Srivathsa Joshi Column: ಪರೋಪಕಾರಿ ಪುಣ್ಯವಂತೆಗೆ ಪಿಎಚ್ʼಡಿ ಪದವಿ ಪುರಸ್ಕಾರ
ಹಾಂ! ಅದೃಷ್ಟವಶಾತ್ ನನಗೊಬ್ಬರು ಸಿಕ್ಕಿದ್ದಾರೆ, ಕಳೆದ ವಾರಾಂತ್ಯದಲ್ಲಿ ಇಲ್ಲೇ ಅಮೆರಿಕದ ನಾರ್ತ್ ಕೆರೊಲಿನಾ ಸಂಸ್ಥಾನದ ಮೊರ್ರಿಸ್‌ವಿಲ್ ಎಂಬ ಪಟ್ಟಣದಲ್ಲಿ ನಡೆದ ಒಂದು ಸುಂದರ ಸನ್ಮಾನ ಸಮಾರಂಭದಲ್ಲಿ ನಾನೊಬ್ಬ ಪ್ರೇಕ್ಷಕನಾಗಿ ಭಾಗವಹಿಸಿದಾಗ. ಅದು, ಆ ಪಟ್ಟಣದ ನಿವಾಸಿ 93ರ ಹರೆಯದ ಭಾರತೀಯ ಮಹಿಳೆ ಸರೋಜ್ ಶರ್ಮ ಎಂಬುವವರಿಗೆ ಸಂದ ಸನ್ಮಾನ ಸಮಾರಂಭ.
-
ತಿಳಿರು ತೋರಣ
ಇಕ್ಕುವುದು ನನ್ನಿಯನು ನುಡಿಯುವುದು ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣ ವಕ್ಕು..." ಎಂದಿದ್ದಾನೆ ಸರ್ವಜ್ಞ. ಅನ್ನದಾನ ಮಾಡುವುದು, ಸತ್ಯವನ್ನೇ ಹೇಳುವುದು ಮತ್ತು ತನ್ನಂತೆಯೇ ಬೇರೆಯವರು ಕೂಡ ಮನುಷ್ಯರು ಎಂದು ತಿಳಿದು ಸ್ಪಂದಿಸುವುದು- ಇದಿಷ್ಟನ್ನು ಮಾಡಿದರೆ ಕೈಲಾಸವು ನಿನ್ನದಾಗುವುದು ಎಂದು ಈ ವಚನದ ಸರಳ ಇಂಗಿತ.
ಇಲ್ಲಿ ಅನ್ನವನು ಇಕ್ಕುವುದು ಎಂದರೆ ಅಕ್ಕಿ ಬೇಯಿಸಿ ಅನ್ನ ಮಾಡಿ ಬಡಿಸುವುದು ಎಂಬ ಸೀಮಿತ ಅರ್ಥವಲ್ಲ; ಹೊಟ್ಟೆಗೆ ಆಹಾರ ಒದಗಿಸುವುದು ಎಂದು ಮಾತ್ರವೂ ಅಲ್ಲ; ಇನ್ನೊಬ್ಬರ ಬದುಕಿಗೆ ಬೆಳಕಾಗುವ, ಅವರ ಮನಸ್ಸಿಗೆ ಸಾಂತ್ವನ ಒದಗಿಸುವ, ಸದಾ ಅವರ ಶ್ರೇಯೋಭಿವೃದ್ಧಿಯನ್ನೇ ಬಯಸುವ ಉದಾತ್ತ ಚರ್ಯೆಗಳೆಲ್ಲವನ್ನೂ ‘ಅನ್ನವನು ಇಕ್ಕುವುದು’ ಎಂಬೆರಡು ಪದಗಳಲ್ಲಿ ಸರ್ವಜ್ಞ ಹಿಡಿದಿಟ್ಟಿದ್ದಾನೆ.
ಮತ್ತೆ ಅಷ್ಟು ವಿಶಾಲಾರ್ಥದ ಅನ್ನ ಇಕ್ಕುವಿಕೆ ಆದರ್ಶವಾಗಿ ಹೇಗಿರಬೇಕು? ಲವಲೇಶವೂ ಸ್ವಾರ್ಥವಿಲ್ಲದೆ, ಯಾವುದೇ ಪ್ರತಿ-ಲವನ್ನು ಬಯಸದೆ ಆಗಬೇಕು. “ಕಾರ್ಯಮಿತ್ಯೇವ ಯತ್ಕರ್ಮ ನಿಯತಂ ಕ್ರಿಯತೇಧಿರ್ಜುನ| ಸಂಗಂ ತ್ಯಕ್ತ್ವಾ ಫಲಂ ಚೈವ ಸ ತ್ಯಾಗಃ ಸಾತ್ತ್ವಿಕೋ ಮತಃ" (ಮನುಷ್ಯನು ವಿಹಿತ ಕರ್ತವ್ಯವನ್ನು, ಅದನ್ನು ಮಾಡಲೇಬೇಕು ಎನ್ನುವ ಕಾರಣ ದಿಂದ ಮಾತ್ರವೇ ಮಾಡಿ, ಎಲ್ಲ ಐಹಿಕ ಸಂಗವನ್ನೂ ಕರ್ಮಫಲಾಪೇಕ್ಷೆ ಯನ್ನೂ ತ್ಯಜಿಸಿ ದಾಗ, ಅಂಥ ತ್ಯಾಗವು ಸಾತ್ತ್ವಿಕ ಎನಿಸಿಕೊಳ್ಳುತ್ತದೆ) ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದೂ ಇದನ್ನೇ. ಅಂದರೆ ಭಗವಂತ ಅಂಥವರನ್ನು ಗಮನಿಸುತ್ತಲೇ ಇರುತ್ತಾನೆ.
ಅಂತಿಮವಾಗಿ ‘ಕೊಟ್ಟಿದ್ದು ತನಗೆ ಬಚ್ಚಿಟ್ಟದ್ದು ಪರರಿಗೆ’ ಆಗುವಂತೆ ಅನುಗ್ರಹಿಸುತ್ತಾನೆ ಕೂಡ. ಇದೆಲ್ಲ ಓದಲಿಕ್ಕೆ, ಕೇಳಲಿಕ್ಕೆ ಚಂದ. ನಮ್ಮನ್ನೇ ನಾವು ಪ್ರಾಮಾಣಿಕವಾಗಿ ಪ್ರಶ್ನಿಸಿ ಕೊಂಡರೆ- ಎಷ್ಟು ಪ್ರತಿಶತ ಅಂಥ ಗುಣವಿದೆ ನಮ್ಮಲ್ಲಿ? ಮಾದರಿ ಆಗಿಟ್ಟು ಕೊಳ್ಳೋಣ ವೆಂದರೆ ಸಮಾಜದಲ್ಲಿ ಎಷ್ಟು ಜನ ಸಿಗುತ್ತಾರೆ ಅಂಥ ಕರ್ಮಯೋಗಿಗಳು? ಉತ್ತರ ನಿರಾಶಾದಾಯಕ.
ಇದನ್ನೂ ಓದಿ: Srivathsa Joshi Column: ಹಾಗೇ ಸುಮ್ಮನೆ ಅಲ್ಲದ ʼಹಾಗೇ ಸುಮ್ಮನೆʼಗಳು...
ಹಾಂ! ಅದೃಷ್ಟವಶಾತ್ ನನಗೊಬ್ಬರು ಸಿಕ್ಕಿದ್ದಾರೆ, ಕಳೆದ ವಾರಾಂತ್ಯದಲ್ಲಿ ಇಲ್ಲೇ ಅಮೆರಿಕದ ನಾರ್ತ್ ಕೆರೊಲಿನಾ ಸಂಸ್ಥಾನದ ಮೊರ್ರಿಸ್‌ವಿಲ್ ಎಂಬ ಪಟ್ಟಣದಲ್ಲಿ ನಡೆದ ಒಂದು ಸುಂದರ ಸನ್ಮಾನ ಸಮಾರಂಭದಲ್ಲಿ ನಾನೊಬ್ಬ ಪ್ರೇಕ್ಷಕನಾಗಿ ಭಾಗವಹಿಸಿದಾಗ. ಅದು, ಆ ಪಟ್ಟಣದ ನಿವಾಸಿ 93ರ ಹರೆಯದ ಭಾರತೀಯ ಮಹಿಳೆ ಸರೋಜ್ ಶರ್ಮ ಎಂಬುವವರಿಗೆ ಸಂದ ಸನ್ಮಾನ ಸಮಾರಂಭ.
ಅವರ ನಿಷ್ಕಾಮಕರ್ಮ ಸಮಾಜಸೇವೆ, ಸನಾತನ ಸಂಸ್ಕೃತಿಯ ಉಳಿಸಿ-ಬೆಳೆಸುವಿಕೆಯನ್ನು ಗುರುತಿಸಿ ಅವರಿಗೆ ಯೋಗ ಯುನಿವರ್ಸಿಟಿ ಆ- ಅಮೆರಿಕ ಗೌರವ ಡಾಕ್ಟರೇಟ್ ಕೊಟ್ಟು ಪುರಸ್ಕರಿಸಿದ್ದಕ್ಕೆ ಅಭಿಮಾನಿಗಳೆಲ್ಲರೂ ಸೇರಿ ನಡೆಸಿದ ಒಂದು ಅತ್ಯಂತ ಆರ್ದ್ರ-ಆತ್ಮೀಯ ಕಾರ್ಯಕ್ರಮ. ನಾನದರಲ್ಲಿ ಭಾಗಿಯಾಗುವಂತಾದದ್ದು ಹೇಗೆಂದು ಆಮೇಲೆ ತಿಳಿಸುತ್ತೇನೆ.
ಮೊದಲಿಗೆ ಡಾ. ಸರೋಜ್ ಶರ್ಮರ ಸಂಕ್ಷಿಪ್ತ ಪರಿಚಯ ಓದಿಕೊಳ್ಳಿ. ಮೇಲೆ ಬರೆದ ಪ್ಯಾರಗ್ರಾಫ್ ಅವರಿಗೆ ಎಷ್ಟು ಕರಾರುವಾಕ್ಕಾಗಿ ಹೊಂದುತ್ತದೆಯೆಂದು ನೀವೇ ನೋಡುವಿ ರಂತೆ. 1932ರ ಅಕ್ಟೋಬರ್ 3ರಂದು ಉತ್ತರಪ್ರದೇಶದ ಕಾನ್ಪುರದಲ್ಲಿ ಜನನ. ತಾಯಿ ಶ್ರೀಮತಿ ಶಾಸ್ತ್ರೀ; ತಂದೆ ಪಂಡಿತ್ ವೈಕುಂಠನಾಥ ಶಾಸ್ತ್ರೀ.
ಧರ್ಮಭೀರು ಸಂಪ್ರದಾಯಸ್ಥ ಕುಟುಂಬ. ಐದು ವರ್ಷದ ಬಾಲಿಕೆಯಾಗಿದ್ದಾಗಲೇ ತಾನೊಂದು ದೇವಸ್ಥಾನ ಕಟ್ಟಬೇಕೆಂಬ ಕನಸಿತ್ತಂತೆ ಸರೋಜ್‌ಳಿಗೆ. ಹದಿಹರೆಯದಲ್ಲಿ ಮದುವೆಯಾಯ್ತು. ಪತಿಯ ಹೆಸರು ಗಂಗಾಧರ ಶರ್ಮ. ಅರ್ಚಕ ವೃತ್ತಿಯಲ್ಲಿದ್ದವರ ಸುಪುತ್ರ. ಅವರಿದ್ದದ್ದು ಲಖನೌದಲ್ಲಿ ಹಾಗಾಗಿ ಅಲ್ಲಿಗೆ ಪಯಣ. ಅಲ್ಲಿ ಸರೋಜ್ ಶರ್ಮ ಆರಂಭಿಸಿದ್ದ ಒಂದು ಮಹಿಳಾಮಂಡಲ ಈಗಲೂ ಅಸ್ತಿತ್ವದಲ್ಲಿದೆಯಂತೆ.
1962ರಲ್ಲಿ ಭಾರತ-ಚೀನಾ ಯುದ್ಧ ನಡೆದಿದ್ದಾಗ ಪ್ರಧಾನಿ ನೆಹರುರವರ ಕರೆಗೆ ಓಗೊಟ್ಟು ಸಾಮಾನ್ಯ ಪ್ರಜೆಗಳಿಂದ ಸರಕಾರಕ್ಕೆ ಸಹಾಯ ಯೋಜನೆಯಡಿ ತನ್ನದೂ ಸೇರಿದಂತೆ ಅವರಿವರಿಂದ ಒಟ್ಟುಗೂಡಿಸಿ 25 ತೊಲೆಗಳಷ್ಟು ಚಿನ್ನವನ್ನು ಭಾರತೀಯ ಸೇನೆಯ ಖರ್ಚಿಗೆಂದು ದಾನ ಮಾಡಿದ ಧೀರೆ ಸರೋಜ್ ಶರ್ಮ.
ಆಮೇಲೆ ಪತಿಯ ಉನ್ನತಶಿಕ್ಷಣ ಮತ್ತು ವೃತ್ತಿಗೋಸ್ಕರ ನೈಜೀರಿಯಾ, ಸೂಡಾನ್ ಮತ್ತು ಕೆನಡಾಗಳಲ್ಲಿದ್ದಾಗ ಅಲ್ಲಿ ಸರೋಜ್ ಶರ್ಮ ಒಬ್ಬ ಸಾಂಸ್ಕೃತಿಕ ರಾಯಭಾರಿ ಆಗಿದ್ದರಷ್ಟೇ ಅಲ್ಲದೆ ಧಾರ್ಮಿಕ ಆಚರಣೆಗಳು ಮತ್ತು ಆಪತ್ಕಾಲದಲ್ಲಿ ಪರಿಹಾರಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದರು.
ಸೂಡಾನ್‌ನಲ್ಲಿರುವಾಗಲೇ ಬಾಂಗ್ಲಾಯುದ್ಧ ಸಂತ್ರಸ್ತರಿಗೆ ದೊಡ್ಡ ಮೊತ್ತದ ಪರಿಹಾರ ನಿಧಿ ಸಂಗ್ರಹಿಸಿ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಕಳುಹಿಸಿಕೊಟ್ಟಿದ್ದರು. 1972ರಲ್ಲಿ ಶರ್ಮ ದಂಪತಿ ಅಮೆರಿಕದ ನಾರ್ತ್ ಕೆರೊಲಿನಾ ಸಂಸ್ಥಾನಕ್ಕೆ ಬಂದವರು ಅಲ್ಲೇ ನೆಲೆ ನಿಂತಿದ್ದಾರೆ.
ಆರಂಭದಲ್ಲಿ ರಾಜಧಾನಿ ರ‍್ಯಾಲೆ ನಗರದಲ್ಲಿ ಮನೆ. ಅದರ ನೆಲಮಾಳಿಗೆಯಲ್ಲಿ ಅನೌಪ ಚಾರಿಕವಾಗಿ ಒಂದು ಧಾರ್ಮಿಕ ಕೇಂದ್ರದ ಸ್ಥಾಪನೆ. ದೀಪಾವಳಿ, ಹೋಳಿ, ದಸರಾ, ಶಿವರಾತ್ರಿ, ಜನ್ಮಾಷ್ಟಮಿ ಹಬ್ಬಗಳ ಆಚರಣೆ, ಸತ್ಯನಾರಾಯಣ ಪೂಜೆ, ರಾಮಾಯಣ ಮತ್ತು ಭಗವದ್ಗೀತೆ ಪಠನ ಮುಂತಾದ ಚಟುವಟಿಕೆಗಳು. ಒಂದಿಷ್ಟು ಸಮಾನಮನಸ್ಕರನ್ನು ಒಟ್ಟು ಸೇರಿಸಿ ಹಣ ಸಂಗ್ರಹಿಸಿ ಜಾಗ ಖರೀದಿಸಿ ಒಂದು ದೇವಸ್ಥಾನ ಮತ್ತು ಅಧ್ಯಾತ್ಮ ಕೇಂದ್ರ ಸ್ಥಾಪಿಸುವ ಯೋಜನೆ. ಹಾಗೆ ಆರಂಭವಾದದ್ದೇ ಎಚ್‌ಎಸ್‌ಎನ್‌ಸಿ (ಹಿಂದೂ ಸೊಸೈಟಿ ಆಫ್ ನಾರ್ತ್ ಕೆರೊಲಿನಾ). ಸರೋಜ್ ಶರ್ಮ ಹತ್ತಾರು ಬಾರಿ ಅದರ ಅಧ್ಯಕ್ಷತೆ ಜವಾಬ್ದಾರಿ ವಹಿಸಿದ್ದಾರೆ.
1980ರಲ್ಲಿ ಜಾಗವನ್ನು ಖರೀದಿಸಿದಾಗ ಆಗಿನ್ನೂ ಅದೊಂದು ಕಾಡೇ ಆಗಿತ್ತು. ಅಲ್ಲಿ ದೇವಸ್ಥಾನ ಕಟ್ಟಲಿಕ್ಕೆ ನಿಮಗೇನು ಹುಚ್ಚೇ ಎಂದು ಹುಬ್ಬೇರಿಸಿದವರೂ ಇದ್ದರಂತೆ. ಧೃತಿಗೆಡದ ಸರೋಜ್ ಶರ್ಮ ತಮ್ಮ ಯೋಜನೆ ಮುಂದುವರಿಸಿದರು. 1986ರಲ್ಲಿ ಆರು ಎಕ್ರೆ ಜಾಗದಲ್ಲಿ ಪುಟ್ಟದೊಂದು ದೇಗುಲ ನಿರ್ಮಾಣವಾಯಿತು.
ಬಂದ ಭಕ್ತರಿಗೆ ಹಂಚಲಿಕ್ಕೆ ಪ್ರಸಾದ ತಯಾರಿ ಸರೋಜ್‌ರಿಂದಲೇ, ಆಗಲೂ ಈಗಲೂ. 1999ರಲ್ಲಿ ಇನ್ನೊಂದು ಕನಸು ನನಸಾಯಿತು. ದೇಗುಲದ ಪಕ್ಕದಲ್ಲೇ ಹಿಂದೂಭವನ ಎಂಬ ಭವ್ಯ ಸಭಾಂಗಣ ತಲೆಯೆತ್ತಿತು. 1500 ಆಸನವ್ಯವಸ್ಥೆಯ ದೊಡ್ಡ ಹಾಲ್, ಸುತ್ತ ಮುತ್ತ ತರಗತಿಗಳನ್ನು ನಡೆಸಲಿಕ್ಕೆ ಕೊಠಡಿಗಳು, ಮಕ್ಕಳಿಗೆ ಆಡಲಿಕ್ಕೊಂದು ಪಾರ್ಕ್. ಧಾರ್ಮಿಕ ಪ್ರವಚನಗಳು, ಸಂಗೀತ-ನೃತ್ಯ ಕಾರ್ಯಕ್ರಮಗಳು, ಮದುವೆ-ಮುಂಜಿಯೇ ಮೊದಲಾದ ಸಮಾರಂಭಗಳಿಗೂ ಪ್ರಶಸ್ತ ಸ್ಥಳ.
ಭಾರತ ಮತ್ತು ನೇಪಾಳ ಮೂಲದ ಸರಿಸುಮಾರು 60,000 ಜನರಿಗೆ ಅದೀಗ ಸಮುದಾಯ ಕೇಂದ್ರ. ಹಿಂದೆ ಕಾಡಾಗಿದ್ದ ಪ್ರದೇಶ ಈಗ ಮೊರ್ರಿಸ್‌ವಿಲ್ ಎಂಬ ಪಟ್ಟಣ! ಅಲ್ಲಿಯ ಜನಸಂಖ್ಯೆ ಮತ್ತು ಮನೆಗಳ ಸಂಖ್ಯೆಯಲ್ಲಿ ಅರ್ಧದಷ್ಟು ಭಾರತೀಯರೇ. ತಾಯ್ನಾಡಿಂದ ದೂರವಿದ್ದೇವೆಂಬ ಭಾವನೆಯೇ ಬಾರದಂಥ ಪರಿಸರ ಮತ್ತು ಸೌಕರ್ಯಗಳು. ಇದೆಲ್ಲ ಸಾಧ್ಯವಾದದ್ದು ಸರೋಜ್ ಶರ್ಮರ ದೂರದರ್ಶಿತ್ವದಿಂದ.
ಸರೋಜ್ ಶರ್ಮರ ದೃಷ್ಟಿಯಲ್ಲಿ ದೇವಸ್ಥಾನವೆಂದರೆ ಕಟ್ಟಾ ಸಂಪ್ರದಾಯಗಳ, ತೀರ ಮಡಿವಂತಿಕೆಯ ಸ್ಥಳ ಎನಿಸಬೇಕಿಲ್ಲ. ನವಪೀಳಿಗೆಗೆ, ಚಿಕ್ಕ ಮಕ್ಕಳಿಗೂ ಅದರಲ್ಲಿ ಆಕರ್ಷಣೆ ಬರಬೇಕು. ಅಲ್ಲಿ ಅವರು ಭಾರತೀಯ ಸಂಸ್ಕೃತಿಯ ಬಗೆಗೆ ತಿಳಿದುಕೊಳ್ಳಬೇಕು. ಚಟುವಟಿಕೆಗಳಲ್ಲಿ ಭಾಗವಹಿಸಬೇಕು, ತನ್ಮೂಲಕ ಅವರ ವ್ಯಕ್ತಿತ್ವ ವಿಕಸನ ಆಗಬೇಕು. ಈ ನಿಟ್ಟಿನಲ್ಲಿ ಮಕ್ಕಳಿಗೆಂದೇ ಭಗವದ್ಗೀತೆ, ಯೋಗ, ಸಂಸ್ಕೃತ, ಹಿಂದಿ ಮತ್ತಿತರ ಭಾರತೀಯ ಭಾಷೆಗಳ ಕಲಿಕೆ, ಆಟೋಟಗಳು, ಬೇಸಗೆ ಶಿಬಿರಗಳು, ಶಿಕ್ಷಣಮಾರ್ಗದರ್ಶನ ಎಲ್ಲವನ್ನೂ ಸೇರಿಸಿದರು.
ಅಲ್ಲಿ ತರಬೇತಿ ಪಡೆದ ಅನೇಕ ಮಕ್ಕಳೀಗ ದೊಡ್ಡವರಾಗಿ ಎಂಬಿಎ, ವೈದ್ಯಕೀಯ, ವಕೀಲ ವೃತ್ತಿಗಳಲ್ಲೆಲ್ಲ ಯಶಸ್ಸು ಪಡೆಯುತ್ತಿದ್ದಾರೆ. ಅದೆಷ್ಟೋ ಕಾಲೇಜು ವಿದ್ಯಾರ್ಥಿಗಳಿಗೆ, ಅವರ ಹೆತ್ತವರಿಗೆ, ಸಂಸಾರದ ತಿಕ್ಕಾಟದಲ್ಲಿ ಜರ್ಜರಿತ ದಂಪತಿಗಳಿಗೆ ಖುದ್ದಾಗಿ ಸರೋಜ್ ಶರ್ಮ ರೇ ಕೌನ್ಸೆಲಿಂಗ್ ನಡೆಸಿದ್ದಿದೆ; ಸಂಕಷ್ಟಗಳಿಂದ ಪಾರು ಮಾಡಿದ್ದಿದೆ.
ಅವರಿಗೆಲ್ಲ ನೆಚ್ಚಿನ ‘ಶರ್ಮಾ ಆಂಟಿ’ ಆಗಿದ್ದಾರೆ. ಹಿರಿಯರಿಗೆ, ವಯೋವೃದ್ಧರಿಗೆ ಗೀತಾರ್ಥ ಚಿಂತನೆ, ಹನೂಮಾನ್ ಚಾಲೀಸಾ, ಸುಂದರಕಾಂಡ ಪಠನ, ಅಧ್ಯಾತ್ಮ ಉಪನ್ಯಾಸಗಳು ಇತ್ಯಾದಿ. ಹಿಂದಿ ವಿಕಾಸ ಮಂಡಲ ಸ್ಥಾಪಿಸಿ ಕವಿ ಸಮ್ಮೇಳನ, ರಾಮಾಯಣ ಗೀತನೃತ್ಯ ಮತ್ತಿತರ ಲಲಿತಕಲೆಗಳ ಪೋಷಣೆ. ಭಾರತ ಸ್ವಾತಂತ್ರ್ಯ ದಿನಾಚರಣೆ, ಬಹುರಾಷ್ಟ್ರೀಯ ಮೇಳಗಳ ಆಯೋಜನೆ. ಆಹಾರ, ಉಡುಪು, ಕಲೆ, ಸಂಸ್ಕೃತಿಗಳ ಪರಸ್ಪರ ಪರಿಚಯ ಮತ್ತು ವಿನಿಮಯಕ್ಕೆ ವ್ಯವಸ್ಥೆ. ಇದೆಲ್ಲದಕ್ಕೂ ಪತಿ ಗಂಗಾಧರ ಶರ್ಮರ ನಿರಂತರ ಬೆಂಬಲ.
ಹಾಗಂತ, ಭಾರತೀಯರಿಗಷ್ಟೇ ಪ್ರಯೋಜನವಾಗಬೇಕೆಂಬ ಸಂಕುಚಿತತೆ ಸರೋಜ್ ಶರ್ಮರದಲ್ಲ. ಆರೋಗ್ಯ ಕ್ಷೇತ್ರದಲ್ಲಿ ಅವರ ಸಮಾಜಸೇವೆ ಎಲ್ಲರನ್ನೂ- ಸ್ಥಳೀಯ ಅಮೆರಿಕನ್ನರನ್ನೂ ಸೇರಿಸಿಕೊಳ್ಳುತ್ತದೆ. ತಜ್ಞ ವೈದ್ಯರನ್ನು ಕರೆಸಿ ಉಚಿತ ಆರೋಗ್ಯ ತಪಾಸಣೆ, ಮಹಿಳೆಯರ ಆರೋಗ್ಯ, ಮಾನಸಿಕ ಆರೋಗ್ಯದ ಬಗ್ಗೆಯೆಲ್ಲ ವಿಶೇಷ ಕಾಳಜಿ. ಆರೋಗ್ಯವಿಮೆ ಇಲ್ಲದವರಿಗೂ ಸೌಲಭ್ಯಗಳ ವಿಸ್ತರಣೆ.
ಕೋವಿಡ್ ಸಮಯದಲ್ಲಂತೂ ಆಹಾರ ಸರಬರಾಜು ವ್ಯವಸ್ಥೆಯನ್ನು ಅಗಾಧ ಪ್ರಮಾಣ ದಲ್ಲಿ ಸಂಯೋಜಿಸಿ ಒಂದು ಲಕ್ಷಕ್ಕೂ ಹೆಚ್ಚು ಆಹಾರ ಪೊಟ್ಟಣಗಳನ್ನು ಶಾಲಾ ಮಕ್ಕಳಿಗೆ, ಅನಾಥಾಶ್ರಮಗಳಿಗೆ, ಕಷ್ಟದಲ್ಲಿದ್ದ ಕುಟುಂಬಗಳಿಗೆ ಒದಗಿಸಿದ್ದಾರೆ. ಇದಕ್ಕೆಲ್ಲ ಬೇರೆಯವರ ನೆರವೂ ಬೇಕು ನಿಜ, ಆದರೆ ಶರ್ಮಾ ಆಂಟಿ ಕೇಳಿದರೆಂದರೆ ಆಯ್ತು, ‘ಒಲ್ಲೆ’ ಎನ್ನುವವ ರಿಲ್ಲ.
ಅಂಥದೊಂದು ಋಣ-ವಾತ್ಸಲ್ಯಗಳ ಬೆಸುಗೆ. ಅಪಘಾತಗಳಾದಾಗ, ದುರ್ಮರಣಗಳಾದಾಗ, ಹಠಾತ್ತನೆ ಸಂಕಷ್ಟಗಳು ಎದುರಾದಾಗ ಎಲ್ಲರಿಗೂ ತತ್‌ಕ್ಷಣ ನೆನಪಾಗುವ ಆಸರೆ ಅಭಯ ಹಸ್ತವೆಂದರೆ ಶರ್ಮಾ ಆಂಟಿ. ಇದೆಲ್ಲವನ್ನೂ ಗುರುತಿಸಿ ಸರೋಜ್ ಶರ್ಮರನ್ನು ಅನೇಕ ಸಂಘಸಂಸ್ಥೆಗಳು, ಸರಕಾರಗಳು ಗೌರವಿಸಿ ಪುರಸ್ಕರಿಸಿವೆ. ನಾರ್ತ್ ಕೆರೊಲಿನಾ ಸಂಸ್ಥಾನದ ಅತ್ಯುನ್ನತ ಪೌರಸಮ್ಮಾನ ಎನಿಸಿರುವ ‘ದಿ ಆರ್ಡರ್ ಆಫ್ ದ ಲಾಂಗ್ ಲೀಫ್ ಪೈನ್’ ಪುರಸ್ಕಾರ ಪಡೆದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ.
ಮೊರ್ರಿಸ್‌ವಿಲ್ ಪುರಸಭೆಯಿಂದ ಅತ್ಯುತ್ತಮ ನಾಯಕತ್ವ ಗುಣವನ್ನು ಗುರುತಿಸಿ ಪ್ರಶಸ್ತಿ. ಸಮುದಾಯ ಸೇವೆಗೆಂದು ಶ್ರೀ ರವಿಶಂಕರ್ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ಗೌರವ. ವಿಶ್ವ ಹಿಂದೂ ಪರಿಷತ್‌ನ ಅಮೆರಿಕ ಶಾಖೆಯಿಂದ ಹಿಂದೂ ಸಂಸ್ಕೃತಿ ಪ್ರಸರಣದಲ್ಲಿ ಜೀವಮಾನ ಸಾಧನೆಗಾಗಿ ಪ್ರಶಸ್ತಿ.
ಇಷ್ಟೇ ಅಲ್ಲದೆ ಇನ್ನೂ ಹಲವಾರು ನಾಗರಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಸಂಘಟನೆಗಳಿಂದ ಸನ್ಮಾನ ಪುರಸ್ಕಾರಗಳು ಬಂದಿವೆ. ಆದರೆ ಇವ್ಯಾವುದನ್ನೂ ಸರೋಜ್ ಶರ್ಮ ತಲೆಗೇರಿಸಿ ಕೊಂಡಿಲ್ಲ. ‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಎಂಬಂತೆ ತಮಗೇನು ಸಿಕ್ಕಿದರೂ ಅದನ್ನು ದೇವಸ್ಥಾನಕ್ಕೆ, ಸಮುದಾಯಕ್ಕೆ ಅರ್ಪಿಸಿ ಬಿಡುತ್ತಾರೆ.
ತಾವು ಮಾತ್ರ ದೇವಸ್ಥಾನದಲ್ಲಿ ಪ್ರಸಾದ ತಯಾರಿ, ವಿತರಣೆ ಮತ್ತಿತರ ನಿತ್ಯ ನೈಮಿತ್ತಿಕ ಗಳಲ್ಲೇ ಮುಳುಗುತ್ತಾರೆ. ಮಕ್ಕಳನ್ನು, ಯುವಕರನ್ನು ಉತ್ತೇಜಿಸುತ್ತಾರೆ. ಸತ್ಸಂಗದಲ್ಲಿ ಪಾಲ್ಗೊಳ್ಳುವಂತೆ ಮಾಡುತ್ತಾರೆ. ದೇವಸ್ಥಾನಕ್ಕೆ ಅನತಿದೂರದಲ್ಲೇ ಅವರ ಮನೆ. 90 ದಾಟಿದ ಈ ವಯಸ್ಸಲ್ಲೂ ತಾವೇ ಕಾರು ಚಲಾಯಿಸುತ್ತಾರೆ.
ಅವರಿಗೆಂದೇ ಒಂದು ಪಾರ್ಕಿಂಗ್ ಸ್ಪಾಟ್ ನಿಗದಿಯಾಗಿದೆ. 100 ದಾಟಿರುವ ಪತಿ ಗಂಗಾಧರ ಶರ್ಮರನ್ನು ನೋಡಿಕೊಳ್ಳಲಿಕ್ಕೆ ಒಬ್ಬ ಸಹಾಯಕರನ್ನಿಟ್ಟುಕೊಂಡಿದ್ದಾರೆ. ಶರ್ಮ ದಂಪತಿಗೆ ಐವರು ಮಕ್ಕಳು, ಒಂಬತ್ತು ಮೊಮ್ಮಕ್ಕಳು, ಎಂಟು ಮರಿಮಕ್ಕಳು. ಅವರೆಲ್ಲ ಅಮೆರಿಕದ ಬೇರೆಬೇರೆ ಕಡೆ ಪಸರಿಸಿದ್ದಾರೆ. ಹಬ್ಬ-ಹರಿದಿನಗಳಂದು ಸಾಧ್ಯವಿದ್ದಷ್ಟೂ ಮಟ್ಟಿಗೆ ಎಲ್ಲರೂ ಒಟ್ಟುಸೇರುತ್ತಾರೆ. ಸರೋಜ್ ಶರ್ಮರ ನಿಜಸಾಧನೆ ಇರುವುದು ತಮ್ಮ ಕುಟುಂಬವನ್ನು ಶ್ರೀಮಂತವಾಗಿ ವಿಸ್ತರಿಸಿದ್ದರಲ್ಲಲ್ಲ.
ಸಂಘಸಂಸ್ಥೆಗಳನ್ನು ಆರಂಭಿಸಿ ಸೌಧಗಳನ್ನು ನಿರ್ಮಿಸಿದ್ದರಲ್ಲಲ್ಲ. ಬದಲಿಗೆ ಶ್ರದ್ಧೆ, ನಂಬಿಕೆ, ಶಾಂತಿ, ಅಹಿಂಸೆ, ಸಹಾನುಭೂತಿ, ಸಂಸ್ಕೃತಿಯಲ್ಲಿ ಗೌರವ ಇವೇ ಮುಂತಾದ ಅಮೂರ್ತ ಮೌಲ್ಯಗಳನ್ನು ಎರಕ ಹೊಯ್ದು ಪೋಷಿಸಿ ದೊಡ್ಡದೊಂದು ಸಮುದಾಯವನ್ನು ಬೆಳೆಸಿದ್ದರಲ್ಲಿ. ಅಂಥ ಅರ್ಥಪೂರ್ಣ ಬದುಕನ್ನು ಗುರಿಯಾಗಿಟ್ಟುಕೊಳ್ಳುವವರಿದ್ದರೆ ಸರೋಜ್ ಶರ್ಮ ಅವರಿಗೆಲ್ಲ ಒಂದು ದಾರಿದೀವಿಗೆ, ಸ್ಪೂರ್ತಿಯ ಸೆಲೆ.
ಇಂತಿರುವ ಸರೋಜ್ ಶರ್ಮ, ನಾರ್ತ್ ಕೆರೊಲಿನಾದಲ್ಲಿ ಮೊರ್ರಿಸ್‌ವಿಲ್ ಪಟ್ಟಣದ ಪಕ್ಕದಲ್ಲೇ ಕೇರಿ ಎಂಬಲ್ಲಿ ವಾಸವಾಗಿರುವ ಅಮೆರಿಕನ್ನಡಿತಿ ಸವಿತಾ ರವಿಶಂಕರ್ ಅವರಿಗೂ ನೆಚ್ಚಿನ ‘ಶರ್ಮಾ ಆಂಟಿ’. ದೇವಸ್ಥಾನದಲ್ಲಿ ಹಬ್ಬ-ಉತ್ಸವಗಳ ವೇಳೆ ಸಿಂಗಾರದ ಕೆಲಸವನ್ನು ಸೇವೆಯೆಂಬಂತೆ ಮಾಡುವವರು ಸವಿತಾ.
ಹಾಗಾಗಿ ಮತ್ತಷ್ಟು ಒಡನಾಟ, ಆತ್ಮೀಯತೆ. ಯೋಗ ಯುನಿವರ್ಸಿಟಿ ಆಫ್ ಅಮೆರಿಕ ಜತೆ ಮಾತನಾಡಿ, ಅದರ ಭಾರತ/ಬೆಂಗಳೂರು ಶಾಖೆಯ ಉಪಕುಲಪತಿ ಡಾ.ಅರಳುಮಲ್ಲಿಗೆ ಪಾರ್ಥಸಾರಥಿಯವರ ಅನುಮತಿಯನ್ನೂ ಪಡೆದು, ಶರ್ಮಾ ಆಂಟಿಗೆ ಗೌರವ ಡಾಕ್ಟರೇಟ್ ಪುರಸ್ಕಾರ ಸಲ್ಲುವುದಕ್ಕೆ ಬೇಕಾದ ದಾಖಲೆಗಳನ್ನು ಕ್ರೋಡೀಕರಿಸಿ ಅರ್ಜಿ ಸಲ್ಲಿಸಿದ್ದು ಸವಿತಾ ಅವರೇ.
ಮೊನ್ನೆ ನವೆಂಬರ್ 2ರಂದು ಕೌಲಾಲಂಪುರದಲ್ಲಿ ಪದವಿಪ್ರದಾನ ಆದಾಗ ಅಲ್ಲಿಂದ ಪ್ರಮಾಣಪತ್ರ ತರಿಸಿ ಶರ್ಮಾ ಆಂಟಿಗೆ ತಲುಪುವಂತೆ ಮಾಡಿದ್ದೂ ಅವರೇ. ಆವತ್ತೇ ವಾಟ್ಸ್ಯಾಪ್ʼನಲ್ಲಿ ಕರೆಮಾಡಿ “ನಿಮಗೊಬ್ಬರು ಅದ್ಭುತ ವ್ಯಕ್ತಿತ್ವದ ಪರಿಚಯವಾಗುತ್ತದೆ.
ಡಿಸೆಂಬರ್ 21ಕ್ಕೆ ಮೊರ್ರಿಸ್‌ವಿಲ್‌ಗೆ ಬನ್ನಿ!" ಎಂದು ನನ್ನನ್ನು ಆಹ್ವಾನಿಸಿದವರೂ ಅವರೇ. ನಾನಿರುವಲ್ಲಿಂದ ಐದು ಗಂಟೆ ಕಾರ್ ಡ್ರೈವಿಂಗ್‌ನಷ್ಟು ದೂರ. ಯಾರು ಹೋಗುತ್ತಾರೆ ಈ ಚಳಿಯಲ್ಲಿ ಅಂತ ಆಲಸ್ಯ ತೋರಬಹುದಿತ್ತು. ಪುಣ್ಯಕ್ಕೆ ಹಾಗೆ ಮಾಡಲಿಲ್ಲ. ಹನ್ನೆರಡು ಗಂಟೆ ಡ್ರೈವ್ ಮಾಡಿಕೊಂಡು ಫ್ಲೋರಿಡಾದಿಂದ ಯೋಗ ಯುನಿವರ್ಸಿಟಿಯ ಅಧ್ಯಕ್ಷ ಡಾ. ಮನೋಹರನ್ ಮತ್ತವರ ಪತ್ನಿ ಜಯಶ್ರೀ ಬಂದಿದ್ದರು.
ಸಾಂಕೇತಿಕವಾಗಿ ಅಲ್ಲಿಯೂ ಪದವಿಪ್ರಮಾಣ ಪತ್ರ ಕೊಟ್ಟು “ಸರೋಜ್ ಶರ್ಮ ಇನ್ನು ಮುಂದೆ ಡಾಕ್ಟರ್ ಸರೋಜ್ ಶರ್ಮ!" ಎಂದು ಘೋಷಿಸಿದರು. ನಾರ್ತ್ ಕೆರೊಲಿನಾದ ಒಬ್ಬಿಬ್ಬರು ಶಾಸಕರು, ಮೊರ್ರಿಸ್‌ವಿಲ್ ಪಟ್ಟಣದ ಮೇಯರ್ ಮತ್ತಿತರ ಗಣ್ಯರೂ ಉಪಸ್ಥಿತ ರಿದ್ದರು. ಮುಕ್ತಕಂಠದಿಂದ ಮಾತನಾಡಿದರು.
ಎಚ್ಎಸ್‌ಎನ್‌ಸಿ ಮತ್ತು ಹಿಂದಿ ವಿಕಾಸಮಂಡಲ ಜಂಟಿಯಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದು ಸರೋಜ್‌ಶರ್ಮರ ಕುಟುಂಬಸ್ಥರೂ ಇದ್ದರು. ಅಭಿಮಾನಿಗಳೂ ಫಲಾನು ಭವಿಗಳೂ ಸೇರಿದ್ದರು.
ವೇದಿಕೆಯಲ್ಲಿ ಚಿಕ್ಕಚೊಕ್ಕ ಭಾಷಣಗಳೆಲ್ಲ ಅರ್ಥಗರ್ಭಿತವಾಗಿ ಭಾವಪೂರ್ಣವಾಗಿ ಇದ್ದುವು. ಗಾಲಿ ಕುರ್ಚಿಯಲ್ಲಿ ಕುಳಿತುಕೊಂಡೇ ಡಾ. ಗಂಗಾಧರ ಶರ್ಮ ಸಹ ಬಂದಿದ್ದರು; ಸಂದರ್ಭೋಚಿತ ಮಾತನಾಡಿದರು. ಒಂದು ಅತ್ಯಂತ ಹೃದಯಸ್ಪರ್ಶಿ ಸಮಾರಂಭದಲ್ಲಿ ಪಾಲ್ಗೊಂಡ ಸೌಭಾಗ್ಯ ಮತ್ತು ಧನ್ಯತೆ ನನ್ನದಾಯಿತು.
ಆವತ್ತು ನಾನು ಸವಿತಾ ರವಿಶಂಕರ್ ಅವರ ಮನೆಯಲ್ಲೇ ಉಳಕೊಂಡಿದ್ದೆನಾದ್ದರಿಂದ ‘ಶರ್ಮಾ ಆಂಟಿ’ಯ ನಿಗರ್ವ, ನಿಸ್ಪೃಹತೆಗಳ ಬಗೆಗೆ ಮತ್ತಷ್ಟು ತಿಳಿಯುವಂತಾಯ್ತು. ಅದರಲ್ಲೊಂದು ಅಂಶ, ದೇವರು ಒಳ್ಳೆಯವರನ್ನೇ ಮತ್ತಷ್ಟು ಕಠಿನ ಸನ್ನಿವೇಶಗಳಿಗೊಡ್ಡಿ ಪರೀಕ್ಷಿಸುತ್ತಾನೆಂಬುದಕ್ಕೆ ಪುರಾವೆಯಂಥದು. 2019ರಲ್ಲಿ, ಕೋವಿಡ್‌ಗಿಂತ ಸ್ವಲ್ಪ ಮೊದಲು, ಸರೋಜ್ ಶರ್ಮರ ಒಬ್ಬ ಮಗ ಯಾವುದೋ ಕೆಲಸದ ನಿಮಿತ್ತ ಮೆಕ್ಸಿಕೋಗೆ ಹೋಗಿದ್ದರಂತೆ.
ಆಹಾರದಲ್ಲಿ ವಿಷಾಂಶ ಬೆರಕೆಯಾಗಿ(ಫುಡ್ ಪಾಯ್ಸನಿಂಗ್) ತೀವ್ರ ಅಸ್ವಸ್ಥಗೊಂಡು ರಾತ್ರಿ ಬೆಳಗಾಗುವುದರೊಳಗೆ ಅಸುನೀಗಿದರು. ಸಿಡಿಲಿನಂತೆ ಬಂದೆರಗಿತು ಸುದ್ದಿ. ಇತ್ತ ಮರು ದಿನವೇ ಮೊಮ್ಮಗನ ಗ್ರಾಜ್ಯುವೇಷನ್ ಸಮಾರಂಭ. ಸಂಭ್ರಮಾಚರಣೆ ಹೋಗಿ ಶೋಕಾ ಚರಣೆಯಾಯ್ತು. ಮೆಕ್ಸಿಕೋ ದೇಶದ ನಿಯಮದಂತೆ ಮೃತ ಶರೀರವನ್ನು ತರಬೇಕಿದ್ದರೆ ಪತ್ನಿಯೇ ಹೋಗಬೇಕು, ಅದೂ ಮ್ಯಾರೇಜ್ ಸರ್ಟಿಫಿಕೇಟ್ ಮತ್ತಿತರ ದಾಖಲೆಗಳೊಂದಿಗೆ. ತುಂಬ ಕಷ್ಟದ ಅನುಭವ. ಸವಿತಾ ಆವತ್ತೇ ಸಂಜೆ ಮೈಸೂರಿಗೆ ಹೊರಡುವವರಿದ್ದರು. ಆದರೂ ಒಮ್ಮೆ ಶರ್ಮಾ ಆಂಟಿಯ ಮನೆವರೆಗೆ ಹೋಗಿ ಬರುತ್ತೇನೆ, ಒಳಗೆ ಹೋಗಿ ಮಾತನಾಡಿಸಲಿಕ್ಕಾಗದಿದ್ದರೆ ಸುಮ್ಮನೆ ಹೊರಗೆ ಕಾರಲ್ಲೇ ಸ್ವಲ್ಪ ಹೊತ್ತು ಕುಳಿತು ಪ್ರಾರ್ಥಿಸಿ ಬರುತ್ತೇನೆ ಎಂದುಕೊಂಡರಂತೆ. ಹಾಗೆ ಹೋದಾಗ ಶರ್ಮಾ ಆಂಟಿಗೆ ಗೊತ್ತಾಗಿ ಒಳಕರೆದ ರಂತೆ.
ಪತಿ ಗಂಗಾಧರ ಶರ್ಮ ಪುತ್ರಶೋಕದಿಂದ ಅದಾಗಲೇ ತಲ್ಲಣಗೊಂಡಿದ್ದರು, ಕುಸಿದಿದ್ದರು. ಬೇರೆಲ್ಲರೂ ಕಣ್ಣೀರುಗರೆಯುತ್ತಿದ್ದರು. ಶರ್ಮಾ ಆಂಟಿ ಮಾತ್ರ ದಿಟ್ಟತನದಿಂದ ಮಾತನಾಡಿ ದರು. “ನಾನೇ ಕುಸಿದರೆ ನನ್ನ ಪ್ರೀತಿಯ ಸಮುದಾಯಕ್ಕೆಲ್ಲ ಆಘಾತವಾಗುತ್ತದೆ. ಈ ಗಳಿಗೆ ಯಲ್ಲಿ ನಾನು ಧೈರ್ಯದಿಂದಿರಬೇಕು. ಎಲ್ಲ ದೈವೇಚ್ಛೆ.
ನಾವೇನೂ ಮಾಡಲಿಕ್ಕಾಗದು" ಎಂದಷ್ಟೇ ಹೇಳಿದರು. ಇದನ್ನು ವಿವರಿಸುವಾಗ ಸವಿತಾ ಗದ್ಗದಿತರಾಗಿದ್ದರು. ಕೇಳುತ್ತಿದ್ದ ನನ್ನ ಮನದಲ್ಲಿ “ಸಂಗಂ ತ್ಯಕ್ತ್ವಾ ಫಲಂ ಚೈವ ಸ ತ್ಯಾಗಃ ಸಾತ್ತ್ವಿಕೋ ಮತಃ..." ಮೊಳಗುತ್ತಿತ್ತು. ಗೀತೆಯ ನುಡಿಗಳನ್ನು ಶರ್ಮಾ ಆಂಟಿ ಅದೆಷ್ಟು ಸಾವಿರಗಟ್ಟಲೆ ಜನರಿಗೆ ಕಲಿಸಿದ್ದಾರೋ, ನುಡಿಯಷ್ಟೇ ಅಲ್ಲ ಅದರಂತೆಯೇ ನಡೆಯುವು ದನ್ನೂ ಸ್ವತಃ ನಡತೆಯಿಂದ ಕಲಿಸಿದರು!