ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Keshav Prasad B Column: ಅಮೆರಿಕ-ಚೀನಾ ಮ್ಯಾಚ್ ಟೈ ಆದ್ರೆ, ಭಾರತಕ್ಕೆ ಕಪ್‌ ಸಿಗುತ್ತಾ ?!

ಅಮೆರಿಕವು ಈಗ ಚೀನಾ ವಿರುದ್ಧ ಶೇ.245ರ ತನಕ ಪ್ರತಿಸುಂಕವನ್ನು ಹೇರಿದೆ. ಚೀನಾ ಶೇ.145ರ ಪ್ರತಿಸುಂಕ ವಿಧಿಸಿದೆ. ಇದರರ್ಥ ಉಭಯ ದೇಶಗಳು ಸುದೀರ್ಘ ವಾಣಿಜ್ಯ ಸಂಘರ್ಷಕ್ಕೆ ಸಜ್ಜಾಗಿವೆ. ಇದುವರೆಗೆ ಅಮೆರಿಕದ ಜತೆಗಿದ್ದ ಯುರೋಪ್, ವಾಣಿಜ್ಯ ಸಮರದ ನಂತರ ಕ್ರಮೇಣ ದೂರ ಸರಿಯು ತ್ತಿವೆ. ಆಗ್ನೇಯ ಏಷ್ಯಾದ ರಾಷ್ಟ್ರಗಳತ್ತ ಕೂಡ ಚೀನಾ ಮೈತ್ರಿ ಬಯಸುತ್ತಿದೆ.

ಅಮೆರಿಕ-ಚೀನಾ ಮ್ಯಾಚ್ ಟೈ ಆದ್ರೆ, ಭಾರತಕ್ಕೆ ಕಪ್‌ ಸಿಗುತ್ತಾ ?!

ಮನಿ ಮೈಂಡೆಡ್

ಈಗ ಎರಡು ಸ್ಕೋರ್‌ಗಳು ರೋಚಕ ಘಟ್ಟವನ್ನು ಮುಟ್ಟಿವೆ. ಒಂದು ಐಪಿಎಲ್ ಸ್ಕೋರ್, ಮತ್ತೊಂದು ಚೀನಾ ವಿರುದ್ಧ ಟ್ರಂಪ್ ಬಾರಿಸುತ್ತಿರುವ ಟ್ಯಾಕ್ಸ್ ಸ್ಕೋರ್! ಇತ್ತೀಚಿನ ವರ್ತಮಾನದ ಪ್ರಕಾರ ಟ್ರಂಪ್ ಟ್ಯಾಕ್ಸ್‌ನ ಪರ್ಸಂಟೇಜ್ ಸ್ಕೋರ್ 145ರಿಂದ ನಾಟೌಟ್ 245ಕ್ಕೆ ಏರಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸ್ಕೋರ್ 125ಕ್ಕೆ ನಿಂತ ಹಾಗಿದೆ. ಪಂದ್ಯವನ್ನು ಗೆದ್ದೇ ಗೆಲ್ಲುವ ವಿಶ್ವಾಸ ದೊಂದಿಗೆ ಟ್ರಂಪ್ ಭರ್ಜರಿ ಬ್ಯಾಟಿಂಗ್ ‌ಮಾಡುತ್ತಿದ್ದರೆ, ‘ಇಬ್ಬರೂ ಗೆಲ್ಲಲ್ಲ, ಟೈ ಆಗೋದು ಗ್ಯಾರಂಟಿ’ ಅಂತ ಜಿನ್‌ಪಿಂಗ್ ಅಗ್ರೆಸಿವ್ ಆಗಿದ್ದಾರೆ.

ಅಮೆರಿಕ-ಚೀನಾ ಮ್ಯಾಚ್ ಟೈ ಆದ್ರೆ ಭಾರತಕ್ಕೆ ಕಪ್ ಸಿಗುತ್ತಾ? ಈಗ ನೇರ ವಿಷಯಕ್ಕೆ ಬರೋಣ. ಚೀನಾ ವಿರುದ್ಧದ ಟ್ರಂಪ್ ಸುಂಕಸಮರದ ಉದ್ದೇಶವೇನು? ಇದರಿಂದ ಭಾರತಕ್ಕೆ ಲಾಭ ಅಥವಾ ನಷ್ಟ ಆಗುತ್ತಾ? ಕೆಲವು ವರದಿಗಳ ಪ್ರಕಾರ 2028-2030ರ ವೇಳೆಗೆ ಚೀನಾವು ಜಿಡಿಪಿ ಲೆಕ್ಕದಲ್ಲಿ ಅಮೆರಿಕವನ್ನು ಹಿಂದಿಕ್ಕಲಿದೆ. ಉದಾಹರಣೆಗೆ ಮಾರುಕಟ್ಟೆ ಮತ್ತು ಆರ್ಥಿಕತೆಯ ದತ್ತಾಂಶಗಳನ್ನು ಸಂಗ್ರಹಿಸಿ ಒದಗಿಸುವ Statista ಸಂಸ್ಥೆಯ ಪ್ರಕಾರ 2030ಕ್ಕೆ ಅಮೆರಿಕದ ಜಿಡಿಪಿ 33 ಲಕ್ಷ ಕೋಟಿ ಡಾಲರ್‌ನಷ್ಟಿರಲಿದ್ದರೆ, ಚೀನಾದ್ದು 33 ಲಕ್ಷ ಕೋಟಿ ಡಾಲರ್‌ಗೆ ಏರಲಿದೆ. ಇದು ನಿಜವಾದರೆ 2ನೇ ಬಾರಿಗೆ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರಾವಧಿ ಮುಕ್ತಾಯವಾಗುವ ಹೊತ್ತಿಗೆ, ಜಿಡಿಪಿ ಲೆಕ್ಕಾಚಾರದಲ್ಲೂ ಚೀನಾ ಮೊದಲ ಬಾರಿಗೆ ಅಮೆರಿಕವನ್ನು ಹಿಂದಿಕ್ಕಲಿದೆ.

ಜಾಗತಿಕ ಉತ್ಪಾದನೆಯಲ್ಲಿ 2023ರಲ್ಲಿ ಚೀನಾ ಶೇ.29 ರಷ್ಟು ಪಾಲನ್ನು ಹೊಂದಿತ್ತು. ಅಮೆರಿಕ ಶೇ.17ರೊಂದಿಗೆ 2ನೇ ಸ್ಥಾನದಲ್ಲಿತ್ತು. ಆ ವರ್ಷ ಚೀನಾದ ಒಟ್ಟು ಆರ್ಥಿಕ ಉತ್ಪನ್ನದಲ್ಲಿ ಉತ್ಪಾದನೆ ಯ (Manufacturing) ಪಾಲು ಶೇ.29ರಷ್ಟಿತ್ತು. ಆದ್ದರಿಂದ ಚೀನಾವು ಜಗತ್ತಿನ ಕಾರ್ಖಾನೆ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಇದನ್ನೂ ಓದಿ: ‌Keshav Prasad B Column: ಅತಿ ದೊಡ್ಡ ಸಾಲಗಾರ ಅಮೆರಿಕ ಶ್ರೀಮಂತ ರಾಷ್ಟ್ರ ಯಾಕೆ ?

ಇಷ್ಟೆಲ್ಲ ಉತ್ಪಾದಿಸಿದ ನಂತರ ಯಾವ ದೇಶಕ್ಕೆ ಅತಿ ಹೆಚ್ಚು ರಫ್ತನ್ನು ಚೀನಾ ಮಾಡುತ್ತದೆ? ನಿಸ್ಸಂದೇಹವಾಗಿ ಅಮೆರಿಕಕ್ಕೆ. 2023ರಲ್ಲಿ 501 ಶತಕೋಟಿ ಡಾಲರ್ ಮೌಲ್ಯದ ರಫ್ತನ್ನು ಅದು ಮಾಡಿತ್ತು. ಚೀನಾದ ಒಟ್ಟು ರಫ್ತಿನಲ್ಲಿ ಸುಮಾರು ಶೇ.15ರಷ್ಟನ್ನು ಅಮೆರಿಕ ಭರಿಸಿತ್ತು. ಚೀನಾವು ಅಮೆರಿಕಕ್ಕೆ ಸರಕುಗಳನ್ನು ರಫ್ತು ಮಾಡುತ್ತಿದ್ದರೆ ಟ್ರಂಪ್‌ಗೆ ತಲೆನೋವೇಕೆ? ಇದಕ್ಕೆ ಕಾರಣ, ಅಮೆರಿಕದ ವ್ಯಾಪಾರ ಕೊರತೆ ಹೆಚ್ಚುತ್ತದೆ. ಆಗ ವಿತ್ತೀಯ ಕೊರತೆಯೂ ಏರುತ್ತದೆ. ಆದ್ದರಿಂದ ವಿತ್ತೀಯ ಕೊರತೆ ತಗ್ಗಿಸಲು ವ್ಯಾಪಾರ ಕೊರತೆಯನ್ನು ತಗ್ಗಿಸಬೇಕು. ಅಂದರೆ ಚೀನಾದಿಂದ ಅಮೆರಿಕದ ಒಳಕ್ಕೆ ಬರುವ ವಸ್ತುಗಳ ವ್ಯಾಪಾರ ಕಡಿಮೆಯಾಗಬೇಕು.

ಅಮೆರಿಕದ ಉತ್ಪಾದನೆ ಹೆಚ್ಚಬೇಕು. ಅದಕ್ಕೇನು ಮಾರ್ಗ? ಆಮದು ಸುಂಕವನ್ನು ಗಣನೀಯವಾಗಿ ಏರಿಸುವುದು. ಅಮೆರಿಕದ ಮಾರುಕಟ್ಟೆಗೆ ಬರುವ ಚೀನಾದ ವಸ್ತುಗಳು ದುಬಾರಿಯಾಗಬೇಕಿದ್ದರೆ,
ಅವುಗಳ ಮೇಲಿನ ತೆರಿಗೆಯನ್ನು ಹೆಚ್ಚಿಸದೆ ಬೇರೆ ದಾರಿ ಇಲ್ಲ. ಅದನ್ನೇ ಟ್ರಂಪ್ ಈಗ ಮಾಡುತ್ತಿzರೆ. ಆದರೆ 245 ಪರ್ಸೆಂಟ್ ತನಕ ಪ್ರತಿಸುಂಕ ಹಾಕಿದ್ದೇಕೆ? ಈ ಪರಿಯ ‘ಟಾರಿಫ್ ವಾರ್ ಸ್ಫೋಟ’ಕ್ಕೆ ವಾಣಿಜ್ಯಿಕ ಕಾರಣ ಒಂದೇ ಇರಲಾರದು; ಅದಕ್ಕಿಂತಲೂ ವ್ಯಾಪಕವಾದ ಹೊಸ ಶೀತಲ ಸಮರದ ಭಾಗ ಇದಾಗಿರಬಹುದು ಎಂಬ ವಾದವಿದೆ, ಇರಲಿ. ಹಾಗಾದರೆ ಚೀನಾ ಏನು ಮಾಡಬಹುದು? ಅಮೆರಿಕದ ಬಾಂಡ್‌ಗಳಲ್ಲಿ ಜಪಾನ್ ಬಿಟ್ಟರೆ ಅತಿ ಹೆಚ್ಚು ಹೂಡಿಕೆಯನ್ನು ಚೀನಾ ಮಾಡಿದೆ (760 ಶತಕೋಟಿ ಡಾಲರ್).

ಆದ್ದರಿಂದ ಚೀನಾ ಒಂದು ವೇಳೆ ಅಮೆರಿಕದ ಬಾಂಡ್‌ಗಳಲ್ಲಿರುವ ತನ್ನ ಹೂಡಿಕೆಯನ್ನು ಹಿಂತೆಗೆದುಕೊಂಡರೆ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯ ಪತನವಾಗ ಬಹುದು. ಆದರೆ ಇದರಿಂದ ಸ್ವತಃ ಚೀನಾಕ್ಕೂ ನಷ್ಟವಾಗಲಿದೆ. ಮುಖ್ಯವಾಗಿ ಚೀನಾ ರಫ್ತು ಅಧರಿತ ಇಕಾನಮಿ. ಆದ್ದರಿಂದ ಡಾಲರ್ ಮೌಲ್ಯ ಕುಸಿದರೆ ಕೂಡ ಚೀನಾದ ರಫ್ತುದಾರರಿಗೆ ಆದಾಯ ಖೋತವಾಗಬಹುದು.

ಡಾಲರ್ ಮೌಲ್ಯ ಇಳಿಕೆಯಾದರೆ, ಅಮೆರಿಕಕ್ಕೆ ಬಾಂಡ್ ಗಳ ಅಥವಾ ತನ್ನ ಸಾಲದ ಮೇಲಿನ ಬಡ್ಡಿಯ ಹೊರೆ ಕಡಿಮೆಯಾಗಲಿದೆ. ಆದ್ದರಿಂದ ಅಮೆರಿಕಕ್ಕೆ ಕೊಟ್ಟಿರುವ ಸಾಲವನ್ನೇ ಅಸ್ತ್ರವಾಗಿ ಪ್ರಯೋಗಿಸುವುದು ಚೀನಾಕ್ಕೆ ಸಂಕೀರ್ಣ ಸವಾಲಾಗಲಿದೆ. ಹೀಗಾಗಿ ತನ್ನದೇ ಆಂತರಿಕ ಮಾರುಕಟ್ಟೆ, ಯುರೋಪ್ ಸೇರಿದಂತೆ ಹೊಸ ಮಿತ್ರರ ಜತೆ ಸಂಬಂಧ ವೃದ್ಧಿ, ನಾನಾ ದೇಶಗಳ ಜತೆಗೆ ವ್ಯಾಪಾರ ಒಪ್ಪಂದಗಳಿಗೆ ಅದು ಯತ್ನಿಸುತ್ತಿದೆ.

ಈಗ ಭಾರತ ಯಾವ ರೀತಿ ಜಾಣ್ಮೆಯ ನಡೆಯನ್ನು ಅನುಸರಿಸಬಹುದು? ‘ಇಕನಾಮಿಕ್ ಟೈಮ್ಸ’ ವರದಿಯ ಪ್ರಕಾರ ಭಾರತವು ಕನಿಷ್ಠ 10 ಕ್ಷೇತ್ರಗಳಲ್ಲಿ ಹೊಸ ಬಿಸಿನೆಸ್ ಅವಕಾಶಗಳನ್ನು ತನ್ನದಾಗಿಸಬಹುದು. ಅಪಾರೆಲ್ (ಜವಳಿ), ರಾಸಾಯನಿಕ ವಸ್ತುಗಳು, ಔಷಧ, ಪ್ಲಾಸ್ಟಿಕ್, ರಬ್ಬರ್, ಕೃಷಿ ಉತ್ಪನ್ನಗಳು, ಆಟೊಮೊಬೈಲ್ ಬಿಡಿ ಭಾಗಗಳು, ಎಂಜಿನಿಯರಿಂಗ್ ಉತ್ಪನ್ನಗಳು, ಸ್ಮಾರ್ಟ್-ನ್ ಮತ್ತಿತರ ರಫ್ತು ವಲಯದಲ್ಲಿ ಭಾರತಕ್ಕೆ ಉಜ್ವಲ ಅವಕಾಶಗಳು ಸಿಗಲಿದೆ. ಜತೆಗೆ ಚೀನಾದಲ್ಲಿ ರುವ ಅಮೆರಿಕನ್ ಕಂಪನಿಗಳನ್ನೂ ಭಾರತದಲ್ಲಿ ಹೂಡಿಕೆ ಮಾಡುವಂತೆ ಆಕರ್ಷಿಸಬಹುದು.

2014ರಲ್ಲಿ ‘ಮೇಕ್ ಇನ್ ಇಂಡಿಯಾ’ ಅಭಿಯಾನ ಆರಂಭವಾಯಿತು. ಬಳಿಕ ಉತ್ಪಾದನೆ ಆಧರಿತ
ಇನ್ಸೆಂಟಿವ್ ಸ್ಕೀಮ್ ಅಥವಾ ಪಿಎಲ್‌ ಐ (Production Linked Incentive) ಜಾರಿಯಾಯಿತು. ಇದರಿಂದಾಗಿ ಫಾಕ್ಸ್ ಕಾನ್ ಭಾರತದಲ್ಲಿ ಐಫೋನ್‌ಗಳ ಉತ್ಪಾದನೆಯನ್ನು ಹೆಚ್ಚಿಸಿತು. ಶೀಘ್ರ ದಲ್ಲಿಯೇ ಭಾರತವು ಜಾಗತಿಕ ಮಟ್ಟದಲ್ಲಿಯೇ ಒಟ್ಟು ಐಫೋನ್ ಉತ್ಪಾದನೆಯಲ್ಲಿ ಶೇ.60ರಷ್ಟನ್ನು ತಯಾರಿಸಲಿದೆ.

ಕೆಲವೇ ವರ್ಷಗಳ ಹಿಂದೆ ಈ ಸಾಧನೆಯನ್ನು ಊಹಿಸಲೂ ಸಾಧ್ಯವಿರಲಿಲ್ಲ. ಆದರೆ ಕ್ರಮಿಸಬೇಕಿ ರುವ ಹಾದಿ ಸುದೀರ್ಘವಾಗಿದೆ. 2023ರಲ್ಲಿ ಜಾಗತಿಕ ಉತ್ಪಾದನೆಯಲ್ಲಿ ಚೀನಾ (ಶೇ.29), ಅಮೆರಿಕ (ಶೇ.17), ಜಪಾನ್ (ಶೇ.5), ಜರ್ಮನಿ (ಶೇ.5), ದಕ್ಷಿಣ ಕೊರಿಯಾ (ಶೇ.2.8), ಭಾರತ (ಶೇ.2.8) ಇದ್ದವು. ಈಗ ನಮ್ಮ ಪಾಲು ಎಷ್ಟು ಕಡಿಮೆ ಇದೆ ಎಂಬುದನ್ನು ಊಹಿಸಿಕೊಳ್ಳಿ. ಪಿಎಲ್‌ ಐನಂಥ ಯೋಜನೆ ಯಿದ್ದರೂ, ಎಲ್ಲಿ ಲೋಪಗಳಾಗಿದೆ ಎಂಬುದನ್ನು ಪತ್ತೆ ಹಚ್ಚಬೇಕಾಗಿದೆ. ಮುಖ್ಯವಾಗಿ ‘ಮೇಕ್ ಇನ್ ಇಂಡಿಯಾ’ ಎಂದರೆ ‘ಅಸೆಂಬಲ್ಡ್ ಇನ್ ಇಂಡಿಯಾ’ ಆಗಬಾರದು. ಸ್ವದೇಶಿ ವಸ್ತುಗಳು, ಬಿಡಿಭಾಗಳ ಬಳಕೆ ಹೆಚ್ಚಬೇಕಾಗಿದೆ.

ಉದ್ಯಮ ಸ್ಥಾಪನೆಗೆ ಎದುರಾಗುವ ಸಮಸ್ಯೆಗಳನ್ನು ಬಗೆಹರಿಸಬೇಕಾಗಿದೆ. ಭೂಮಿಯ ವೆಚ್ಚ ಹೆಚ್ಚಳವಾಗಿರುವುದು, ಕೌಶಲದ ಕೊರತೆ, ಕೆಂಪು ಪಟ್ಟಿಯ ನ್ಯೂನತೆಯನ್ನು ಬಗೆಹರಿಸಬೇಕು. ನ್ಯಾಯಾಂಗವೂ ಸುಧಾರಣೆಯಾಗಬೇಕು. ಉದ್ದಿಮೆಗಳಿಗೆ ವಿದ್ಯುತ್ ಪೂರೈಕೆಯಲ್ಲಿ, ಡಿಜಿಟಲ್ ತಂತ್ರಜ್ಞಾನದ ಸೌಲಭ್ಯದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಗಣನೀಯ ಸುಧಾರಣೆಯಾಗಿದೆ. ಆದರೆ ಮೂಲಭೂತ ವಿಷಯಗಳಲ್ಲಿ ಬದಲಾವಣೆಯ ಅಗತ್ಯವಿದೆ.

ಅಮೆರಿಕವಂತೂ ಚೀನಾದ ಎದುರಿನ ಕಾಳಗದ ಭಾಗವಾಗಿ ಭಾರತದ ಜತೆಗಿನ ವ್ಯಾವಹಾರಿಕ ಸಂಬಂಧವನ್ನು ಬಲಪಡಿಸಲು ಮುಂದಾಗಿದೆ. ಪೂರಕವಾಗಿ ಈಗಾಗಲೇ ಭಾರತ ಸ್ಪಂದಿಸುತ್ತಿದೆ. ಭಾರತದಲ್ಲಿರುವ ವಿಶಾಲ ಮಾರುಕಟ್ಟೆಯೇ ಅಮೆರಿಕಕ್ಕೆ ಆಕರ್ಷಣೆ. ಭಾರತದ ಮುಂದೆ 2 ಪ್ರಮುಖ ಆಯ್ಕೆಗಳಿವೆ. ಅಮೆರಿಕಕ್ಕೆ ರಫ್ತನ್ನು ಹೆಚ್ಚಿಸುವುದು, ಎರಡನೆಯದ್ದು ಅಮೆರಿಕದಿಂದ ರಿಯಾಯಿತಿ ದರದಲ್ಲಿ ಆಮದು ಮಾಡಿಕೊಳ್ಳುವುದು.

ಉದಾಹರಣೆಗೆ ಅಮೆರಿಕನ್ ಕಂಪನಿಗಳನ್ನು ಗುರಿಯಾಗಿಟ್ಟುಕೊಂಡು ಚೀನಾ ಇದೀಗ ನಿರ್ಬಂಧ ಗಳನ್ನು ಹೇರುತ್ತಿದೆ. ಅಮೆರಿಕದ ಬೋಯಿಂಗ್ ಕಂಪನಿಯ 9000ಕ್ಕೂ ಹೆಚ್ಚು ಜೆಟ್ ವಿಮಾನ ಗಳನ್ನು ಮುಂದಿನ 20 ವರ್ಷಗಳಲ್ಲಿ ಖರೀದಿಸಲು ಚೀನಾ ಒಪ್ಪಂದ ಮಾಡಿಕೊಂಡಿತ್ತು. ಇದೇ ಅವಧಿಯಲ್ಲಿ ಭಾರತ 2400 ವಿಮಾನಗಳನ್ನು ಖರೀದಿಸಬಹುದು. ಆದರೆ ಇದೀಗ ಬೋಯಿಂಗ್‌ ನಿಂದ ವಿಮಾನಗಳನ್ನು ಖರೀದಿಸದಂತೆ ಚೀನಾ ಸರಕಾರ ತನ್ನ ಏರ್ ಲೈನ್ ಸಂಸ್ಥೆಗಳಿಗೆ ನಿರ್ದೇಶಿ‌ ಸಿದೆ.

ವೈಮಾನಿಕ ಕ್ಷೇತ್ರದಲ್ಲೂ ಅಮೆರಿಕದ ಜತೆಗಿನ ವಹಿವಾಟನ್ನು ರದ್ದುಪಡಿಸಲು ಸಿದ್ಧವಿರುವುದಾಗಿ ಚೀನಾ ಸಂದೇಶ ರವಾನಿಸಿದಂತಾಗಿದೆ. ಈ ಅವಕಾಶವನ್ನು ಭಾರತದ ಏರ್‌ಲೈನ್ ಸಂಸ್ಥೆಗಳು ಬಳಸಿ ಕೊಳ್ಳಬಹುದು. ಕಡಿಮೆ ಬೆಲೆಗೆ ಅತ್ಯುತ್ತಮ ವಿಮಾನಗಳನ್ನು ಖರೀದಿಸಬಹುದು. ದೇಶೀಯ ವೈಮಾನಿಕ ಕ್ಷೇತ್ರದ ಅಭಿವೃದ್ಧಿಗೆ ಇದು ಸಹಕಾರಿಯಾಗಬಹುದು. ಅಮೆರಿಕವು ಈಗ ಚೀನಾ ವಿರುದ್ಧ ಶೇ.245ರ ತನಕ ಪ್ರತಿಸುಂಕವನ್ನು ಹೇರಿದೆ. ಚೀನಾ ಶೇ.145ರ ಪ್ರತಿಸುಂಕ ವಿಧಿಸಿದೆ.

ಇದರರ್ಥ ಉಭಯ ದೇಶಗಳು ಸುದೀರ್ಘ ವಾಣಿಜ್ಯ ಸಂಘರ್ಷಕ್ಕೆ ಸಜ್ಜಾಗಿವೆ. ಇದುವರೆಗೆ ಅಮೆರಿಕದ ಜತೆಗಿದ್ದ ಯುರೋಪ್, ವಾಣಿಜ್ಯ ಸಮರದ ನಂತರ ಕ್ರಮೇಣ ದೂರ ಸರಿಯುತ್ತಿವೆ. ಆಗ್ನೇಯ ಏಷ್ಯಾದ ರಾಷ್ಟ್ರ ಗಳತ್ತ ಕೂಡ ಚೀನಾ ಮೈತ್ರಿ ಬಯಸುತ್ತಿದೆ. ಇಂಥ ಸಂದರ್ಭದಲ್ಲಿ ಟ್ರಂಪ್‌ರಿಗೆ ಭಾರತದ ಮೈತ್ರಿ ಮುಖ್ಯವಾಗಲಿದೆ.

ಕೊನೆಯದಾಗಿ, ಬಹಳ ದಿನಗಳ ಬಳಿಕ ಷೇರು ಮಾರುಕಟ್ಟೆಯಲ್ಲಿ (ಏಪ್ರಿಲ್ 17, 2025) ಸೆನ್ಸೆಕ್ಸ್‌ 1500 ಅಂಕ ಜಿಗಿದು 78553ಕ್ಕೆ ತಲುಪಿದೆ. ನಿಫ್ಟಿ 23851ಕ್ಕೆ ಏರಿದೆ. ವಿದೇಶಿ ಸಾಂಸ್ಥಿಕ ಹೂಡಿಕೆ ದಾರರು ಮರಳಿದ್ದಾರೆ. ಡಾಲರ್ ಅಬ್ಬರ ಕಡಿಮೆಯಾಗಿದ್ದು, ಸ್ಪಲ್ಪ ದುರ್ಬಲವಾಗಿದೆ. ಕಚ್ಚಾತೈಲ ದರ ಸ್ಥಿರವಾಗಿದೆ. ಅಮೆರಿಕದ ಸುಂಕಸಮರವೂ ಏಷ್ಯಾ ಖಂಡದಲ್ಲಿ ಭಾರತದ ಪರವಾಗಿದೆ. ಇದೊಂದು ಉತ್ತಮ ಅವಕಾಶವೆಂಬುದನ್ನು ಸ್ಟಾಕ್ ಮಾರ್ಕೆಟ್ ಈಗಾಗಲೇ ಗ್ರಹಿಸಿದಂತೆ ಕಾಣಿಸು ತ್ತಿದೆ.