Leena Joshi Column: ಜೋಶಿಯವರಿಗೆ ಕೆರೆತವಾದರೆ, ಉಳಿದವರು ಮುಲಾಮು ಹಚ್ಚಿಕೊಂಡಿದ್ದೇಕೆ ?
‘ವಿಶ್ವವಾಣಿ’ ಪತ್ರಿಕೆ ಮತ್ತು ತಾಳಮದ್ದಳೆ ಅರ್ಥಧಾರಿಗಳ ನಡುವಿನ ಈ ಸಂಘರ್ಷದ ಮೂಲವನ್ನು ಕೆದಕಿದಾಗ, ನಿಜಕ್ಕೂ ಅರ್ಥಧಾರಿಗಳು ಎನಿಸಿಕೊಂಡವರು ತೋರಿದ ವರ್ತನೆ ‘ಅಪ್ರಬುದ್ಧ’ ಮತ್ತು ‘ಬಾಲಿಶ’ ಎಂದು ಎನಿಸದೇ ಇರದು. ಈ ಇಡೀ ರಂಪಾಟಕ್ಕೆ ಕಾರಣವಾಗಿದ್ದು ವಿಶ್ವೇಶ್ವರ ಭಟ್ ಅವರ ಜನಪ್ರಿಯ ಅಂಕಣ ‘ಭಟ್ಟರ್ ಸ್ಕಾಚ್’ನಲ್ಲಿ ಪ್ರಕಟವಾದ ಒಂದು ಪುಟ್ಟ ಪ್ರಶ್ನೋತ್ತರ.
-
ತಾಳ-ಮೇಳ
ಲೀನಾ ಜೋಶಿ
ಕಳೆದ ಒಂದು ತಿಂಗಳಿನಿಂದ ‘ವಿಶ್ವವಾಣಿ’ ಪತ್ರಿಕೆಯಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತಾಳಮದ್ದಳೆ ಕುರಿತ ಚರ್ಚೆ, ಸಂವಾದವನ್ನು ಅತ್ಯಂತ ಕುತೂಹಲದಿಂದ ಓದುತ್ತಿದ್ದೇನೆ, ಗಮನಿಸು ತ್ತಿದ್ದೇನೆ. ಈ ವಿವಾದ ಅಥವಾ ಚರ್ಚೆ ಎಲ್ಲಿಂದ ಆರಂಭವಾಯಿತು ಎಂಬುದನ್ನು ನೋಡಿದಾಗ ತಾಳಮದ್ದಳೆ ಅರ್ಥಧಾರಿಗಳ ಮುಖವಾಡ ಕಳಚಿ ಬೀಳುವುದು ನಿಶ್ಚಿತ.
ಅರ್ಥಧಾರಿಗಳು ಎನಿಸಿಕೊಂಡವರು ಇಷ್ಟು ಬಾಲಿಶವಾಗಿ ಆಲೋಚಿಸುತ್ತಾರಾ, ನಾವು ಇವರ ಅರ್ಥಧಾರಿಕೆಯನ್ನೇ ಇಷ್ಟು ವರ್ಷ ಕೇಳುತ್ತಾ ಬಂದಿದ್ದಾ ಎಂಬ ಬೇಸರ, ವ್ಯಥೆಯೂ ಆಗುತ್ತಿದೆ.
‘ವಿಶ್ವವಾಣಿ’ ಪತ್ರಿಕೆ ಮತ್ತು ತಾಳಮದ್ದಳೆ ಅರ್ಥಧಾರಿಗಳ ನಡುವಿನ ಈ ಸಂಘರ್ಷದ ಮೂಲವನ್ನು ಕೆದಕಿದಾಗ, ನಿಜಕ್ಕೂ ಅರ್ಥಧಾರಿಗಳು ಎನಿಸಿಕೊಂಡವರು ತೋರಿದ ವರ್ತನೆ ‘ಅಪ್ರಬುದ್ಧ’ ಮತ್ತು ‘ಬಾಲಿಶ’ ಎಂದು ಎನಿಸದೇ ಇರದು. ಈ ಇಡೀ ರಂಪಾಟಕ್ಕೆ ಕಾರಣವಾಗಿದ್ದು ವಿಶ್ವೇಶ್ವರ ಭಟ್ ಅವರ ಜನಪ್ರಿಯ ಅಂಕಣ ‘ಭಟ್ಟರ್ ಸ್ಕಾಚ್’ನಲ್ಲಿ ಪ್ರಕಟವಾದ ಒಂದು ಪುಟ್ಟ ಪ್ರಶ್ನೋತ್ತರ.
ಮೈಸೂರಿನ ಶೀಲಾ ಒಂಟಿಕೊಪ್ಪಲು ಎಂಬುವವರು, ‘ಭಟ್ರೇ, ಮನುಷ್ಯನಿಗೆ ಬುದ್ಧಿವಂತಿಕೆಯಿದ್ದೂ ಅದು ಭೂಷಣ ಎನಿಸಿಕೊಳ್ಳದಿದ್ದರೆ?’ ಎಂಬ ಪ್ರಶ್ನೆಗೆ ಭಟ್ಟರು, ‘ಅಂಥವರಿಗೆ ಪ್ರಭಾಕರ ಜೋಶಿ ಅಂತಾರೆ!’ ಎಂದು ಉತ್ತರಿಸಿದ್ದರು. ಪ್ರಭಾಕರ ಜೋಶಿ ಅಂದ್ರೆ ಯಾರು ಎಂಬುದನ್ನು ಭಟ್ಟರು ಹೇಳಿರಲಿಲ್ಲ. ಆದರೆ ತಾಳಮದ್ದಳೆ ಅರ್ಥಧಾರಿಗಳಾದ ಡಾ.ಎಂ.ಪ್ರಭಾಕರ ಜೋಶಿಯವರು ಇದು ತಮ್ಮ ಕುರಿತೇ ಹೇಳಿದ್ದು ಎಂದು ಭಾವಿಸಿಬಿಟ್ಟರು.
ಜಗತ್ತಿನಲ್ಲಿ ಪ್ರಭಾಕರ ಜೋಶಿ ಎಂಬುವವರು ಒಬ್ಬರೇ ಇದ್ದಾರಾ? ಅದು ಇವರೇನಾ? ‘ಕುಂಬಳ ಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡ’ ಎಂಬ ಗಾದೆಮಾತಿನಂತೆ, ಪ್ರಭಾಕರ ಜೋಶಿ ಅವರು ದಾರಿಯ ಮೇಲೆ ಹೋಗುವ ಮಾರಿಯನ್ನು ಅದರ ಪಾಡಿಗೆ ಹೋಗಗೊಡದೇ ಮನೆಯೊಳಗೇ ಬಿಟ್ಟು ಕೊಂಡುಬಿಟ್ಟರು.
ಇದನ್ನೂ ಓದಿ: G N Bhat Column: ತಾಳಮದ್ದಳೆ ಅರ್ಥಧಾರಿಗಳು ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲ
ಸಮಸ್ಯೆ ಶುರುವಾಗಿದ್ದೇ ಆಗ. ಪ್ರಭಾಕರ ಜೋಶಿ ಅವರು ತಮ್ಮ ಪಾಡಿಗೆ ತಾವಿದ್ದಿದ್ದರೆ, ಅದು ಸಮಸ್ಯೆಯೇ ಆಗುತ್ತಿರಲಿಲ್ಲ. ಅಷ್ಟಕ್ಕೂ ‘ಭಟ್ಟರ್ ಸ್ಕಾಚ್’ ಎಂಬುದು ತಿಳಿಹಾಸ್ಯದ, ಕಾಲೆಳೆಯುವ ಮನೋಭಾವದ, ಲಘುಹಾಸ್ಯದ, ಓದಿ ಉಪೇಕ್ಷಿಸಬಹುದಾದ ಒಂದು ಅಂಕಣ. ನಾನೂ ಈ ಅಂಕಣ ವನ್ನು ಹತ್ತಾರು ವರ್ಷಗಳಿಂದ ಓದುತ್ತಾ ಬಂದಿದ್ದೇನೆ.
ಈ ಅಂಕಣದಲ್ಲಿ ಭಟ್ಟರು ತಮ್ಮನ್ನು ಕೂಡ ಗೇಲಿ ಮಾಡಿಕೊಳ್ಳುತ್ತಾರೆ. ಈ ಅಂಶವೇ ‘ಭಟ್ಟರ್ ಸ್ಕಾಚ್’ ಅಂಕಣದ ಸ್ವಾರಸ್ಯ ಮತ್ತು ಮಹತ್ವವನ್ನು ಎತ್ತಿ ಹಿಡಿದಿದೆ. ಪ್ರಭಾಕರ ಜೋಶಿಯವರನ್ನು ಹಳಿಯಬೇಕು, ನಿಂದಿಸಬೇಕು ಎಂದಿದ್ದರೆ, ಭಟ್ಟರಿಗೆ ಅವರದ್ದೇ ಪತ್ರಿಕೆಯಿದೆಯಲ್ಲವೇ? ಅವರೇ ಮಾಲೀಕರು, ಅವರೇ ಸಂಪಾದಕರು. ಅದಕ್ಕಾಗಿ ‘ಭಟ್ಟರ್ ಸ್ಕಾಚ್’ ಅಂಕಣಕ್ಕಿಂತ ಮುಖಪುಟವೇ ಇತ್ತಲ್ಲ? ಜೋಶಿಯವರನ್ನು ಟೀಕಿಸಲು ಇಡೀ ಪತ್ರಿಕೆಯೇ ಇತ್ತಲ್ಲ? ಆದರೆ ನಾನು ಬಲ್ಲಂತೆ, ತಮ್ಮದೇ ಪತ್ರಿಕೆಯಿದ್ದರೂ ಭಟ್ಟರು ಇಲ್ಲಿ ತನಕ ಪತ್ರಿಕೆಯನ್ನು ಸ್ವಾರ್ಥಕ್ಕೆ, ಸ್ವಂತಕ್ಕೆ ಬಳಸಿಕೊಂಡ ನಿದರ್ಶನಗಳಿಲ್ಲ.
ಒಂದು ವೇಳೆ ಪ್ರಭಾಕರ ಜೋಶಿಯವರಿಗೆ ಅನುಮಾನ ಇದ್ದಿದ್ದರೆ, ಭಟ್ಟರನ್ನೇ ನೇರವಾಗಿ ಸಂಪ ರ್ಕಿಸಿ, ‘ನೀವು ಬರೆದಿದ್ದು ಯಾರ ಕುರಿತು?’ ಎಂದು ಸ್ಪಷ್ಟನೆ ಬಯಸಬೇಕಿತ್ತು. ಅದು ಸಮರ್ಪಕವಾದ ನಡೆಯೂ ಆಗುತ್ತಿತ್ತು. ಅದರ ಬದಲು ಜೋಶಿಯವರು ಏಕಾಏಕಿ ಭಟ್ಟರು ತಮ್ಮ ವಿರುದ್ಧವೇ ಬರೆದಿದ್ದಾರೆ ಎಂದು ‘ಹೆಗಲು ಮುಟ್ಟಿಕೊಂಡು’ಬಿಟ್ಟರು.
ಪ್ರಭಾಕರ ಜೋಶಿ ಎಂಬ ಹೆಸರಿನವರು ತಾವೊಬ್ಬರೇ ಎಂದು ಅವರು ಯಾಕೆ ಭಾವಿಸಿದರೋ? ಅಷ್ಟಕ್ಕೂ ಭಟ್ಟರು, ‘ಡಾ.ಎಂ.ಪ್ರಭಾಕರ ಜೋಶಿ ಎಂದಾಗಲಿ, ತಾಳಮದ್ದಳೆ ಅರ್ಥಧಾರಿಗಳಾದ ಪ್ರಭಾಕರ ಜೋಶಿ ಎಂದಾಗಲಿ’ ಹೇಳಿರಲಿಲ್ಲ. ಕ್ರಿಕೆಟ್ ಭಾಷೆಯಲ್ಲಿ ಹೇಳುವುದಾದರೆ, ಅದೊಂದು ನಿರ್ಲಕ್ಷಿಸಬಹುದಾದ ‘ವೈಡ್ ಬಾಲ್’!
ಜೋಶಿಯವರು ವೈಡ್ ಬಾಲನ್ನು ಬೆನ್ನಟ್ಟಿಕೊಂಡು ಹೊಡೆಯಲು ಹೋದದ್ದು, ಇಡೀ ವಿವಾದಕ್ಕೆ ಕಾರಣವಾಯಿತು. ಎಂಬತ್ತು ವರ್ಷ ವಯಸ್ಸಿನ ಜ್ಞಾನವೃದ್ಧರಾದ ಜೋಶಿಯವರಿಗೆ ಇಂಥ ಸಣ್ಣ ವಿಷಯ ಹೊಳೆಯದಿದ್ದುದು ಆಶ್ಚರ್ಯವೇ ಸರಿ!
ಒಂದು ವೇಳೆ ಭಟ್ಟರು, ಪ್ರಭಾಕರ ಜೋಶಿಯವರನ್ನೇ ಕುರಿತು ಬರೆದಿದ್ದಾರೆ ಎಂದಿಟ್ಟುಕೊಂಡರೂ, ನಾಲ್ಕು ಪದಗಳ ಆ ಒಂದು ಸಾಲಿನ ಆ ಉತ್ತರವನ್ನು ಜೋಶಿಯವರು ಅಷ್ಟು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವೇ ಇರಲಿಲ್ಲ. ಜೋಶಿಯವರು ತಾಳಮದ್ದಳೆ ಅರ್ಥ ಹೇಳುವಾಗ, ತಮಾಷೆ, ಗೇಲಿ, ಹಾಸ್ಯ, ಅಪಹಾಸ್ಯವನ್ನು ಮಾಡಿಯೇ ಇಲ್ಲವೇ? ನಾನೇ ಅನೇಕ ಸಲ ಅವರು ಬೇರೆ ಕಲಾವಿದರಿಗೆ ನಾಟುವಂತೆ ಕಟುಟೀಕೆ ಮಾಡಿದ್ದನ್ನು, ಕಾಲೆಳೆದಿದ್ದನ್ನು ಕೇಳಿದ್ದೇನೆ.
ಜೋಶಿಯವರು ಎಲ್ಲರನ್ನೂ ಹಿಂದಗಡೆಯಿಂದ ಕೆಟ್ಟದಾಗಿ ಟೀಕಿಸುತ್ತಾರೆ ಹಾಗೂ ಎಲ್ಲರ ಬಗ್ಗೆ ಯೂ ಲಘುವಾಗಿ ಮಾತಾಡುತ್ತಾರೆ ಎಂಬುದು ಅವ ರನ್ನು ಹತ್ತಿರದಿಂದ ಬಲ್ಲ ಎಲ್ಲರಿಗೂ ಗೊತ್ತಿರುವ ವಿಚಾರವೇ. ತಮ್ಮ ಬಗ್ಗೆ ಬರೆದ ಒಂದು ಸಾಲಿನ ಸಣ್ಣ ಟೀಕೆಯನ್ನೂ ಜೋಶಿಯವರು ಸಹಿಸಿಕೊಳ್ಳದವರಾದರಾ? ನಿಜಕ್ಕೂ ಆಶ್ಚರ್ಯವಾಗುತ್ತದೆ. ಯಾರು ಸ್ವಮರ್ಶೆಗೆ ಒಳಗಾಗಲು ಬಯಸುವುದಿಲ್ಲವೋ, ತಮ್ಮ ಬಗೆಗಿನ ತಿಳಿಹಾಸ್ಯವನ್ನೂ ಒಪ್ಪಿಕೊಳ್ಳುವುದಿಲ್ಲವೋ, ಅವರು ಕಲಾವಿದರಾಗಲು ಲಾಯಕ್ಕೇ ಅಲ್ಲ. ವಿನಯ, ಸೌಜನ್ಯವೇ ಒಬ್ಬ ಕಲಾವಿದನಿಗೆ ಭೂಷಣ. ಆ ಸಂದರ್ಭದಲ್ಲಿ ಜೋಶಿಯವರು ವಿನಯವಂತಿಕೆಯನ್ನು ಮೆರೆಯಬೇಕಿತ್ತು. ಆದರೆ ಅವರು false victim card play ಮಾಡಿದರು. ಇದರ ಅಗತ್ಯವೇ ಇರಲಿಲ್ಲ.
ಭಟ್ಟರು ನಿತ್ಯವೂ ‘ಭಟ್ಟರ್ ಸ್ಕಾಚ್’ನಲ್ಲಿ ಕೆಲವರದ್ದಾದರೂ ಕಾಲೆಳೆಯುತ್ತಾರೆ. ಅವರಾರೂ ಇಲ್ಲಿ ತನಕ ಅವರ ಜತೆ ಕಾಲು ಕೆರೆದು ಜಗಳ ತೆಗೆದಿಲ್ಲ. ಜೋಶಿಯವರು ಹಾಗಾದರೆ ತಾಳಮದ್ದಳೆಯಲ್ಲಿ ಯಾರನ್ನೂ ಟೀಕಿಸಿಯೇ ಇಲ್ಲವೇ? ಇವರು ಆಡಿದ ನಂಜುಮಾತುಗಳನ್ನು ಅನೇಕರು ಸಹಿಸಿಕೊಂಡಿ ಲ್ಲವೇ? ಆದರೆ ತಮ್ಮ ಬಗ್ಗೆ ಬಂದ ನಾಲ್ಕು ಪದಗಳನ್ನು ಒಳಗೊಂಡ ಒಂದು ಚಿಕ್ಕ ಸಾಲಿನ ಟೀಕೆ ಯನ್ನೂ ಜೋಶಿಯವರು ಸಹಿಸಿಕೊಳ್ಳದವರಾದರಾ? ನನಗೆ ಬಹಳ ಆಶ್ಚರ್ಯ ಮತ್ತು ಅವರ ಬಗ್ಗೆ ಅನುಕಂಪ ಆಗುತ್ತಿರುವುದು ಈ ಕಾರಣಕ್ಕೆ.
ಅದಕ್ಕಿಂತ ಹೆಚ್ಚಾಗಿ, ನನಗೆ ಮುಖ್ಯವಾಗಿ ಕಾಣುವುದು ‘ಭಟ್ಟರ್ ಸ್ಕಾಚ್’ನಲ್ಲಿ ಬಂದ ನಂತರ ಅವರು ವರ್ತಿಸಿದ ರೀತಿ. ಅವರು ತಮ್ಮ ಆಪ್ತ ಸ್ನೇಹಿತರಿಗೆ, ತಾಳಮದ್ದಳೆ ಸಹ-ಅರ್ಥಧಾರಿಗಳಿಗೆ, ಫೋನ್ ಮಾಡಿ ಗೋಳು ತೋಡಿಕೊಂಡು, ಭಟ್ಟರ ವಿರುದ್ಧ ಸಮರ ಸಾರುವಂತೆ ಕರೆಕೊಟ್ಟಿದ್ದು ಮಾತ್ರ ಅತ್ಯಂತ ಬಾಲಿಶ ಮತ್ತು ಹತಾಶ ನಡೆಯಾಗಿತ್ತು.
ಭಟ್ಟರ ಆ ಟೀಕೆಯನ್ನು ‘ತಾಳಮದ್ದಳೆ ಮೇಲೆ ಆಕ್ರಮಣ ಮತ್ತು ಅರ್ಥಧಾರಿಗಳ ಅವಹೇಳನ’ ಎಂಬ ರೀತಿಯಲ್ಲಿ ಬಿಂಬಿಸಲು ಯತ್ನಿಸಿದರು. ತಮಗೆ ಆಪ್ತರಾದ ಅರ್ಥಧಾರಿಗಳ ಮುಂದೆ ಅಳಲನ್ನು ತೋಡಿಕೊಂಡರು. ಭಟ್ಟರ ಹೇಳಿಕೆಯನ್ನು ಖಂಡಿಸುವಂತೆ ದುಂಬಾಲು ಬಿದ್ದರು.
ಇಡೀ ವಿಷಯದ ವಾಸ್ತವವನ್ನು ಹೇಳದೇ ಎಲ್ಲರ ನೆರವನ್ನು ಬಯಸಿದರು. ಜೋಶಿಯವರ ದಾಕ್ಷಿಣ್ಯಕ್ಕೆ ಕಟ್ಟುಬಿದ್ದು, ಖ್ಯಾತ ಅರ್ಥಧಾರಿಗಳಾದ ಕೆರೆಕೈ ಉಮಾಕಾಂತ ಭಟ್ಟ ಮತ್ತು ಉಜಿರೆ ಅಶೋಕ ಭಟ್ಟರು, ಖಂಡನಾ ಹೇಳಿಕೆಯನ್ನು ಹೊಸೆದುಬಿಟ್ಟರು. ಅಸಲಿಗೆ ಅವರಿಬ್ಬರಿಗೂ ವಿವಾದದ ನಿಜವಾದ ಮುಖ ಗೊತ್ತೇ ಇರಲಿಲ್ಲ.
ಗೊತ್ತಿದ್ದಿದ್ದರೆ ಪ್ರಾಜ್ಞರಾದ ಅವರಿಬ್ಬರೂ ಖಂಡನಾ ಹೇಳಿಕೆ ಕೊಡುತ್ತಿರಲಿಲ್ಲ. ಅಷ್ಟೂ ಸಾಲದು ಎಂಬಂತೆ ಜೋಶಿಯವರು ಜಾತಿ ಕಾರ್ಡ್ ಪ್ಲೇ ಮಾಡಿದರು. ತಮ್ಮ ಸಮುದಾಯವಾದ ಚಿತ್ಪಾವನ ಬ್ರಾಹ್ಮಣ ಬಂಧುಗಳಿಗೆ ಫೋನ್ ಮಾಡಿ, ‘ಭಟ್ಟರ್ ಸ್ಕಾಚ್’ ಟೀಕೆಯನ್ನು ವಿರೋಧಿಸುವಂತೆ ದುಂಬಾಲು ಬಿದ್ದರು. ಅವರೆಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ಜೋಶಿಯವರ ಪರವಾಗಿ ಪೋಸ್ಟ್ ಹಾಕಿದರು.
ತಾಳಮದ್ದಳೆ ಅಭಿಮಾನಿಗಳನ್ನು, ಅರ್ಥಧಾರಿ ಸ್ನೇಹಿತರನ್ನು ಭಟ್ಟರ ವಿರುದ್ಧ ಎತ್ತಿಕಟ್ಟುವುದನ್ನೇ ಮತ್ತು ಅವರನ್ನು ತಪ್ಪುದಾರಿಗೆ ಎಳೆಯುವುದನ್ನೇ ಜೋಶಿಯವರು ಕಾಯಕ ಮಾಡಿಕೊಂಡರು. ತಾಳಮದ್ದಳೆ ಮೇಲೆ ಭಟ್ಟರು ಆಕ್ರಮಣ ಮಾಡುತ್ತಿzರೆ ಎಂಬ ರೀತಿಯಲ್ಲಿ ಎಡೆ ಬೊಬ್ಬೆ ಹೊಡೆಯ ಲಾರಂಭಿಸಿದರು.
‘ಭಟ್ಟರಿಗೆ ತಾಳಮದ್ದಳೆಯ ಬಗ್ಗೆ ಏನು ಗೊತ್ತು?’ ಎಂದು ಅಸಂಬದ್ಧ ಮತ್ತು ಧಾರ್ಷ್ಟ್ಯದ ಪ್ರಶ್ನೆ ಗಳನ್ನು ಕೇಳಲಾರಂಭಿಸಿದರು. ಅದಕ್ಕೆ ಪ್ರತಿಕ್ರಿಯೆಯಾಗಿ ಭಟ್ಟರು, ‘ಇದು ಐಟಮ್‌ಸಾಂಗ್ ಡಾನ್ಸರ್ ಗಳಂತಿರುವ ಕೆಲವು ತಾಳಮದ್ದಳೆ ಅರ್ಥಧಾರಿಗಳನ್ನು ತಿರಸ್ಕರಿಸುವ ಕಾಲ’ ಎಂಬ ಲೇಖನ ಬರೆದರು. ಅದರಲ್ಲಿ ಭಟ್ಟರು ತಾಳಮದ್ದಳೆ ಕಲೆಯ ಶ್ರೇಷ್ಠತೆಯನ್ನು ಅದ್ಭುತವಾಗಿ ಕಟ್ಟಿಕೊಟ್ಟರು.
ಅಂತಾರಾಷ್ಟ್ರೀಯ ರಾಜತಾಂತ್ರಿಕ ಮಾತುಕತೆಗಿಂತ ತಾಳಮದ್ದಳೆ ಶ್ರೇಷ್ಠವಾದುದು ಎಂದು ಬರೆದರು. ಆ ಲೇಖನದಲ್ಲಿ ಶೇ.99ರಷ್ಟು ಭಾಗ ತಾಳಮದ್ದಳೆಯ ಉತ್ತಮ ಸಂಗತಿಗಳ ಬಗ್ಗೆ ಇತ್ತು. ತಾಳಮದ್ದಳೆ ಕಲಾಪ್ರಕಾರಕ್ಕೆ ಭೂಷಣಪ್ರಾಯರಾದ ಹದಿನೈದು ಮಂದಿಯ ಹೆಸರನ್ನು ಆ ಲೇಖನ ದಲ್ಲಿ ಪ್ರಸ್ತಾಪಿಸುತ್ತಾ ಭಟ್ಟರು, ಪ್ರಭಾಕರ ಜೋಶಿಯವರ ಹೆಸರನ್ನೂ ಬರೆದರು ಮತ್ತು ಆ ಲೇಖನ ದಲ್ಲಿ ಪ್ರಭಾಕರ ಜೋಶಿಯವರ ಫೋಟೋವನ್ನೂ ಹಾಕಿದರು.
ಜೋಶಿಯವರ ಬಗ್ಗೆ ದ್ವೇಷವಿದ್ದಿದ್ದರೆ ಭಟ್ಟರು, ಅವರ (ಜೋಶಿ) ಹೆಸರನ್ನು ಮತ್ತು ಫೋಟೋ ವನ್ನು ಪ್ರಕಟಿಸುತ್ತಿರಲಿಲ್ಲ. ಆದರೆ ಜೋಶಿ ಮತ್ತು ಅವರ ಸಂಗಡಿಗರಿಗೆ ಅದ್ಯಾವ ಉತ್ತಮ ಅಂಶ ಗಳೂ ಕಾಣಲಿಲ್ಲ. ಕೇವಲ ‘ಐಟಮ್‌ಸಾಂಗ್ ಡಾನ್ಸರ್’ ಎಂಬುದಷ್ಟೇ ಕಂಡಿತು. ಹಾಗೆಂದು ಭಟ್ಟರು ‘ಐಟಮ್‌ಸಾಂಗ್ ಡಾನ್ಸರ್’ ಎಂದು ಯಾರನ್ನೂ ಹೆಸರಿಸಿರಲಿಲ್ಲ. ಆಗಲೂ ಕೆಲ ಅರ್ಥಧಾರಿಗಳು ಹೆಗಲು ಮುಟ್ಟಿಕೊಂಡರು!
ಅದಾದ ಬಳಿಕ ಭಟ್ಟರು ತಮ್ಮ ಪತ್ರಿಕೆಯಲ್ಲಿ ತಾಳಮದ್ದಳೆ ಕಲೆಯ ಕುರಿತು ಮುಕ್ತ ಸಂವಾದಕ್ಕೆ ತಮ್ಮ ಪತ್ರಿಕೆಯ ಪುಟಗಳನ್ನು ತೆರೆದಿಟ್ಟರು. ಪರ-ವಿರೋಧದ ಲೇಖನಗಳಿಗೆ ಸ್ವಾಗತ ಎಂದು ಹೇಳಿದರು. ಯಾರು ಬೇಕಾದರೂ ಬರೆಯಬಹುದು ಎಂದು ದಿನವೂ ಪ್ರಕಟಣೆ ನೀಡಿದರು. ಹದಿನೈ ದಕ್ಕೂ ಹೆಚ್ಚು ಜನ ತಮ್ಮ ಅಭಿಪ್ರಾಯಗಳನ್ನು ಬರೆದರು. ಜೋಶಿಯವರು ಈ ಅವಕಾಶ ವನ್ನು ಸಮರ್ಥವಾಗಿ ಬಳಸಿಕೊಳ್ಳಬಹುದಿತ್ತು.
‘ಐಟಮ್‌ಸಾಂಗ್ ಡಾನ್ಸರ್’ ಲೇಖನಕ್ಕೆ ಪ್ರತಿಕ್ರಿಯಿಸಬೇಕಿತ್ತು. ತಾಳಮದ್ದಳೆಯನ್ನು ಸರಿಯಾದ perspective ನಲ್ಲಿ ಹೇಗೆ ಗ್ರಹಿಸಬೇಕು ಎಂಬ ಬಗ್ಗೆ ತಮ್ಮ ವಿದ್ವತ್‌ಪೂರ್ಣ ಲೇಖನವನ್ನು ಬರೆಯ ಬಹುದಿತ್ತು. ಅವರಂತೆಯೇ, ಉಮಾಕಾಂತ ಭಟ್ಟ, ಉಜಿರೆ ಅಶೋಕ ಭಟ್ಟ, ವಾಸುದೇವ ರಂಗ ಭಟ್ಟ ಸೇರಿದಂತೆ ವಿಷಯ ಪರಿಣತರು ಆ ಚರ್ಚೆಯಲ್ಲಿ ಭಾಗವಹಿಸಬಹುದಾಗಿತ್ತು.
ಅದು ಸರಿಯಾದ ಮಾರ್ಗವೂ ಆಗಿತ್ತು. ಆದರೆ ಅವರೆಲ್ಲರೂ ಪಲಾಯನವಾದಕ್ಕೆ ಶರಣಾದರು. ಯಾರೂ ಚರ್ಚೆಗೆ ಬರಲೇ ಇಲ್ಲ. ಅದಕ್ಕೆ ವ್ಯತಿರಿಕ್ತವಾಗಿ ಅವರೆಲ್ಲ ಪತ್ರಿಕಾಗೋಷ್ಠಿ ಕರೆದು ಬಿಟ್ಟರು. ಮತ್ತೊಮ್ಮೆ ಅರ್ಥಧಾರಿಗಳೆಲ್ಲ ಜೋಶಿಯವರು ತೋಡಿದ ಖೆಡ್ಡಾಕ್ಕೆ ಬಿದ್ದುಬಿಟ್ಟರು.
ಜೋಶಿಯವರ ಬಗ್ಗೆ ಬರೆದ ಒಂದು ಸಾಲಿನ ಭಟ್ಟರ ಸ್ಕಾಚ್ ಉತ್ತರಕ್ಕೂ, ತಾಳಮದ್ದಳೆ ಕಲೆಗೂ, ಅರ್ಥಧಾರಿಗಳಿಗೂ, ಸಂಬಂಧವೇ ಇರಲಿಲ್ಲ. ಅದು ಉಳಿದ ಅರ್ಥಧಾರಿಗಳಿಗೆ ಅನ್ವಯಿಸದ ವಿಷಯವಾಗಿತ್ತು. ಆದರೆ ಅವರೆಲ್ಲರನ್ನೂ ಜೋಶಿಯವರು ತಮ್ಮ ಪರವಾಗಿ ಕವಚವಾಗಿ ಬಳಸಿ ಕೊಂಡುಬಿಟ್ಟರು.
ತಮ್ಮ ಮೇಲಿನ ಟೀಕೆಯನ್ನು ಅವರು ತಾಳಮದ್ದಳೆಯ ವಿರುದ್ಧದ ಆಕ್ರಮಣ ಎಂದು ಸಹವರ್ತಿ ಗಳ ಮುಂದೆ ಬಿಂಬಿಸಿಬಿಟ್ಟರು. ತಮಾಷೆ ಅಂದ್ರೆ ಈ ಅರ್ಥಧಾರಿಗಳೆಲ್ಲ ‘ಹನಿಟ್ರ್ಯಾಪ್’ ಆಗಿಬಿಟ್ಟರು. ಒಂದು ಪದ, ಒಂದು ನಡೆ, ಒಂದು ಘಟನೆ ಬಗ್ಗೆ ತಾಳಮದ್ದಳೆ ಪ್ರಸಂಗದಲ್ಲಿ ತಾಸುಗಟ್ಟಲೆ ವ್ಯಾಖ್ಯಾ ನಿಸುವ ಅರ್ಥಧಾರಿಗಳಿಗೆ ತಾವು ಟ್ರಾ ಪ್ ಆಗುತ್ತಿದ್ದೇವೆ ಎಂಬುದು ಗೊತ್ತಾಗದೇ ಹೋದುದು ಮಾತ್ರ ಆಶ್ಚರ್ಯವೇ ಸರಿ.
ತಮಗೂ, ಭಟ್ಟರಿಗೂ, ಅವರ ಭಟ್ಟರ ಸ್ಕಾಚ್ ಉತ್ತರಕ್ಕೂ, ತಾಳಮದ್ದಳೆಗೂ, ಒಂದಕ್ಕೊಂದು ಸಂಬಂಧವೇ ಇಲ್ಲ ಎಂಬುದು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ ಆ ಹದಿನಾಲ್ಕು ಮಂದಿ ಅರ್ಥಧಾರಿಗಳಿಗೆ ಗೊತ್ತಾಗುವ ಹೊತ್ತಿಗೆ ಕಾಲ ಮಿಂಚಿ ಹೋಗಿತ್ತು. ಜೋಶಿಯವರು ಅವರೆಲ್ಲರ ನ್ನೂ ಹೊಂಡಕ್ಕೆ ಕೆಡವಿದ್ದಲ್ಲದೇ, ಅವರ ವಿಶ್ವಾಸಕ್ಕೆ ದ್ರೋಹ ಎಸಗಿದ್ದರು.
“ನೀವು ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಕೋರ್ಟಿಗೆ ಹೋಗುತ್ತೇವೆ" ಎಂದು ವಿಶ್ವೇಶ್ವರ ಭಟ್ಟರಿಗೆ ಧಮಕಿ ಹಾಕುವ ರೀತಿಯಲ್ಲಿ ಆ ಎಲ್ಲ ಹದಿನಾಲ್ಕು ಮಂದಿ ಪತ್ರಿಕಾಗೋಷ್ಠಿಯಲ್ಲಿ ಹೂಂಕರಿಸಿ ಬಿಟ್ಟರು. ಭಟ್ಟರು ಇವೆಲ್ಲ ಘಟನೆಗಳು ನಡೆಯುವಾಗ ಮಜಾ ತೆಗೆದುಕೊಳ್ಳುತ್ತಿದ್ದಿರಬಹುದು. ‘ಭಟ್ಟರ್ ಸ್ಕಾಚ್’ ಅಂಕಣದಲ್ಲಿ ತಾಳಮದ್ದಳೆಯ ಅಬ್ಬರ ಮಾತ್ರ ದಿನವೂ ಮುಂದುವರಿಯುತ್ತಿತ್ತು.
ಅಷ್ಟಕ್ಕೂ ‘ಭಟ್ಟರ್ ಸ್ಕಾಚ್’ ಅಂಕಣದಲ್ಲಿ ಭಟ್ಟರು ಜೋಶಿ, ಅಶೋಕ ಭಟ್ಟ ಮತ್ತು ಉಮಾಕಾಂತ ಭಟ್ಟರ (ಎರಡು-ಮೂರನೆಯವರು ಅವರ ಹೇಳಿಕೆಯನ್ನು ಖಂಡಿಸಿದ್ದಕ್ಕಾಗಿ) ಹೊರತಾಗಿ ಬೇರೆ ಯಾರನ್ನೂ ಟೀಕಿಸಿರಲಿಲ್ಲ. ಆದರೂ ಆ ಹದಿನಾಲ್ಕು ಮಂದಿ ಉಡುಪಿಯ ‘ಯಕ್ಷಗಾನ ಕಲಾರಂಗ’ ದಲ್ಲಿ ‘ಸತಿಯೊಡನೆ ಸಹಗಮನ’ಕ್ಕೆ ಯಾಕೆ ಮುಂದಾದರೋ?! ಇದೊಂದು avoidabale issue ಆಗಿತ್ತು. ಕೆರೆತವಾಗಿದ್ದು ಜೋಶಿಯವರಿಗೆ, ಆದರೆ ಮುಲಾಮು ಮೆತ್ತಿಕೊಂಡಿದ್ದು ಆ ಹದಿನಾಲ್ಕು ಮಂದಿ! ಅಲ್ಲಿಗೆ ಜೋಶಿಯವರು ಇವರೆಲ್ಲರನ್ನೂ ದಾರಿತಪ್ಪಿಸಿದ್ದು ದಿಟವಾಗಿತ್ತು.
ಈ ಮಧ್ಯೆ ಭಟ್ಟರು, ‘ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಯಾಕಂದರೆ ನಾನು ಯಾವ ತಪ್ಪನ್ನೂ ಮಾಡಿಲ್ಲ. ಬೇಕಾದರೆ ಕೋರ್ಟಿಗೆ ಹೋಗಿ, ಅದಕ್ಕೂ ಮುನ್ನ ಬಹಿರಂಗ ಚರ್ಚೆಗೆ ಬನ್ನಿ’ ಎಂದು ಹೇಳಿಬಿಟ್ಟರು. ಅರ್ಥಧಾರಿಗಳಿಗೆ ಈಗ ಉಭಯಸಂಕಟ. ಜೋಶಿಯವರ ಗೇಮ್‌ಪ್ಲಾನ್ ಏನು ಎಂಬುದು ಅವರಿಗೆಲ್ಲ ಈಗ ತಡವಾಗಿಯಾದರೂ ಗೊತ್ತಾಗಿದೆ.
ಅವರೆಲ್ಲ ಈಗ ಪ್ರಸಂಗ ಮುಗಿದ ಬಳಿಕ ಕಣ್ಣುಜ್ಜಿಕೊಳ್ಳುವಂತೆ ಎಚ್ಚರಗೊಂಡಂತಿದೆ. ಒಬ್ಬ ನಿಜ ವಾದ ವಿದ್ವಾಂಸ ಅಥವಾ ಕಲಾವಿದ ಟೀಕೆಗಳಿಗೆ ಉತ್ತರಿಸಬೇಕಾದದ್ದು ತನ್ನ ಕಲೆಯ ಮೂಲಕವೇ ಹೊರತು, ಪತ್ರಿಕಾಗೋಷ್ಠಿ ನಡೆಸಿ ಜಗಳಾಡುವುದರ ಮೂಲಕವಲ್ಲ.
‘ಮಾತಿನ ಮಲ್ಲರು’ ಎಂದು ಕರೆಸಿಕೊಳ್ಳುವ ಅರ್ಥಧಾರಿಗಳು, ಒಂದು ಸಣ್ಣ ಪ್ರಶ್ನೋತ್ತರದ ಏಟಿಗೆ ಈ ಪರಿ ತತ್ತರಿಸಿಹೋದದ್ದು, ಬಹಿರಂಗವಾಗಿ ಬೆತ್ತಲಾದದ್ದು, ಅವರ ವ್ಯಕ್ತಿತ್ವದ ಟೊಳ್ಳುತನವನ್ನು ಮತ್ತು ಬಾಲಿಶತನವನ್ನು ಜಗಜ್ಜಾಹೀರು ಮಾಡಿದೆ. ಇಷ್ಟಾಗಿಯೂ ಕಟ್ಟಕಡೆಯದಾಗಿ ನಮಗೆಲ್ಲ ಕಾಡುವ ಪ್ರಶ್ನೆ ಅಂದ್ರೆ- ‘ಅಂಥವರಿಗೆ ಪ್ರಭಾಕರ ಜೋಶಿ ಅಂತಾರೆ!’ ಎಂದು ಭಟ್ಟರು ‘ಭಟ್ಟರ್ ಸ್ಕಾಚ್’ನಲ್ಲಿ ಬರೆದಿದ್ದು ಯಾಕೆ? ಇದನ್ನು ಭಟ್ಟರೇ ಹೇಳಬೇಕು. ಆಗ ಅಸಲಿ ಸಂಗತಿ ಗೊತ್ತಾಗುತ್ತದೆ. ಪಿಕ್ಚರ್ ಅಭಿ ಬಾಕಿ ಹೈ!