Rangaswamy Mookanahalli Column: ಅಕ್ಷಯವಾಗಲಿ ಅಕ್ಷರ, ನಿಲ್ಲದಿರಲಿ ಅಕ್ಷರ ಸಾಧನೆ !
99 ಪ್ರತಿಶತ ಜನ ಇರುವ ತಲೆಯನ್ನು ಸುಮ್ಮನೆ ಇಟ್ಟುಕೊಂಡಿರುತ್ತಾರೆ. ಅದನ್ನು ಉಪಯೋಗಿಸುವು ದಿಲ್ಲ. ಇವರ ಪೌರುಷವೆಲ್ಲಾ ತರಕಾರಿ ಮಾರುವವರು, ಸಣ್ಣ ಪುಟ್ಟ ವ್ಯಾಪಾರಸ್ಥರ ಮೇಲೆ ದಬ್ಬಾಳಿಕೆ. ಚೌಕಾಸಿ ಮಾಡುವುದರಲ್ಲಿ ಮುಗಿದು ಹೋಗುತ್ತದೆ. ದೊಡ್ಡ ವ್ಯಾಪಾರಸ್ಥರಿಗೆ 20-25 ಪ್ರತಿಶತ ಪಾಲುದಾರಿಕೆ ಖುಷಿಯಾಗಿ ನೀಡುತ್ತಾರೆ!
-
ವಿಶ್ವರಂಗ
ಅಕ್ಷಯ ತೃತೀಯ ಹಬ್ಬದ ದಿನದಂದು ಮಾಡಿದ್ದೆಲ್ಲಾ ಅಕ್ಷಯ ಅಂದರೆ ಕ್ಷಯಿಸಿ ಹೋಗದೆ ವೃದ್ಧಿ ಆಗುತ್ತಿರುತ್ತದೆ ಎನ್ನುವುದು ನಂಬಿಕೆ. ನಮ್ಮ ನಂಬಿಕೆ ಕೆಲವರಿಗೆ ಬಂಡವಾಳ! ವ್ಯಾಪಾರ. ಕಳೆದ ವರ್ಷದ ಅಕ್ಷಯ ತೃತೀಯದ ದಿನ 16 ಸಾವಿರ ಕೋಟಿ ರುಪಾಯಿ ಚಿನ್ನದ ವಹಿವಾಟಾಗಿತ್ತು. ಈ ವರ್ಷ ಅದನ್ನು ಮುರಿದು ದಾಖಲೆ ಬರೆಯುವ ಸಂಭಾವ್ಯತೆಯಿದೆ ಎನ್ನುತ್ತದೆ ಅಂಕಿ-ಅಂಶ. ಈ ರ್ಷ 20 ಸಾವಿರ ಕೋಟಿ ರುಪಾಯಿಗೂ ಮೀರಿದ ವಹಿವಾಟು ಆಗಲಿದೆ ಎನ್ನುತ್ತದೆ ಅಂದಾಜು ಸಂಖ್ಯೆಗಳು!
ನೀವು ಚಿನ್ನ ಕೊಳ್ಳುವುದು ಬಿಡುವುದು ನಿಮಗೆ ಬಿಟ್ಟದ್ದು. ಊದುವ ಶಂಖ ಊದಬೇಕು. ಅದು ನನ್ನ ಕರ್ಮ. ಹೀಗಾಗಿ ಹೇಳುತ್ತಿದ್ದೇನೆ. ಉಳಿದದ್ದು ನಿಮ್ಮ ವಿವೇಚನೆಗೆ ಬಿಟ್ಟದ್ದು. ನೀವು ಪ್ರತಿ ಬಾರಿ ಚಿನ್ನಾಭರಣ ಕೊಂಡಾಗ ನೀವು ಕೊಳ್ಳುತ್ತಿರುವ ಅಂಗಡಿಯ ಮಾಲೀಕನನ್ನು ಪಾಲುದಾರನನ್ನಾಗಿ ಮಾಡಿಕೊಳ್ಳುತ್ತಿದ್ದೀರಿ.
ನಿಮ್ಮ ಬಂಡವಾಳದ 20 ಪ್ರತಿಶತ ಪಾಲುದಾರ ಆತ! ಸರಳವಾಗಿ ಹೇಳಬೇಕೆಂದರೆ ನೀವು ನೂರು ರುಪಾಯಿ ಚಿನ್ನ ಕೊಂಡರೆ ನಿಮಗೆ ಸಿಕ್ಕದ್ದು 80 ರುಪಾಯಿ ಮೌಲ್ಯದ ಚಿನ್ನ ಮಾತ್ರ! ಉಳಿದ 20 ರುಪಾಯಿ ಮೇಕಿಂಗ್, ವೇಸ್ಟೇಜ್ ಇತರ ಖರ್ಚುಗಳ ಲೆಕ್ಕದಲ್ಲಿ ಹೋಗಿರುತ್ತದೆ. ಮುಂದಿನ ದಿನದಲ್ಲಿ ನೀವು ಅದನ್ನು ಮಾರಲು ಹೋದರೆ ನಿಮಗೆ ಸಿಗುವುದೆಷ್ಟು? ಗೊತ್ತಾಯ್ತು ಎಂದುಕೊಳ್ಳುವೆ. 20 ಪ್ರತಿಶತ ಚಿನ್ನದ ಮೌಲ್ಯ ಮೇಲೆಕ್ಕೆ ಹೋದರೂ ನಿಮಗೇನೂ ಲಾಭವಾಗಲಿಲ್ಲ ಎನ್ನುವುದು ಅರಿತು ಕೊಳ್ಳಿ ಪ್ಲೀಸ್. ಅಕ್ಷಯವಾಗಬೇಕು ಎನ್ನುವ ಕಾರಣಕ್ಕೆ ಕೊಂಡಿರಿ. ಆದರೆ ಅದು ವೃದ್ಧಿಯಾಗಲಿಲ್ಲ ವಲ್ಲ!
ಇನ್ನೊಂದು ಅಂಶ ಗಮನಿಸಿ. ನೀವು ಆಸೆಯಿಂದ ಕೊಂಡ ಆಭರಣ ಹಾಕಿಕೊಂಡು ಓಡಾಡುವ ಕಾಲಘಟ್ಟದಲ್ಲಿ ನಾವಿಲ್ಲ. ಜತೆಗೆ ನೀವು ಮುಂದಾಲೋಚನೆ ಮಾಡಿ ಮಗಳ ಮದುವೆಗೆ ಎಂದು ಮಾಡಿಟ್ಟ ಆಭರಣ ಆಕೆ ಮದುವೆ ವೇಳೆಗೆ ಔಟ್ ಆಫ್ ಫ್ಯಾಷನ್ ಆಗಿರುತ್ತದೆ. ಮತ್ತೆ ಚಚ್ಚಿಸು, ಹೊಸ ಡಿಸೈನ್ ಮಾಡಿಸು, ಮತ್ತೆ ಮೇಕಿಂಗ್, ಮತ್ತೆ ವೆಸ್ಟೇಜ್ ಮತ್ತೆ 20 ಪ್ರತಿಶತ ಲುಕ್ಸಾನು!
ಇದನ್ನೂ ಓದಿ: Rangaswamy Mookanahalli Column: ಅತ್ತ ದರಿ, ಇತ್ತ ಪುಲಿ ಹೊಸ ಬದುಕಿನ ರೀತಿ ಕಣ್ರೀ !
99 ಪ್ರತಿಶತ ಜನ ಇರುವ ತಲೆಯನ್ನು ಸುಮ್ಮನೆ ಇಟ್ಟುಕೊಂಡಿರುತ್ತಾರೆ. ಅದನ್ನು ಉಪಯೋಗಿ ಸುವುದಿಲ್ಲ. ಇವರ ಪೌರುಷವೆಲ್ಲಾ ತರಕಾರಿ ಮಾರುವವರು, ಸಣ್ಣ ಪುಟ್ಟ ವ್ಯಾಪಾರಸ್ಥರ ಮೇಲೆ ದಬ್ಬಾಳಿಕೆ. ಚೌಕಾಸಿ ಮಾಡುವುದರಲ್ಲಿ ಮುಗಿದು ಹೋಗುತ್ತದೆ. ದೊಡ್ಡ ವ್ಯಾಪಾರಸ್ಥರಿಗೆ 20-25 ಪ್ರತಿಶತ ಪಾಲುದಾರಿಕೆ ಖುಷಿಯಾಗಿ ನೀಡುತ್ತಾರೆ!
ಅಕ್ಷಯ ತೃತೀಯದ ದಿನ ಚಿನ್ನವನ್ನೇ ಕೊಳ್ಳಬೇಕು ಎಂದಿಲ್ಲ. ಯಾವುದನ್ನೂ ಕೊಳ್ಳಬೇಕು ಎಂದಿಲ್ಲ. ನಾವೇನು ಕೆಲಸ ಮಾಡುತ್ತೇವೆ ಅದು ವೃದ್ಧಿಯಾಗುತ್ತದೆ ಎನ್ನುವ ಅರ್ಥದಲ್ಲಿ ಹೇಳಿದ್ದಾರೆ ಅಷ್ಟೇ. ಬರೆಯುವ ನನಗೆ, ಅಕ್ಷರ ಅಕ್ಷಯವಾಗುತ್ತದೆ. ನಿತ್ಯವೂ ಕನಿಷ್ಠ ಸಾವಿರ ಪದವನ್ನು ಬರೆಯುವ ನನಗೆ ಅಕ್ಷರವೇ ಬಂಡವಾಳ!
ನೀವು ಪಾಠ ಹೇಳುವ ಗುರುವಾಗಿದ್ದರೆ ಒಂದು ಕ್ಲಾಸು ಹೆಚ್ಚಿಗೆ ತೆಗೆದುಕೊಳ್ಳಿ. ತಳ್ಳುವ ಗಾಡಿಯಲ್ಲಿ ಟೊಮೊಟೊ ಮಾರಾಟ ಮಾಡುವರಾಗಿದ್ದರೆ ಒಂದೆರೆಡು ತಾಸು ಹೆಚ್ಚಿಗೆ ದುಡಿಯಿರಿ, ಐದಾರು ಕೆ.ಜಿ., ಹೆಚ್ಚಿಗೆ ಮಾರಾಟ ಮಾಡಿ! ಆಟೋ ಡ್ರೈವರ್ ಆಗಿದ್ದರೆ ಗ್ರಾಹಕ ಕರೆದತ್ತ ಹೋಗಿ, ಒಂದು ತಾಸು ಹೆಚ್ಚಿಗೆ ದುಡಿಯಿರಿ.
ನೀವು ಮಾತುಗಾರರಾಗಿದ್ದರೆ ಒಂದೆರೆಡು ಹೆಚ್ಚಿಗೆ ಒಳ್ಳೆಯ ಮಾತಾಡಿ. ನೀವು ಯಾವ ಕೆಲಸ ಮಾಡುತ್ತಿರುತ್ತೀರಿ ಅದನ್ನೇ ಶ್ರದ್ಧೆಯಿಂದ ಚೂರು ಜಾಸ್ತಿ ಮಾಡಿ. ಚಿನ್ನ, ಬೆಳ್ಳಿ ಕೊಂಡು ಯಾರನ್ನೋ ಉದ್ದಾರ ಮಾಡಿ, ಸ್ನೇಹಿತರ ಮುಂದೆ ಹೆಂಡತಿಯನ್ನೋ, ಅಮ್ಮನನ್ನೋ, ಮಗಳನ್ನೋ, ಬಿಟ್ಟು ಕೊಟ್ಟು ಮಾತಾಡುವುದು ಮಾತ್ರ ಮಾಡಬೇಡಿ.
ಎಲ್ಲಕ್ಕಿಂತ ಮುಖ್ಯ ಕುಟುಂಬ. ಸಂಬಂಧ. ಅದು ಕ್ಷಯವಾಗದಂತೆ ಅಕ್ಷಯವಾಗುವಂತೆ ನೋಡಿ ಕೊಳ್ಳುವುದು ಮಾತ್ರ ಪ್ರಮುಖವಾಗಬೇಕು. ಮಿಕ್ಕೆಲ್ಲಾ ಆಟಕುಂಟು ಲೆಕ್ಕಕ್ಕಿಲ್ಲ. ಅಂದ ಹಾಗೆ ಇವತ್ತಿನವರೆಗೂ ಅಕ್ಷಯ ತೃತೀಯದ ದಿನ ನಾನು ಒಂದು ಗ್ರಾಮ್ ಚಿನ್ನ ಕೊಂಡಿಲ್ಲ. ಆದರೆ, ಇವತ್ತಿನ ಈ ಗದ್ದಲದ ಸಮಯದಲ್ಲಿ ಈ ಮಾತುಗಳನ್ನು ಕೇಳಲು ಯಾರಿಗೂ ಸಮಯವೂ ಇಲ್ಲ. ಇಷ್ಟವೂ ಇಲ್ಲ. ಹೆಚ್ಚು ಜನ ಏನು ಮಾಡುತ್ತಾರೆ ಅದನ್ನು ಮಾಡುವುದರಲ್ಲಿ ಜನರಿಗೆ ಖುಷಿ ಸಿಗುತ್ತದೆ.
ಚಾಣಕ್ಯನ ನೀತಿ ಶ್ಲೋಕದಲ್ಲಿ ಒಂದು ಶ್ಲೋಕದಲ್ಲಿನ ಉಲ್ಲೇಖ, ‘ಆಯುಃ ಕರ್ಮಚ ವಿತ್ತಂ ಚ ವಿದ್ಯಾ ನಿಧನಮೇವ ಚ ಐ ಪಂಚೈತಾನಿ ಹಿ ಸೃಜ್ಯಂತೆ ಗರ್ಭಸ್ಥಸೆಯ್ಯವ ದೇಹಿನಃ’ ಅಂದರೆ ಮನುಷ್ಯನ ಅಥವಾ ಜೀವಿಯ ಆಯುಷ್ಯ, ಕೆಲಸ, ಹಣ, ವಿದ್ಯೆ ಮತ್ತು ಮರಣ - ಈ ಐದೂ ಜೀವಿ ಗರ್ಭಾವಸ್ಥೆ ಯಲ್ಲಿರುವಾಗಲೇ ತೀರ್ಮಾನವಾಗಿ ಬಿಟ್ಟಿರುತ್ತದೆ ಎನ್ನುತ್ತದೆ.
ಹೀಗಿದ್ದ ಮೇಲೆ ನಾವು ಪ್ರಯತವನ್ನ ಮಾಡುವುದರಿಂದ ಏನು ಪ್ರಯೋಜನ ಎನ್ನುವ ಪ್ರಶ್ನೆ ಏಳುತ್ತದೆ. ಹಣೆಬರಹವನ್ನ ಕೂಡ ಪ್ರಯತ್ನದಿಂದ ಬದಲಿಸಲು ಸಾಧ್ಯ ಎನ್ನುವುದನ್ನ ಕೂಡ ಮನುಷ್ಯ ರುಜುವಾತು ಮಾಡಿ ತೋರಿಸಿದ್ದಾನೆ.
ಎಲ್ಲವೂ ವಿಧಿಬರಹ, ಹಣೆಬರಹ ಎಂದು ಮನುಷ್ಯ ಕುಳಿತಿದ್ದರೆ ಇಂದಿಗೆ ನಾವು ಕಾಣುತ್ತಿರುವ ಟೆಕ್ನಾಲಜಿ, ಸಂಪತ್ತು, ವಿಕಾಸ ಇದ್ಯಾವುದನ್ನೂ ನಾವು ಕಾಣಲು ಸಾಧ್ಯವಿರುತ್ತಿರಲಿಲ್ಲ. ಮನುಷ್ಯ ಕಟ್ಟಿಕೊಂಡ ಕನಸುಗಳು ಅವನನ್ನ ಇಲ್ಲಿಗೆ ತಂದು ನಿಲ್ಲಿಸಿವೆ ಎನ್ನುವುದು ಕೂಡ ಸತ್ಯವಾದ ಮಾತು. ಹೀಗಾಗಿ ಸಮಾಜ ಹೋದಂತೆ ಹೋಗುವುದು ಕೂಡ ಸರಿ ಎನ್ನಿಸುತ್ತದೆ.
ಎಲ್ಲರೂ ವಿವೇಕವಂತರಾಗಿ ಚಿನ್ನ ಕೊಳ್ಳುವುದು ಬಿಟ್ಟು ಬಿಟ್ಟರೆ, ಚಿನ್ನದ ವ್ಯಾಪಾರಿಗಳ ಕಥೆಯೇನು? ಅವರನ್ನೇ ನಂಬಿಕೊಂಡಿರುವ ಅಲ್ಲಿನ ಕೆಲಸಗಾರರ ಗತಿಯೇನು? ಅಕ್ಕಸಾಲಿಗರ ಕಥೆಯೇನು? ದುಡ್ಡು ಮತ್ತು ಬ್ಲಡ್ದು ಎರಡೂ ಸರ್ಕ್ಯುಲೇಶನ್‌ನಲ್ಲಿರಬೇಕು. ಆಗ ಮಾತ್ರ ಜೀವ, ಸಮಾಜ ಎರಡೂ ಜೀವಂತಿಕೆ ಉಳಿಸಿಕೊಳ್ಳಲು ಸಾಧ್ಯ. ಹೀಗಾಗಿ ಸಮಾಜಕ್ಕೆ ಎಲ್ಲ ತರಹದ ಜೀವಿಗಳು ಕೂಡ ಬೇಕು ಎನ್ನುವುದು ಕೂಡ ಸತ್ಯವಾದ ಮಾತು. ಇದೆ ಮಾತನ್ನು ನಾವು ಆಹಾರ ಸರಪಳಿಗೂ ಅನ್ವಯ ಮಾಡಿ ನೋಡಬಹುದು. ಇವೆಲ್ಲವೂ ಹೇಳಲಿಕ್ಕೆ, ಕೇಳಲಿಕ್ಕೆ ಬಹಳ ಚಂದ. ಬುದ್ಧಿವಂತರಿಗೆ ಈ ವೇಳೆಗೆ ಏನು ಮಾಡಬೇಕು ಎನ್ನುವುದು ಅರ್ಥವಾಗಿರುತ್ತದೆ. ಅಷ್ಟು ಸಾಕು!
ಇನ್ನೊಂದು ಬಹು ಮುಖ್ಯವಾಗಿ ನಾವು ಚಿನ್ನ ಖರೀದಿಸುವ ಮುನ್ನ ಗಮನಿಸಬೇಕಾದದ್ದು, ಚಿನ್ನವನ್ನು ನಾವು ಆಮದು ಮಾಡಿಕೊಳ್ಳುತ್ತೇವೆ. ಅಂದರೆ ನಮ್ಮ ದೇಶದಲ್ಲಿ ಜನರಿಗೆ ಚಿನ್ನದ ಮೇಲಿರುವ ವ್ಯಾಮೋಹ ಪೂರೈಸುವಷ್ಟು ಚಿನ್ನ ನಮ್ಮ ನೆಲದಲ್ಲಿ ಸಿಗುತ್ತಿಲ್ಲ. ಹೀಗಾಗಿ ನಾವು ಡಿಮ್ಯಾಂಡ್ ಪೂರ್ತಿಗೊಳಿಸಲು ಅನ್ಯ ದೇಶಗಳಿಂದ ಚಿನ್ನವನ್ನು ತರಿಸಿಕೊಂಡು ಅದನ್ನು ಇಲ್ಲಿ ಮಾರುತ್ತಿದ್ದೇವೆ.
ಇದು ನಮ್ಮ ವಿದೇಶಿ ವಿನಿಮಯದ ಮೇಲೆ ಹೊಡೆತ ಬೀಳುವಂತೆ ಮಾಡುತ್ತದೆ. ಅವಶ್ಯಕ ವಸ್ತುಗಳನ್ನು ಅನ್ಯಮಾರ್ಗವಿಲ್ಲದ ಕಾರಣ ಬೇರೆ ದೇಶಗಳಿಂದ ತರಿಸಿಕೊಳ್ಳಬೇಕಾಗುತ್ತದೆ. ಆದರೆ, ಚಿನ್ನ ಅವಶ್ಯಕ ವಸ್ತುವಲ್ಲ. ಆದರೂ ನಾವು ಇದನ್ನು ಬೇರೆ ದೇಶಗಳಿಂದ ತರಿಸಿಕೊಳ್ಳುತ್ತಿದ್ದೇವೆ. ಎಲ್ಲಿಯವರೆಗೆ ಡಿಮ್ಯಾಂಡ್ ಇರುತ್ತದೆ. ಅಲ್ಲಿಯವರೆಗೆ ಸಪ್ಲೈ ನಿಲ್ಲಿಸುವಂತಿಲ್ಲ ನೋಡಿ!
ಒಂದು ಅಂದಾಜಿನ ಪ್ರಕಾರ ಭಾರತೀಯ ಮನೆಗಳಲ್ಲಿ ಇರಬಹುದಾದ ಒಟ್ಟು ಚಿನ್ನದ ತೂಕ 25-35 ಸಾವಿರ ಟನ್! ಅಂದರೆ ಸರಿಸುಮಾರು 4 ಲಕ್ಷ ಕೋಟಿ ಡಾಲರ್ ಮೌಲ್ಯ! ನಿಮಗೆ ಗೊತ್ತಿರಲಿ ಇದು ಭಾರತದ ಒಂದು ವರ್ಷದ ಜಿಡಿಪಿಗೆ ಸಮ. ಐವತ್ತು ಸಾವಿರ ರುಪಾಯಿ ಮೀರಿದ ವಹಿವಾಟು ಮಾಡಲು ಪಾನ್ ಕಾರ್ಡ್ ಕಡ್ಡಾಯ ಎನ್ನಲಾಗಿದೆ. ಆದರೆ, ಎರಡು ಲಕ್ಷ ಮೌಲ್ಯದ ಚಿನ್ನ ಖರೀದಿಸಲು ನಗದು ಪಾವತಿಸಬಹುದು.
ಒಟ್ಟಾರೆ ಐವತ್ತು ಸಾವಿರ ರುಪಾಯಿ ಮೌಲ್ಯ ಮೀರಿದರೆ ಪಾನ್ ಕಾರ್ಡ್ ಕಡ್ಡಾಯವಾಗಿ ನೀಡಬೇಕಾಗುತ್ತದೆ. ಹೀಗಿದ್ದೂ 2025ರಲ್ಲಿ ಚಿನ್ನಕ್ಕೆ ಸಂಬಂಧಿಸಿದ ವಹಿವಾಟು 90 ಶತ ಕೋಟಿ ಡಾಲರ್ ಮೀರಿದೆ ಎನ್ನುತ್ತದೆ ಅಂಕಿ-ಅಂಶ.
ಗಮನಿಸಿ ಗೋಲ್ಡ್ ಡೆಪಾಸಿಟ್ ಬ್ಯಾಂಕಿನಲಿದ್ದರೆ ಆಗ ನಾವು ಅಮೆರಿಕಗಿಂತ ಬಲಿಷ್ಠರಾಗಲು ಸಾಧ್ಯ. ಆದರೆ, ನಮ್ಮ ದೇಶದಲ್ಲಿ ಆಗಿರುವುದೇನು ಗೊತ್ತೇ? ನಮ್ಮ ಬ್ಯಾಂಕ್‌ಗಳಲ್ಲಿ ಇರುವ ಚಿನ್ನ 880 ಟನ್. ಆದರೆ, ಬಿಡಿಯಾಗಿ ದೇಶದ ಜನರ ಬಳಿ ಇರುವ ಚಿನ್ನ 25-35 ಸಾವಿರ ಟನ್. ಆಕಸ್ಮಾತ್ ಇದು ಉಲ್ಟಾ ಆಗಿದ್ದರೆ! ಅಂದರೆ ಬ್ಯಾಂಕ್‌ಗಳ ಬಳಿ 25-35 ಸಾವಿರ ಟನ್ ಚಿನ್ನದ ಡೆಪಾಸಿಟ್ ಇದಿದ್ದರೆ ನಮ್ಮ ಆರ್ಥಿಕ ಚಿತ್ರಣವೇ ಬೇರೆಯಾಗಿರುತ್ತಿತ್ತು.
ನಾವು ಜಗತ್ತಿನ ಅತ್ಯಂತ ಬಲಿಷ್ಠ ದೇಶವಾಗುತ್ತಿದ್ದೆವು. ಅಮೆರಿಕ, ಚೀನಾ ಒಳಗೊಂಡು ಎಲ್ಲ ದೇಶಗಳೂ ನಾವು ಹೇಳುವ ಆರ್ಥಿಕ ನೀತಿಯನ್ನು ಒಪ್ಪಿಕೊಳ್ಳುತ್ತಿದ್ದವು. ಆದರೆ, ಚಿನ್ನ ನಮ್ಮ ದೇಶದ ಜನರಿಗೆ ಹೂಡಿಕೆ ಎನ್ನುವುದಕ್ಕಿಂತ ಅದೊಂದು ಎಮೋಷನ್. ಭಾವನೆ ಬದಲಾದರೆ ಜಾಗತಿಕ ಚಿತ್ರಣ ಬದಲಾಗಿ ಬಿಡುತ್ತದೆ.
ಸರಕಾರ ಗೋಲ್ಡ್ ಡೆಪಾಸಿಟ್ ಸ್ಕೀಮ್ ಜಾರಿಗೆ ತಂದಿದೆ. ಬೇಡದ ಚಿನ್ನವನ್ನು ಬ್ಯಾಂಕಿನಲ್ಲಿ ಡೆಪಾಸಿಟ್ ಮಾಡಿ ಅದರ ಮೇಲೆ ಬಡ್ಡಿಯನ್ನು ಪಡೆಯಬಹದು. ಮರಳಿ ಚಿನ್ನ ಬೇಕಾದಾಗ ಅದನ್ನು ಕೂಡ ಪಡೆದುಕೊಳ್ಳಬಹುದು. ಆದರೆ, ನಾವು ಇದಕ್ಕೆ ಸಿದ್ಧವಿದ್ದೇವೆಯೇ? ಖಂಡಿತ ಇಲ್ಲ. ಭಾರತೀಯರ ಮನೆಯಲ್ಲಿರುವ ಚಿನ್ನದ ಬಗ್ಗೆ ಮಾತಾಡಿದರೆ ಯಾವ ಸರಕಾರವೂ ಉಳಿಯುವು ದಿಲ್ಲ! ಆ ಕಾರಣಕ್ಕೆ ಯಾವ ಸರಕಾರಗಳೂ ಮಾತಾಡುವುದಿಲ್ಲ. ಸೆಂಟಿಮೆಂಟ್ ಮುಂದೆ ಯಾವ ಲಾಜಿಕ್ ಕೆಲಸ ಮಾಡುವುದಿಲ್ಲ.
ಮೇಲಿನ ಲೆಕ್ಕಾಚಾರಗಳ ಪ್ರಕಾರ ಚಿನ್ನ ಕೊಳ್ಳುವುದು ಹೆಚ್ಚಿನ ಲಾಭದಾಯಕವಲ್ಲ. ಆದರೆ, ನಮ್ಮ ಸಮಾಜದಲ್ಲಿ ಅದನ್ನು ಅಸ್ಥಿರ ಸಮಯದಲ್ಲಿ, ಕಷ್ಟದ ಸಮಯದಲ್ಲಿ ಕಾಪಾಡುವ ಆಪತ್ ಧನ ಎನ್ನುವಂತೆ ನೋಡಲಾಗುತ್ತದೆ. ಕೆಟ್ಟ ಪರಿಸ್ಥಿತಿಯಲ್ಲೂ ನಾವು ಚಿನ್ನ ಮಾರುವುದನ್ನು ಇಷ್ಟ ಪಡುವುದಿಲ್ಲ. ಬದಲಿಗೆ ಅದನ್ನು ಅಡವಿಟ್ಟು ಹಣ ಪಡೆದುಕೊಂಡು, ಉತ್ತಮ ದಿನಗಳಲ್ಲಿ ಮತ್ತೆ ಅಡವಿಟ್ಟ ಒಡವೆಯನ್ನು ಬಿಡಿಸಿ ಕೊಳ್ಳುವುದೇ ಎಲ್ಲ ಮಧ್ಯಮ ವರ್ಗದವರ ಕಾರ್ಯ ವೈಖರಿ ಯಾಗಿರುತ್ತದೆ.
ಚಿನ್ನದ ಮೇಲಿನ ಮೋಹ ಅಂತಹದ್ದು! ಗಳಿಸಿದ, ಉಳಿಸಿದ ಹಣವನ್ನು ಆಸೆಯಿಂದ ಚಿನ್ನ ಕೊಳ್ಳಲು ಪ್ರತಿಯೊಬ್ಬ ಜನ ಸಾಮಾನ್ಯ ಬಯಸುತ್ತಾನೆ. ಕೊಂಡ ನಂತರ ಅದನ್ನು ಸಂರಕ್ಷಿಸುವ ಹೊಣೆಗಾರಿಕೆ ಕೂಡ ಮೈಮೇಲೆ ಎಳೆದುಕೊಳ್ಳುತ್ತಾನೆ. ನಮ್ಮದು ಅರೆಕಲಿತ ಸಮಾಜ. ಹೀಗಾಗಿ ಎಲ್ಲರಿಗೂ ಹೀಗೆ ಮಾಡಬೇಡಿ ಎನ್ನುವುದು ಸಾಧ್ಯವಿಲ್ಲದ ಮಾತಾಗುತ್ತದೆ.
ಅಲ್ಪಸ್ವಲ್ಪವಾದರೂ ಅರ್ಥವಾಗುವವರು ಈಕ್ವಿಟಿ ಗೋಲ್ಡ್ ಫಂಡ್‌ಗಳ ಮೇಲೆ, ಗೋಲ್ಡ್ ಇಟಿಎಫ್ʼಗಳ ಮೇಲೆ ಹೂಡಿಕೆ ಮಾಡಬಹುದು. ಈ ಹಿಂದೆ ಸರಕಾರ ಹೊರಡಿಸುತ್ತಿದ್ದ ಸಾವರಿನ್ ಗೋಲ್ಡ ಬಾಂಡುಗಳು ಕೂಡ ಅತ್ಯುತ್ತಮವಾಗಿದ್ದವು. ಸರಕಾರ ಮುಂದೆ ಅದನ್ನು ಹೊರಡಿಸಿದರೆ ಅದರಲ್ಲಿ ಹೂಡಿಕೆ ಮಾಡಬಹುದು.
ಇದ್ಯಾವುದನ್ನೂ ನಂಬದ ಅತಿ ದೊಡ್ಡ ವರ್ಗವೊಂದಿದೆ, ಆ ವರ್ಗ ಯಾರ ಮಾತನ್ನೂ ಕೇಳುವು ದಿಲ್ಲ. ಇವತ್ತಿನ ಎಲ್ಲ ಪ್ರಮುಖ ಆಭರಣ ವ್ಯಾಪಾರಿಗಳು ಹೊರಡಿಸಿರುವ ಗೋಲ್ಡ್ ಚೀಟಿಯಲ್ಲಿ ಅವರು ಸಂತೃಪ್ತಿ ಕಾಣುತ್ತಾರೆ. ಅವರಿಗೆ ಲಾಭ, ನಷ್ಟದ ಲೆಕ್ಕಾಚಾರ ಅದೆಷ್ಟೇ ಬಿಡಿಸಿ ಹೇಳಿದರೂ ಅರ್ಥವಾಗುವುದಿಲ್ಲ. ಅವರ ಕಣ್ಣಿಗೆ ಮಗಳ ಮದುವೆಗೆ ಎಂದು ಚಿನ್ನ ತೆಗೆಯುತ್ತಿದ್ದೇನೆ ಎನ್ನುವುದು ಕಾಣಬೇಕು. ಅದನ್ನು ಹತ್ತಾರು ಜನರಿಗೆ ಹೆಮ್ಮೆಯಿಂದ ಹೇಳಿಕೊಳ್ಳಬೇಕು. ಆಗ ಮಾತ್ರ ತೃಪ್ತಿ.
ಇದೊಂದು ರೀತಿಯ ಮಾಯೆ, ವ್ಯಾಮೋಹ. ಎಲ್ಲರನ್ನೂ ಒಂದಲ್ಲ ಒಂದು ರೀತಿಯಲ್ಲಿ ಕಾಡುತ್ತದೆ. ನಾವು ಸಾಧಿಸಿದ್ದು ಇನ್ನೊಬ್ಬರು, ಅದರಲ್ಲೂ ನಮ್ಗೆ ಬೇಕಾದವರು, ಹತ್ತಿರದ ಬಂಧು ಮಿತ್ರರು ನೋಡಿ ಹೊಗಳಲಿಲ್ಲ ಎಂದ ಮೇಲೆ ಆ ಸಾಧನೆ ಮಾಡಿ ಪ್ರಯೋಜನವಾದರೂ ಏನು ಅಲ್ವಾ? ಎನ್ನುವ ಮನಸ್ಥಿತಿ ಅದೆಷ್ಟು ಪ್ರಬಲ. ಅದಕ್ಕೆ ಹೇಳಿದ್ದು ಸೆಂಟಿ ಮೆಂಟ್ ಮುಂದೆ ಲಾಜಿಕ್ ಕೆಲಸ ಮಾಡುವುದಿಲ್ಲ ಎಂದು! ಇವೆಲ್ಲವೂ ಒತ್ತಟ್ಟಿಗಿರಲಿ. ಅಕ್ಷರ ಆರಾಧನೆ ಸಾಗುತ್ತಿರಲಿ, ಅಕ್ಷರ ಅಕ್ಷಯ ವಾಗಲಿ!