ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vinayak V Bhat Column: ಅಲ್ಲಿರುವುದು ನಮ್ಮನೆ...ಇಲ್ಲಿ ಬಂದೆ ಸುಮ್ಮನೆ !

ಹಿಂದೆ ಹಳ್ಳಿಗಳಲ್ಲಿ ಆಧುನಿಕತೆಯ ಸ್ಪರ್ಶವೂ ಇರುತ್ತಿರಲಿಲ್ಲ. ಆಗ, ಅಲ್ಲಿನವರು ತಮ್ಮ ಜೀವಿತಾವಧಿ ಯನ್ನೆ ತಮ್ಮ ಕಸುಬು, ಕುಟುಂಬ ಜೀವನವನ್ನು ಸಾಗಿಸುವುದರ ಕಳೆದುಬಿಡುತ್ತಿದ್ದರು. ಮಳೆಗಾಲದ ಪ್ರಾರಂಭಕ್ಕೂ ಮುನ್ನ ಹತ್ತಿರದ ಪಟ್ಟಣಗಳಿಗೆ ತೆರಳಿ ಮಳೆಗಾಲಕ್ಕೆ ಸಾಕಾಗುವಷ್ಟು ಕಿರಾಣಿ ಸಾಮಾನು ಗಳನ್ನು ಸಂಗ್ರಹ ಮಾಡಿಟ್ಟುಕೊಳ್ಳುತ್ತಿದ್ದರು.

ಅಲ್ಲಿರುವುದು ನಮ್ಮನೆ...ಇಲ್ಲಿ ಬಂದೆ ಸುಮ್ಮನೆ !

ವಿದ್ಯಮಾನ

vinayakavbhat@autoaxle.com

ನಾವೀಗ ಪಟ್ಟಣವಾಸಿಗಳಾಗಿದ್ದರೂ, ನಮಗೆಲ್ಲ ನಮ್ಮ ಹಳ್ಳಿಗಳೆಂದರೆ ಪ್ರೀತಿ. ಇಂದಿಗೂ ಊರಿಗೆ ಹೋಗುವುದೆಂದರೆ, ಅದು ನವವಿವಾಹಿತೆಯೊಬ್ಬಳು ತವರು ಮನೆಗೆ ಹೋಗುವ ಸಂಭ್ರಮ ದಂತಿರುತ್ತದೆ. ಕರ್ನಾಟಕದ ಹಳ್ಳಿಗಳೆಂದರೆ, ಸಾಮಾನ್ಯವಾಗಿ ವಿವಿಧ ಜಾತಿ ವರ್ಗಗಳ, ಕುಲ ಕಸುಬು ಗಳನ್ನು ಮಾಡುವ ಜನರು ತುಂಬಿ ರುವ ಕಾಲವಿತ್ತು.

ಕೃಷಿಯನ್ನೇ ಪ್ರಧಾನ ಕಸುಬಾಗಿಟ್ಟುಕೊಂಡು ಜೀವನ ನಿರ್ವಹಿಸುವ ಒಂದಷ್ಟು ಕುಟುಂಬಗಳ ಸಮೂಹ ಅದಾಗಿರುತ್ತಿತ್ತು. ಹಳ್ಳಿಗಳ ಮನೆಮನೆಗಳಲ್ಲೂ, ಅಜ್ಜ- ಅಜ್ಜಿಯರಂಥ ಅನುಭವಸ್ಥ ಹಿರಿಯ ಜೀವಗಳು ಇರುತ್ತಿದ್ದವು. ಜತೆಗೆ, ಮುಂದಿನ 2 ತಲೆಮಾರಿನವರು ಅಂದರೆ, ಮಕ್ಕಳು- ಮೊಮ್ಮಕ್ಕಳು ಆ ಮನೆಯಲ್ಲಿ ವಾಸಿಸುತ್ತ ಆನಂದದಿಂದ ಜೀವನ ಸಾಗಿಸುವ ಕಾಲವೊಂದಿತ್ತು.

40-50 ಜನ ಒಟ್ಟಾಗಿ ಜೀವಿಸುವ ಅವಿಭಕ್ತ ಕುಟುಂಬಗಳು ಹೆಚ್ಚಾಗಿದ್ದ ಕಾಲವದು. ಆ ಮನೆಯ ಹಿರಿಯನೇ ಅವಿಭಕ್ತ ಕುಟುಂಬದ ರಕ್ಷಾಕರ್ತನಾಗಿರುತ್ತಿದ್ದ. ಆತನ ಮಾತೆಂದರೆ ಮನೆಯವರಿಗೆ ವೇದವಾಕ್ಯವಾಗಿರುತ್ತಿತ್ತು. ನಮ್ಮ ತಾತನ ತಲೆಮಾರಿನ ಹಳ್ಳಿಯ ಬದುಕನ್ನು ಒಂದು ಕ್ಷಣ ಅವಲೋಕಿಸಿದರೆ ಇಂದಿನ ಹಳ್ಳಿಗಳ ಬಗ್ಗೆ ಬೇಸರವಾಗುತ್ತದೆ.

ಇದನ್ನೂ ಓದಿ: Vinayak V Bhat Column: ಶತಮಾನ ಕಳೆದರೂ ತಗ್ಗದ ಅಮೃತಾಂಜನದ ಘಮ

ಹಿಂದೆ ಹಳ್ಳಿಗಳಲ್ಲಿ ಆಧುನಿಕತೆಯ ಸ್ಪರ್ಶವೂ ಇರುತ್ತಿರಲಿಲ್ಲ. ಆಗ, ಅಲ್ಲಿನವರು ತಮ್ಮ ಜೀವಿತಾವಧಿಯನ್ನೆ ತಮ್ಮ ಕಸುಬು, ಕುಟುಂಬ ಜೀವನವನ್ನು ಸಾಗಿಸುವುದರ ಕಳೆದು ಬಿಡು ತ್ತಿದ್ದರು. ಮಳೆಗಾಲದ ಪ್ರಾರಂಭಕ್ಕೂ ಮುನ್ನ ಹತ್ತಿರದ ಪಟ್ಟಣಗಳಿಗೆ ತೆರಳಿ ಮಳೆಗಾಲಕ್ಕೆ ಸಾಕಾಗುವಷ್ಟು ಕಿರಾಣಿ ಸಾಮಾನುಗಳನ್ನು ಸಂಗ್ರಹ ಮಾಡಿಟ್ಟುಕೊಳ್ಳುತ್ತಿದ್ದರು.

ಮಳೆಗಾಲವೂ ಹಾಗೇ ಇರುತ್ತಿತ್ತು, ಶುರುವಾದ ಮೇಲೆ ಬಿಡುವೇ ಇರುತ್ತಿರಲಿಲ್ಲ. ಅದು ಸಾರಿಗೆ ವ್ಯವಸ್ಥೆ ಸರಿಯಾಗಿ ಇರುತ್ತಿರದ ಕಾಲವಾದ್ದರಿಂದ ಪಟ್ಟಣಕ್ಕೆ ಹೋಗಿಬರುವುದು ಅಸಾಧ್ಯವೇ ಆಗಿತ್ತು. ಬಹುತೇಕ ಹಳ್ಳಿಗಳಲ್ಲಿ ವಿದ್ಯುತ್ತಿನ ಸರಬರಾಜೇ ಇರುತ್ತಿರಲಿಲ್ಲ, ಇದ್ದರೂ ಮಳೆಗಾಲದಲ್ಲಿ ಒಂದು ದಿನವಿದ್ದರೆ ಮೂರು ದಿನ ಇರುತ್ತಿರಲಿಲ್ಲ. ಎಲ್ಲರ ಮನೆಗಳಲ್ಲಿ ಮೇಣದ ಬತ್ತಿಯೂ ಇರುತ್ತಿರ ಲಿಲ್ಲ, ಸೀಮೆಎಣ್ಣೆ ಬಳಸಿ ಉರಿಯುತ್ತಿದ್ದ ಚಿಮಣಿ- ಲಾಟೀನುಗಳೇ ಬೆಳಕಿಗೆ ಸಾಧನ ವಾಗಿತ್ತು.

ಮನರಂಜನೆ ಹಾಗೂ ದೇಶದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ರೇಡಿಯೋ ಬಿಟ್ಟರೆ ಇನ್ನಾವುದೇ ಸಾಧನವಿರುತ್ತಿರಲಿಲ್ಲ. ಮನೆಯ ಹೆಂಗಸರು ಅಡುಗೆ ಮಾಡಲು, ನೀರೆತ್ತಲು ಹಾಗೂ ಬಟ್ಟೆ ತೊಳೆಯಲು ರಟ್ಟೆಯನ್ನು ಮಾತ್ರ ನಂಬಬೇಕಿತ್ತು. ಅವರ ಸಹಾಯಕ್ಕೆ ಯಾವ ಆಧುನಿಕ ಉಪಕರಣಗಳೂ ಇರುತ್ತಿರಲಿಲ್ಲ.

7 R

ಇನ್ನು, ಹಳ್ಳಿಯ ರಸ್ತೆಗಳ ಕಥೆಯನ್ನಂತೂ ಕೇಳುವುದೇ ಬೇಡ. ಆಗ ಇಂದಿನಂತೆ ಆಧುನಿಕ ಕೃಷಿ ಯಂತ್ರಗಳ ಆವಿಷ್ಕಾರವಾಗಿರಲಿಲ್ಲ. ಆದರೆ, ಕೃಷಿ ಕೂಲಿಕಾರರಿಗೆ ಕೊರತೆಯಿರಲಿಲ್ಲ. ಅನೇಕ ಹಳ್ಳಿ ಗಳಲ್ಲಿ ಒಬ್ಬರ ಮನೆಯ ಕೆಲಸಕ್ಕೆ ಇನ್ನೊಬ್ಬರು ಹೋಗುವುದು, ಮತ್ತೆ ಇವರ ಮನೆ ಕೆಲಸಕ್ಕೆ ಅವರು ಬಂದು ಅದನ್ನು ತೀರಿಸುವ ’ಮುರಿಯಾಳು’ ಪದ್ಧತಿಯಿತ್ತು. ಇದನ್ನು ಅಳವಡಿಸಿಕೊಂಡ ಹಳ್ಳಿಗರಿಗೆ ತಮ್ಮ ಕೆಲಸಕ್ಕೆ ಹಣ ಖರ್ಚುಮಾಡುವ ಅಗತ್ಯಬರುತ್ತಿರಲಿಲ್ಲ.

ಎಲ್ಲರೂ ಎಲ್ಲರ ಕೆಲಸದಲ್ಲೂ ನೆರವಾಗುತ್ತಿದ್ದರು. ಮನೆಗಳಲ್ಲಿ ಮದುವೆ ಮುಂತಾದ ಸಮಾರಂಭ ಗಳಾದರೆ, ಎರಡು ದಿನ ಊರಿನ ಯಾರ ಮನೆಯಲ್ಲೂ ಅಡುಗೆ ಮಾಡುತ್ತಿರಲಿಲ್ಲ. ಎಲ್ಲರೂ ಮದುವೆ ಮನೆಗೆ ಬಂದು ತಮಗೆ ವಹಿಸಿದ ಕೆಲಸಮಾಡಿ, ಅ ಊಟಮಾಡಿ ಹೋಗುವುದು ರೂಢಿಯಾಗಿತ್ತು. ಹಳ್ಳಿಗರಲ್ಲಿ ಸಣ್ಣ ಪುಟ್ಟ ಜಗಳಗಳಿದ್ದರೂ, ಅಂದು ಒಂದು ರೀತಿಯ ಒಗ್ಗಟ್ಟಿರುತ್ತಿತ್ತು. ಅವರು ಆರಾಧಿಸುವ ಗ್ರಾಮದೇವರುಗಳಿಗೆ ವಾರ್ಷಿಕ ಪೂಜೆ ಸಲ್ಲುತ್ತಿತ್ತು.

ಇಂಥ ತೇರು-ಜಾತ್ರೆಗಳಲ್ಲಿ ನಾಟಕ, ಭಜನೆ ಮುಂತಾದ ಸಾಂಸ್ಕೃತಿಕ ಚಟುವಟಿಕೆಗಳು, ಕ್ರೀಡೆಗಳು ನಡೆಯುತ್ತಿದ್ದವು. ಇಂದಿಗೂ ಕೆಲವೊಂದು ಹಳ್ಳಿಗಳಲ್ಲಿನ ತಾತ-ಅಜ್ಜಿಯರನ್ನು ನೋಡಿದರೆ, ಅವರು ಯಾವುದಾದರೊಂದು ಕಲೆಯಲ್ಲಿ ಪ್ರವೀಣರಿರುತ್ತಾರೆ. ಜಾನಪದ ಹಾಡುಗಳು, ಕಥೆ-ಹರಿಕಥೆ ಹೀಗೆ ಬೇರೆ ಬೇರೆ ಊರಿಗೆ ಅದರದ್ದೇ ಅದ ಸಾಂಸ್ಕೃತಿಕ ಗುರುತು ಇರುತ್ತಿತ್ತು.

ಇನ್ನು, ನಾಟಿ ಔಷಧಿ ತಯಾರಿಸಿ ಬೇರೆ ಬೇರೆ ರೋಗಕ್ಕೆ ಕೊಡುವ ಸಿದ್ಧೌಷಧಿಯ ಪರಿಣತರೂ ಹಳ್ಳಿಗಳಲ್ಲಿ ಸಿಗುತ್ತಿದ್ದರು. ಅಲೋಪತಿ ಪದ್ಧತಿಯ ಮೇಲಿನ ಅವಲಂಬನೆ ತೀರಾ ಕಡಿಮೆಯಿದ್ದ ಕಾಲವದು. ಹತ್ತಿರದ ಪೇಟೆ ಪಟ್ಟಣಗಳಲ್ಲೂ ಆಸ್ಪತ್ರೆಗಳು ಕಡಿಮೆಯೇ. ಇಂದಿನಂತೆ ದೂರವಾಣಿ-ದೂರದರ್ಶನಗಳಿರಲಿಲ್ಲ, ಎಲ್ಲರ ಮನೆಯಲ್ಲೂ ಹಸು ಎಮ್ಮೆಗಳ ಸಾಕಣೆ ಇರುತ್ತಿದ್ದರಿಂದ ಹಾಲು-ಮೊಸರು, ಬೆಣ್ಣೆ-ತುಪ್ಪಕ್ಕೆ ಕೊರತೆಯಿರುತ್ತಿರಲಿಲ್ಲ.

ಇಂದಿನಂತೆ ದ್ವೇಷ-ಅಸೂಯೆ ಜಾಸ್ತಿ ಯಿರಲಿಲ್ಲ, ಒಬ್ಬರಿಗೊಬ್ಬರು ಮಾದರಿಯಾಗಿ ಜೀವಿಸು ತ್ತಿದ್ದರು. ಆದರೆ, ಇಂದಿನ ಹಳ್ಳಿಗಳಲ್ಲಿ ಆಧುನಿಕತೆಯಿದೆ, ದೂರವಾಣಿ ದೂರದರ್ಶನಗಳು ಸೇರಿದಂತೆ, ಪಟ್ಟಣಗಳಲ್ಲಿ ದೊರೆಯುವ ಎಲ್ಲ ಸೌಲಭ್ಯಗಳು ಅಲ್ಲಿ ದೊರಕುತ್ತಿವೆ. ರಸ್ತೆಗಳು, ಸಂಚಾರ ವ್ಯವಸ್ಥೆ ಬಹಳಮಟ್ಟಿಗೆ ಸುಧಾರಿಸಿವೆ. ಪ್ರತಿ ಮನೆಗೆ ಎರಡರಂತೆ ಮೋಟಾರ್ ಬೈಕುಗಳಿವೆ. ಕಾರು-ಜೀಪುಗಳು ಅನೇಕ ಮನೆಗಳಲ್ಲಿವೆ.

ಈಗಲೂ ಕೃಷಿ ಎನ್ನುವುದು ಲಾಭದಾಯಕವಾಗಿಲ್ಲದಿದ್ದರೂ, ಮೊದಲಿಗೆ ಹೋಲಿಸಿದರೆ, ಈಗ ಬೆಳೆದ ಫಸಲಿಗೆ ತಕ್ಕಮಟ್ಟಿನ ಬೆಲೆಯೂ ಸಿಗುತ್ತಿವೆ. ಬೆಳೆ ಸಾಲ, ಬೆಳೆ ಕೈಕೊಟ್ಟರೆ ಬೆಳೆವಿಮೆಗಳು ಸರಕಾರದಿಂದ ನೇರವಾಗಿ ರೈತರ ಖಾತೆಗೆ ವರ್ಗಾವಣೆಯಾಗುತ್ತಿವೆ. ಇನ್ನು ಗ್ಯಾರಂಟಿ ಭಾಗ್ಯ ಗಳಿಂದಾಗಿ, ದುಡ್ಡು, ಧಾನ್ಯ, ವಿದ್ಯುತ್ ಸರಬರಾಜುಗಳು ಬಡವರಿಗೆ ಪುಕ್ಕಟೆಯಾಗಿ ಸಿಗುತ್ತಿವೆ. ಹಾಗಾಗಿ ಕೃಷಿಕಾರ್ಮಿಕರು ಆಲಸಿಗಳಾಗುತ್ತಿದ್ದಾರೆ ಎನ್ನುವ ಮಾತುಗಳನ್ನೂ ಕೇಳುತ್ತೇವೆ. ಹಳ್ಳಿಯಲ್ಲಿ ಈಗ ಒಂದು ರೀತಿಯಲ್ಲಿ ಸುಖವಿದೆ. ಎಲ್ಲವೂ ಇದೆ, ಆದರೆ ಏನೋ ಇಲ್ಲ!

ದಿನದಿಂದ ದಿನಕ್ಕೆ ಹಳ್ಳಿಗಳ ಚಿತ್ರಣ ಮಾತ್ರ ಸಂಪೂರ್ಣ ಬದಲಾಗುತ್ತಿದೆ. ಇಂದು ಯಾರ ಮನೆ ಗಳಲ್ಲೂ ಹಸು ಕರುಗಳಿಲ್ಲ, ಅವರೂ ಹಾಲನ್ನು ಕೊಳ್ಳುವ ಪರಿಸ್ಥಿತಿ ಇದೆ. ಮನೆಗಳಲ್ಲಿ ಹಸುಕರು ಗಳಿಲ್ಲದ ಕಾರಣ, ಕೃಷಿಗೆ ಹೆಚ್ಚಾಗಿ ಬಳಸುತ್ತಿದ್ದ ನೈಸರ್ಗಿಕ ಗೊಬ್ಬರಗಳು ಸಿಗದೇ, ರಾಸಾಯನಿಕ ಗೊಬ್ಬರ ಗಳನ್ನೇ ಸಾಮಾನ್ಯವಾಗಿ ಎಲ್ಲರೂ ಬಳಸುವಂತಾಗಿದೆ. ಒಂದು ತಲೆಮಾರಿನ, ವಯಸ್ಸಾದ ವರು ಮಾತ್ರ ಹಳ್ಳಿಗಳಲ್ಲಿ ನಮಗೆ ಇಂದು ಕಾಣಸಿಗುತ್ತಾರೆ.

ಎಲ್ಲಿ ನೋಡಿದರೂ ಮುದುಕರೇ ಕಾಣುತ್ತಿದ್ದಾರೆ ಎನ್ನಬಹುದು, ಅವರ ಕಾಲಾನಂತರ ಆ ಮನೆತನದ ಗತಿಯೇನು ಎನ್ನುವುದು ದೊಡ್ಡ ಪ್ರಶ್ನೆಯಾಗಿಯೇ ಉಳಿದುಬಿಡುತ್ತದೆ. ಈಗ ಹಳ್ಳಿಯಲ್ಲಿ ರುವ ಹಿರಿಯ ಜೀವಗಳೂ, ವೈದ್ಯಕೀಯ ಹಾಗೂ ಇನ್ನಿತರ ಕಾರಣಗಳಿಗಾಗಿ, ಹಳ್ಳಿಗಳಲ್ಲಿನ ತಮ್ಮ ಸ್ವಂತ ಮನೆಯನ್ನು ಬಿಟ್ಟು, ಹತ್ತಿರದ ಪಟ್ಟಣಗಳಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.

ಅಲ್ಲಿ ನಿಂತು ಕೆಲಸ ಮಾಡಿಸುವುದು ಅಸಾಧ್ಯವಾದ್ದರಿಂದ, ತಮ್ಮ ಜಮೀನಿನ ಕೆಲಸ ಹಾಗೂ ಬೆಳೆಕೊಯ್ಲನ್ನು ಗುತ್ತಿಗೆ ನೀಡಿ, ಬಂದಷ್ಟು ಹಣ ಸಾಕು ಎಂದುಕೊಂಡಿದ್ದಾರೆ. ಇನ್ನು, ವಿದ್ಯಾವಂತ ಯುವಕರಂತೂ ಪಟ್ಟಣ ಸೇರಿ ಬಹಳ ಕಾಲವಾಯಿತು. ಅವರು ಇಂದು ಮಹಾನಗರಗಳು ಅಥವಾ ವಿದೇಶದಲ್ಲಿzರೆ. ಹಳ್ಳಿಯಲ್ಲಿ ಜನಸಂಖ್ಯೆ ದಿನದಿಂದ ದಿನಕ್ಕೆ ಕೃಶವಾಗುತ್ತಿದೆ. ಕರ್ನಾಟಕದ ಒಟ್ಟೂ ಆರು ಕೋಟಿ ಜನಸಂಖ್ಯೆಯಲ್ಲಿ, ಸುಮಾರು ಒಂದೂವರೆ ಕೋಟಿಜನ, ಅಂದರೆ ಸುಮಾರು 25 ಪ್ರತಿ ಶತ ಜನ ಬೆಂಗಳೂರಿನ ಇದ್ದಾರೆ ಎಂತಾದರೆ, ಉಳಿದ ಎರಡು ಮತ್ತು ಮೂರನೇ ಸ್ತರದ ನಗರ ವಾಸಿಗಳನ್ನೂ ಲೆಕ್ಕಕ್ಕೆ ತೆಗೆದುಕೊಂಡರೆ, ಅದು ಸುಮಾರು 60 ಪ್ರತಿಶತವಾಗಬಹುದು.

ಹಾಗಾಗಿ, ಹಳ್ಳಿಯ ಸರಕಾರಿ ಶಾಲೆಗಳು, ಆರೋಗ್ಯ ಕೇಂದ್ರಗಳು ಮುಚ್ಚುವ ಸ್ಥಿತಿಯಲ್ಲಿವೆ. ಕೃಷಿ ಕೂಲಿಕಾರರಂತೂ ಸಿಗುವುದೇ ಇಲ್ಲ ಎಂಬ ದೂರು ಸಾಮಾನ್ಯವಾಗಿದೆ. ಮೊದಲೆಲ್ಲ, ತಮಗಿರುವ 2-3 ಮಕ್ಕಳಲ್ಲಿ, ಒಬ್ಬಿಬ್ಬರು ಮಾತ್ರ ನಗರಗಳಲ್ಲಿ ಕೆಲಸ ಮಾಡುವವರಾಗಿದ್ದರೆ, ಒಂದಿಬ್ಬರು ಮನೆಯ ಉಳಿದು, ತಂದೆಗೆ ಸಹಕಾರಿಯಾಗಿ ನಿಂತು, ಪಾರಂಪರಿಕ ಕೃಷಿಯನ್ನೂ, ಮನೆತನದ ಸಂಪ್ರದಾಯ ಗಳನ್ನೂ ಪಾಲಿಸುತ್ತಾ, ಹಳ್ಳಿಯ ಇರುತ್ತಿದ್ದರು.

ಆದರೆ ಇಂದಿನ ಪರಿಸ್ಥಿತಿ ಬೇರೆಯದೇ ಆಗಿದೆ. ಇರುವವನು ಒಬ್ಬನೇ ಮಗ ಅಥವಾ ಮಗಳು ಅಂತಾದ ಮೇಲೆ, ಅವರು ಚೆನ್ನಾಗಿ ಓದಬೇಕು ಮತ್ತು ಒಳ್ಳೆಯ ಕೆಲಸದಲ್ಲಿ ಇರಬೇಕು ಎನ್ನುವು ದಾದಾಗ, ಮನೆಯಲ್ಲಿರುವವರಾರು? ಹಳ್ಳಿಯಲ್ಲಿರುವ ಹಿರಿಯ ಜೀವಿಗಳಿಗೆ, ಕೋವಿಡ್ ಕಾಲಘಟ್ಟವು ಒಂದು ರೀತಿಯಲ್ಲಿ ಸಮಾಧಾನ ತಂದಿತ್ತು.

ಶಹರದಲ್ಲಿ ವಾಸಿಸುವ ಮಕ್ಕಳು ಮತ್ತು ಅವರ ಕುಟುಂಬ, ಅನ್ಯಮಾರ್ಗವಿಲ್ಲದೇ ಆಗ ಹಳ್ಳಿಗೆ ಮರಳಿತ್ತು. ಆರೆಂಟು ತಿಂಗಳುಗಳು ಅವರು ಮನೆಯಿಂದಲೇ ಕೆಲಸಮಾಡುತ್ತಿದ್ದರು. ಮಕ್ಕಳು-ಮೊಮ್ಮಕ್ಕಳ ಜತೆಗೆ ಹಿರಿಯರು ಅತ್ಯಂತ ಸಂತೋಷದಿಂದ ಕಾಲ ಕಳೆದರು. ಮಕ್ಕಳೂ ತಮ್ಮ ಸಂಬಳದ ಸ್ವಲ್ಪ ಪಾಲನ್ನು ತಮ್ಮ ಮೂಲಮನೆ, ಜಮೀನಿನ ಅಭಿವೃದ್ಧಿ ಮುಂತಾದ ಚಟುವಟಿಕೆ ಗಳಲ್ಲಿ ತೊಡಗಿಸಿ ತಂದೆ-ತಾಯಿಯರ ಜತೆಗೆ ಕಾಲ ಕಳೆಯುವಂತಾಗಿತ್ತು.

ಅಂತೂ ಕೋವಿಡ್ ಕಾಲದಲ್ಲಿ ಪಟ್ಟಣವಾಸಿಗಳೆಲ್ಲ ಮನೆಗೆ ಮರಳಿದ್ದರಿಂದ, ಹಳ್ಳಿಗಳು ಜೀವಕಳೆ ತುಂಬಿಕೊಂಡು ನಳನಳಿಸುತ್ತಿದ್ದವು. ಕೋವಿಡ್ ಮಹಾಮಾರಿಯು ಜಗತ್ತಿಗೆ ಮಹಾಶಾಪವಾಗಿ ಪರಿಣಮಿಸಿದ್ದರೂ, ನಮ್ಮ ಹಳ್ಳಿಗರಿಗೆ ಮಾತ್ರ ಒಂದು ರೀತಿಯಲ್ಲಿ ವರವಾಗಿತ್ತು. ಆದರೆ, ಇದು ಅಲ್ಪಕಾಲದ ಆನಂದ ಮಾತ್ರವಾಗಿತ್ತು. ವರ್ಷದ ನಂತರ ಮನೆಯ ಮಕ್ಕಳೆಲ್ಲ ಮತ್ತೆ ಶಹರ ಸೇರಿ ಮನೆ ಬರಿದಾಯ್ತು.

ಇನ್ನೂ ಒಂದು ದೊಡ್ಡ ಸಮಸ್ಯೆಯೆಂದರೆ, ಹಳ್ಳಿಗಳ ಉಳಿದು ಕೃಷಿ ಕೆಲಸ ಮಾಡಿ ಅಥವಾ ಮಾಡಿಸಿಕೊಂಡಿರುವ ಶ್ರೀಮಂತ ಯುವಕರಿಗೆ ಇಂದು ಹುಡುಗಿಯನ್ನು ಕೊಡುವವರಿಲ್ಲದಾಗಿ ಶಾದಿಭಾಗ್ಯವಿಲ್ಲದಂತಾಗಿದ್ದು. ಹೆಣ್ಣುಮಕ್ಕಳು ಒಳ್ಳೆಯ ವಿದ್ಯಾಭ್ಯಾಸ ಮಾಡಿ ನಗರಗಳಲ್ಲಿ ಉತ್ತಮ ಕೆಲಸ ಮಾಡಿಕೊಂಡಿರುವುದರಿಂದ, ಹಳ್ಳಿಗೆ ಮರಳಲು ಸ್ವಾಭಾವಿಕವಾಗಿ ಮನಸ್ಸು ಮಾಡುತ್ತಿಲ್ಲ.

ಇನ್ನು, ಹಳ್ಳಿಗಳ ಇರುವ ಹೆಣ್ಣುಮಕ್ಕಳು, ಪಟ್ಟಣದಲ್ಲಿರುವ ವರನನ್ನೇ ಆಯ್ಕೆ ಮಾಡಿಕೊಳ್ಳು ತ್ತಿದ್ದಾರೆ. ಹಾಗಾಗಿ ಹಳ್ಳಿಗಳ ಯುವಕರ ಪಾಡು ಹೇಳತೀರದ್ದಾಗಿದೆ. ಮದುವೆಯೇ ಆಗದಿದ್ದ ಮೇಲೆ ಮಕ್ಕಳಾಗುವುದೆಲ್ಲಿಂದ? ಅವರ ಸಂತತಿ ಮುಂದುವರಿಯುವುದು ಹೇಗೆ? ಮುಂತಾದ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡದಿರುವುದೇ ಲೇಸು ಎನಿಸುತ್ತಿದೆ.

ಅಂತೂ, ವಿವಿಧ ಜನಾಂಗಗಳು ತಮ್ಮ ನಾಶಕ್ಕೆ ದಿನಗಣನೆ ಮಾಡುವಂತಾಗಿದೆ. ಇವಕ್ಕೆಲ್ಲ ಯಾರಲ್ಲೂ ಉತ್ತರವಿಲ್ಲ. ‘ಅವರು ಹಾಗೆ ಮಾಡಬೇಕು, ಇವರು ಹಾಗೆ ಮಾಡಬಾರದು’ ಎಂದು ಉಪದೇಶ ಮಾಡುವವರು ಸಾವಿರವಿದ್ದಾರೆ; ‘ಆದರೆ ನಿಮ್ಮ ಮಗಳನ್ನು ಹಳ್ಳಿಯಲ್ಲಿ ವಾಸಿಸುವ ಯುವಕರಿಗೆ ಕೊಟ್ಟು ಮದುವೆ ಮಾಡುತ್ತೀರಾ?’ ಎಂದರೆ, ‘ಅದು ಹೇಗೆ ಸಾಧ್ಯ ಮಾರಾಯ್ರೆ?’ ಎನ್ನುತ್ತಾರೆ.

ಇದು ನಮಗೆ ಅಪರಿಹಾರ್ಯವಾದ ಅಂದರೆ ನಮ್ಮ ನಿಯಂತ್ರಣಕ್ಕೆ ಸಿಗದ ಸಂಗತಿಯಾದ್ದರಿಂದ, ದುಃಖಿಸಿ ಪ್ರಯೋಜನವಿಲ್ಲ. ಕಾಲಪ್ರವಾಹದ ಜತೆಗೆ ತೇಲಿ ಹೋಗುವುದೊಂದೇ ನಮಗೆ ಉಳಿದಿರುವ ದಾರಿಯಾಗಿದೆ. ನಮ್ಮ ದೇಶದ ಹಳ್ಳಿಗಳು ಪುರಾತನ ಕಾಲದಿಂದಲೂ ಕಲೆ, ಸಂಸ್ಕೃತಿಯ ತವರೂರು. ಇದು ಹುಟ್ಟಿರುವುದು ಹಳ್ಳಿಗಳಿಂದಲೇ ಎಂದರೂ ತಪ್ಪಾಗಲಾರದು.

ಇಂಥ ಚಟುವಟಿಕೆಗಳು ಹೆಚ್ಚಾಗಿ ಪ್ರದರ್ಶನಗೊಳ್ಳುವುದು ಅಲ್ಲಿನ ಹಬ್ಬ-ಜಾತ್ರೆಗಳಗಿತ್ತು. ಲಾಗಾಯ್ತಿನಿಂದ ಆಚರಿಸಿಕೊಂಡು ಬಂದ ಹಳ್ಳಿಯ ಹಬ್ಬ-ಜಾತ್ರೆಗಳು ಕಳೆ ಕಳೆದುಕೊಂಡು ಇಂದು ಅಂತೂ ಇಂತೂ ನಡೆಯುತ್ತಿವೆ, ಯಾವಾಗ ನಿಲ್ಲುತ್ತವೋ ಗೊತ್ತಿಲ್ಲ. ಹೀಗಾದರೆ, ನಮ್ಮ ಪುರಾತನ ಕಲೆ-ಸಂಸ್ಕೃತಿಗಳು ಮುಂದಿನ ಪೀಳಿಗೆಗೆ ಕಥೆ ಹೇಳಿ ತಿಳಿಸುವಂತಾಗುತ್ತದೆ ಅಷ್ಟೇ.

ಹಳ್ಳಿಗಳು ಎದುರಿಸುತ್ತಿರುವ ಇನ್ನೊಂದು ಗಂಭೀರ ಸವಾಲಿನ ಕುರಿತು ಹೇಳುವುದಾದರೆ, ಅನೇಕ ಹಳ್ಳಿಗಳಲ್ಲಿ, ತಲೆಮಾರುಗಳನ್ನು ದಾಟುತ್ತಾ, ಪರಂಪರೆಯಿಂದ ಬಂದ ಕೃಷಿ ಜಮೀನುಗಳು ಇಂದು ಮಾರಾಟಕ್ಕೆ ಸಿದ್ಧವಾಗಿ ನಿಂತಿವೆ. ಮಕ್ಕಳು ಮೊಮ್ಮಕ್ಕಳು ಹುಟ್ಟಿಬೆಳೆದ ನೂರಾರು ವರ್ಷಗಳ ಹಿಂದಿನ ಮನೆ, ‘ಹೋಮ್ ಸ್ಟೇ’ ಆಗಿ ಪರಿವರ್ತಿತವಾಗುತ್ತಿವೆ.

ಪೂಜೆ ಪುನಸ್ಕಾರಗಳಾಗುತ್ತಿದ್ದ ಮನೆಗಳಲ್ಲಿ, ಇಂದು ಪ್ರವಾಸಿಗರಿಂದ ಎಣ್ಣೆಪಾರ್ಟಿಗಳು ನಡೆಯುತ್ತಿವೆ. ಕೊಡಗು, ಚಿಕ್ಕಮಗಳೂರು ಮುಂತಾದ ಕಡೆ ಸಾವಿರಾರು ಎಕರೆ ಜಮೀನುಗಳು ಈಗಾಗಲೇ ಪರಭಾರೆಯಾಗಿ, ರಾಜಕಾರಣಿಗಳ, ಉದ್ಯೋಗಪತಿಗಳ ಪಾಲಾಗಿ ‘ರೆಸಾರ್ಟ್’ಗಳಾಗಿವೆ. ಅಳಿದುಳಿದ ಜಮೀನುಗಳೂ ಮಾರಾಟದ ವಿವಿಧ ಹಂತಗಳಲ್ಲಿವೆ. ಶಿವಮೊಗ್ಗ, ಉತ್ತರಕನ್ನಡ, ದಕ್ಷಿಣಕನ್ನಡ ಜಿಗಳೂ ಇದಕ್ಕೆ ಹೊರತಾಗಿಲ್ಲ.

ಬೇಕಾದಷ್ಟು ದುಡ್ಡಿರುವುದರಿಂದ, ಯಾವ ಬೆಲೆಗಾದರೂ ಸರಿ ಕೃಷಿ ಜಮೀನನ್ನು ಖರೀದಿಸಲು ತಯಾರಿರುವ ಮಂದಿ ಸಾಕಷ್ಟಿದ್ದಾರೆ. ಹಳ್ಳಿಗರ ಇಂದಿನ ಅನಿವಾರ್ಯತೆಗಳನ್ನು ಬಳಸಿಕೊಂಡು, ಅವರ ಜಮೀನನ್ನು ಕೈತಪ್ಪಿಸುವ ಕೆಲಸ ಸತತವಾಗಿ ನಡೆಯುತ್ತಿದೆ. ಭೂಮಿ ಎನ್ನುವುದು ಬೆಳೆಯುವುದಿಲ್ಲ, ಅದು ಇದ್ದಷ್ಟೇ ಇರುವ ವಸ್ತುವಾಗಿದೆ. ಹಾಗಾಗಿಯೇ, ನಮಗಾಗಿ ನಮ್ಮ ಹಿರಿಯರು ಮಾಡಿಟ್ಟ ಮಣ್ಣನ್ನು ಉಳಿಸಿಕೊಳ್ಳುವಲ್ಲಿ ಸರ್ವಪ್ರಯತ್ನ ಮಾಡಬೇಕಿದೆ.

ಒಮ್ಮೆ ಮಾರಾಟವಾದ ನಮ್ಮ ಜಮೀನು, ನಾಳೆ ಕೊಳ್ಳಲು ಬೇಕಾದಷ್ಟು ಹಣ ನಮ್ಮ ಬಳಿ ಬಂದರೂ, ಜಮೀನು ಮತ್ತೆ ನಮಗೆ ಯಾವ ಕಾರಣಕ್ಕೂ ಮರಳಿ ಸಿಗುವುದಿಲ್ಲ. ಜಮೀನನ್ನು ಬಳಸಲು ಇಂದು ನಿಮಗೆ ಸಾಧ್ಯವಾಗದಿರಬಹುದು; ಆದರೆ ಮುಂದೊಂದು ದಿನ, ಪಟ್ಟಣಗಳು ‘ನೀವು ಹೋಗಿ’ ಎನ್ನುವ ಸಮಯ ಬಂದಾಗ, ನಾವು ಅಥವಾ ನಮ್ಮ ಮುಂದಿನ ತಲೆಮಾರು ಮರಳಿ ಮಣ್ಣಿನೆಡೆಗೆ ಹೊರಳಬೇಕಾದಾಗ, ನಮ್ಮದು ಅಂತ ಉಳಿಯುವುದು ಈ ಪಿತ್ರಾರ್ಜಿತ ಭೂಮಿ ಮಾತ್ರ. ಅದುವೇ ಶಾಶ್ವತ. ಅಲ್ಲಿರುವುದು ಮಾತ್ರವೇ ನಮ್ಮನೆ, ಇಲ್ಲಿಗೆ ಬಂದಿದ್ದು ಸುಮ್ಮನೆ ಎನ್ನುವುದನ್ನು ನಾವು ಅರಿತರೆ ಒಳಿತು.

ಹಾಗಾಗಿ, ಇಂದು ನಮ್ಮ ಅಗತ್ಯ ಅನಿವಾರ್ಯತೆಗಳಿಗಾಗಿ ಮಾರಾಟಕ್ಕೆ ಇಟ್ಟಿದ್ದು ಬರೇ ಭೂಮಿ ಯನ್ನಲ್ಲ, ನಮ್ಮ ಪುರಾತನತೆಯನ್ನು, ನಮಗುಣಿಸಿದ ಪರಂಪರೆಯ ಕೈಯನ್ನು, ನಮ್ಮ ಹಿರಿಯರ ನಂಬಿಕೆಯನ್ನು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ತಾಯಿಬೇರನ್ನು ಎನ್ನುವುದನ್ನು ನೆನಪಿನಲ್ಲಿಡ ಬೇಕಾಗಿದೆ.

ನಾಳೆ ನಮ್ಮ ಮುಂದಿನ ತಲೆಮಾರು ಶಪಿಸುವುದನ್ನು ತಪ್ಪಿಸಿಕೊಳ್ಳಬೇಕಾದರೆ, ನಾವು ಶತಾಯ ಗತಾಯ, ನಮ್ಮ ಪೂರ್ವಿಕರ ಬೆವರು ತಾಕಿದ ಭೂಮಿಯನ್ನು ಉಳಿಸಿಕೊಳ್ಳುವಲ್ಲಿ ಶ್ರಮವಹಿಸ ಬೇಕಾಗಿದೆ ಎನ್ನುವುದು ಈ ಅಂಕಣಬರಹದ ಆಶಯ. ನಮ್ಮ ಊರು ನಮ್ಮ ಹೆಮ್ಮೆಯಾಗಿ ಉಳಿಯ ಬೇಕಾದರೆ, ನಮ್ಮ ಭೂಮಿ ನಮ್ಮಲ್ಲಿ ಉಳಿಯಬೇಕಾಗಿದೆ.