ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Roopa Gururaj Column: ರಾಮಚರಿತ ಮಾನಸ: ರಾವಣನ ಸಭೆಯಲ್ಲಿ ರಾಮ ಭಕ್ತ ಹನುಮಂತ

ಸೀತೆಯ ಅಪ್ಪಣೆ ಪಡೆದು ಹಣ್ಣುಗಳನ್ನು ತಿನ್ನಲು ಆರಂಭಿಸಿದ ಹನುಮಂತನು, ನೋಡ ನೋಡು ತ್ತಿದ್ದಂತೆಯೇ ಅಶೋಕವನವನ್ನೇ ರಣರಂಗವನ್ನಾಗಿ ಬದಲಿಸಿದನು. ದೊಡ್ಡ ದೊಡ್ಡ ಮರಗಳನ್ನು ಕಿತ್ತೆಸೆದು, ರಾವಣನ ಹೆಮ್ಮೆಯ ವನವನ್ನು ಧ್ವಂಸಗೊಳಿಸಿದನು. ಇದನ್ನು ತಡೆಯಲು ಬಂದ ಸಾವಿರಾರು ಕಿಂಕರರು ಮತ್ತು ಪ್ರಹಸ್ತನ ಪುತ್ರ ಜಾಂಬುಮಾಲಿಯನ್ನು ಹನುಮಂತನು ಕ್ಷಣಾರ್ಧ ದಲ್ಲಿ ಮಣ್ಣು ಮುಕ್ಕಿಸಿದನು.

ರಾಮಚರಿತ ಮಾನಸ: ರಾವಣನ ಸಭೆಯಲ್ಲಿ ರಾಮ ಭಕ್ತ ಹನುಮಂತ

-

ಒಂದೊಳ್ಳೆ ಮಾತು

ಅಶೋಕವನದಲ್ಲಿ ಜಗನ್ಮಾತೆ ಸೀತೆಯ ದರ್ಶನ ಪಡೆದ ಹನುಮಂತನಿಗೆ ಒಂದು ಕ್ಷಣ ನೆಮ್ಮದಿಯ ನಿಟ್ಟುಸಿರು ಬಿಟ್ಟಂತಾಯಿತು. ತಾಯಿಯ ಆಶೀರ್ವಾದ ಪಡೆದ ಹನುಮಂತನಿಗೆ ಅತೀವ ಹಸಿವು ಕಾಣಿಸಿಕೊಂಡಿತು. ಆದರೆ ಆ ಹಸಿವು ಕೇವಲ ಹೊಟ್ಟೆಗೆ ಸಂಬಂಧಿಸಿದ್ದಲ್ಲ, ಅಧರ್ಮದ ನೆಲೆ ವೀಡಾದ ಲಂಕೆಯ ಅಹಂಕಾರವನ್ನು ಮರ್ದಿಸುವ ಹಸಿವಾಗಿತ್ತು ಅದು.

ಸೀತೆಯ ಅಪ್ಪಣೆ ಪಡೆದು ಹಣ್ಣುಗಳನ್ನು ತಿನ್ನಲು ಆರಂಭಿಸಿದ ಹನುಮಂತನು, ನೋಡ ನೋಡು ತ್ತಿದ್ದಂತೆಯೇ ಅಶೋಕವನವನ್ನೇ ರಣರಂಗವನ್ನಾಗಿ ಬದಲಿಸಿದನು. ದೊಡ್ಡ ದೊಡ್ಡ ಮರಗಳನ್ನು ಕಿತ್ತೆಸೆದು, ರಾವಣನ ಹೆಮ್ಮೆಯ ವನವನ್ನು ಧ್ವಂಸಗೊಳಿಸಿದನು. ಇದನ್ನು ತಡೆಯಲು ಬಂದ ಸಾವಿರಾರು ಕಿಂಕರರು ಮತ್ತು ಪ್ರಹಸ್ತನ ಪುತ್ರ ಜಾಂಬುಮಾಲಿಯನ್ನು ಹನುಮಂತನು ಕ್ಷಣಾರ್ಧ ದಲ್ಲಿ ಮಣ್ಣು ಮುಕ್ಕಿಸಿದನು.

ಸುದ್ದಿ ಕೇಳಿದ ರಾವಣನು ಕ್ರೋಧದಿಂದ ಕೆಂಡವಾದನು. ವಾನರನನ್ನು ಬಂಧಿಸಲೆಂದು ತನ್ನ ಸಾಹಸಿಪುತ್ರ ಅಕ್ಷಯ ಕುಮಾರನನ್ನು ಕಳುಹಿಸಿದನು. ಅಕ್ಷಯ ಕುಮಾರನು ದಿವ್ಯರಥದ ಮೇಲೆ ಕುಳಿತು, ಅಹಂಕಾರದಿಂದ ಬಿಲ್ಲು ಹೂಡಿ ಬಾಣಗಳ ಮಳೆಯನ್ನೇ ಹರಿಸಿದನು. ಆದರೆ ಹನುಮಂತನಿಗೆ ಆ ಬಾಣಗಳು ಕೇವಲ ಹೂವಿನಂತೆ ಕಂಡವು. ಹನುಮಂತನು ಒಂದು ಭೀಕರ ಅಟ್ಟಹಾಸ ಮಾಡುತ್ತಾ ಆಕಾಶಕ್ಕೆ ಜಿಗಿದನು. ಗರ್ಜಿಸುತ್ತಾ ಅಕ್ಷಯ ಕುಮಾರನ ರಥದ ಮೇಲೆ ಬಿದ್ದು ಅದನ್ನು ಚೂರುಚೂರು ಮಾಡಿದನು. ಆ ಪ್ರಸಂಗವನ್ನು ತುಳಸೀದಾಸರು ಹೀಗೆ ವರ್ಣಿಸುತ್ತಾರೆ:

ಕಪಿ ಅಚ್ಛಯಕುಮಾರಹಿ ಮಾರಾ |

ಲಹಪಟ ಚಪಟ ಘಾಲಿ ಮಹಿ ಪಾರಾ ||

ಇದನ್ನೂ ಓದಿ: Roopa Gururaj Column: ರಾಮಚರಿತ ಮಾನಸ: ಹನುಮನಿಗೆ ಆಶೋಕವನದಲ್ಲಿ ಸೀತೆಯ ದರ್ಶನ

ಹನುಮಂತನು ಅಕ್ಷಯ ಕುಮಾರನನ್ನು ಹಿಡಿದು ಬಲವಾಗಿ ನೆಲಕ್ಕೆ ಅಪ್ಪಳಿಸಿ ಸಂಹರಿಸಿದನು. ತನ್ನ ಮಗನ ಸಾವಿನಿಂದ ರಾವಣನು ಶೋಕ ಮತ್ತು ಕೋಪದ ಸುಳಿಯಲ್ಲಿ ಸಿಲುಕಿದನು. ಕೊನೆಗೆ ಮೇಘನಾದನು (ಇಂದ್ರಜಿತು) ರಂಗಪ್ರವೇಶ ಮಾಡಿದನು. ಭೀಕರ ಯುದ್ಧದ ನಂತರ ಇಂದ್ರಜಿತುವು ಬ್ರಹ್ಮಾಸವನ್ನು ಪ್ರಯೋಗಿಸಿದನು. ಹನುಮಂತನಿಗೆ ಬ್ರಹ್ಮಾಸ್ತ್ರವನ್ನು ವಿಫಲಗೊಳಿಸುವ ಶಕ್ತಿಯಿ ದ್ದರೂ, ಬ್ರಹ್ಮದೇವನ ಮೇಲಿನ ಗೌರವಕ್ಕಾಗಿ ಮತ್ತು ರಾವಣನನ್ನು ನೇರವಾಗಿ ಎದುರಿಸುವ ಉದ್ದೇಶ ದಿಂದ ಆ ಅಸಕ್ಕೆ ಶರಣಾದನು.

ರಾಕ್ಷಸರು ಹನುಮಂತನನ್ನು ನಾಗಪಾಶದಿಂದ ಕಟ್ಟಿ, ಬೀದಿಗಳಲ್ಲಿ ಎಳೆದಾಡುತ್ತಾ ರಾವಣನ ಸಭೆಗೆ ಕರೆತಂದರು.ರಾವಣನ ಸಭೆಯು ಇಡೀ ವಿಶ್ವದ ಸಂಪತ್ತಿನಿಂದ ಜಗಮಗಿಸುತ್ತಿತ್ತು. ದೇವತೆಗಳೂ ರಾವಣನಿಗೆ ಹೆದರಿ ಕೈಮುಗಿದು ನಿಂತಿದ್ದರು.

ಅಂಥ ಭಯಾನಕ ಸಭೆಯೊಳಗೆ ಹನುಮಂತನು ಬಂದಿಯಾಗಿದ್ದರೂ ಅವನ ಮುಖದಲ್ಲಿ ಕಿಂಚಿ ತ್ತೂ ಭಯವಿರಲಿಲ್ಲ. ಬದಲಾಗಿ, ಸಿಂಹದ ಎದುರು ನಿಂತ ಮತ್ತೊಂದು ಸಿಂಹದಂತೆ ಗಾಂಭೀರ್ಯ ವಿತ್ತು. ರಾವಣನು ಅಟ್ಟಹಾಸದಿಂದ “ಎಲೈ ವಾನರನೇ, ಯಾರು ನೀನು? ಯಾರ ಬಲದಿಂದ ನೀನು ನನ್ನ ಪುತ್ರನನ್ನು ಕೊಂದೆ ಮತ್ತು ನನ್ನ ವನವನ್ನು ಹಾಳು ಮಾಡಿದೆ?" ಎಂದನು.

ಆಗ ಹನುಮಂತನು ನಿರ್ಭಯದಿಂದ ರಾವಣನ ಕಣ್ಣಲ್ಲಿ ಕಣ್ಣಿಟ್ಟು, “ರಾವಣನೇ ಕೇಳು, ಯಾರ ಬಲದಿಂದ ಈ ಇಡೀ ಬ್ರಹ್ಮಾಂಡವು ಸೃಷ್ಟಿಯಾಗಿದೆಯೋ, ಯಾರ ಆಜ್ಞೆಯಿಂದ ನೀನು ಈ ಜಗತ್ತನ್ನು ಆಳುತ್ತಿದ್ದೀಯೋ, ಆ ಪರಬ್ರಹ್ಮ ಶ್ರೀರಾಮಚಂದ್ರನ ದೂತ ನಾನು. ನಿನಗೆ ಸಾವನ್ನು ಹತ್ತಿರಕೆ ಕರೆತರುತ್ತಿರುವ ಕಾಲದೂತ ನಾನು" ಎಂದನು. ಹನುಮಂತನ ಾತುಗಳಲ್ಲಿ ಕಿಂಚಿತ್ತೂ ಅಹಂಕಾರವಿರಲಿಲ್ಲ, ಬದಲಾಗಿ ಸತ್ಯದ ತೇಜಸ್ಸಿತ್ತು. “ನೀನು ಎಷ್ಟೇ ಬಲಿಷ್ಠನಾದರೂ ಸೀತಾದೇವಿ ಯನ್ನು ಅಪಹರಿಸುವ ಮೂಲಕ ನಿನ್ನ ಸರ್ವನಾಶಕ್ಕೆ ನೀನೇ ಅಡಿಪಾಯ ಹಾಕಿಕೊಂಡಿದ್ದೀಯಾ.

ಇನ್ನೂ ಕಾಲ ಮಿಂಚಿಲ್ಲ, ಅಹಂಕಾರ ಬಿಟ್ಟು ರಾಮನ ಪಾದಗಳಿಗೆ ಶರಣಾಗು" ಎಂದು ಹನುಮಂತ ಹಿತವಚನ ನೀಡಿದನು. ಸಂಕಷ್ಟದ ಸಮಯದಲ್ಲಿ, ಶತ್ರುವಿನ ಸಭೆಯಲ್ಲಿ ಒಬ್ಬ ವ್ಯಕ್ತಿ ಹೇಗೆ ಧೈರ್ಯ ದಿಂದಿರಬೇಕು ಮತ್ತು ಸ್ಥಿತಪ್ರಜ್ಞನಾಗಿರಬೇಕು ಎಂಬುದಕ್ಕೆ ಹನುಮಂತನ ಈ ಪ್ರಸಂಗವೇ ಸಾಕ್ಷಿ. ಸಜ್ಜನರು ಸಾವಿಗೂ ಹೆದರದೆ ಸತ್ಯವನ್ನು ಹೇಳುತ್ತಾರೆ ಎಂಬುದು ಇಲ್ಲಿ ಸಾಬೀತಾಯಿತು. ರಾವಣನ ದರ್ಪದ ಮುಂದೆ ಹನುಮಂತನ ಭಕ್ತಿ ಶಕ್ತಿಯಾಗಿ ಎದ್ದು ನಿಂತಿತ್ತು.

ನಾವು ಸರಿಯಾದ ದಾರಿಯಲ್ಲಿ ನಡೆಯುವಾಗ, ನಮ್ಮಲ್ಲಿ ಯಾವುದೇ ಅಳುಕು ಇರುವುದಿಲ್ಲ. ಯಾವ ಸ್ಥಳದಲ್ಲಿ ಯಾರ ಮುಂದೆ ಬೇಕಾದರೂ ನಿಂತು, ಅಧಿಕಾರಕ್ಕೆ ಅಂಜದೆ, ಅವರ ಸಂಪತ್ತನ್ನು ಕಂಡು ಬೆರಗಾಗದೆ ನಮ್ಮತನವನ್ನು ಉಳಿಸಿಕೊಳ್ಳುವ ಸ್ಥಿತಪ್ರಜ್ಞತೆ ನಮ್ಮಲ್ಲಿ ಇರುತ್ತದೆ. ನಾವು ಮತ್ತೊಬ್ಬರ ಹಣ, ಅಧಿಕಾರ, ಉಪಕಾರದ ಹಂಗಿಗೆ ಬೀಳದಿದ್ದಾಗ ಪ್ರಪಂಚದ ಯಾವ ಮೂಲೆಯಲ್ಲಿದ್ದರೂ ತಲೆಯೆತ್ತಿ ಬದುಕಬಹುದು.