Vishwanath Hegde Column: ನಮ್ಮ ಊಟದ ತಟ್ಟೆಗೆ ಕಾವಲು ಯಾರು ?
ದೊಡ್ಡ ಬ್ರಾಂಡ್ ಆಗಿರಲಿ, ರಸ್ತೆ ಬದಿಯ ಅಂಗಡಿಯಾಗಿರಲಿ, ಐದು ನಕ್ಷತ್ರದ ಹೋಟೆಲ್ ಆಗಿರಲಿ, ಸಣ್ಣ ಹೋಟೆಲ್ ಆಗಿರಲಿ- ಬೆಲೆಯಲ್ಲಿ, ಸೇವೆಯಲ್ಲಿ ಮತ್ತು ವಾತಾವರಣದಲ್ಲಿ ವ್ಯತ್ಯಾಸ ಇರಬಹುದು; ಆದರೆ ಆಹಾರ ಸುರಕ್ಷತೆಯಲ್ಲಿ ಎರಡು ಮಾನದಂಡ ಇರಲು ಸಾಧ್ಯವಿಲ್ಲ. ಹೆಸರು ಫುಡ್ ಸೇಫ್ಟಿ ಸರ್ಟಿಫಿಕೇಟ್ ಅಲ್ಲ. ದುಬಾರಿ ಬೆಲೆ ಶುದ್ಧತೆಯ ಭರವಸೆಯೂ ಅಲ್ಲ.
-
ಹಿತಾಹಾರ
- ವಿಶ್ವನಾಥ್ ಹೆಗಡೆ
ಕೆಲವು ದಿನಗಳ ಹಿಂದೆ ಆರೋಗ್ಯ ಸ್ವಲ್ಪ ಕೈಕೊಟ್ಟಿತ್ತು. ಹೊಟ್ಟೆಯಲ್ಲಿ ಕಿರಿಕಿರಿ, ದೇಹವೂ ಎಂದಿ ನಂತಿರಲಿಲ್ಲ. ಕೊನೆಗೆ ವೈದ್ಯರ ಬಳಿ ಹೋಗಬೇಕಾಯಿತು. ವೈದ್ಯರಿಂದ ಬಂದ ಮೊದಲ ಪ್ರಶ್ನೆ- ನಿನ್ನೆ ಏನು ತಿಂದಿದ್ದೀರಿ? ಹೊರಗಡೆ ಏನಾದರೂ ತಿಂದಿರಾ? ಬೆಳಗ್ಗಿನಿಂದ ರಾತ್ರಿ ತನಕ ಏನೇನು ತಿಂದೆ ಎಂದು ನೆನಪಿಸಿಕೊಳ್ಳಲು ಶುರುಮಾಡಿದೆ. ಮನೆಯ ಊಟ, ಮಧ್ಯೆ ಕುಡಿದ ಚಹಾ, ಹೊರಗೆ ತಿಂದ ತಿಂಡಿ. ವೈದ್ಯರಿಗೆ ನನ್ನ ಹೊಟ್ಟೆಯ ಸಮಸ್ಯೆಗಿಂತ ಮೊದಲು ನನ್ನ ತಟ್ಟೆಯಲ್ಲಿ ಏನಿತ್ತು ಎನ್ನುವ ವರದಿ ಬೇಕಾಗಿತ್ತು!
ಆ ಕ್ಷಣದಲ್ಲಿ ಅದು ವೈದ್ಯರು ಸಾಮಾನ್ಯವಾಗಿ ಕೇಳುವ ಪ್ರಶ್ನೆಯಷ್ಟೇ ಎನಿಸಿತು. ನಂತರ ಆ ಪ್ರಶ್ನೆ ಮನಸ್ಸಿ ನಲ್ಲಿ ಉಳಿಯಿತು. ಆರೋಗ್ಯ ಕೆಟ್ಟಾಗ ಏನು ತಿಂದಿರಿ? ಎಂದು ಕೇಳಿಸಿಕೊಳ್ಳುವ ನಾವು, ಆರೋಗ್ಯ ವಾಗಿರುವಾಗ ನಾನು ಏನು ತಿನ್ನುತ್ತಿದ್ದೇನೆ ಎಂದು ಎಷ್ಟು ಬಾರಿ ಕೇಳಿಕೊಳ್ಳುತ್ತೇವೆ? ನಾನು ತಿಂದದ್ದು ಏನು ಎಂಬುದು ಗೊತ್ತು; ಆದರೆ ಅದರಲ್ಲಿ ನಿಜವಾಗಿ ಏನಿತ್ತು? ಅದು ಎಲ್ಲಿಂದ ಬಂದಿತ್ತು?
ಹಾಲು ಎಂದರೆ ಹಾಲೇ ಇರಬೇಕು, ತುಪ್ಪ ಎಂದರೆ ತುಪ್ಪವೇ ಇರಬೇಕು, ಪನೀರ್ ಎಂದರೆ ಹಾಲಿನಿಂದ ತಯಾರಿಸಿದ ಪನೀರ್ ಆಗಿರಬೇಕು- ಸಾಮಾನ್ಯ ಗ್ರಾಹಕನ ನಿರೀಕ್ಷೆ ಇಷ್ಟೇ. ಹೋಟೆಲ್ ನಲ್ಲಿ ದೋಸೆ ತಿನ್ನುವಾಗ ಬಳಸಿದ ಎಣ್ಣೆಯನ್ನು ಎಷ್ಟು ಬಾರಿ ಕಾಯಿಸಿದ್ದಾರೆ ಎಂದು ನಾವು ಕೇಳುವುದಿಲ್ಲ. ಚಾಟ್ಸ್ ತಿನ್ನುವಾಗ ಬಳಸಿದ ನೀರು ಎಲ್ಲಿಂದ ಬಂತು ಎಂದು ವಿಚಾರಿಸುವುದಿಲ್ಲ. ಸಿಹಿಯಲ್ಲಿರುವ ಬಣ್ಣ ಯಾವುದು ಎಂದು ಪರೀಕ್ಷಿಸುವ ಪ್ರಯೋಗಾಲಯ ನಮ್ಮ ಜೇಬಿನಲ್ಲಿಲ್ಲ.
ಇದನ್ನೂ ಓದಿ: Prof R G Hegde Column: ಜೆನ್ ಝೀಯನ್ನು ಸಂಭಾಳಿಸುವುದು ಹೇಗೆ ?
ಖಾದ್ಯಗಳ ಪಟ್ಟಿ ನೋಡುತ್ತೇವೆ, ಬೆಲೆ ನೋಡುತ್ತೇವೆ, ರುಚಿ ನೋಡುತ್ತೇವೆ; ಆದರೆ ಅದರ ಹಿಂದಿ ರುವ ಕಚ್ಚಾ ವಸ್ತುಗಳ ಖರೀದಿ, ಸಂಗ್ರಹಣೆ, ಖರೀದಿಯಿಂದ ಹಿಡಿದು ಆಹಾರದ ಸಿದ್ಧ ವಸ್ತುಗಳ ವರೆಗೆ ಅಥವಾ ನಿರ್ವಹಣೆ ನಮ್ಮ ಕಣ್ಣಿಗೆ ಕಾಣುವುದಿಲ್ಲ. ಹೀಗಾಗಿ ನಾವು ಹಣ ಕೊಟ್ಟು ಆಹಾರ ವನ್ನು ಮಾತ್ರ ಖರೀದಿಸುವುದಿಲ್ಲ; ಅದರ ಜೊತೆಗೆ ಇನ್ನೊಂದು ದೊಡ್ಡ ಸಂಗತಿಯನ್ನೂ ಸ್ವೀಕರಿಸುತ್ತೇವೆ- ನಂಬಿಕೆ.
ಆ ನಂಬಿಕೆಯನ್ನೇ ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಆಹಾರ ಸುರಕ್ಷತಾ ಕ್ರಮಗಳು ದೊಡ್ಡ ಚರ್ಚೆಗೆ ತಂದಿವೆ. ಅಲ್ಲಿನ ಆಹಾರ ಮತ್ತು ಔಷಧ ಆಡಳಿತ ಆಯುಕ್ತ ಐಎಎಸ್ ತುಕಾ ರಾಮ್ ಮುಂಢೆ ಅವರ ನೇತೃತ್ವದಲ್ಲಿ ಹೋಟೆಲ್‌ಗಳು, ಡೈರಿಗಳು, ಆಹಾರ ತಯಾರಿಕಾ ಘಟಕಗಳು ಮತ್ತು ವಿವಿಧ ಆಹಾರ ಉತ್ಪನ್ನಗಳ ಮೇಲೆ ತಪಾಸಣೆಗಳು ತೀವ್ರಗೊಂಡಿವೆ. ಜನರಿಗೆ ಸುರಕ್ಷಿತ ಆಹಾರ ದೊರಕುತ್ತಿದೆಯೇ? ಎಂಬುದು ಅವರು ಮುಂದಿಟ್ಟಿರುವ ಪ್ರಶ್ನೆ.
ಪ್ರಸಿದ್ಧ ರೆಸ್ಟೋರೆಂಟ್ ಒಂದರ ಕಿಚನ್‌ನ ಕೆಳಗೇ ಓಪನ್ ಚರಂಡಿ ಕಂಡಿದ್ದಾಗಿ ಮುಂಢೆ ಸಂದರ್ಶನವೊಂದರಲ್ಲಿ ಹೇಳಿರುವುದು ಅದಕ್ಕೆ ಉದಾಹರಣೆ. ದೊಡ್ಡ ಹೆಸರು, ದುಬಾರಿ ಖಾದ್ಯಗಳ ಪಟ್ಟಿ, ಸುಂದರ ವಾತಾವರಣ, ಉತ್ತಮ ಸ್ಥಳ- ಇವೆಲ್ಲ ನೋಡಿದಾಗ ಅಡುಗೆಮನೆಯೂ ಅಷ್ಟೇ ಉತ್ತಮವಾಗಿರುತ್ತದೆ ಎಂದು ನಾವು ಸಹಜವಾಗಿ ನಂಬುತ್ತೇವೆ. ಆದರೆ ಡೈನಿಂಗ್ ಟೇಬಲ್ ಮೇಲೆ ಬಿಳಿ ಬಟ್ಟೆ ಹಾಸಿರುವುದಕ್ಕಿಂತ ಕಿಚನ್‌ನಲ್ಲಿ ಏನು ನಡೆಯುತ್ತಿದೆ ಎಂಬುದೇ ನಮ್ಮ ಆರೋಗ್ಯಕ್ಕೆ ಮುಖ್ಯ.
ದೊಡ್ಡ ಬ್ರಾಂಡ್ ಆಗಿರಲಿ, ರಸ್ತೆ ಬದಿಯ ಅಂಗಡಿಯಾಗಿರಲಿ, ಐದು ನಕ್ಷತ್ರದ ಹೋಟೆಲ್ ಆಗಿರಲಿ, ಸಣ್ಣ ಹೋಟೆಲ್ ಆಗಿರಲಿ- ಬೆಲೆಯಲ್ಲಿ, ಸೇವೆಯಲ್ಲಿ ಮತ್ತು ವಾತಾವರಣದಲ್ಲಿ ವ್ಯತ್ಯಾಸ ಇರಬಹುದು; ಆದರೆ ಆಹಾರ ಸುರಕ್ಷತೆಯಲ್ಲಿ ಎರಡು ಮಾನದಂಡ ಇರಲು ಸಾಧ್ಯವಿಲ್ಲ. ಹೆಸರು ಫುಡ್ ಸೇಫ್ಟಿ ಸರ್ಟಿಫಿಕೇಟ್ ಅಲ್ಲ. ದುಬಾರಿ ಬೆಲೆ ಶುದ್ಧತೆಯ ಭರವಸೆಯೂ ಅಲ್ಲ.
ಈ ಕ್ರಮಗಳ ಪರಿಣಾಮ ಕೆಲವೆಡೆ ಪ್ರಯೋಗಾಲಯದ ವರದಿಯಲ್ಲಿ ಮಾತ್ರವಲ್ಲ, ಆಹಾರದ ಬಣ್ಣ ದಲ್ಲಿಯೂ ಕಾಣುತ್ತಿದೆ ಎನ್ನುವುದು ಕುತೂಹಲಕಾರಿ. ಹಿಂದೆ ಅತಿಯಾಗಿ ಕೆಂಪು, ಕಿತ್ತಳೆ ಅಥವಾ ಗುಲಾಬಿ ಬಣ್ಣಗಳಲ್ಲಿ ಕಾಣುತ್ತಿದ್ದ ಕೆಲವು ತಿಂಡಿಗಳು ಈಗ ಹೆಚ್ಚು ಸಹಜ ಬಣ್ಣಕ್ಕೆ ಮರಳುತ್ತಿವೆ. ಮಕ್ಕಳಿಗೆ ಎಷ್ಟು ಚೆನ್ನಾಗಿ ಬಣ್ಣ ಬಂದಿದೆ, ತೆಗೆದುಕೋ ಎಂದು ನಾವು ಹೇಳುತ್ತೇವೆ. ಆದರೆ ಆಹಾರದ ವಿಷಯದಲ್ಲಿ ಕಣ್ಣಿಗೆ ಹೆಚ್ಚು ಆಕರ್ಷಕವಾಗಿರುವುದೇ ದೇಹಕ್ಕೆ ಹೆಚ್ಚು ಒಳ್ಳೆಯದು ಎಂಬ ನಿಯಮವಿಲ್ಲ. ಬಣ್ಣ, ವಾಸನೆ ಮತ್ತು ಪ್ರೆಸೆಂಟೇಶನ್ ಗ್ರಾಹಕನನ್ನು ಸೆಳೆಯಬಹುದು. ಆದರೆ ಸುರಕ್ಷತೆ ಬಹಳ ಬಾರಿ ಕಣ್ಣಿಗೆ ಕಾಣದ ಗುಣ.
ಇದನ್ನು ಮಹಾರಾಷ್ಟ್ರದ ಸಮಸ್ಯೆ ಎಂದು ಬಿಟ್ಟು ಬಿಡಲು ಸಾಧ್ಯವಿಲ್ಲ. ಒಂದು ರಾಜ್ಯದಲ್ಲಿ ಉತ್ಪಾದನೆಯಾದ ಕಚ್ಚಾ ವಸ್ತು ಮತ್ತೊಂದು ರಾಜ್ಯದಲ್ಲಿ ಸಂಸ್ಕರಣೆಯಾಗಬಹುದು. ಅಲ್ಲಿಂದ ಮೂರನೇ ರಾಜ್ಯದ ಮಾರುಕಟ್ಟೆ ಅಥವಾ ಹೋಟೆಲ್ ತಲುಪಬಹುದು. ಒಂದು ಉತ್ಪನ್ನ ನಮ್ಮ ತಟ್ಟೆಗೆ ಬರುವ ಮೊದಲು ಎಷ್ಟು ಕೈ, ವಾಹನ, ಗೋದಾಮು ಮತ್ತು ಹೋಟೆಲ್‌ಗಳನ್ನು ದಾಟಿದೆ ಎಂಬುದು ನಮಗೆ ಗೊತ್ತಿರುವುದಿಲ್ಲ. ಇಂದು ಆಹಾರದ ಸರಪಳಿ ಮನೆಯ ಹಿತ್ತಲಿನಿಂದ ಅಡುಗೆ ಮನೆವರೆಗೆ ಇರುವ ಸಣ್ಣ ಪ್ರಯಾಣವಲ್ಲ; ಅದು ಕೆಲವೊಮ್ಮೆ ಸಾವಿರಾರು ಕಿಲೋಮೀಟರ್ ಗಳ ಪ್ರಯಾಣ. ಹಾಗಾಗಿ ಮುಂಬೈನಲ್ಲಿ ಎದ್ದ ಪ್ರಶ್ನೆ ಬೆಂಗಳೂರಿ ನಲ್ಲೂ ಎದ್ದೇಳಬೇಕು.
ನಮ್ಮಲ್ಲಿ ಆಹಾರದ ವಿಷಯ ಬಂದಾಗ ಶುದ್ಧವೇ? ಎಂಬ ಪ್ರಶ್ನೆ ಹೆಚ್ಚು ಕೇಳಿಬರುತ್ತದೆ. ಸುರಕ್ಷಿತವೇ? ಎಂಬ ಪ್ರಶ್ನೆ ಕಡಿಮೆ. ಎರಡೂ ಒಂದೇ ಅಲ್ಲ. ಹಾಲಿಗೆ ಅನಗತ್ಯ ಪದಾರ್ಥ ಬೆರೆಸಿದರೆ ಅದು ಕಲಬೆರಕೆಯ ಪ್ರಶ್ನೆ; ಆದರೆ ಸರಿಯಾದ ಹಾಲನ್ನೇ ಸರಿಯಾದ ತಾಪಮಾನದಲ್ಲಿ ಸಂಗ್ರಹಿಸದೆ ಹಾಳಾಗಲು ಬಿಟ್ಟರೆ ಅದು ಸುರಕ್ಷತೆಯ ಪ್ರಶ್ನೆ. ಪನೀರ್‌ನಲ್ಲಿ ಬೇರೆ ಪದಾರ್ಥ ಬೆರೆಸುವುದು ಒಂದು ಸಮಸ್ಯೆ; ಶುದ್ಧ ಪನೀರನ್ನೇ ತಪ್ಪಾದ ತಾಪಮಾನದಲ್ಲಿ ಗಂಟೆಗಟ್ಟಲೆ ಇಡುವುದು ಮತ್ತೊಂದು ಸಮಸ್ಯೆ. ಇದೇ ಮಾತು ಎಣ್ಣೆ, ಮಾಂಸ, ತರಕಾರಿ, ಸಿಹಿ, ಬೇಕರಿ ಉತ್ಪನ್ನ ಎಲ್ಲಕ್ಕೂ ಅನ್ವಯಿಸುತ್ತದೆ. ಅಸುರಕ್ಷತೆ ಕಣ್ಣಿಗೆ ಕಾಣದ ಅಪಾಯ.
ಇಲ್ಲಿಯೇ ಆಹಾರ ಸುರಕ್ಷತೆಯ ಇನ್ನೊಂದು ಮುಖ್ಯ ಪದರ ಬರುತ್ತದೆ- ಮೂಲದ ಆಯ್ಕೆ. ನಾವು ಆಹಾರವನ್ನು ಎಲ್ಲಿಂದ ಪಡೆಯುತ್ತಿದ್ದೇವೆ ಎಂಬುದೇ ಅದರ ಸುರಕ್ಷತೆಯ ಮೊದಲ ಹೆಜ್ಜೆ. ಉತ್ತಮ ಆಹಾರವನ್ನು ಕೊನೆಯ ಹಂತದಲ್ಲಿ ಪರೀಕ್ಷಿಸುವುದು ಅಗತ್ಯವೇ. ಆದರೆ ಅದಕ್ಕಿಂತ ಮುಖ್ಯ ವಾದುದು ಉತ್ತಮ ಮೂಲದಿಂದ ಪಡೆಯುವುದು. ಹಾಲನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ.
ಯಾವ ಪ್ರದೇಶದಿಂದ ಬಂತು? ಯಾವ ರೈತನಿಂದ ಸಂಗ್ರಹವಾಯಿತು? ಯಾವ ಸಂಗ್ರಹ ಕೇಂದ್ರ ತಲುಪಿತು? ಯಾವ ಪರೀಕ್ಷೆಗಳು ನಡೆದವು? ಎಷ್ಟು ಬೇಗ ಶೀತಲೀಕರಣ ಆಯಿತು? ಅಲ್ಲಿಂದ ಡೈರಿವರೆಗೆ ಕೋಲ್ಡ್ ಚೈನ್ ಹೇಗಿತ್ತು? ಇವೆಲ್ಲವೂ ಗುಣಮಟ್ಟದ ಭಾಗ. ಒಂದು ಭಾಗದಲ್ಲಿ ಸಮಸ್ಯೆ ಕಂಡುಬಂದರೆ ಅದನ್ನು ಮತ್ತೆ ಅದರ ಮೂಲದವರೆಗೆ ಹಿಂದಿರುಗಿ ಗುರುತಿಸಲು ಸಾಧ್ಯವಾಗಬೇಕು.
ಆದರೆ ಟ್ರೇಸಬಿಲಿಟಿಯನ್ನು ಕೇವಲ ಕಂಪ್ಯೂಟರ್ ಡೇಟಾ, ಕ್ಯುಆರ್ ಕೋಡ್, ಅಥವಾ ರಿಜಿಸ್ಟರ್‌ಗೆ ಸೀಮಿತಗೊಳಿಸಲಾಗದು. ಅದರ ಹಿಂದೆ ಒಂದು ಆರ್ಥಿಕ ವಾಸ್ತವವೂ ಇದೆ. ರೈತ ಉತ್ತಮ ಗುಣಮಟ್ಟದ ಹಾಲು ಉತ್ಪಾದಿಸಬೇಕಾದರೆ ಉತ್ತಮ ಮೇವು ಕೊಡಬೇಕು, ಪಶುವಿನ ಆರೋಗ್ಯ ನೋಡಿಕೊಳ್ಳಬೇಕು, ಸ್ವಚ್ಛವಾಗಿ ಹಾಲು ಕರೆಯಬೇಕು, ಔಷಧ ಬಳಕೆಯಲ್ಲಿ ಎಚ್ಚರಿಕೆ ಇರಬೇಕು, ಸಮಯಕ್ಕೆ ಸಂಗ್ರಹ ಕೇಂದ್ರಕ್ಕೆ ತಲುಪಿಸಬೇಕು. ಇವೆಲ್ಲಕ್ಕೂ ವೆಚ್ಚವಿದೆ.
ರೈತನಿಗೂ ಕುಟುಂಬವಿದೆ, ಮಕ್ಕಳ ಶಿಕ್ಷಣವಿದೆ, ಪಶು ಆಹಾರ ಮತ್ತು ಔಷಧದ ಖರ್ಚಿದೆ, ಕೆಲವೊಮ್ಮೆ ಸಾಲದ ಒತ್ತಡವೂ ಇದೆ. ಗುಣಮಟ್ಟಕ್ಕೂ ವೆಚ್ಚವಿದೆ. ಆದ್ದರಿಂದ ಆಹಾರದ ಗುಣಮಟ್ಟದ ಬಗ್ಗೆ ಮಾತನಾಡುವಾಗ ಉತ್ಪಾದಕನ ಎಕಾನಾಮಿಕ್ಸ್ ಅನ್ನು ಕಡೆಗಣಿಸಿ ಕೊನೆಯ ಉತ್ಪನ್ನದ ಬಗ್ಗೆ ಮಾತನಾಡಲು ಸಾಧ್ಯವಿಲ್ಲ.
ಇಲ್ಲಿಯೇ ಖರೀದಿಸುವ ಸಂಸ್ಥೆಗಳ ಪಾಲಿಸಿಗೂ ದೊಡ್ಡ ಜವಾಬ್ದಾರಿ. ಅತ್ಯುತ್ತಮ ಕ್ವಾಲಿಟಿ ಬೇಕು ಎಂದು ಹೇಳುತ್ತಾ, ಇನ್ನೊಂದು ಕಡೆ ಕೇವಲ ಕಡಿಮೆ ದರದಲ್ಲಿ ಎಲ್ಲಿ ಸಿಗುತ್ತದೆ? ಎನ್ನುವುದನ್ನೇ ಖರೀದಿಯ ಮುಖ್ಯ ಗುರಿಯಾಗಿಸಿದರೆ ದೀರ್ಘಾವಽಯಲ್ಲಿ ಉತ್ತಮ ಉತ್ಪನ್ನ ಉಳಿಸಿಕೊಳ್ಳುವುದು ಕಷ್ಟವಾಗಬಹುದು. ಗುಣಮಟ್ಟ ನೀಡುತ್ತಿರುವ ರೈತನಿಗೆ ಅದಕ್ಕೆ ತಕ್ಕ ಮೌಲ್ಯ ಸಿಗದಿದ್ದರೆ, ಉತ್ತಮ ದರ ನೀಡುವ ಮತ್ತೊಬ್ಬ ಖರೀದಿದಾರನನ್ನು ಹುಡುಕುವುದು ಸಹಜ. ರೈತನನ್ನು ಆಹಾರ ಸರಪಳಿ ಯ ದುರ್ಬಲ ಕೊಂಡಿಯಂತೆ ನೋಡಬಾರದು. ಅವನೇ ಮೊದಲ ಕೊಂಡಿ. ಮೊದಲ ಕೊಂಡಿ ದುರ್ಬಲವಾದರೆ ಕೊನೆಯ ತಟ್ಟೆಯವರೆಗೆ ಅದರ ಪರಿಣಾಮ ಬರಬಹುದು.
ನ್ಯಾಯಯುತ ಮೌಲ್ಯ, ಪಾರದರ್ಶಕ ಪರೀಕ್ಷೆ, ಸಮಯಕ್ಕೆ ಸರಿಯಾದ ಪಾವತಿ ಮತ್ತು ಗುಣಮಟ್ಟಕ್ಕೆ ತಕ್ಕ ಮನ್ನಣೆ ಇರುವುದು ಸುಸ್ಥಿರ ಮೂಲಕ್ಕೆ ಸಹಾಯಕ. ಸಂಸ್ಥೆಗಳೂ ಇಂದು ಸ್ವಲ್ಪ ಹಣ ಉಳಿಸಲು ಅಗ್ಗದ ಆಯ್ಕೆ ಮಾಡಿಕೊಂಡರೆ, ನಾಳೆ ಕ್ವಾಲಿಟಿ ವೈಫಯ ಅಥವಾ ಬ್ರಾಂಡ್ ನಂಬಿಕೆ ಕುಸಿತದ ರೂಪದಲ್ಲಿ ಅದರ ಬೆಲೆ ದೊಡ್ಡದಾಗಬಹುದು.
ನಮ್ಮ ಆಹಾರದ ಬದುಕೂ ಕೆಲವು ದಶಕಗಳಲ್ಲಿ ಬಹಳ ಬದಲಾಗಿದೆ. ಒಂದು ಕಾಲದಲ್ಲಿ ಹೊರಗೆ ಊಟ ಮಾಡುವುದು ವಿಶೇಷ ಸಂದರ್ಭವಾಗಿತ್ತು. ಇಂದು ಬೆಳಗಿನ ತಿಂಡಿ ಹೋಟೆಲ್‌ನಲ್ಲಿ, ಮಧ್ಯಾಹ್ನ ಕಚೇರಿ ಕ್ಯಾಂಟೀನ್‌ನಲ್ಲಿ, ಸಂಜೆ ತಿಂಡಿ ಹೊರಗೆ, ರಾತ್ರಿ ಆಹಾರ ಆನ್‌ಲೈನ್‌ನಲ್ಲಿ ಆರ್ಡರ್ ಮಾಡುವುದು ಸಾಮಾನ್ಯ. ಹೊರಗೆ ತಿನ್ನುವುದೇ ತಪ್ಪಲ್ಲ.
ಲಕ್ಷಾಂತರ ಆಹಾರ ಉದ್ಯಮಿಗಳು ಪ್ರತಿದಿನ ಜವಾಬ್ದಾರಿಯಿಂದ ಉತ್ತಮ ಆಹಾರ ನೀಡುತ್ತಿದ್ದಾರೆ. ಆದರೆ ನಮ್ಮ ಆಹಾರ ನಮ್ಮ ಕಣ್ಣಿನಿಂದ ದೂರವಾದಷ್ಟು, ಅದನ್ನು ಸುರಕ್ಷಿತವಾಗಿಡುವ ವ್ಯವಸ್ಥೆಯ ಮೇಲಿನ ಅವಲಂಬನೆ ಹೆಚ್ಚುತ್ತದೆ. ಮನೆಯ ಅಡುಗೆಮನೆ ಯಲ್ಲಿ ತರಕಾರಿ ಎಲ್ಲಿ ತಂದದ್ದು, ನೀರು ಯಾವುದು, ನಿನ್ನೆ ಉಳಿದದ್ದನ್ನು ಇಂದು ಬಳಸುತ್ತಿದ್ದೇವೆಯೇ ಎಂಬುದು ಬಹುತೇಕ ನಮಗೆ ಗೊತ್ತಿರುತ್ತದೆ. ಹೊರಗಿನ ಒಂದು ಪ್ಲೇಟ್ ಫುಡ್‌ರೈಸ್ ಹಿಂದಿನ ಕಥೆ ನಮಗೆ ಗೊತ್ತಿರುವುದಿಲ್ಲ.
ಆನ್‌ಲೈನ್ ಫುಡ್ ಇದಕ್ಕೆ ಮತ್ತೊಂದು ಆಯಾಮ ತಂದಿದೆ. ಮೊಬೈಲ್ ಸ್ಕ್ರೀನ್‌ನಲ್ಲಿ ರೆಸ್ಟೋರೆಂಟ್ ನ ಸುಂದರ ಚಿತ್ರ ಕಾಣುತ್ತದೆ; ಹೋಟೆಲ್ ಅಡುಗೆ ಮನೆ ಕಾಣುವುದಿಲ್ಲ. 40% ಆಫ್ ದೊಡ್ಡ ಅಕ್ಷರದಲ್ಲಿ ಕಾಣುತ್ತದೆ; ಕಚ್ಚಾ ವಸ್ತುಗಳ ಮೂಲ ಕಾಣುವುದಿಲ್ಲ. ಡೆಲಿವರಿ ಯಾವಾಗ ಬರುತ್ತದೆ ಎಂದು ಟ್ರ್ಯಾಕ್ ಮಾಡುತ್ತೇವೆ; ಆದರೆ ಅದು ತಯಾರಾಗುವ ಕಚ್ಚಾ ಪದಾರ್ಥಗಳು ಎಲ್ಲಿ ಬಂದವು ಎಂದು ನೋಡುವು ದಿಲ್ಲ. ತಂತ್ರಜ್ಞಾನ ಆಹಾರವನ್ನು ನಮ್ಮ ಬಾಗಿಲಿಗೆ ತಂದಿದೆ; ಈಗ ಪಾರದರ್ಶ ಕತೆಯನ್ನೂ ಅದೇ ಬಾಗಿಲಿಗೆ ತರಬೇಕಾಗಿದೆ.
ಮಕ್ಕಳ ವಿಷಯ ಬಂದಾಗ ಈ ಪ್ರಶ್ನೆಯ ತೂಕ ಇನ್ನಷ್ಟು ಹೆಚ್ಚುತ್ತದೆ. ನಮ್ಮದೇ ಆರೋಗ್ಯದ ವಿಷಯದಲ್ಲಿ ಒಂದು ದಿನ ತಿಂದರೆ ಏನಾಗುತ್ತದೆ? ಎಂದು ನಾವು ಕೆಲವೊಮ್ಮೆ ನಿರ್ಲಕ್ಷ್ಯ ಮಾಡ ಬಹುದು. ಆದರೆ ಅದೇ ಆಹಾರವನ್ನು ಮಗುವಿಗೆ ಕೊಡುವಾಗ ಅದು ಜವಾಬ್ದಾರಿಯಾಗುತ್ತದೆ. ತನ್ನ ತಟ್ಟೆಯ ಬಗ್ಗೆ ಪ್ರಶ್ನಿಸುವ ಸಾಮರ್ಥ್ಯವೇ ಇಲ್ಲದ ಮಗುವಿನ ಸುರಕ್ಷತೆಯನ್ನು ದೊಡ್ಡವರೇ ಖಚಿತ ಪಡಿಸಬೇಕು.
ಹಾಗಾದರೆ ಇದರ ಸಂಪೂರ್ಣ ಹೊಣೆ ಸರಕಾರದ್ದೇನಾ? ಪ್ರತಿ ಹೋಟೆಲ್ ಕಿಚನ್‌ನಲ್ಲಿ ಒಬ್ಬ ಫುಡ್ ಇನ್‌ಸ್ಪೆಕ್ಟರ್‌ನನ್ನು ನಿಲ್ಲಿಸಲು ಸಾಧ್ಯವಿಲ್ಲ. ಪ್ರತಿಯೊಂದು ಸಮೋಸಾಗೆ ಲ್ಯಾಬ್ ರಿಪೋರ್ಟ್ ಕೊಡಲೂ ಸಾಧ್ಯವಿಲ್ಲ. ತಪಾಸಣೆ ಅಗತ್ಯ, ಮಾದರಿ ಸಂಗ್ರಹಣೆ ಅಗತ್ಯ, ಕಾನೂನು ಅಗತ್ಯ. ಆದರೆ ತಪಾಸಣೆ ಮಾತ್ರದಿಂದ ಆಹಾರ ಸುರಕ್ಷತೆ ಮಾಡಲಾಗದು.
ಆಹಾರ ಮಾರುವವರ ಜವಾಬ್ದಾರಿಯೂ ಅಷ್ಟೇ ದೊಡ್ಡದು. ಅಡುಗೆ ಮನೆಯ ಸ್ವಚ್ಛತೆ, ಕಚ್ಚಾ ವಸ್ತುಗಳ ಗುಣಮಟ್ಟ, ಸಂಗ್ರಹಣೆ ಮತ್ತು ತಾಪಮಾನ ನಿಯಂತ್ರಣ ಇವೆಲ್ಲವೂ ತಪಾಸಣೆಗೆ ಒಳಪಡುತ್ತವೆ ಎಂಬ ಕಾರಣಕ್ಕೆ ಮಾಡುವ ಕೆಲಸಗಳಾಗಬಾರದು. ತನ್ನ ಮನೆಯವರೇ ಅದೇ ಆಹಾರ ತಿನ್ನುತ್ತಾರೆ ಎಂದು ಕೊಂಡು ತಯಾರಿಸುವ ಮನಸ್ಥಿತಿಯೇ ಮೊದಲ ಆಹಾರ ಸುರಕ್ಷತಾ ಲೈಸೆನ್ಸ್.
ಅಧಿಕಾರಿಯ ಹಿಂದೆ ಆಡಳಿತದ ಬೆಂಬಲವೂ ಮುಖ್ಯ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಆಹಾರ ಕಲಬೆರಕೆ ವಿರೋಧಿ ಕ್ರಮಗಳಿಗೆ ಸಾರ್ವಜನಿಕವಾಗಿ ಬೆಂಬಲ ವ್ಯಕ್ತಪಡಿಸಿ ದ್ದಾರೆ. ಅಧಿಕಾರಿಯ ನಿಲುವಿಗೆ ಸರಕಾರದ ಬೆಂಬಲ ಸೇರಿದಾಗ ವ್ಯಕ್ತಿಗತ ಕಾರ್ಯಾಚರಣೆ ವ್ಯವಸ್ಥೆಯ ಪಾಲಿಸಿ ಯಾಗಿ ಬೆಳೆಯುವ ಸಾಧ್ಯತೆ ಹೆಚ್ಚು. ಇದೇ ಕಾರಣಕ್ಕೆ ಮುಂಢೆ ಅವರ ಆಡಳಿತ ಜೀವನವೂ ಗಮನ ಸೆಳೆಯುತ್ತದೆ. ಎರಡು ದಶಕಗಳ ಸೇವೆಯಲ್ಲಿ ಅವರು ಅನೇಕ ಟ್ರಾನ್ಸ್ʼಫರ್ ಕಂಡಿದ್ದಾರೆ. ನಿಯಮಗಳ ಕಟ್ಟುನಿಟ್ಟಿನ ಜಾರಿ ಮತ್ತು ನೇರ ಕಾರ್ಯಶೈಲಿಯಿಂದ ಪ್ರಶಂಸೆಗೂ, ವಿರೋಧಕ್ಕೂ ಒಳಗಾಗಿದ್ದಾರೆ.
ಅಂತಿಮವಾಗಿ ನಾವು ಅಳೆಯಬೇಕಾದದ್ದು ವ್ಯಕ್ತಿಯನ್ನಾಗಲಿ, ಬೀದಿಬದಿಯ ಊಹಾಪೋಹ ಗಳನ್ನಾಗಲಿ ಅಲ್ಲ. ಕ್ರಮ ಕಾನೂನುಬದ್ಧವಾಗಿದೆಯೇ, ಎಲ್ಲರಿಗೂ ಒಂದೇ ಮಾನದಂಡ ಅನ್ವಯ ವಾಗಿದೆಯೇ, ಕೊನೆಯಲ್ಲಿ ಗ್ರಾಹಕನ ತಟ್ಟೆ ಹೆಚ್ಚು ಸುರಕ್ಷಿತವಾಗಿದೆಯೇ ಎಂಬುದನ್ನು. ನ್ಯಾಯಾ ಲಯವೂ ಕೆಲವು ಎಫ್ಡಿಎ ಕ್ರಮಗಳ ವಿಚಾರದಲ್ಲಿ ಪ್ರಕ್ರಿಯೆ ಮತ್ತು ಪ್ರಮಾಣದ ಕುರಿತು ಪ್ರಶ್ನೆಗಳನ್ನು ಎತ್ತಿದೆ.
ಗ್ರಾಹಕನಿಗೂ ಪಾತ್ರವಿದೆ. ನಮ್ಮ ಕೆಲಸ ಪ್ರಯೋಗಾಲಯ ವಿಜ್ಞಾನಿ ಆಗುವುದಲ್ಲ. ಆದರೆ ಕಣ್ಣು ಮುಚ್ಚಿ ತಿನ್ನುವುದೂ ಅಲ್ಲ. ಪ್ಯಾಕೇಜಿಂಗ್, ಉತ್ಪನ್ನದ ಅವಧಿ ಮುಕ್ತಾಯ ದಿನಾಂಕ, ಅಸಹಜ ವಾಸನೆ ಅಥವಾ ಬಣ್ಣ, ಸ್ವಚ್ಛತೆ ಮುಂತಾದ ಕನಿಷ್ಠ ಸಂಗತಿಗಳನ್ನು ಗಮನಿಸಬಹುದು. ಅನುಮಾನ ಬಂದಾಗ ಪ್ರಶ್ನಿಸ ಬಹುದು. ಆದರೆ ಇದರರ್ಥ ಹೊರಗೆ ತಿನ್ನಬೇಡಿ, ಎಲ್ಲವೂ ಕಲಬೆರಕೆ ಎಂದು ಭಯ ಹುಟ್ಟಿಸುವುದೂ ಅಲ್ಲ.
ನಾವು ತಟ್ಟೆಯಲ್ಲಿರುವ ಪದಾರ್ಥದ ಹೆಸರನ್ನು ತಿಳಿದಿದ್ದೇವೆ; ಅದರ ಹಿಂದಿನ ಪ್ರಯಾಣವನ್ನು ತಿಳಿದಿಲ್ಲ. ಆ ಪ್ರಯಾಣ ರೈತನಿಂದ ಆರಂಭವಾಗಿ ಸಂಗ್ರಹ, ಸಂಸ್ಕರಣೆ, ಸಾಗಣೆ, ಮಾರಾಟ ಮತ್ತು ಅಡುಗೆಮನೆ ದಾಟಿ ನಮ್ಮ ತಟ್ಟೆಯನ್ನು ತಲುಪುತ್ತದೆ. ಈ ಸರಪಳಿಯ ಯಾವುದೋ ಒಂದು ಕೊಂಡಿಯಲ್ಲಿ ಜವಾಬ್ದಾರಿ ತಪ್ಪಿದರೂ ಅದರ ಪರಿಣಾಮವನ್ನು ಅನುಭವಿಸುವವನು ಕೊನೆ ಯಲ್ಲಿರುವ ಗ್ರಾಹಕ.
ಆದ್ದರಿಂದ ಆಹಾರ ಸುರಕ್ಷತೆಯನ್ನು ಕೇವಲ ಕಲಬೆರಕೆ ಪತ್ತೆ, ದಾಳಿ ಮತ್ತು ದಂಡಕ್ಕೆ ಸೀಮಿತ ಗೊಳಿಸಲಾಗದು. ಅವು ಅಗತ್ಯವೇ. ಆದರೆ ಅವು ಬಹುಪಾಲು ಸಮಸ್ಯೆ ಕಂಡ ನಂತರದ ಕ್ರಮಗಳು. ಸಮಸ್ಯೆಯೇ ಹುಟ್ಟದಂತೆ ಮಾಡುವ ವ್ಯವಸ್ಥೆ ಇನ್ನೂ ಮುಖ್ಯ. ಉತ್ಪಾದನಾ ಘಟಕ ನಿಯಮ ಪಾಲಿಸುತ್ತಿದೆಯೇ, ಮೂಲವನ್ನು ಪತ್ತೆಹಚ್ಚುವ ವ್ಯವಸ್ಥೆ ಕೆಲಸ ಮಾಡುತ್ತಿದೆಯೇ, ಗ್ರಾಹಕನಿಗೆ ಅದೇ ಸುರಕ್ಷತೆ ದೊರೆಯುತ್ತಿದೆಯೇ ಎಂಬುದೇ ನಿಜವಾದ ಪರೀಕ್ಷೆ.