Roopa Gururaj Column: ವಿಕ್ರಮ ಬೇತಾಳ 13: ಚಂದ್ರಪ್ರಭೆಯ ಪ್ರೇಮದ ಭ್ರಮೆ
ಮಾನವನ ಸಂಬಂಧಗಳಲ್ಲಿ ಆಕರ್ಷಣೆ, ವ್ಯಾಮೋಹ ಮತ್ತು ನೈಜ ತ್ಯಾಗದ ನಡುವಿನ ಸೂಕ್ಷ್ಮ ಗೆರೆಯನ್ನು ಅರಿಯಲು ಕಥಾಸರಿತ್ಸಾಗರದ ಬೇತಾಳ ಪಂಚವಿಂಶತಿಯ ಈ ಕಥೆ ಒಂದು ಒಳ್ಳೆಯ ಉದಾಹರಣೆ. ಅಯೋಧ್ಯಾ ನಗರದ ರಾಜ ವೀರಕೇತುವಿನ ಆಳ್ವಿಕೆಯಲ್ಲಿ ಮಹಾ ಕಳ್ಳನೊಬ್ಬ ನಗರದ ಧನಿಕರ ಮನೆಗಳನ್ನು ಲೂಟಿ ಮಾಡುತ್ತಿದ್ದನು.
-
ಒಂದೊಳ್ಳೆ ಮಾತು
ಮಾನವನ ಸಂಬಂಧಗಳಲ್ಲಿ ಆಕರ್ಷಣೆ, ವ್ಯಾಮೋಹ ಮತ್ತು ನೈಜ ತ್ಯಾಗದ ನಡುವಿನ ಸೂಕ್ಷ್ಮ ಗೆರೆಯನ್ನು ಅರಿಯಲು ಕಥಾಸರಿತ್ಸಾಗರದ ಬೇತಾಳ ಪಂಚವಿಂಶತಿಯ ಈ ಕಥೆ ಒಂದು ಒಳ್ಳೆಯ ಉದಾಹರಣೆ. ಅಯೋಧ್ಯಾ ನಗರದ ರಾಜ ವೀರಕೇತುವಿನ ಆಳ್ವಿಕೆಯಲ್ಲಿ ಮಹಾ ಕಳ್ಳನೊಬ್ಬ ನಗರದ ಧನಿಕರ ಮನೆಗಳನ್ನು ಲೂಟಿ ಮಾಡುತ್ತಿದ್ದನು. ಕೊನೆಗೆ ರಾಜಭಟರ ಕೈಗೆ ಸಿಕ್ಕಿಬಿದ್ದ ಆತನಿಗೆ ರಾಜನು ಶೂಲಕ್ಕೇರಿಸುವ ಮರಣದಂಡನೆ ವಿಧಿಸಿದನು. ರಕ್ತಸಿಕ್ತನಾಗಿ ಶೂಲದ ಮೇಲೆ ನರಳುತ್ತಿದ್ದ ಆ ಕಳ್ಳನನ್ನು ನೋಡಲು ಊರಿನ ಜನರೆಲ್ಲ ಸೇರಿದ್ದರು. ಅದೇ ಮಾರ್ಗವಾಗಿ ರಥದಲ್ಲಿ ಸಾಗುತ್ತಿದ್ದ ರಾಜಕುಮಾರಿ ಚಂದ್ರಪ್ರಭೆಯ ಕಣ್ಣು ಆತನ ಮೇಲೆ ಬಿತ್ತು.
ಮರಣಯಾತನೆಯಲ್ಲೂ ಆ ಕಳ್ಳನ ಕಣ್ಣುಗಳಲ್ಲಿ ಕಣ್ಣೀರು ಮತ್ತು ಮುಖದಲ್ಲಿ ಒಂದು ವಿಚಿತ್ರ ನಗು ಒಟ್ಟಿಗೆ ಮೂಡಿದ್ದವು. ಆ ದೃಶ್ಯವನ್ನು ಕಂಡ ರಾಜಕುಮಾರಿಯ ಹೃದಯದಲ್ಲಿ ಅನಿರೀಕ್ಷಿತವಾಗಿ ಕರುಣೆ ಮತ್ತು ಆಕರ್ಷಣೆಯ ಕಿಚ್ಚು ಹೊತ್ತಿಕೊಂಡಿತು. ನಾನು ಈತನನ್ನೇ ಪತಿಯೆಂದು ವರಿಸಿದ್ದೇನೆ; ಈತ ಸತ್ತರೆ ನಾನೂ ಸಾಯುತ್ತೇನೆ ಎಂದು ಹಠ ಹಿಡಿದು, ಆತ ಪ್ರಾಣಬಿಟ್ಟ ಕ್ಷಣವೇ ಆಕೆಯೂ ಆಘಾತದಿಂದ ಪ್ರಾಣತ್ಯಾಗ ಮಾಡಿದಳು!
ಇದನ್ನೂ ಓದಿ: Roopa Gururaj Column: ವಿಕ್ರಮ ಬೇತಾಳ 12: ವೃದ್ಧ ತಪಸ್ವಿಯ ಯೌವನದ ಮೋಹ
ರಾಜಕುಮಾರಿಯ ಅಕಾಲಿಕ ಸಾವಿನಿಂದ ನಗರವೇ ಶೋಕಸಾಗರದಲ್ಲಿ ಮುಳುಗಿತು. ಆಕೆಯ ಚಿತೆಯನ್ನು ಸಿದ್ಧಪಡಿಸಿದಾಗ, ಆಕೆ ಯನ್ನು ಪ್ರೀತಿಸುತ್ತಿದ್ದ ಮೂವರು ರಾಜ ಕುಮಾರರು ಅಲ್ಲಿಗೆ ಧಾವಿಸಿ ಬಂದರು. ಮೊದಲನೆಯವನು, ಆಕೆಯಿಲ್ಲದ ಬದುಕು ನನಗೇಕೆ? ಎಂದು ಚಿತೆಯ ಜ್ವಾಲೆಗೆ ಹಾರಿ ಭಸ್ಮ ವಾದನು. ಎರಡನೆಯವನು ಆಕೆಯ ಚಿತಾಭಸ್ಮ ವನ್ನು ಮೈಗೆ ಬಳಿದುಕೊಂಡು, ಸ್ಮಶಾನದಲ್ಲೇ ತಪಸ್ವಿಯಂತೆ ಬದುಕತೊಡಗಿದನು.
ಮೂರನೆ ವನು ಆಕೆಯ ನೆನಪಿನಲ್ಲೇ ತಿಂಗಳಾನು ಗಟ್ಟಲೆ ಅನ್ನಾಹಾರ ತ್ಯಜಿಸಿ ಪ್ರಾಣಬಿಟ್ಟನು. ಕಥೆಯನ್ನು ಮುಗಿಸಿದ ಬೇತಾಳನು ವಿಕ್ರಮಾ ದಿತ್ಯನಿಗೆ ಕಠಿಣ ಪ್ರಶ್ನೆಯೊಡ್ಡುತ್ತಾನೆ: ‘ಹೇ ರಾಜಾ, ಆ ಕಳ್ಳ ಸಾಯುವ ಮುನ್ನ ಕಣ್ಣೀರಿ ಡುತ್ತಲೇ ನಕ್ಕಿದ್ದೇಕೆ? ಮತ್ತು ರಾಜಕುಮಾರಿಯ ಅಗಲಿಕೆಗೆ ಪ್ರಾಣ ನೀಡಿದ ಆ ಮೂವರು ಪ್ರೇಮಿಗಳಲ್ಲಿ ಅತ್ಯಂತ ಉದಾತ್ತ ಪ್ರೇಮಿ ಯಾರು?’ ವಿಕ್ರಮಾದಿತ್ಯನು ಉತ್ತರಿಸುತ್ತಾನೆ: ಕಳ್ಳನು ಕಣ್ಣೀರಿಟ್ಟಿದ್ದು ತನ್ನ ದುಷ್ಕರ್ಮಗಳಿಗೆ ಪಶ್ಚಾತ್ತಾಪ ಪಟ್ಟು; ನಕ್ಕಿದ್ದು, ಸಾಯುವ ಗಳಿಗೆಯಲ್ಲಿ ಅನ್ಯಾಯವಾಗಿ ತನ್ನ ಮೇಲೆ ಅನುರಕ್ತಳಾಗಿ ಪ್ರಾಣಬಿಡಲು ಹೊರಟ ಆ ಮುಗ್ಧ ರಾಜ ಕುಮಾರಿಯ ಮೂರ್ಖತನವನ್ನು ಕಂಡು!
ಇನ್ನು ಆಕೆಯ ಚಿತೆಗೆ ಹಾರಿದ ಮೂವರಲ್ಲಿ, ಚಿತಾಭಸ್ಮ ವನ್ನು ರಕ್ಷಿಸಿ ತಪಸ್ವಿಯಾದವನೇ ಎಲ್ಲಕ್ಕಿಂತ ಶ್ರೇಷ್ಠ. ಆವೇಶದಲ್ಲಿ ಪ್ರಾಣಬಿಡುವುದು ಸುಲಭ; ಆದರೆ ಅಗಲಿಕೆಯ ನೋವನ್ನು ಎದೆಯಲ್ಲೇ ಹೊತ್ತು, ತಪಸ್ಸಿನಂತೆ ಬದುಕನ್ನು ಸವೆಸುವ ಸಂಯಮವೇ ಎಲ್ಲಕ್ಕಿಂತ ಕಠಿಣ ಮತ್ತು ಪವಿತ್ರ. ಬದುಕಿನಲ್ಲಿ ಹಲವು ಬಾರಿ ನಾವು ಕೇವಲ ಆಕಸ್ಮಿಕ ಅನುಕಂಪ, ಬಾಹ್ಯ ಆಕರ್ಷಣೆ ಅಥವಾ ಕ್ಷಣಿಕ ಭಾವಾವೇಶವನ್ನು ಪ್ರೀತಿ ಎಂದು ಭ್ರಮಿಸಿ ಬಿಡುತ್ತೇವೆ. ರಾಜಕುಮಾರಿಯು ಕಳ್ಳನ ನೋವನ್ನು ಕಂಡು ತೋರಿದ ಅನುಕಂಪ ಅವಳನ್ನೇ ಬಲಿತೆಗೆದುಕೊಂಡಿತು.
ವಿವೇಕವಿಲ್ಲದ ಭಾವನೆಗಳು ಕೇವಲ ವಿನಾಶವನ್ನು ತರುತ್ತವೆ. ಅದೇ ರೀತಿ, ಪ್ರೀತಿ ಅಥವಾ ಸಂಬಂಧ ಗಳೆಂದರೆ ಕೇವಲ ಆವೇಶದಲ್ಲಿ ಪ್ರಾಣ ಕೊಡುವುದಲ್ಲ; ಬದುಕಿನ ನೈಜ ಸವಾಲುಗಳು ಮತ್ತು ನೋವುಗಳನ್ನು ಎದುರಿಸುತ್ತಾ, ಬದುಕಿನ ಹಾದಿಯಲ್ಲಿ ಸ್ಥಿರವಾಗಿ ನಿಲ್ಲುವುದು. ಸಾಯುವ ಧೈರ್ಯಕ್ಕಿಂತ, ನೈತಿಕವಾಗಿ ಬದುಕುವ ತಾಳ್ಮೆಯೇ ನಮಗೆ ನಿಜವಾದ ಘನತೆಯನ್ನು ತಂದುಕೊಡು ತ್ತದೆ. ಇಂದಿನ ಕಾಲದಲ್ಲಿ, ಹದಿಹರೆಯದವರಷ್ಟೇ ಅಲ್ಲ ಎಲ್ಲಾ ವಯೋ ಮಾನದವರು ಭಾವಾವೇಶ ದಿಂದ ಯಾವುದೋ ಹುಡುಕಾಟದಲ್ಲಿ ತಮ್ಮ ಮನೆಯವರನ್ನು, ಮಕ್ಕಳನ್ನು ಕಡೆಗಣಿಸಿ ಭ್ರಮೆ ಗೊಳಗಾದವರಂತೆ ‘ಪ್ರೀತಿಸುತ್ತೇವೆ’ ಎನ್ನುವ ಕ್ಷುಲ್ಲಕ ಕಾರಣ ಕೊಟ್ಟು ಹೊರಟುಬಿಡುತ್ತಾರೆ.
ಆದರೆ ಅಲ್ಲಿ ಮೋಹ ಬಿಟ್ಟು ಇನ್ನೇನು ಇರುವು ದಿಲ್ಲ. ಇದರಿಂದ ಮನೆಯವರ ಮತ್ತು ಬಿಟ್ಟು ಹೋದವರ ಜೀವನ ಎಲ್ಲವೂ ಹಾಳು. ಬದುಕಿ ನಲ್ಲಿ ಸಂಯಮ, ವಿವೇಕ, ಕಷ್ಟ ಸಹಿಸುವ ಗುಣ, ಭಾವನೆಗಳನ್ನು ನಿಗ್ರಹಿಸುವ ಶಕ್ತಿ ಎಲ್ಲಕ್ಕಿಂತ ಹೆಚ್ಚಾಗಿ ನಮ್ಮವರಿಗಾಗಿ ನಾವು ತೋರುವ ಪ್ರಾಮಾಣಿಕ ಪ್ರೀತಿ ವಿಶ್ವಾಸ ಅವರಿಗೆ ಜೊತೆಗೆ ನಮಗೂ ಶ್ರೀರಕ್ಷೆ.