ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vinayak V Bhat Column: ಚುನಾವಣೆಗಳಲ್ಲಿ ಮಾತ್ರ ಮುನ್ನೆಲೆಗೆ ಬರುವ ಮನುಸ್ಮೃತಿ

ಮನುಸ್ಮೃತಿಯನ್ನು ಸುಡುವ ಆಂದೋಲನದ ಬಲದಿಂದ ಮಾಯಾವತಿಯವರು ಒಂದೆರಡು ಬಾರಿ ಅಧಿಕಾರಕ್ಕೂ ಬಂದಿದ್ದರು. ಅಲ್ಲಿಂದ ಈಚೆಗೆ, ಚುನಾವಣೆಗಳು ಸಮೀಪಿಸುವಾಗ ಮನುಸ್ಮೃತಿ ಯನ್ನು ಸುಡುವುದು ಮತ್ತು ಅದರ ವಿರುದ್ಧ ಪುಂಖಾನುಪುಂಖವಾಗಿ ಹೇಳಿಕೆ ಗಳನ್ನು ಕೊಡುವುದು ಬಿಜೆಪಿ ಯನ್ನು ಹೊರತುಪಡಿಸಿದ ಭಾರತದ ಮಿಕ್ಕ ಕೆಲ ಪಕ್ಷಗಳ ರಾಜಕಾರಣಿಗಳಿಗೆ ಒಂದು ರೀತಿಯ ಹವ್ಯಾಸ (ಚಟ) ಆಗಿ ಬಿಟ್ಟಿದೆ.

ಚುನಾವಣೆಗಳಲ್ಲಿ ಮಾತ್ರ ಮುನ್ನೆಲೆಗೆ ಬರುವ ಮನುಸ್ಮೃತಿ

ವಿದ್ಯಮಾನ

vinayakavbhat@autoaxle.com

ಭಾರತದಲ್ಲಿ ಚುನಾವಣೆಗಳು ಬಂತೆಂದರೆ ಮನುಸ್ಮೃತಿಯ ಪುಸ್ತಕಗಳನ್ನು ಮುದ್ರಣ ಮಾಡುವವ ರಿಗೆ ಒಂದು ರೀತಿಯ ಸುಗ್ಗಿಯ ಕಾಲ. ಕಾರಣ ಅದರ ಸಾವಿರಗಟ್ಟಲೆ ಪ್ರತಿಗಳನ್ನು ಸುಡುವ ಒಂದು ವರ್ಗ ಈ ದೇಶದಲ್ಲಿದೆ. ಅದರಲ್ಲೂ ಉತ್ತರಪ್ರದೇಶ ಹಾಗೂ ಬಿಹಾರ ರಾಜ್ಯಗಳಲ್ಲಿ ಮನುಸ್ಮೃತಿಯ ಪುಸ್ತಕಗಳು ಹೆಚ್ಚಾಗಿ ಮುದ್ರಣವಾಗುತ್ತವೆ ಮತ್ತು ಸುಡುವ ಕೆಲಸವೂ ಆಗುತ್ತವೆ.

ಡಾ.ಬಿ.ಅರ್. ಅಂಬೇಡ್ಕರ್ ಅವರು ಒಮ್ಮೆ ಮಾತ್ರ ಮನುಸ್ಮೃತಿಯನ್ನು ಸಾರ್ವಜನಿಕವಾಗಿ ಸುಟ್ಟಿರುವುದನ್ನು ನಾವು ಓದುತ್ತೇವೆ. ಆದರೆ, ತರುವಾಯದಲ್ಲಿ ಈ ಮನುಸ್ಮೃತಿಯನ್ನು ಸುಡುವ ಪರಂಪರೆಗೆ ನಾಂದಿ ಹಾಡಿದವರು ಉತ್ತರ ಪ್ರದೇಶದ ಬಹುಜನ ಸಮಾಜ ಪಕ್ಷದ ಸಂಸ್ಥಾಪಕರಾದ ಕಾನ್ಷಿರಾಮ್ ಅವರು. ಅವರ ಶಿಷ್ಯೆಯಾಗಿದ್ದ ಮಾಯಾವತಿಯವರು ಈ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದರು.

ಮನುಸ್ಮೃತಿಯನ್ನು ಸುಡುವ ಆಂದೋಲನದ ಬಲದಿಂದ ಮಾಯಾವತಿಯವರು ಒಂದೆರಡು ಬಾರಿ ಅಧಿಕಾರಕ್ಕೂ ಬಂದಿದ್ದರು. ಅಲ್ಲಿಂದ ಈಚೆಗೆ, ಚುನಾವಣೆಗಳು ಸಮೀಪಿಸುವಾಗ ಮನುಸ್ಮೃತಿ ಯನ್ನು ಸುಡುವುದು ಮತ್ತು ಅದರ ವಿರುದ್ಧ ಪುಂಖಾನುಪುಂಖವಾಗಿ ಹೇಳಿಕೆ ಗಳನ್ನು ಕೊಡುವುದು ಬಿಜೆಪಿಯನ್ನು ಹೊರತುಪಡಿಸಿದ ಭಾರತದ ಮಿಕ್ಕ ಕೆಲ ಪಕ್ಷಗಳ ರಾಜಕಾರಣಿಗಳಿಗೆ ಒಂದು ರೀತಿಯ ಹವ್ಯಾಸ (ಚಟ) ಆಗಿ ಬಿಟ್ಟಿದೆ.

ಈಗ ಮತ್ತೆ ಬಿಹಾರದಲ್ಲಿ ಚುನಾವಣೆಗಳು ನಡೆಯುವ ಕಾಲ ಬಂದಿದೆ. ಹಾಗಾಗಿ, ಮತ್ತೆ ಮನು ಸ್ಮೃತಿಯ ಕುರಿತ ಮಾತುಗಳು ಕೇಳಿಬರುತ್ತಿವೆ. “ಬಿಜೆಪಿ ಮತ್ತು ಅದರ ಮೂಲಸ್ರೋತವಾದ ಅರ್‌ಎಸ್‌ಎಸ್ ಇವು ಮನುವಾದಿ ಸಂಘಟನೆಗಳಾಗಿವೆ. ಬಿಜೆಪಿಯಲ್ಲಿರುವವರು ಮನುವಾದಿ ಗಳು ಹಾಗೂ ಈಗ ಜಾರಿಯಲ್ಲಿರುವ ಸಂವಿಧಾನವನ್ನು ಕಸದಬುಟ್ಟಿಗೆಸೆದು ಮನುಸ್ಮೃತಿಯ ಆಧಾರ ದಲ್ಲಿ ಈಗ ಹೊಸ ಸಂವಿಧಾನದ ರಚನೆಯಾಗುತ್ತಿದೆ" ಎಂದೆ ಬೊಬ್ಬೆ ಶುರುವಾಗಿಬಿಟ್ಟಿವೆ. ಒಂದು ಮಾತಂತೂ ಸತ್ಯ- ಈ ಮನುಸ್ಮೃತಿಯನ್ನು ಸುಡುವ ಜನರಲ್ಲಿ ಬಹುತೇಕರು ಆ ಗ್ರಂಥವನ್ನು ಸಮಗ್ರವಾಗಿ ಅಧ್ಯಯನ ಮಾಡಿದವರಲ್ಲ ಹಾಗೂ ಅದರೊಳಗೆ ಏನಿದೆ ಎನ್ನುವುದು ಅವರುಗಳಿಗೆ ಬೇಕಾಗಿಯೂ ಇಲ್ಲ.

ಇದನ್ನೂ ಓದಿ: Vinayak V Bhat Column: ಅಲ್ಲಿರುವುದು ನಮ್ಮನೆ...ಇಲ್ಲಿ ಬಂದೆ ಸುಮ್ಮನೆ !

ಮನುವಾದ ಎಂದರೆ ಏನು ಎನ್ನುವುದೂ ಇಂಥವರಿಗೆ ಸರಿಯಾಗಿ ಗೊತ್ತಿಲ್ಲ (ಗೊತ್ತಿದ್ದವರು ಮಾತಾಡುವುದಿಲ್ಲ). ಆದರೆ, ಮನುಸ್ಮೃತಿಯ ಪ್ರತಿಗಳನ್ನು ಸುಟ್ಟರೆ, ಸನಾತನ ಪರಂಪರೆಯನ್ನು ಹೀಗಳೆದರೆ, ತಾನೊಬ್ಬ ಪ್ರಗತಿಪರ ಮುಖಂಡ, ದಮನಿತರ ನಾಯಕ ಎನಿಸಿಕೊಂಡು, ಚುನಾವಣೆ ಗಳಲ್ಲಿ ಹೆಚ್ಚು ಮತ ಗಳಿಸಬಹುದು ಎನ್ನುವ ಗ್ರಹಿಕೆಯಷ್ಟೇ ಕೆಲವರಲ್ಲಿ ಇದೆ.

ನೂರಕ್ಕಿಂತಲೂ ಹೆಚ್ಚಿನ ಸ್ಮೃತಿಗಳು ಇಂದು ನಮಗೆ ಲಭ್ಯವಿವೆ. ಇವುಗಳಲ್ಲಿ ಮನು, ಯಾಜ್ಞವಲ್ಕ್ಯ ಪರಾಶರ, ವಿಷ್ಣು, ಆಂಗೀರಸ, ಕಾತ್ಯಾಯನ, ಬೃಹಸ್ಪತಿ, ವ್ಯಾಸ್ಯ ಇತ್ಯಾದಿ ಸ್ಮೃತಿಗ್ರಂಥಗಳನ್ನು ನಾವು ಮುಖ್ಯವಾಗಿ ಹೆಸರಿಸಬಹುದಾಗಿದೆ. ಈ ಪೈಕಿ ಮನುಸ್ಮೃತಿ, ಪರಾಶರ ಸ್ಮೃತಿ ಹಾಗೂ ಯಾಜ್ಞವಲ್ಕ್ಯ ಸ್ಮೃತಿಗಳು ತುಂಬಾ ಪ್ರಖ್ಯಾತವಾದವುಗಳಾಗಿವೆ.

ಅದರಲ್ಲೂ, ಖ್ಯಾತಿ- ಕುಖ್ಯಾತಿಯ ವಿಷಯ ಬಂದಾಗ ಮನುಸ್ಮೃತಿಯನ್ನು ಯಾವ ಸ್ಮೃತಿಗ್ರಂಥ ಗಳೂ ಮೀರಿಸಲಾರವು. ವೇದ ಸಂಸ್ಕೃತಿಯ ಆಧಾರದಲ್ಲಿ ವರ್ತಿಸುವ ಸನಾತನ ಹಿಂದೂ ಧರ್ಮ ಹಾಗೂ ಎಲ್ಲ ವರ್ಗಗಳನ್ನೂ ಒಳಗೊಂಡ ಹಿಂದೂ ಸಮಾಜದ ಮುಖ್ಯ ಸಂಚಾಲಕ ಗ್ರಂಥ ಗಳೆಂದರೆ ಅವು ಸ್ಮೃತಿಗ್ರಂಥಗಳು.

ಸ್ಮೃತಿಗಳಲ್ಲಿ ಧರ್ಮ, ಅರ್ಥ, ಕಾಮ ಹಾಗೂ ಮೋಕ್ಷ ಈ ನಾಲ್ಕೂ ಪುರುಷಾರ್ಥಗಳ ವಿವೇಚನೆ ಇದೆ. ಇವುಗಳಲ್ಲಿ ವರ್ಣ ಹಾಗೂ ಅರ್ಥ ವ್ಯವಸ್ಥೆಗಳು, ವರ್ಣಾಶ್ರಮಧರ್ಮ, ವಿಶೇಷ ಸಂದರ್ಭಗಳಲ್ಲಿ ನಡೆಸಬೇಕಾದ ಕರ್ಮಗಳು, ಪ್ರಾಯಶ್ಚಿತ್ತ ಶಾಸನಗಳನ್ನು ಮಾಡುವ ರೀತಿಗಳು, ದಂಡನ್ಯವಸ್ಥೆ ಹಾಗೂ ಮೋಕ್ಷದ ಸಾಧನಗಳ ನಿರ್ಣಯಗಳಿವೆ. ಪ್ರಾಚೀನ ಭಾರತದ ಈ ಸ್ಮೃತಿಗಳು, ಮಾನವನ ದಿನನಿತ್ಯದ ಚಟುವಟಿಕೆಗಳ ಮಾರ್ಗದರ್ಶಿಗಳೂ ಆಗಿವೆ. ಅದಕ್ಕಾಗಿಯೇ, ಮನುಸ್ಮೃತಿಯನ್ನು ‘ಮಾನವ ಧರ್ಮಶಾಸ್ತ್ರ’ ಎಂದೇ ಕರೆಯಲಾಗುತ್ತದೆ.

ವ್ಯಕ್ತಿಯೊಬ್ಬನ ಸಾಮಾಜಿಕ ಜೀವನಕ್ಕೆ, ಕ್ರಮಬದ್ಧ ಬದುಕಿಗೆ, ಗಂಡು-ಹೆಣ್ಣಿನ ಸಂಬಂಧ, ಶಿಕ್ಷಣ, ನಡಾವಳಿ, ಹಿರಿ-ಕಿರಿಯರ ಹೊಣೆಗಾರಿಕೆಗಳು, ಮೂಲಭೂತ ಕರ್ತವ್ಯಗಳು, ವ್ಯಕ್ತಿಗತ ಬದುಕಿನ ಸ್ವಚ್ಛತೆ ಮುಂತಾದವು ಅತ್ಯಾವಶ್ಯಕ ಅಂಶಗಳು ಎಂಬುದನ್ನು ಅಂದಿನ ಸಾಮಾಜಿಕ ವ್ಯವಸ್ಥೆ ಕಂಡು ಕೊಂಡಿತ್ತು.

ಸಮಾಜವು ಧರ್ಮಯುತವಾಗಿ ನಡೆಯಬೇಕು ಎಂಬುದೇ ಇದರ ಮೂಲ ಉದ್ದೇಶವಾಗಿದೆ. ಮನುಸ್ಮೃತಿಯು 12 ಅಧ್ಯಾಯಗಳು ಮತ್ತು 2600ಕ್ಕೂ ಹೆಚ್ಚು ಶ್ಲೋಕಗಳನ್ನು ಒಳಗೊಂಡಿದೆ. ಈ ಸ್ಮೃತಿಗ್ರಂಥಕ್ಕೆ ಕೆಲವು ವ್ಯಾಖ್ಯಾನಗಳೂ ಇವೆ. ಈ ಗ್ರಂಥವನ್ನು ಸರಿಸುಮಾರು ಎರಡನೇ ಶತಮಾನ ದಲ್ಲಿ ರಚಿಸಲಾಗಿದೆ ಎಂದು ನಂಬಲಾಗಿದೆಯಾದರೂ, ಕಾಲಾನುಕ್ರಮದಲ್ಲಿ ಅನೇಕ ಸಂಗತಿಗಳು ಈ ಗ್ರಂಥಕ್ಕೆ ಸೇರ್ಪಡೆಯಾಗಿವೆ ಎಂದೂ ಹೇಳುವವರಿದ್ದಾರೆ. ಮನುಸ್ಮೃತಿಯ 12 ಅಧ್ಯಾಯಗಳು ಒಳಗೊಂಡಿರುವ ವಿಚಾರಗಳನ್ನು, ಬ್ರಹ್ಮಾಂಡ ಮತ್ತು ಮಾನವರ ಸೃಷ್ಟಿ, ವೇದಗಳು, ಸ್ಮೃತಿ ಮತ್ತು ಉತ್ತಮ ನಡತೆ, ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು ಮತ್ತು ಶೂದ್ರರು ಎಂಬ ನಾಲ್ಕು ವರ್ಣಗಳ ಕರ್ತವ್ಯಗಳು, ಜೀವನದ ಹಂತಗಳು (ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸ), ಆಹಾರ ಕಾನೂನುಗಳು, ಆಚರಣೆಗಳು ಮತ್ತು ದೈಹಿಕ ಶುಚಿತ್ವ, ಕಾನೂನು ಮತ್ತು ನ್ಯಾಯ ವ್ಯವಸ್ಥೆ, ಸಮಾಜದಲ್ಲಿ ಮಹಿಳೆಯರ ಪಾತ್ರಗಳು, ವಿವಾಹ ನಿಯಮಗಳು ಮತ್ತು ಆನುವಂಶಿಕತೆ, ವಿವಿಧ ಕಾನೂನುಗಳು, ಕರ್ಮ ಮತ್ತು ಪುನರ್ಜನ್ಮದ ತತ್ವಶಾಸ್ತ್ರ, ಪ್ರಾಯಶ್ಚಿತ್ತ ಮತ್ತು ನೈತಿಕತೆ ಹಾಗೂ ಅಂತಿಮವಾಗಿ ಆಧ್ಯಾತ್ಮಿಕ ಗುರಿಗಳು ಮತ್ತು ಮೋಕ್ಷದ ಮಾರ್ಗ ಎಂದು ಸ್ಥೂಲವಾಗಿ ಪಟ್ಟಿ ಮಾಡಬಹುದಾಗಿದೆ.

ಮನುಸ್ಮೃತಿಯು, ಪ್ರಾಚೀನ ಭಾರತೀಯ ಸಮಾಜದಲ್ಲಿನ ರಾಜರು ಮತ್ತು ಆಡಳಿತಗಾರರ ರಾಜ ಧರ್ಮ) ಕರ್ತವ್ಯಗಳು ಮತ್ತು ಜವಾಬ್ದಾರಿಗಳಿಗೆ ಸ್ಪಷ್ಟವಾದ ಚೌಕಟ್ಟನ್ನು ಒದಗಿಸುತ್ತದೆ. ರಾಜರ ಪಾತ್ರವು ಕೇವಲ ರಾಜಕೀಯ ಮಾತ್ರವಲ್ಲ, ಅವರ ಪ್ರಜೆಗಳ ಬಗ್ಗೆ ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಕಟ್ಟಿಕೊಡುವ ಕರ್ತವ್ಯವನ್ನು ಸಹ ಒಳಗೊಂಡಿದೆ. ಜನರನ್ನು ಅವ್ಯವಸ್ಥೆಯಿಂದ ರಕ್ಷಿಸಲು ಮತ್ತು ಸಾಮಾಜಿಕ ಸಾಮರಸ್ಯ, ಶಾಂತಿ ಮತ್ತು ಕಲ್ಯಾಣವನ್ನು ಕಾಪಾಡಿಕೊಳ್ಳಲು ರಾಜನ ಅಧಿಕಾರವನ್ನು ರಚಿಸಲಾಗಿದೆ.

ರಾಜನನ್ನು ನಾಲ್ಕು ವರ್ಣಗಳ ಸಾಮಾಜಿಕ ವ್ಯವಸ್ಥೆಯ ರಕ್ಷಕ ಎಂದು ಇಲ್ಲಿ ಚಿತ್ರಿಸಲಾಗಿದೆ. ತಮ್ಮ ಪ್ರಜೆಗಳನ್ನು ರಕ್ಷಿಸುವುದು ಮತ್ತು ಅವರ ಜೀವನ, ಆಸ್ತಿ ಮತ್ತು ನಂಬಿಕೆಗಳ ಸುರಕ್ಷತೆಯನ್ನು ಖಚಿತಪಡಿಸಿ ಕೊಳ್ಳುವುದು, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು, ಅಪರಾಧ ಗಳನ್ನು ತಡೆಗಟ್ಟುವುದು, ವ್ಯಾಪಾರಿಗಳು ಮತ್ತು ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸಿ ಕೊಳ್ಳುವುದು ರಾಜನ ಪ್ರಾಥಮಿಕ ಕರ್ತವ್ಯವೆಂದು ಹೇಳಲಾಗಿದೆ.

ಅಷ್ಟೇ ಅಲ್ಲದೆ, ಮನುಸ್ಮೃತಿಯು ನ್ಯಾಯಯುತ ಮತ್ತು ದಕ್ಷ ನ್ಯಾಯಾಂಗ ವ್ಯವಸ್ಥೆಯ ಮಹತ್ವ ವನ್ನು ಒತ್ತಿಹೇಳುತ್ತದೆ. ತ್ವರಿತ, ನಿಷ್ಪಕ್ಷಪಾತಿ ಮತ್ತು ಎಲ್ಲರ ಕೈಗೆಟುಕುವ ನ್ಯಾಯವನ್ನು ರಾಜರು ಒದಗಿಸಬೇಕು ಎಂದು ಇದು ಸಾರುತ್ತದೆ.

ದಂಡ ಅಥವಾ ಶಿಕ್ಷೆಯು ಸಾಮಾಜಿಕ ಸುವ್ಯವಸ್ಥೆಯನ್ನು ಕಾಪಾಡುವ ಪ್ರಮುಖ ಸಾಧನವಾಗಿದೆ, ಮಾನವ ಸ್ವಭಾವವು ಸ್ವಾಭಾವಿಕವಾಗಿ ಭ್ರಷ್ಟಾಚಾರಕ್ಕೆ ಗುರಿಯಾಗುತ್ತದೆ, ಶಿಕ್ಷೆಯ ಭಯವು ಜನರನ್ನು ಶಿಸ್ತುಬದ್ಧವಾಗಿಡಲು ಮತ್ತು ಅವರಿಗೆ ನಿಯೋಜಿಸಲಾದ ಸಾಮಾಜಿಕ ಪಾತ್ರಗಳಲ್ಲಿ ಮಾತ್ರ ಪ್ರವೃತ್ತರಾಗಲು ಸಹಾಯಮಾಡುತ್ತದೆ ಎಂದು ಮನುಮಹರ್ಷಿ ನಂಬಿದ್ದ ಹಾಗೆ ಕಾಣಿಸುತ್ತದೆ.

ತಮ್ಮ ಪ್ರಜೆಗಳ ರಕ್ಷಣೆಗಾಗಿ ಅವರಿಂದ ತೆರಿಗೆ ಸಂಗ್ರಹಿಸುವ ಅಧಿಕಾರವನ್ನು ರಾಜರು ಹೊಂದಿದ್ದಾರೆ; ತೆರಿಗೆ ನೀಡುವವನ ಸಾಮರ್ಥ್ಯ ಮತ್ತು ಉದ್ಯೋಗವನ್ನು ಪರಿಗಣಿಸಿ ತೆರಿಗೆಗಳನ್ನು ವಿಧಿಸಬೇಕು ಎಂದು ಪಠ್ಯವು ಸಲಹೆ ನೀಡುತ್ತದೆ. ಸಂಗ್ರಹಿಸಿದ ತೆರಿಗೆಗಳನ್ನು ಜನರ ಕಲ್ಯಾಣಕ್ಕಾಗಿ, ಕೃಷಿ, ವ್ಯಾಪಾರ ಮತ್ತು ಕೈಗಾರಿಕೆಯನ್ನು ಉತ್ತೇಜಿಸಲು ಬಳಸಬೇಕು ಎಂದೂ ಅದು ಹೇಳುತ್ತದೆ.

ಮನುಸ್ಮೃತಿಯು ರಾಜ್ಯಗಳ ನಡುವಿನ ವಿವಾದಗಳನ್ನು ಪರಿಹರಿಸಲು, ರಾಜತಾಂತ್ರಿಕ ಮತ್ತು ಶಾಂತಿಯುತ ವಿಧಾನಗಳನ್ನು ಒತ್ತಿಹೇಳುತ್ತದೆ. ಇಲ್ಲಿ ಯುದ್ಧವನ್ನು ಕೊನೆಯ ಉಪಾಯವೆಂದು ಪರಿಗಣಿಸಲಾಗುತ್ತದೆ. ಇದನ್ನು ಪ್ರಾಥಮಿಕವಾಗಿ ಸ್ವರಕ್ಷಣೆ ಅಥವಾ ಪ್ರದೇಶದ ವಿಸ್ತರಣೆಗಾಗಿ ಮಾತ್ರ ಸಮರ್ಥಿಸಲಾಗುತ್ತದೆ.

ನಾಗರಿಕರು ಮತ್ತು ದುರ್ಬಲರ ರಕ್ಷಣೆ, ಪ್ರಮಾಣಾನುಗುಣವಾದ ಬಲಪ್ರಯೋಗ ಮತ್ತು ಶರಣಾಗು ವವರಿಗೆ ಹಾನಿ ಮಾಡದಿರುವುದು ಸೇರಿದಂತೆ, ನ್ಯಾಯಯುತ ಯುದ್ಧದ ನಿಯಮಗಳನ್ನು ಸಹ ಇದು ವಿವರಿಸುತ್ತದೆ. ಮನುಸ್ಮೃತಿಯು ರಾಜನ ಆಡಳಿತದಲ್ಲಿ ನೈತಿಕತೆ ಮತ್ತು ಧಾರ್ಮಿಕ ತತ್ವಗಳ ಮಹತ್ವವನ್ನು ಒತ್ತಿ ಹೇಳುತ್ತದೆ.

ರಾಜನು ನೀತಿವಂತ, ಪ್ರಾಮಾಣಿಕ ಮತ್ತು ನಿಗದಿತ ನೀತಿ ಸಂಹಿತೆಗಳನ್ನು ಅನುಸರಿಸಬೇಕೆಂದು ನಿರೀಕ್ಷಿಸಲಾಗುತ್ತದೆ. ಆದರ್ಶ ರಾಜನನ್ನು ಸ್ವಯಂ ನಿಯಂತ್ರಿತ, ಶುದ್ಧ, ನಿಷ್ಪಕ್ಷಪಾತ ಮತ್ತು ಗೌರವಾನ್ವಿತ ಎಂದು ಇದರಲ್ಲಿ ವಿವರಿಸಲಾಗಿದೆ. ಅವರು eನವುಳ್ಳವರಾಗಿರಬೇಕು, ಬುದ್ಧಿವಂತ ರಾಗಿರಬೇಕು, ದೃಢವಾಗಿರಬೇಕು ಎಂದು ಇದು ಹೇಳುತ್ತದೆ.

ಪ್ರಾಚೀನ ಭಾರತೀಯ ಸಮಾಜವನ್ನು ರೂಪಿಸುವಲ್ಲಿ ಐತಿಹಾಸಿಕವಾಗಿ ಮಹತ್ವದ ಮತ್ತು ಪ್ರಭಾವ ಶಾಲಿಯಾದ ಪಾತ್ರವನ್ನು ಮನುಸ್ಮೃತಿ ನಿರ್ವಹಿಸಿದ್ದರೂ, ಜಾತಿ ವ್ಯವಸ್ಥೆಯನ್ನು ಉತ್ತೇಜಿಸಿದ್ದಕ್ಕಾಗಿ ಹಾಗೂ ಮಹಿಳೆಯರು ಮತ್ತು ಕೆಳಜಾತಿಗಳ ವಿರುದ್ಧ ತಾರತಮ್ಯ ಮಾಡುವ ಪಿತೃಪ್ರಧಾನ ದೃಷ್ಟಿಕೋನಗಳನ್ನು ಅನುಮೋದಿಸಿದ್ದಕ್ಕಾಗಿ ಅದು ಟೀಕೆಗಳನ್ನು ಎದುರಿಸಿದೆ.

ಜಾತಿ ವ್ಯವಸ್ಥೆಯನ್ನು ಉತ್ತೇಜಿಸುವುದು, ಲಿಂಗ ಅಸಮಾನತೆ ಮತ್ತು ಕೆಲವು ಗುಂಪುಗಳಿಗೆ ಕಠಿಣ ಶಿಕ್ಷೆಗಳನ್ನು ವಿಽಸಿದ್ದಕ್ಕಾಗಿ ಮನುಸ್ಮೃತಿ ವಿವಾದಾತ್ಮಕ ಗ್ರಂಥವಾಗಿದೆ. ಈ ಪಠ್ಯವು ಜಾತಿ ವ್ಯವಸ್ಥೆ ಯಲ್ಲಿ ಕೆಳಗಿರುವವರಿಗೆ ಕಠಿಣ ಶಿಕ್ಷೆಗಳನ್ನು ಒಳಗೊಂಡಂತೆ ಕಟ್ಟುನಿಟ್ಟಾದ ಜಾತಿ ಶ್ರೇಣಿಯನ್ನು ಸಮರ್ಥಿಸುತ್ತದೆ ಎನ್ನುವವರಿದ್ದಾರೆ.

ಅಷ್ಟೇ ಅಲ್ಲದೆ, ‘ಇದು ಮಹಿಳೆಯರ ಸ್ವಾತಂತ್ರ್ಯವನ್ನು ಕಸಿಯುವಂಥಾದ್ದಾಗಿದೆ, ಉದಾಹರಣೆಗೆ, ಮಹಿಳೆ ಯಾವಾಗಲೂ ತನ್ನ ತಂದೆ, ಪತಿ ಅಥವಾ ನಂತರ ಮಕ್ಕಳ ಅಧೀನಳಾಗಿ ಇರಬೇಕು ಎಂದು ಹೇಳುತ್ತದೆ’ ಎಂದು ಕೆಲವರು ದೂರುತ್ತಾರೆ. ವಾಸ್ತವಿಕವಾಗಿ ನೋಡಿದರೆ, ಜಾತಿ-ವರ್ಣವ್ಯವಸ್ಥೆಗಳು ಕೇವಲ ಹಿಂದೂ ಸಮಾಜದಲ್ಲಿರುವ ಸಂಗತಿಯಲ್ಲ.

ಇಸ್ಲಾಮ, ಕ್ರಿಶ್ಚಿಯನ್ ಹಾಗೂ ಬೌದ್ಧ ಧರ್ಮಗಳಲ್ಲೂ, ಮೇಲು-ಕೀಳು ಎಂಬ ತಾರತಮ್ಯ ಇದ್ದೇ ಇದೆ. ಹಾಗೆ ನೋಡಿದರೆ, ಇತರ ಧರ್ಮಗಳಲ್ಲಿ ಅದು ಹಿಂದೂ ಧರ್ಮದಲ್ಲಿರುವುದಕ್ಕಿಂತ ಹೆಚ್ಚಾ ಗಿಯೇ ಇದೆ ಎಂತಲೇ ಹೇಳಬಹುದಾಗಿದೆ. ಆದರೆ ದೂರುವುದಕ್ಕೆ ಮಾತ್ರ ಹಿಂದೂ ಧರ್ಮವನ್ನು ಕೆಲವರು ಬಳಸಿಕೊಳ್ಳುತ್ತಾರಷ್ಟೇ.

ಕೆಲವು ವರ್ಷಗಳ ಹಿಂದೆ ‘ಬಿಬಿಸಿ’ ವಾಹಿನಿಯು, ಮನುಸ್ಮೃತಿಯಲ್ಲಿ ಪ್ರತಿಪಾದಿಸಲಾಗಿದೆ ಎಂದು ಹೇಳಲಾಗುವ ತಾರತಮ್ಯಗಳ ಕುರಿತು ಒಂದು ಕಾರ್ಯಕ್ರಮವನ್ನು ಬಿತ್ತರಿಸಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಇತಿಹಾಸವನ್ನು ನೋಡಿದರೆ, ಬ್ರಾಹ್ಮಣರನ್ನೂ ಸೇರಿ ಮೇಲುವರ್ಗದವರು ಎಂದು ಕರೆಯಿಸಿಕೊಳ್ಳುವವರು ಯಾರೂ, ಅಧಿಕಾರದ ಅಥವಾ ಕಾನೂನು ರಚಿಸುವ ದಂಡನೆಯ ಸ್ಥಾನದಲ್ಲಿ ಇದ್ದಿರುವುದು ನಮಗೆ ಕಂಡುಬರುವುದಿಲ್ಲ.

ಬ್ರಾಹ್ಮಣರಂತೂ ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಯಾವತ್ತೂ ಸಬಲರಾಗಿರಲಿಲ್ಲ; ಬ್ರಾಹ್ಮಣ ಯಾವಾಗಲೂ ‘ಬಡಬ್ರಾಹ್ಮಣ’ನೇ ಆಗಿದ್ದ. ಇನ್ನೂ ಮುಂದೆ ಹೋಗಿ ನೋಡಿದರೆ, ಈ ಸ್ಮೃತಿಗ್ರಂಥದ ರಚನಾಕಾರನಾದ ಮನುವು ಯಾವ ಜಾತಿಗೆ ಸೇರಿದ್ದ ಎನ್ನುವ ಮಾಹಿತಿಯೂ ಇಲ್ಲ. ಬ್ರಾಹ್ಮಣರಿಗೆ ಗಾಯತ್ರೀ ಮಂತ್ರವನ್ನು ಕೊಟ್ಟ ಮಹರ್ಷಿ ವಿಶ್ವಾಮಿತ್ರ, ಹಿಂದೆ ಕ್ಷತ್ರಿಯ ರಾಜನಾಗಿದ್ದ ಎನ್ನುವುದನ್ನು ನೋಡುವಾಗ, ಸಮಾಜಕ್ಕೆ ಒಂದು ವ್ಯವಸ್ಥೆಯನ್ನು ರೂಪಿಸಿಕೊಟ್ಟ ಮನು, ಬ್ರಾಹ್ಮಣನೇ ಆಗಿರಬೇಕಿಲ್ಲವಲ್ಲ!

ಹಾಗೆ ನೋಡಿದರೆ, ಈ ಸ್ಮೃತಿಗ್ರಂಥದ 2600 ಶ್ಲೋಕಗಳಲ್ಲಿ ಬಹುಪಾಲು ಶ್ಲೋಕಗಳು ಮೇಲ್ವರ್ಗ ದವರು ಎನಿಸಿಕೊಂಡಿರುವವರಿಗೆ ಮತ್ತು ಅಽಕಾರದ ಸ್ಥಾನದಲ್ಲಿರುವವರಿಗೆ ನಿಯಮವನ್ನೂ ಹಾಗೂ ತಪ್ಪಿದಲ್ಲಿ ಕಠಿಣವಾದ ಶಿಕ್ಷೆಗಳನ್ನೂ ಹೇಳುವುದಕ್ಕೇ ಮೀಸಲಿಟ್ಟಿದ್ದಾನೆ ಮನು.

ಇನ್ನು, ಈ ಮಾನವಧರ್ಮ ಶಾಸವನ್ನು ಕೇವಲ ಮನು ಎನ್ನುವವನೊಬ್ಬ ರಚಿಸಿದ್ದಾನೆ ಎಂತಲೂ ನಿರ್ಧಾರವಾಗಿ ಹೇಳಲಾಗದು. ಅನೇಕ ಜ್ಞಾನಿಗಳು ಸೇರಿ ಸಮಷ್ಟಿಯಿಂದ ಈ ನೀತಿಶಾಸ್ತ್ರದ ಗ್ರಂಥ ವನ್ನು ರಚಿಸಿರಲಿಕ್ಕೂ ಸಾಕು. ಅದರ ಮುಂದಾಳತ್ವವನ್ನು ಮನು ಎನ್ನುವ ಋಷಿ ವಹಿಸಿದ್ದ ರಿಂದ, ಅದಕ್ಕೆ ‘ಮನುಸ್ಮೃತಿ’ ಎನ್ನುವ ಹೆಸರು ಬಂದಿರುವ ಸಾಧ್ಯತೆಗಳೂ ಇವೆ. ನಮ್ಮ ಸಂವಿಧಾನ ರಚನೆಗೆ ಒಂದು ಸಮಿತಿ ಇತ್ತು ಮತ್ತು ಡಾ. ಅಂಬೇಡ್ಕರ್ ಅವರು ಆ ಸಮಿತಿಯ ಅಧ್ಯಕ್ಷರಾಗಿ ಸಂವಿಧಾನ ರಚನೆಯ ಕಾರ್ಯಭಾರವನ್ನು ಸಮರ್ಥವಾಗಿ ನಿರ್ವಹಿಸಿದ್ದರಿಂದ, ಬಾಯಿಮಾತಿಗೆ ‘ಇದು ಅಂಬೇಡ್ಕರ್ ರಚಿತ ಸಂವಿಧಾನ’ ಎನ್ನುವುದಿಲ್ಲವೇ? ಹಾಗೆ ಇದು ‘ಮನುಸ್ಮೃತಿ’ ಎಂದಾಗಿರ ಬಹುದು.

ಇನ್ನು, ‘ನ ಸೀ ಸ್ವಾತಂತ್ರ್ಯಮರ್ಹತಿ’ ಎನ್ನುವ ಮಾತನ್ನು ಮನುಸ್ಮೃತಿಯಲ್ಲಿ ಹೇಳಿದ್ದಾರೆ ಎನ್ನು ವವರಿಗೆ, ‘ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ’ ಎನ್ನುವ ಅದೇ ಮನುಸ್ಮೃತಿಯ ಮಾತು ಅರ್ಥವಾಗುವುದೇ ಇಲ್ಲ. ಅಥವಾ ಇರಾನ್, ಅ-ನಿಸ್ತಾನ ಹಾಗೂ ಪಾಕಿಸ್ತಾನಗಳಂಥ ಇತರ ದೇಶಗಳಲ್ಲಿ ಅಥವಾ ಧರ್ಮಗಳಲ್ಲಿ, ಮೂಲಭೂತವಾದಿಗಳು ಮಹಿಳೆಯರನ್ನು ಇವತ್ತಿಗೂ ಹೇಗೆ ನಡೆಸಿಕೊಳ್ಳುತ್ತಿದ್ದಾರೆ ಎನ್ನುವುದು ಕಾಣುವುದೇ ಇಲ್ಲ.

ಅವರುಗಳಿಗೆ ತಾಲೀಬಾನ್ ವ್ಯವಸ್ಥೆ, ಐಎಸ್‌ಐ ಮುಂತಾದ ಸಂಘಟನೆಗಳು ಮಹಿಳೆಯರನ್ನು ನಡೆಸಿಕೊಳ್ಳುತ್ತಿರುವ ರೀತಿ ಸರಿಯಾಗೇ ಕಾಣಿಸುತ್ತದೆ. ಭಾರತದ ಇದ್ದ ‘ತ್ರಿವಳಿ ತಲಾಖ್’ ಪದ್ಧತಿ ಸರಿಯಾಗೇ ಇದೆ ಎನಿಸುತ್ತದೆ. ಮನುಸ್ಮೃತಿಯನ್ನು ಪ್ರವರ್ತಿಸಿದ ದೇಶದಲ್ಲಿ ಇಂದು ಸರ್ವಕ್ಷೇತ್ರ ಗಳಲ್ಲಿ ಮಹಿಳೆಯರು ಸಾಧನೆ ಮಾಡುತ್ತಿರುವುದು ಇವರ ಅರಿವಿಗೇ ಬರುವುದಿಲ್ಲ. ಒಂದು ಮಾತನ್ನಂತೂ ನಿರ್ಧಾರವಾಗಿ ಹೇಳಬಹುದು- ಮಹಿಳೆಯರಿಗೆ ಭಾರತೀಯ ಸನಾತನ ಸಂಸ್ಕೃತಿ ನೀಡಿದ ಮರ್ಯಾದೆಯನ್ನು ಇನ್ನಾವ ಸಂಸ್ಕೃತಿಯೂ ನೀಡಿಲ್ಲ.

ಸಮಕಾಲೀನ ಹಿಂದೂ ಧರ್ಮವು ಸಾರ್ವತ್ರಿಕವಾಗಿ ಮನುಸ್ಮೃತಿಯನ್ನು ಅನುಸರಿಸುತ್ತಿಲ್ಲ ಮತ್ತು ಅನೇಕ ಆಧುನಿಕ ಹಿಂದೂ ಚಿಂತಕರು ಅದರ ವಿವಾದಾತ್ಮಕ ಅಂಶಗಳಿಂದ ಅಂತರವನ್ನು ಕಾಯ್ದು ಕೊಂಡು ಬರುತ್ತಾರೆ. ಮನುಸ್ಮೃತಿಯ ಪರವಾಗಿ ಮಾತನಾಡಿದರೆ ನಾವು ಸಮಾಜದಲ್ಲಿ ಖಳನಾಯಕರಾಗುತ್ತೇವೆ ಎನ್ನುವ ಭಾವನೆ ಈ ಪಂಡಿತರುಗಳಿಗಿದೆ.

ಅದೇ ಇನ್ನೊಂದು ಕಡೆ, ಇಂದಿನ ಕಾಲಕ್ಕೆ ಪ್ರಸ್ತುತವಲ್ಲದಿದ್ದರೂ, ‘ಮನುಸ್ಮೃತಿಯನ್ನು ಹೀಗಳೆದರೆ ಅಥವಾ ಅದರ ಪ್ರತಿಯನ್ನು ಸುಟ್ಟರೆ, ಪ್ರಗತಿಪರರು ಎನಿಸಿಕೊಂಡು ರಾಜಕೀಯವಾಗಿ ಬೆಳೆಯ ಬಹುದು’ ಎನ್ನುವ ವಾತಾವರಣವಿದೆ. ‘ಮನುಸ್ಮೃತಿಯ ಪ್ರಸ್ತುತತೆಯು ಅದರ ಕಾಲಘಟ್ಟಕ್ಕೆ ಸೀಮಿತವಾಗಿದೆ’ ಎಂದು ಕೆಲವರು ವಾದಿಸಿದರೆ, ‘ಸಾಮಾಜಿಕ ರಚನೆಗಳು ಮತ್ತು ವರ್ತನೆಗಳ ಮೇಲೆ ಅದರ ಪ್ರಭಾವ ಇಂದಿಗೂ ಇದೆ’ ಎನ್ನುವವರೂ ಇದ್ದಾರೆ.

ದೃಷ್ಟಿಕೋನದ ಅಗತ್ಯವಿದೆ; ಇಂದಿನ ಸಂದರ್ಭದಲ್ಲಿ ಮನುಸ್ಮೃತಿಯನ್ನು ವಿಶ್ಲೇಷಣೆ ಮಾಡುವಾಗ ಅದನ್ನು ಅದರ ಕಾಲಕ್ಕೆ ಹೋಗಿ ನೋಡುವುದು ಅಗತ್ಯವಾಗಿದೆ. ಸನಾತನ ಧಾರ್ಮಿಕತೆ, ಸಾರ್ವ ಕಾಲಿಕವಾದ ಕಾನೂನು ಅಥವಾ ನ್ಯಾಯದಾನ, ವೇದಕಾಲದ ಇತಿಹಾಸ ಮತ್ತು ಜಗತ್ತು ಮೆಚ್ಚಿದ್ದ ನಮ್ಮ ಭಾರತೀಯ ಪುರಾತನ ತತ್ವಶಾಸ್ತ್ರಗಳ ಕುರಿತು ಆಸಕ್ತಿ ಹೊಂದಿರುವವರಿಗೆ, ಮನುಸ್ಮೃತಿ ಇಂದಿಗೂ ಆಕರ ಗ್ರಂಥವಾಗಿ ಸಹಾಯಮಾಡುತ್ತದೆ.

ವಿಚಿತ್ರವೆಂದರೆ, ಜಿಹಾದಿ ಮನಸ್ಥಿತಿಗಳನ್ನು ಪ್ರವರ್ತಿಸುವ ಅನ್ಯ ಸಂಸ್ಕೃತಿಗಳ ಗ್ರಂಥಗಳು ನಮ್ಮಲ್ಲಿ ಕೆಲವರಿಗೆ ಸ್ವೀಕಾರಾರ್ಹ ಮತ್ತು ಸ್ತುತ್ಯರ್ಹ; ಆದರೆ ಸಮಾಜದಲ್ಲಿ ಶಿಸ್ತನ್ನು ರೂಪಿಸುವ ಮತ್ತು ಸಮಾಜಮರ್ಯಾದೆ ಎಂದರೆ ಏನು ಎನ್ನುವುದನ್ನು ಜಗತ್ತಿಗೆ ಕಲಿಸಿಕೊಟ್ಟ, ಒಟ್ಟಾರೆ ಸಾರ್ವಕಾಲಿಕ ವಾದ ಲೋಕಹಿತದ ಉಪದೇಶಗಳನ್ನು ನೀಡುವ ನಮ್ಮದೇ ಆದ ಸ್ಮೃತಿಗ್ರಂಥಗಳೆಂಬ ‘ಜ್ಞಾನದ ಬುತ್ತಿ’ ಇಂಥವರಿಗೆ ನಮಗೆ ಅಪಥ್ಯ! ಇಂಥ ಚಿತ್ತಸ್ಥಿತಿಯವರಿಗೆ ಏನೂ ಮಾಡಲಾಗದು...!