Naveen Sagar Column: ಪ್ಲೀಸ್ ಗೆಟ್ ವೆಲ್ ಸೂನ್ ರೆಹಮಾನ್
ರೆಹಮಾನ್ ಮತ್ತೊಂದು ಹಿಟ್ ಆಲ್ಬಮ್ ಕೊಡದಿದ್ದರೂ ನಮಗ್ಯಾರಿಗೂ ಆತನ ಮೇಲೆ ಗೌರವ, ಪ್ರೀತಿ ಕಡಿಮೆ ಆಗುತ್ತಿರಲಿಲ್ಲ. ಯಾಕಂದರೆ ಆತ ಇದುವರೆಗೆ ಕೊಟ್ಟ ನೂರಾರು ಹಾಡುಗಳ ಋಣ ನಮ್ಮ ಮೇಲಿದೆ. ಆದರೆ ಇಂಥ ಮಾತು ಗಳಿಂದ ಆತ ತನ್ನ ವ್ಯಕ್ತಿತ್ವ ಹಾಳುಮಾಡಿಕೊಂಡರೆ ಆತನ ಹಾಡುಗಳನ್ನು ಕೇಳುವಾಗಲೂ ಇವೆಲ್ಲ ನೆನಪಾಗಿ ಕಿರಿಕಿರಿ ಅನಿಸುತ್ತದೆ. ಪ್ಲೀಸ್ ಗೆಟ್ ವೆಲ್ ಸೂನ್ ರೆಹಮಾನ್...
-
ಪದಸಾಗರ
ಈಗೊಂದು ತಿಂಗಳ ಹಿಂದೆ ರೆಹಮಾನ್ ಸಂಗೀತದ ಹಾಡುಗಳ ಪ್ಲೇಲಿಸ್ಟ್ ರೆಡಿ ಮಾಡಿಕೊಳ್ಳುತ್ತಿದ್ದೆ. ರೋಜಾದಿಂದ ಶುರುವಾಗಿ ಹಾಡುಗಳನ್ನು ಪಟ್ಟಿಗೆ ಸೇರಿಸುತ್ತಾ ಹೊರಟು ವಿನ್ನೆ ತಾಂಡಿ ವರುವಾಯವರೆಗೆ ಬರುವ ಹೊತ್ತಿಗೆ ರೆಹಮಾನ್ ಹಾಡುಗಳು ಮುಗಿದೇ ಹೋದವು ಅನಿಸಿದವು. ರೋಜಾ, ಬಾಂಬೆ, ತಿರುಡಾ ತಿರುಡಾ, ರಂಗೀಲಾ, ಕಾದಲ್ ದೇಸಂ, ಬಾಯ್ಸ್, ದೌಡ್, ಮಿನ್ಸಾರ ಕನವು, ಡ್ಯುಯೆಟ್, ಜಂಟಲ್ಮನ್, ಕಾದಲನ್, ದಿಲ್ ಸೆ, ತಾಲ್, ಇಂಡಿಯನ್, ಮುದಲ್ವನ್, ಲಗಾನ್.. ಹೀಗೆ ಮೊದಲ ಎರಡು ದಶಕಗಳ ರೆಹಮಾನ್ ಸಂಗೀತದ ಆಲ್ಬಮ್‌ಗಳಲ್ಲಿ, ಯಾವ ಗೀತೆಯನ್ನೂ ಬಿಡುವಂತೆಯೇ ಇಲ್ಲ.
ಇಡೀ ಆಲ್ಬಮ್ಮಿಗೆ ಆಲ್ಬಮ್ಮೇ ಪ್ಲೇಲಿಸ್ಟಿಗೆ ಸೇರುವಂಥದ್ದು. ಆದರೆ ಬರುಬರುತ್ತಾ, ಇಡೀ ಚಿತ್ರದಲ್ಲಿ ಒಂದು ಹಾಡು ಮಾತ್ರ ನೆನಪಲ್ಲುಳಿಯುವ, ಗುನುಗುವ, ಕುಣಿಯುವ ಹಾಡು.. ಮಿಕ್ಕಿದ್ದೆಲ್ಲ ಜೊಳ್ಳು ಎಂಬಂತಾದವು.
2010ರ ನಂತರ ರೆಹಮಾನ್ ಮ್ಯಾಜಿಕ್ ಚೂರುಚೂರೇ ಮಾಸುತ್ತಾ ಬಂದು, ಇಂದಿಗೆ ರೆಹಮಾನ್ ಸಂಗೀತ ಎಂಬುದು ಯಾವ ರೋಮಾಂಚನವನ್ನೂ ಹುಟ್ಟಿಸದಷ್ಟು ಪೇಲವವಾಗಿ ಹೋಗಿದೆ. ಸಂಗೀತದಿಂದಲೇ ಸಿನಿಮಾವನ್ನು ಗೆಲ್ಲಿಸುವ ತಾಕತ್ ಹೊಂದಿದ್ದ ರೆಹಮಾನ್ ಈಗ ಮುಗಿದ ಅಧ್ಯಾಯ ಎಂಬಂತಾಗಿದ್ದಾನೆ. ಈ ಕಾಲಘಟ್ಟದಲ್ಲಿ ರೆಹಮಾನ್ ಬಾಯಿಂದ ಬರಬಾರದ ಮಾತೊಂದು ಬಂದಿದೆ. ವಿವಾದಕ್ಕೂ ಕಾರಣವಾಗಿದೆ.
ಆನಂತರ ರೆಹಮಾನ್ ತಾನು ಆಡಿದ ಮಾತಿಗೆ ತೇಪೆ ಹಚ್ಚುವ ಪ್ರಯತ್ನ ಮಾಡಿದ್ದಾನಾದರೂ ಕೆಲವು ಗಾಯಗಳು ಅಷ್ಟು ಸುಲಭವಾಗಿ ಮಾಯುವುದಿಲ್ಲ. ಅದು ಮಾಡಬೇಕಿರೋ ಡ್ಯಾಮೇಜ್ ಮಾಡಿಯೇ ತೀರುತ್ತದೆ.
ಇದನ್ನೂ ಓದಿ: Naveen Sagar Column: ಗಾರ್ಡನ್ ಸಿಟಿಯಲ್ಲ, ಸಿಲಿಕಾನ್ ಸಿಟಿಯೂ ಅಲ್ಲ.. ಕ್ರೈಂ ಸಿಟಿ !
ರೆಹಮಾನ್ ಇಂಥ ಬರಹಗಳಲ್ಲಿ ಬರಕೂಡದು. ಆತನ ಹಾಡುಗಳ ಬಗ್ಗೆ ಮಾತ್ರವೇ ನಮ್ಮ ಬರಹಗಳಿರಬೇಕು. ಆದರೆ ಹಂಸಲೇಖ, ಪ್ರಕಾಶ್ ರೈ, ರೆಹಮಾನ್ ಥರದವರು ಅದ್ಯಾಕೆ ನಮಗೆ ಈ ಥರದ ವಿಷಯಗಳಿಗೆ ಆಹಾರವಾಗುತ್ತಾರೋ. ನಿಜಕ್ಕೂ ಬೇಸರವಾಗುತ್ತದೆ.
ರೆಹಮಾನ್ ಬಗ್ಗೆ ಕನ್ನಡಿಗರಿಗೆ ವಿಶೇಷ ಅಭಿಮಾನ. ಕಾರಣ ಆತನ ಜರ್ನಿ ಶುರುವಾಗಿದ್ದು ಕನ್ನಡ ಚಿತ್ರದಿಂದ ಅಂತ. ರೋಜಾ ನಂತರ ರೆಹಮಾನ್ ಏಕಾಏಕಿ ಸ್ಟಾರ್ ವ್ಯಾಲ್ಯೂ ಗಳಿಸಿದಾಗ, ಅವನ ಹೆಸರು ದಿಲೀಪ್ ಅಂತ. ಅವ್ನು ‘ಡ್ಯಾನ್ಸ್ ರಾಜಾ ಡ್ಯಾನ್ಸ್’ ಚಿತ್ರದಿಂದ ಇಂಡಸ್ಟ್ರಿಗೆ ಬಂದವನು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೆವು.
ಹೌದು, ವಿಜಯಾನಂದ್ ಅವರ ಸಂಗೀತ ನಿರ್ದೇಶನವಿದ್ದ ಡ್ಯಾನ್ಸ್ ರಾಜಾ ಡ್ಯಾನ್ಸ್ ಚಿತ್ರದಲ್ಲಿ, ದಿಲೀಪ್ ಅಂದಿಗೆ ಕೀಬೋರ್ಡ್ ನುಡಿಸುತ್ತಿದ್ದನಂತೆ. ಶೇಖರ್ ಮತ್ತು ಕಸ್ತೂರಿ ದಂಪತಿಯ ಮಗ ದಿಲೀಪ್, ಅ ರಖಾ ರೆಹಮಾನ್ ಆಗಿ ಬದಲಾಗಿದ್ದು ಯಾಕೆ? ಯಾವಾಗ ಇತ್ಯಾದಿ ವಿವರಗಳು ನಾನು ಬರೆದು ನಿಮಗೆ ತಿಳಿಯಬೇಕಿಲ್ಲ.
ಗೊತ್ತಿರೋ ವಿಷಯವೇ. ಆದರೆ ಭಾರತದ ಸಿನಿಪ್ರೇಮಿಗಳು, ಚಿತ್ರಕರ್ಮಿಗಳು, ಸರಕಾರ ಯಾರೂ ರೆಹಮಾನ್‌ನ ಮತಾಂತರವನ್ನು ಪ್ರಶ್ನಿಸಲಿಲ್ಲ, ಅವನನ್ನು ತಿರಸ್ಕರಿಸಲಿಲ್ಲ. ಅವನ ಪ್ರತಿಭೆಗೆ ಮಣೆ ಹಾಕಿದರು. ಮೂರು ದಶಕಗಳ ಕಾಲ ಇಂಡಿಯನ್ ಸಿನಿಮಾವನ್ನು ಅಕ್ಷರಶಃ ಆಳಿದ ಸಂಗೀತ ಮಾಂತ್ರಿಕ ರೆಹಮಾನ್.
ಯುವಜನತೆಯ ಫೇವರಿಟ್ ಸಂಗೀತ ನಿರ್ದೇಶಕನಾಗಿ ಬೆಳೆದ ರೆಹಮಾನ್ ತಾಂತ್ರಿಕವಾಗಿ ಹಾಗೂ ವಿಭಿನ್ನತೆಯಲ್ಲಿ ಆ ಕಾಲಘಟ್ಟದ ಎಲ್ಲರಿಗಿಂತ ಬಹಳ ಮುಂದಿದ್ದ. ಮಣಿರತ್ನಮ್, ಬಾಲಚಂದರ್ ರಂಥ ನಿರ್ದೇಶಕರು ಇಳಯರಾಜಾರನ್ನು ಬದಿಗಿರಿಸಿ ರೆಹಮಾನ್‌ನನ್ನು ಆಯ್ಕೆ ಮಾಡಿಕೊಂಡರು ಅಂದರೆ ಆ ಕ್ರೇಜ್ ಒಮ್ಮೆ ನೆನಪಿಸಿಕೊಳ್ಳಿ.
ರೆಹಮಾನ್ ಸಂಗೀತದ ಕಾರಣಕ್ಕೇ ದಕ್ಷಿಣದ ಚಿತ್ರಗಳು ಬಾಲಿವುಡ್‌ಗೆ ಡಬ್ ಆದವು, ಅದೇ ಸಂಗೀತ ಇಟ್ಟುಕೊಂಡು ರೀಮೇಕ್ ಆದವು. ಇದರಿಂದ ರೆಹಮಾನ್‌ಗೆ ಬಾಲಿವುಡ್ ಪ್ರವೇಶ ಸಿಕ್ಕಿತು. ಬಾಲಿವುಡ್‌ನ ಹಲವಾರು ಸಂಗೀತ ನಿರ್ದೇಶಕರು ರೆಹಮಾನ್‌ಗೆ ಜಾಗ ಬಿಟ್ಟುಕೊಡುವಂತಾಯಿತು.
ರೆಹಮಾನ್ ತನಗೆ ಸಿಕ್ಕಿದ ಪ್ರತಿ ಅವಕಾಶದಲ್ಲೂ ಸಿಕ್ಸರ್ ಹೊಡೆದ. ಏರ್‌ಟೆಲ್ ರಿಂಗ್ ಟೋನ್‌ನಿಂದ ವಂದೇಮಾತರಂ ತನಕ ಎಲ್ಲೂ ರೆಹಮಾನ್. ಕೊನೆಗೆ ಆಸ್ಕರ್ ಪ್ರಶಸ್ತಿ ತರಲೂ ರೆಹಮಾನ್‌ನ ‘ಜೈ ಹೋ’ ಗೀತೆ ಬೇಕಾಯ್ತು.
ಆದರೆ ಪ್ರತಿಯೊಬ್ಬನಿಗೂ ಒಂದು ನಿಲ್ದಾಣವಿರುತ್ತದೆ. ಅದು ಬಂದಾಗ ಮರ್ಯಾದೆಯಿಂದ ಇಳಿದು ಹೋಗಬೇಕಾಗುತ್ತದೆ. ಪ್ರತಿಯೊಬ್ಬರಿಗೂ ಒಂದು ಸ್ಯಾಚುರೇಶನ್ ಪಾಯಿಂಟ್ ಅಂತ ಇರುತ್ತದೆ. ಅದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಜಗತ್ತಿನ ಪ್ರತಿಯೊಂದು ಹೊಸತನಕ್ಕೂ ನಾವು ಅಪ್‌ಡೇಟ್ ಆಗಿ ಸ್ಪರ್ಧೆಯಲ್ಲಿರುತ್ತೇವೆ ಎಂಬ ಆತ್ಮವಿಶ್ವಾಸ ಇರಬೇಕು. ಆದರೆ ಕೆಲವು ಕಠೋರ ವಾಸ್ತವಗಳನ್ನು ಒಪ್ಪಿಕೊಳ್ಳುವುದೂ ಅಗತ್ಯ.
ರವಿಚಂದ್ರನ್‌ರಂತೆ ಇವತ್ತಿಗೂ ಪ್ರೇಮಲೋಕ, ಏಕಾಂಗಿ ಅಂತ ಮಾತನಾಡುತ್ತಾ ಅಂದಿನ ಹ್ಯಾಂಗೋವರ್‌ನಲ್ಲಿ ಇಂದೂ ಇದ್ದರೆ, ಹಾಸ್ಯಕ್ಕೆ ವಸ್ತುವಾಗುತ್ತಾರೆ. ಬದಲಾದ ಜಗತ್ತಿನಲ್ಲಿ, ನಮಗಿಂತ ಉತ್ತಮರು ಬಂದಾಗ ಅವರ ಕೆಲಸಗಳನ್ನು ನೋಡಿ ಖುಷಿಪಡಬೇಕು. ಆದರೆ ಒಂದು ವೇಳೆ ಸ್ಪರ್ಧೆಗೆ ಇಳಿದದ್ದೇ ಆದರೆ ನೆಪ ಹೇಳಕೂಡದು.
ರೆಹಮಾನ್ ಮಾಡ್ತಾ ಇರೋದು ಈಗ ಇದನ್ನೇ. ಬದಲಾದ ಟ್ರೆಂಡ್, ತಂತ್ರಜ್ಞಾನ, ಹೊಸ ಪ್ರತಿಭೆಗಳ ಮಧ್ಯೆ ಆತನಿಗೆ ಗೆಲ್ಲಲಾಗುತ್ತಿಲ್ಲ. ಎಷ್ಟೇ ಕಷ್ಟ ಪಟ್ಟರೂ ಅಂದಿನಂತೆ ಹಿಟ್ ಆಲ್ಬಮ್ ಕೊಡಲು ಸಾಧ್ಯವಾಗುತ್ತಿಲ್ಲ. ಇಡೀ ಆಲ್ಬಮ್ʼನಲ್ಲಿ ಒಂದು ಹಾಡು ಕೂಡ ಚಾರ್ಟ್ ಬಸ್ಟರ್ ಆಗುತ್ತಿಲ್ಲ.
ಹೀಗಿದ್ದಾಗ ಸಹಜವಾಗಿ ಆತ ಸಿನಿಮಾ ಮೇಕರ್‌ಗಳ ಆದ್ಯತೆ ಆಗಿ ಉಳಿಯುವುದಿಲ್ಲ. ಆ ಸತ್ಯವನ್ನು ಒಪ್ಪಿಕೊಳ್ಳುವುದರ ಬದಲು ತನ್ನನ್ನು ಮುಸ್ಲಿಂ ಎಂದು ಕಡೆಗಣಿಸುತ್ತಿದ್ದಾರೆ, ಮೋದಿ ಸರಕಾರ ಅಧಿಕಾರಕ್ಕೆ ಬಂದಮೇಲೆ ತನಗೆ ಅವಕಾಶ ಕಡಿಮೆಯಾಗಿದೆ ಎಂಬ ಹತಾಶ ಮಾತುಗಳನ್ನು ಆಡುತ್ತಿದ್ದಾನೆ ರೆಹಮಾನ್. ಹಾಗಾದರೆ ಮೋದಿ ಅವಧಿಗೆ ಮುನ್ನ ಈತನಿಗೆ ಅವಕಾಶ ಸಿಗುತ್ತಿದ್ದುದು ಮುಸ್ಲಿಂ ಎಂಬ ಕಾರಣಕ್ಕಾ? ಈತನ ಲಾಜಿಕ್ ಪ್ರಕಾರ ಹಾಗೆಯೇ ಆಗಬೇಕಲ್ಲವೇ? ಮುಸಲ್ಮಾನರು ಅದರಲ್ಲೂ ಕನ್ವರ್ಟೆಡ್ ಮುಸಲ್ಮಾನರು ಯಾಕೆ ಈ ರೀತಿಯ ವಿಕ್ಟಿಮ್ ಕಾರ್ಡ್ ಪ್ಲೇ ಮಾಡುತ್ತಾರೆ ಅಂತಲೇ ಅರ್ಥವಾಗುವುದಿಲ್ಲ.
ಕಳೆದ ಮೂವತ್ತು ವರ್ಷಗಳಲ್ಲಿ ರೆಹಮಾನ್‌ಗೆ ಕೆಲಸ ಕೊಟ್ಟವರು ಮುಸ್ಲಿಮರಲ್ಲ. ಹಿಂದೂಗಳೇ. ಬಾಲಿವುಡ್‌ನಲ್ಲಿ ಆಮೀರ್ ಖಾನ್, ಸಲ್ಮಾನ್, ಶಾರೂಖ್ ಸಿನಿಮಾಗಳಿಗೆ ರೆಹಮಾನ್ ಸಂಗೀತ ಕೊಟ್ಟದ್ದು ಹೌದಾದರೂ ನಿರ್ಮಿಸಿದ್ದು ಹಿಂದೂಗಳೇ. ರೆಹಮಾನ್‌ನನ್ನು ಮುಸಲ್ಮಾನ ಎಂಬ ಕಾರಣಕ್ಕೆ ದೂರ ಇಡಲಿಲ್ಲ.
ರೆಹಮಾನ್ ಹಲುಬುವುದಕ್ಕೆ ಕಾರಣಗಳೇ ಇಲ್ಲ. ಆತನ ಕೈಲಿ ಇವತ್ತಿಗೂ ಹಿಂದಿಯ ಹಲವು ಚಿತ್ರಗಳಿವೆ. ಬಹುಕೋಟಿ ವೆಚ್ಚದ ರಾಮಾಯಣಕ್ಕೂ ರೆಹಮಾನ್‌ದೇ ಸಂಗೀತ. ಹೀಗಿದ್ದೂ ಇಂಥ ಆರೋಪ ಮಾಡಲು ಮನಸು ಹೇಗೆ ಬರುತ್ತದೆ ರೆಹಮಾನ್‌ಗೆ? ಇಂಥ ಹೇಳಿಕೆಗಳು ಯಾವ ಸಂದೇಶ ನೀಡುತ್ತವೆಂಬ ಪರಿeನ ಬೇಡವೇ? ಇದೇ ಸಲ್ಮಾನ್ ಖಾನ್, ಗಾಯಕ ಅರಿಜಿತ್ ಸಿಂಗ್‌ನನ್ನು ತನ್ನ ಚಿತ್ರದಿಂದ ಕಿತ್ತೆಸೆದ. ಆ ಜಾಗಕ್ಕೆ, ಆತಿಫ್, ರಾಹತ್ ಫತೇಹ್ ಅಲಿ ಖಾನ್ ಎಂಬ ಪಾಕಿ ಗಾಯಕರನ್ನು ತಂದು ಹಾಡಿಸಿದ.
ಅರಿಜಿತ್ ಎಂದಾದರೂ ಇದಕ್ಕೆ ಕೋಮುವಾದದ ಬಣ್ಣ ಹಚ್ಚಿದನಾ? ಹೊಸ ಗಾಯಕರ ಆಗಮನ ದಿಂದ ಸೋನು ನಿಗಮ್‌ಗೆ ಇದ್ದ ಆಫರ್‌ಗಳು ಕಡಿಮೆಯಾದವು. ಎಂದಾದರೂ ಸೋನು ಅದಕ್ಕೆ ಕೋಮುವಾದದ ಲೇಪನ ಮಾಡಿದನಾ? ಆದರೆ ಸಲ್ಮಾನ್ ಖಾನ್ ಕೃಷ್ಣಮೃಗ ಬೇಟೆ ಕೇಸ್ ನಲ್ಲಿ ಬಂಧನವಾಗ್ತಾ ಇದ್ದ ಹಾಗೇ ಮುಸಲ್ಮಾನ ಟೋಪಿ ಧರಿಸಿ, ನನ್ನನ್ನು ಮುಸಲ್ಮಾನ ಎಂಬ ಕಾರಣಕ್ಕೆ ಟಾರ್ಗೆಟ್ ಮಾಡ್ತಿದಾರೆ ಎಂಬ ಹೇಳಿಕೆ ಕೊಟ್ಟ.
ಮ್ಯಾಚ್ ಫಿಕ್ಸಿಂಗ್‌ನಲ್ಲಿ ಸಿಕ್ಕಿಕೊಂಡ ಅಜರುದ್ದೀನ್ ಕೂಡ ತನ್ನ ಮುಸ್ಲಿಂ ಧರ್ಮವನ್ನು ಮುನ್ನೆಲೆಗೆ ತಂದು ಕನಿಕರ ಪಡೆಯೋಕೆ ಬಯಸಿದ್ದ. ಈತನನ್ನು ಭಾರತದ ನಾಯಕನನ್ನಾಗಿ ಮಾಡಿದ್ದು, ಇದೇ ದೇಶ. ಸಲ್ಮಾನ್‌ನನ್ನು ಸೂಪರ್ ಸ್ಟಾರ್ ಮಾಡಿದ್ದು ಇದೇ ಭಾರತದ ಸಿನಿಪ್ರೇಮಿಗಳು ಎಂಬುದು ಇವರಿಗೆ ಗೌಣವಾಗಿ ಹೋಯ್ತು! ರೆಹಮಾನ್ ಕೂಡ ಅದನ್ನೇ ಮಾಡ್ತಿದ್ದಾನೆ.
ರೆಹಮಾನ್‌ಗೆ ಮೋದಿ ಅವಧಿಯಲ್ಲಿ ಎರಡು ಬಾರಿ ರಾಷ್ಟ್ರಪ್ರಶಸ್ತಿ ಬಂದದ್ದು ಮರೆತೇ ಹೋಯ್ತಾ? ರೆಹಮಾನ್ ಸಂಗೀತದ ವಂದೇಮಾತರಂ ಮತ್ತು ಜೈ ಹೋ ಹಾಡುಗಳು ಇವತ್ತಿಗೂ ಮೊಳಗುತ್ತಿವೆ. ಯಾರಾದರೂ ಅದರ ಮೇಲೆ ನಿಷೇಧ ಹೇರಿದ್ದಾರಾ? ಇಂಥ ಹೇಳಿಕೆಗಳಿಂದ ರೆಹಮಾನ್ ತನ್ನನ್ನು ತಾವೇ ಚಿಕ್ಕವನಾಗಿಸಿಕೊಳ್ಳುತ್ತಿದ್ದಾನೆ.
ರೆಹಮಾನ್ ಸಂಗೀತದ ಜಾದೂ ಕಮ್ಮಿ ಆದಾಗಲೂ ನಾವಂದುಕೊಂಡದ್ದು, ರೆಹಮಾನ್ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾನೆ ಅಂತಲೇ ಹೊರತು, ಆತ ಖಾಲಿಯಾದ ಎಂದು ಷರಾ ಬರೆದಿರ ಲಿಲ್ಲ. ಇಂದಿಗೂ ರೆಹಮಾನ್ ಬಗೆಗಿನ ನಿರೀಕ್ಷೆ ಕಡಿಮೆಯೇನಾಗಿಲ್ಲ. ಆದರೆ ರೆಹಮಾನ್ ತನ್ನ ಹಳೆಯ ಮಟ್ಟಕ್ಕೂ ತಲುಪಲಾಗುತ್ತಿಲ್ಲ ಎಂಬುದು ಕಟುವಾಸ್ತವ.
ಛಾವಾದಂಥ ಸೂಪರ್‌ಹಿಟ್ ಚಿತ್ರದಲ್ಲಿ ಸಂಗೀತದ ಬಗ್ಗೆ ಮಾತೇ ಬರಲಿಲ್ಲ ಅಂದರೆ ಅದು ರೆಹಮಾನ್ ಸೋಲು. ಧುರಂಧರ್ ಚಿತ್ರದಲ್ಲಿ ಸಿನಿಮಾದ ಜತೆಗೆ ಪ್ರತಿಯೊಬ್ಬರೂ ಅದರ ಸಂಗೀತದ ಬಗ್ಗೆ ಮಾತನಾಡುತ್ತಿದ್ದಾರೆ. ರೆಹಮಾನ್ ತನ್ನನ್ನು ಆತ್ಮವಿಮರ್ಶೆಗೆ ಒಳಪಡಿಸಿಕೊಳ್ಳುವ ಅಗತ್ಯ ಇದೆ. ರೆಹಮಾನ್ ತನಗೆ ಅವಕಾಶ ಸಿಗದ ಕಾರಣಕ್ಕೆ ಹತಾಶನಾಗಿ ವಿಕ್ಟಿಮ್ ಕಾರ್ಡ್ ಪ್ಲೇ ಮಾಡುತ್ತಿದ್ದಾನೆ ಎಂದರೂ, ಹೋಗ್ಲಿ ಬಿಡು ಪಾಪ ಅಂತ ಸುಮ್ಮನಿದ್ದುಬಿಡಬಹುದಿತ್ತೇನೋ.
ಆದರೆ ರೆಹಮಾನ್ ಬೇರೆಯೇ ದಿಕ್ಕಿನಲ್ಲಿ ಯೋಚಿಸುತ್ತಿದ್ದಾನೆ ಎಂಬುದಕ್ಕೆ ಸಾಕ್ಷಿಯಾಗಿ ಸಿಗುವುದು ಆತನ ಇನ್ನೊಂದು ಹೇಳಿಕೆ. ಛಾವಾ ಸಿನಿಮಾದ ಸಾಂಬಾಜಿಯ ಕಥನ ದೇಶ ಒಡೆಯುವ ನರೇಟಿವ್ ಬಿತ್ತುತ್ತಿದೆಯಂತೆ. ಜನರನ್ನು ಮರುಳು ಮಾಡಲು ಸಾಧ್ಯವಿಲ್ಲವಂತೆ. ಇದೇ ರೆಹಮಾನ್ ಮತ್ತು ಆತನ ಕನ್ವರ್ಟೆಡ್ ತಾಯಿ ಹಿಂದೂ ಸಾಹಿತಿಯೊಬ್ಬರನ್ನು ವಿಭೂತಿ ನಾಮ ಧರಿಸಿದ್ದರೆಂಬ ಕಾರಣಕ್ಕೆ ಮನೆಗೆ ಸೇರಿಸಿರಲಿಲ್ಲ. ಅದನ್ನು ಅಳಿಸಿ ಮನೆ ಒಳಗೆ ಬಾ ಅಂದಿದ್ದರು.
ಇವರಿಗೆ ಕೋಮುಸಾಮರಸ್ಯದ ಬಗ್ಗೆ ಮಾತನಾಡುವ ಹಕ್ಕಿದೆಯಾ? ರೆಹಮಾನ್‌ನ ಒಂದೋ ಎರಡೋ ಹೇಳಿಕೆಗಳಿಂದ ನಾನು ಆತನನ್ನು ದೇಶದ್ರೋಹಿ ಅನ್ನುವುದಿಲ್ಲ. ನಗರ ನಕ್ಸಲ್ ಅಂತಲೋ ಮೋದಿ ವಿರೋಧಿ ಅಂತಲೋ ಬ್ರ್ಯಾಂಡ್ ಮಾಡಿ ದ್ವೇಷಿಸುವುದಿಲ್ಲ. ಆದರೆ ಖಂಡಿತ ವಾಗ್ಯೂ ಆತನನ್ನು ಕೃತಘ್ನ ಎನ್ನುತ್ತೇನೆ.
ಈತನ ಮತಾಂತರವನ್ನು ಒಪ್ಪಿಕೊಂಡಿದೆ ಈ ದೇಶ. ಮುಸಲ್ಮಾನನೆಂದು ನೋಡದೇ ಈತನ ಸಂಗೀತವನ್ನು ಕೇಳಿದೆ. ಈತನ ಹಾಡುಗಳನ್ನು ಗುನುಗಿದೆ. ಈತನಿಗೆ ಪದ್ಮಭೂಷಣದ ತನಕ ಸಕಲ ಅವಾರ್ಡ್ ಕೊಟ್ಟಿದೆ. ಕೋಟಿಗಟ್ಟಲೆ ಹಣ ಕೊಟ್ಟಿದೆ. ತನ್ನ ಸರಕು ಖಾಲಿ ಮಾಡಿಕೊಂಡು, ಗುಣಮಟ್ಟ ಕಾಯ್ದುಕೊಳ್ಳಲಾಗದೇ ಸೋತು, ಈಗ ಅದಕ್ಕೆ ಕೋಮುವಾದವನ್ನು ಟ್ಯಾಗ್ ಮಾಡಿ ದೇಶದ ಬಗ್ಗೆಯೇ ನೆಗೆಟಿವ್ ಒಪಿನಿಯನ್ ಸೃಷ್ಟಿಸುತ್ತಿರುವುದಕ್ಕೆ ರೆಹಮಾನ್‌ಗೆ ನಾಚಿಕೆ ಆಗಬೇಕು.
ಕಳೆದ ಹತ್ತು ವರ್ಷಗಳಲ್ಲಿ ರೆಹಮಾನ್‌ನ ಯಾವ ಗೀತೆ ಹುಚ್ಚೆಬ್ಬಿಸಿದೆ ಅಂತ ಹುಡುಕಿದ್ರೆ ಒಂದೂ ಇಲ್ಲ. ರೆಹಮಾನ್ ಕಾಲದ ಇದ್ದ ಅನು ಮಲಿಕ್, ಆನಂದ್ ಮಿಲಿಂದ್, ಪ್ರೀತಂ, ನದೀಂ ಶ್ರವಣ, ಜತಿನ್ ಲಲಿತ್ ಹೀಗೆ ಎಷ್ಟೋ ಸಂಗೀತ ನಿರ್ದೇಶಕರು ನೇಪಥ್ಯಕ್ಕೆ ಸರಿದಿದ್ದಾಗಿದೆ. ಕನ್ನಡ, ತಮಿಳು, ತೆಲುಗು ಎಡೆ ಹೊಸ ನೀರು ಬಂದಿದೆ.
ನಿರಂತರ ಮೂವತ್ತೈದು ವರ್ಷಗಳಿಂದ ರೆಹಮಾನ್‌ಗೆ ಆಫರ್‌ಗಳು ಸಿಗುತ್ತಲೇ ಇವೆ. ಸಂಗೀತ ಕ್ಲಿಕ್ ಆಗದಿದ್ದರೂ ಅವಕಾಶಗಳು ಶೂನ್ಯವಾಗಿಲ್ಲ. ಅದಕ್ಕೆ ತೃಪ್ತಿಪಡಬೇಕೇ ಹೊರತು ಪವರ್ ಶಿಫ್ಟ್, ಕೋಮುವಾದ ಅಂತ ನೆಪ ಹೇಳುವುದಲ್ಲ. ರೆಹಮಾನ್ ಮತ್ತೊಂದು ಹಿಟ್ ಆಲ್ಬಮ್ ಕೊಡದಿದ್ದರೂ ನಮಗ್ಯಾರಿಗೂ ಆತನ ಮೇಲೆ ಗೌರವ, ಪ್ರೀತಿ ಕಡಿಮೆ ಆಗುತ್ತಿರಲಿಲ್ಲ. ಯಾಕಂದರೆ ಆತ ಇದುವರೆಗೆ ಕೊಟ್ಟ ನೂರಾರು ಹಾಡುಗಳ ಋಣ ನಮ್ಮ ಮೇಲಿದೆ. ಆದರೆ ಇಂಥ ಮಾತು ಗಳಿಂದ ಆತ ತನ್ನ ವ್ಯಕ್ತಿತ್ವ ಹಾಳುಮಾಡಿಕೊಂಡರೆ ಆತನ ಹಾಡುಗಳನ್ನು ಕೇಳುವಾಗಲೂ ಇವೆಲ್ಲ ನೆನಪಾಗಿ ಕಿರಿಕಿರಿ ಅನಿಸುತ್ತದೆ. ಪ್ಲೀಸ್ ಗೆಟ್ ವೆಲ್ ಸೂನ್ ರೆಹಮಾನ್...