Lokesh Kaayarga Column: ಆರತಿ ನೆಪದಲ್ಲಾದರೂ ನಮ್ಮ ನದಿಗಳು ಸ್ವಚ್ಛತೆ ಕಾಣಲಿ !
ಕಾವೇರಿ ಆರತಿ ಕಾರ್ಯಕ್ರಮವು ಸ್ವಚ್ಛತೆ ಮತ್ತು ಜಲ ಸಂರಕ್ಷಣೆಯ ಜಾಗೃತಿ ಕಾರ್ಯಕ್ರಮವಾಗಿ ಬದಲಾದರೆ ಕನಿಷ್ಠ ಪಕ್ಷ ನಮ್ಮ ಧಾರ್ಮಿಕ ನಂಬಿಕೆಯ ನೆಲೆಯಲ್ಲಾದರೂ ನೀರಿನ ಮೂಲಗಳು ಸ್ವಚ್ಛತೆ ಕಾಣಲು ಸಾಧ್ಯವಿದೆ. ಇದರ ಮುಂದಿನ ಹಂತವಾಗಿ ಮಾಲಿನ್ಯಕ್ಕೆ ಕಾರಣವಾಗುವ ಉದ್ದಿಮೆ ಘಟಕಗಳ ರಾಸಾಯನಿಕ ಮಿಶ್ರಿತ ನೀರು, ಒಳಚರಂಡಿಯ ತ್ಯಾಜ್ಯ ನೀರು, ನಗರಗಳ ತ್ಯಾಜ್ಯ ವಿಲೇವಾರಿಯನ್ನು ತಡೆಗಟ್ಟಿದರೆ ನಮ್ಮಲ್ಲೂ ಸ್ವಚ್ಛ ನೀರನ್ನು ಕಾಣಲು ಸಾಧ್ಯವಿದೆ. ಇದಾವುದೂ ಇಲ್ಲದೆ ಕಾವೇರಿ ಆರತಿ ಇನ್ನೊಂದು ಧಾರ್ಮಿಕ ಕಾರ್ಯಕ್ರಮವಾದರೆ ಬಾಗಿನದ ನೆಪದಲ್ಲಿ ಹೂವು, ಹಣ್ಣುಗಳ ತ್ಯಾಜ್ಯ ರಾಶಿ ಸೇರಿ ನದಿ ಮತ್ತೊಂದಷ್ಟು ಕಲುಷಿತವಾಗುವುದು ಬಿಟ್ಟರೆ ಮತ್ತೆ ಯಾವ ಉದ್ದೇಶವೂ ಈಡೇರದು.


ಲೋಕಮತ
kaayarga@gmail.com
ಕರ್ನಾಟಕದಲ್ಲಿ ಉತ್ತರ ಭಾರತೀಯರ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಅಲ್ಲಿನವರ ಆಚರಣೆಗಳೂ ಒಂದೊಂದಾಗಿ ನಮ್ಮ ಬದುಕಿನ ಭಾಗವಾಗುತ್ತಿವೆ. ಉತ್ತರ ಭಾರತೀಯರ ಹೋಳಿ ಸಂಭ್ರಮ, ರಕ್ಷಾ ಬಂಧನ ಈಗ ನಮ್ಮದೇ ಹಬ್ಬ ಎನ್ನುವಂತಾಗಿವೆ. ಮದುವೆಗೆ ಮೊದಲು ನಿಶ್ಚಿತಾರ್ಥ, ವೀಳ್ಯಶಾಸ್ತ್ರ , ಮದರಂಗಿ ಶಾಸ್ತ್ರ ನೆರವೇರಿಸುತ್ತಿದ್ದ ನಾವು ಈಗ ಉತ್ತರ ಭಾರತೀಯರಂತೆ ಮೆಹಂದಿ, ಸಂಗೀತ್, ಹಲ್ದಿ ಶಾಸ್ತ್ರದ ಹೆಸರಿನಲ್ಲಿ ಅದ್ದೂರಿ ಸಮಾರಂಭ ಏರ್ಪಡಿಸಿ ಡಿಜೆ ಸಂಗೀತಕ್ಕೆ ಹೆಜ್ಜೆ ಹಾಕಲು ಕಲಿತಿದ್ದೇವೆ. ಉತ್ತರ, ಮಧ್ಯ ಭಾರತಕ್ಕೆ ಸೀಮಿತವಾಗಿದ್ದ ಕುಂಭಮೇಳವನ್ನು ಈಗ ನಮ್ಮ ರಾಜ್ಯದ ಕಾವೇರಿ ಸಂಗಮದಲ್ಲೂ ಆಯೋಜಿಸುತ್ತಿದ್ದೇವೆ. ಇದೀಗ ಇದಕ್ಕೆ ಹೊಸ ಸೇರ್ಪಡೆಯಾಗಿ ಕಾವೇರಿ ಆರತಿ ಹೆಸರಿನಲ್ಲಿ ಹೊಸ ಧಾರ್ಮಿಕ ಕಾರ‌್ಯಕ್ರಮ ಹಮ್ಮಿಕೊಳ್ಳಲು ರಾಜ್ಯ ಸರಕಾರ ಮುಂದಾ ಗಿದೆ. ಇದರ ಪರ-ವಿರುದ್ಧ ಚರ್ಚೆ ಆರಂಭವಾಗಿವೆ.
ಬದುಕಿನಲ್ಲಿ ಸಂಭ್ರಮ, ಸಡಗರಕ್ಕೆ ಕಾರಣವಾಗುವ ಯಾವುದೇ ಹಬ್ಬ, ಆಚರಣೆ, ಹರಿದಿನಗಳನ್ನು ವಿರೋಧಿಸುವ ಅಗತ್ಯ ಇಲ್ಲ. ಆದರೆ ಈ ಆಚರಣೆಗಳ ಹಿಂದೆ ಒಂದು ಸದಾಶಯವಿರಬೇಕು. ಆಚರಣೆ ಗಳು ದುಡ್ಡು ಪೋಲು ಮಾಡುವ ಇಲ್ಲವೇ ಸಮಯ ವ್ಯರ್ಥ ಮಾಡುವ ಮಾರ್ಗಗಳಾಗಬಾರದು. ಅದರಲ್ಲೂ ಸರಕಾರವೇ ಖುದ್ದಾಗಿ ಹೊಸ ಆಚರಣೆಗಳ ಮೂಲಕ ಹೊಸದೊಂದು ಸಂಪ್ರದಾಯ ವನ್ನು ಹುಟ್ಟು ಹಾಕುವ ಮುನ್ನ ಹತ್ತಾರು ಬಾರಿ ಯೋಚಿಸಬೇಕು. ಅಧಿಕಾರಿಗಳು ಇಲ್ಲವೇ ಜನಪ್ರತಿನಿಧಿಗಳು ಸಲಹೆ ಮಾಡಿದರೆನ್ನುವ ಕಾರಣಕ್ಕೆ ಧಾರ್ಮಿಕ ಸ್ವರೂಪದ ಕಾರ್ಯಕ್ರಮ ಆರಂಭಿಸಿದರೆ ಮುಂದೆ ಇಂಥದ್ದೇ ಇನ್ನಷ್ಟು ಕಾರ‌್ಯಕ್ರಮಗಳನ್ನು ನಡೆಸಲು ಬೇಡಿಕೆ ಬರಬಹುದು.
ಕಾವೇರಿ ಆರತಿ ರಾಜ್ಯಕ್ಕೆ ಹೊಸ ಪರಿಕಲ್ಪನೆಯೇನೂ ಅಲ್ಲ. ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಹಲವು ವರ್ಷಗಳಿಂದ ಕಾವೇರಿ ಆರತಿ ಹೆಸರಿನಲ್ಲಿ ಕಾರ‌್ಯಕ್ರಮ ರೂಪಿಸಿಕೊಂಡು ಬಂದಿದ್ದಾರೆ. ಇದು ಕೇವಲ ಧಾರ್ಮಿಕ ವಿಧಿಯಾಗದೇ ಕಾವೇರಿ ನದಿ ತೀರದಲ್ಲಿ ಸಾಂಸ್ಕೃತಿಕ ಮಹೋತ್ಸವಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಕಾವೇರಿ ನದಿಯ ಮಹತ್ವ, ನದಿ ನೀರಿನ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಜತೆಗೆ ಸಾಧಕ ರನ್ನು ಗುರುತಿಸಿ ಸನ್ಮಾನಿಸುವ ಕೆಲಸವನ್ನು ಸ್ವಾಮೀಜಿ ಮಾಡುತ್ತಾ ಬಂದಿದ್ದಾರೆ.
ಇದನ್ನೂ ಓದಿ: Lokesh Kayarga Column: ಆಯೋಗದ ಮೇಲೆ ಆಯೋಗ, ಸಂತ್ರಸ್ತರಿಗಿಲ್ಲ ಪರಿಹಾರ ಯೋಗ
ಕುಂಭಮೇಳವೂ ಅಷ್ಟೇ. ಉತ್ತರಭಾರತದ ನದಿ ಸಂಗಮಗಳಲ್ಲಿ 12 ವರ್ಷಕ್ಕೊಮ್ಮೆ ನಡೆಯುವ ಮಹಾಕುಂಭಮೇಳ ಹಿಂದಿನಿಂದಲೂ ಬಲು ಪ್ರಸಿದ್ಧವಾದದ್ದು. ಆದರೆ ದಕ್ಷಿಣದ ಜನಸಾಮಾನ್ಯರ ಪಾಲಿಗೆ ಇದು ದೂರದ ಆಚರಣೆಯಾಗಿಯೇ ಉಳಿದಿತ್ತು. ದಕ್ಷಿಣದ ಜನರು ವಿಶೇಷವಾಗಿ ಕನ್ನಡಿಗರು ಕುಂಭಮೇಳದ ಹೆಸರಿನಲ್ಲಿ ಒಟ್ಟಾಗಿ ನದಿ ಸ್ನಾನ ಮಾಡಬೇಕೆಂಬ ಉದ್ದೇಶದಿಂದ ಹಲವು ವರ್ಷಗಳ ಹಿಂದೆಯೇ ಟಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ದಕ್ಷಿಣದ ಕುಂಭಮೇಳವನ್ನು ಆರಂಭಿಸ ಲಾಯಿತು. ಆದಿಚುಂಚನ ಶ್ರೀಗಳು, ಸುತ್ತೂರು ಶ್ರೀಗಳು ಈ ಕುಂಭಮೇಳದ ಆರಂಭದಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. ಇತ್ತೀಚೆಗೆ ಸರಕಾರವೇ ಮುಂದೆ ನಿಂತು ಈ ಕಾರ‌್ಯಕ್ರಮವನ್ನು ಆಯೋಜಿಸು ತ್ತಿದೆ.
ಕಾವೇರಿ ಆರತಿ ಸರಕಾರದ ವಾರ್ಷಿಕ ಕಾರ್ಯಕ್ರಮದ ಭಾಗವಾಗಬೇಕೆನ್ನುವುದು ಉಪಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಅವರ ಯೋಚನೆ. ಈ ಯೋಚನೆಯ ಹಿಂದಿನ ಅವರ ಉದ್ದೇಶ ಏನೆನ್ನುವುದು ಸ್ಪಷ್ಟವಿಲ್ಲ. ಕೆಲ ತಿಂಗಳ ಹಿಂದೆ ಬಿಬಿಎಂಪಿ ಪ್ರಾಯೋಜಕತ್ವದಲ್ಲಿ ಬೆಂಗಳೂರಿನ ಸ್ಯಾಂಕಿ ಟ್ಯಾಂಕ್ ಆವರಣದಲ್ಲಿ ಉತ್ತರ ಭಾರತದ ಪುರೋಹಿತರನ್ನು ಕರೆಸಿ ನಡೆಸಿದ ಕಾವೇರಿ ಆರತಿ ಕಾರ್ಯಕ್ರಮದಲ್ಲೂ ಡಿಕೆಶಿ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ದಸರಾ ಹಬ್ಬದ ಸಮಯದಲ್ಲಿ ಶ್ರೀರಂಗಪಟ್ಟಣದಲ್ಲಿ ಕಾವೇರಿ ಆರತಿ ಕಾರ‌್ಯಕ್ರಮ ಹಮ್ಮಿಕೊಳ್ಳಲು ಸಿದ್ಧತೆ ನಡೆದಿದೆ. ಕೃಷ್ಣ ರಾಜಸಾಗರ ಅಣೆಕಟ್ಟಿನ ಬಳಿ ಇದಕ್ಕಾಗಿ ಜಾಗವನ್ನು ಗುರುತಿಸುವ ಕೆಲಸವೂ ನಡೆದಿದೆ.
ರಾಜ್ಯದ ಎಲ್ಲ ಭಾಗಗಳಿಗೂ ಕುಡಿಯುವ ನೀರು ಪೂರೈಸಲಾಗದ ಸರಕಾರ ಇಂತಹ ಧಾರ್ಮಿಕ ಕಾರ್ಯಕ್ರಮಗಳಿಗೆ ಸರಕಾರದ ದುಡ್ಡನ್ನು ಪೋಲು ಮಾಡಬಾರದೆನ್ನುವುದು ಕಾವೇರಿ ಆರತಿ ಪ್ರಸ್ತಾಪವನ್ನು ವಿರೋಧಿಸುವವರ ವಾದ. ಸದ್ಯದ ಪ್ರಸ್ತಾವನೆಯನ್ನು ಗಮನಿಸಿದರೆ ಸರಕಾರದ ಪಾಲಿಗೆ ಇದು ಹಂಪಿ ಉತ್ಸವ, ಕದಂಬ ಉತ್ಸವದಂತೆ ಪ್ರವಾಸಿಗರನ್ನು ಸೆಳೆಯುವ ಇನ್ನೊಂದು ಕಾರ್ಯಕ್ರಮವಾಗುವ ಸಾಧ್ಯತೆ ಇದೆ. ಆದರೆ ಕಾವೇರಿ ಆರತಿಯನ್ನು ಇದಕ್ಕಿಂತ ಮಿಗಿಲಾದ, ಬೃಹತ್ತಾದ ಆಶಯದೊಂದಿಗೆ ಆಯೋಜಿಸಲು ಎಲ್ಲ ಅವಕಾಶಗಳೂ ಇವೆ.

ಈ ಹಿಂದೆ ಪ್ರಯಾಗದ ಮಹಾಕುಂಭ ಮೇಳದ ಅವಧಿಯಲ್ಲಿ ನಮ್ಮ ರಾಜ್ಯದ ನದಿಗಳ ಮಾಲಿನ್ಯದ ಬಗ್ಗೆ ಬರೆದಿದ್ದೆ. ಗಂಗಾರತಿ, ಕುಂಭ ಮೇಳದಂತಹ ಆಚರಣೆಗಳು ನಮ್ಮ ನದಿಗಳನ್ನು ಇನ್ನಷ್ಟು ಕಲುಷಿತಗೊಳಿಸುವ ಧಾರ್ಮಿಕ ವಿಧಿಗಳಾಗದೆ ನದಿಯ ಸ್ವಚ್ಛತೆ, ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುವ ಕಾರ‌್ಯಕ್ರಮಗಳಾಗಬೇಕೆಂಬ ಆಶಯ ವ್ಯಕ್ತಪಡಿಸಿದ್ದೆ. ಪ್ರಯಾಗದಲ್ಲಿ ಮಿಂದೆದ್ದ ವರು ತಮ್ಮ ಪಾಪಗಳನ್ನು ತೊಳೆದುಕೊಳ್ಳುವ ಮನಸ್ಥಿತಿಯಲ್ಲಿದ್ದರೇ ಹೊರತು ನದಿಗಳ ಮಲಿನತೆ ಯ ಬಗ್ಗೆ ಎಂದೂ ಯೋಚಿಸಲಿಲ್ಲ. ಗಂಗೆ ಎಂದೆಂದಿಗೂ ಪವಿತ್ರಳು, ಅವಳು ಅಶುದ್ಧಿಯಾಗಲು ಸಾಧ್ಯವಿಲ್ಲ ಎಂಬ ಧಾರ್ಮಿಕ ನಂಬುಗೆಯೊಂದಿಗೆ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಗಿತ್ತು. ಆದರೆ ಕುಂಭಮೇಳದ ಬಳಿಕ ನದಿಯಿಂದ ಎತ್ತಲಾದ ಸಾವಿರಾರು ಟನ್ ತ್ಯಾಜ್ಯ ಗಂಗೆ, ಯಮುನೆಯರು ಎಷ್ಟರ ಮಟ್ಟಿಗೆ ಕಲುಷಿತವಾಗಿರಲು ಸಾಧ್ಯ ಎನ್ನುವುದರ ಚಿತ್ರಣ ನೀಡುವಂತಿತ್ತು.
ಇಷ್ಟಾದರೂ ಕಾವೇರಿ ಆರತಿ ಕಾರ್ಯಕ್ರಮವನ್ನು ಬೆಂಬಲಿಸಲು ಕಾರಣವಿದೆ. ಭಾವುಕ ಜೀವಿಗಳಾದ ನಮ್ಮಲ್ಲಿ ಧಾರ್ಮಿಕ ನಂಬಿಕೆಯಿಲ್ಲದೆ ಯಾವ ಕೆಲಸವೂ ನಡೆಯುವುದಿಲ್ಲ. ಬೆಳಿಗ್ಗೆ ಎದ್ದಲ್ಲಿಂದ ರಾತ್ರಿ ಮಲಗುವವರೆಗೂ ನಮ್ಮ ಪ್ರತಿಯೊಂದು ಚರ್ಯೆಗಳು ನಂಬಿಕೆ, ಪ್ರಾರ್ಥನೆಗಳಿಂದ ಆರಂಭ ವಾಗಿ ಪ್ರಾರ್ಥನೆಯಲ್ಲಿಯೇ ಕೊನೆಗೊಳ್ಳುತ್ತವೆ. ಅದರಲ್ಲೂ ನೀರು ಮತ್ತು ಬೆಂಕಿ ನಮಗೆ ಶುದ್ಧಿಯ ಸಂಕೇತಗಳು. ಈ ಭಾವನೆಯನ್ನು ಸಾರ್ವತ್ರಿಕವಾಗಿ ಬಡಿದೆಬ್ಬಿಸಿ ಎಲ್ಲ ನದಿಗಳನ್ನು ಮಾಲಿನ್ಯ ಮುಕ್ತಗೊಳಿಸಲು ಕಾವೇರಿ ಆರತಿ ಹೆಸರಿನ ಕಾರ್ಯಕ್ರಮ ಸದವಕಾಶ.
ಪಾಶ್ಚಾತ್ಯರು ನದಿಗಳನ್ನು ಪವಿತ್ರ ಎಂದು ಪೂಜಿಸಿ ನಮ್ಮಂತೆ ಸುವಸ್ತುಗಳನ್ನು ಸಮರ್ಪಿಸುವುದಿಲ್ಲ. ಆದರೆ ನದಿ ಮೂಲಗಳ ಸ್ವಚ್ಛತೆ ಬಗ್ಗೆ ಅವರಿಗೆ ತಿಳಿ ಹೇಳಬೇಕಾದ ಅಗತ್ಯವಿಲ್ಲ. ಸ್ವಚ್ಛತೆ ಅವರ ಬದುಕಿನ ಅವಿಭಾಜ್ಯ ಅಂಗ. ಸ್ವಚ್ಛತೆಯ ಬದಲು ಮಡಿವಂತಿಕೆಗೆ, ಕುರುಡು ನಂಬಿಕೆಗಳಿಗೆ ಜೋತು ಬಿದ್ದಿರುವ ನಾವು ಈ ಕಾರಣಕ್ಕಾಗಿಯೂ ನಮ್ಮ ನದಿಗಳನ್ನು ಕಲುಷಿತಗೊಳಿಸುತ್ತಿದ್ದೇವೆ. ಗಂಗೆ ಯಲ್ಲಿ ಸಾಗಿ ಬರುವ ಅರ್ಧ ಸುಟ್ಟ ಹೆಣಗಳು, ಶ್ರೀರಂಗಪಟ್ಟಣದ ಕಾವೇರಿ ಸಂಗಮದಲ್ಲಿ ಪಿಂಡ ಪ್ರದಾನದ ಹೆಸರಿನಲ್ಲಿ ಸೃಷ್ಟಿಯಾಗಿರುವ ಅನೈರ್ಮಲ್ಯದ ವಾತಾವರಣ ಇದಕ್ಕೆ ಸಾಕ್ಷಿ.
ಸದ್ಯದ ಸ್ಥಿತಿಯಲ್ಲಿ ನದಿ ಮೂಲಗಳನ್ನು ಸ್ವಚ್ಛವಾಗಿಡಿ ಎಂದು ಎಷ್ಟೇ ಗೋಗರೆದರೂ ಜನರು ಸ್ವಯಂ ಪ್ರೇರಣೆಯಿಂದ ಸ್ವಚ್ಛತೆಯ ಬಗ್ಗೆ ಗಮನ ಹರಿಸುವುದು ದೂರದ ಮಾತು. ದೇಗುಲದ ಎದುರಿನ ಕಲ್ಯಾಣಿ ಇಲ್ಲವೇ ಸ್ನಾನಘಟ್ಟದ ನೈರ್ಮಲ್ಯದ ಬಗ್ಗೆಯೂ ಕಾಳಜಿ ವಹಿಸದ ನಾವು, ನೀರಿನ ಸ್ವಚ್ಛತೆಯತ್ತ ಮನ ಮಾಡಲು ಸಾಧ್ಯವಿಲ್ಲ. ಕೇಂದ್ರ ಸರಕಾರ ನಮಾಮಿ ಗಂಗೆ ಹೆಸರಿನಲ್ಲಿ ಪ್ರತೀ ವರ್ಷ ಸಾವಿರಾರು ಕೋಟಿ ರು. ಹಣ ವ್ಯಯಿಸಿದ ಬಳಿಕವೂ ಭಾರತೀಯರೆಲ್ಲರ ಪವಿತ್ರ ನದಿ ಗಂಗೆಯನ್ನು ಪೂರ್ತಿಯಾಗಿ ಮಾಲಿನ್ಯ ಮುಕ್ತವನ್ನಾಗಿಸಲು ಸಾಧ್ಯವಾಗಿಲ್ಲ. ಇಂತಹ ಸ್ವಚ್ಛ ಅಭಿಯಾನಕ್ಕೆ ಧಾರ್ಮಿಕ ನಂಬುಗೆಯೊಂದರ ನಂಟು ಕಲ್ಪಿಸುವ ಅಗತ್ಯವಿದೆ.
ನೀರಿನ ಮೂಲಗಳ ಸ್ವಚ್ಛತೆ, ನದಿ ಸಂರಕ್ಷಣೆಯನ್ನೇ ಮುಖ್ಯ ಉದ್ದೇಶವಾಗಿಟ್ಟುಕೊಂಡು ರಾಜ್ಯ ವ್ಯಾಪಿ ಆಯಾ ಭಾಗದ ನದಿಗಳ ಆರತಿ ಅಭಿಯಾನ ನಡೆಸುವಂತಾದರೆ ಸ್ವಚ್ಛತೆಯ ನಿಟ್ಟಿನಲ್ಲಿ ಇನ್ನೊಂದು ಹೆಜ್ಜೆ ಮುಂದೆ ಸಾಗಲು ಸಾಧ್ಯವಿದೆ. ಇದು ಸಾಧ್ಯವಾಗಬೇಕಾದರೆ ಇದು ನಿರ್ದಿಷ್ಟ ಸ್ಥಳಕ್ಕೆ ಸೀಮಿತವಾದ ಧಾರ್ಮಿಕ ಕಾರ್ಯಕ್ರಮ ಆಗಬಾರದು. ಒಂದು ತಿಂಗಳು ಅಥವಾ ಕನಿಷ್ಠ ಒಂದು ವಾರ ರಾಜ್ಯವ್ಯಾಪಿ ನೀರಿನ ಮೂಲಗಳ ಸ್ವಚ್ಛತೆ ಕಾರ್ಯಕ್ರಮ ನಡೆಸಿ ಬಳಿಕ ಅವರವರ ನಂಬಿಕೆಯಂತೆ ನದಿಗೆ ಗೌರವ ಅರ್ಪಿಸುವ ಕಾರ್ಯಕ್ರಮ ರೂಪಿಸಬೇಕು. ಇಂತಹ ಅಭಿಯಾನದಲ್ಲಿ ವಿದ್ಯಾರ್ಥಿಗಳು, ನಾನಾ ಸಂಘಟನೆಗಳು, ಪಕ್ಷಗಳ ಕಾರ್ಯಕರ್ತರು, ಮಠ, ದೇಗುಲ, ಮಸೀದಿ, ಇಗರ್ಜಿಗಳೆಂಬ ಭೇದವಿಲ್ಲದೆ ಎಲ್ಲ ಧಾರ್ಮಿಕ ನಂಬಿಕೆಯ ಜನರೂ ಭಾಗವಹಿಸುವಂತಾಗಬೇಕು. ಈ ನಿಟ್ಟಿನಲ್ಲಿ ಸರಕಾರವೇ ‘ಸ್ವಚ್ಛ ನದಿ ಪಾತ್ರ’, ‘ಸ್ವಚ್ಛ ನದಿ ಮೂಲ’ ಹೆಸರಿನಲ್ಲಿ ಪ್ರಶಸ್ತಿಗಳನ್ನು ಕೊಟ್ಟು ಈ ಸಮಾರಂಭದಲ್ಲಿ ಗೌರವಿಸಬಹುದು.
ಆರಂಭದಲ್ಲಿ ನಮ್ಮ ಎಲ್ಲ ದೇಗುಲಗಳ ಮುಂದಿನ ಕೆರೆ, ಕಲ್ಯಾಣಿ, ಸರೋವರ, ಹೊಳೆ, ನದಿ ಪಾತ್ರಗಳನ್ನು ಸ್ವಚ್ಛವಾಗಿಡುವ ಕಾರ್ಯಕ್ರಮ ಆಯೋಜಿಸಬಹುದು. ನಮ್ಮ ಪ್ರಮುಖ ದೇಗುಲಗಳ ಸ್ನಾನ ಘಟ್ಟಗಳು ಈ ಅಭಿಯಾನದಡಿ ಸ್ವಚ್ಛತೆಯಿಂದ ನಳನಳಿಸುವಂತಾದರೆ ಅಲ್ಲೂ ದೇವರನ್ನು ಕಾಣುವ ಪ್ರಶಾಂತತೆ ಬರಲು ಸಾಧ್ಯವಿದೆ. ಈಗ ಕುಂಭಮೇಳ ಆಯೋಜಿಸುತ್ತಿರುವ ತಿರುಮ ಕೂಡಲಿನ ಗುಂಜಾಂ ನರಸಿಂಹ ಸ್ವಾಮಿ ದೇಗುಲದ ಎದುರಿನ ಸ್ನಾನ ಘಟ್ಟ ಕಂಡರೆ ಸ್ನಾನ ಬಿಡಿ, ನೀರಿನ ಪ್ರೋಕ್ಷಣೆ ಮಾಡಿಕೊಳ್ಳಲೂ ಮನಸ್ಸಾಗುವುದಿಲ್ಲ. ನಂಜನಗೂಡು ಶ್ರೀಕಂಠೇಶ್ವರ ದೇಗುಲದ ಎದುರಿನ ಸ್ನಾನ ಘಟ್ಟವೂ ಇದಕ್ಕಿಂತ ಭಿನ್ನವಾಗಿಲ್ಲ. ಶ್ರೀರಂಗಪಟ್ಟಣದ ನಿಮಿಷಾಂಬಾ, ಕುಕ್ಕೆ ಸುಬ್ರಮಣ್ಯ, ಧರ್ಮಸ್ಥಳ ಸೇರಿದಂತೆ ಬಹುತೇಕ ಎಲ್ಲ ನದಿಗಳ ಸ್ನಾನ ಘಟ್ಟಗಳು ನಮ್ಮ ಕೊಳಕು ತನಕ್ಕೆ ಸಾಕ್ಷಿಯಾಗಿ ನಿಲ್ಲುತ್ತವೆ.
ನಮ್ಮ ಶ್ರೀಮಂತ ದೇಗುಲಗಳಲ್ಲಿ ಸಂಗ್ರಹವಾಗುವ ಹುಂಡಿ ಹಣದಲ್ಲಿ ಒಂದಷ್ಟು ಮೊತ್ತವನ್ನು ಆಯಾ ದೇಗುಲಗಳ ವ್ಯಾಪ್ತಿಯ ನದಿಗಳ ಸ್ವಚ್ಛತೆ ಮತ್ತು ಜಲಸಂರಕ್ಷಣೆಗೆ ಬಳಸಬಹುದು. ಪ್ರಮುಖ ಸ್ನಾನಘಟ್ಟಗಳಲ್ಲಿ ನೀರಿನ ಶುದ್ಧೀಕರಣ ಘಟಕ ಸ್ಥಾಪನೆ, ತ್ಯಾಜ್ಯ ಸಂಗ್ರಹ ವಿಲೇವಾರಿ ಮತ್ತು ಸ್ವಚ್ಛತಾ ಸಹಾಯಕರನ್ನು ನೇಮಿಸಿಕೊಳ್ಳಲು ಈ ಹಣವನ್ನು ಬಳಸಿಕೊಳ್ಳಬಹುದು. ಕೆರೆ, ಕಲ್ಯಾಣಿ, ನದಿ ಸ್ನಾನ ಘಟ್ಟಗಳ ಸ್ವಚ್ಛತೆಯ ಹೊಣೆಯನ್ನು ಮುಜರಾಯಿ ದೇಗುಲಗಳಿಗೆ ಒಪ್ಪಿಸಿ ವರ್ಷ ಕ್ಕೊಮ್ಮೆ ನಡೆಸುವ ಆರತಿ ಕಾರ‌್ಯಕ್ರಮದಲ್ಲಿ ಸ್ವಚ್ಛ ಸ್ನಾನಘಟ್ಟಗಳನ್ನು ಗುರುತಿಸಿ ಪ್ರಶಸ್ತಿ ನೀಡಬಹುದು.
ಕಾವೇರಿ ಆರತಿ ಕಾರ್ಯಕ್ರಮವು ಸ್ವಚ್ಛತೆ ಮತ್ತು ಜಲ ಸಂರಕ್ಷಣೆಯ ಜಾಗೃತಿ ಕಾರ್ಯಕ್ರಮವಾಗಿ ಬದಲಾದರೆ ಕನಿಷ್ಠ ಪಕ್ಷ ನಮ್ಮ ಧಾರ್ಮಿಕ ನಂಬಿಕೆಯ ನೆಲೆಯಲ್ಲಾದರೂ ನೀರಿನ ಮೂಲಗಳು ಸ್ವಚ್ಛತೆ ಕಾಣಲು ಸಾಧ್ಯವಿದೆ. ಇದರ ಮುಂದಿನ ಹಂತವಾಗಿ ಮಾಲಿನ್ಯಕ್ಕೆ ಕಾರಣವಾಗುವ ಉದ್ದಿಮೆ ಘಟಕಗಳ ರಾಸಾಯನಿಕ ಮಿಶ್ರಿತ ನೀರು, ಒಳಚರಂಡಿಯ ತ್ಯಾಜ್ಯ ನೀರು, ನಗರಗಳ ತ್ಯಾಜ್ಯ ವಿಲೇವಾರಿಯನ್ನು ತಡೆಗಟ್ಟಿದರೆ ನಮ್ಮಲ್ಲೂ ಸ್ವಚ್ಛ ನೀರನ್ನು ಕಾಣಲು ಸಾಧ್ಯವಿದೆ. ಇದಾವುದೂ ಇಲ್ಲದೆ ಕಾವೇರಿ ಆರತಿ ಇನ್ನೊಂದು ಧಾರ್ಮಿಕ ಕಾರ್ಯಕ್ರಮವಾದರೆ ಬಾಗಿನದ ನೆಪದಲ್ಲಿ ಹೂವು, ಹಣ್ಣುಗಳ ತ್ಯಾಜ್ಯ ರಾಶಿ ಸೇರಿ ನದಿ ಮತ್ತೊಂದಷ್ಟು ಕಲುಷಿತವಾಗುವುದು ಬಿಟ್ಟರೆ ಮತ್ತೆ ಯಾವ ಉದ್ದೇಶವೂ ಈಡೇರದು. ಇದಕ್ಕಾಗಿ ಸರಕಾರಿ ದುಡ್ಡನ್ನು ಪೋಲು ಮಾಡುವ ಅಗತ್ಯವಿಲ್ಲ.