ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gururaj Gantihole Column: ಡಿಕೆಶಿಯವರೇ, ಶಾಸಕರ ನಿಧಿ 10 ಕೋಟಿಗೆ ಏರಿಸಲು ಇದು ಸಕಾಲವಲ್ಲವೇ ?

ನಮ್ಮೂರಿನ ರಸ್ತೆ ಸಂಪೂರ್ಣವಾಗಿ ಹದಗೆಟ್ಟಾಗ, ಮಳೆಯಿಂದಾಗಿ ಸರ್ಕಾರಿ ಶಾಲೆಯ ಮೇಲ್ಛಾವಣಿ ಕುಸಿದುಬಿದ್ದಾಗ, ಕುಡಿಯುವ ನೀರಿನ ಘಟಕ ಕೆಟ್ಟುಹೋದಾಗ ಅಥವಾ ಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೂಲಸೌಕರ್ಯಗಳ ಕೊರತೆ ಎದುರಾದಾಗ ನಾವೆಲ್ಲರೂ ಅತಿ ಸುಲಭವಾಗಿ ಮತ್ತು ನೇರವಾಗಿ ಮೊದಲು ದೂಷಿಸುವುದು ತಮ್ಮ ತಮ್ಮ ಕ್ಷೇತ್ರದ ಶಾಸಕರನ್ನು.

ಡಿಕೆಶಿಯವರೇ, ಶಾಸಕರ ನಿಧಿ 10 ಕೋಟಿಗೆ ಏರಿಸಲು ಇದು ಸಕಾಲವಲ್ಲವೇ ?

-

ಗಂಟಾಘೋಷ

ಭಾರತದಲ್ಲಿ ಶಾಸಕರ ನಿಧಿಗೆ ಒಂದೇ ರೀತಿಯ ಕೇಂದ್ರ ನಿಯಮಗಳಿಲ್ಲ; ಪ್ರತಿ ರಾಜ್ಯವೂ ತನ್ನದೇ ಆದ ವಾರ್ಷಿಕ ಮೊತ್ತ, ಬಿಡುಗಡೆಯ ವಿಧಾನ ಮತ್ತು ಬಳಕೆಯ ನಿಯಮ ನಿಗದಿಪಡಿಸುವ ಸ್ವಾತಂತ್ರ್ಯ ಹೊಂದಿದೆ. ಅಂಕಿ-ಅಂಶ ಗಮನಿಸಿದರೆ, ಕರ್ನಾಟಕದ ಶಾಸಕರ ಪಾಡು ನಿಜಕ್ಕೂ ಶೋಚನೀಯವಾಗಿದೆ. ಕರ್ನಾಟಕದಲ್ಲಿ ಶಾಸಕರಿಗೆ ಸಿಗುವುದು ಕೇವಲ 2 ಕೋಟಿ ರೂಪಾಯಿ ಮಾತ್ರ! 2013-14ನೇ ಸಾಲಿನಲ್ಲಿ 1 ಕೋಟಿಯಿಂದ 2 ಕೋಟಿಗೆ ಏರಿಕೆಯಾದ ಈ ಮೊತ್ತ, ದಶಕ ಕಳೆದರೂ ಒಂದು ಪೈಸೆಯಷ್ಟೂ ಹೆಚ್ಚಾಗಿಲ್ಲ.

ನಮ್ಮೂರಿನ ರಸ್ತೆ ಸಂಪೂರ್ಣವಾಗಿ ಹದಗೆಟ್ಟಾಗ, ಮಳೆಯಿಂದಾಗಿ ಸರ್ಕಾರಿ ಶಾಲೆಯ ಮೇಲ್ಛಾವಣಿ ಕುಸಿದುಬಿದ್ದಾಗ, ಕುಡಿಯುವ ನೀರಿನ ಘಟಕ ಕೆಟ್ಟುಹೋದಾಗ ಅಥವಾ ಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೂಲಸೌಕರ್ಯಗಳ ಕೊರತೆ ಎದುರಾದಾಗ ನಾವೆಲ್ಲರೂ ಅತಿ ಸುಲಭವಾಗಿ ಮತ್ತು ನೇರವಾಗಿ ಮೊದಲು ದೂಷಿಸುವುದು ತಮ್ಮ ತಮ್ಮ ಕ್ಷೇತ್ರದ ಶಾಸಕರನ್ನು.

ಇಂತಹ ಸಂದರ್ಭಗಳಲ್ಲಿ ಶಾಸಕರ ಬಳಿ ಹೋದಾಗ ಅವರು ಬಹಳ ಸುಲಭವಾಗಿ ಕೊಡುವ ಸಿದ್ಧ ಉತ್ತರವೆಂದರೆ, ಸರ್ಕಾರದಿಂದ ಕ್ಷೇತ್ರಕ್ಕೆ ಈ ಬಾರಿ ಯಾವುದೇ ಅನುದಾನವೇ ಬಂದಿಲ್ಲ, ನಾನೇನು ಮಾಡಲಿ? ಆದರೆ, ವಾಸ್ತವದಲ್ಲಿ ಪ್ರತಿಯೊಬ್ಬ ಶಾಸಕನಿಗೂ ತನ್ನ ಕ್ಷೇತ್ರದ ಇಂತಹ ತುರ್ತು ಅಭಿವೃದ್ಧಿ ಕಾಮಗಾರಿಗಳಿಗಾಗಿ ಮತ್ತು ಸಾರ್ವಜನಿಕರ ದಿಢೀರ್ ಬೇಡಿಕೆಗಳನ್ನು ಈಡೇರಿಸುವು ದಕ್ಕಾಗಿ ಪ್ರತಿ ವರ್ಷ ಕಡ್ಡಾಯವಾಗಿ ಮೀಸಲಿಡಲಾಗುವ ‘ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ’ ಅಂದರೆ ‘ಶಾಸಕರ ನಿಧಿ’ ಎಂಬ ಆರ್ಥಿಕ ಬ್ರಹ್ಮಾಸ್ತ್ರವೊಂದಿದೆ.

ಇದನ್ನೂ ಓದಿ: Gururaj Gantihole Column: ವಿಷನ್‌ 2027: ಗುರಿ ಮತ್ತು ದಾರಿ ಇದೆ, ಕ್ರಮಿಸುವ ಇಂಜಿನ್‌ ಎಲ್ಲಿದೆ?

ಅನ್ಯರ ಮುಂದೆ ಕರ್ನಾಟಕದ ದುಃಸ್ಥಿತಿ!

ಬಹಳಷ್ಟು ಜನರಿಗೆ ಇರುವ ಅತಿ ದೊಡ್ಡ ತಪ್ಪು ಕಲ್ಪನೆ ಎಂದರೆ, ಶಾಸಕರ ನಿಧಿಯ ಈ ಎರಡು ಕೋಟಿ ರೂಪಾಯಿ ಹಣವನ್ನು ಶಾಸಕರ ಕೈಗೇ ನೇರವಾಗಿ ಧನಾದೇಶದ ಮೂಲಕ ಒದಗಿಸಲಾಗು ತ್ತದೆ ಹಾಗೂ ಶಾಸಕರೇ ಖುದ್ದಾಗಿ ಗುತ್ತಿಗೆದಾರರಿಗೆ ಹಣ ವಿತರಿಸುತ್ತಾರೆ ಎಂದು. ಆದರೆ ವಾಸ್ತವದ ತಾಂತ್ರಿಕ ಪ್ರಕ್ರಿಯೆಯೇ ಸಂಪೂರ್ಣ ಭಿನ್ನವಾಗಿದೆ. ಶಾಸಕರಿಗೆ ನೇರವಾಗಿ ಹಣ ನೀಡುವ ಬದಲಿಗೆ, ಅವರು ತಮ್ಮ ಅಧಿಕೃತ ಪತ್ರದಲ್ಲಿ ಕ್ಷೇತ್ರದ ತುರ್ತು ಕಾಮಗಾರಿಗಳನ್ನು ಕೇವಲ ಶಿಫಾರಸು ಮಾಡಲಷ್ಟೇ ಅರ್ಹರಾಗಿರುತ್ತಾರೆ.

ಶಾಸಕರು ನೀಡಿದ ಈ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳು ಅಥವಾ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೇತೃತ್ವದ ಉಸ್ತುವಾರಿ ಸಂಸ್ಥೆಯು ಕೂಲಂಕಷವಾಗಿ ಪರಿಶೀಲಿಸುತ್ತದೆ. ಆ ನಿರ್ದಿಷ್ಟ ಕಾಮಗಾರಿಯು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಮಾರ್ಗಸೂಚಿಯಲ್ಲಿರುವ ನಿಗದಿತ 56 ಅರ್ಹ ಕಾಮಗಾರಿಗಳ ಪಟ್ಟಿಯಲ್ಲಿದೆಯೇ ಹಾಗೂ ಆ ಯೋಜನೆಗೆ ಯಾವುದೇ ರೀತಿಯ ಜಾಗದ ವಿವಾದಗಳಿಲ್ಲವೇ ಎಂಬುದನ್ನು ಖಚಿತಪಡಿಸಿಕೊಂಡ ನಂತರವಷ್ಟೇ, ಮುಂದಿನ ಹಂತದ ಪ್ರಕ್ರಿಯೆಗಾಗಿ ಅದನ್ನು ಸಂಬಂಧಪಟ್ಟ ನಿರ್ವಹಣಾ ಇಲಾಖೆಗೆ (ಉದಾಹರಣೆಗೆ ಲೋಕೋಪಯೋಗಿ ಇಲಾಖೆ, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ ಅಥವಾ ಪಂಚಾಯತ್ ರಾಜ್ ಅಭಿಯಂತರ ವಿಭಾಗಕ್ಕೆ) ರವಾನಿಸಲಾಗುತ್ತದೆ.

ಮುಂದೆ ಸಂಬಂಧಪಟ್ಟ ನಿರ್ವಹಣಾ ಇಲಾಖೆಯು ಆ ಕಾಮಗಾರಿಯ ಸ್ಥಳ ಪರಿಶೀಲನೆ ನಡೆಸಿ, ನೀಲನಕ್ಷೆ ಹಾಗೂ ನಿಖರವಾದ ತಾಂತ್ರಿಕ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿದ ಮೇಲೆ ಅದಕ್ಕೆ ಅಽಕೃತವಾಗಿ ತಾಂತ್ರಿಕ ಮತ್ತು ಆಡಳಿತಾತ್ಮಕ ಅನುಮೋದನೆ ನೀಡಲಾಗುತ್ತದೆ. ತದನಂತರ ನಿಯಮಾನುಸಾರ ಪಾರದರ್ಶಕ ವಿದ್ಯುನ್ಮಾನ ಗುತ್ತಿಗೆ ಪ್ರಕ್ರಿಯೆಯ ಮೂಲಕ ಗುತ್ತಿಗೆದಾರರನ್ನು ನೇಮಿಸಿ, ಕಾಮಗಾರಿಯ ಭೌತಿಕ ಪ್ರಗತಿಯ ಆಧಾರದ ಮೇಲೆ ಕಿರಿಯ ಅಭಿಯಂತರರು ಅಳತೆ ಪುಸ್ತಕದಲ್ಲಿ ದಾಖಲಿಸಿದಂತೆ ಹಂತ ಹಂತವಾಗಿ ಪಾವತಿ ಪತ್ರಗಳ ಆಧಾರದ ಮೇಲೆ ಗುತ್ತಿಗೆದಾರರ ಬ್ಯಾಂಕ್ ಖಾತೆಗೆ ನೇರವಾಗಿ ಹಣವನ್ನು ಬಿಡುಗಡೆ ಮಾಡಲಾಗುತ್ತದೆ.

dks and money ok

ಅಂತಿಮವಾಗಿ ಕಾಮಗಾರಿ ಮುಗಿದು, ಬಳಕೆಯ ಪ್ರಮಾಣಪತ್ರ ಸಲ್ಲಿಕೆಯಾದಾಗ ಮಾತ್ರ ಆ ಪ್ರಸ್ತಾವನೆಯ ಸಂಪೂರ್ಣ ಪ್ರಕ್ರಿಯೆ ಅಂತ್ಯಗೊಳ್ಳುತ್ತದೆ. ಇಷ್ಟೆ ಬಿಗಿಭದ್ರತೆಯ ತಾಂತ್ರಿಕ ಹಾಗೂ ಪಾರದರ್ಶಕ ವ್ಯವಸ್ಥೆಯಿದ್ದರೂ, 2026ರ ಇಂದಿನ ವಾಸ್ತವವನ್ನು ರಾಷ್ಟ್ರಮಟ್ಟದಲ್ಲಿ ವಿಶ್ಲೇಷಿಸಿ ನೋಡಿದಾಗ, ಈ ನಿಧಿಯ ಹಂಚಿಕೆ ಮತ್ತು ಬಳಕೆಯಲ್ಲಿ ನಡೆಯುತ್ತಿರುವ ತಾರತಮ್ಯ, ಅಧಿಕಾರಿಗಳ ವಿಳಂಬ ನೀತಿ ಹಾಗೂ ಆಡಳಿತಾತ್ಮಕ ವೈಫಲ್ಯಗಳು ನಮ್ಮ ಕಣ್ಣು ತೆರೆಸುತ್ತವೆ.

ಭಾರತದಲ್ಲಿ ಶಾಸಕರ ನಿಧಿಗೆ ಯಾವುದೇ ಒಂದೇ ರೀತಿಯ ಕೇಂದ್ರ ನಿಯಮಗಳಿಲ್ಲ; ಬದಲಾಗಿ ಪ್ರತಿ ರಾಜ್ಯವೂ ತನ್ನದೇ ಆದ ವಾರ್ಷಿಕ ಮೊತ್ತ, ಬಿಡುಗಡೆಯ ವಿಧಾನ ಮತ್ತು ಬಳಕೆಯ ನಿಯಮ ಗಳನ್ನು ನಿಗದಿಪಡಿಸುವ ಸ್ವಾತಂತ್ರ್ಯ ಹೊಂದಿದೆ.

ರಾಷ್ಟ್ರಮಟ್ಟದ ಅಂಕಿ-ಅಂಶಗಳನ್ನು ಗಮನಿಸಿದರೆ, ಕರ್ನಾಟಕದ ಶಾಸಕರ ಪಾಡು ನಿಜಕ್ಕೂ ಶೋಚನೀಯವಾಗಿದೆ. ಒಂದು ಕಡೆ ನವದೆಹಲಿಯಲ್ಲಿ ಪ್ರತಿ ಶಾಸಕನಿಗೆ ವಾರ್ಷಿಕ ಬರೋಬ್ಬರಿ 15 ಕೋಟಿ ರೂಪಾಯಿಗಳ ಪ್ರದೇಶಾಭಿವೃದ್ಧಿ ನಿಧಿ ನೀಡಲಾಗುತ್ತಿದೆ. ಪಕ್ಕದ ತೆಲಂಗಾಣದಲ್ಲಿ 2026-27ರ ಸಾಲಿಗೆ ಶಾಸಕರಿಗೆ ಒಟ್ಟು 10 ಕೋಟಿ ರೂಪಾಯಿಗಳ ಅಭಿವೃದ್ಧಿ ಪ್ಯಾಕೇಜ್ ಘೋಷಣೆ ಯಾಗಿದೆ. ಕೇರಳದಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿ 5 ಕೋಟಿ ಹಾಗೂ ವಿಶೇಷ ಅಭಿವೃದ್ಧಿ ನಿಧಿ 1 ಕೋಟಿ ಸೇರಿ ಒಟ್ಟು 6 ಕೋಟಿ ರೂಪಾಯಿ ಲಭ್ಯವಿದೆ.

ಉತ್ತರ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಒಡಿಶಾ ಹಾಗೂ ಉತ್ತರಾಖಂಡದಂತಹ ರಾಜ್ಯಗಳಲ್ಲೂ ಪ್ರತಿ ಶಾಸಕನಿಗೆ ಕನಿಷ್ಠ 5 ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ. ತಮಿಳುನಾಡು ಮತ್ತು ಬಿಹಾರದಲ್ಲಿ ಇದು 3 ರಿಂದ 4 ಕೋಟಿಗಳಷ್ಟಿದೆ. ಆದರೆ, ಮಾಹಿತಿ ತಂತ್ರಜ್ಞಾನದಲ್ಲಿ ವಿಶ್ವಕ್ಕೇ ಮಾದರಿಯಾಗಿರುವ, ಲಕ್ಷಾಂತರ ಕೋಟಿ ಬಜೆಟ್ ಮಂಡಿಸುವ ಬೃಹತ್ ಆರ್ಥಿಕತೆಯನ್ನೇ ಹೊಂದಿರುವ ನಮ್ಮ ಕರ್ನಾಟಕದಲ್ಲಿ ಶಾಸಕರಿಗೆ ಸಿಗುವುದು ಕೇವಲ 2 ಕೋಟಿ ರೂಪಾಯಿ ಮಾತ್ರ!

2013-14ನೇ ಸಾಲಿನಲ್ಲಿ 1 ಕೋಟಿಯಿಂದ 2 ಕೋಟಿಗೆ ಏರಿಕೆಯಾದ ಈ ಮೊತ್ತ, ದಶಕ ಕಳೆದರೂ, ನಿರ್ಮಾಣ ಸಾಮಗ್ರಿಗಳ ಬೆಲೆ ಗಗನಕ್ಕೇರಿದ್ದರೂ, 2026ರ ಇಂದಿನವರೆಗೂ ಒಂದು ಪೈಸೆಯಷ್ಟೂ ಹೆಚ್ಚಾಗಿಲ್ಲ ಎಂಬುದು ರಾಜ್ಯ ಸರ್ಕಾರದ ಇಚ್ಛಾಶಕ್ತಿಯ ಕೊರತೆಯನ್ನು ಎತ್ತಿ ತೋರಿಸುತ್ತದೆ. 2013ರಲ್ಲಿ ಕೇವಲ 5 ಲಕ್ಷಕ್ಕೆ ಆಗುತ್ತಿದ್ದ ಒಂದು ಅಂಗನವಾಡಿ ಕಟ್ಟಡ, ಇಂದು ಕನಿಷ್ಠ 15 ಲಕ್ಷ ರೂಪಾಯಿ ಬೇಡುತ್ತದೆ. ಹೀಗಿರುವಾಗ ಅದೇ ಹಳೆಯ 2 ಕೋಟಿ ರೂಪಾಯಿಯಲ್ಲಿ ಶಾಸಕರು ನೂರಾರು ಹಳ್ಳಿಗಳಿರುವ ಇಡೀ ಕ್ಷೇತ್ರವನ್ನು ಹೇಗೆ ತಾನೇ ಅಭಿವೃದ್ಧಿಪಡಿಸಲು ಸಾಧ್ಯ?

ಹಿಂದಿನ ಅಸಲಿ ಕಾರಣ

ಸರಿ, ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ಶಾಸಕರಿಗೆ ಸಿಗುವ ಮೊತ್ತವೇನೋ ಬಹಳ ಕಡಿಮೆ ಯಿದೆ. ಆದರೆ, ಕನಿಷ್ಠ ಆ 2 ಕೋಟಿ ರೂಪಾಯಿಯನ್ನಾದರೂ ಸಂಪೂರ್ಣವಾಗಿ ಕ್ಷೇತ್ರದ ಅಭಿವೃದ್ಧಿಗೆ ಬಳಸುತ್ತಿದ್ದಾರೆಯೇ ಎಂದರೆ, ಅಲ್ಲಿಯೇ ಇರುವುದು ಅಸಲಿ ದುರಂತ!

ಲಭ್ಯವಿರುವ ವರದಿಗಳ ಪ್ರಕಾರ, ಹಿಂದಿನ ವರ್ಷಗಳ ಬಾಕಿ ಅನುದಾನವೂ ಸೇರಿ 2023-24ರ ಸಾಲಿನಲ್ಲಿ ಜಿಲ್ಲಾಧಿಕಾರಿಗಳ ಖಾತೆಗಳಲ್ಲಿ ಬರೋಬ್ಬರಿ 1264 ಕೋಟಿ ರೂಪಾಯಿಗಳಷ್ಟು ಶಾಸಕರ ನಿಧಿ ಜಮೆಯಾಗಿತ್ತು. ಆದರೆ ಆ ಪೈಕಿ ಕೇವಲ 218.23 ಕೋಟಿ ರೂಪಾಯಿಗಳು ಮಾತ್ರ ಅಭಿವೃದ್ಧಿ ಕಾರ್ಯಗಳಿಗಾಗಿ ಖರ್ಚಾಗಿದೆ.

ಅಂದರೆ ಲಭ್ಯವಿದ್ದ ಒಟ್ಟು ಹಣದಲ್ಲಿ ಕೇವಲ ಶೇಕಡಾ 20ರಷ್ಟು ಹಣ ಮಾತ್ರ ಬಳಕೆಯಾಗಿದೆ. ಉಳಿದ ಸಾವಿರಾರು ಕೋಟಿ ರೂಪಾಯಿಗಳು ಜಿಲ್ಲಾಧಿಕಾರಿಗಳ ಬ್ಯಾಂಕ್ ಖಾತೆಗಳಲ್ಲಿ ವರ್ಷಗಟ್ಟಲೆ ಹಾಗೆಯೇ ಬಿದ್ದಿವೆ. ಈ ಭಾರಿ ಪ್ರಮಾಣದ ಅನುದಾನ ಬಳಕೆಯಾಗದಿರುವುದರ ಹಿಂದೆ ಪ್ರಮುಖ ವಾಗಿ ಖಜಾನೆಯ ವಿಳಂಬ ಹಾಗೂ ಶಾಸಕ-ಅಧಿಕಾರಿಗಳ ನಡುವಿನ ಹಗ್ಗಜಗ್ಗಾಟ ಅಡಗಿದೆ.

ನಿಧಿ ಬಳಕೆಯಾಗದಿರಲು ಮೊದಲ ಹಾಗೂ ಮುಖ್ಯ ಕಾರಣವೆಂದರೆ ಖಜಾನೆಯಿಂದ ಹಣ ಪಾವತಿಯಾಗದೆ ತಡೆಯಾಗುವುದು. ಸರ್ಕಾರವು ಆಯವ್ಯಯದಲ್ಲಿ ಅನುದಾನ ಮೀಸಲಿಟ್ಟರೂ, ನಾನಾ ಕಾರಣಗಳಿಂದ ಅದು ಏಕಾಏಕಿ ಪೂರ್ಣವಾಗಿ ಬಿಡುಗಡೆಯಾಗದೆ ಕಂತುಗಳಲ್ಲಿ ಬರುವು ದರಿಂದ ಕಾಮಗಾರಿಗಳ ಹಣ ಪಾವತಿಗೆ ತೀವ್ರ ವಿಳಂಬವಾಗುತ್ತದೆ. ಇದರ ಜೊತೆಗೆ ಶಾಸಕರ ಮತ್ತು ಅಧಿಕಾರಿಗಳ ಆರೋಪ-ಪ್ರತ್ಯಾರೋಪಗಳು ಕೂಡ ಸೇರಿಕೊಳ್ಳುತ್ತವೆ.

ನಾವು ಕ್ಷೇತ್ರದ ಅಭಿವೃದ್ಧಿಗೆ ನೂರಾರು ಪ್ರಸ್ತಾವನೆಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸುತ್ತೇವೆ. ಆದರೆ ಅಧಿಕಾರಿಗಳು ವಿಳಂಬ ನೀತಿ ಮತ್ತು ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಕಡತಗಳನ್ನು ಅಲೆದಾಡಿಸುವ ಪ್ರವೃತ್ತಿಯಿಂದಾಗಿ ಕಾಮಗಾರಿಗಳು ದಶಕಗಳ ಕಾಲ ನೆನೆಗುದಿಗೆ ಬೀಳುತ್ತವೆ. ಒಂದು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಪ್ರಸ್ತಾವನೆ ಕಳುಹಿಸಿದರೆ, 3 ವರ್ಷವಾದರೂ ಅದು ಕಡತದ ಇರುತ್ತದೆ ಎಂದು ಶಾಸಕರು ದೂರುತ್ತಾರೆ. ಆದರೆ ಅಧಿಕಾರಿಗಳು ನೀಡುವ ಸ್ಪಷ್ಟನೆಯೇ ಬೇರೆ.

ಹಲವು ಶಾಸಕರು ತಮ್ಮ ಬಳಿಗೆ ಬರುವ ಸಾರ್ವಜನಿಕರ ಒತ್ತಡಕ್ಕೆ ಮಣಿದು, ಎಷ್ಟೋ ಬಾರಿ ಶಾಸಕರ ನಿಧಿಯ ನಿಗದಿತ 56 ನಿಯಮಾವಳಿಗಳಿಗಿಂತ ಹೊರತಾದ ಯೋಜನೆಗಳಿಗೂ ಅನುದಾನ ನೀಡುವಂತೆ ಪ್ರಸ್ತಾವನೆ ಕಳುಹಿಸಿಬಿಡುತ್ತಾರೆ. ಆ ನಿರ್ದಿಷ್ಟ ನಿಯಮಗಳ ಚೌಕಟ್ಟಿನಲ್ಲಿ ಬಾರದ ಇಂತಹ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಲು ಸಾಧ್ಯವಿಲ್ಲವಾದ್ದರಿಂದ, ಅನಿವಾರ್ಯವಾಗಿ ಆ ಯೋಜನೆಗಳನ್ನು ಬದಲಾಯಿಸಲೇಬೇಕಾಗುತ್ತದೆ, ಇದಕ್ಕೆ ಅತಿ ಹೆಚ್ಚಿನ ಸಮಯ ಹಿಡಿಯುತ್ತದೆ.

ಇನ್ನೊಂದೆಡೆ, ಈ ಸಣ್ಣ ಮೊತ್ತದ ಅನುದಾನ ಬಳಕೆಯಾಗದೆ ಮರಳಿ ಹೋಗುವುದು ಕೇವಲ ರಾಜ್ಯ ಮಾತ್ರವಲ್ಲದೆ ಇಡೀ ದೇಶವನ್ನೇ ಕಾಡುತ್ತಿರುವ ಬಹುದೊಡ್ಡ ಸಮಸ್ಯೆಯಾಗಿದ್ದು. ವಾಸ್ತವದಲ್ಲಿ ಶಾಸಕರ ಬಳಿ ಐವತ್ತಕ್ಕೂ ಹೆಚ್ಚು ಬೇಡಿಕೆಗಳು ಬರುತ್ತವೆ ಮತ್ತು ಪ್ರತಿಯೊಬ್ಬರೂ ಐವತ್ತು ಲಕ್ಷ ಅಥವಾ ಒಂದು ಕೋಟಿ ರೂಪಾಯಿಗಳ ಅನುದಾನ ಕೇಳುತ್ತಾರೆ.

ಆದರೆ ಹಲವು ಶಾಸಕರ ಬಳಿ ಇರುವ ಕಡಿಮೆ ಹಣವನ್ನು ಯಾರಿಗಾದರೂ ಮಂಜೂರು ಮಾಡಿದರೆ ಹಣ ಖಾಲಿಯಾಗುತ್ತದೆ ಹಾಗೂ ಅನುದಾನ ಸಿಗದ ಉಳಿದವರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಈ ವಿರೋಧಕ್ಕೆ ಹೆದರುವ ಶಾಸಕರು, ಯಾರಿಗೂ ಹಣ ನೀಡದೆ ಖಂಡಿತ ಕೊಡುತ್ತೇನೆ ಎಂದು ಕೇವಲ ಭರವಸೆ ಗಳನ್ನು ನೀಡುತ್ತಾ ಹಣವನ್ನು ತೋರಿಸಿ ಜನರನ್ನು ಕಾಯಿಸುತ್ತಲೇ ಇರುತ್ತಾರೆ. ಇನ್ನು ಕೆಲವರು ಈ ನಿಧಿಯನ್ನು ಕೇವಲ ಶಾಲೆಗಳಿಗೆ ಅಥವಾ ಕೇವಲ ದೇವಸ್ಥಾನಗಳಿಗೆ ಮಾತ್ರ ಸಂಪೂರ್ಣವಾಗಿ ಮೀಸಲಿಡುತ್ತಾರೆ.

ಬದಲಾವಣೆಯತ್ತ ಹೆಜ್ಜೆ

ಕರ್ನಾಟಕದಲ್ಲಿ ಶಾಸಕರ ನಿಧಿಯ ಬಳಕೆಯಲ್ಲಿರುವ ಆಡಳಿತಾತ್ಮಕ ಸಮಸ್ಯೆಗಳಿಗೆ ಪರಿಹಾರವಾಗಿ ಇತರ ರಾಜ್ಯಗಳ ಯಶಸ್ವಿ ಮಾದರಿಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ. ಉದಾಹರಣೆಗೆ, ಅಸ್ಸಾಂ ಮತ್ತು ಕೇರಳ ರಾಜ್ಯಗಳಲ್ಲಿ ಈ ನಿಧಿಯನ್ನು ಆರ್ಥಿಕ ವರ್ಷದ ಅಂತ್ಯಕ್ಕೆ ಹಿಂಪಡೆಯ ಲಾಗದ, ಅಂದರೆ ಮುಂದಿನ ವರ್ಷಕ್ಕೂ ಮುಂದುವರಿಯುವ ಕಾಯಂ ನಿಧಿಯನ್ನಾಗಿ ಪರಿಗಣಿಸ ಲಾಗಿದ್ದು, ನಿಗದಿತ 56 ಕಾಮಗಾರಿಗಳ ಬಿಗಿ ಚೌಕಟ್ಟಿಲ್ಲದೆ ಕೃಷಿ, ಸ್ವಯಂ ಉದ್ಯೋಗದಂತಹ ಮುಕ್ತ ಬಳಕೆಗೆ ಅವಕಾಶ ನೀಡಲಾಗಿದೆ.

ಜೊತೆಗೆ ಕೇರಳದಲ್ಲಿ ಹಣಕಾಸು ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು ಹಾಗೂ ಶಾಸಕರ ವಾರ್ಷಿಕ ಸಭೆ ಕಡ್ಡಾಯವಾಗಿದೆ. ದೆಹಲಿಯಲ್ಲಿ ಕಾಮಗಾರಿ ಆರಂಭಕ್ಕೂ ಮುನ್ನವೇ ಗುತ್ತಿಗೆದಾರರಿಗೆ ಶೇಕಡಾ 50ರಷ್ಟು ಹಣವನ್ನು ತಕ್ಷಣ ಬಿಡುಗಡೆ ಮಾಡುವ ಹಾಗೂ ಹಳೆಯ ಮೂಲಸೌಕರ್ಯಗಳ ನಿರ್ವಹಣೆಗೆ ಶೇಕಡಾ 15ರಷ್ಟು ಅನುದಾನ ಬಳಸುವ ವ್ಯವಸ್ಥೆಯಿದೆ.

ಇನ್ನು ಉತ್ತರ ಪ್ರದೇಶದಲ್ಲಿ ಅತ್ಯಾಧುನಿಕ ವಿದ್ಯುನ್ಮಾನ ಜಾಲತಾಣಗಳ ಮೂಲಕ ಪ್ರತಿಯೊಂದು ಕಡತ ಮತ್ತು ಅನುದಾನದ ಸ್ಥಿತಿಯನ್ನು ಶಾಸಕರು, ಅಧಿಕಾರಿಗಳು ಹಾಗೂ ಸಾರ್ವಜನಿಕರೇ ನೇರವಾಗಿ ವೀಕ್ಷಿಸುವಂತಹ ಪಾರದರ್ಶಕ ವ್ಯವಸ್ಥೆ ಜಾರಿಯಲ್ಲಿದ್ದು, ಇದು ಆರೋಪ-ಪ್ರತ್ಯಾ ರೋಪಗಳಿಗೆ ಶಾಶ್ವತ ತೆರೆ ಎಳೆದಿದೆ. ಇದರ ಜೊತೆಗೆ, ತಮಿಳುನಾಡಿನ ಮಾದರಿಯಲ್ಲಿ ಗ್ರಾಮೀಣಾ ಭಿವೃದ್ಧಿ ಇಲಾಖೆಯ ಯೋಜನೆಗಳೊಂದಿಗೆ ಶಾಸಕರ ನಿಧಿಯನ್ನು ಸಮರ್ಪಕವಾಗಿ ಸಂಯೋಜಿಸಿ ದರೆ ಅತ್ಯಂತ ಪರಿಣಾಮಕಾರಿ ಬಳಕೆಯಾಗಲಿದೆ.

ದೇಶದ ಆರ್ಥಿಕ ಶಕ್ತಿಕೇಂದ್ರವಾಗಿರುವ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ, ನಮ್ಮ ಶಾಸಕರು ಕನಿಷ್ಠ 10 ಕೋಟಿ ರೂಪಾಯಿಗಳ ‘ಶಾಸಕರ ನಿಧಿ’ಯ ಭರವಸೆಯಲ್ಲಿದ್ದಾರೆ. ಪ್ರಸ್ತುತ ಸರ್ಕಾರವು ಶಾಸಕರ ಈ ಸಕಾರಾತ್ಮಕ ನಿರೀಕ್ಷೆಯನ್ನು ಬೆಂಬಲಿಸಿ, ಅನ್ಯ ರಾಜ್ಯಗಳ ಆಡಳಿತಾತ್ಮಕ ಮಾದರಿ ಗಳನ್ನು ಅಳವಡಿಸಿಕೊಂಡು, ಮುಂದಿನ ದಿನಗಳಲ್ಲಿ ಅನುದಾನದ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸುವ ದೃಢವಾದ ವಿಶ್ವಾಸವಿದೆ. ಈ ಬೃಹತ್ ಮೊತ್ತ ಮಂಜೂರಾದರೆ ಹಳ್ಳಿ ಹಾಗೂ ನಗರ ಪ್ರದೇಶಗಳ ಶಾಸಕರಿಗೆ ಒಂದು ಹೆಚ್ಚಿನ ನಿಽ ದೊರಕಿದಂತಾಗುತ್ತದೆ. ಇದರಿಂದ ಜನರ ಚಿಕ್ಕಪುಟ್ಟ ತೊಂದರೆಗಳಿಗೆ ಹಾಗೂ ಸಣ್ಣ ಕಾಮಗಾರಿ ಪೂರೈಸಲು ಬಲ ನೀಡಿದಂತಾಗುತ್ತದೆ.

ಸರ್ಕಾರದ ಈ ಭರವಸೆಯ ನಡೆಯಿಂದಾಗಿ, ಮುಂಬರುವ ದಿನಗಳಲ್ಲಿ ಪ್ರತಿಯೊಂದು ಕ್ಷೇತ್ರವೂ ಆರ್ಥಿಕವಾಗಿ ಸಬಲಗೊಂಡು ಸರ್ವಾಂಗೀಣ ಅಭಿವೃದ್ಧಿಯ ಕನಸು ನನಸಾಗಲಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇದರ ಕುರಿತು ಯಾವ ನಿರ್ಣಯ ತೆಗೆದುಕೊಳ್ಳುತ್ತಾರೆ ಎಂದು ನೋಡಬೇಕು.