Vishweshwar Bhat Column: ಕಾಲ ಬದಲಾದರೂ ಜೀವಂತವಿರುವ ಮೌಲ್ಯಗಳು
ವಿಶ್ವಾಸಾರ್ಹತೆ, ವಸ್ತುನಿಷ್ಠತೆ ಮತ್ತು ನಿಷ್ಪಕ್ಷಪಾತ ವರದಿಗಾರಿಕೆಗೆ ಹೆಸರಾದ ಪತ್ರಿಕೆಯೊಂದು ವಿವಾದಿತ ಧಾರ್ಮಿಕ ಮುಖಂಡನಿಗೆ ಸಂಬಂಧಿಸಿದ ಪ್ರಚಾರ ಸಾಮಗ್ರಿಯನ್ನು ಮುದ್ರಿಸಿದ್ದು ದೊಡ್ಡಮಟ್ಟದ ವಿವಾದ ಮತ್ತು ಆಕ್ರೋಶಕ್ಕೆ ಕಾರಣವಾಯಿತು. ಇಂಥ ವಿಷಯದಲ್ಲಿ ಪತ್ರಿಕೆ ಹೇಗೆ ವರ್ತಿಸಬೇಕು ಎಂಬುದಕ್ಕೆ ‘ದಿ ಹಿಂದೂ’ ಪತ್ರಿಕೆ ಒಂದು ಉತ್ತಮ ಆದರ್ಶವನ್ನು ಮೆರೆದಿರುವುದನ್ನು ಗಮನಿಸಲೇಬೇಕು.
-
ನೂರೆಂಟು ವಿಶ್ವ
ಈ ತಿಂಗಳ ಎರಡನೇ ವಾರದಲ್ಲಿ, ಭಾರತದ ಪ್ರಮುಖ ಹಾಗೂ ಪ್ರತಿಷ್ಠಿತ ಆಂಗ್ಲ ದಿನಪತ್ರಿಕೆಗಳಲ್ಲಿ ಒಂದಾದ ‘ದಿ ಹಿಂದೂ’, ಹರ್ಯಾಣದ ಡೇರಾ ಸಚ್ಚಾ ಸೌದಾ ಸಂಸ್ಥೆಗೆ ಸಂಬಂಧಿಸಿದ ಜಾಹೀರಾತ ನ್ನು ಪ್ರಕಟಿಸಿ, ನಂತರ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ ವಿದ್ಯಮಾನವು ದೇಶದ ಪತ್ರಿಕೋದ್ಯಮ ಹಾಗೂ ಮಾಧ್ಯಮ ನೀತಿಶಾಸ್ತ್ರದ ಚರ್ಚೆಯಲ್ಲಿ ಮಹತ್ವದ ಘಟನೆಯಾಗಿ ದಾಖಲಾಗಿದೆ.
ವಿಶ್ವಾಸಾರ್ಹತೆ, ವಸ್ತುನಿಷ್ಠತೆ ಮತ್ತು ನಿಷ್ಪಕ್ಷಪಾತ ವರದಿಗಾರಿಕೆಗೆ ಹೆಸರಾದ ಪತ್ರಿಕೆಯೊಂದು ವಿವಾದಿತ ಧಾರ್ಮಿಕ ಮುಖಂಡನಿಗೆ ಸಂಬಂಧಿಸಿದ ಪ್ರಚಾರ ಸಾಮಗ್ರಿಯನ್ನು ಮುದ್ರಿಸಿದ್ದು ದೊಡ್ಡ ಮಟ್ಟದ ವಿವಾದ ಮತ್ತು ಆಕ್ರೋಶಕ್ಕೆ ಕಾರಣವಾಯಿತು. ಇಂಥ ವಿಷಯದಲ್ಲಿ ಪತ್ರಿಕೆ ಹೇಗೆ ವರ್ತಿಸಬೇಕು ಎಂಬುದಕ್ಕೆ ‘ದಿ ಹಿಂದೂ’ ಪತ್ರಿಕೆ ಒಂದು ಉತ್ತಮ ಆದರ್ಶವನ್ನು ಮೆರೆದಿರುವುದನ್ನು ಗಮನಿಸಲೇಬೇಕು.
ಘಟನೆಯ ಕೇಂದ್ರಬಿಂದುವಾಗಿದ್ದ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್, ತನ್ನ ಆಶ್ರಮದ ಸಾಧ್ವಿಗಳ ಮೇಲಿನ ಅತ್ಯಾಚಾರ ಮತ್ತು ಪತ್ರಕರ್ತ ರಾಮಚಂದ್ರ ಛತ್ರಪತಿ ಅವರ ಹತ್ಯೆ ಪ್ರಕರಣ ಸೇರಿದಂತೆ ಗಂಭೀರ ಕ್ರಿಮಿನಲ್ ಅಪರಾಧಗಳಿಗಾಗಿ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿ ಜೈಲು ವಾಸ ಅನುಭವಿಸುತ್ತಿದ್ದಾನೆ.
ಇದನ್ನೂ ಓದಿ: Vishweshwar Bhat Column: ಶೋಭಾ ಸಿಂಗ್ ನೆನಪು
ಇಂಥ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿ ಮತ್ತು ಸಂಸ್ಥೆಯ ಸಮಾಜಸೇವಾ ಕಾರ್ಯಕ್ರಮಗಳನ್ನು ಕೊಂಡಾ ಡುವ ಜಾಹೀರಾತನ್ನು ‘ದಿ ಹಿಂದೂ’ ಪತ್ರಿಕೆಯು ತನ್ನ ಉತ್ತರ ಭಾರತದ ಆವೃತ್ತಿಯ ಮುಖಪುಟ ಹಾಗೂ ಒಳಪುಟಗಳಲ್ಲಿ ಪ್ರಕಟಿಸಿದ್ದು ಓದುಗರನ್ನು ದಿಗ್ಭ್ರಮೆಗೊಳಿಸಿತು. ಈ ಜಾಹೀರಾತು ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ಭುಗಿಲೆದ್ದಿತು. ಪತ್ರಿಕೆಯ ನಿಯಮಿತ ಓದುಗರು, ಹಿರಿಯ ಪತ್ರಕರ್ತರು, ನಾಗರಿಕ ಸಮಾಜದ ಮುಖಂಡರು ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಗಂಭೀರ ಕ್ರಿಮಿನಲ್ ಅಪರಾಧಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದ್ದರೂ, ಕೇವಲ ವಾಣಿಜ್ಯ ಲಾಭಕ್ಕಾಗಿ ಆತನ ಸಂಘಟನೆಯ ಪರ ಪ್ರಚಾರದ ಜಾಹೀರಾತನ್ನು ಪ್ರಕಟಿಸುವುದು ಪತ್ರಿಕಾ ಮೌಲ್ಯಗಳಿಗೆ ಮತ್ತು ನೈತಿಕತೆಗೆ ವಿರುದ್ಧವಾದುದು ಎಂದು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು. ಸಾರ್ವಜನಿಕರ ತೀವ್ರ ವಿರೋಧ ಹಾಗೂ ಟೀಕೆಗಳು ವ್ಯಕ್ತವಾದ ಬೆನ್ನ ‘ದಿ ಹಿಂದೂ’ ಆಡಳಿತ ಮಂಡಳಿ ತಕ್ಷಣವೇ ಎಚ್ಚೆತ್ತುಕೊಂಡಿತು.
ತನ್ನ ತಪ್ಪನ್ನು ಮುಚ್ಚಿಹಾಕಲು ಪ್ರಯತ್ನಿಸದೇ, ಮರುದಿನವೇ ಪತ್ರಿಕೆಯ ಮುಖಪುಟದ ಸ್ಪಷ್ಟವಾದ ಕ್ಷಮಾಪಣಾ ಹೇಳಿಕೆಯನ್ನು ಪ್ರಕಟಿಸಿತು. ಆ ಜಾಹೀರಾತನ್ನು ಪರಿಶೀಲಿಸದೇ ಪ್ರಕಟಿಸಿರುವುದು ಗಂಭೀರ ಪ್ರಮಾದವೆಂದು ಒಪ್ಪಿಕೊಂಡ ಪತ್ರಿಕೆ, ಈ ಪ್ರಮಾದದಿಂದ ತನ್ನ ಓದುಗರು ಹಾಗೂ ಸಾರ್ವಜನಿಕರಿಗೆ ಉಂಟಾದ ನೋವಿಗೆ ಬೇಷರತ್ತಾಗಿ ಕ್ಷಮೆಯಾಚಿಸಿತು.
ತನ್ನ ಸ್ಪಷ್ಟೀಕರಣದಲ್ಲಿ ಪತ್ರಿಕೆಯು, ಸಂಪಾದಕೀಯ ವಿಭಾಗ ಮತ್ತು ಜಾಹೀರಾತು ವಿಭಾಗಗಳ ನಡುವಿನ ಸಮನ್ವಯದ ಕೊರತೆ ಹಾಗೂ ಜಾಹೀರಾತು ತಪಾಸಣಾ ವ್ಯವಸ್ಥೆಯಲ್ಲಿನ ದೋಷದಿಂದ ಈ ಅಚಾತುರ್ಯ ನಡೆದಿದೆ ಎಂದು ವಿವರಿಸಿತು. ಸಂಪಾದಕೀಯ ಮೌಲ್ಯಗಳು ಜಾಹೀರಾತು ಪ್ರಕ್ರಿಯೆಯಲ್ಲೂ ಪ್ರತಿಫಲಿಸ ಬೇಕಿದ್ದು, ಈ ನಿರ್ದಿಷ್ಟ ಪ್ರಕರಣದಲ್ಲಿ ನಿಯಮಗಳ ಕಟ್ಟುನಿಟ್ಟಾದ ಪಾಲನೆಯಾಗಿರಲಿಲ್ಲ ಎಂಬುದನ್ನು ಒಪ್ಪಿಕೊಂಡ ಪತ್ರಿಕೆಯು, ಭವಿಷ್ಯದಲ್ಲಿ ಇಂಥ ಲೋಪಗಳು ಮರುಕಳಿಸದಂತೆ ಜಾಹೀರಾತು ನೀತಿಗಳನ್ನು ಇನ್ನಷ್ಟು ಬಿಗಿಗೊಳಿಸುವುದಾಗಿ ಭರವಸೆ ನೀಡಿತು.
ಮಾಧ್ಯಮ ಲೋಕದಲ್ಲಿ ಈ ಘಟನೆಯು ಆಂತರಿಕ ಸಮೀಕ್ಷೆಗೆ ದಾರಿ ಮಾಡಿಕೊಟ್ಟಿತು. ‘ದಿ ಹಿಂದೂ’ ತನ್ನ ಓದುಗರ ಸಂಪಾದಕರ (Readers' Editor) ಮುಖಾಂತರ ಆಂತರಿಕವಾಗಿ ಸ್ವಯಂ ವಿಮರ್ಶೆ ನಡೆಸಿತು. ಪತ್ರಿಕೆಯ ವಿಶ್ವಾಸಾರ್ಹತೆಯು ಅದರ ಜಾಹೀರಾತು ಆದಾಯಕ್ಕಿಂತ ಮಿಗಿಲಾದುದು ಎಂಬ ಅಂಶವನ್ನು ಮತ್ತೆ ನೆನಪಿಸಿದ ಈ ಘಟನೆ, ಸುದ್ದಿ ಸಂಸ್ಥೆಗಳು ಎಷ್ಟೇ ಆರ್ಥಿಕ ಸವಾಲು ಗಳನ್ನು ಎದುರಿಸುತ್ತಿದ್ದರೂ ವಾಣಿಜ್ಯ ಹಿತಾಸಕ್ತಿಗಳಿಗಾಗಿ ಮೂಲಭೂತ ನೈತಿಕ ಮೌಲ್ಯಗಳನ್ನು ಕಡೆಗಣಿಸಬಾರದು ಎಂಬ ಸಂದೇಶ ವನ್ನು ರವಾನಿಸಿತು.
ಅಂತಿಮವಾಗಿ, ಈ ಘಟನೆಯು ಪತ್ರಿಕೆಯ ಮೇಲ್ವಿಚಾರಣೆಯ ವೈಫಲ್ಯವನ್ನು ಎತ್ತಿ ತೋರಿಸಿದರೂ, ತಪ್ಪನ್ನು ಶೀಘ್ರವಾಗಿ ಒಪ್ಪಿಕೊಂಡು ಕ್ಷಮೆಯಾಚಿಸಿದ ಪತ್ರಿಕೆಯ ಪಾರದರ್ಶಕತೆ ಪ್ರಶಂಸೆಗೆ ಪಾತ್ರವಾ ಯಿತು. ಸುದ್ದಿ ಪ್ರಕಟಣೆ ಮಾತ್ರವಲ್ಲ, ವಾಣಿಜ್ಯ ಜಾಹೀರಾತುಗಳನ್ನೂ ಕಟ್ಟುನಿಟ್ಟಿನ ನೈತಿಕ ಚೌಕಟ್ಟಿನಲ್ಲಿ ಪರಿಶೀಲಿಸಬೇಕಾದ ಅನಿವಾರ್ಯತೆಯನ್ನು ಭಾರತೀಯ ಮಾಧ್ಯಮ ರಂಗಕ್ಕೆ ನೆನಪಿಸಿದ ಪ್ರಮುಖ ನಿದರ್ಶನವಾಗಿ ಈ ವಿದ್ಯಮಾನ ಉಳಿದುಕೊಂಡಿದೆ.
ಅಷ್ಟೇ ಅಲ್ಲ, ‘ದಿ ಹಿಂದೂ’ ಪತ್ರಿಕೆಯು ಡೇರಾ ಸಚ್ಚಾ ಸೌದಾ ಸಂಸ್ಥೆಯ ಜಾಹೀರಾತು ಪ್ರಕಟಿಸಿ ಕ್ಷಮೆ ಯಾಚಿಸಿದ ನಂತರ, ಆ ಜಾಹೀರಾತಿನಿಂದ ಯಾವುದೇ ರೀತಿಯ ಆರ್ಥಿಕ ಲಾಭವನ್ನು ಪಡೆಯದಿರಲು ನಿರ್ಧರಿಸಿತು. ಪತ್ರಿಕೆಯಲ್ಲಿ ಪ್ರಕಟವಾದ ’ What is Dera Sacha Sauda? (Facts vs Fiction)’ ಎಂಬ ವಿವಾದಾತ್ಮಕ ಮುಖಪುಟ ಜಾಹೀರಾತಿಗೆ ಸಂಬಂಧಿಸಿದಂತೆ, ಜಾಹೀರಾತುದಾರರಿಗೆ ಯಾವುದೇ ಬಿಲ್ ನೀಡದಿರಲು (not to raise a bill) ಆಡಳಿತ ಮಂಡಳಿ ತೀರ್ಮಾನಿಸಿತು.
ಕೇವಲ ಮಾತಿನಲ್ಲಿ ಕ್ಷಮೆಯಾಚಿಸುವುದಷ್ಟೇ ಅಲ್ಲ, ತನ್ನ ನೈತಿಕ ನಿಲುವನ್ನು ಸಾಬೀತುಪಡಿಸಲು ಆ ಜಾಹೀರಾತಿನಿಂದ ಬರುವ ಲಕ್ಷಾಂತರ ರೂಪಾಯಿಗಳ ಆದಾಯವನ್ನು ಪತ್ರಿಕೆಯು ಸಂಪೂರ್ಣ ವಾಗಿ ತ್ಯಜಿಸಿತು. ತಪ್ಪನ್ನು ಮುಚ್ಚಿ ಹಾಕಿ ವಾಣಿಜ್ಯ ಲಾಭ ಪಡೆಯುವ ಬದಲು, ಹಣಕಾಸಿನ ನಷ್ಟವನ್ನು ಲೆಕ್ಕಿಸದೆ ಸಂಪಾದಕೀಯ ಮೌಲ್ಯ ಹಾಗೂ ಓದುಗರ ವಿಶ್ವಾಸಾರ್ಹತೆಗೆ ಆದ್ಯತೆ ನೀಡಿದ ಈ ಕ್ರಮವು ಮಾಧ್ಯಮ ವಲಯದಲ್ಲಿ ವ್ಯಾಪಕ ಗಮನ ಸೆಳೆಯಿತು.
ಭಾರತೀಯ ಪತ್ರಿಕೋದ್ಯಮದ ಇತಿಹಾಸವನ್ನು ಗಮನಿಸಿದರೆ, ವಾಣಿಜ್ಯ ಜಾಹೀರಾತುಗಳು ಮತ್ತು ಸಂಪಾದಕೀಯ ಮೌಲ್ಯಗಳ ನಡುವಿನ ಸಂಘರ್ಷ ಹೊಸದೇನಲ್ಲ. ಹಣ ತರುವ ಜಾಹೀರಾತು ವಿಭಾಗ ಹಾಗೂ ಸತ್ಯ ಮತ್ತು ನಿಷ್ಪಕ್ಷಪಾತಕ್ಕೆ ಬದ್ಧವಾಗಿರುವ ಸಂಪಾದಕೀಯ ಮಂಡಳಿಯ ನಡುವಿನ ಸೈದ್ಧಾಂತಿಕ ಹಗ್ಗಜಗ್ಗಾಟಕ್ಕೆ ದಶಕಗಳ ಇತಿಹಾಸವಿದೆ. ಪತ್ರಿಕೆಯ ಪುಟಗಳಲ್ಲಿ ಸುದ್ಧಿ ಯಾವುದು ಮತ್ತು ಕೇವಲ ಹಣಕ್ಕಾಗಿ ಪ್ರಕಟಿಸುವ ಪ್ರಚಾರ ಸಾಮಗ್ರಿ ಯಾವುದು ಎಂಬ ಗೆರೆ ಮಸುಕಾದಾಗಲೆಲ್ಲ ಇಂಥ ಬಿಕ್ಕಟ್ಟುಗಳು ತಲೆದೋರಿವೆ. ಈ ಪ್ರಸಂಗ ಓದುವಾಗ ನನಗೆ ಇಂಥದೇ ಇನ್ನೊಂದು ಘಟನೆ ನೆನಪಾಗುತ್ತಿದೆ.
ಅದು 1959ರಲ್ಲಿ ಮುಂಬೈನ ಖ್ಯಾತ ಆಂಗ್ಲ ಪತ್ರಿಕೆ ‘ದಿ ಫ್ರೀ ಪ್ರೆಸ್ ಜರ್ನಲ್’ ಕಚೇರಿಯಲ್ಲಿ ನಡೆದಿದ್ದು. ಆಗ ಭಾರತದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಮತ್ತು ದೇಶೀಯ ಉದ್ಯಮಗಳ ನಡುವೆ ಮಾರುಕಟ್ಟೆಯ ಪೈಪೋಟಿ ತೀವ್ರಗೊಳ್ಳುತ್ತಿದ್ದ ಕಾಲ. ‘ಹಿಂದೂಸ್ತಾನ್ ಲಿವರ್’ (ಈಗಿನ ಹಿಂದೂಸ್ತಾನ್ ಯೂನಿಲಿವರ್) ಸಂಸ್ಥೆಯು ತನ್ನ ಹೊಚ್ಚ ಹೊಸ ವಾಷಿಂಗ್ ಪೌಡರ್ ‘ಸರ್ಫ್’ ಅನ್ನು ಭಾರತೀಯ ಮಾರುಕಟ್ಟೆಗೆ ಭರ್ಜರಿಯಾಗಿ ಪರಿಚಯಿಸಲು ಸಜ್ಜಾಗುತ್ತಿತ್ತು.
ಇದಕ್ಕೆ ಪ್ರತಿಯಾಗಿ ಭಾರತೀಯ ಬ್ರ್ಯಾಂಡ್‌ಗಳು ಮಾರುಕಟ್ಟೆಯಲ್ಲಿ ಗಟ್ಟಿಯಾಗಿ ನೆಲೆಯೂರಲು ಹೆಣಗಾಡುತ್ತಿದ್ದವು. ಒಂದು ದಿನ ಬೆಳಗ್ಗೆ ಫ್ರೀ ಪ್ರೆಸ್ ಜರ್ನಲ್ ಪತ್ರಿಕೆಯ ಮುಖಪುಟದಲ್ಲಿ Wonder washing powder comes to town ಎಂಬ ದಪ್ಪ ಅಕ್ಷರದ ಹೆಡ್‌ಲೈನ್‌ನೊಂದಿಗೆ ಒಂದು ವರದಿ ಪ್ರಕಟವಾಯಿತು.
ಅದು ಸಾಮಾನ್ಯ ಓದುಗನ ಕಣ್ಣಿಗೆ ಅತ್ಯಂತ ಕುತೂಹಲಕಾರಿ ಮತ್ತು ನೈಜ ಸುದ್ದಿಯಂತೆಯೇ ಭಾಸ ವಾಗುತ್ತಿತ್ತು. ಆದರೆ, ವಾಸ್ತವದಲ್ಲಿ ಅದು ಸುದ್ದಿಯ ಸೋಗಿನಲ್ಲಿ ಮುದ್ರಿತವಾಗಿದ್ದ ಸರ್ಫ್ ಡಿಟರ್ಜೆಂಟ್ ಪೌಡರ್‌ನ ಪ್ರಾಯೋಜಿತ ಪ್ರಚಾರ ಅಥವಾ ಇಂದಿನ ಭಾಷೆಯಲ್ಲಿ ಹೇಳುವುದಾದರೆ, ‘ಸರೋಗೇಟ್ ಅಡ್ವರ್ಟೈಸ್‌ಮೆಂಟ್’ (ಅಥವಾ ಆಡ್ವರ್ಟೋರಿಯಲ್) ಆಗಿತ್ತು.
ಪತ್ರಿಕೆಯ ಆಡಳಿತ ಮಂಡಳಿಯು ಭಾರೀ ಮೊತ್ತದ ಆದಾಯದ ಆಸೆಗೆ ಬಿದ್ದು ಸಂಪಾದಕೀಯ ವಿಭಾಗ ವನ್ನು ಬದಿಗೊತ್ತಿ ಈ ಸಾಹಸಕ್ಕೆ ಕೈ ಹಾಕಿತ್ತು. ಪತ್ರಿಕೆ ಮಾರುಕಟ್ಟೆಗೆ ಬಂದ ಕೆಲವೇ ಗಂಟೆಗಳಲ್ಲಿ ಪತ್ರಿಕೆಯ ಸಂಪಾದಕರಿಗೆ ಬೆಳಗ್ಗೆ ಬೆಳಗ್ಗೆ ಒಂದು ಕಟು ಕರೆ ಬಂದಿತು. ಫೋನ್‌ನ ಇನ್ನೊಂದು ತುದಿಯಲ್ಲಿದ್ದ ವ್ಯಕ್ತಿ ಸಾಧಾರಣ ವ್ಯಕ್ತಿಯಾಗಿರಲಿಲ್ಲ. ಅವರು ಭಾರತದ ಪ್ರಖ್ಯಾತ ಸ್ವದೇಶಿ ಉದ್ಯಮ ಸಂಸ್ಥೆಯಾದ ‘ಗೋದ್ರೇಜ್’ ಸಮೂಹದ ಮಾಲೀಕರಾಗಿದ್ದರು.
ಗೋದ್ರೇಜ್ ಸಂಸ್ಥೆಯು ಅದೇ ದಿನಗಳಲ್ಲಿ ಸ್ಥಳೀಯವಾಗಿ ಸಾಬೂನು ಮತ್ತು ಡಿಟರ್ಜೆಂಟ್ ಉತ್ಪನ್ನಗಳನ್ನು ತಯಾರಿಸಿ ಬಹುರಾಷ್ಟ್ರೀಯ ಕಂಪನಿಗಳಿಗೆ ಪ್ರಬಲ ಸವಾಲೊಡ್ಡುತ್ತಿತ್ತು. ತಮ್ಮ ದೇಶೀಯ ವ್ಯಾಪಾರಕ್ಕೆ ಪತ್ರಿಕೆಯೊಂದು ಇಂಥ ರಹಸ್ಯ ಜಾಹೀರಾತಿನ ಮೂಲಕ ಹೊಡೆತ ನೀಡಿದ್ದನ್ನು ಕಂಡು ಗೋದ್ರೇಜ್ ಮಾಲೀಕರು ತೀವ್ರ ಆಕ್ರೋಶಗೊಂಡಿದ್ದರು.
ಗೋದ್ರೇಜ್ ಮಾಲೀಕರು ಸಂಪಾದಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಅವರು ನೇರ ಮತ್ತು ಕಟುವಾದ ಶಬ್ದಗಳಲ್ಲಿ ಸಂಪಾದಕರನ್ನು ಉದ್ದೇಶಿಸಿ, ‘ನಿಮ್ಮ ಪತ್ರಿಕೆಯನ್ನು ವೇಶ್ಯಾ ವಾಟಿಕೆಗೆ ಇಳಿಸಲು ನಿರ್ಧರಿಸಿದ್ದರೆ, ಬಹುರಾಷ್ಟ್ರೀಯ ಕಂಪನಿಯ ಮುಂದೆ ಮಂಡಿಯೂರುವ ಬದಲು ನಮ್ಮಂಥ ಸ್ಥಳೀಯ, ದೇಶೀಯ ಸಂಸ್ಥೆಗಳ ಬಳಿ ಮೊದಲು ಬರಬಾರದಿತ್ತೇ?’ ಎಂದು ನೇರ ಪ್ರಶ್ನೆ ಎಸೆದರು. ಈ ಆಘಾತಕಾರಿ ಮತ್ತು ಚುಚ್ಚುವ ಮಾತುಗಳು ಪತ್ರಿಕೆಯ ಸಂಪಾದಕರ ವೃತ್ತಿಪರ ಆತ್ಮಸಾಕ್ಷಿಗೆ ಬಿದ್ದ ದೊಡ್ಡ ಪೆಟ್ಟಾಗಿತ್ತು.
ಪತ್ರಿಕೋದ್ಯಮದ ಸ್ವತಂತ್ರ ಅಸ್ತಿತ್ವ ಮತ್ತು ಘನತೆ ಬಂಡವಾಳಶಾಹಿ ಹಿತಾಸಕ್ತಿಗಳ ಮುಂದೆ ಹೇಗೆ ಕುಸಿಯುತ್ತಿದೆ ಎಂಬುದಕ್ಕೆ ಇದು ಕನ್ನಡಿಯಾಗಿತ್ತು. ಅಂದು ಬೆಳಗ್ಗೆ ಎಂದಿನಂತೆ ಕಚೇರಿಯ ಸಂಪಾದಕೀಯ ಮಂಡಳಿಯ ಸಭೆ ಆರಂಭವಾಯಿತು. ಸಂಪಾದಕರು ಅತ್ಯಂತ ಗಂಭೀರ ಹಾಗೂ ನೊಂದ ಮುಖಭಾವದಿಂದ ಸಭೆಗೆ ಆಗಮಿಸಿದರು. ಅವರು ಮೇಜಿನ ಸುತ್ತ ಕುಳಿತಿದ್ದ ಹಿರಿಯ-ಕಿರಿಯ ಪತ್ರಕರ್ತರಿಗೆ ತಮಗೆ ಬೆಳಗ್ಗೆ ಎದುರಾದ ಅಪಮಾನಕರ ಅನುಭವವನ್ನು ಮತ್ತು ಗೋದ್ರೇಜ್ ಮಾಲೀಕರು ಆಡಿದ ಕಟು ಮಾತುಗಳನ್ನು ಯಥಾವತ್ತಾಗಿ ವಿವರಿಸಿದರು. ಬಹುರಾಷ್ಟ್ರೀಯ ಕಂಪನಿಯ ಜಾಹೀರಾತನ್ನು ನೈಜ ಸುದ್ದಿಯಂತೆ ಬಿಂಬಿಸಲು ಆಡಳಿತ ಮಂಡಳಿ ಹೇರಿದ ಒತ್ತಡವನ್ನು ತಮಗೆ ಇನ್ನು ಮುಂದೆ ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಅವರು ಆಕ್ರೋಶದಿಂದ ನುಡಿದರು.
ತಮ್ಮ ಪತ್ರಿಕೋದ್ಯಮದ ಸ್ವಾಭಿಮಾನವನ್ನು ಉಳಿಸಿಕೊಳ್ಳಲು ಮತ್ತು ಮೌಲ್ಯಗಳ ಜತೆ ರಾಜಿ ಮಾಡಿಕೊಳ್ಳದಿರಲು, ತಾವು ಸಂಪಾದಕ ಸ್ಥಾನಕ್ಕೆ ತಕ್ಷಣವೇ ರಾಜೀನಾಮೆ ನೀಡುತ್ತಿರುವುದಾಗಿ ಸಭೆಯಲ್ಲಿ ಘೋಷಿಸಿದರು. ಸಂಪಾದಕರ ಈ ಧೀರ, ದಿಟ್ಟ ಮತ್ತು ಸೈದ್ಧಾಂತಿಕ ನಿಲುವು ಸಭೆಯಲ್ಲಿದ್ದ ಪತ್ರಕರ್ತರಲ್ಲಿ ವಿದ್ಯುತ್ ಸಂಚಾರವನ್ನು ಉಂಟುಮಾಡಿತು.
ಆಡಳಿತ ಮಂಡಳಿಯ ವಾಣಿಜ್ಯ ಲಾಭದ ಹಪಾಹಪಿಗೆ ಸಂಪಾದಕೀಯ ಸ್ವಾತಂತ್ರ್ಯವನ್ನು ಬಲಿಕೊಡಲು ಯಾರೊಬ್ಬರೂ ಸಿದ್ಧರಿರಲಿಲ್ಲ. ತಮ್ಮ ನಾಯಕನಿಗೆ ಅನ್ಯಾಯವಾದಾಗ ಮೂಕಪ್ರೇಕ್ಷಕರಾಗಿ ಉಳಿಯು ವುದು ಪತ್ರಿಕಾ ಧರ್ಮಕ್ಕೆ ಮಾಡುವ ದ್ರೋಹ ಎಂದು ಅಲ್ಲಿ ನೆರೆದಿದ್ದ ಎಲ್ಲರೂ ಭಾವಿಸಿದರು. ಕ್ಷಣಾರ್ಧ ದಲ್ಲಿ ಸಭೆಯಲ್ಲಿದ್ದ ಸಮಸ್ತ ಪತ್ರಕರ್ತರು ತಮ್ಮ ಸಂಪಾದಕರ ಪರವಾಗಿ ಒಗ್ಗಟ್ಟು ಪ್ರದರ್ಶಿಸಿದರು.
‘ನಿಮ್ಮೊಂದಿಗೆ ನಾವಿದ್ದೇವೆ, ನೈತಿಕತೆ ಇಲ್ಲದ ಪತ್ರಿಕೆಯಲ್ಲಿ ನಾವೂ ಕೆಲಸ ಮಾಡುವುದಿಲ್ಲ’ ಎಂದು ಘೋಷಿಸಿದ ಸಂಪಾದಕೀಯ ತಂಡದ ಸದಸ್ಯರೆಲ್ಲರೂ ಒಕ್ಕೊರಲಿನಿಂದ ಸಾಮೂಹಿಕವಾಗಿ ತಮ್ಮ ರಾಜೀನಾಮೆ ಪತ್ರಗಳನ್ನು ಸಲ್ಲಿಸಿ ಹೊರನಡೆದರು. ಭಾರತೀಯ ಮಾಧ್ಯಮ ರಂಗದ ಇತಿಹಾಸದ ಇಂಥ ಸೈದ್ಧಾಂತಿಕ ಒಗ್ಗಟ್ಟು ಮತ್ತು ನೈತಿಕ ಪ್ರತಿಭಟನೆ ಅತ್ಯಂತ ಅಪರೂಪದ ಘಟನೆಯಾಗಿತ್ತು.
ಕೇವಲ ಒಂದು ವಾಷಿಂಗ್ ಪೌಡರ್‌ನ ಜಾಹೀರಾತು ಇಡೀ ಪತ್ರಿಕೆಯ ಸಂಪಾದಕೀಯ ವಿಭಾಗವನ್ನೇ ‘ಸ್ವಚ್ಛ’ ಮಾಡುವಂತೆ ಮಾಡಿತ್ತು. ಆ ದಿನದ ಸಂಪಾದಕೀಯ ಸಭೆಯಲ್ಲಿ ಮೇಜಿನ ಒಂದು ಮೂಲೆಯಲ್ಲಿ ಯಾವಾಗಲೂ ಮೌನವಾಗಿ ಕುಳಿತುಕೊಳ್ಳುತ್ತಿದ್ದ ಒಬ್ಬ ಸಾಮಾನ್ಯ ವ್ಯಕ್ತಿಯೂ ಇದ್ದರು. ಅವರು ಶಬ್ದಗಳಿಗಿಂತ ಹೆಚ್ಚಾಗಿ ಗೆರೆಗಳ ಮೂಲಕ ಮಾತನಾಡುತ್ತಿದ್ದ ಪತ್ರಿಕೆಯ ಖ್ಯಾತ ವ್ಯಂಗ್ಯಚಿತ್ರಕಾರ - ಅವರು ಬಾಳ್ ಠಾಕ್ರೆ!
ದಿನನಿತ್ಯದ ರಾಜಕೀಯ ಬೆಳವಣಿಗೆಗಳನ್ನು ಅತ್ಯಂತ ತೀಕ್ಷ್ಣ ವ್ಯಂಗ್ಯಚಿತ್ರಗಳ ಮೂಲಕ ಬಿಡಿಸುತ್ತಿದ್ದ ಅವರು, ಕಚೇರಿಯ ವಾತಾವರಣದಲ್ಲಿ ಅತ್ಯಂತ ಶಾಂತ ಹಾಗೂ ಸೌಮ್ಯ ಸ್ವಭಾವದ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. ಸಂಪಾದಕೀಯ ಸಭೆಯಲ್ಲಿ ನಡೆದ ಈ ಕ್ಷಿಪ್ರ ಕ್ರಾಂತಿಯನ್ನು ಬಾಳ್ ಠಾಕ್ರೆ ಕಣ್ಣಾರೆ ಸಾಕ್ಷಿಯಾಗಿದ್ದರು.
ಸಂಪಾದಕರ ಮೇಲಾದ ಆಡಳಿತ ಮಂಡಳಿಯ ಒತ್ತಡ ಹಾಗೂ ಗೋದ್ರೇಜ್ ಕಟು ಮಾತುಗಳು ಠಾಕ್ರೆಯವರ ಸ್ವಾಭಿಮಾನವನ್ನೂ ಬಡಿದೆಬ್ಬಿಸಿದ್ದವು. ಅವರು ಕೇವಲ ವ್ಯಂಗ್ಯಚಿತ್ರಕಾರರಾಗಿ ಉಳಿಯದೇ, ತಮ್ಮ ಸಹೋದ್ಯೋಗಿಗಳು ಮತ್ತು ಸಂಪಾದಕರ ಪರವಾಗಿ ನಿಲ್ಲಲು ನಿರ್ಧರಿಸಿದರು. ಎಲ್ಲ ಪತ್ರಕರ್ತ ರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು, ತಮ್ಮ ಪತ್ರಿಕಾ ಹುದ್ದೆಯನ್ನು ತ್ಯಜಿಸಿ, ಬ್ಯಾಗ್ ಎತ್ತಿಕೊಂಡು ಫ್ರೀ ಪ್ರೆಸ್ ಜರ್ನಲ್‌ನ ಬಾಗಿಲು ದಾಟಿ ಹೊರನಡೆದರು. ಈ ಸಂಪೂರ್ಣ ಐತಿಹಾಸಿಕ ನಾಟಕೀಯ ವಿದ್ಯಮಾನಕ್ಕೆ ಸಾಕ್ಷಿಯಾಗಿದ್ದ ಮತ್ತೊಬ್ಬ ಖ್ಯಾತ ಪತ್ರಕರ್ತ ಟಿ.ಜೆ.ಎಸ್. ಜಾರ್ಜ್. ಅವರೂ ಕೂಡ ಅದೇ ಸಭೆಯ ಭಾಗವಾಗಿದ್ದರು ಮತ್ತು ರಾಜೀನಾಮೆ ನೀಡಿ ಹೊರಬಂದವರಲ್ಲಿ ಒಬ್ಬರಾಗಿದ್ದರು.
ಜಾರ್ಜ್ ಅವರು ತಮ್ಮ ಆತ್ಮಚರಿತ್ರೆ ಹಾಗೂ ನೆನಪುಗಳ ಸಂಕಲನದಲ್ಲಿ ಈ ಮಹತ್ವದ ಘಟನೆ ಯನ್ನು ಅತ್ಯಂತ ವಿಸ್ತಾರವಾಗಿ ದಾಖಲಿಸಿದ್ದಾರೆ. ಬಾಳ್ ಠಾಕ್ರೆಯವರ ವ್ಯಕ್ತಿತ್ವ ಮತ್ತು ಅವರ ನಂತರದ ಜೀವನದ ರೂಪಾಂತರವನ್ನು ವಿವರಿಸುವಾಗ ಅವರು, ow our silent cat became a Tiger (ನಮ್ಮ ಕಚೇರಿಯಲ್ಲಿದ್ದ ಆ ಮೂಕ ಬೆಕ್ಕು ಹುಲಿಯಾಗಿ ಬದಲಾಗಿದ್ದು ಹೇಗೆ) ಎಂಬ ಶೀರ್ಷಿಕೆಯಡಿ ಈ ಅಧ್ಯಾಯವನ್ನು ಕಟ್ಟಿಕೊಟ್ಟಿದ್ದಾರೆ.
ಫ್ರೀ ಪ್ರೆಸ್ ಜರ್ನಲ್‌ನಿಂದ ಹೊರಬಂದ ಆ ಕ್ಷಣವೇ ಬಾಳ್ ಠಾಕ್ರೆ ಅವರ ಬದುಕಿನ ಮಹಾ ತಿರುವಾಗಿ ಪರಿಣಮಿಸಿತು. ಪತ್ರಿಕೆಯ ಕೆಲಸ ಕಳೆದುಕೊಂಡ ನಂತರ ಅವರು ‘ಮಾರ್ಮಿಕ್’ ಎಂಬ ಸ್ವಂತ ವ್ಯಂಗ್ಯಚಿತ್ರ ವಾರಪತ್ರಿಕೆಯನ್ನು ಆರಂಭಿಸಿದರು. ಮುಂದೆ ಅದೇ ವೇದಿಕೆಯು ಮಹಾರಾಷ್ಟ್ರದಲ್ಲಿ ಮರಾಠಿ ಭಾಷಿಕರ ಹಕ್ಕುಗಳಿಗಾಗಿ ಹೋರಾಡುವ ‘ಶಿವಸೇನೆ’ ಎಂಬ ಬಲಿಷ್ಠ ಸಂಘಟನೆಯ ಉದಯಕ್ಕೆ ನಾಂದಿ ಹಾಡಿತು.
ಕೇವಲ ಸರ್ಫ್ ಕಂಪನಿಯ ಒಂದು ಸರೋಗೇಟ್ ಜಾಹೀರಾತಿನಿಂದ ಶುರುವಾದ ಪ್ರತಿಭಟನೆ, ಸಂಪಾದಕೀಯ ಮೌಲ್ಯಗಳ ಸಂಘರ್ಷಕ್ಕೆ ಮುನ್ನುಡಿಯಾಗಿ, ಅಂತಿಮವಾಗಿ ಭಾರತೀಯ ರಾಜಕಾರಣದ ದಿಕ್ಕನ್ನೇ ಬದಲಿಸಿದ ಪ್ರಭಾವಿ ‘ಹಿಂದೂ ಹೃದಯ ಸಾಮ್ರಾಟ’ ಬಾಳಾಸಾಹೇಬ್ ಠಾಕ್ರೆ ಎಂಬ ನಾಯಕನ ಉದಯಕ್ಕೂ ಪ್ರೇರಣೆಯಾಯಿತು. ಕಾಲ ಬದಲಾಗಿರಬಹುದು, ಆದರೆ ಮೌಲ್ಯಗಳು ಇನ್ನೂ ಜೀವಂತವಾಗಿವೆ.