ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Roopa Gururaj Column: ಪಂಚತಂತ್ರ ಕಥೆಗಳು: ಹಾವು ಮತ್ತು ಕಪ್ಪೆಗಳ ರಾಜ

ಸೇಡಿನ ಬೆಂಕಿಗೆ ಬಿದ್ದ ಗಂಗಾದತ್ತ ತನ್ನ ಇಡೀ ಕುಲದೊಂದಿಗೆ ತಾನೂ ನಾಶವಾಯಿತು. ಕೋಪ, ಅಸೂಯೆ ಮತ್ತು ಸೇಡಿನ ಭಾವನೆಗಳು ನಮ್ಮ ವಿವೇಕವನ್ನು ಸಂಪೂರ್ಣವಾಗಿ ಕುರುಡಾಗಿಸುತ್ತವೆ. ನಮ್ಮೊಳಗಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ನಾವೇ ಮಾತುಕತೆಯ ಮೂಲಕ ಬಗೆಹರಿಸಿ ಕೊಳ್ಳಬೇಕೇ ಹೊರತು, ನಮ್ಮವರನ್ನು ಸೋಲಿಸುವ ಹಠಕ್ಕೆ ಬಿದ್ದು ಹೊರಗಿನವರ ಸಹಾಯ ಪಡೆದರೆ ಅಪಾಯ ಕಟ್ಟಿಟ್ಟ ಬುತ್ತಿ. ಇತರರಿಗೆ ತೋಡಿದ ಹಳ್ಳದಲ್ಲಿ ನಾವೇ ಬೀಳುತ್ತೇವೆ ಎಂಬುದಕ್ಕೆ ಈ ಕಥೆ ಜೀವಂತ ನಿದರ್ಶನ.

ಪಂಚತಂತ್ರ ಕಥೆಗಳು: ಹಾವು ಮತ್ತು ಕಪ್ಪೆಗಳ ರಾಜ

-

ಒಂದೊಳ್ಳೆ ಮಾತು

ಮನೆಯೊಳಗಿನ ಸಣ್ಣಪುಟ್ಟ ಭಿನ್ನಾಭಿಪ್ರಾಯ ಮತ್ತು ಸೇಡಿನ ತವಕಕ್ಕೆ ಬಲಿಯಾಗಿ, ಹೊರಗಿನ ಶತ್ರುವನ್ನು ಮನೆಯೊಳಗೆ ಕರೆತಂದರೆ ಇಡೀ ಕುಲವೇ ಹೇಗೆ ಸರ್ವನಾಶವಾಗುತ್ತದೆ ಎಂಬುದನ್ನು ಗಂಗಾದತ್ತ (ಕಪ್ಪೆಗಳ ರಾಜ) ಮತ್ತು ಪ್ರಿಯದರ್ಶನ (ಹಾವು) ಕಥೆ ಮನೋಜ್ಞವಾಗಿ ನಿರೂಪಿಸುತ್ತದೆ.

ಒಂದಾನೊಂದು ಕಾಲದಲ್ಲಿ ಒಂದು ಆಳವಾದ ಬಾವಿಯಲ್ಲಿ ‘ಗಂಗಾದತ್ತ’ ಎಂಬ ಹೆಸರಿನ ಕಪ್ಪೆಗಳ ರಾಜ ವಾಸವಾಗಿತ್ತು. ಅದು ಬಾವಿಯಲ್ಲಿದ್ದ ತನ್ನ ದಾಯಾದಿಗಳು ಮತ್ತು ಬಂಧುಗಳ ಮೇಲೆ ಅತಿಯಾದ ಅಧಿಕಾರ ಚಲಾಯಿಸುತ್ತಾ ಅವರನ್ನು ಪೀಡಿಸುತ್ತಿತ್ತು. ಇದರಿಂದ ಬೇಸತ್ತ ಅವನ ದಾಯಾದಿಗಳೆಲ್ಲರೂ ಒಟ್ಟಾಗಿ ಸೇರಿ ಗಂಗಾದತ್ತನನ್ನು ಬಾವಿಯಿಂದ ಹೊರ ಹಾಕಿದವು. ಅವಮಾನದಿಂದ ಕುದಿಯುತ್ತಿದ್ದ ಗಂಗಾದತ್ತ, ನನ್ನನ್ನು ಹೊರ ಹಾಕಿದ ಈ ನನ್ನ ಬಂಧುಗಳಿಗೆ ಹೇಗಾದರೂ ಮಾಡಿ ತಕ್ಕ ಪಾಠ ಕಲಿಸಬೇಕು ಎಂದು ಸೇಡಿನ ಕಿಚ್ಚಿನಿಂದ ಕುದಿಯತೊಡಗಿತು. ಅದು ಬಾವಿಯಿಂದ ಹೊರಬಂದು ಸುತ್ತಮುತ್ತ ಹುಡುಕುತ್ತಿದ್ದಾಗ, ಹತ್ತಿರದ ಹುತ್ತವೊಂದರಲ್ಲಿ ‘ಪ್ರಿಯ ದರ್ಶನ’ ಎಂಬ ಭಯಂಕರ ಕೃಷ್ಣಸರ್ಪವೊಂದು ವಾಸವಾಗಿರುವುದನ್ನು ಕಂಡಿತು.

ಸೇಡಿನ ಭರದಲ್ಲಿ ವಿವೇಕ ಕಳೆದುಕೊಂಡ ಗಂಗಾದತ್ತನು, ಹುತ್ತದ ಬಾಗಿಲಲ್ಲಿ ನಿಂತು ಹಾವನ್ನು ಕೂಗಿ ಕರೆಯಿತು. ಹಾವು ಹೊರ ಬಂದಾಗ, ನಯವಾಗಿ, ಮಿತ್ರನೇ, ನಾನು ಈ ಪಕ್ಕದ ಬಾವಿಯ ಕಪ್ಪೆಗಳ ರಾಜ. ನನ್ನ ದಾಯಾದಿಗಳು ನನಗೆ ದ್ರೋಹ ಬಗೆದು ಹೊರ ಹಾಕಿದ್ದಾರೆ.

ಇದನ್ನೂ ಓದಿ: Roopa Gururaj Column: ಪಂಚತಂತ್ರ ಕಥೆಗಳು: ಟಿಟ್ಟಿಭ ಪಕ್ಷಿ ಮತ್ತು ಸಮುದ್ರ

ನೀನು ನನ್ನೊಂದಿಗೆ ಆ ಬಾವಿಗೆ ಬಂದರೆ, ನನ್ನ ವಿರೋಧಿಗಳಾದ ಆ ಕಪ್ಪೆಗಳನ್ನೆ ನಿನಗೆ ರುಚಿಕರವಾದ ಆಹಾರವನ್ನಾಗಿ ಒದಗಿಸುತ್ತೇನೆ. ನಿನಗೆ ನಿತ್ಯವೂ ಶ್ರಮವಿಲ್ಲದೆ ಭೋಜನ ಸಿಗುತ್ತದೆ, ನನಗೆ ಸೇಡು ತೀರಿಸಿದ ಸಮಾಧಾನ ಸಿಗುತ್ತದೆ ಎಂದು ಆಮಿಷವೊಡ್ಡಿತು. ಮೊದಲು ಹಾವಿಗೆ ಇದು ಮೋಸವಿರಬಹುದೇ ಎಂದು ಅನುಮಾನ ಬಂದರೂ, ಕಪ್ಪೆಯು ನಾನೇ ನಿನಗೆ ಬಾವಿಯೊಳಗೆ ದಾರಿ ತೋರಿಸುತ್ತೇನೆ ಎಂದು ಭರವಸೆ ನೀಡಿದ್ದರಿಂದ ಹಾವು ಒಪ್ಪಿಕೊಂಡಿತು. ಗಂಗಾದತ್ತ ಕಪ್ಪೆಯು ಹಾವನ್ನು ಕರೆದುಕೊಂಡು ಬಾವಿಯೊಳಗಿನ ರಹಸ್ಯ ಬಿಲದಲ್ಲಿ ಇರಿಸಿತು.

ಮರುದಿನದಿಂದ ಹಾವಿನ ಭೋಜನ ಆರಂಭವಾಯಿತು. ಗಂಗಾದತ್ತ ಮೊದಲು ತನ್ನ ವಿರೋಧಿ ಗಳಾದ ದಾಯಾದಿ ಕಪ್ಪೆಗಳನ್ನು ತೋರಿಸಿತು. ಹಾವು ಅವುಗಳನ್ನು ಒಂದೊಂದಾಗಿ ನುಂಗಿ ಮುಗಿಸಿತು. ತನ್ನ ಶತ್ರುಗಳೆಲ್ಲರೂ ನಾಶವಾದುದನ್ನು ಕಂಡು ಗಂಗಾದತ್ತ ಸಂಭ್ರಮಿಸಿತು. ಆದರೆ, ವಿರೋಧಿಗಳೆಲ್ಲರೂ ಮುಗಿದ ನಂತರ ಹಾವಿಗೆ ಮತ್ತೆ ಹಸಿವಾಯಿತು. ಅದು ಗಂಗಾದತ್ತನ ಬಳಿ ಬಂದು, ಮಿತ್ರನೇ, ನಿನ್ನ ವಿರೋಧಿಗಳೆಲ್ಲಾ ಮುಗಿದರು. ಈಗ ನನಗೆ ಹೊಟ್ಟೆ ಹಸಿಯುತ್ತಿದೆ, ಇನ್ನೇನು ತಿನ್ನಲಿ? ಎಂದು ಕೇಳಿತು.

ಆಗ ಗಂಗಾದತ್ತನು ಬೇರೆ ದಾರಿಯಿಲ್ಲದೆ ತನ್ನದೇ ಕುಟುಂಬದ ಸದಸ್ಯರು, ಮಕ್ಕಳು ಮತ್ತು ಆಪ್ತ ಮಿತ್ರರನ್ನು ತೋರಿಸುತ್ತಾ ಹೋಯಿತು. ಹಾವು ಅವರೆಲ್ಲರನ್ನೂ ಕಬಳಿಸಿ, ಕಡೆಗೊಂದು ದಿನ ಬಾವಿಯಲ್ಲಿ ಗಂಗಾದತ್ತನ ವಂಶದ ಒಂದೇ ಒಂದು ಕಪ್ಪೆಯೂ ಉಳಿಯದಂತೆ ಎಲ್ಲವನ್ನೂ ತಿಂದು ಮುಗಿಸಿತು. ಕೊನೆಗೆ ಹಸಿದ ಹಾವು ಗಂಗಾದತ್ತನ ಕಡೆಗೇ ತಿರುಗಿ, ಈಗ ಈ ಬಾವಿಯಲ್ಲಿ ತಿನ್ನಲು ಯಾರೂ ಉಳಿದಿಲ್ಲ, ಇನ್ನು ನಿನ್ನ ಸರದಿ! ಎಂದು ಹೇಳಿ ಕಪ್ಪೆಗಳ ರಾಜನನ್ನೇ ನುಂಗಿಹಾಕಿತು.

ಸೇಡಿನ ಬೆಂಕಿಗೆ ಬಿದ್ದ ಗಂಗಾದತ್ತ ತನ್ನ ಇಡೀ ಕುಲದೊಂದಿಗೆ ತಾನೂ ನಾಶವಾಯಿತು. ಕೋಪ, ಅಸೂಯೆ ಮತ್ತು ಸೇಡಿನ ಭಾವನೆಗಳು ನಮ್ಮ ವಿವೇಕವನ್ನು ಸಂಪೂರ್ಣವಾಗಿ ಕುರುಡಾಗಿಸುತ್ತವೆ. ನಮ್ಮೊಳಗಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ನಾವೇ ಮಾತುಕತೆಯ ಮೂಲಕ ಬಗೆಹರಿಸಿ ಕೊಳ್ಳಬೇಕೇ ಹೊರತು, ನಮ್ಮವರನ್ನು ಸೋಲಿಸುವ ಹಠಕ್ಕೆ ಬಿದ್ದು ಹೊರಗಿನವರ ಸಹಾಯ ಪಡೆದರೆ ಅಪಾಯ ಕಟ್ಟಿಟ್ಟ ಬುತ್ತಿ. ಇತರರಿಗೆ ತೋಡಿದ ಹಳ್ಳದಲ್ಲಿ ನಾವೇ ಬೀಳುತ್ತೇವೆ ಎಂಬುದಕ್ಕೆ ಈ ಕಥೆ ಜೀವಂತ ನಿದರ್ಶನ.

ಸಂಸ್ಕೃತದ ಸುಭಾಷಿತ ಹೇಳುವಂತೆ ‘ಯೋ ಧ್ರುವಾಣಿ ಪರಿತ್ಯಜ್ಯ ಅಧ್ರುವಾಣಿ ನಿಷೇವತೇ | ಧ್ರುವಾಣಿ ತಸ್ಯ ನಶ್ಯಂತಿ ಅಧ್ರುವಂ ನಷ್ಟಮೇವ ಹಿ’ (ಯಾರು ಶಾಶ್ವತವಾದ ತಮ್ಮವರನ್ನು ಮತ್ತು ಸುರಕ್ಷತೆ ಯನ್ನು ತೊರೆದು, ಅಶಾಶ್ವತವಾದ ಸೇಡು ಅಥವಾ ಆಮಿಷಗಳ ಹಿಂದೆ ಹೋಗು ತ್ತಾರೋ, ಅವರ ಶಾಶ್ವತ ಆಸ್ತಿಯೂ ನಾಶವಾಗು ತ್ತದೆ, ಅಶಾಶ್ವತವಾದದ್ದಂತೂ ಮೊದಲೇ ನಷ್ಟ ವಾಗಿರು ತ್ತದೆ). ಇಂದಿನ ದಿನಗಳಲ್ಲಿ ಸಣ್ಣಪುಟ್ಟ ವೈಮನಸ್ಸುಗಳಿಗೆ ತಾಳ್ಮೆ ಕಳೆದುಕೊಂಡು, ಕುಟುಂಬ ದೊಳಗೆ, ಸ್ನೇಹಿತರ ನಡುವೆ ಬಿರುಕು ಮೂಡಿಸಿಕೊಂಡು ಮೂರನೇ ವ್ಯಕ್ತಿಗಳಿಗೆ ಅವಕಾಶ ನೀಡುವ ಪ್ರವೃತ್ತಿ ಹೆಚ್ಚಾಗಿದೆ.

ಅದು ವ್ಯವಹಾರ, ಕುಟುಂಬದ ಅನೇಕ ವಿಚಾರಗಳಲ್ಲಿ ಆಗುತ್ತದೆ. ಇದರಿಂದ ಯಾರೂ ಉದ್ಧಾರ ವಾಗುವುದಿಲ್ಲ ಎನ್ನುವುದು ನೆನಪಿದ್ದರೆ ಕ್ಷಣಿಕವಾದ ಕೋಪ ಸಿಟ್ಟು ಅಸಹನೆಯನ್ನು ಹತೋಟಿ ಯಲ್ಲಿ ಇರಿಸಿಕೊಳ್ಳುತ್ತೇವೆ.