Pramod Mohan Hegde Column: ಸಂಸ್ಕೃತ ಅಂದರೆ ಭಾಷೆಯಷ್ಟೇ ಅಲ್ಲ, ಸಂಸ್ಕೃತಿಯ ಪ್ರತಿಬಿಂಬ
ಇಂದಿನ ಡಿಜಿಟಲ್ ಮಾಧ್ಯಮದ ಯುಗದಲ್ಲಿ ಸಂಸ್ಕೃತ ಕಲಿಕೆ ಅತ್ಯಂತ ಸುಲಭ ಹಾಗೂ ಸರಳ ವಾಗಿದ್ದು, ಕೃತಕ ಬುದ್ಧಿಮತ್ತೆ (ಎಐ) ಮತ್ತು ಪ್ರೋಗ್ರಾಮಿಂಗ್ ರಂಗಕ್ಕೂ ಸಂಸ್ಕೃತವು ಅತ್ಯಂತ ಸೂಕ್ತ ಹಾಗೂ ಹತ್ತಿರದ ಭಾಷೆಯಾಗಿದೆ ಎಂಬುದನ್ನು ನಾಸಾದ ವಿಜ್ಞಾನಿ ರಿಕ್ ಬ್ರಿಕ್ಸ್ ಸೇರಿದಂತೆ ಹಲವು ಸಂಶೋಧಕರು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ.
-
ಸಂಸ್ಕೃತೋತ್ಸವ
ಪ್ರಮೋದ ಮೋಹನ ಹೆಗಡೆ
‘ವಿಶ್ವ ಸಂಸ್ಕೃತ ದಿನ’ವನ್ನು ಪ್ರಾಚೀನ ಭಾಷೆಯಾದ ಸಂಸ್ಕೃತದ ಮಹತ್ವ ಸಾರಲು ಶ್ರಾವಣ ಪೂರ್ಣಿಮೆಯಂದು (ಈ ವರ್ಷ ಆ.28) ಆಚರಿಸಲಾಗುತ್ತದೆ. ಈ ವರ್ಷ ‘ಸಂಸ್ಕೃತ: ಸಂಪ್ರದಾಯ ದಲ್ಲಿ ಬೇರೂರಿದೆ, ಜಾಗತಿಕ ದೃಷ್ಟಿಕೋನ ಹೊಂದಿದೆ’ ಎಂಬ ಧ್ಯೇಯವಾಕ್ಯದೊಂದಿಗೆ ಇದನ್ನು ಆಚರಿಸ ಲಾಗುತ್ತಿದೆ. ಈ ಭಾಷೆ ತನ್ನ ಸಾಂಪ್ರದಾಯಿಕ ಗಡಿಗಳನ್ನು ಮೀರಿ, ಆಧುನಿಕ ತಂತ್ರಜ್ಞಾನ ಹಾಗೂ ವಿಜ್ಞಾನದ ರಂಗದಲ್ಲಿ ಹೊಸ ಸಂಚಲನವನ್ನು ಮೂಡಿಸುತ್ತಿದೆ.
ಒಂದು ಕಾಲದಲ್ಲಿ ಸಂಸ್ಕೃತವೆಂದರೆ ಕೇವಲ ಹಳೆಯ ಮಂತ್ರಗಳು, ದೇವಸ್ಥಾನದ ಪೂಜೆಗಳು ಮತ್ತು ಶಾಲೆಯಲ್ಲಿ ಅಂಕಗಳಿಸಲು ಮಾತ್ರ ಓದುವ, ಕೇವಲ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಭಾಷೆ ಎಂಬ ಭಾವನೆಯಿತ್ತು. ಆದರೆ, ಇತ್ತೀಚೆಗೆ ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ಗಳಲ್ಲಿ ಯುವಕರು ಸಂಸ್ಕೃತದಲ್ಲಿ ರ್ಯಾಪ್ ಸಂಗೀತ ಮಾಡುತ್ತಿರುವುದನ್ನು ಮತ್ತು ಸಂಸ್ಕೃತದ ಮಾತ ನಾಡುವ ಬೈಕರ್‌ಗಳ ತಂಡವೊಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿರುವುದನ್ನು ನೋಡಿದಾಗ ಆ ಕಲ್ಪನೆಯೇ ಸಂಪೂರ್ಣ ಬದಲಾಗುತ್ತಿದೆ.
ಹೌದು, ಕಳೆದ ನಲವತ್ತು ವರ್ಷಗಳಲ್ಲಿ ಯೋಗ ಮತ್ತು ಆಯುರ್ವೇದ ಜಗತ್ತಿನಾದ್ಯಂತ ಹೇಗೆ ಮನೆ ಮಾತಾಯಿತೋ, ಇದೀಗ ಮುಂದಿನ ಸರದಿ ಸಂಸ್ಕೃತದ್ದು ಎಂಬುದು ಸ್ಪಷ್ಟವಾಗುತ್ತಿದೆ. ಭಾರತೀಯ ಪರಂಪರೆಯ ಈ ಜೀವಾಳದ ಭಾಷೆಯು ತನ್ನ ಸಾಂಪ್ರದಾಯಿಕ ಗಡಿಗಳನ್ನು ಮೀರಿ, ಆಧುನಿಕ ತಂತ್ರeನ ಹಾಗೂ ವಿeನದ ರಂಗದಲ್ಲಿ ಹೊಸ ಸಂಚಲನವನ್ನು ಮೂಡಿಸುತ್ತಿದೆ.
ಇಂದಿನ ಡಿಜಿಟಲ್ ಮಾಧ್ಯಮದ ಯುಗದಲ್ಲಿ ಸಂಸ್ಕೃತ ಕಲಿಕೆ ಅತ್ಯಂತ ಸುಲಭ ಹಾಗೂ ಸರಳ ವಾಗಿದ್ದು, ಕೃತಕ ಬುದ್ಧಿಮತ್ತೆ (ಎಐ) ಮತ್ತು ಪ್ರೋಗ್ರಾಮಿಂಗ್ ರಂಗಕ್ಕೂ ಸಂಸ್ಕೃತವು ಅತ್ಯಂತ ಸೂಕ್ತ ಹಾಗೂ ಹತ್ತಿರದ ಭಾಷೆಯಾಗಿದೆ ಎಂಬುದನ್ನು ನಾಸಾದ ವಿಜ್ಞಾನಿ ರಿಕ್ ಬ್ರಿಕ್ಸ್ ಸೇರಿದಂತೆ ಹಲವು ಸಂಶೋಧಕರು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: Vishwanath Hegde Column: ನಮ್ಮ ಊಟದ ತಟ್ಟೆಗೆ ಕಾವಲು ಯಾರು ?
ಇಂದು ಯುವಜನರು ಕೇವಲ ಗ್ರಂಥಗಳಿಗಷ್ಟೇ ಸೀಮಿತಗೊಳ್ಳದೆ, ಡಿಜಿಟಲ್ ಕಂಟೆಂಟ್ ಕ್ರಿಯೇಷನ್ ಹಾಗೂ ತಂತ್ರeನ ಆಧಾರಿತ ಕಲಿಕೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಈ ಭಾಷೆಯ ಆಧುನಿಕ ವಿಕಾಸಕ್ಕೆ ಸಾಕ್ಷಿಯಾಗಿದೆ. ಸಂಸ್ಕೃತ ಭಾಷೆಯು ಕೇವಲ ಒಂದು ಭಾಷೆಯಾಗಿರದೆ, ವಿಶ್ವದ ಅರ್ಧ ದಷ್ಟು ಭಾಷೆಗಳಿಗೆ ಅಡಿಪಾಯವನ್ನು ಹಾಕಿದ ಒಂದು ಅದ್ಭುತವಾಗಿದೆ.
ಸಾವಿರಾರು ಮೈಲಿಗಳು ಮತ್ತು ವರ್ಷಗಳ ಅಂತರವಿದ್ದರೂ, ಇಂಗ್ಲಿಷ್‌ನಲ್ಲಿ ‘ಮದರ್’ (Mother), ಲ್ಯಾಟಿನ್ ನಲ್ಲಿ ‘ಮೇಟರ್’ (Mater), ಹಿಂದಿಯಲ್ಲಿ ‘ಮಾ’ (Ma), ಪರ್ಷಿಯನ್‌ನಲ್ಲಿ ‘ಮಾದರ್’ (Madar) ಮತ್ತು ಜರ್ಮನ್‌ನಲ್ಲಿ ‘ಮುತ್ತರ್’ (Mutter) ಎಂಬ ಪದಗಳು ಒಂದೇ ರೀತಿಯಲ್ಲಿ ಧ್ವನಿಸು ತ್ತವೆ. ಇದು ಕಾಕತಾಳೀಯವಲ್ಲ.
ರೋಮ್ ನಗರವು ಇನ್ನೂ ಮಣ್ಣಿನ ಗುಡಿಸಲುಗಳಾಗಿದ್ದ ಕಾಲದಲ್ಲಿಯೇ ಅಸ್ತಿತ್ವದಲ್ಲಿದ್ದ ಒಂದು ಪ್ರಾಚೀನ ಭಾಷೆಯ ಕುರುಹುಗಳು. ಸಂಸ್ಕೃತವು ತನ್ನ ಸುತ್ತಲಿನ ಭಾಷೆಗಳ ಮೇಲೆ ಪ್ರಭಾವ ಬೀರಿದ್ದಲ್ಲದೆ, ಇಂದು ಯಾರಿಗೂ ತಿಳಿದಿಲ್ಲದ ಅತ್ಯಂತ ಹಳೆಯ ಭಾಷೆಯೊಂದರ ರಚನೆಯನ್ನು ಸಂರಕ್ಷಿಸಿದೆ.
ಕಾಂಬೋಡಿಯಾದ ಅಂಕೋರ್ ವಾಟ್ ದೇವಾಲಯದ ಶಾಸನಗಳು ಸಂಸ್ಕೃತದಲ್ಲಿವೆ ಮತ್ತು ಥಾಯ್, ಖಮೇರ್, ಜಾವಾನೀಸ್ ಮತ್ತು ಟಿಬೆಟಿಯನ್‌ನಂತಹ ಭಾಷೆಗಳ ಲಿಪಿಗಳು ಸಂಸ್ಕೃತದಿಂದ ಪ್ರಭಾವಿತವಾಗಿವೆ. ಕಾಲಕ್ರಮೇಣ, ಸಾಮಾನ್ಯ ಜನರು ಮಾತನಾಡುವ ಪ್ರಾಕೃತ ಭಾಷೆಗಳು ಹಿಂದಿ, ಬಂಗಾಳಿ, ಮರಾಠಿ ಮುಂತಾದ ಆಧುನಿಕ ಭಾಷೆಗಳಾಗಿ ವಿಕಸನಗೊಂಡಾಗ, ಸಂಸ್ಕೃತವು ಹೆಚ್ಚು ವಿಧ್ಯುಕ್ತ ಮತ್ತು ಪಾಂಡಿತ್ಯಪೂರ್ಣ ಭಾಷೆಯಾಗಿ ಉಳಿಯಿತು.
ಲ್ಯಾಟಿನ್ ಭಾಷೆಯು ರೂಪಾಂತರಗೊಂಡು ಬೇರೆ ಭಾಷೆಗಳಾಗಿ ಮಾರ್ಪಟ್ಟರೆ, ಸಂಸ್ಕೃತವು ತನ್ನ ಮೂಲ ರೂಪದಲ್ಲಿಯೇ ಉಳಿದುಕೊಂಡು, ಇಂದು ಸುಮಾರು 4 ಬಿಲಿಯನ್ ಜನರು ಮಾತನಾಡು ವ ಭಾಷೆಗಳಿಗೆ ಅಡಿಪಾಯವಾಗಿ ಅಚ್ಚರಿಯ ರೀತಿಯಲ್ಲಿ ಜೀವಂತವಾಗಿದೆ. ಈ ಭಾಷೆಯ ಮಹತ್ವ ಕೇವಲ ಸಾಹಿತ್ಯಿಕ ವಾಗಿರದೆ, ಮಾನವನ ನರವಿಜ್ಞಾನದ ಮೇಲೂ ಗಾಢ ಪರಿಣಾಮ ಬೀರುತ್ತದೆ ಎಂಬುದನ್ನು ಜೇಮ್ಸ ಹರ್ಟ್ಜೆಲ್ ಎಂಬ ನ್ಯೂರೋಲಾಜಿ ಪ್ರತಿಪಾದಿಸಿದ ‘ಸ್ಯಾನ್ಸ್ಕ್ರಿಟ್ ಎಫೆಕ್ಟ್’ ( Sanskrit Effect) ಸ್ಪಷ್ಟಪಡಿಸುತ್ತದೆ.
ಸಂಸ್ಕೃತ ಶ್ಲೋಕಗಳ ಕಂಠಪಾಠ, ವ್ಯಾಕರಣದ ನಿಯಮಗಳು ಮತ್ತು ಸ್ಪಷ್ಟ ಉಚ್ಚಾರಣೆಯು ಮಾನವನ ಮೆದುಳಿನ ಶಕ್ತಿಯನ್ನು, ಜ್ಞಾಪಕ ಶಕ್ತಿಯನ್ನು ಹಾಗೂ ವಿಶ್ಲೇಷಣಾತ್ಮಕ ಸಾಮರ್ಥ್ಯ ವನ್ನು ಅಪಾರವಾಗಿ ಹೆಚ್ಚಿಸುತ್ತದೆ. ಇದೇ ನಿಟ್ಟಿನಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ಪ್ರತಿಷ್ಠಿತ ‘ನಿಮ್ಹಾ’ ಸಂಸ್ಥೆಯೊಂದಿಗೆ ಜಂಟಿಯಾಗಿ ಸಂಶೋಧನೆಯನ್ನು ಕೈಗೆತ್ತಿಕೊಂಡಿದ್ದು, ಪ್ರಾಥಮಿಕ ವರದಿಗಳು ಸಂಸ್ಕೃತ ಅಭ್ಯಾಸ ಮಾಡುವವರಲ್ಲಿ ಧನಾತ್ಮಕ ನರವಿಜ್ಞಾನದ ವ್ಯತ್ಯಾಸ ಗಳಿರುವುದನ್ನು ಖಚಿತಪಡಿಸಿವೆ.
ಜತೆಗೆ, ಮಹರ್ಷಿ ಪಾಣಿನಿಯ ‘ಅಷ್ಟಾಧ್ಯಾಯೀ’ ಮತ್ತು ಪಾತಂಜಲಿಯ ‘ಮಹಾಭಾಷ್ಯ’ ಸಂಸ್ಕೃತಕ್ಕೆ ಅತ್ಯಂತ ಗಟ್ಟಿಯಾದ ಮತ್ತು ಗಣಿತೀಯ ನಿಖರತೆಯುಳ್ಳ ಭಾಷಿಕ ಬುನಾದಿಯನ್ನು ನೀಡಿವೆ. ವಾಕ್ಯ ದಲ್ಲಿನ ಪದಗಳ ಜೋಡಣೆಯನ್ನು ಹೇಗೆ ಬದಲಾಯಿಸಿದರೂ ವಾಕ್ಯದ ಮೂಲ ಅರ್ಥ ಗಟ್ಟಿಯಾಗಿ ಉಳಿಯುತ್ತದೆ; ಉದಾಹರಣೆಗೆ ರಾಮಃ ವನಂ ಪ್ರತಿ ಗಚ್ಛತಿ ಎಂಬುದನ್ನು ಗಚ್ಛತಿ ರಾಮಃ ವನಂ ಪ್ರತಿ ಎಂದು ಯಾವ ಕ್ರಮದದರೂ ಬರೆದರೂ ಅರ್ಥದಲ್ಲಿ ವ್ಯತ್ಯಾಸವಾಗುವುದಿಲ್ಲ.
ಅತ್ಯಂತ ಸುದೀರ್ಘ ಹಾಗೂ ಸಂಕೀರ್ಣ ವಿಚಾರಗಳನ್ನು ಅತ್ಯಂತ ಚಿಕ್ಕದಾಗಿ ಹೇಳುವ ‘ಸೂತ್ರ’ ಶೈಲಿಯೇ ಸಂಸ್ಕೃತದ ವಿಶಿಷ್ಟ ಲಕ್ಷಣವಾಗಿದೆ ಎಂದು ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ. ಅಹಲ್ಯಾ ಶರ್ಮಾ ಅವರು ಹೆಚ್ಚಿನ ಮಾಹಿತಿ ನೀಡಿದರು. ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಮಾತನಾಡಬೇಕಾದರೆ, ಪ್ರಾಚೀನ ಭಾರತದ ವಿಜ್ಞಾನಿಗಳು ತಮ್ಮ ಸಂಶೋಧನೆಗಳನ್ನು ಸಂಸ್ಕೃತದ ದಾಖಲಿಸಿದ್ದಾರೆ ಎಂಬುದನ್ನು ಮರೆಯುವಂತಿಲ್ಲ.
ಆರ್ಯಭಟನ ‘ಆರ್ಯಭಟೀಯ’, ಭಾಸ್ಕರಾಚಾರ್ಯರ ‘ಲೀಲಾವತಿ’, ಸುಶ್ರುತನ ‘ಸುಶ್ರುತ ಸಂಹಿತೆ’ ಇವೆಲ್ಲವೂ ಇಂದಿನ ಆಧುನಿಕ ವಿಜ್ಞಾನಕ್ಕೆ ಅಡಿಪಾಯ ಹಾಕಿದ ಮಹಾನ್ ಗ್ರಂಥಗಳು. ಶೂನ್ಯದ ಕಲ್ಪನೆಯಿಂದ ಹಿಡಿದು, ತ್ರಿಕೋನಮಿತಿ, ಅತ್ಯಾಧುನಿಕ ಶಸ್ತ್ರಚಿಕಿತ್ಸೆ, ವಾಯುಯಾನ ರಹಸ್ಯಗಳು ಹಾಗೂ ಖಗೋಳಶಾಸ್ತ್ರದವರೆಗೆ ಎಲ್ಲವೂ ಸಂಸ್ಕೃತದ ಶ್ಲೋಕಗಳ ರೂಪದಲ್ಲಿಯೇ ಇವೆ.
ಅಂದರೆ, ಸಂಸ್ಕೃತವನ್ನು ಕಲಿಯುವುದು ಎಂದರೆ ಕೇವಲ ಒಂದು ಭಾಷೆಯನ್ನು ಕಲಿಯುವುದಲ್ಲ, ಬದಲಿಗೆ ಸಾವಿರಾರು ವರ್ಷಗಳ ಹಿಂದಿನ ಸುಧಾರಿತ ವೈಜ್ಞಾನಿಕ ತಂತ್ರಜ್ಞಾನದ ಭಂಡಾರವೊಂದರ ಬೀಗದ ಕೈಯನ್ನು ಪಡೆದುಕೊಂಡಂತೆ. ಭಾರತವನ್ನು ಹೊರತುಪಡಿಸಿ ಜಾಗತಿಕ ಮಟ್ಟದಲ್ಲಿ ಸಂಸ್ಕೃತಕ್ಕಿರುವ ಮನ್ನಣೆಯನ್ನು ನೋಡಿದರೆ ನಮಗೆ ನಿಜಕ್ಕೂ ಆಶ್ಚರ್ಯವಾಗದಿರದು.
ಜರ್ಮನಿ ದೇಶವು ದಶಕಗಳಿಂದ ಸಂಸ್ಕೃತ ಮತ್ತು ಭಾರತಶಾಸ್ತ್ರ ಅಧ್ಯಯನದಲ್ಲಿ ಮುಂಚೂಣಿ ಯಲ್ಲಿದೆ. ಜರ್ಮನಿಯ ಹೈಡೆಲ್ಬರ್ಗ್ ಸೇರಿದಂತೆ ಹದಿನಾಲ್ಕಕ್ಕೂ ಹೆಚ್ಚು ಪ್ರಮುಖ ವಿಶ್ವವಿದ್ಯಾಲಯ ಗಳಲ್ಲಿ ಸಂಸ್ಕೃತವನ್ನು ಅತ್ಯಂತ ಗಂಭೀರವಾಗಿ ಬೋಧಿಸಲಾಗುತ್ತಿದೆ. ಬ್ರಿಟನ್‌ನ ಆಕ್ಸ್ʼಫರ್ಡ್, ಕೇಂಬ್ರಿಡ್ಜ್ ಹಾಗೂ ಅಮೆರಿಕದ ಹಾರ್ವರ್ಡ್‌ನಂತಹ ಜಗತ್ತಿನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತ ವಿಭಾಗಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ.
ಅಲ್ಲಿನ ಸಂಶೋಧಕರು ನಮ್ಮ ಉಪನಿಷತ್ತುಗಳು, ವೇದಗಳು ಮತ್ತು ದಾರ್ಶನಿಕ ಗ್ರಂಥಗಳನ್ನು ಅಭ್ಯಾಸ ಮಾಡಿ, ಆಧುನಿಕ ಮನೋವಿಜ್ಞಾನ, ಕ್ವಾಂಟಮ್ ಫಿಸಿಕ್ಸ್ ಮತ್ತು ತತ್ವಶಾಸ್ತ್ರಕ್ಕೆ ಹೊಸ ಆಯಾಮಗಳನ್ನು ನೀಡುತ್ತಿದ್ದಾರೆ. ಜಗತ್ತಿನ ಮುಂದುವರಿದ ರಾಷ್ಟ್ರಗಳು ನಮ್ಮ ಭಾಷೆಯ ಮೌಲ್ಯ ವನ್ನು ಅರಿತು ಅದರ ಬೆನ್ನತ್ತಿರುವಾಗ, ಭಾರತೀಯರಾದ ನಾವು ಅದನ್ನು ನಿರ್ಲಕ್ಷಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಮೂಡುವುದು ಸಹಜ. ಕೃತಕ ಬುದ್ಧಿಮತ್ತೆಯ ಜತೆಗೆ ಕಂಪ್ಯೂ ಟೇಷನಲ್ ಲಿಂಗ್ವಿಸ್ಟಿಕ್ಸ್ ಮತ್ತು ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್ (NLP) ಕ್ಷೇತ್ರಗಳಲ್ಲಿ ಸಂಸ್ಕೃತದ ಪಾತ್ರ ವನ್ನು ಇಂದಿನ ತಂತ್ರಜ್ಞರು ವಿಸ್ತೃತವಾಗಿ ಅಧ್ಯಯನ ಮಾಡುತ್ತಿದ್ದಾರೆ.
ಪಾಣಿನಿಯ ‘ಅಷ್ಟಾಧ್ಯಾಯೀ’ ಕೇವಲ ವ್ಯಾಕರಣ ಗ್ರಂಥವಲ್ಲ, ಅದೊಂದು ನಿಖರವಾದ ಕಂಪ್ಯೂ ಟರ್ ಅಲ್ಗಾರಿದಮ್ ಇದ್ದಂತೆ ಎಂದು ಪಾಶ್ಚಿಮಾತ್ಯ ಗಣಕ ವಿಜ್ಞಾನಿಗಳು ಬಣ್ಣಿಸಿದ್ದಾರೆ. ಭಾಷೆ ಯೊಂದನ್ನು ಯಂತ್ರಗಳಿಗೆ ಅರ್ಥೈಸುವಾಗ ಎದುರಾಗುವ ಅತಿದೊಡ್ಡ ಸವಾಲೆಂದರೆ ‘ಅಸ್ಪಷ್ಟತೆ’. ಉದಾಹರಣೆಗೆ ಇಂಗ್ಲಿಷ್‌ನಲ್ಲಿ ಒಂದೇ ಪದಕ್ಕೆ ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಅರ್ಥ ಗಳಿರುತ್ತವೆ. ಆದರೆ ಸಂಸ್ಕೃತದ ಗಣಿತೀಯ ನಿಖರತೆ ಮತ್ತು ವಿಭಕ್ತಿ ಪ್ರತ್ಯಯಗಳ ನಿಯಮಬದ್ಧ ರಚನೆಯು ಇಂತಹ ಯಾವುದೇ ಅಸ್ಪಷ್ಟತೆಗೆ ಎಡೆಮಾಡಿಕೊಡುವುದಿಲ್ಲ.
ಹೀಗಾಗಿಯೇ ಮುಂದಿನ ಪೀಳಿಗೆಯ ಸೂಪರ್ ಕಂಪ್ಯೂಟರ್‌ಗಳ ಭಾಷಾ ವಿಶ್ಲೇಷಣೆಗೆ ಮತ್ತು ಹೊಸ ಪ್ರೋಗ್ರಾಮಿಂಗ್ ಭಾಷೆಗಳ ಸೃಷ್ಟಿಗೆ ಸಂಸ್ಕೃತವನ್ನು ಒಂದು ಅತ್ಯುತ್ತಮ ಮಾದರಿಯಾಗಿ ಬಳಸಿ ಕೊಳ್ಳುವ ನಿಟ್ಟಿನಲ್ಲಿ ವ್ಯಾಪಕ ಸಂಶೋಧನೆಗಳು ನಡೆಯುತ್ತಿವೆ. ಆಧುನಿಕ ಬದುಕಿನ ಅತಿ ದೊಡ್ಡ ಸಮಸ್ಯೆಯಾಗಿ ರುವ ಮಾನಸಿಕ ಒತ್ತಡವನ್ನು ನಿವಾರಿಸುವಲ್ಲಿಯೂ ಸಂಸ್ಕೃತದ ಪಾತ್ರವನ್ನು ಇಂದು ವೈದ್ಯಕೀಯ ಜಗತ್ತು ಗುರುತಿಸುತ್ತಿದೆ.
ಸಂಸ್ಕೃತದ ವರ್ಣಮಾಲೆಯ ಪ್ರತಿಯೊಂದು ಅಕ್ಷರವೂ ಮನುಷ್ಯನ ದೇಹದ ನಿರ್ದಿಷ್ಟ ನರಮಂಡಲಗಳ ಮೇಲೆ ಪ್ರಭಾವ ಬೀರುವಂತೆ ವೈಜ್ಞಾನಿಕವಾಗಿ ವಿನ್ಯಾಸಗೊಂಡಿದೆ. ಶ್ಲೋಕಗಳ ಉಚ್ಚಾರಣೆಯು ಉಸಿರಾಟದ ಗತಿಯನ್ನು ನಿಯಂತ್ರಿಸುತ್ತದೆ ಮತ್ತು ಮೆದುಳಿನಲ್ಲಿ ಆಲ್ಫಾ ಅಲೆ ಗಳನ್ನು ಪ್ರಚೋದಿಸಿ, ಮನಸಿಗೆ ಅಪಾರವಾದ ಪ್ರಶಾಂತತೆಯನ್ನು ಒದಗಿಸುತ್ತದೆ. ಇದನ್ನು ಇಂದಿನ ಕಾಲಘಟ್ಟದಲ್ಲಿ ‘ಸೌಂಡ್ ಥೆರಪಿ’ ಮತ್ತು ಕಂಪನ ಚಿಕಿತ್ಸೆ ಎಂದು ಕರೆಯಲಾಗುತ್ತಿದೆ.
ಇದು ವ್ಯಕ್ತಿಯಲ್ಲಿ ಏಕಾಗ್ರತೆ ಹೆಚ್ಚಿಸುವ ಜತೆಗೆ ನಕಾರಾತ್ಮಕ ಆಲೋಚನೆಗಳನ್ನು ದೂರ ಮಾಡಿ, ಭಾವನಾತ್ಮಕ ಸಮತೋಲನವನ್ನು ಕಾಪಾಡಲು ಸಹಾಯ ಮಾಡುತ್ತದೆ ಎನ್ನುವುದು ವೈಜ್ಞಾನಿಕ ವಾಗಿ ಸಾಬೀತಾಗಿದೆ. ಇಂದಿನ ಜಗತ್ತು ಎದುರಿಸುತ್ತಿರುವ ಅತಿದೊಡ್ಡ ಸವಾಲುಗಳಾದ ಜಾಗತಿಕ ತಾಪಮಾನ ಏರಿಕೆ ಮತ್ತು ಪರಿಸರ ನಾಶದಂತಹ ಸಮಸ್ಯೆಗಳಿಗೂ ಸಂಸ್ಕೃತ ಸಾಹಿತ್ಯದಲ್ಲಿ ಅದ್ಭುತ ವಾದ ಮಾರ್ಗದರ್ಶನವಿದೆ.
ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃ (ಭೂಮಿಯೇ ನನ್ನ ತಾಯಿ, ನಾನು ಆಕೆಯ ಪುತ್ರ) ಎಂಬ ಅಥರ್ವವೇದದ ಸಾಲುಗಳು ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುತ್ತವೆ. ಪ್ರಕೃತಿಯ ಪ್ರತಿ ಯೊಂದು ಅಂಶವನ್ನೂ ದೇವರೆಂದು ಪೂಜಿಸುವ, ಮರ-ಗಿಡ, ನದಿ-ಬೆಟ್ಟಗಳನ್ನು ಸಂರಕ್ಷಿಸುವ ಜ್ಞಾನವನ್ನು ಸಂಸ್ಕೃತ ಗ್ರಂಥಗಳು ಸಾವಿರಾರು ವರ್ಷಗಳ ಹಿಂದೆಯೇ ಜಗತ್ತಿಗೆ ಸಾರಿದ್ದವು. ಆಧುನಿಕ ಪರಿಸರ ವಿಜ್ಞಾನಿಗಳು ಇಂದು ಹೇಳುತ್ತಿರುವ ‘ಸುಸ್ಥಿರ ಅಭಿವೃದ್ಧಿ’ ಮತ್ತು ಪರಿಸರ ಸ್ನೇಹಿ ಬದುಕಿನ ಪರಿಕಲ್ಪನೆಗಳು ಸಂಸ್ಕೃತದ ಸುಭಾಷಿತಗಳಲ್ಲಿ ಹಾಗೂ ಪ್ರಾಚೀನ ಕೃತಿಗಳಲ್ಲಿ ಹಾಸು ಹೊಕ್ಕಾಗಿವೆ.
ಇದು ಇಂದಿನ ಯುವಜನತೆಗೆ ಪ್ರಕೃತಿಯೊಡನೆ ಸಾಮರಸ್ಯದಿಂದ ಬದುಕುವ ಪಾಠವನ್ನು ಕಲಿಸು ತ್ತದೆ. ಗಣಿತ ಮತ್ತು ತರ್ಕಶಾಸ್ತ್ರದ ದೃಷ್ಟಿಯಿಂದಲೂ ಸಂಸ್ಕೃತದ ಕೊಡುಗೆ ಅನನ್ಯವಾದದ್ದು. ಛಂದಸ್ಸುಗಳ ರಚನೆಯ ಬಗ್ಗೆ ವಿವರಿಸುವ ಪಿಂಗಲನ ‘ಛಂದಃಶಾಸ್ತ್ರ’ದಲ್ಲಿ ಇಂದಿನ ಕಂಪ್ಯೂಟರ್ ವಿಜ್ಞಾನದ ಮೂಲವಾದ ‘ಬೈನರಿ ಸಂಖ್ಯೆಗಳ’ (Binary Numbers) ಪದ್ಧತಿಯ ಮತ್ತು ‘ಫಿಬೊನಾಚಿ’ (Fibonacci) ಸರಣಿಯ ಆರಂಭಿಕ ಸುಳಿವುಗಳಿವೆ ಎಂದು ಆಧುನಿಕ ತಂತ್ರಜ್ಞರು ಗುರುತಿಸಿದ್ದಾರೆ.
ಸಂಕೀರ್ಣವಾದ ಗಣಿತದ ಸೂತ್ರಗಳನ್ನು ಮತ್ತು ಖಗೋಳಶಾಸ್ತ್ರದ ಲೆಕ್ಕಾಚಾರಗಳನ್ನು ಸುಲಭ ವಾಗಿ ನೆನಪಿಟ್ಟುಕೊಳ್ಳಲು ಹಾಗೂ ಬಾಯಿಂದ ಬಾಯಿಗೆ ನಿಖರವಾಗಿ ವರ್ಗಾಯಿಸಲು ಸಂಸ್ಕೃತದ ಶ್ಲೋಕಗಳ ಲಯಬದ್ಧ ರಚನೆ ಅದ್ಭುತವಾಗಿ ನೆರವಾಗುತ್ತಿತ್ತು. ಕೇವಲ ಭಾಷೆಯ ರಚನಾತ್ಮಕ ಶಕ್ತಿಯನ್ನು ಬಳಸಿಕೊಂಡು ಶೂನ್ಯ, ದಶಮಾಂಶ ಪದ್ಧತಿ ಹಾಗೂ ಗ್ರಹಗಳ ಚಲನೆಯಂತಹ ಬೃಹತ್ ವೈಜ್ಞಾನಿಕ ಜ್ಞಾನವನ್ನು ಶತಮಾನಗಳ ಕಾಲ ಸಂರಕ್ಷಿಸಿರುವುದು ಸಂಸ್ಕೃತದ ವೈಜ್ಞಾನಿಕತೆಗೆ ಹಿಡಿದ ಕನ್ನಡಿಯಾಗಿದೆ.
ಇದಲ್ಲದೆ, ಇಂದಿನ ಕಾರ್ಪೊರೆಟ್ ಜಗತ್ತು ಮತ್ತು ನಾಯಕತ್ವ ವಿಕಸನ ತರಬೇತಿಗಳಲ್ಲಿಯೂ ಸಂಸ್ಕೃತ ಸುಭಾಷಿತಗಳ ಬಳಕೆ ಹೆಚ್ಚಾಗುತ್ತಿದೆ. ಭಗವದ್ಗೀತೆಯ ‘ನಿಷ್ಕಾಮ ಕರ್ಮ’ ಸಿದ್ಧಾಂತದಿಂದ ಹಿಡಿದು ಪಂಚತಂತ್ರದ ನೀತಿಕಥೆಗಳವರೆಗೆ, ಸಂಸ್ಕೃತದಲ್ಲಿ ಅಡಗಿರುವ ಮ್ಯಾನೇಜ್ಮೆಂಟ್ ಸೂತ್ರ ಗಳನ್ನು ಇಂದು ಐಐಎಂ ಹಾಗೂ ಜಾಗತಿಕ ಬ್ಯುಸಿನೆಸ್ ಶಾಲೆಗಳಲ್ಲಿ ಬೋಧಿಸಲಾಗುತ್ತಿದೆ.
ಒತ್ತಡದ ಬದುಕಿನಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು, ಸವಾಲುಗಳನ್ನು ಸಮಚಿತ್ತ ದಿಂದ ಎದುರಿಸಲು ಮತ್ತು ವೃತ್ತಿಪರ ನೈತಿಕತೆಯನ್ನು ಕಾಪಾಡಿಕೊಳ್ಳಲು ಈ ಪ್ರಾಚೀನ ಭಾಷೆಯ ತತ್ವಗಳು ಅತ್ಯಂತ ಪ್ರಸ್ತುತವಾಗಿವೆ. ಸಂಸ್ಕೃತದ ಒಂದೊಂದು ಪದವೂ ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುವ ಅದ್ಭುತ ಶಕ್ತಿಯನ್ನು ಹೊಂದಿದೆ. ವಾಸ್ತವವಾಗಿ ಸಂಸ್ಕೃತವು ನಮ್ಮ ದೈನಂದಿನ ಜೀವನದ ಗಾಳಿಯ ಪ್ರವಹಿಸುತ್ತಿದೆ.
ನಾವು ಇಡುವ ಹೆಸರುಗಳು, ಭಾರತದ ಪುಣ್ಯ ನದಿಗಳ ಹೆಸರುಗಳು ಸಂಸ್ಕೃತದ ಮೂಲವನ್ನೇ ಹೊಂದಿದ್ದು, ಜೀವವಿಮಾ ನಿಗಮದ (ಎಲ್‌ಐಸಿ) ‘ಯೋಗಕ್ಷೇಮಂ ವಹಾಮ್ಯಹಮ’ ಅಥವಾ ಸುಪ್ರೀಂ ಕೋರ್ಟ್‌ನ ‘ಯತೋ ಧರ್ಮಸ್ತತೋ ಜಯಃ’ ಮುಂತಾದ ಸೂಕ್ತಿಗಳನ್ನು ಗಮನಿಸಿದರೆ ಪ್ರತಿಯೊಂದು ಪ್ರಮುಖ ಸಂಸ್ಥೆಯು ತನ್ನ ಧ್ಯೇಯವನ್ನು ಸಂಸ್ಕೃತದ ಮೂಲಕವೇ ಪ್ರಕಟಿಸಿರು ವುದು ವೇದ್ಯವಾಗುತ್ತದೆ.
ಇಂದಿನ ಕಾಲಘಟ್ಟದಲ್ಲಿ ಆಧುನಿಕ ಶಿಕ್ಷಣ ಕ್ಷೇತ್ರದಲ್ಲಿ ಸಂಸ್ಕೃತವನ್ನು ತಲುಪಿಸುವ ವಿಧಾನದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗುತ್ತಿದ್ದು, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು (www.ksu.ac.in) ಡಿಜಿಟಲ್ ಪ್ಲಾಟ್ʼಫಾರಂಗಳನ್ನು ಬಳಸಿಕೊಂಡು ಸಂಸ್ಕೃತ ಕಲಿಕೆಯನ್ನು ಮುಕ್ತಗೊಳಿಸಿದೆ. ಇಲ್ಲಿನ ‘ಮಾತೃಕೆಗಳ ಸಂಗ್ರಹ’ (Manuscript Museum) ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದ್ದು, ಅಪರೂಪದ ಓಲೆಗರಿಗಳನ್ನು ಸಂರಕ್ಷಿಸಲಾಗಿದೆ.