Thimmanna Bhagwat Column: ಹೊಸ ಸಂಹಿತೆಗಳು: ಅತಿ ನಿಯಂತ್ರಣ ತಪ್ಪಿಸುವ ಯತ್ನವೇ ?
ಕಾರ್ಮಿಕ ಕಾನೂನು ಎಂದ ಕೂಡಲೇ ಕೆಜಿಎಫ್ ಚಲನಚಿತ್ರದಲ್ಲಿರುವಂತೆ ಸರಪಳಿ ಕಟ್ಟಿದ ಜೀತದಾಳು ಗಳು, ಬಾಲಕಾರ್ಮಿಕರು, ಅಸಹಾಯಕ ಹೆಣ್ಣುಮಕ್ಕಳು ಮತ್ತು ಮಾಲೀಕರಿಂದ ಅವರ ಶೋಷಣೆ- ಅಂಥ ಶೋಷಣೆಯ ವಿರುದ್ಧ ಹಿಂಸೆಯ ಮಾರ್ಗವನ್ನು ಆಯ್ದುಕೊಳ್ಳುವ ನಾಯಕ ಇವೆಲ್ಲ ಚಿತ್ರಣ ಕಣ್ಣ ಮುಂದೆ ಬರುತ್ತದೆ.
-
ಕಾನೂನ್ ಸೆನ್ಸ್
ತಿಮ್ಮಣ್ಣ ಭಾಗ್ವತ್
ಭಾರತದಲ್ಲಿ ಕಾನೂನುಗಳ ಸಂಖ್ಯೆ ಜಾಸ್ತಿ ಇರುವುದರ ಜತೆಗೆ ವಿವಿಧ ಕಾನೂನುಗಳಲ್ಲಿ ಅದೇ ವಿಷಯಗಳ ವ್ಯಾಖ್ಯೆ ಬೇರೆ ಬೇರೆಯಾಗಿದ್ದುದು ಗಂಭೀರ ಸಮಸ್ಯೆ. ಉದಾಹರಣೆಗೆ ‘ವೇತನ’ ಎಂಬ ಶಬ್ದಕ್ಕೆ ಗ್ರಾಚ್ಯುಟಿ ಕಾಯಿದೆ ಒಂದು ವ್ಯಾಖ್ಯೆ ನೀಡಿದರೆ, ಭವಿಷ್ಯನಿಧಿ ಕಾಯಿದೆ ಬೇರೆಯೇ ವ್ಯಾಖ್ಯೆ ನೀಡುತ್ತದೆ. ಪಿಂಚಣಿಯನ್ನು ನಿರ್ಧರಿಸುವಾಗ ‘ವೇತನ’ದ ಪರಿವ್ಯಾಪ್ತಿಯೇ ಬೇರೆ.
ಕಾರ್ಮಿಕ ಕಾನೂನು ಎಂದ ಕೂಡಲೇ ಕೆಜಿಎಫ್ ಚಲನಚಿತ್ರದಲ್ಲಿರುವಂತೆ ಸರಪಳಿ ಕಟ್ಟಿದ ಜೀತದಾಳುಗಳು, ಬಾಲಕಾರ್ಮಿಕರು, ಅಸಹಾಯಕ ಹೆಣ್ಣುಮಕ್ಕಳು ಮತ್ತು ಮಾಲೀಕರಿಂದ ಅವರ ಶೋಷಣೆ- ಅಂಥ ಶೋಷಣೆಯ ವಿರುದ್ಧ ಹಿಂಸೆಯ ಮಾರ್ಗವನ್ನು ಆಯ್ದುಕೊಳ್ಳುವ ನಾಯಕ ಇವೆಲ್ಲ ಚಿತ್ರಣ ಕಣ್ಣ ಮುಂದೆ ಬರುತ್ತದೆ.
ಕೈಗಾರಿಕಾ ಕ್ರಾಂತಿ ನಂತರ ಯುರೋಪ್, ರಷ್ಯಾ ಮುಂತಾದ ಕಡೆ ನಡೆದ ಕಾರ್ಮಿಕ ಕ್ರಾಂತಿಗಳು ಕೂಡಾ ಅಂಥ ಅತಿಯಾದ ಶೋಷಣೆಯ ಪರಿಣಾಮವೇ ಆಗಿದ್ದವು. ಆನಂತರ ವಿಶ್ವಾದ್ಯಂತ ಅನೇಕ ಕಾರ್ಮಿಕ ಹಿತರಕ್ಷಣಾ ಕಾನೂನುಗಳು ಜಾರಿಗೆ ಬಂದದ್ದರಿಂದ ಕಾರ್ಮಿಕ ಶೋಷಣೆ ಗಣನೀಯವಾಗಿ ಕಡಿಮೆಯಾಗಿದೆ.
ಭಾರತದಲ್ಲಿ ಕೂಡಾ ಸ್ವಾತಂತ್ರ್ಯ ಪೂರ್ವದಿಂದಲೇ ಅನೇಕ ಕಾನೂನುಗಳು ಜಾರಿಗೆ ಬಂದಿವೆ. ಕಾರ್ಮಿಕರ ಶೋಷಣೆ ನಿಜಕ್ಕೂ ಖಂಡನಾರ್ಹ ಮತ್ತು ಆ ಕುರಿತು ಕಠಿಣ ಕಾನೂನುಗಳು ಇರಬೇಕಾದ್ದು ಅಗತ್ಯ. ಆದರೆ ಉದ್ಯೋಗ ನೀಡುವ ಸಂಸ್ಥೆಗಳು ಬೆಳೆಯದಿದ್ದರೆ ಕಾರ್ಮಿಕರ ನಿಜವಾದ ಹಿತಾಸಕ್ತಿ ಅಸಾಧ್ಯ ಎಂಬ ಮೂಲತತ್ವವನ್ನು ಕಾರ್ಮಿಕರು ಮರೆಯಬಾರದು.
ಇದನ್ನೂ ಓದಿ: Thimmanna Bhagwat Column: ಆಡಳಿತಾತ್ಮಕ ದಕ್ಷತೆ ಮತ್ತು ಸಮಾನ ಅವಕಾಶಗಳಿಗೆ ಇದು ವಿರುದ್ಧವಲ್ಲವೇ ?
ಆದ್ದರಿಂದ ಕಾರ್ಮಿಕ ಕಾನೂನುಗಳನ್ನು ರೂಪಿಸುವಾಗ ದೇಶದ ಔದ್ಯಮಿಕ ಅಭಿವೃದ್ಧಿಯ ಅಗತ್ಯ ವನ್ನು ಕಡಗಣಿಸಲಾಗದು. ಉದ್ಯಮ ಅಥವಾ ಕಾರ್ಖಾನೆಯೊಂದನ್ನು ಸ್ಥಾಪಿಸಿ ಯಶಸ್ವಿ ಯಾಗಿ ನಡೆಸುವುದು ದೊಡ್ಡ ಸಾಹಸವೇ ಸರಿ. ಹಣಕಾಸು, ಭೂಮಿ, ಕಟ್ಟಡ, ಯಂತ್ರೋಪಕರಣ, ಕಚ್ಛಾ ಸಾಮಗ್ರಿಗಳು, ಸಿಬ್ಬಂದಿ ನೇಮಕ, ಉತ್ಪಾದನೆಗೆ ಬೇಕಾದ ತಾಂತ್ರಿಕತೆ, ವಿದ್ಯುತ್ ಮತ್ತು ಶಕ್ತಿಮೂಲ ಗಳು, ಉತ್ಪಾದನೆಯ ಪ್ರಕ್ರಿಯೆ, ಸಾಗಾಟ ಇವೆಲ್ಲದರ ಜತೆಗೆ ತಯಾರಾದ ಸಾಮಗ್ರಿಗಳ ಮಾರಾಟ, ಇದಕ್ಕಿಂತ ಮುಖ್ಯವಾಗಿ ಪರವಾನಗಿ, ನೋಂದಣಿ, ತೆರಿಗೆ-ಸುಂಕ ಮುಂತಾದ ಸರಕಾರಿ ವ್ಯವಸ್ಥೆಯ ಜತೆಗಿನ ಗುದ್ದಾಟಗಳು.
ಎಲ್ಲ ಸರಿಯಾದರೆ ಪರಿಸರ ಇಲಾಖೆಯೋ, ಒಳಚರಂಡಿ ಅಧಿಕಾರಿಗಳೋ ಆಕ್ಷೇಪ ಎತ್ತುತ್ತಾರೆ. ತಾವೇ ನೇಮಕ ಮಾಡಿಕೊಂಡ ನೌಕರರ ಮುಷ್ಕರ, ಆಂತರಿಕ ಭಿನ್ನಾಭಿಪ್ರಾಯ, ವಂಚನೆ, ಅವ್ಯವ ಹಾರ ಇವನ್ನೆಲ್ಲಾ ನಿಭಾಯಿಸಬೇಕು. ಇಷ್ಟೆಲ್ಲ ಸಮಸ್ಯೆಗಳ ಜತೆಗೆ ಹೋರಾಡುವ ಉದ್ಯಮಿಗಳಿಗೆ ಸಂಕೀರ್ಣ ಕಾರ್ಮಿಕ ಕಾನೂನುಗಳ ಜಂಜಾಟವನ್ನೂ ಎದುರಿಸುವುದು ಎಷ್ಟು ಕಷ್ಟವಾಗಬಹುದು ಎಂಬುದನ್ನು ಕಾರ್ಮಿಕ ಕಲ್ಯಾಣ ಕುರಿತಾದ ಭಾಷಣ ಮಾಡುವವರು ಅರ್ಥ ಮಾಡಿಕೊಳ್ಳಬೇಕು.
ಬಹು ಸಂಖ್ಯೆಯ ಕಾನೂನುಗಳಿಂದಾದ ಸಮಸ್ಯೆ
ಭಾರತದಲ್ಲಿ ಕಾನೂನುಗಳ ಸಂಖ್ಯೆ ಜಾಸ್ತಿ ಇರುವುದರ ಜತೆಗೆ ವಿವಿಧ ಕಾನೂನುಗಳಲ್ಲಿ ಅದೇ ವಿಷಯಗಳ ವ್ಯಾಖ್ಯೆ ಬೇರೆ ಬೇರೆಯಾಗಿದ್ದುದು ಗಂಭೀರ ಸಮಸ್ಯೆ. ಉದಾಹರಣೆಗೆ ‘ವೇತನ’ ಎಂಬ ಶಬ್ದಕ್ಕೆ ಗ್ರಾಚ್ಯುಟಿ ಕಾಯಿದೆ ಒಂದು ವ್ಯಾಖ್ಯೆ ನೀಡಿದರೆ, ಭವಿಷ್ಯನಿಧಿ ಕಾಯಿದೆ ಬೇರೆಯೇ ವ್ಯಾಖ್ಯೆ ನೀಡುತ್ತದೆ.
ಪಿಂಚಣಿಯನ್ನು ನಿರ್ಧರಿಸುವಾಗ ‘ವೇತನ’ದ ಪರಿವ್ಯಾಪ್ತಿಯೇ ಬೇರೆ. ಇಷ್ಟು ಸಾಲದೆಂಬಂತೆ ಸಿಬ್ಬಂದಿ ನಿಯಮಗಳಲ್ಲಿ ಬೇರೆ ವ್ಯಾಖ್ಯೆಗಳನ್ನು ನೀಡಲಾಗಿರುತ್ತದೆ. ಅದರಂತೆ ನೌಕರ ಎಂಬ ಶಬ್ದ ಕೂಡಾ. ಕೆಲವು ಕಡೆ ಅಧಿಕಾರಿ ವರ್ಗವನ್ನು ‘ನೌಕರ’ ವ್ಯಾಪ್ತಿಯಿಂದ ಹೊರಗಿಡಲಾಗಿದ್ದರೆ ಇನ್ನುಳಿ ದಲ್ಲಿ ಅವರೂ ನೌಕರರೇ. ದಿನಗೂಲಿ ಮತ್ತು ಒಪ್ಪಂದ ಆಧಾರಿತ ನೌಕರರ ಕುರಿತು ಕೂಡಾ ಇಂಥದೇ ಗೋಜಲು.
ನೋಂದಣಿ ಮತ್ತು ಅನುಸರಣೆ
ಒಂದೇ ಕೈಗಾರಿಕೆ ಅಥವಾ ಕಾರ್ಖಾನೆ, ಭವಿಷ್ಯನಿಧಿ, ಕಾರ್ಮಿಕ ವಿಮೆ, ಅಂಗಡಿ ಮುಂಗಟ್ಟುಗಳ ಕಾಯಿದೆ, ವೃತ್ತಿ ತೆರಿಗೆ ಕಾಯ್ದೆ, ಜಿಎಸ್‌ಟಿಯಂಥ ಅನೇಕ ಕಾನೂನುಗಳ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳುವುದರ ಜತೆಗೆ ಕಾಲಕಾಲಕ್ಕೆ ಅಂಥ ನೋಂದಣಿಯನ್ನು ನವೀಕರಿಸಿಕೊಳ್ಳಬೇಕು. ವಿವಿಧ ಕಾನೂನುಗಳ ಅಡಿಯಲ್ಲಿ ಕಾಲಕಾಲಕ್ಕೆ ನಡೆಯುವ ಪರಿವೀಕ್ಷಣೆ, ರಿಟರ್ನ್‌ಗಳ ಸಲ್ಲಿಕೆ, ವಹಿಗಳು ಮತ್ತು ದಾಖಲೆಗಳನ್ನು ಬರೆದಿಡುವುದು, ಸೂಚನಾ ಫಲಕಗಳಲ್ಲಿ ವಿವರಗಳನ್ನು ಪ್ರದರ್ಶಿಸುವುದು ಮುಂತಾದ ಕಾಯಿದೆಬದ್ಧ ಅನುಸರಣೆಯ ಜವಾಬ್ದಾರಿ ಉದ್ದಿಮೆದಾರರದ್ದು.
ಅಂಥ ನಿಯಮಗಳನ್ನು ಪಾಲಿಸಲು ತಪ್ಪಿದರೆ ದಂಡ ಹಾಗೂ ಶಿಕ್ಷೆಯ ತೂಗುಕತ್ತಿ ಇದ್ದೇ ಇರುತ್ತದೆ. ಬಹಳ ಸಲ ಇದು ಕೇವಲ ಔಪಚಾರಿಕವಾಗಿರುತ್ತದೆ. ಉದಾಹರಣೆಗೆ ಬ್ಯಾಂಕ್‌ನಂಥ ಸಂಸ್ಥೆಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ನಡೆಯುವ ಒಡಂಬಡಿಕೆಯನ್ವಯ ವೇತನ ನಿರ್ಧರಿತವಾಗುತ್ತದೆ. ಅಂಥ ವೇತನ ಒಪ್ಪಂದದ ಕುರಿತು ಎಲ್ಲಾ ನೌಕರರಿಗೂ ಪೂರ್ತಿ ಅರಿವಿರುತ್ತದೆ. ಆದರೂ, ಎಲ್ಲಾ ಕಡೆ ಸಮಾನ ವೇತನ ಕಾಯಿದೆಯನ್ವಯ ರಿಜಿಸ್ಟರ್ ಅನ್ನು ಬರೆದಿಡಬೇಕು.
ಬೋನಸ್ ನೀಡಿದ ಬಗ್ಗೆ ವಿವರ ಮತ್ತು ರಿಟರ್ನ್ ಸಲ್ಲಿಸಬೇಕು. ಗ್ರಾಚ್ಯುಟಿ ಕಾಯಿದೆಯ ನಿಯಮ ಗಳನ್ನು ಸ್ಥಳೀಯ ಭಾಷೆಯಲ್ಲಿ ಪ್ರದರ್ಶಿಸಬೇಕು ಎಂಬೆಲ್ಲ ನಿಯಮಗಳಿವೆ. ಈ ಪೈಕಿ ಯಾವುದೇ ನಿಯಮ ತಪ್ಪಿದರೆ, ಪರಿವೀಕ್ಷಣೆಗೆ ಬರುವ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಅದಕ್ಕೆ ದಂಡ ಮತ್ತು ಶಿಕ್ಷೆಯನ್ನು ವಿಧಿಸಬಹುದು. ಕಚೇರಿಯ ಎದುರು ಪ್ರದರ್ಶಿಸಲಾದ ಬೋರ್ಡ್ ಸರಿ ಇಲ್ಲ ವಾದರೆ ಅಂಗಡಿ ಮುಂಗಟ್ಟು ಕಾಯಿದೆಯ ಉಲ್ಲಂಘನೆಯಾಗುತ್ತದೆ.
ಕಾರ್ಮಿಕರು ಮುಷ್ಕರ ನಡೆಸಿದರಂತೂ ಮುಗಿಯಿತು. ಕಾರ್ಮಿಕ ಇಲಾಖೆಯ ಅಧಿಕಾರಿಗಳು ದೊಡ್ಡ ಅಪರಾಧವೇ ನಡೆದಂತೆ ನೋಟಿಸ್ ನೀಡುತ್ತಾರೆ. ಕಾರ್ಮಿಕರನ್ನು ಒಲಿಸಿಕೊಳ್ಳುವುದಕ್ಕಿಂತ ಅಧಿಕಾರಿಗಳನ್ನು ಸಂಭಾಳಿಸುವುದೇ ಕಾರ್ಖಾನೆಯ ಮಾಲೀಕರಿಗೆ ದೊಡ್ಡ ತಲೆಬೇನೆ.
ಇಷ್ಟೆಲ್ಲ ಅಧಿಕಾರಿಗಳನ್ನು ಸಂತೋಷಪಡಿಸುವ ಮತ್ತು ಅವರು ಕೇಳಿದ ವಿವರಗಳನ್ನು ನೀಡುವ ಪ್ರಕ್ರಿಯೆಯಲ್ಲಿ ಕೆಲವು ಸಲ ಕಾರ್ಮಿಕ ಹಿತದ ಪಾಲನೆಯಾಗುವುದರ ಬದಲು ಭ್ರಷ್ಟಾಚಾರಕ್ಕೆ ಅವಕಾಶವಾಗುವ ಸಂದರ್ಭಗಳೂ ಇರುತ್ತವೆ. ಇದೀಗ ಜಾರಿಯಾಗಿರುವ ಹೊಸ ಕಾರ್ಮಿಕ ಸಂಹಿತೆ ಗಳು ಕಾರ್ಮಿಕ ವಿರೋಧಿ ಎಂದು ಆಪಾದನೆ ಮಾಡುವವರು ಈ ಎಲ್ಲ ಅಂಶಗಳನ್ನು ಪರಿಗಣಿಸ ಬೇಕು. ಈ ಹೊಸ ಸಂಹಿತೆಗಳು ಜಾರಿಯಾಗಿರುವುದು ಉದ್ಯಮಸ್ನೇಹಿ ವ್ಯವಸ್ಥೆಯ ಆರಂಭ ಮಾತ್ರ.
ವೇತನ ಸಂಹಿತೆ 2019, ಕೈಗಾರಿಕಾ ಸಂಬಂಧಗಳ ಸಂಹಿತೆ 2020, ಸಾಮಾಜಿಕ ಭದ್ರತೆಯ ಸಂಹಿತೆ 2020 ಮತ್ತು ಔದ್ಯೋಗಿಕ ಸುರಕ್ಷೆ, ಅರೋಗ್ಯ ಮತ್ತು ಕೆಲಸದ ಸ್ಥಳದ ಸುಸ್ಥಿತಿ ಸಂಹಿತೆ 2020 ಎಂಬ ನಾಲ್ಕು ಸಂಹಿತೆಗಳು (codes) ಕಳೆದ ನವೆಂಬರ್‌ನಿಂದ ಜಾರಿಯಾಗಿವೆ.
ತಾತ್ಕಾಲಿಕ ನೌಕರರೂ ಸೇರಿದಂತೆ ಎಲ್ಲಾ ನೌಕರರಿಗೆ, ನೇಮಕಾತಿ ಆದೇಶ ಪತ್ರ ನೀಡುವುದು, ಸಾಮಾಜಿಕ ಭದ್ರತಾ ಸವಲತ್ತುಗಳ ಅನ್ವಯ, ಕನಿಷ್ಠ ವೇತನ ನಿಯಮ, ಉಚಿತ ಅರೋಗ್ಯ ತಪಾಸಣೆ, ಸಕಾಲಕ್ಕೆ ವೇತನ ಪಾವತಿ, ಮೂಲ ವೇತನವನ್ನು ಕನಿಷ್ಠ ಶೇ.೫೦ರಷ್ಟು ಏರಿಸುವ ಮೂಲಕ ಪಿ. ಎಫ್., ಗ್ರಾಚ್ಯುಟಿ ಮುಂತಾದವುಗಳ ಹೆಚ್ಚಳ, ಗ್ರಾಚ್ಯುಟಿ ಅರ್ಹತೆಯ ಸೇವಾವಧಿ ೫ ವರ್ಷದಿಂದ ಒಂದು ವರ್ಷಕ್ಕೆ ಇಳಿಕೆ, ಮಹಿಳೆಯರಿಗೆ ರಾತ್ರಿ ಪಾಳಿಗೆ ಅನುಮತಿಯಂಥ ಅನೇಕ ಕಾರ್ಮಿಕ ಪರ ತಿದ್ದುಪಡಿಗಳನ್ನು ತರಲಾಗಿದೆ.
ಯುವಕರಿಗೆ ಉದ್ಯೋಗ ಬೇಕೆಂದರೆ ಅದು ಕೇವಲ ಸರಕಾರಿ ಉದ್ಯೋಗದಿಂದ ಸಾಧ್ಯವಿಲ್ಲ. ಕೈಗಾರಿಕೆ ಗಳ ಅಭಿವೃದ್ಧಿಯಾಗಿ ಸಾಕಷ್ಟು ಹೊಸ ಉದ್ಯೋಗಗಳ ಸೃಷ್ಟಿಯಾಗದಿದ್ದರೆ ಅಮೆರಿಕದಂಥ ದೇಶಗಳ ಶೋಷಣೆ ಮತ್ತು ಬೆದರಿಕೆಗಳಿಗೆ ಅಂಜಿಕೊಂಡೇ ಬದುಕಬೇಕಾಗುತ್ತದೆ. ಹೊಸ ಹೂಡಿಕೆ ಗಳು, ಉದ್ಯಮಗಳು ಬರಬೇಕೆಂದರೆ ಅದಕ್ಕೆ ಪೂರಕ ವಾತಾವರಣವಿರಬೇಕು.
ಕೈಗಾರಿಕಾ ಕ್ರಾಂತಿಯಿಂದಾಗಿ ಮುಂದುವರಿದ ಇಂಗ್ಲೆಂಡ್, ತಾನು ಅಭಿವೃದ್ಧಿಹೊಂದಿದ ಹಂತದಲ್ಲಿ ಜಾರಿ ಮಾಡಿದ ಕಟ್ಟುನಿಟ್ಟಿನ ಕಾರ್ಮಿಕ ಕಾನೂನುಗಳನ್ನು ಹೆಚ್ಚು ಕೈಗಾರಿಕೆಗಳಿಲ್ಲದ ನಮ್ಮ ದೇಶ ದಲ್ಲಿ ಸಾತಂತ್ರ್ಯ ಪೂರ್ವದಲ್ಲೇ ಜಾರಿ ಮಾಡಲಾಯ್ತು.
ಅತಿಯಾದ ನಿಯಂತ್ರಣ, ನೌಕರರಿಗೆ ಅತಿಯಾದ ರಕ್ಷಣೆ ಮತ್ತು ತೀವ್ರವಾದ ಕಾರ್ಮಿಕ ಸಂಘಗಳ ಚಟುವಟಿಕೆಗಳು ಕೈಗಾರಿಕೆಗಳ ಅಭಿವೃದ್ಧಿಗೆ ಅಡ್ಡಿಯಾಗಿವೆ. ಕಾರ್ಮಿಕ ಕಲ್ಯಾಣವೆಂದರೆ ಸರಕಾರಿ ಅಧಿಕಾರಿಗಳ ಒಡ್ಡೋಲಗದ ಪ್ರದರ್ಶನವಲ್ಲ. ಮೇಕ್-ಇನ್-ಇಂಡಿಯಾ ಎಂದ ಮಾತ್ರಕ್ಕೆ ಹೊಸ ಉದ್ದಿಮೆಗಳು ಹುಟ್ಟುವುದಿಲ್ಲ. ಅದಕ್ಕೆ ಪೂರಕ ವ್ಯವಸ್ಥೆ ರೂಪುಗೊಳ್ಳಬೇಕು.
ಕಾನೂನುಗಳ ಸರಳೀಕರಣವೆಂದರೆ ಕೇವಲ ಈ ಮೊದಲು ಇದ್ದ 29 ಕಾರ್ಮಿಕ ಕಾನೂನುಗಳ ಕ್ರೋಡೀಕರಣವಲ್ಲ; ಜತೆಗೆ ಬ್ರಿಟಿಷ್ ವಸಾಹತುಶಾಹಿ ಕಾಲದ ಬಹುತೇಕ ಕಾರ್ಮಿಕ ಕಾಯಿದೆಗಳ ಪರಿಷ್ಕರಣೆ, ಅನಗತ್ಯ ಕಿರಿಕಿರಿ ಎನಿಸಬಹುದಾದ ಕಲಮುಗಳ ತಿದ್ದುಪಡಿಗಳೂ ಅದರಲ್ಲಿ ಸೇರಿರು ತ್ತವೆ.
ಉದಾಹರಣೆಗೆ 1948ರ ಕಾರ್ಖಾನೆಗಳ ಕಾಯಿದೆಯ ೯೨ನೇ ಕಲಮಿನ ಪ್ರಕಾರ, ಕಾರ್ಮಿಕ ಪರಿ ವೀಕ್ಷಕರು ಭೇಟಿಯಿತ್ತ ಸಂದರ್ಭದಲ್ಲಿ ಯಾವುದೇ ತಪ್ಪು ಮಾಹಿತಿ ಅಥವಾ ದಾಖಲೆ ಒದಗಿಸಿದ ಆಪಾದನೆಯ ಮೇಲೆ ಉದ್ಯಮಿಗಳಿಗೆ ೨ ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸುವ ಅಧಿಕಾರವಿತ್ತು.
ಆದರೆ ಹೊಸ ಕಾಯಿದೆಯಡಿಯಲ್ಲಿ ಕಾರ್ಮಿಕ ಪರಿವೀಕ್ಷಕರನ್ನು ಸಮನ್ವಯಕಾರರೆಂದು ( Facilitator) ಹೆಸರಿಸಿ ಅವರು ಕೇವಲ ತಪ್ಪು ಹುಡುಕುವ ಬದಲು ತಂತ್ರಜ್ಞಾನ ಆಧರಿತ ಪರಿವೀಕ್ಷಣೆ ಯಂಥ ಕ್ರಮಗಳನ್ನು ಕೈಗೊಂಡು ಉದ್ಯಮಿಗಳಿಗೆ ಅಗತ್ಯ ಮಾರ್ಗದರ್ಶನ ಮತ್ತು ಸಲಹೆ ನೀಡಬೇಕೆಂದು ಬದಲಿಸಲಾಗಿದೆ.
ಮೊದಲ ಸಲ ಆಗುವ ತಪ್ಪುಗಳಿಗೆ ಶಿಕ್ಷೆ ನೀಡುವ ಬದಲು ಅವರಿಗೆ ತಿದ್ದಿಕೊಳ್ಳುವುದಕ್ಕೆ ಅನುವು ಮಾಡಿಕೊಡಲಾಗಿದೆ. ಉದ್ಯಮಗಳನ್ನು ಕ್ರಿಮಿನಲ್ ಅಪರಾಧವೆಂಬ ತೂಗುಕತ್ತಿಯಿಂದ ಪಾರು ಮಾಡಲು ಇದು ಸಹಾಯಕವಾಗುತ್ತದೆ. ಕನಿಷ್ಠ ವೇತನ ಕಾಯಿದೆ 1948ರ ೨೨ನೇ ಕಲಮಿನ ಪ್ರಕಾರ ಕನಿಷ್ಠ ವೇತನದ ನಿಯಮಗಳ ಉಲ್ಲಂಘನೆಗೆ ವಿಧಿಸಬಹುದಾದ ಜೈಲು ಶಿಕ್ಷೆಯ ಬದಲು ಈಗ ಕೇವಲ ದಂಡ ವಿಧಿಸಬಹುದಾಗಿದೆ.
ಉದ್ಯಮಗಳು ಹಾನಿ ಅನುಭವಿಸಿದಾಗ ಅಥವಾ ಇನ್ನಿತರ ಸಂದರ್ಭಗಳಲ್ಲಿ ನೌಕರರನ್ನು ವಜಾ ಗೊಳಿಸಲು ಹಿಂದಿನ ಕಾನೂನುಗಳಲ್ಲಿ ಸರಕಾರದ ಅನುಮತಿ ಪಡೆಯುವುದು 100ಕ್ಕಿಂತ ಹೆಚ್ಚು ನೌಕರರಿರುವ ಕಂಪನಿಗಳಿಗೆ ಕಡ್ಡಾಯವಾಗಿತ್ತು. ಹೊಸ ನಿಯಮಗಳ ಪ್ರಕಾರ 300ಕ್ಕಿಂತ ಕಡಿಮೆ ನೌಕರರಿರುವ ಕಂಪನಿಗಳು ನೌಕರರನ್ನು ವಜಾಗೊಳಿಸಲು ಸರಕಾರದ ಅನುಮತಿ ಪಡೆಯ ಬೇಕಾಗಿಲ್ಲ.
ನೌಕರರು ಮುಷ್ಕರ ನಡೆಸುವ ಮುನ್ನ ೧೪ರಿಂದ ೬೦ ದಿನಗಳ ನೋಟಿಸ್ ನೀಡುವುದನ್ನು ಎಲ್ಲಾ ಕೈಗಾರಿಕೆಗಳಿಗೆ ಕಡ್ಡಾಯ ಮಾಡಲಾಗಿದೆ. ಇದು ದಿಢೀರ್ ಮುಷ್ಕರಗಳಿಂದಾಗುವ ಹಾನಿಯನ್ನು ತಡೆಯುವುದಲ್ಲದೆ, ಕಾರ್ಮಿಕ ಸಂಘಗಳ ಬ್ಲ್ಯಾಕ್‌ಮೇಲ್ ತಂತ್ರಗಳಿಗೆ ಬ್ರೇಕ್ ಹಾಕುತ್ತದೆ. ಜತೆಗೆ ವಿವಿಧ ಶಬ್ದಗಳಿಗೆ ಸಮಾನ ವ್ಯಾಖ್ಯೆ, ಏಕಮಾತ್ರ ನೋಂದಣಿ ವ್ಯವಸ್ಥೆಯಂಥ ಅನೇಕ ಕ್ರಮಗಳು ಉದ್ಯಮಿಗಳಿಗೆ ಕಾನೂನುಗಳ ಬಿಗಿಪಟ್ಟಿನ ಹೊರಗೆ ಸ್ವಲ್ಪಮಟ್ಟಿಗೆ ಉಸಿರಾಡುವ ಅವಕಾಶ ಕಲ್ಪಿಸಿವೆ. ವಾರಕ್ಕೆ ೪೮ಘಂಟೆಯ ಮಿತಿಯೊಳಗೆ ೧೨ ತಾಸಿನ ಶಿಫ್ಟ್ ಗೆ ಅನುಮತಿಸಲಾಗಿದೆ.
ಇಂಥ ಕೆಲವು ಸಡಿಲಿಕೆಗಳನ್ನೇ ‘ಕಾರ್ಮಿಕ ವಿರೋಧಿ’ ಎಂದು ಹಣೆಪಟ್ಟಿ ಕಟ್ಟಿ ಗದ್ದಲ ಎಬ್ಬಿಸುವ ಪ್ರಯತ್ನ ನಡೆಯುತ್ತಿದೆ. ಕಮ್ಯುನಿಸ್ಟ್ ಸಿದ್ಧಾಂತದಿಂದ ಮಾತ್ರ ಕಾರ್ಮಿಕ ಕಲ್ಯಾಣ ಸಾಧ್ಯ ಎಂಬ ಮುಚ್ಚಿದ ಮಾನಸಿಕತೆಯಿಂದ ನಮ್ಮಲ್ಲಿ ಅನೇಕರು ಹೊರಬಂದು ಹೊರಜಗತ್ತಿನಲ್ಲಿ ನಡೆಯು ತ್ತಿರುವ ಬದಲಾವಣೆಗಳನ್ನು ವೀಕ್ಷಿಸಬೇಕು.
ಶತಮಾನಗಳ ಹಿಂದಿನ ಅಜ್ಞಾನದ ಪರಿಸ್ಥಿತಿ ಈಗಿನ ಕಾರ್ಮಿಕರಿಗೆ ಇಲ್ಲ. ಎಲ್ಲರಿಗೂ ತಮ್ಮ ಹಕ್ಕುಗಳ ಪರಿವೆ ಇದೆ. ನೌಕರಿ ಮಾರುಕಟ್ಟೆ ಕೂಡಾ ಸ್ಪರ್ಧೆಗೆ ಹೊರತಲ್ಲ. ಕೇವಲ ಹಕ್ಕುಗಳನ್ನು, ನಿಯಮಗಳನ್ನೇ ಬಂಡವಾಳ ಮಾಡಿಕೊಂಡು ಉದ್ಯೋಗದಾತರನ್ನು ಶೋಷಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಪ್ರವೃತ್ತಿಯಿಂದ ಕಾರ್ಮಿಕ ನಾಯಕರು ಹೊರಬರಬೇಕು.
ಬದಲಿಗೆ ತಮ್ಮ ನೈಪುಣ್ಯ, ದಕ್ಷತೆಗಳ ಮೂಲಕ ಹೆಚ್ಚಿನ ಉತ್ಪಾದಕತೆಗೆ ಕಾರಣರಾದರೆ ಕೆಲಸದ ಸ್ಥಿತಿಗತಿಗಳು ತನ್ನಿಂದ ತಾನೇ ಸುಧಾರಿಸುತ್ತವೆ. ಕೈಗಾರಿಕೀಕರಣ, ಉದ್ಯೋಗ ಸೃಷ್ಟಿ ಇವೆಲ್ಲ ಕೇವಲ ಕಾಗದಗಳಲ್ಲಿ ಮೂಡುವ ಅಕ್ಷರಗಳಿಗೋ, ವೇದಿಕೆಯ ಭಾಷಣಗಳಿಗೋ ಸೀಮಿತವಾಗದೆ, ವಾಸ್ತವದ ನೀತಿ ನಿಯಮಗಳ ಮೂಲಕ ಜಾರಿಯಾದಾಗ ಮಾತ್ರ ನಿಜವಾದ ಕೈಗಾರಿಕಾ ಪ್ರಗತಿ ಸಾಧ್ಯ.
(ಲೇಖಕರು ಕಾನೂನು ತಜ್ಞರು ಮತ್ತು ಕೆವಿಜಿ ಬ್ಯಾಂಕ್‌ನ ನಿವೃತ್ತ ಎಜಿಎಂ)