Dr Nagaraj Shenoy Column: ಆಸ್ಪತ್ರೆಗಳಿಗೂ ಲಗ್ಗೆ ಹಾಕಿದ ಎಂಬಿಎಗಳು
ಬಂದಿರುವ ರೋಗಿಗಳಿಗೆ ಎಲ್ಲಾ ತರಹದ ಸ್ಪೆಷಲಿಸ್ಟ್ ಡಾಕ್ಟರ್‌ಗಳು, ಸೌಕರ್ಯಗಳು ಒಂದೇ ಕಡೆ ಸಿಗುವಂತಾದರೆ ಅವರಿಗೂ, ಅವರ ಕುಟುಂಬದವರಿಗೂ ಒಳ್ಳೆಯದು ಮತ್ತು ಅನುಕೂಲಕರ ಎಂಬ ವಿಚಾರದೊಂದಿಗೆ ಅಂಥ ಆಸ್ಪತ್ರೆಗಳು ನಡೆಯುತ್ತಿದ್ದವು. ಒಳ್ಳೆಯ ಗಳಿಕೆಯೂ ಇತ್ತು. ನಾವೆಲ್ಲ ತೃಪ್ತಿ, ಸಮಾಧಾನದಿಂದಲೇ ಇದ್ದೆವು. ಅಂಥ ಸಮಯದಲ್ಲಿ ‘ನಿಮ್ಮ’ ಎಂಬಿಎಗಳು ನಮ್ಮ ಆಸ್ಪತ್ರೆಯ ಒಳಗಡೆ ಬಂದ್ರು" ಅಂತ ಹೇಳಿ ನನ್ನೆಡೆಗೆ ಬೆರಳು ತೋರಿಸಿ ಮುಗುಳ್ನಕ್ಕರು.
-
ಭಿನ್ನರಾಶಿ
ಡಾ.ನಾಗರಾಜ ಶೆಣೈ
ಆ ಹಿರಿಯ ವೈದ್ಯರನ್ನು ಭೇಟಿಯಾಗಲು ನನ್ನ ಪತ್ನಿಯ ಜತೆಗಾರನಾಗಿ ಹೋಗಿದ್ದೆ. ಪತ್ನಿಯ ತಪಾಸಣೆ ಮುಗಿದು ಪ್ರಿಸ್ಕ್ರಿಪ್ಷನ್ ಬರೆದಾದ ನಂತರ ನನ್ನೊಂದಿಗೆ ಕುಶಲ ಮಾತುಕತೆಗಿಳಿದ ವೈದ್ಯರು, “ನೀವೇನು ಮಾಡ್ತಾ ಇದ್ದೀರಿ?" ಅಂತ ನನ್ನ ಉದ್ಯೋಗದ ಕುರಿತು ಕೇಳಿದರು. ಕಾಲೇಜೊಂದರಲ್ಲಿ ಪ್ರಾಧ್ಯಾಪಕನಾಗಿರುವ ಕುರಿತು ನಾನು ಹೇಳಿದೆ.
“ಯಾವ ಕೋರ್ಸ್ ಕಲಿಸುತ್ತೀರಿ?" ಎಂಬ ಅವರ ಪ್ರಶ್ನೆಗೆ ನಾನು “ಎಂಬಿಎ" ಎಂದು ಹೇಳಿದೆ. ಆಗ ಅವರು ಎಂಬಿಎ ಕುರಿತಾದ ತಮ್ಮ ಅನುಭವ-ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾ, “ಮುಂಚೆ ನಾವು ಸಹ ಅನೇಕ ಜನ ಡಾಕ್ಟರ್‌ಗಳು ಸೇರಿಕೊಂಡು ಹಾಸ್ಪಿಟಲ್‌ಗಳನ್ನು ನಡೆಸುತ್ತಾ ಇದ್ದೆವು.
ಬಂದಿರುವ ರೋಗಿಗಳಿಗೆ ಎಲ್ಲಾ ತರಹದ ಸ್ಪೆಷಲಿಸ್ಟ್ ಡಾಕ್ಟರ್‌ಗಳು, ಸೌಕರ್ಯಗಳು ಒಂದೇ ಕಡೆ ಸಿಗುವಂತಾದರೆ ಅವರಿಗೂ, ಅವರ ಕುಟುಂಬದವರಿಗೂ ಒಳ್ಳೆಯದು ಮತ್ತು ಅನುಕೂಲಕರ ಎಂಬ ವಿಚಾರದೊಂದಿಗೆ ಅಂಥ ಆಸ್ಪತ್ರೆಗಳು ನಡೆಯುತ್ತಿದ್ದವು. ಒಳ್ಳೆಯ ಗಳಿಕೆಯೂ ಇತ್ತು. ನಾವೆಲ್ಲ ತೃಪ್ತಿ, ಸಮಾಧಾನದಿಂದಲೇ ಇದ್ದೆವು. ಅಂಥ ಸಮಯದಲ್ಲಿ ‘ನಿಮ್ಮ’ ಎಂಬಿಎಗಳು ನಮ್ಮ ಆಸ್ಪತ್ರೆಯ ಒಳಗಡೆ ಬಂದ್ರು" ಅಂತ ಹೇಳಿ ನನ್ನೆಡೆಗೆ ಬೆರಳು ತೋರಿಸಿ ಮುಗುಳ್ನಕ್ಕರು. ನಂತರ ಅವರು ತುಸು ಗಂಭೀರವಾಗಿ ಮುಂದುವರಿದು, “ಹಾಗೆ ಬಂದ ಎಂಬಿಎಗಳು, ‘ನಾವು ನಿಮ್ಮ ಹಾಸ್ಪಿಟಲ್‌ಗಳನ್ನು ಇನ್ನೂ ಚೆನ್ನಾಗಿ, ಪ್ರೊಫೆಷನಲ್ ಆಗಿ ಮ್ಯಾನೇಜ್ ಮಾಡ್ತೀವಿ; ಅದರಿಂದಾಗಿ ಆಸ್ಪತ್ರೆಗೆ ಇನ್ನೂ ಹೆಚ್ಚಿನ ಲಾಭ, ಡಾಕ್ಟರುಗಳಿಗೆ ಇನ್ನೂ ಹೆಚ್ಚಿನ ಆದಾಯ ಸಿಗಲಿದೆ’ ಅಂದರು.
ಇದನ್ನೂ ಓದಿ: Janamejaya Umarji Column: ನಿಜಮಹಾತ್ಮ ಬಾಬಾಸಾಹೇಬ: ಒಂದು ಶುರುವಾತು
ಈ ಆಫೀಸ್ ಕೆಲಸ, ಅಡ್ಮಿನಿಸ್ಟ್ರೇಷನ್ ಕೆಲಸ ಇವು ನಮಗೂ ಕಿರಿಕಿರಿಯೇ ಆಗಿದ್ದವು. ಇವೆಲ್ಲಾ ಕೆಲಸಗಳನ್ನು ಅವರು ನೋಡಿಕೊಂಡರೆ ನಾವು ಬರೀ ರೋಗಿಗಳ ರೋಗಪತ್ತೆ, ಚಿಕಿತ್ಸೆ, ಉಪಚಾರ ಇಂಥವನ್ನೆಲ್ಲ ನೋಡಿಕೊಂಡು ಇರಬಹುದು ಅಂತ ಅಂದುಕೊಂಡು, ‘ಆಯ್ತು’ ಅಂತ ಒಪ್ಪಿಕೊಂಡೆವು.
ಆಗ ಇವರು ಒಂದೊಂದಾಗಿ ತಮ್ಮ ಮ್ಯಾನೇಜ್‌ಮೆಂಟ್ ತಂತ್ರಗಳನ್ನು ಶುರುಮಾಡ ತೊಡಗಿದರು. ಎಲ್ಲಾ ವೈದ್ಯರಿಗೂ ಇಂತಿಷ್ಟು ಟಾರ್ಗೆಟ್ ಅಂತ ಫಿಕ್ಸ್ ಮಾಡತೊಡಗಿದರು. ಪ್ರತಿಯೊಬ್ಬ ವೈದ್ಯರೂ ಇಂತಿಷ್ಟು ವೈದ್ಯರನ್ನು ನೋಡಬೇಕು, ಇಂತಿಷ್ಟು ಬಿಲ್ ಮಾಡಬೇಕು ಅಂತೆಲ್ಲ ಹೇಳತೊಡಗಿದರು.
ನಾವು, ‘ಇದೇನು? ವೈದ್ಯರಿಗೆ ಅದ್ಯಾಕೆ ಟಾರ್ಗೆಟ್?’ ಅಂತ ಕೇಳಿದಾಗ ಅವರು, ‘ಆಗ ಮಾತ್ರವೇ ನಿಮ್ಮ ಆಸ್ಪತ್ರೆಗೆ ಹೆಚ್ಚಿನ ಲಾಭ, ನಿಮಗೂ ಹೆಚ್ಚಿನ ಆದಾಯ ಬರುತ್ತೆ’ ಅಂದರು. ಅದಾದ ಸ್ವಲ್ಪ ಹೊತ್ತಿನ ನಂತರ, ‘ಬ್ಲಡ್ ಟೆಸ್ಟ್, ಅಲ್ಟ್ರಾಸೌಂಡ್, ಎಂಆರ್‌ಐ, ಸಿ.ಟಿ. ಮುಂತಾದ ಪ್ರಭೇದದ ಸ್ಕ್ಯಾನಿಂಗ್ʼಗಳು, ಟೆಸ್ಟ್‌ಗಳನ್ನು ಹೆಚ್ಚೆಚ್ಚು ಬರೆದುಕೊಡಬೇಕು’ ಎಂದರು.
‘ಅಗತ್ಯ ಇದ್ದಾಗಲೇನೋ ಸರಿ, ಆದರೆ ಅನಗತ್ಯವಾಗಿ ಯಾಕೆ ಅವನ್ನೆಲ್ಲಾ ಬರೆದು ಕೊಡ ಬೇಕು?’ ಅನ್ನೋದು ನನ್ನಂಥವರ ದೊಡ್ಡ ಪ್ರಶ್ನೆಯಾಗಿತ್ತು. ಅದಕ್ಕೆ ಉತ್ತರವಾಗಿ ಎಂಬಿಎ ಗಳು, ‘ಇಲ್ಲ, ಇಲ್ಲ, ಬರೆದುಕೊಡಲೇಬೇಕು. ಹಾಗೆ ಮಾಡಿದರೆ ಮಾತ್ರ ಆ ಮಷಿನ್‌ಗಳಿಗೆ ಹಾಕಿದ ದುಡ್ಡು ಬೇಗ ವಾಪಸ್ ಬರುತ್ತೆ’ ಅಂದ್ರು. ನಮಗ್ಯಾಕೋ ಇದು ಯಾವುದೂ ಸರಿಕಾಣಲಿಲ್ಲ. ಆದರೆ ನಾವು ಅಷ್ಟು ತಲೆ ಕೆಡಿಸಿಕೊಳ್ಳಲಿಲ್ಲ.
ನಮ್ಮ ಎಂದಿನ ಅಭ್ಯಾಸಗಳನ್ನೇ ಮುಂದುವರಿಸಿದೆವು.....“ಕೆಲ ದಿನಗಳ ನಂತರ ಅನೇಕ ತರುಣ ವೈದ್ಯರು ನಮ್ಮ ಆಸ್ಪತ್ರೆಗಳನ್ನು ಸೇರಿಕೊಂಡರು. ಅವರೆಲ್ಲರೂ ಈ ಎಂಬಿಎಗಳು ಹೇಳಿದ್ದನ್ನು ಅಕ್ಷರಶಃ ಪಾಲಿಸುತ್ತಾ ಹೋದರು. ಪ್ರತಿಯಾಗಿ ಅವರಿಗೇ ಹೆಚ್ಚು ಪ್ರಾಧಾನ್ಯ ಸಿಗತೊಡಗಿತು. ಆಗ ನನ್ನಂಥವರೆಲ್ಲ ಹಿಂದುಳಿದುಬಿಟ್ಟೆವು.
ಬರ್ತಾ ಬರ್ತಾ ಈ ಹೊಸ ಡಾಕ್ಟರ್‌ಗಳಿಗೆ ಹೆಚ್ಚಿನ ಇನ್ಸೆಂಟಿವ್, ವಿದೇಶ ಪ್ರಯಾಣಯೋಗ, ಪ್ರಶಸ್ತಿ ಅಂತೆಲ್ಲ ಬರಲಿಕ್ಕೆ ಶುರುವಾಯಿತು. ನಾವುಗಳು ಇದನ್ನೆಲ್ಲಾ ನೋಡ್ತಾ ಸೈಡಿನಲ್ಲಿ ನಿಂತು, ಚಪ್ಪಾಳೆ ಹೊಡೆಯುವ ಕೆಲಸಕ್ಕೆ ಸೀಮಿತವಾಗಿಬಿಟ್ಟೆವು. ಕಡೆಕಡೆಗೆ ನಮ್ಮ ಪರ್ಫಾ ಮೆನ್ಸ್ ಅಪ್ರೈಸಲ್‌ಗಳಲ್ಲೂ ಅವರಿಗೇ ಹೆಚ್ಚಿನ ಕ್ರೆಡಿಟ್ಟು, ಸ್ಯಾಲರಿ ಹೈಕು.
ಯಾರು ಒಳ್ಳೆಯ ಡಾಕ್ಟರ್ ಅಂದರೆ ಹೆಚ್ಚಿನ ಕಾಯಿಲೆಯನ್ನು ವಾಸಿ ಮಾಡಿದವರಾಗಿರ ಲಿಲ್ಲ; ಆಸ್ಪತ್ರೆಗೆ ಹೆಚ್ಚು ಲಾಭ ತಂದುಕೊಟ್ಟವರಾರು ಅನ್ನೋದರ ಮೇಲೆ ಪ್ರಾಧಾನ್ಯದ ನಿರ್ಧಾರವಾಗಲಿಕ್ಕೆ ಶುರುವಾಯಿತು. ಆಸ್ಪತ್ರೆಗೆ ಬರೋ ಎಲ್ಲರಿಗೂ ದೊಡ್ಡ ಕಾಯಿಲೆಯ ಟೆಸ್ಟುಗಳು, ಮಾತ್ರೆಗಳು, ಟ್ರೀಟ್‌ಮೆಂಟ್ ಷೆಡ್ಯೂಲ್ʼಗಳು ಸಾಮಾನ್ಯವಾಗುತ್ತಾ ಹೋದವು. ಅದನ್ನೆಲ್ಲಾ ನಮ್ಮಿಂದ ನೋಡಲಾಗಲಿಲ್ಲ. ಹೀಗಾಗಿ ಹೊಸಬರು ಮೇಲೆ ಏರುತ್ತಾ ಹೋದರು, ನನ್ನಂಥವರು ಅಲ್ಲಿಂದ ಹೊರಗೆ ಬಂದುಬಿಟ್ಟೆವು..."ಹೀಗೆ ಆ ವೈದ್ಯರು ಎಂಬಿಎಗಳ ಜನ್ಮ ಜಾಲಾಡುತ್ತಾ ಹೋದರು.
ನಾವಿಂದು Corporitazation ಎಂದು ಕರೆಯುವ, ಮಾನವೀಯ ಭಾವನೆಗಳಿಂದ ಮುಕ್ತ ವಾದ, ನಿಯಮಬಂಧಿತ ಎನಿಸಿರುವ, ಕೇವಲ ಲಾಭಾಪೇಕ್ಷೆಯ ಪ್ರಕ್ರಿಯೆಯನ್ನು ಆ ವೈದ್ಯರು ತಮ್ಮದೇ ಆದ ಶೈಲಿಯಲ್ಲಿ ಹೀಗೆ ಹೇಳಿದ್ದರು. ಆದರೆ ಅವರ ಯಾವ ಟೀಕೆಗೂ, ಲೇವಡಿಗೂ ನನ್ನಲ್ಲಿ ಉತ್ತರವಿರಲಿಲ್ಲ.
ಹೀಗಾಗಿಯೇ ನೋಡಿ, ಹಿಂದಿನ ಕಾಲದ ನಮ್ಮ ಡಾಕ್ಟರ್‌ಗಳು, “ಅಯ್ಯೋ, ನಿಮಗೆ ಯಾವುದೇ ಕಾಯಿಲೇನೇ ಇಲ್ಲಾರೀ. ಸುಮ್ನೇ ದಿನಾ ಇದೊಂದಿಷ್ಟು ಮಾತ್ರೆ ತಗೊಳ್ಳಿ. ಸಕ್ಕರೆ, ಎಣ್ಣೆ ಪದಾರ್ಥ ತಿನ್ನೋದನ್ನ ನಿಲ್ಲಿಸಿ. ಬೆಳಗ್ಗೆ-ಸಾಯಂಕಾಲ ಒಂದು ಗಂಟೆಯಷ್ಟು ನಡಿಗೆಗೆ ಒಡ್ಡಿಕೊಳ್ಳಿ, ಎಲ್ಲವೂ ಸರಿಹೋಗುತ್ತೆ" ಅಂತ ಕಾಯಿಲೆ ಇರೋರಿಗೆ ಹೇಳಿ, ಅವರ ಕಾಯಿಲೆಯನ್ನು ವಾಸಿಮಾಡುತ್ತಿದ್ದರು.
ಈಗ ಅಂಥದೇನೂ ಗಂಭೀರ ಕಾಯಿಲೆ ಇಲ್ಲದವರಿಗೂ ‘ಆ ಟೆಸ್ಟು, ಈ ಟೆಸ್ಟು’ ಅಂತೆಲ್ಲ ಹೇಳಿ ಮಾಡಿಸಿ, “ಬಹಳ ಸೀರಿಯಸ್ ಆಗಿದೆ, ಸರ್ಜರಿ ಮಾಡಲೇಬೇಕು, ಅದನ್ನು ಈಗಲೇ ಮಾಡಬೇಕು" ಅಂತ ಹೇಳಿ, ಆಪರೇಷನ್ ಥಿಯೇಟರ್‌ಗೆ ಎಳೆದೊಯ್ದು, ಅವರನ್ನು ಜೀವನ ಪರ್ಯಂತದ ರೋಗಿಗಳನ್ನಾಗಿ ಮಾಡುವ ಆಸ್ಪತ್ರೆಗಳಿವೆ. ವೈದ್ಯಕೀಯ ಶಾಸ್ತ್ರ ಮತ್ತು ತಂತ್ರಜ್ಞಾನವು ಅತ್ಯಂತ ಮುಂದುವರಿದಿರುವ ವರ್ತಮಾನದ ಕಾಲದ ಈ ವ್ಯಂಗ್ಯವು ನನ್ನನ್ನು ಬಹಳ ಕಾಡುತ್ತದೆ!
(ಲೇಖಕರು ಶಿಕ್ಷಣತಜ್ಞರು ಹಾಗೂ ಚಿಂತಕರು