಿರುವಾಗಲೇ ಮಾಜಿ ಸಚಿವ ಅನ್ವರ್ ರಾಜಾ ಡಿಎಂಕೆಗೆ ಸೇರ್ಪಡೆ
ತಮಿಳುನಾಡು ವಿಧಾನಸಭಾ ಚುನಾವಣೆಗೂ ಮುನ್ನವೇ ಎಐಎಡಿಎಂಕೆ ಹಿರಿಯ ನಾಯಕ ಮತ್ತು ಮಾಜಿ ಸಚಿವ ಅನ್ವರ್ ರಾಜಾ ಆಡಳಿತಾರೂಢ ಡಿಎಂಕೆಗೆ ಸೇರಿದ್ದಾರೆ. ಇದು ಎನ್‌ಡಿಎ ಬಹುದೊಡ್ಡ ಆಘಾತ ನೀಡಿದೆ. ತಮಿಳುನಾಡು ವಿಧಾನಸಭಾ ಚುನಾವಣೆ 2026ರಲ್ಲಿ ನಡೆಯಲಿದೆ.


ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೂ (Tamil Nadu Assembly election) ಮುನ್ನವೇ ಎಐಎಡಿಎಂಕೆ (AIADMK) ಹಿರಿಯ ನಾಯಕ ಮತ್ತು ಮಾಜಿ ಸಚಿವ ಅನ್ವರ್ ರಾಜಾ (former Minister Anwhar Raajhaa) ಆಡಳಿತಾರೂಢ ಡಿಎಂಕೆಗೆ ಸೇರಿದ್ದಾರೆ. ಇದು ಎನ್‌ಡಿಎ (NDA) ಬಹುದೊಡ್ಡ ಆಘಾತವೆನ್ನಬಹುದು. ತಮಿಳುನಾಡು ವಿಧಾನಸಭಾ ಚುನಾವಣೆ 2026ರಲ್ಲಿ ನಡೆಯಲಿದ್ದು, ಇದಕ್ಕೂ ಮುನ್ನವೇ ಹಿರಿಯ ಎಐಎಡಿಎಂಕೆ ನಾಯಕ ಅನ್ವರ್ ರಾಜಾ ಅವರು ಪಕ್ಷವನ್ನು ತೊರೆದು ಸೋಮವಾರ ಚೆನ್ನೈಯಲ್ಲಿರುವ (Chennai) ಡಿಎಂಕೆ (DMK) ಪ್ರಧಾನ ಕಚೇರಿಯಲ್ಲಿ ಮುಖ್ಯಮಂತ್ರಿ ಮತ್ತು ಪಕ್ಷದ ಅಧ್ಯಕ್ಷ ಎಂಕೆ ಸ್ಟಾಲಿನ್ ಅವರ ಸಮ್ಮುಖದಲ್ಲಿ ಡಿಎಂಕೆಗೆ ಸೇರ್ಪಡೆಗೊಂಡರು.
ಬಿಜೆಪಿ ಜತೆಗಿನ ಮೈತ್ರಿ ಪುನರ್ ಆರಂಭವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ರಾಜಾ ಅವರು ಈಗ ಪಕ್ಷವನ್ನೇ ತೊರೆದಿದ್ದಾರೆ. ಡಿಎಂಕೆ ಸೇರಿದ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ರಾಜಾ ಎಐಎಡಿಎಂಕೆ ನಾಯಕರು ಮತ್ತು ಬಿಜೆಪಿ ಎರಡರ ಮೇಲೂ ತೀವ್ರವಾದ ವಾಗ್ದಾಳಿ ನಡೆಸಿದರು.
ರಾಷ್ಟ್ರೀಯ ಪಕ್ಷವನ್ನು ತಮಿಳುನಾಡಿನ ನಕಾರಾತ್ಮಕ ಶಕ್ತಿ ಎಂದು ಕರೆದ ಅವರು, ಎಐಎಡಿಎಂಕೆ ದೂರ ಸರಿಯುತ್ತಿದೆ. ಪಕ್ಷ ಈಗ ಬಿಜೆಪಿಯ ಕೈಯಲ್ಲಿ ಸಿಕ್ಕಿಹಾಕಿಕೊಂಡಿದೆ ಎಂದು ಹೇಳಿದರು.
ಬಿಜೆಪಿ ತನ್ನ ಮಿತ್ರಪಕ್ಷವನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದ ಅವರು, ಅಮಿತ್ ಶಾ ಒಮ್ಮೆಯೂ ಇಪಿಎಸ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹೆಸರಿಸಿ ಉಲ್ಲೇಖಿಸಿಲ್ಲ. ತಮಿಳುನಾಡಿನಲ್ಲಿ ಚುನಾವಣೆಗಳನ್ನು ಗೆಲ್ಲುವುದು ಬಿಜೆಪಿಯ ಗುರಿಯಲ್ಲ, ಬದಲಾಗಿ ಎಐಎಡಿಎಂಕೆಯನ್ನು ನಾಶಮಾಡಿ ಡಿಎಂಕೆ ವಿರುದ್ಧ ಹೋರಾಡುವುದು ಅವರ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ತಮಿಳುನಾಡಿನ ಜನರು ಬಿಜೆಪಿಯನ್ನು ಎಂದಿಗೂ ಸ್ವೀಕರಿಸುವುದಿಲ್ಲ ಎಂದ ಅವರು, ಬಿಜೆಪಿ ಆಡಳಿತ ನಡೆಸುವ ಬದಲು ವಿಭಜಿಸಲು ಮತ್ತು ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುವ ಪಕ್ಷ ಎಂದರು.
ಅನ್ವರ್ ರಾಜಾ
ಎಐಎಡಿಎಂಕೆಯ ಹಿರಿಯ ನಾಯಕ ಅನ್ವರ್ ರಾಜಾ ಅವರು 2001 ಮತ್ತು 2006 ರ ನಡುವೆ ಜೆ. ಜಯಲಲಿತಾ ಅವರ ಅಡಿಯಲ್ಲಿ ಕಾರ್ಮಿಕ ಸಚಿವರಾಗಿದ್ದರು. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಮನಾಥಪುರಂನಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.
ಇದನ್ನೂ ಓದಿ: Saiyaara Movie: ಐವಿ ಡ್ರಿಪ್ಸ್ ಹಾಕಿಕೊಂಡು ʼಸೈಯಾರʼ ಸಿನಿಮಾ ನೋಡಲು ಬಂದ ಅಭಿಮಾನಿ
ಎನ್‌ಡಿಎ ಯೋಜನೆ ಏನು?
2026ರಲ್ಲಿ ಎನ್‌ಡಿಎ ಗೆದ್ದರೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಗೆ ಬಿಜೆಪಿ ಒತ್ತಾಯಿಸುವ ಸಾಧ್ಯತೆ ಇದೆ. ಈ ಕುರಿತು ರಾಜಾ ಅವರು ಇತ್ತೀಚೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.