Roopa Gururaj Column: ರಾಮಚರಿತ ಮಾನಸ: ಹನುಮಂತ - ಲಂಕಿಣಿಯ ಪ್ರಸಂಗ
ಹನುಮಂತ ಶಾಂತನಾಗಿದ್ದರೂ ತನ್ನ ಕಾರ್ಯಕ್ಕೆ ಅಡ್ಡಿಯಾದವರನ್ನು ಸುಮ್ಮನೆ ಬಿಡುವವನಲ್ಲ. ಅವಳು ಒಬ್ಬ ಸ್ತ್ರೀ ಎಂಬ ಕಾರಣಕ್ಕೆ ಹನುಮಂತನು ತನ್ನ ಸಂಪೂರ್ಣ ಬಲವನ್ನು ಬಳಸಲಿಲ್ಲ. ಕೇವಲ ತನ್ನ ಎಡಗೈ ಮುಷ್ಟಿಯಿಂದ ಅವಳಿಗೆ ಒಂದು ಸಣ್ಣ ಏಟನ್ನು ನೀಡಿದನು. ಆ ವಜ್ರಸಮಾನ ವಾದ ಏಟಿನ ತೀವ್ರತೆಗೆ ಲಂಕಿಣಿಯು ರಕ್ತವನ್ನು ಕಾರುತ್ತಾ ಮೂರ್ಛೆ ಹೋಗಿ ಕೆಳಗೆ ಬಿದ್ದಳು. ಕ್ಷಣಾರ್ಧದಲ್ಲಿ ಅವಳ ಅಹಂಕಾರವೆಲ್ಲ ಮಣ್ಣು ಪಾಲಾಯಿತು.
-
ಒಂದೊಳ್ಳೆ ಮಾತು
ರಾಮಕಾರ್ಯಕ್ಕಾಗಿ ಸಮುದ್ರವನ್ನು ಲಂಘಿಸಿದ ಹನುಮಂತನು, ಸೂರ್ಯನು ಅಸ್ತಮಿಸುವ ವೇಳೆಗೆ ಲಂಕೆಯ ತೀರವನ್ನು ತಲುಪಿದನು. ಲಂಕೆಯ ವೈಭವವನ್ನು ಕಂಡ ಹನುಮಂತನಿಗೆ ಆಶ್ಚರ್ಯ ವಾಯಿತು. ಚಿನ್ನದ ಗೋಡೆಗಳು, ರತ್ನಖಚಿತ ಮಹಲುಗಳು ಹೀಗೆ ವೈಭವದಿಂದ ಕೂಡಿದ ಲಂಕೆಯು ರಾಕ್ಷಸರ ಕಾವಲಿನಿಂದಾಗಿ ಅಷ್ಟೇ ಭದ್ರವಾಗಿತ್ತು. ಇದನ್ನೆ ನೋಡಿ ರಾತ್ರಿಯ ಸಮಯದಲ್ಲಿ ಸೂಕ್ಷ್ಮ ರೂಪವನ್ನು ಧರಿಸಿ ಲಂಕೆಯನ್ನು ಪ್ರವೇಶಿಸಲು ಹನುಮಂತನು ನಿರ್ಧರಿಸಿದನು.
ಸಣ್ಣ ಸೊಳ್ಳೆಯ ಗಾತ್ರವನ್ನು ಧರಿಸಿ ಅವನು ದ್ವಾರದ ಮೂಲಕ ಒಳಗೆ ಹೋಗಲು ಪ್ರಯತ್ನಿಸಿದಾಗ, ಲಂಕೆಯ ರಕ್ಷಕಿಯಾದ ‘ಲಂಕಿಣಿ’ ಅವನನ್ನು ತಡೆದಳು.ಅವಳು ವಿಕಟವಾಗಿ ನಗುತ್ತಾ, “ಎಲೈ ಪ್ರಾಣಿಯೇ, ನೀನು ಯಾರು? ನನ್ನನ್ನು ವಂಚಿಸಿ ಲಂಕೆಯೊಳಗೆ ಹೋಗಲು ಪ್ರಯತ್ನಿಸುತ್ತಿರುವೆ!
ಇಲ್ಲಿನ ದ್ವಾರಪಾಲಕಿ ನಾನು ಎಂಬುದು ನಿನಗೆ ತಿಳಿಯಲಿಲ್ಲವೇ? ನನ್ನನ್ನು ಮೀರಿ ಇಲ್ಲಿ ಯಾರಿಗೂ ಪ್ರವೇಶವಿಲ್ಲ. ನೀನು ಕಳ್ಳನಂತೆ ಹೊಂಚು ಹಾಕುತ್ತಿರುವೆ, ಈಗಲೇ ನಿನ್ನನ್ನು ಸಂಹರಿಸಿ ಭಕ್ಷಿಸುತ್ತೇನೆ" ಎಂದು ಗರ್ಜಿಸಿದಳು. ಅವಳ ಮಾತುಗಳಲ್ಲಿ ಅಧರ್ಮದ ಲಂಕೆಯನ್ನು ಕಾಯುವ ಅಹಂಕಾರವಿತ್ತು. ತಾನು ಬಲಿಷ್ಠೆ ಎಂಬ ಮದವಿತ್ತು.
ಇದನ್ನೂ ಓದಿ: Roopa Gururaj Column: ರಾಮಚರಿತ ಮಾನಸ: ಹನುಮಂತನಿಗೆ ಸುರಸಾ ಪರೀಕ್ಷೆ
ಹನುಮಂತ ಶಾಂತನಾಗಿದ್ದರೂ ತನ್ನ ಕಾರ್ಯಕ್ಕೆ ಅಡ್ಡಿಯಾದವರನ್ನು ಸುಮ್ಮನೆ ಬಿಡುವವನಲ್ಲ. ಅವಳು ಒಬ್ಬ ಸ್ತ್ರೀ ಎಂಬ ಕಾರಣಕ್ಕೆ ಹನುಮಂತನು ತನ್ನ ಸಂಪೂರ್ಣ ಬಲವನ್ನು ಬಳಸಲಿಲ್ಲ. ಕೇವಲ ತನ್ನ ಎಡಗೈ ಮುಷ್ಟಿಯಿಂದ ಅವಳಿಗೆ ಒಂದು ಸಣ್ಣ ಏಟನ್ನು ನೀಡಿದನು. ಆ ವಜ್ರಸಮಾನ ವಾದ ಏಟಿನ ತೀವ್ರತೆಗೆ ಲಂಕಿಣಿಯು ರಕ್ತವನ್ನು ಕಾರುತ್ತಾ ಮೂರ್ಛೆ ಹೋಗಿ ಕೆಳಗೆ ಬಿದ್ದಳು. ಕ್ಷಣಾರ್ಧದಲ್ಲಿ ಅವಳ ಅಹಂಕಾರವೆಲ್ಲ ಮಣ್ಣು ಪಾಲಾಯಿತು.
ಸ್ವಲ್ಪ ಸಮಯದ ನಂತರ ಪ್ರಜ್ಞೆ ಮರಳಿದಾಗ ಅವಳ ಅಂತರಂಗದಲ್ಲಿ ಮಹತ್ತರವಾದ ಬದಲಾವಣೆಯಾಗಿತ್ತು. ಹನುಮಂತನ ದೈವಿಕ ಸ್ಪರ್ಶದಿಂದ ಅವಳೊಳಗಿನ ತಾಮಸ ಗುಣಗಳು ಅಳಿದುಹೋಗಿದ್ದವು. ಅವಳಿಗೆ ಸತ್ಯದ ದರ್ಶನವಾಯಿತು. ಅವಳು ವಿನಯದಿಂದ ಕೈಮುಗಿದು ಹನುಮಂತನಿಗೆ ಹೇಳಿದಳು:
ತಾತ ಸ್ವರ್ಗ ಅಪಬರ್ಗ ಸುಖ ಧರಿಯ ತುಲಾ ಏಕ ಅಂಗ |
ತುಲ ನ ತಾಹಿ ಸಕಲ ಮಿಲಿ ಜೋ ಸುಖ ಲವ ಸತಸಂಗ ||
ಭಾವಾರ್ಥ: ಎಲೈ ಮಹಾನುಭಾವನೇ ಕೇಳು, ಸ್ವರ್ಗದ ಸುಖ ಮತ್ತು ಮೋಕ್ಷದ ಸುಖಗಳನ್ನು ತಕ್ಕಡಿಯ ಒಂದು ತಟ್ಟೆಯಲ್ಲಿಟ್ಟು, ಇನ್ನೊಂದು ತಟ್ಟೆಯಲ್ಲಿ ಕೇವಲ ಒಂದು ಕ್ಷಣದ ‘ಸತ್ಸಂಗ’ ದಿಂದ (ಸಜ್ಜನರ ಸಹವಾಸ) ಸಿಗುವ ಸುಖವನ್ನು ಇಟ್ಟರೆ, ಆ ಸತ್ಸಂಗದ ಸುಖವೇ ಮಿಗಿಲಾದದ್ದು. ಮಿಕ್ಕೆಲ್ಲ ಸುಖಗಳೂ ಇದಕ್ಕೆ ಸಾಟಿಯಲ್ಲ.
ಲಂಕಿಣಿಯು ಮುಂದುವರಿದು ಹೇಳಿದಳು, “ಬ್ರಹ್ಮದೇವನು ಈ ಹಿಂದೆ ಲಂಕೆಯನ್ನು ತೊರೆಯು ವಾಗ ನನಗೆ ಒಂದು ಗುಟ್ಟನ್ನು ಹೇಳಿದ್ದನು- ‘ಯಾವಾಗ ಒಬ್ಬ ವಾನರನ ಏಟಿನಿಂದ ನೀನು ನೆಲಕ್ಕೆ ಬೀಳುತ್ತೀಯೋ, ಆಗ ರಾಕ್ಷಸ ಕುಲದ ನಾಶ ಹತ್ತಿರವಿದೆಯೆಂದು ತಿಳಿ’ ಎಂದು. ಇಂದು ನಿನ್ನ ದರ್ಶನದಿಂದ ನನ್ನ ಪಾಪಗಳೆಲ್ಲ ಪರಿಹಾರವಾಗಿವೆ.
ಸಜ್ಜನರಾದ ನಿಮ್ಮಂಥವರ ಭೇಟಿಯಾದ ಮೇಲೆ ನನಗೆ ಸಾವಿನ ಭಯವಿಲ್ಲ. ಅಧರ್ಮದ ಈ ಲಂಕೆ ಯಲ್ಲಿ ನಿನಗೆ ರಾಮಕಾರ್ಯ ಮಾಡಲು ಯಾವುದೇ ಅಡೆತಡೆಯಾಗದಂತೆ ನಾನು ಹರಸುತ್ತೇನೆ. ನೀನು ಸಂತೋಷದಿಂದ ಒಳಹೋಗಿ ಸೀತಾದೇವಿಯನ್ನು ಹುಡುಕು".
ಹೀಗೆ, ಅಲ್ಲಿಯವರೆಗೆ ಅಧರ್ಮವನ್ನು ರಕ್ಷಿಸುತ್ತಿದ್ದ ಲಂಕಿಣಿಯು ಹನುಮಂತನೆಂಬ ಸಜ್ಜನನ ಸಂಪರ್ಕಕ್ಕೆ ಬಂದ ತಕ್ಷಣ ಜ್ಞಾನಿಯಾಗಿ ಬದಲಾದಳು. ಹನುಮಂತನು ಅವಳನ್ನು ಕೊಲ್ಲಲಿಲ್ಲ, ಬದಲಾಗಿ ದಂಡನೆಯ ಮೂಲಕ ಅವಳ ಕಣ್ಣು ತೆರೆಸಿ ಸನ್ಮಾರ್ಗಕ್ಕೆ ತಂದನು. ಇದುವೇ ಸತ್ಸಂಗದ ಶಕ್ತಿ. ಒಬ್ಬ ಸಜ್ಜನನ ಭೇಟಿ ಎಂಥ ಕ್ರೂರ ಮನಸ್ಸನ್ನೂ ಕ್ಷಣಾರ್ಧದಲ್ಲಿ ಪರಿವರ್ತಿಸಬಲ್ಲದು ಎಂಬುದಕ್ಕೆ ಈ ಪ್ರಸಂಗವೇ ಸಾಕ್ಷಿ.
ಪ್ರತಿಯೊಂದು ತಪ್ಪಿಗೂ ಶಿಕ್ಷೆಯೇ ಪರಿಹಾರವಾಗಬಾರದು. ಕೆಲವೊಮ್ಮೆ ಮಾತಿನಿಂದಲೂ ಅನೇಕರ ಮನಸ್ಥಿತಿಯನ್ನು ಬದಲಾಯಿಸಬಹುದು. ಜನ್ಮದ್ತ ಸಂಸ್ಕಾರ, ಬೆಳೆದು ಬಂದ ವಾತಾವರಣದ ಪ್ರಭಾವ ಮುಂತಾದ ಕಾರಣಗಳಿಂದಾಗಿ ಕೆಲವರಿಗೆ ಬದುಕಿನಲ್ಲಿ ಸಕಾರಾತ್ಮಕ ಮತ್ತು ಆರೋಗ್ಯಕರ ದೃಷ್ಟಿಕೋನಗಳೇ ಇರುವುದಿಲ್ಲ.
ಅಂಥವರು ಉತ್ತಮ ವಿಚಾರಗಳನ್ನು ಕೇಳಿದಾಗ, ಸುಸಂಸ್ಕೃತ ನಡವಳಿಕೆಗಳನ್ನು ನೋಡಿದಾಗ ತಿದ್ದಿಕೊಂಡಿರುವ ಅನೇಕ ಉದಾಹರಣೆಗಳಿವೆ. ನಮ್ಮ ಹಿರಿಯರು ಸಾಮ, ದಾನ, ಭೇದ, ದಂಡ ಎಂಬ ನಾಲ್ಕು ರೀತಿಯ ಪರಿಹಾರಗಳನ್ನು ಸೂಚಿಸಿರುವುದು ಈ ಕಾರಣದಿಂದಲೇ. ಉಗುರಿನಿಂದ ಹೋಗುವುದಕ್ಕೆ ಕೊಡಲಿ ಬಳಸಬಾರದು; ಮಾತುಗಳಿಗೆ ಅವಕಾಶವಿದ್ದಾಗ ಶಿಕ್ಷೆ ಸಲ್ಲದು ಎಂಬುದನ್ನು ಮರೆಯದಿರೋಣ...